ರಾಜಭವನ್ದಾಗಿರೋ ಹುಲಿ ಬೋನ್ಗೆ ಬೀಳ್ತಾಯಿಲ್ವಂತೆ

ಮೈಲಾರಿ ವತ್ತಾರೆ ಎದ್ದು ಕೈನಾಗೆ ಬಿಳಿ ಹಾಳೆ ಹಿಡ್ಕಂಡು ವೊಂಟ. ಆತ್ಲಾಗಿಂದ ಅಮಾಸೆ...

ಮೈಲಾರಿ ವತ್ತಾರೆ ಎದ್ದು ಕೈನಾಗೆ ಬಿಳಿ ಹಾಳೆ ಹಿಡ್ಕಂಡು ವೊಂಟ. ಆತ್ಲಾಗಿಂದ ಅಮಾಸೆ ಬಂದ. ಇದೇನ್ಲಾ ಮೈಲಾರಿ ಕೈನಾಗೆ ಬಿಳಿ ಪೇಪ್ರು ಹಿಡ್ಕಂಡು ಎತ್ಲಾಗೆ ವೊಂಟೆ ? ಅಂತ ಕೇಳ್ದ.
ಅಯ್ಯೋ ನನ್ ಕಥೆ ಏನ್ ಯೋಳ್ತಿಯ ಅಮಾಸೆ. ಮನ್ಯಾಗೆ ಇಲಿಗ್ಳು ಕಾಟ ಸ್ಯಾನೆ ಆಗೋಗದೆ. ಕಾಳುಕಡ್ಡಿ ಏನೂ ಬುಡಂಗಿಲ್ಲ. ಮಲಿಕ್ಕಂಡಿದ್ರೆ ಮೈಮ್ಯಾಲೆ ವೋಡಾಡ್ತವೆ ಬಡ್ಡಿ ಮಗ್ನೋವು. ಅವಗ್ಳು ಕಿರ್ಕಿರಿ ತಡ್ಕಳಕ್ಕೆ ಆಯ್ತಾಯಿಲ್ಲ. ಅದುಕ್ಕೆ ಕಾಡು ಮಂತ್ರಿ ರಮಾನಾಥಪ್ನೋರ್ಗೆ ವೊಂದು ಮನವಿ ಪತ್ರ ಕೊಡಾವ ಅಂತ ವೋಯ್ತಾಯಿದ್ದೀನಿ ಅಂದ ಮೈಲಾರಿ.
ಕಾಡು ಮಂತ್ರಿಗೆ ಯಾಕ್ಲಾ ಮನವಿ ಪತ್ರ. ಅವಯ್ಯ ಏನರ ಇಲಿಗಳ್ನ ಹಿಡಿಯೋ ಕಿಂದರಿಜೋಗಿ ಅನ್ಕಂಬುಟ್ಟ ಹೆಂಗೆ ? ವೋಗೋಗು ಬೋನು ತಕ್ಕಂಡೋಗಿ, ಅದ್ರಾಗೆ ವಡೆನೋ, ಬೋಂಡಾನೋ ಮಡ್ಗು. ಇಲಿಗ್ಳು ಹಂಗೆ ಬಂದು ಬೋನ್ನಾಗೆ ಬಿದ್ದೋಯ್ತವೆ ಅಂದ ಅಮಾಸೆ.
ಲೇ ಪೆದ್ ಮುಂಡೇದೆ, ಮೊನ್ನೆ ಅಶೆಂಬ್ಲಿನಾಗೆ ಮಂತ್ರಿಗ್ಳು ಯೋಳವ್ರೆ. ನಾವು ಕಾಡ್ನಾಗೆ ಜನ್ರುನ್ನ ತಿಂತಾಯಿತ್ತಲ್ಲ ಆ ಇಲಿ ಹಿಡ್ದಾಕಿದ್ದೀವಿ ಅಂತ. ಕಾಡ್ನಾಗೆ ಇರೋದ್ನೆ ಬುಡ್ಲಿಲ್ಲ. ಇನ್ನ ಮನ್ಯಾಗಿರೋದ್ನ ಬುಟ್ಟಾರೇನ್ಲ. ಯಾವ್ದು ಹೆಂಗಾರ ಇರ್ಲಿ. ವೊಂದಪ ವೋಗಿ ಮನವಿ ಪತ್ರ ಕೊಟ್ಟು ಬತ್ತೀನಿರು ಅಂದ ಮೈಲಾರಿ.
ಲೇ ತಿರ್ಬೋಕಿ ಮುಂಡೇದೆ, ಆವಯ್ಯ ಹುಲಿ ಅನ್ನಕ್ಕೊಗಿ ಇಲಿ ಅಂದದೆ. ಅದುನ್ನ ನೀನೂವೆ ಮಿಸ್ಟೀಕು ಮಾಡ್ಕಂಡು ಎಲ್ಲಿಗೋಯ್ತಿಯ. ಮನೆಗೋಗಿ ದಬ್ಬಾಕ್ಕಂಡು ಮಲಿಕ್ಕ ಅಂತಂದ ಅಮಾಸೆ.
ಹಂಗಂತೀಯ ಅಮಾಸೆ, ನನ್ ಲೆಕ್ಕಾಚಾರ ವುಲ್ಟಾ ಆಗೋಯ್ತಲ್ಲೋ. ಕಾಡ್ನಾಗೆ ಜನ್ರುನ್ನ ತಿಂದಾಕಿರೋ ಹುಲೀನ ಹಿಡುದ್ರು ಅನ್ನು. ವೂರ್ನಾಗೆ ಇನ್ನೂ ಮೂರು ನಾಲ್ಕು ಅವಲ್ಲ. ಅವು ಆವಾಗಾವಾಗ ಗುರ್ ಗುರ್ ಅಂತಾಯಿರ್ತವಲ್ಲ ಅದುನ್ನ ಹೆಂಗೆ ಹಿಡ್ದಾರು? ಅಂತ ಕೇಳ್ದ ಮೈಲಾರಿ.
ಯಾವ್ದು ಕಣ್ಲಾ ಆ ಹುಲಿಗ್ಳು ನಾನು ಕಾಣ್ದೆಯಿರಾದು ಅಂತ ಅಮಾಸೆ ಕೇಳ್ದ. ರಾಜಭವನ್ದಾಗೆ ವೊಂದದೆ ಕಣ್ಲಾ. ಮೊದ್ಲು ಕಮ್ಲ ಪಕ್ಸೋದರ್ನ ಕಂಡ್ರೆ ಸಾಕು ಹಂಗೇ ಮೈಮ್ಯಾಲೆ ಬೀಳ್ತಾಯಿತ್ತು. ಈವಾಗ ಕೈಪಕ್ಸುದೋರು ಮ್ಯಾಲೆ ಟೇಮು ಸಿಕ್ದಾಗ ಬೀಳ್ತಾನೇಯಿರ್ತದೆ. ನಮ್ ಹುಲಿ ನಮ್ಗೇ ಗುರ್ ಅಂತೈತೆ. ಇದುನ್ನ ಹಿಡ್ಕೊಂಡೋಗಿ ಡಿಲ್ಲಿನಾಗೆ ಕಟ್ಟಾಕ್ಕಳಿ ಅಂತ ಸಿಎಂ ಸಿದ್ರಾಮಣ್ಣ ಹೈಕಮಾಂಡುಗೆ ಪೋನಾಕಿ ಯೋಳಿದ್ರಂತೆ. ಈ ಹುಲಿ ಟೇಮುಗೀಮು ನೋಡಾಂಗಿಲ್ಲ, ನಮ್ಮೋರು, ತಮ್ಮೋರು ಅಂತ ತಿಳ್ಯಾಂಗಿಲ್ಲ. ಯಾವಾಗಂದ್ರೆ ಆವಾಗ ಗುರ್ ಗುರ್ ಅಂತಾಯಿರ್ತದೆ. ಅದುಕ್ಕೆ ನಮ್ ತಲೆ ಕೆಟ್ಟೋಗದೆ. ಈ ಹುಲೀನಾ ನಿಭಾಯ್ಸೋದು ನಮ್ ಕೈನಾಗೆ ಆಗಾಕ್ಕಿಲ್ಲ ಅಂತ ಸಿದ್ರಾಮಣ್ಣ ವಸಿ ಖಾರ್ವಾಗಿ ಯೋಳ್ಬುಟ್ಟವ್ರಂತೆ ಅಂದ ಮೈಲಾರಿ.
ರಾಜಭವನ್ದಾಗಿರೋ ಹುಲಿ ಭಲೇ ಘಾಟಿ ಇದ್ದಂಗದೆ ಬುಡ್ಲಾ ಮೈಲಾರಿ. ಅಲ್ಲಲೇ ಆ ಹುಲಿ ವೆಜ್ಜೋ ನಾನ್‌ವೆಜ್ಜೋ ? ಅಂತ ಅಮಾಸೆ ಕೇಳ್ದ. ವೋಗಿ ಬಾಯ್ನಾಗೆ ಬೆಳ್ಳು ಮಡ್ಗು ತಿಳೀತದೆ ಅಂತಂದ ಮೈಲಾರಿ. ಭತೆ ಇದ್ದೀಯ ಕಣ್ಲಾ ನೀನು. ನಂಗೇ ವೊಗೆ ಹಾಕೋ ಸ್ಕೀಮು ಮಡಿಕ್ಕಂಡಿದ್ದೀಯ ಹೆಂಗೆ ? ಅಂತ ಕೇಳ್ದ ಅಮಾಸೆ. ಇನ್ನೊಂದು ಹುಲಿ ಯಾವ್ದು ಕಣ್ಲಾ ? ಅಂತ ಮೈಲಾರಿನ ಕೇಳ್ದ.
ಅದು ರಾಜಾಹುಲಿ ಕಣ್ಲಾ. ಬೂಕನಕೆರೆ ಕಾಡ್ನಾಗಿತ್ತು. ಅಮ್ಯಾಲೆ ಕಮ್ಲ ಪಕ್ಸುದಾಗಿಂದ ಜಂಪು ಮಾಡ್ಕಂಡು ಬಂದ್ಬುಟ್ಟದೆ. ವೋದ್ಕಿತ ಅಶೆಂಬ್ಲಿ ಎಲೆಕ್ಸನ್ನಾಗೆ ಈ ಹುಲಿ ಬ್ಯಾರೆ ಪಾರ್ಟಿ ಮಾಡ್ಕಂಡಿತ್ತು. ಕಮ್ಲ ಪಕ್ಸುದೋರು ಸೀಟುಗಳ್ನ ಹಂಗೇ ತಿಂದಾಕ್ಬುಟ್ಟಿತ್ತು. ಈವಾಗ ಆ ಹುಲಿನ ತಿರ್ಗ ಪಾರ್ಟಿಗೆ ಕರ್ಕಂಡು ಬರಕ್ಕೆ ಅಂತ ಕಮ್ಲ ಪಕ್ಸುದೋರು ಬೋನು ಮಡ್ಗವ್ರೆ ಅಂದ ಮೈಲಾರಿ. ಇನ್ನೇನು ಬೋನ್ನಾಗೆ ಬಿದ್ದೋತ್ತದೆ ಬುಡು ರಾಜಾಹುಲಿ ಅಂತ ಅಮಾಸೆ ಯೋಳ್ದ. ಬಿದ್ದೋಯ್ತಾಯಿತ್ತು ಕಣ್ಲಾ. ಅನಂತನ ಆವಾಂತ್ರ ಆಗೋಗಿ ರಾಜಾಹುಲಿ ವಾಪ್ಸು ವೊಂಟೋಬುಟ್ಟದೆ. ಡಿಲ್ಲಿ ಲೀಡ್ರುಸು ಪಾರ್ಲಿಮೆಂಟ್ ಎಲೆಕ್ಸನ್‌ಗಂಟ ಹುಲಿ ವೋಡಾಡ್ಕಂಡು ಇರ್ಲಿ. ಅಮ್ಯಾಲೆ ಕಟ್ಟಾಕ್ಕಳಿ ಅಂತ ಯೋಳವ್ರಂತೆ ನೋಡಪ್ಪ ಅಂತೇಳ್ದ ಮೈಲಾರಿ.
ವೊಳ್ಳೆ ಹುಲಿಗ್ಳು ಸಾವಾಸ ಆಯ್ತು ಬುಡಪ್ಪ. ಅದ್ಸರಿ ಬೆಳ್ಗಾಂಗೆ ವೋಗಿದ್ದೇನ್ಲ ಅಶೆಂಬ್ಲಿ ನೋಡಕ್ಕೆ ಅಂತ ಅಮಾಸೆ ಕೇಳ್ದ. ವೂ ಕಣಪ್ಪ, ಸಿಎಂ ಸಿದ್ರಾಮಣ್ಣೋರ್ನ ಮಾತಾಡಿಸ್ಕಂಡು ಬರಾವ ಅಂತ ವೋಗಿದ್ದೆ. ಸಿಗ್ಲೇಯಿಲ್ಲ. ಪೋನು ಮಾಡುದ್ರೆ ಬಿಜಿ ಬಿಜಿ ಅಂತ ಬತ್ತಾಯಿತ್ತು. ಇದೇನು ಸಿಎಂ ಪೋನು ಈ ಪಾಟಿ ಬಿಜಿ ಅಂತ ಕೇಳ್ದೆ. ಅಪೋಜಿಸನ್ ಲೀಡ್ರು ಕುಮಾರಣ್ಣೋರ್ತವ ಮಾತಾಡ್ತಾವ್ರೆ ಅಂದ್ರು ಆಪೀಸರ್ಸು. ಅದೆಂಗೆ? ಅಂತ ಕೇಳ್ದೆ. ಅದು ಹಂಗಂಗೆ ಅಂದ್ಬುಟ್ರಪ್ಪೋ. ವಾಪ್ಸು ಬಂದ್ಬುಟ್ಟೆ ಕಣ್ಲಾ ಅಮಾಸೆ ಅಂತೇಳಿ ಮೈಲಾರಿ ಇಲಿ ಬೋನು ತರಕ್ಕೆ ಪ್ಯಾಟೆಗೆ ವೊಂಟ.

- ಕೆ.ವಿ.ಪ್ರಭಾಕರ್
prabhukolar@yahoo.com


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com