ನೈಸರ್ಗಿಕ ಪರಿಸರ ಎಂಬುದರ ಅರ್ಥವಾದರೂ ಏನು?

Updated on

'ಪರಿಸರ' ಎಂದಾಕ್ಷಣ, ಎಲ್ಲರೂ ತಮ್ಮದೇ ಆದ ಅರ್ಥವನ್ನು ಕಲ್ಪಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ನೈಸರ್ಗಿಕ ಜಗತ್ತಿಗೂ ಮತ್ತು ಮನುಷ್ಯ ಸೃಷ್ಟಿಸಿದ ಪರಿಸರವನ್ನು ಬೇರೆ-ಬೇರೆಯಾಗಿ ಕಾಣಲಾಗುತ್ತದೆ. ಮನುಷ್ಯನನ್ನು ಮತ್ತು ನಿಸರ್ಗವನ್ನು ಬೇರ್ಪಡಿಸಿ ನೋಡಲಾಗುತ್ತದೆ. ಹಾಗಾಗಿ ಮನುಷ್ಯ ಮಾಡುವ ಕಾಯಕಗಳೆಲ್ಲಾ ಧರೆಗೆ ಹಾನಿಕಾರಕ ಎಂಬ ಚಿಂತನೆ ಅತಿಯಾಗಿ ಆ ವಿಷಯ ಪರಿಸರವಾದಿಗಳಲ್ಲಿ ಅವಿರತವಾಗಿ ಮಿಡಿಯುತ್ತಿರುತ್ತದೆ. ಈ ಯೋಚನಾ ಲಹರಿಯೇ ತಪ್ಪು.
ಸಕಲ ಜೀವರಾಶಿಗಳೂ ಪರಿಸರದ ಮೇಲೆ ಒಂದಲ್ಲಾ ಒಂದು ತರಹದ ಪ್ರಭಾವವನ್ನು ಬೀರುತ್ತವೆ. ಜೀವರಾಶಿಗಳೆಂದರೆ, ಅದರಲ್ಲಿ ಮನುಷ್ಯನೂ ಸೇರುತ್ತಾನೆ. ಮನುಷ್ಯನೊಬ್ಬನನ್ನೇ ಬೇರ್ಪಡಿಸಿ ನೋಡುವುದು ವೈಜ್ಞಾನಿಕವಾಗಿ ಸಾಧುವಾಗುವುದಿಲ್ಲ. ಬಾಕಿ ಜೀವರಾಶಿಗಳು ಆಹಾರ ಸರಪಳಿಯಲ್ಲಿರುವುದನ್ನು ಕಂಡು, ನಾವು ಸಂತೋಷ ಪಡುತ್ತೇವೆ. ಅದನ್ನು ನಾವುಗಳು 'ನೈಸರ್ಗಿಕ ಸಮತೋಲನ' ಎಂಬ ಹೆಸರಿನಲ್ಲಿ ಕರೆದು ಎಲ್ಲವೂ ಸರಿಯಾಗಿದೆಯೆಂದು ತೃಪ್ತಿಪಟ್ಟುಕೊಳ್ಳುತ್ತೇವೆ. ಆದರೆ ಮನುಷ್ಯ ಮಾಡುವ ಪ್ರತಿ ಕೆಲಸವನ್ನೂ ಪರಿಸರದ ಮೇಲೆ "ನೆಗೆಟಿವ್‌" ಪರಿಣಾಮ ಬೀರುತ್ತದೆ ಎನ್ನುವ ದೃಷ್ಟಿಯಲ್ಲೇ ಕಾಣುತ್ತೇವೆ. ಆದರೆ ಮಾನವೇತರ ಪ್ರಾಣಿ ಸಂಕುಲಗಳೂ ಸಹ ಪರಿಸರದ ಮೇಲೆ ತಮ್ಮದೇ ಆದ ಪರಿಣಾಮ ಬೀರುತ್ತವೆ ಎನ್ನುವುದನ್ನು ಅರಿತುಕೊಳ್ಳಬೇಕು. ಆದರೆ ಉಳಿದ ಪ್ರಾಣಿಗಳಿಗೆ ಹೋಲಿಸಿದರೆ ಮಾನವನಿಂದ ಪರಿಸರದ ಮೇಲೆ ಅಧಿಕ ಪ್ರಮಾಣದ ಪರಿಣಾಮವಾಗುವುದಂತೂ ಸ್ಪಷ್ಟ. ಇದಕ್ಕೆ ಮುಖ್ಯ ಕಾರಣವೆಂದರೆ ಮನುಷ್ಯ ಎಲ್ಲ ಜೀವರಾಶಿಗಳಿಗಿಂತ ಅತ್ಯಂತ ಬುದ್ಧಿವಂತ ಮೆದುಳು ಹೊಂದಿರುವುದು. ಅದರಿಂದಾಗಿ, ನಾನಾ ರೀತಿಗಳಲ್ಲಿ ನೈಸರ್ಗಿಕ ಸಂಪತ್ತನ್ನು ಆತ ತನ್ನ ಸುಖ-ಸಂತೋಷಕ್ಕಾಗಿ ಬಳಸಿಕೊಳ್ಳುತ್ತಾನೆ. ಬಳಸಿಕೊಳ್ಳಲು ಸತತವಾಗಿ ಪ್ರಯತ್ನಿಸುತ್ತಾನೆ. ಆದಿ ಮಾನವನ ಕಾಲದಿಂದಲೂ ಮನುಷ್ಯ ನಿಸರ್ಗದ ಮೇಲೆ ಆಧಿಪತ್ಯ ಸಾಧಿಸುವುದಕ್ಕೆ ಪ್ರಯತ್ನಿಸುತ್ತಲೇ ಬಂದಿದ್ದಾನೆ. ಒಂದು ದೃಷ್ಟಿಯಲ್ಲಿ ನೋಡಿದರೆ, ಪ್ರಸ್ತುತ ಕಾಲದಲ್ಲಿನ ಮನುಷ್ಯನ ಜೀವನಮಟ್ಟ ಹಿಂದೆಂದೂ ಕಾಣದಂತಹ ವೈಭವದಿಂದ ಕೂಡಿದೆ. ಇದಕ್ಕೆ ಮುಖ್ಯ ಕಾರಣ ನೈಸರ್ಗಿಕ ಸಂಪತ್ತನ್ನು ಆತ ನಾನಾ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಿರುವುದು. ಕಾಲಕ್ರಮೇಣ ಮನುಷ್ಯ ತನ್ನ ಕಾರ್ಯ ಪೂರೈಸಿಕೊಳ್ಳಲು ಬೇಕಾಗುವ ಸಲಕರಣೆಗಳನ್ನು ಕಂಡು ಹಿಡಿದಿದ್ದಾನೆ. ಅದಕ್ಕೆ ಕಾರಣ ಆತನ ಬುದ್ಧಿವಂತಿಕೆ. ಈ ಸಲಕರಣೆಗಳಿಂದಾಗಿ ಪರಿಸರದ ಮೇಲೆ ಅಧಿಕ ಪ್ರಮಾಣದ ಪ್ರಭಾವವನ್ನು ಬೀರುತ್ತಿದ್ದಾನೆ. ಹಾಗಾಗೆ, ಮನುಷ್ಯ ಪರಿಸರದ ಮೇಲೆ ಬೀರುತ್ತಿರುವ ಪರಿಣಾಮ ನೈಸರ್ಗಿಕವಲ್ಲದೇ ಮತ್ತೇನೂ ಅಲ್ಲ.
ನೈಸರ್ಗಿಕವಾಗಿ ಹಕ್ಕಿಗಳು ತಮ್ಮ ಗೂಡುಗಳನ್ನು ಕಟ್ಟಿಕೊಳ್ಳುತ್ತವೆ.  ಆದರೆ ಅವುಗಳಿಗೆ ತಮ್ಮ ವಸತಿಗೆ ಗೂಡುಗಳನ್ನು ಬಿಟ್ಟು ಬೇರಿನ್ನಾವುದನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಕಾರಣವೆಂದರೆ ಹಕ್ಕಿಗಳ ಬುದ್ಧಿವಂತಿಕೆಯ ಮಿತಿ. ಇದೇ ರೀತಿ, ಹುಳುಗಳು, ಇರುವೆಗಳು ತಮ್ಮ ತಮ್ಮ ಬುದ್ಧಿಶಕ್ತಿಯಾನುಸಾರ ತಮ್ಮ ಮನೆಗಳನ್ನು  ನಿರ್ಮಿಸಿಕೊಳ್ಳುತ್ತವೆ. ಹಾಗೆ ನೋಡಿದರೆ, ಕಲಾನುಕ್ರಮದಲ್ಲಿ ಮನುಷ್ಯನೊಬ್ಬನೇ ತನ್ನ ವಸತಿಯನ್ನು ಅತಿ ಸಾಮಾನ್ಯ ವಸತಿಯಿಂದ ಹಿಡಿದು ಇಂದು ಕಾಣುವ ಆಧುನಿಕ ವಸತಿಗಳವರೆಗೆ ಸೃಷ್ಟಿಸಿಕೊಂಡಿದ್ದಾನೆ. ಒಂದು ರೀತಿಯಲ್ಲಿ ಇದು ಪ್ರಗತಿ ಮತ್ತು ಅಭಿವೃದ್ಧಿಯ ಲಕ್ಷಣ. ಮಾನವನ ಚಟುವಟಿಕೆಗಳನ್ನು ಮತ್ತಷ್ಟೂ ಬೇರೆ, ಬೇರೆ ಜೀವರಾಶಿಗಳ ಚಟುವಟಿಕೆಗಳಿಗೆ ಹೋಲಿಸಬಹುದು. ಅದರ ಅಗತ್ಯ ಸದ್ಯಕ್ಕೆ ಬೇಡ. ಇಲ್ಲಿ ಮುಖ್ಯವಾದ ಅಂಶ ಎಂದರೆ, ಮಾನವ ಮಾತ್ರ ಪರಿಸರದ ಮೇಲೆ ಅತ್ಯಂತ ಗಂಭೀರವಾದ ಅಥವಾ ಪರಿಣಾಮಕಾರಿಯಾದ ಬದಲಾವಣೆಗಳನ್ನು ತರಬಲ್ಲನು. ಅದು ಸಾಧುವೂ ಹೌದು. ಹಾಗಾದಾಗ ಮಾನವನಿಂದ ಆಗುವ "ಹಾನಿ/ ನಷ್ಟಗಳು" ಅಂದಾಗ, ಇದರಲ್ಲಿ ಅನೈಸರ್ಗಿಕ ಅಥವಾ ನೈಸರ್ಗಿಕ ಎಂಬ ಪ್ರಶ್ನೆ ಉದ್ಭವವಾಗುತ್ತದೆಯೇ? ಇದು ಕೇವಲ ವಿಮರ್ಶೆ ಮಾಡುವವರ ದೃಷ್ಟಿಕೋನವಷ್ಟೆಯೇ? ಎಂದು ಪ್ರಶ್ನಿಸಬಹುದು.
ಅತ್ಯಂತ ಮುಂದುವರಿದ ಪಾಶ್ಚಿಮಾತ್ಯ ದೇಶಗಳ ಹಳ್ಳಿ ಮತ್ತು ಪಟ್ಟಣಗಳನ್ನು ನೋಡಿದರೆ, ಅವೆಲ್ಲವೂ ಒಂದಲ್ಲಾ ಒಂದು ರೀತಿಯಲ್ಲಿ ಮನುಷ್ಯನಿಂದ ಪರಿವರ್ತಿತಗೊಂಡಿರುವ ಪರಿಸರಗಳೇ. ಇವುಗಳಲ್ಲಿ ಅತ್ಯಂತ ಕೃತಕ ಪರಿಸರ ಎಂದರೆ ಕೃಷಿ ಭೂಮಿಗಳು. ಒಂದು ಅಂದಾಜಿನ ಪ್ರಕಾರ ಕೃಷಿ ಕಾಯಕವೇ ಮಾನವನ ಅತ್ಯಂತ ವಿನಾಶಕಾರಿ ಚಟುವಟಿಕೆಯೆಂದು ಪರಿಗಣಿಸಲಾಗುತ್ತಿದೆ. ಹಾಗಾಗಿ ಕೃಷಿಯನ್ನು ನಿಲ್ಲಿಸುವುದಕ್ಕಾಗುತ್ತದೆಯೇ? ಆಧುನಿಕ ಕೃಷಿ ವಿಧಾನಗಳಾಗಲೀ ಅಥವಾ ಇನ್ನಾವುದೇ ಕೃಷಿ ವಿಧಾನಗಳಾಗಲಿ (ಸಾವಯವ ಮತ್ತು ನೈಸರ್ಗಿಕ ಸೇರಿದಂತೆ) ಪರಿಸರದ ಮೇಲೆ ಖಂಡಿತ ಪರಿಣಾಮ ಉಂಟುಮಾಡುತ್ತವೆ. ಏನೇ ಆದರೂ ಕೃಷಿಯಿಲ್ಲದೇ ಜೀವನವೇ ಇಲ್ಲ. ಕೃಷಿ ಮಾಡಿಯೇ ತೀರಬೇಕು. ಇದರ ಬಗ್ಗೆ ವಾದ ಮಾಡುತ್ತಾ ಕುಳಿತರೆ ಅದು ಕೇವಲ ಸದಭಿರುಚಿ ಅಥವಾ ನೈತಿಕತೆಯ ವಿಚಾರವಾಗುತ್ತದೆ. ಆದರೆ ವಾಸ್ತವ ಮಾತ್ರ ನಮ್ಮೆಲ್ಲರ ಕಣ್ಣ ಮುಂದಿದೆ. ಮತ್ತೊಂದು ಗಹನವಾದ ವಿಷಯವೆಂದರೆ ಕೃಷಿ ಕ್ಷೇತ್ರವೇ ಒಂದು ಮಾನವ ಕಲ್ಪಿತ ಕೃತಕ ಪರಿಸರ. ಈ ಕೃತಕ ಪರಿಸರ ತನ್ನದೇ ಆದ ಜೈವಿಕ ವೈವಿಧ್ಯತೆಯನ್ನು ಸೃಷ್ಟಿಸಿದೆ. ಇವುಗಳನ್ನು ವರ್ಣಿಸುವುದಕ್ಕೆ ಸಾವಿರಾರು ಸಂಶೋಧನಾ ಲೇಖನಗಳು ಲಭ್ಯವಿವೆ. ಬೇರೆ, ಬೇರೆ ಸಮೃದ್ಧ ದೇಶಗಳಲ್ಲಿ ನೈಸರ್ಗಿಕ ಕಾಡುಗಳನ್ನು ಕಡಿದು ಕೃಷಿ ಭೂಮಿಯನ್ನು ಸೃಷ್ಟಿಸಿದಾಗ ಅದನ್ನು ನೋಡಿ ಆನಂದಿಸಿದ ಜನ ಈಗ ಕಾಡು ಕಡಿದರೆ, ಅದನ್ನು ಪರಿಸರ ನಾಶ ಎಂದು ಕರೆಯುತ್ತಾರೆ. ಅಂದ ಹಾಗೆ, ಮನುಷ್ಯ ನಿರ್ಮಿತ ಮತ್ತು ಮನುಷ್ಯ ನಿರ್ವಹಿಸುವ ಪರಿಸರ ಅತ್ಯಂತ ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿ ಸಂಪತ್ತುಗಳನ್ನು ಹೊಂದಿದೆ. ಸಾಧ್ಯವಾದಷ್ಟೂ ಈ ಸಂಕುಲಗಳನ್ನು, ಸ್ಥಳಗಳನ್ನು ರಕ್ಷಿಸುವಲ್ಲಿ ಮನುಷ್ಯ ಕೆಲಸಮಾಡುತ್ತಿದ್ದಾನೆ. ಯಾವುದೇ ಪರಿಸರವನ್ನು "ಫ್ರೀಜ್‌" ಮಾಡಿ, ಇದೇ ನೈಸರ್ಗಿಕ ಪರಿಸರ ಎಂದು ಹೇಳಬೇಕೆ?
ಆಧುನಿಕ ಪರಿಸರ ಆಂದೋಲನ ಗಹನವಾಗಿ "ಮನುಷ್ಯ ವಿರೋಧಿ" ಧೋರಣೆ ಹೊಂದಿದೆ. ಹಾಗಾಗಿ, ಪರಿಸರವಾದಿಗಳಿಗೂ ಹಾಗೂ ಇತರೆ ಸಮಾಜಮುಖಿ ಪ್ರಜೆಗಳಿಗೆ ಸದಾಕಾಲ ಘರ್ಷಣೆ ನಡೆಯುತ್ತಿರುತ್ತದೆ. ಕೆಲವು ಸಮಯ, ಈ ಘರ್ಷಣೆ ತೀವ್ರತರ ವಿಕೋಪಕ್ಕೂ ಹೋಗಿ, ಸಾವು-ನೋವುಗಳನ್ನು ಅನುಭವಿಸಬೇಕಾಗಿ ಬಂದಿದೆ. ಆಧುನಿಕ ಪರಿಸರ ಆಂದೋಲನ, 'ಎಲ್ಲದಕ್ಕೂ ಮಾನವನ ಚಟುವಟಿಕೆಗಳೇ ಕಾರಣ' ಎಂದು ದೂರುತ್ತದೆ ಮತ್ತು ಮಾನವ ತನ್ನ ಚಟುವಟಿಕೆಗಳನ್ನು ಪುರಾತನ ಕಾಲದಲ್ಲಿಯಂತೆ ಬದಲಿಸಿಕೊಳ್ಳಬೇಕೆಂದು ಹಟ ಮಾಡುತ್ತದೆ. ಈ ರೀತಿ ಬದಲಾವಣೆಗೆ ವಿರೋಧ ತೋರುವುದು ಅಸಹಜ ಧೋರಣೆ ಅನಿಸುತ್ತದೆ.
ಪ್ರಸ್ತುತ ಕಾಲದಲ್ಲಿ ಏಳು ಬಿಲಿಯನ್ ಜನರಿರುವ ಮತ್ತು 2050ರ ಹೊತ್ತಿಗೆ ಹತ್ತು ಬಿಲಿಯನ್ ಜನರಿರಲಿರುವ ಧರೆಯನ್ನು ಉಳಿಸಲು, ಹೊಸ ಆವಿಷ್ಕಾರಗಳಿಂದ ಪರಿಸರ ನಾಶವನ್ನು ಅತ್ಯಂತ ಕನಿಷ್ಠ ಮಟ್ಟಕ್ಕೆ ತರುವಂತೆ ಜಾಗರೂಕತೆ ವಹಿಸುವುದು ಸುಲಭಸಾಧ್ಯ. ಪರಿಸರ ಆಂದೋಲನಗಳಿಂದಾಗಿ ಅಭಿವೃದ್ಧಿ ಸ್ಥಗಿತಗೊಳ್ಳುವುದಕ್ಕೆ ಸರ್ಕಾರಗಳು ಮತ್ತು ಸಮಾಜ ಎಡೆ ಮಾಡಿಕೊಡಬಾರದು.

- ಪ್ರೊ. ಶಾಂತು ಶಾಂತಾರಾಮ್
ಐಯೋವ ರಾಜ್ಯ ಕೃಷಿ ವಿವಿ
Shanthus@iastate.edu

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com