ನಟ ದರ್ಶನ್ ನಿವಾಸದಲ್ಲಿ ಅಧಿಕಾರಿಗಳಿಂದ ಪರಿಶೀಲನೆ
ನಟ ದರ್ಶನ್ ನಿವಾಸದಲ್ಲಿ ಅಧಿಕಾರಿಗಳಿಂದ ಪರಿಶೀಲನೆ

ಹುಲಿ ಉಗುರು ಬೇಟೆ: ನಟ ದರ್ಶನ್ ಸೇರಿದಂತೆ ನಾಲ್ವರು ಪ್ರಮುಖರಿಗೆ ನೊಟೀಸ್, ಕಾನೂನು ಕ್ರಮ ಚುರುಕು!

ಹುಲಿ ಉಗುರು ಪೆಂಡೆಂಟ್ ಹೊಂದಿರುವ ಆರೋಪದ ಮೇಲೆ ಸ್ಯಾಂಡಲ್ ವುಡ್ ನಟ ದರ್ಶನ್ ತೂಗುದೀಪ ನಿವಾಸಕ್ಕೆ ಕಳೆದ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದ ಅರಣ್ಯಾಧಿಕಾರಿಗಳು ಹೆಚ್ಚಿನ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದಾರೆ.

ಬೆಂಗಳೂರು: ಹುಲಿ ಉಗುರು ಪೆಂಡೆಂಟ್ ಹೊಂದಿರುವ ಆರೋಪದ ಮೇಲೆ ಸ್ಯಾಂಡಲ್ ವುಡ್ ನಟ ದರ್ಶನ್ ತೂಗುದೀಪ ನಿವಾಸಕ್ಕೆ ಕಳೆದ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದ ಅರಣ್ಯಾಧಿಕಾರಿಗಳು ಹೆಚ್ಚಿನ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದಾರೆ.

ಇದರ ಜೊತೆಗೆ ನಿರ್ಮಾಪಕ, ನಟ ರಾಕ್​ಲೈನ್ ವೆಂಕಟೇಶ್​, ಜಗ್ಗೇಶ್​ ಮತ್ತು ಜೆಡಿಎಸ್​ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಅವರ ಮನೆಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಪ್ರತ್ಯೇಕವಾಗಿ ತೆರಳಿ ಪರಿಶೀಲನೆ ನಡೆಸಿ ನೊಟೀಸ್ ಜಾರಿ ಮಾಡಿದ್ದಾರೆ. 

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಮನೆಗೆ ಅರಣ್ಯಾಧಿಕಾರಿ ತ್ಯಾಗರಾಜ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ವೇಳೆ ದರ್ಶನ್ ಮನೆಯಲ್ಲಿ ಇರಲಿಲ್ಲ. ಪರಿಶೀಲನೆ ಕಾರ್ಯ ಮುಂದುವರಿಸುತ್ತಿರುವ ಅರಣ್ಯಾಧಿಕಾರಿಗಳು ನಿಜವಾದ ಹುಲಿಯ ಉಗುರು ಪೆಂಡೆಂಟ್ ಸಿಕ್ಕರೆ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. 

ನಟ ದರ್ಶನ್ ಅವರು ಕೂಡ ಹುಲಿ ಉಗುರಿನ ಲಾಕೆಟ್ ಧರಿಸಿದ್ದಾರೆ ಎಂದು ಆರೋಪಿಸಿ ಸರ್ವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ಅವರು ಅರಣ್ಯ ಭವನದ ಅಧಿಕಾರಿಗಳಿಗೆ ದೂರು ನೀಡಿದ್ದರು. ವನ್ಯಜೀವಿಗಳ ಉಗುರು ಸೇರಿದಂತೆ ಇತರ ಅಂಗಾಂಗಳನ್ನು ಧರಿಸುವುದು ವನ್ಯಜೀವಿ ಸಂರಕ್ಷಣಾ ಕಾಯಿದೆ ಅನ್ವಯ ಅಪರಾಧ. ಇದರ ಸಲುವಾಗಿಯೇ ಸಂತೋಷ್‌ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ ನಂತರ ಹುಲಿ ಉಗುರು ಜಪ್ತಿ ಮಾಡಲಾಗಿದೆ ಎಂದು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಜಪ್ತಿ ಮಾಡಿರುವ ಉಗುರು ಹುಲಿ ಕೊಂದ ಬಳಿಕ ತೆಗೆಯಲಾಗಿತ್ತೇ ಉಗುರು ಎಷ್ಟು ವರ್ಷಗಳ ಹಳೆಯದ್ದು ಎಂಬುದನ್ನು ಪತ್ತೆಹಚ್ಚಲು ವಿಧಿ ವಿಜ್ಞಾನ ಪ್ರಯೋಗಾಲಯ ಹಾಗೂ ಪುರಾತತ್ವ ಇಲಾಖೆಗೆ ಕಳುಹಿಸಲಾಗುತ್ತದೆ ಎಂದು ಹಿರಿಯ ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ. 

ನಟ ದರ್ಶನ್‌ ವಿರುದ್ಧ ಈಗಾಗಲೇ ದೂರು ಬಂದಿದೆ. ಅವರ ವಿರುದ್ಧವೂ ನಾವು ಕ್ರಮಕ್ಕೆ ಮುಂದಾಗುವ ಅವಕಾಶವಿದೆ. ಅವರು ಧರಿಸಿದ ಉಗುರಿನ ಬಗ್ಗೆ ಮೊದಲು ಅದರ ನೈಜತೆ ಖಚಿತಪಡಿಸಿಕೊಳ್ಳಬೇಕಿದೆ. ಇದೀಗ ಹಬ್ಬದ ನಿಮಿತ್ತ ಎರಡು ದಿನ ರಜೆ ಇದ್ದ ಹಿನ್ನೆಲೆಯಲ್ಲಿ ಸಾಧ್ಯವಾಗಿರಲಿಲ್ಲ. ಇನ್ನು ಮುಂದೆ ಅದು ಚುರುಕು ಪಡೆದುಕೊಳ್ಳಲಿದೆ ಎಂದು ವನ್ಯಜೀವಿ ಅರಣಾಧಿಕಾರಿ ರವೀಂದ್ರಕುಮಾರ್‌ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಸೋಷಿಯಲ್ ಮೀಡಿಯಾ ಮೂಲಕ ನಟ ನಿಖಿಲ್ ಕುಮಾರಸ್ವಾಮಿ ತಾವು ಹೊಂದಿರುವ ಹುಲಿ ಉಗುರಿನ ಪೆಂಡೆಂಟ್ ಬಗ್ಗೆ ಸ್ಪಷ್ಟನೆ ನೀಡಿದ್ದರೆ, ಅವರ ತಂದೆ ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ನಿನ್ನೆ ವಿವರವಾಗಿ ಸ್ಪಷ್ಟನೆ ನೀಡಿದ್ದರು. ಅವರಿಗೂ ಹಾಗೂ ನಟ ಜಗ್ಗೇಶ್, ರಾಕ್ ಲೈನ್ ವೆಂಕಟೇಶ್ ಅವರಿಗೆ ಸಹ ನೊಟೀಸ್ ನೀಡಿ ಉತ್ತರಿಸುವಂತೆ ಆದೇಶ ನೀಡಿದ್ದಾರೆ ಎಂದು ತಿಳಿದುಬಂದಿದೆ.

Related Stories

No stories found.

Advertisement

X
Kannada Prabha
www.kannadaprabha.com