ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿದೆ ಕನ್ನಡ ಚಿತ್ರರಂಗದ ಸ್ಮರಣೀಯ ಮೊಂಟಾಜ್: ರಾಜ್ ಶೆಟ್ಟಿ ಅದ್ವಿತೀಯ ಸ್ಕ್ರಿಪ್ಟ್ ಗೆ ಕೈಗನ್ನಡಿ
ಸ್ಕ್ರಿಪ್ಟ್ ಆಗಲಿ, ತಾಂತ್ರಿಕ ಕೌಶಲ್ಯತೆಯಲ್ಲಾಗಲಿ ಸಿನಿಮಾ ಅದ್ವಿತೀಯ ಎನ್ನಿಸಿಕೊಳ್ಳುತ್ತದೆ. ಗರುಡ ಗಮನ ವೃಷಭ ವಾಹನ ಸಿನಿಮಾದ ಅದ್ವಿತೀಯತೆಗೆ ಅದರಲ್ಲಿನ ಒಂದು ಮೊಂಟಾಜ್ ದೃಶ್ಯ ಕೈಗನ್ನಡಿ ಹಿಡಿಯುತ್ತದೆ.
Published: 23rd November 2021 05:39 PM | Last Updated: 24th November 2021 07:22 AM | A+A A-

ಸಿನಿಮಾ ಪೋಸ್ಟರ್
ಲೇಖನ: ಹರ್ಷವರ್ಧನ್ ಸುಳ್ಯ
ಗರುಡ ಗಮನ ವೃಷಭ ವಾಹನ ಸಿನಿಮಾಗೆ ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರ ಹರಿದುಬರುತ್ತಿದೆ. ಅದರಲ್ಲೂ ವರ್ಲ್ಡ್ ಸಿನಿಮಾಗಳ ಅಭಿಮಾನಿಗಳಿಗೆ ರಾಜ್ ಬಿ. ಶೆಟ್ಟಿಯವರ ಈ ಸಿನಿಮಾ ಇಷ್ಟವಾಗುತ್ತಿದೆ. ಪೌರಾಣಿಕ ರೆಫರೆನ್ಸುಗಳು, ಪಾತ್ರ ಪೋಷಣೆ, ಹಿನ್ನೆಲೆ ಸಂಗೀತ, ಹಾಡುಗಳು ಹೀಗೆ ಪ್ರತಿಯೊಂದು ವಿಭಾಗದಲ್ಲೂ ಸಿನಿಮಾ catch ಹೊಂದಿದೆ. ಪ್ರತಿಯೊಬ್ಬರಿಗೂ ಇಷ್ಟವಾಗುವ ಒಂದಲ್ಲ ಒಂದು ಅಂಶಗಳನ್ನು ಸಿನಿಮಾ ಹೊಂದಿದೆ. ಸ್ಕ್ರಿಪ್ಟ್ ಆಗಲಿ, ತಾಂತ್ರಿಕ ಕೌಶಲ್ಯತೆಯಲ್ಲಾಗಲಿ ಸಿನಿಮಾ ಅದ್ವಿತೀಯ ಎನ್ನಿಸಿಕೊಳ್ಳುತ್ತದೆ. ಗರುಡ ಗಮನ ವೃಷಭ ವಾಹನ ಸಿನಿಮಾದ ಅದ್ವಿತೀಯತೆಗೆ ಅದರಲ್ಲಿನ ಒಂದು ಮೊಂಟಾಜ್ ದೃಶ್ಯ ಕೈಗನ್ನಡಿ ಹಿಡಿಯುತ್ತದೆ.
ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ಮೊಂಟಾಜ್ ಗಳ ಸಾಲಿಗೆ ಸೇರುವ ಮೊಂಟಾಜ್ ವೊಂದು ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿದೆ. ಸಿನಿಮಾಗಳಲ್ಲಿ ಮಾಂಟಾಜ್ (montage) ಪ್ರಧಾನ ಪಾತ್ರ ವಹಿಸುತ್ತದೆ. ಜಗತ್ತಿನ ಯಾವುದೇ ಸುಪ್ರಸಿದ್ಧ ಸಿನಿಮಾಗಳನ್ನು ತೆಗೆದುಕೊಂಡರೆ ಅದರಲ್ಲಿ ಒಂದು ಆಕರ್ಷಕ ಮೊಂಟಾಜ್ ಅನ್ನು ಕಾಣಬಹುದು. ಫಿಲಂ ಮೇಕರ್ ನ ಕೌಶಲ್ಯ ಮತ್ತು ಕಲಾತ್ಮಕತೆಗೆ ಮೊಂಟಾಜ್ ಗಳು ಸಾಕ್ಷ್ಯ ನುಡಿಯುತ್ತವೆ.
ಮೊಂಟಾಜ್ ಎಂದರೆ ಏನು?
ಬಹುಮುಖ್ಯವಾದ ಸಂದೇಶವನ್ನು ಹೇಳಲು ಕೆಲವೊಮ್ಮೆ ಒಂದೇ ಸೀನ್ ಸಾಕಾಗುವುದಿಲ್ಲ. ಎರಡು ಮೂರು ಸೀನ್ ಗಳು ಇಲ್ಲವೇ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಸೀನ್ ಗಳು ಬೇಕಾಗುತ್ತವೆ. ಅಗ ಸಿನಿಮಾದ ಅವಧಿಯೂ ಉದ್ದವಾಗುತ್ತದೆ. ಈ ಸಮಯದಲ್ಲಿ ನೆರವಾಗುವುದೇ ಮೊಂಟಾಜ್.
ಮೊಂಟಾಜ್ ಎಂದರೆ ಹಲವು ಸೀನ್ ಗಳನ್ನು ಚಿಕ್ಕ ಅವಧಿಗೆ ಕಟ್ ಮಾಡಿಕೊಂಡು ಜೋಡಿಸುವುದು. ಇದರಿಂದ ಕಡಿಮೆ ಅವಧಿಯಲ್ಲಿ ಫಿಲಂ ಹೇಳಬೇಕಾಗಿರುವುದನ್ನು ಪರಿಣಾಮಕಾರಿಯಾಗಿ ಪ್ರೇಕ್ಷಕನಿಗೆ ಹೇಳಬಹುದು. ಕಥೆಯಲ್ಲಿ ಬರೆಯುವಾಗ ನಾವು ಕಾಲಚಕ್ರ ಉರುಳಿತು ಎಂದೋ, ದಶಕಗಳ ನಂತರ ಎಂದೋ ಎರಡೆ ಪದಗಳಲ್ಲಿ ಬರೆದು ಮುಂದಿನ ಕಾಲಘಟ್ಟದ ಕಥೆಗೆ ಸಾಗುತ್ತೇವೆ. ಆದರೆ ಸಿನಿಮಾದಲ್ಲಿ ಹಾಗೆ ಮಾಡಲಾಗುವುದಿಲ್ಲ. ನೆನಪಿರಲಿ ಸಿನಿಮಾ ದೃಶ್ಯಮಾಧ್ಯಮ. ಏನೇ ಹೇಳುವುದಿದ್ದರೂ ದೃಶ್ಯಗಳ ಮೂಲಕ ಹೇಳುವುದೇ ನ್ಯಾಯ. ಕೆಲವೊಮ್ಮೆ ಅನಿವಾರ್ಯ ಎನ್ನುವ ಪರಿಸ್ಥಿತಿಯಲ್ಲಿ, ಅಥವಾ stylize ಕಾರಣಗಳಿಗೆ ಅಕ್ಷರಗಳ ಮೂಲಕ ಕಾಲವನ್ನು ಪ್ರಸ್ತುತಪಡಿಸುವುದುಂಟು.
ಹಳೆ ಸಿನಿಮಾಗಳ ಮೊಂಟಾಜುಗಳು
ಹಿಂದೆಲ್ಲಾ ಸಿನಿಮಾಗಳಲ್ಲಿ ಕ್ಯಾಲೆಂಡರ್ ದಿನಾಂಕಗಳು ಬದಲಾಗುವುದನ್ನು ತೋರಿಸುವ ಮೂಲಕ ಕಾಲ ಉರುಳಿದ್ದನ್ನು ಪ್ರೇಕ್ಷಕನಿಗೆ ಮನದಟ್ಟು ಮಾಡುತ್ತಿದ್ದರು. ಇನ್ನು ಕೆಲ ಸಿನಿಮಾಗಳಲ್ಲಿ ನಡೆಯುತ್ತಿರುವ ಬಾಲಕನ ಪಾದಗಳನ್ನು ತೋರಿಸಿ ಅದು ದೊಡ್ಡವನ ಪಾದವಾಗಿ transition ಹೊಂದುವುದನ್ನು ತೋರಿಸುತ್ತಿದ್ದರು. ಅದರಿಂದ ಬಾಲಕನಾಗಿದ್ದ ಕಥಾನಾಯಕ ಈಗ ಬೆಳೆದು ದೊಡ್ಡವನಾಗಿದ್ದಾನೆ ಎಂದು ಪ್ರೇಕ್ಷಕನಿಗೆ ಅರ್ಥವಾಗುತ್ತಿತ್ತು. ಜಗತ್ತಿನ ಸಿನಿಮಾ ಇತಿಹಾಸದಲ್ಲಿಯೇ ಮೊಂಟಾಜು ಎಂದ ಕೂಡಲೆ ಮೊದಲು ನೆನಪಾಗುವುದು ಸಿಲ್ವೆಸ್ಟರ್ ಸ್ಟಾಲೋನ್ ಅಭಿನಯದ ಬ್ಲಾಕ್ ಬಸ್ಟರ್ ಸಿನಿಮಾ 'ರಾಕಿ'ಯ ಮೊಂಟಾಜು.
ಬಾಕ್ಸಿಂಗ್ ಪಂದ್ಯಾವಳಿಗೂ ಮುನ್ನ ನಾಯಕ ರಾಕಿ ತಿಂಗಳುಗಳ ಕಾಲ ನಡೆಸುವ ಕಸರತ್ತನ್ನು ಹಾಡಿನ ಮೂಲಕ ತೋರಿಸುತ್ತಾರೆ. ನಿಜಹೇಳಬೇಕೆಂದರೆ ಅದಕ್ಕಿಂತಲೂ ಅತ್ಯದ್ಭುತ ಮೊಂಟಾಜುಗಳು ಅದಕ್ಕೂ ಹಿಂದೆ ಮತ್ತು ಅದರ ನಂತರ ಬಂದಿದ್ದರೂ ಮೊತ್ತಮೊದಲ ಬಾರಿಗೆ ಮೊಂಟಾಜು ಎನ್ನುವುದು ಸಿನಿಮಾಸಕ್ತರ ಕಣ್ಣಿಗೆ ಹೈಲೈಟ್ ಆಗಿದ್ದು ಆ ಸಿನಿಮಾದಲ್ಲಿ. ಹಾಗೆ ನೋಡಿದರೆ ಭಾರತೀಯ ಸಿನಿಮಾಗಳಲ್ಲಿ ಯಾವಾಗಿನಿಂದಲೂ ಹಾಡುಗಳ ಮೂಲಕ ಕಥೆ ಹೇಳುವ ತಂತ್ರವನ್ನು ಅನುಸರಿಸಲಾಗಿತ್ತು. ಇರಲಿ.
ಶೂ ಬದಲಾಗುವ ಮೊಂಟಾಜು
ಗರುಡ ಗಮನ ವೃಷಭ ವಾಹನ ಸಿನಿಮಾ ವಿಷಯಕ್ಕೆ ಬರೋಣ. ಮೊದಲೇ ಹೇಳಿದಂತೆ ಈ ಸಿನಿಮಾದಲ್ಲಿ ಕಂಡುಬರುವ ಮೊಂಟಾಜ್ ಒಂದು ಕನ್ನಡ ಸಿನಿಮಾ ಇತಿಹಾಸದಲ್ಲಿಯೇ ಅತ್ಯದ್ಭುತವಾದ, ಥ್ರಿಲ್ಲಿಂಗ್ ಮೊಂಟಾಜ್ ಗಳ ಸಾಲಿಗೆ ಸೇರುತ್ತದೆ. ಸಿನಿಮಾದಲ್ಲಿ ಸಹೋದರರಂತಿರುವ ಶಿವ- ಹರಿ ಪ್ರಧಾನ ಪಾತ್ರಗಳು. ಶಿವ- ಹರಿಯಾಗಿ ರಾಜ್ ಬಿ. ಶೆಟ್ಟಿ ಮತ್ತು ರಿಷಬ್ ಶೆಟ್ಟಿ ನಟಿಸಿದ್ದಾರೆ. ಶಿವ ತುಂಬಾ ವಿಕ್ಷಿಪ್ತ ಸ್ವಭಾವದವ. ಪಕ್ಕಾ ಲೋಕಲ್ ಮತ್ತು ಮಾಸ್ ಕ್ಯಾರೆಕ್ಟರ್.
ಒಮ್ಮೆ ಪ್ರಭಾವಿ ವ್ಯಕ್ತಿಯ ಸಂಬಂಧಿಕನೋರ್ವ ಹರಿಯ ಕುರಿತು ಕೆಟ್ಟದಾಗಿ ಮಾತಾಡುತ್ತಾನೆ. ಮುಂದಿನ ಸೀನ್ ನಲ್ಲಿ ಆತನ ಶೂ ಶಿವನ ಕಾಲಲ್ಲಿರುತ್ತದೆ. ಯಾರದೇ ಕೊಲೆ ಮಾಡಿದ ನಂತರ ಶಿವ ಅವರ ಶೂ ಗಳನ್ನು ಧರಿಸುತ್ತಾನೆ. ಅದು ಅವನ ಪಾಲಿನ ಟ್ರೋಫಿ. ಅಂಗುಲಿಮಾಲ ಬೆರಳುಗಳ ಮಾಲೆ ತೊಟ್ಟಂತೆಯೇ ಇದು. ಶಿವನ ಕಾಲಲ್ಲಿ ಹೊಸ ಚಪ್ಪಲಿ ಕಂಡ ಕೂಡಲೆ ಚಿತ್ರಮಂದಿರದಲ್ಲಿ ಪ್ರೇಕ್ಷಕರು ಉನ್ಮಾದದಿಂದ ಕಿರುಚುತ್ತಾರೆ, ಶಿಳ್ಳೆ ಹಾಕುತ್ತಾರೆ. ಭೂಗತ ಲೋಕದೊಳಕ್ಕೆ ಶಿವ ಹರಿ ಇಬ್ಬರೂ ಎಂಟ್ರಿ ಕೊಟ್ಟು ಹಾವಳಿಯೆಬ್ಬಿಸುತ್ತಾರೆ ಎನ್ನುವುದನ್ನು ನಿರ್ದೇಶಕರು establish ಮಾಡುತ್ತಾರೆ.
ನಂತರ ಆ ಅದ್ಭುತ ಮೊಂಟಾಜ್ ದೃಶ್ಯ ಪ್ಲೇ ಆಗುತ್ತದೆ. ಈ ಮೊಂಟಾಜ್ ದೃಶ್ಯದಲ್ಲಿ ರಾಜ್ ಬಿ. ಶೆಟ್ಟಿ ನಡೆದುಬರುವ ಹಲವು ದೃಶ್ಯಗಳನ್ನು ಪೋಣಿಸಿ ಹೆಣೆಯಲಾಗಿದೆ ಈ ಮೊಂಟಾಜಿನಲ್ಲಿ ಅವರ ಕಾಲಿನಲ್ಲಿರುವ ಶೂಗಳು ಬದಲಾಗುತ್ತಲೇ ಹೋಗುತ್ತವೆ. ಅದರ ಅರ್ಥ ಅಷ್ಟು ಮಂದಿಯನ್ನು ಶಿವ ಕೊಲೆ ಮಾಡಿದ್ದಾನೆ ಎಂದು.
ಇದನ್ನೂ ಓದಿ: ಕನ್ನಡ ಚಿತ್ರರಂಗದಲ್ಲಿ ಮುಂಡು ಧಾರಿ ನ್ಯಾಚುರಲ್ ನಾಯಕನ ಉದಯ: ಹೊಸ ಅಲೆಯ ಗರುಡ ಗಮನ ವೃಷಭ ವಾಹನ ಚಿತ್ರ ವಿಮರ್ಶೆ
ಚಿತ್ರಮಂದಿರದಲ್ಲಿ ಪ್ರೇಕ್ಷಕರ ಉನ್ಮಾದ
ಕೇವಲ ಒಂದೇ ಕೊಲೆಯನ್ನು ತೋರಿಸಿ ಅವರಿಬ್ಬರೂ ಡಾನ್ ಆದರೆಂದು ಹೇಳಿದರೆ ಯಾರೂ ನಂಬುವುದಿಲ್ಲ. ಹಾಗೆಂದು ಶಿವ ಮಾಡಿದ ಅಷ್ಟೂ ಕೊಲೆಗಳನ್ನು ತೆರೆ ಮೇಲೆ ತೋರಿಸುವಷ್ಟು ಸಮಯವೂ ಇಲ್ಲ. ಈ ಸಂಧಿಗ್ಧತೆಯನ್ನು ನಿವಾರಿಸಲು ರಾಜ್ ಶೆಟ್ಟಿ ಈ ಮೊಂಟಾಜ್ ಮೊರೆ ಹೋಗಿದ್ದಾರೆ.
ಶಿವ ನಡೆದು ಬರುವಾಗ ಆತನ ಕಾಲಲ್ಲಿ ಶೂಗಳು ಬದಲಾಗುವುದನ್ನು ಈ ಮೊಂಟಾಜು ಸೊಗಸಾಗಿ ಹಿಡಿದಿಟ್ಟಿದೆ. ಶೂಗಳು ಬದಲಾಗುವ ಈ ಮೊಂಟಾಜು ದೀರ್ಘ ಅವಧಿಯಲ್ಲಿ ಹೇಳಬೇಕಾಗಿದ್ದ ವಿಷಯವನ್ನು ಕೆಲವೇ ಸೆಕೆಂಡುಗಳ ಅವಧಿಯ ಈ ಮೊಂಟಾಜು ಪ್ರೇಕ್ಷಕನಿಗೆ ತಿಳಿಸುತ್ತದೆ. ಈ ಮೊಂಟಾಜು ದೊಡ್ಡಪರದೆ ಮೇಲೆ ಬಂದಾಗ ಪ್ರೇಕ್ಷಕರ ಉನ್ಮಾದ ಹೇಳತೀರದು. ಅದು ನೀಡುವ ಥ್ರಿಲ್ಲಿನ ಅನುಭವವನ್ನು ಚಿತ್ರಮಂದಿರಗಳಲ್ಲಿಯೇ ಆನಂದಿಸಬೇಕು.