ದೇಶಪ್ರೇಮದ ಹೆಸರಿನಲ್ಲಿ ಪ್ರತಿಯೊಂದು ವಿದೇಶಿ ಉತ್ಪನ್ನವನ್ನೂ ತ್ಯಜಿಸಿಬಿಟ್ಟರೆ, ಈಗಿನ ಕಾಲದಲ್ಲಿ ಬದುಕುವುದು ಸಾಧ್ಯವೇ? ಎಲ್ಲದಕ್ಕಿಂತ ಮುಖ್ಯವಾಗಿ, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಯಾವುದೇ ಎಲ್ಲೆಯಿಲ್ಲ.
ಸ್ವಾತಂತ್ರ್ಯ ದಿನಾಚರಣೆಯಂದು ಪ್ರತೀ ಭಾರತೀಯನ ಎದೆಯೂ ರಾಷ್ಟ್ರಾಭಿಮಾನದಿಂದ ಉಬ್ಬಿರಬಹುದು. ಅದು ಸಹಜವೇ. ಆದರೆ ಅತಿರೇಕದ ರಾಷ್ಟ್ರಾಭಿಮಾನವೆನ್ನುವುದು ಇದೆಯಲ್ಲ, ಅದರ ಅವಶ್ಯಕತೆ ಈಗಿನ ಕಾಲದಲ್ಲಿ ಇದೆಯೇ? ಅದು ಸಮರ್ಥನೀಯವೇ ಎನ್ನುವುದು ನನ್ನ ಪ್ರಶ್ನೆ. ದೇಶದ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ನಮ್ಮ ದೇಶವನ್ನು ದಿನಂಪ್ರತಿ ಕಾಡುತ್ತಿರುವ ಸಮಸ್ಯೆಗಳತ್ತ ನೋಡಲು, ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಸೂಕ್ತ ದಿನಗಳು. ಇಂಥ ವಿಷಮ ಸನ್ನಿವೇಷದಲ್ಲಿ ಸಮಾಜ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವುದನ್ನು ಬಿಟ್ಟು, ಕೆಲವು ತಂತ್ರಜ್ಞಾನ ವಿರೋಧಿಗಳು ದೇಶದ ಎಲ್ಲಾ ಮುಖ್ಯಮಂತ್ರಿಗಳಿಗೂ ಬಿಟಿ-ಹತ್ತಿಯ ಬಗ್ಗೆ ಪತ್ರ ಬರೆದಿದ್ದಾರೆ. ಬಿಟಿ ಹತ್ತಿ ಬಳಸದ ಧ್ವಜಗಳನ್ನು ಸ್ವಾತಂತ್ರ್ಯ ದಿನದಂದು ಹಾರಿಸಬೇಕು ಎಂದು ಅವರು ಪತ್ರದ ಮೂಲಕ ಮನವಿ ಮಾಡಿದ್ದಾರೆ.
ನಮ್ಮ ಪವಿತ್ರ ಧ್ವಜದ ನಿರ್ಮಾಣಕ್ಕೂ ಒಂದು ಹತ್ತಿಯ ತಳಿಗೂ ಎತ್ತಣ ಸಂಬಂಧ? ಅವರುಗಳ ಪ್ರಕಾರ, ನಮ್ಮ ಧ್ವಜವನ್ನು ವಿದೇಶಿ ಬಿಟಿ ಹತ್ತಿಯಿಂದ ತಯಾರಿಸಿದರೆ ದೇಶದ ಸಾರ್ವಭೌಮತೆಗೆ ಮತ್ತು ಗೌರವಕ್ಕೆ ಧಕ್ಕೆಯಾಗುತ್ತದಂತೆ. ಹಾಗೆ ಮಾಡಿದರೆ, ದುಷ್ಟ ಅಮೆರಿಕದ ಬಹುರಾಷ್ಟ್ರೀಯ ಕಂಪನಿಗಳ ತಂತ್ರಜ್ಞಾನ-ಸಾಮ್ರಾಜ್ಯಶಾಹಿಯೆದೆದುರು ದೇಶದ ಘನತೆಯನ್ನು ಕಳೆದಂತಾಗುತ್ತದೆ ಎನ್ನುವುದು ಅವರ ವಾದ. ನಿಜಕ್ಕೂ ಇದು ನಗೆಯುಕ್ಕಿಸುವಂಥ ನಡೆ! ಕೆಲವು ವರ್ಷಗಳ ಹಿಂದೆ ಬ್ರಿಟನ್‌ನ ಕೆಲವು ಜೈವಿಕ ತಂತ್ರಜ್ಞಾನ ವಿರೋಧಿಗಳೂ ಕೂಡ ಇದೇ ರೀತಿಯ ಗದ್ದಲವೆಬ್ಬಿಸಿದ್ದರು. ದೇಶದ ಕರೆನ್ಸಿಯಲ್ಲಿ ಬಿಟಿ ಹತ್ತಿಯ ಫೈಬರ್‌ಗಳನ್ನು ಬಳಸಿದರೆ ಚರ್ಮರೋಗ ಬರುತ್ತದೆ ಎನ್ನುವ ಸುಳ್ಳು ಸುದ್ದಿ ಹಬ್ಬಿಸಿದರು. ಆದರೆ ಕೊನೆಗೆ ನಗೆಪಾಟಲಿಗೀಡಾದದ್ದು ಅವರೇ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ! ಇನ್ನು ಯುರೋಪ್‌ನಲ್ಲೂ ಜೆನಿಟಿಕ್ ಇಂಜಿನಿಯರಿಂಗ್ ತಂತ್ರಜ್ಞಾನದಿಂದ ತಯಾರಾದ ಕ್ರಿಸ್ಮಸ್ ಟ್ರೀ ಬಗ್ಗೆಯೂ ಇದೇ ರೀತಿ ಅಸಂಬದ್ಧಗಳು ಕೇಳಿಬರುತ್ತಿವೆ. ಜೀವನದ ಪ್ರತಿಹೆಜ್ಜೆಯಲ್ಲೂ ಇಂಥ ಅತಿರೇಕಿಗಳ ಜೋಕುಗಳು ಕಿವಿಗೆ ಬೀಳುತ್ತಲೇ ಇರುತ್ತವೆ. ಈಗ ಭಾರತದಲ್ಲೂ ಅನವಶ್ಯಕವಾಗಿ ಹುಸಿ ರಾಷ್ಟ್ರೀಯವಾದದ ಹೆಸರಿನಲ್ಲಿ ಕೆಲವು ದೇಸೀ ಅಜ್ಞಾನಿಗಳು ಗದ್ದಲವೆಬ್ಬಿಸಿದ್ದಾರೆ. ಒಂದು ನಿಮಿಷ ಸುಮ್ಮನೇ ಯೋಚಿಸಿ- ಇಂದು ಭಾರತದಲ್ಲಿ ಬಳಕೆಯಾಗುತ್ತಿರುವ ಎಷ್ಟೊಂದು ವಸ್ತುಗಳು ವಿದೇಶಗಳಲ್ಲಿ ತಯಾರಾಗಿಲ್ಲ? ಅಥವಾ ವಿದೇಶಿ ತಂತ್ರಜ್ಞಾನದಿಂದ ಭಾರತದಲ್ಲಿ ತಯಾರಾದ ಎಷ್ಟು ವಸ್ತುಗಳನ್ನು ನಾವು ಬಳಸುತ್ತಿಲ್ಲ? ದೇಶಪ್ರೇಮದ ಹೆಸರಿನಲ್ಲಿ ಪ್ರತಿಯೊಂದು ವಿದೇಶಿ ಉತ್ಪನ್ನವನ್ನೂ ತ್ಯಜಿಸಿಬಿಟ್ಟರೆ, ಈಗಿನ ಕಾಲದಲ್ಲಿ ಬದುಕುವುದು ಸಾಧ್ಯವೇ? ಎಲ್ಲದಕ್ಕಿಂತ ಮುಖ್ಯವಾಗಿ, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಯಾವುದೇ ಎಲ್ಲೆಯಿಲ್ಲ.ಅವಕ್ಕೆ ಎಲ್ಲೆಡೆಯೂ ಮನ್ನಣೆ ಸಿಗಬೇಕು- ಒಳ್ಳೆಯ ಕವಿತೆ ಅಥವಾ ಕಾದಂಬರಿಗೆ ಸಿಕ್ಕಂತೆ.
ಮೊದಲನೆಯದಾಗಿ, ಹತ್ತಿಯ ನಾರನ್ನು ನೋಡಿ ಯಾರಿಗೂ ಕೂಡ, ಇದು ಬಿಟಿ ಹತ್ತಿಯೆಂದೋ ಅಥವಾ ಹೈಬ್ರೀಡ್ ಹತ್ತಿಯೆಂದೋ ಗೊತ್ತಾಗುವುದಿಲ್ಲ. ಏಕೆಂದರೆ ಹತ್ತಿಯೆನ್ನುವುದು ಕೇವಲ ಹತ್ತಿಯೇ, ಅದು 100 ಪ್ರತಿಶತ ಸೆಲ್ಯುಲೋಸ್ ಆಗಿರುತ್ತದೆ. ಆದರೆ ಹತ್ತಿಯ ನಾರಿನಲ್ಲಿ ಪ್ರೋಟೀನ್ ಅಥವಾ ಸೆಲ್ಯುಲೋಸ್‌ನ ಕನಿಷ್ಠ ಅಂಶವೂ ಇರುವುದಿಲ್ಲ. 95 ಪ್ರತಿಶತಕ್ಕಿಂತಲೂ ಹೆಚ್ಚು ರೈತರು ಬಿಟಿ ಹತ್ತಿಯನ್ನು ಬೆಳೆಯುವುದಕ್ಕೆ ಪ್ರಮುಖ ಮತ್ತು ಏಕೈಕ ಕಾರಣವೆಂದರೆ ಅದರಿಂದ ಅವರಿಗೆ ಒಳ್ಳೆಯ ಆದಾಯವಿದೆ ಎನ್ನುವುದು. ದೇಸೀ ತಳಿಗಳು ಕೃಷಿಯಿಂದ ಕಾಣೆಯಾಗಿವೆಯೆನ್ನುವುದಕ್ಕೂ ಪ್ರಮುಖ ಮತ್ತು ಏಕೈಕ ಕಾರಣ- ಅವು ಲಾಭದಾಯಕವಲ್ಲ ಎನ್ನುವುದೇ.
ಹೈಬ್ರೀಡ್ ತಳಿಗಳು ಮುಕ್ತವಾಗಿ ಪರಾಗಸ್ಪರ್ಷಗೊಂಡ ತಳಿಗಳಿಗಿಂತ ಉತ್ತಮವಾಗಿರುತ್ತವೆ. ಈ ಮಿಶ್ರ ತಳಿಗಳು ತಮ್ಮ ಮೂಲ ತಳಿಗಳಿಗಿಂತ ಉನ್ನತ ಗುಣಗಳನ್ನು ಹೊಂದಿರುತ್ತವೆ. ಹಾಗಾಗೇ ಅವು ದೇಸೀ ಹತ್ತಿಗಿಂತ ಹೆಚ್ಚು ಲಾಭದಾಯಕ. ಈಗ ಬಿಟಿಯೇತರ ಹೈಬ್ರೀಡ್‌ಗಳಿಗಿಂತ ಬಿಟಿ ಹೈಬ್ರೀಡ್‌ಗಳು ಹೆಚ್ಚು ಮೌಲ್ಯ ಹೊಂದಿವೆ.
ಹಾಗಾಗೇ ಮಾಮೂಲಿ ಹೈಬ್ರೀಡ್‌ಗಳು ಮಾರುಕಟ್ಟೆಯಿಂದ ಕಾಣೆಯಾಗಿವೆ. ನಾಳೆ ಬಿಟಿ ಹೈಬ್ರೀಡ್‌ಗಿಂತಲೂ ಉತ್ತಮವಾದ ತಳಿಯೊಂದು ಮಾರುಕಟ್ಟೆಗೆ ಬರಬಹುದೇನೋ? ಬಂದಿತೆಂದರೆ ರೈತರು ಸಹಜವಾಗಿ ಅದನ್ನೇ ಅಪ್ಪಿಕೊಳ್ಳುತ್ತಾರೆ. ಬಿಟಿ ಹೈಬ್ರಿಡ್ ಹೋಯಿತು ಎಂದು ಅವರೇನು ಕಣ್ಣೀರು ಹಾಕುತ್ತಾ ಕುಳಿತುಕೊಳ್ಳುತ್ತಾರಾ? ಆದರೆ ಈ ಅತಿಭಾವುಕ ವಿರೋಧಿಗಳೇನಿದ್ದಾರಲ್ಲ ಅವರಿಗೇನನ್ನೋಣ? ಇವರೆಲ್ಲರೂ ಪುರಾತನ ಮತ್ತು ಲಾಭದಾಯಕವಲ್ಲದ ಕೃಷಿಯನ್ನೇ ಮಾಡಬೇಕು ಎಂದು ರೈತರನ್ನು ಬೇಡಿಕೊಳ್ಳುತ್ತಿದ್ದಾರೆ. ಅದಾಗ್ಯೂ ರೈತರ ಮನವೊಲಿಸಲು ಅವರಿಗೆ ಬಹಳ ಕಷ್ಟವಾಗುತ್ತಿದೆ ಎನ್ನುವುದು ಬೇರೇ ವಿಷಯ ಬಿಡಿ! ಅಂದಹಾಗೆ, ಈ ಬಿಟಿ ಹತ್ತಿ ಉತ್ಪಾದನೆಯಾಗುವುದು ಭಾರತದಲ್ಲೇ, ಅದೂ ಭಾರತೀಯ ಉತ್ಪನ್ನವೇ, ಅದೇನು ವಿದೇಶದಿಂದ ಆಮದಾದುದಲ್ಲ. ಇದರಂತೆಯೇ ಬಿಟಿ ಬದನೆಯನ್ನೂ ಭಾರತದಲ್ಲೇ ಬೆಳೆಯಲಾಗುತ್ತದೆ.
ಇದೇನೇ ಇದ್ದರೂ ಭಾರತದ ರೈತರು ತಮಗಿಷ್ಟವಾದ ಬೆಳೆಯನ್ನೇ ಬೆಳೆಯುತ್ತಿದ್ದಾರೆ, ಇಂಥ ಹುಸಿ ದೇಶಪ್ರೇಮಿಗಳ ಮಾತನ್ನು ಅವರು ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎನ್ನುವುದು ನಿಜಕ್ಕೂ ಸಂತಸದ ವಿಷಯವೇ. ಅದು ಸಮರ್ಥನೀಯವೂ ಹೌದು. ಏಕೆಂದರೆ ಇದು ರೈತರ ಜೀವನದ ಪ್ರಶ್ನೆ. ಆ ಆಯ್ಕೆಯಲ್ಲಿ ಅವರ ಹಿತವಿದೆ. ಆದರೆ ಈ ಅತಿರೇಕದ ದೇಶಪ್ರೇಮಿಗಳಿಗೆ ಹೀಗೆ ವಿರೋಧಿಸುವುದರಲ್ಲಿ ಅದ್ಯಾವ ಹಿತವಿದೆಯೆಯೋ? ಒಮ್ಮೆ ಸಾಧ್ಯವಾದರೆ ಅವರನ್ನೇ ಕೇಳಿ ನೋಡಿ! ಒಂದು ವೇಳೆ ರಾಜ್ಯ ಸರ್ಕಾರಗಳು ಉತ್ತಮ ಗುಣಮಟ್ಟದ ಬೀಜಗಳನ್ನು, ಗೊಬ್ಬರ ಮತ್ತು ಇನ್ನಿತರ ಔಷಧಿಗಳನ್ನು ಸರಿಯಾದ ಸಮಯಕ್ಕೆ ಪೂರೈಸಿದರೆ, ಸರಿಯಾದ ಸೌಕರ್ಯಗಳನ್ನು ಒದಗಿಸಿ, ರೈತರ ಬೆಳೆಗಳಿಗೆ ಸೂಕ್ತ ಮಾರುಕಟ್ಟೆಯನ್ನು ಒದಗಿಸಿಕೊಟ್ಟರೆ, ಅದಕ್ಕಿಂತ ರೈತರು ಹೆಚ್ಚಿನದ್ದೇನನ್ನೂ ಆಪೇಕ್ಷಿಸುವುದಿಲ್ಲ. ಒಂದು ವೇಳೆ ಈ ವಿರೋಧಿಗಳು ಮುಖ್ಯಮಂತ್ರಿಗಳೆದುರು ಇಂಥ ಬೇಡಿಕೆಯನ್ನು ಇಟ್ಟಿದ್ದರೆ ಆಗ ಅವರನ್ನು ಮೆಚ್ಚಬಹುದಿತ್ತು. ಈ ಆ್ಯಕ್ಟಿವಿಸ್ಟ್‌ಗಳು ಮೊದಲು ತಮ್ಮ ಆದ್ಯತೆಯನ್ನು ಸರಿಪಡಿಸಿಕೊಳ್ಳಬೇಕು ಮತ್ತು ಇನ್ನಷ್ಟು ಸಂಯಮದಿಂದ ರೈತರ ಸಮಸ್ಯೆಗಳನ್ನು ಆಲಿಸುವುದನ್ನು ಕಲಿಯಬೇಕು. ಇಂದು ಮಾನ್ಸೆಂಟೋದ ಬಿಟಿ ತಂತ್ರಜ್ಞಾನ ಮಾರುಕಟ್ಟೆಯನ್ನು ಆಳುತ್ತಿದೆಯೆಂದರೆ, ಅದು ಪ್ರಪಂಚದ ಅತ್ಯುತ್ತಮ ತಂತ್ರಜ್ಞಾನವನ್ನು ಹೊಂದಿದೆ ಎಂದೇ ಅರ್ಥವಲ್ಲವೇ? ಭಾರತದ ನೂರಾರು ಬೀಜ ಉತ್ಪನ್ನ ಕಾರ್ಖಾನೆಗಳು ಇಂದು ತಮ್ಮ ಬಿಟಿ ಹೈಬ್ರಿಡ್‌ಗಳಿಗೆ ಮಾರುಕಟ್ಟೆಯೊದಗಿಸಲು ಮೌನ್ಸೆಂಟೋದೆದುರು ನಿಲ್ಲುತ್ತಿವೆ. ಅದಾಗಲೇ ಮಾರುಕಟ್ಟೆಯಲ್ಲಿ ಚೀನಾ ಮತ್ತು ಕೆಲವು ಅಭಿವೃದ್ಧಿಶೀಲ ರಾಷ್ಟ್ರಗಳ ತಳಿಗಳೂ ಹರಿದಾಡುತ್ತಿವೆ. ಒಂದು ವೇಳೆ ಬಿಟಿ ಹತ್ತಿಯಿಂದ ಭಾರತದ ಧ್ವಜವನ್ನು ತಯಾರಿಸಿದರೂ ಭಾರತೀಯರು ಚಿಂತಿಸಬೇಕಿಲ್ಲ, ಏಕೆಂದರೆ ಅವೂ ಕೂಡ ಭಾರತದಲ್ಲಿ ಉತ್ಪಾದನೆಯಾದ ತಳಿಗಳೇ.
ಇಂದು ನಿಜಕ್ಕೂ ಪ್ರಮುಖ ಸಮಸ್ಯೆಯಿರುವುದು ಹತ್ತಿ ಗಿರಣಿಗಳಲ್ಲಿ. ಭಾರತದ ತುಕ್ಕುಹಿಡಿದ ಹತ್ತಿಗಿರಣಿಗಳಲ್ಲಿ ಕೆಲಸ ಮಾಡುವವರಿಗೆ ಯಾವುದೇ ಸುರಕ್ಷತೆ ಇರುವುದಿಲ್ಲ. ಹತ್ತಿಯ ಧೂಳನ್ನು ಸೇವಿಸಿ ಅವರ ಆರೋಗ್ಯ ಹದಗೆಡುತ್ತಿದೆ. ಇನ್ನು ನೇಕಾರರು ಮತ್ತು ಕೈಮಗ್ಗಗಳ ಕಾರ್ಮಿಕರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಹತ್ತಿಯ ಧೂಳು ಶ್ವಾಸಕೋಶದ ಕ್ಷಮತೆಯನ್ನು ತಗ್ಗಿಸುತ್ತದೆ. ಇದಕ್ಕೆ 'ಬ್ರಿಸಿನೋಸಿಸ್' ಎನ್ನುತ್ತಾರೆ. ಹತ್ತಿ ಉದ್ಯಮದಲ್ಲಿ ಕೆಲಸ ಮಾಡಿ ಶ್ವಾಸಕೋಶ ಸಂಬಂಧೀ ಕಾಯಿಲೆಗಳಿಂದ ಎಷ್ಟೋ ಜನ ನರಳುತ್ತಿದ್ದಾರೆ, ಅವರಿಗೆ ಯಾವ ರೀತಿಯ ಚಿಕಿತ್ಸೆ ಸಿಗುತ್ತಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಸ್ವತಂತ್ರ ದಿನಾಚರಣೆಯಂದು ಯಾರಿಗಾದರೂ ಹತ್ತಿಯಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡುವ ಮನಸ್ಸಾದರೆ, ಅವರು ಮೊದಲು ಈ ಹತ್ತಿ ಉದ್ಯಮಗಳಲ್ಲಿ ದುಡಿಯುವವರ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾತನಾಡಬೇಕು. ಗಾದಿ/ಹಾಸಿಗೆ ತಯಾರಿಸುವ ಭಾರತದ ಅಸಂಘಟಿತ ವಲಯಗಳಲ್ಲಿ ಒಮ್ಮೆ ಕಾಲಿಟ್ಟು ನೋಡಿ, ಅಲ್ಲಿನ ಕೆಲಸಗಾರರು ಧೂಳಿನ ಮೋಡಗಳ ನಡುವೆ ಯಾವುದೇ ಸುರಕ್ಷೆ ಇಲ್ಲದೇ ಕೆಲಸ ಮಾಡುತ್ತಿರುತ್ತಾರೆ. ಒಂದು ವೇಳೆ ಅತಿರೇಕದ ರಾಷ್ಟ್ರಪ್ರೇಮಿಗಳು ಇಂಥ ಸಮಸ್ಯೆಗಳ ಬಗ್ಗೆ ಮಾತನಾಡಿದರೆ, ಅವರ ಅತಿರೇಕವನ್ನೂ ಒಪ್ಪಬಹುದು! ಇಲ್ಲದಿದ್ದರೆ ಇದು ಕೇವಲ ಕೀಳು ಪ್ರಚಾರದ ಗಿಮಿಕ್ ಎಂದಷ್ಟೇ ಕರೆಸಿಕೊಳ್ಳುತ್ತದೆ.
- ಪ್ರೊ. ಶಾಂತು ಶಾಂತಾರಾಮ್
shanthu@shantharam.org
Advertisement