
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಅಭಿನಯದ ಚೊಚ್ಚಲ ಚಿತ್ರ ಮಹದೇವ್ ಅವರು ನಿರ್ದೇಶನ ಮಾಡುತ್ತಿರುವ "ಜಾಗ್ವಾರ್' ಚಿತ್ರದ ಚಿತ್ರೀಕರಣ ಇದೇ 6ರಿಂದ ಮೈಸೂರಿನಲ್ಲಿ ಆರಂಭವಾಗಲಿದೆ. ಈ ಮಧ್ಯೆ ಚಿತ್ರದ ನಾಯಕಿ ಆಯ್ಕೆ ಕೂಡ ಅಂತಿಮವಾದಂತಿದೆ. ದೀಪ್ತಿ ಸಾತಿ ಎಂಬ ಹೊಸ ಪ್ರತಿಭಾನ್ವಿತೆ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುವಂತಿದೆ.
ಚಿತ್ರದ ನಿರ್ಮಾಪಕರು ಈ ಬಗ್ಗೆ ಅಧಿಕೃತವಾಗಿ ಘೋಷಿಸುವುದು ಬಾಕಿ ಇದ್ದು, ಎರಡು ಮೂರು ಸುತ್ತಿನ ಆಡಿಷನ್ ಬಳಿಕ ಜಾಗ್ವಾರ್ ನಲ್ಲಿ ನಿಖಿಲ್ ಗೆ ನಾಯಕಿಯಾಗಿ ದೀಪ್ತಿಯನ್ನು ಆಯ್ಕೆ ಮಾಡಲಾಗಿದೆ ಎಂಬ ಮಾಹಿತಿ ಕೇಳಿಬರುತ್ತಿದೆ.
ಮಾಡೆಲ್ ಆಗಿ ಬಣ್ಣದ ವೃತ್ತಿ ಬದುಕಿಗೆ ಕಾಲಿಟ್ಟ ದೀಪ್ತಿ ಮುಂಬೈ ಮೂಲದವಳು. ಕಳೆದ ವರ್ಷ ಮೇ ನಲ್ಲಿ ಬಿಡುಗಡೆಗೊಂಡ ಮಲಯಾಳಂ ಚಿತ್ರ ನೀನಾದಲ್ಲಿ ಮೊದಲ ಬಾರಿಗೆ ಅಭಿನಯಿಸಿದ್ದರು. ಕೆಲವು ಸೌಂದರ್ಯ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗೆದ್ದುಕೊಂಡಿರುವ ದೀಪ್ತಿ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ಪದವೀಧರೆ. ಕಥಕ್ ಮತ್ತು ಭರತನಾಟ್ಯ ಡ್ಯಾನ್ಸರ್ ಕೂಡ ಹೌದು. ಇದೀಗ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕೂಡ ಅಭ್ಯಾಸ ಮಾಡುತ್ತಿದ್ದಾರಂತೆ.
ಚೆನ್ನಾಂಬಿಕ ಫಿಲ್ಮ್ಸ್ ಬ್ಯಾನರ್ ನಡಿ ಮೂಡಿಬರುತ್ತಿರುವ ಜಾಗ್ವಾರ್ ಸಿನಿಮಾಕ್ಕೆ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ತಂದೆ ವಿಜೇಂದ್ರ ಪ್ರಸಾದ್ ಅವರು ಕಥೆ ಬರೆದಿದ್ದಾರೆ. ತಮನ್ ಅವರ ಸಂಗೀತವಿದೆ. ತೆಲುಗು ನಟ ಜಗಪತಿ ಬಾಬು ಅವರು ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಚಿತ್ರದ ವಿಶೇಷ ಹಾಡೊಂದಕ್ಕೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಕೂಡ ಹೆಜ್ಜೆ ಹಾಕುವ ನಿರೀಕ್ಷೆಯಿದೆ.
Advertisement