ಮಾನವನ ಮಿಡಿತ ಅರಿಯದೆ ದೇವರ ಸೇವೆ ಮಾಡಿದರೆ..?

ಮಾತೃ ದೇವೋ ಭವ, ಪಿತೃ ದೇವೋ ಭವ, ಅತಿಥಿ ದೇವೋ ಭವ ಎನ್ನುತ್ತದೆ...
ಮಾನವನ ಮಿಡಿತ ಅರಿಯದೆ ದೇವರ ಸೇವೆ ಮಾಡಿದರೆ..?
Updated on

ಮಾತೃ ದೇವೋ ಭವ, ಪಿತೃ ದೇವೋ ಭವ, ಅತಿಥಿ ದೇವೋ ಭವ ಎನ್ನುತ್ತದೆ ತೈತ್ತರೀಯ ಉಪನಿಷತ್. ತಾಯಿ-ತಂದೆಯರು ಸಾಕ್ಷಾತ್ ದೇವರು. ಅವರ ಸೇವೆಯೇ ಜೀವನಧರ್ಮ, ಇದು ಭಾರತೀಯ ಜೀವನದರ್ಶನದ ಬಹುಮುಖ್ಯ ಮೌಲ್ಯಗಳಲ್ಲೊಂದು. ಈ ಮೌಲ್ಯಗಳನ್ನು ತಮ್ಮ ಬದುಕಿಗೆ ಅಕ್ಷರಶಃ ಅಳವಡಿಸಿಕೊಂಡು ಆ ರೀತಿ ಬದುಕಿದ ಸಾವಿರಾರು ಉದಾಹರಣೆಗಳು ನಮ್ಮ ಪುರಾಣೇತಿಹಾಸಗಳಲ್ಲಿ ಸಿಗುತ್ತವೆ. ತನ್ನ ಅಂಧ ತಾಯಿ-ತಂದೆಯರನ್ನು ತಕ್ಕಡಿಗಳಲ್ಲಿ ಕುಳ್ಳಿರಿಸಿಕೊಂಡು ತೀರ್ಥಯಾತ್ರೆಗೆ ಹೋಗುತ್ತಿರುವಾಗ ದಶರಥನ ಬಾಣಕ್ಕೆ ಆಕಸ್ಮಿಕವಾಗಿ ಬಲಿಯಾದ ಶ್ರವಣಕುಮಾರನ ಮಾತೃಭಕ್ತಿ ಮತ್ತು ಪಿತೃಭಕ್ತಿ ಈ ಆದರ್ಶಕ್ಕೊಂದು ನಿದರ್ಶನ. ಮಹಾಭಾರತದಲ್ಲಿ ಸಹ ಅಂಥದೊಂದು ವಿಶೇಷ ದೃಷ್ಟಾಂತ ಬರುತ್ತದೆ. ಅದು ಧರ್ಮವ್ಯಾಧನ ಕಥೆ. ಮಹಾಮಹಿಮನಾದ ಋಷಿಯೊಬ್ಬ ತಪಸ್ಸಿಗೆ ಕುಳಿತಾಗ ಮರದ ಮೇಲಿದ್ದ ಹಕ್ಕಿಯೊಂದು ಮಲವಿಸರ್ಜನೆ ಮಾಡುತ್ತದೆ. ಅದು ಹಾಕಿದ ಹಿಕ್ಕೆ ಈ ಋಷಿಯ ತಲೆಯ ಮೇಲೆ ಬೀಳುತ್ತದೆ. ಋಷಿಗೆ ತಪೋಭಂಗವಾದಂತಾಗಿ ಉರಿಗಣ್ಣಿನಿಂದ ಮೇಲೆ ನೋಡುತ್ತಾನೆ. ಆತನ ಉರಿದೃಷ್ಟಿಗೆ ಆ ಹಕ್ಕಿ ಸುಟ್ಟುಬೀಳುತ್ತದೆ. ಋಷಿಗೆ ತನ್ನ ತಪಃಶಕ್ತಿಯ ಬಗ್ಗೆ ಹೆಮ್ಮೆ ಉಂಟಾಗುತ್ತದೆ. ಋಷಿ ಅಂದಿನ ಊಟಕ್ಕಾಗಿ ಭಿಕ್ಷಾಟಣೆಗೆ ಹೋಗುತ್ತಾನೆ. ಒಂದು ಮನೆಯ ಮುಂದೆ 'ಭವತಿ ಭಿಕ್ಷಾಂದೇಹಿ' ಎಂದು ಆತ ಕೂಗುತ್ತಾನೆ. ಮನೆಯೊಳಗಿನ ಗೃಹಿಣಿ "ಸ್ವಲ್ಟ ತಡೆಯಿರಿ ನಾನು ನನ್ನ ಪತಿಗೆ ಊಟ ನೀಡುತ್ತಿದ್ದೇನೆ" ಎಂದು ಹೇಳುತ್ತಾಳೆ. ಇದನ್ನು ಕೇಳಿ ಋಷಿಗೆ ಸಿಟ್ಟುಬರುತ್ತದೆ. ಆ ಗೃಹಿಣಿ ತನ್ನ ಪತಿಗೆ ಊಟ ನೀಡಿದ ಬಳಿಕ ಭಿಕ್ಷೆ ತಂದು ಋಷಿಗೆ ನೀಡುತ್ತಾಳೆ. ಭಿಕ್ಷೆ ನೀಡಲು ತಡವಾಗಿದ್ದಕ್ಕೆ ಋಷಿ ಸಿಟ್ಟಿನಿಂದ ಅಬ್ಬರಿಸಿ "ನನ್ನಂಥ ತಪಸ್ವಿಯನ್ನು ಕಾಯಿಸಿದ್ದೆಯಲ್ಲಾ? ನನ್ನ ಶಕ್ತಿಯೆಷ್ಟು ಬಲ್ಲೆಯಾ?" ಎಂದು ಕೇಳುತ್ತಾನೆ. ಆ ಗೃಹಿಣಿ "ಗೊತ್ತು, ಇಂದು ಬೆಳಿಗ್ಗೆ ನಿಮ್ಮ ಈ ಸಿಟ್ಟಿಗೆ ಗುರಿಯಾಗಿ ಬಡಪಾಯಿ ಹಕ್ಕಿಯೊಂದು ಬಲಿಯಾಗಿ ಹೋಯಿತು" ಎಂದು ಹೇಳುತ್ತಾಳೆ. ಆ ವಿಷಯ ಆಕೆಗೆ ಹೇಗೆ ಗೊತ್ತಾಯಿತು ಎಂದು ಋಷಿಗೆ ಆಶ್ಚರ್ಯವಾಗುತ್ತದೆ. ಅಲ್ಲಿಂದ ಮುಂದೆ ಆತ ವ್ಯಾಪಾರಿಯೊಬ್ಬನ ಅಂಗಡಿಗೆ ಹೋಗುತ್ತಾನೆ. ಆ ವ್ಯಾಪಾರಿಯು ತಾನು ತನ್ನ ಗಿರಾಕಿಯ ಅಗತ್ಯಗಳನ್ನು ಪೂರೈಸಿದ ಬಳಿಕ ಬರುತ್ತೇನೆಂದು ಋಷಿಗೆ ಹೇಳುತ್ತಾನೆ. ಮತ್ತೆ ಋಷಿಗೆ ಅಸಾಧ್ಯಕೋಪಬರುತ್ತದೆ. ತನ್ನ ತಪಃಶಕ್ತಿಯ ಬಗ್ಗೆ ಹೇಳಿ ವ್ಯಾಪಾರಿಗೆ ಎಚ್ಚರಿಕೆ ನೀಡುತ್ತಾನೆ. ಆ ವ್ಯಾಪಾರಿ ನಿಮ್ಮ ಸಿಟ್ಟಿನ ಬಗ್ಗೆ ನನಗೆ ಅರಿವಿದೆ. ಬೆಳಿಗ್ಗೆ ಇದೇ ಸಿಟ್ಟಿನಿಂದ ಒಂದು ಮುಗ್ಧ ಹಕ್ಕಿಯ ಸಾವಿಗೆ ಕಾರಣರಾದಿರಿ. ಆಮೇಲೆ ಆ ಗೃಹಿಣಿಯ ಬಳಿಯೂ ನಿಮ್ಮ ಕೋಪವನ್ನು ಪ್ರದರ್ಶಿಸಿದಿರಿ. ಆದರೆ ನಿಮ್ಮ ಸಿಟ್ಟಿನ ಪರಿಣಾಮ ಹಕ್ಕಿಯ ಮೇಲಾದಂತೆ ಗೃಹಿಣಿಯ ಮೇಲೆ ಆಗಲಿಲ್ಲ; ನನ್ನ ಮೇಲೂ ಆಗಲಿಲ್ಲ" ಎಂದು ಹೇಳಿದ. ಇದನ್ನು ಕೇಳಿ ಋಷಿಗೆ ಆಶ್ಚರ್ಯವಾಯಿತು. ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಯೊಬ್ಬ ಇಂದು ಬೆಳಗಿನಿಂದ ನಡೆದ ಘಟನೆಗಳನ್ನೆಲ್ಲಾ ಯಥಾವತ್ತಾಗಿ ಹೇಳುತ್ತಿದ್ದಾನಲ್ಲ ! ಈತನ ಶಕ್ತಿ ಎಷ್ಟಿರಬಹುದು ! ಈತನ ಬಳಿ ತಾನು ಧರ್ಮೋಪದೇಶ ಪಡೆದುಕೊಂಡರೆ ಹೇಗೆ ಎಂದೆಲ್ಲ ಋಷಿ ಆಲೋಚಿಸಲಾರಂಭಿಸಿದ. ಆಗ ಆ ವ್ಯಾಪಾರಿಯು "ಮಹಾತ್ಮರೇ, ನಿಮಗೆ ಧರ್ಮೋಪದೇಶ ಬೇಕಾದರೆ ಧರ್ಮವ್ಯಾಧನ ಬಳಿಗೆ ಹೋಗಿರಿ" ಎಂದು ಹೇಳುತ್ತಾನೆ. ಧರ್ಮವ್ಯಾಧನೆಂದರೆ ಓರ್ವ ಮಾಂಸದ ವ್ಯಾಪಾರಿ. ಮಾಂಸ ಮಾರುವಾತನ ಬಳಿ ಧರ್ಮವನ್ನೇನು ಕಲಿತುಕೊಳ್ಳುವುದು ಎಂದು ಋಷಿಗೆ ಆಶ್ಚರ್ಯವಾದರೂ ವ್ಯಾಪಾರಿಯ ಮಾತಿನಂತೆ ಧರ್ಮವ್ಯಾಧನ ಬಳಿ ತೆರಳುತ್ತಾನೆ. ಮಾಂಸದಂಗಡಿಯ ವಾತಾವರಣ ಋಷಿಗೆ ಅಸಹ್ಯ ತರುತ್ತದೆ. ಅದನ್ನು ಗಮನಿಸಿದ ಧರ್ಮವ್ಯಾಧ ಹಕ್ಕಿಯ ಪ್ರಕರಣ, ಗೃಹಿಣಿಯ ಪ್ರಕರಣ ಮತ್ತು ವ್ಯಾಪಾರಿಯ ಬಳಿ ನಡೆದ ಮಾತುಕತೆಗಳನ್ನು ಹೇಳುತ್ತಾನೆ. ಧರ್ಮವ್ಯಾಧನ ಈ ಶಕ್ತಿ ನೋಡಿ ಋಷಿಗೆ ಇನ್ನಷ್ಟು ಆಶ್ಚರ್ಯವಾಗುತ್ತದೆ. ವ್ಯಾಧನು ಋಷಿಯನ್ನು ತನ್ನ ಮನೆಗೆ ಕರೆದೊಯ್ಯುತ್ತಾನೆ. ಅಲ್ಲಿ ವ್ಯಾಧನ ತಾಯಿ-ತಂದೆಯರು ಕುಳಿತಿರುತ್ತಾರೆ. ವ್ಯಾಧನು ತನ್ನ ತಂದೆ-ತಾಯಿಯರ ಸೇವೆಯನ್ನು ಮಾಡಿ ಆ ಬಳಿಕ ಋಷಿಯತ್ತ ಬರುತ್ತಾನೆ. ಋಷಿಯು ಗೃಹಿಣಿಗೆ, ವ್ಯಾಪಾರಿಗೆ ಮತ್ತು ಈ ವ್ಯಾಧನಿಗೆ ಇಷ್ಟೊಂದು ಶಕ್ತಿ ಹೇಗೆ ಬಂತೆಂದು ಕೇಳುತ್ತಾನೆ. "ಗೃಹಿಣಿಗೆ ಶಕ್ತಿ ಬಂದಿದ್ದು ಆಕೆ ನಡೆಸುತ್ತಿರುವ ಪತಿ ಸೇವೆಯಿಂದ. ವ್ಯಾಪಾರಿಗೆ ಶಕ್ತಿ ಬಂದಿದ್ದು ಆತ ತನ್ನ ಗಿರಾಕಿಗಳಿಗೆ ನ್ಯಾಯ ಒದಗಿಸುತ್ತಿದ್ದರಿಂದ. ನನಗೆ ಅದು ಒದಗಿಬಂದದ್ದು. ನಾನು ನನ್ನ ತಂದೆ-ತಾಯಿಗಳ ಸೇವೆ ಮಾಡುತ್ತಿರುವುದರಿಂದ" ಎಂದು ವ್ಯಾಧ ವಿವರಿಸುತ್ತಾನೆ. ಗೃಹಿಣಿ ಮತ್ತು ವ್ಯಾಪಾರಿಗಿಂತ ಹೆಚ್ಚಿನ ಶಕ್ತಿ ಮತ್ತು ಧರ್ಮೋಪದೇಶದ ಅರ್ಹತೆ ಇರುವುದು. ಈ ವ್ಯಾಧನಿಗೆ ಎನ್ನುವುದು ಈ ಕಥೆಯ ಒಂದು ಮುಖ್ಯ ಅಂಶ. ಅದು ಬಂದಿದ್ದು ತಾಯಿ-ತಂದೆಯರ ಸೇವೆಯಿಂದ ಎಂಬುವುದು ಕಥೆಯ ತಾತ್ಪರ್ಯ. ನಾನು ಕೇವಲ ಇಲ್ಲಿ ಶ್ರವಣಕುಮಾರನ ಮತ್ತು ಧರ್ಮವ್ಯಾಧನ ಉದಾಹರಣೆಗಳನ್ನಷ್ಟೇ ನೀಡಿದ್ದೇನೆ. ಇಂಥ ನಿದರ್ಶನಗಳು ನಮ್ಮ ಪರಂಪರೆಯಲ್ಲಿ ಹೇರಳವಾಗಿವೆ. ಆದರೆ ಇಂದು ಪರಿಸ್ಥಿತಿ ವ್ಯತಿರಿಕ್ತವಾಗಿದೆ. ತಾಯಿ-ತಂದೆಯರ ಸೇವೆ ಎನ್ನುವುದು ಆಧುನಿಕ ಭಾರತೀಯರಿಗೆ ಮರೆತುಹೋದ ಮೌಲ್ಯವಾಗಿದೆ. ಎಷ್ಟೋ ತಂದೆ-ತಾಯಿಗಳು ಕೂಡಾ ತಮ್ಮ ಮಕ್ಕಳಿಗೆ ಈ ಮೌಲ್ಯದ ಬಗ್ಗೆ ಹೇಳುತ್ತಿಲ್ಲ. ಶಾಲೆಯ ಪಠ್ಯಪುಸ್ತಕಗಳಲ್ಲಿ ಇಂಥ ಮೌಲ್ಯಗಳ ಬಗ್ಗೆ ಪಾಠವಿರುವುದಿಲ್ಲ. ಆಧುನಿಕ ಶಿಕ್ಷಣತಜ್ಞರ ಪ್ರಕಾರ ಇವೆಲ್ಲ ಕಂದಾಚಾರಗಳು ಮತ್ತು ಮೂಢನಂಬಿಕೆಗಳು. ಸೆಕ್ಯುಲರ್ ಬುದ್ಧಿ ಜೀವಿಗಳಿಗಂತೂ ಈ ವಿಚಾರವೇ ಅಸ್ಪೃಶ್ಯ. ಹಾಗಾಗಿ ಇಂದಿನ ಪೀಳಿಗೆಯ ಜನರಿಗೆ ಈ ಮೌಲ್ಯದ ಮಹತ್ವ ಗೊತ್ತಾಗುವುದಾದರೂ ಹೇಗೆ ? ಇಂದು ತಾಯಿ-ತಂದೆ, ಶಿಕ್ಷಕರು, ಮಾಧ್ಯಮಗಳು, ಸಾಮಾಜಿಕ ಚಿಂತಕರು, ರಾಜಕೀಯ ಧುರೀಣರು ಎಲ್ಲರೂ ಮಕ್ಕಳೆದುರು ಪ್ರತಿಪಾದಿಸುವುದು ಏನನ್ನು ? "ನೀನು ವಿದ್ಯಾವಂತನಾಗಿ, ಡಾಕ್ಟರ್ ಆಗಿಯೋ, ಇಂಜಿನಿಯರ್ ಆಗಿಯೋ ಸಮಾಜಕ್ಕೆ ಸೇವೆ ಸಲ್ಲಿಸು ?" - ಈ ರೀತಿಯ ಉಪದೇಶ ಈಗ್ಗೆ 30-40 ವರ್ಷಗಳ ಹಿಂದೆ ಸಾಮಾನ್ಯವಾಗಿತ್ತು. (ಇದರಲ್ಲಿ ಡಾಕ್ಟರ್ ಅಥವಾ ಇಂಜಿನಿಯರ್ ಆಗದಿದ್ದರೆ ಸಮಾಜಕ್ಕೆ ಸೇವೆ ಸಲ್ಲಿಸಲು ಸಾಧ್ಯವಿಲ್ಲ ಎಂಬ ಪರೋಕ್ಷ ಧ್ವನಿ ಒಂದೆಡೆಯಾದರೆ, ಹೆಚ್ಚಿನ ಹಣಗಳಿಸು ಎಂಬ ಒಳಾರ್ಥ ಈ ಉಪದೇಶದಲ್ಲಿರುತ್ತಿತ್ತು ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.) ಅದಾದ ಮೇಲೆ ಸಾಫ್ಟ್‌ವೇರ್ ಇಂಜಿನಿಯರ್ ಆಗುವುದು, ಎಂ.ಬಿ.ಎ ಮಾಡಿ ದೊಡ್ಡ ಕಂಪನಿಯಲ್ಲಿ ದೊಡ್ಡ ನೌಕರಿ ಗಳಿಸುವುದು. ವಿದೇಶಕ್ಕೆ ಹೋಗಿ ಅಲ್ಲಿ ದೊಡ್ಡ ನೌಕರಿ ಮಾಡುವುದು ಇವೆಲ್ಲ ಉಪದೇಶಗಳಾದವು. ಈ ಉಪದೇಶಗಳ ಪರಿಣಾಮವಾಗಿ ಇಂದು ದೊಡ್ಡ ನೌಕರಿ ಮಾಡಿ ದೊಡ್ಡ ಸಂಬಳ ಗಳಿಸುವುದೇ ಜೀವನದ್ಯೇಯವಾಗಿದೆ. ವಿದೇಶದಲ್ಲಿ ನೆಲೆಸಿ ಐಷಾರಾಮಿ ಬದುಕು ನಡೆಸುವುದೇ ಜೀವನದ ಸಾರ್ಥಕತೆಯಾಗಿದೆ. ಇದರ ಘೋರ ಪರಿಣಾಮ ಏನಾಗಿದೆ? ಇದನ್ನು ತಿಳಿಯಲು ಯಾವುದೇ ಸಂಶೋಧನೆ ನಡೆಸಬೇಕಾಗಿಲ್ಲ. ನಮ್ಮ ಸುತ್ತಮುತ್ತ ಈ ಮಾತಿಗೆ ಬಹಳಷ್ಟು ನಿದರ್ಶನಗಳು ಸಿಗುತ್ತವೆ. ತುಂಬ ಸಾಮಾಜಿಕ  ಕಳಕಳಿಯುಳ್ಳ ಇಳಿವಯಸ್ಸಿನಲ್ಲೂ ಸಮಾಜದ ಕೆಲಸಕ್ಕೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ತನು-ಮನ-ಧನದಿಂದ ಶ್ರಮಿಸುತ್ತಿರುವ ಓರ್ವ ಹಿರಿಯರು ಆಕಸ್ಮಾತ್ತಾಗಿ ನನ್ನನ್ನು ಊಟಕ್ಕೆ ಕರೆದರು. ಅವರ ಆಮಂತ್ರಣವನ್ನು ಮನ್ನಿಸಿ ನಾನು ಅವರಲ್ಲಿಗೆ ಹೋದೆ. ಮನೆಯಲ್ಲಿ ಗಂಡ- ಹೆಂಡತಿ ಇಬ್ಬರೇ ಯಜಮಾನರು. ಕೇಂದ್ರ ಸರಕಾರದಲ್ಲಿ ಮುಖ್ಯ ಅಭಿಯಂತರರಾಗಿ ನಿವೃತ್ತಿ ಹೊಂದಿದವರು. ಈಗ ಅವರ ವಯಸ್ಸು 70-75 ಇರಬಹುದು. ಅವರಿಗೆ ಇಬ್ಬರು ಗಂಡು ಮಕ್ಕಳು. ಇಬ್ಬರೂ ದೊಡ್ಡ ದೊಡ್ಡ ಹುದ್ದೆಯಲ್ಲಿ ಅಮೇರಿಕಾದಲ್ಲಿದ್ದಾರೆ. ಈ ವೃದ್ಧ ತಂದೆ-ತಾಯಿಗಳಿಗೆ ಆಕಸ್ಮಾತ್ ಆರೋಗ್ಯ ಹದಗೆಟ್ಟರೆ ನೋಡಿಕೊಳ್ಳುವವರಾರು ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿ ಮೂಡಿತು. ಬರೇ ಅಷ್ಟು ಮಾತ್ರವಲ್ಲ, ತಂದೆ- ತಾಯಿಗಳಾದವರಿಗೆ ತಮ್ಮ ಮಕ್ಕಳೊಡನೆ ಪ್ರೀತಿಯಿಂದ ಬಾಳುವೆ ಮಾಡುವುದು ಜೀವನದ ಶ್ರೇಷ್ಠ ಸುಖ. ಈ ದಂಪತಿ ತಮ್ಮ ವೃದ್ಧಾಪ್ಯದಲ್ಲಿ ಈ ಸುಖದಿಂದ ವಂಚಿತರಾಗಿದ್ದಾರಲ್ಲ ಎಂಬ ಭಾವನೆ ನನ್ನೊಳಗೆ ನುಗ್ಗಿಬಂತು. ಈ ವೃದ್ಧ ತಂದೆ-ತಾಯಿಗಳನ್ನು ಅವರ ಪಾಡಿಗೆ ಅವರಷ್ಟಕ್ಕೇ ಬಿಟ್ಟು ಆ ಮಕ್ಕಳಾದರೂ ಅಮೆರಿಕದಲ್ಲಿ ಅದೇನು ಸುಖ ಅನುಭವಿಸುತ್ತಿದ್ದಾರೆ ಎಂಬ ಪ್ರಶ್ನೆಯೂ ಉದ್ಭವಿಸಿತು. ತಂದೆ-ತಾಯಿಗಳಿಗೆ ಮಕ್ಕಳ ಜೊತೆಗಿರುವುದು ಹೇಗೆ ಸುಖವೋ ಹಾಗೆಯೇ ಮಕ್ಕಳಿಗೂ ತಂದೆ- ತಾಯಿಯ ಜೊತೆ ಇರುವುದು ಸುಖವಲ್ಲವೇ?
 ಈ ಯಜಮಾನರು ಕೇಂದ್ರ ಸರಕಾರದ ನಿವೃತ್ತ ಮುಖ್ಯ ಅಭಿಯಂತರರಾಗಿರುವುದರಿಂದ ಅವರಿಗೆ ಬರುತ್ತಿರುವ ನಿವೃತ್ತಿ ವೇತನ ಸಣ್ಣದೇನಲ್ಲ. ಅಥವಾ ಅವರ ಮಕ್ಕಳ ಪೈಕಿ ಕನಿಷ್ಠ ಒಬ್ಬರಾದರೂ ಅಷ್ಟೇ ದೊಡ್ಡ ಪಗಾರಿನ ನೌಕರಿಯನ್ನು ನಮ್ಮ ರಾಜ್ಯದಲ್ಲಿಯೇ ಮಾಡಬಹುದಿತ್ತಲ್ಲ? ಹೀಗೆ ಒಂದೇ ಸಮನೆ ಪ್ರಶ್ನೆಗಳು ಮೂಡುತ್ತಲೇ ಹೋದವು. ಉತ್ತರ ಹೊಳೆಯಲಿಲ್ಲ. ಇನ್ನೊಂದು ಉದಾಹರಣೆ: ಆ ವೃದ್ಧ ತಂದೆ-  ತಾಯಿಗಳಿಗೆ (ತಂದೆ 80ರ ಆಸುಪಾಸು ಮತ್ತು ತಾಯಿಗೆ 70-75ರ ಅಂದಾಜು ವಯಸ್ಸು) ಎಲ್ಲ ಅನುಕೂಲವಿದೆ. ಖರ್ಚಿಲ್ಲದ ಮೇಲ್ಮಧ್ಯಮವರ್ಗದ ಕುಟುಂಬ., ಹಣಕಾಸಿಗೇನೂ ಕೊರತೆಯಿಲ್ಲ. ಯಜಮಾನರಿಗೆ ಕೆಲವು ವರ್ಷಗಳ ಹಿಂದೆ ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆ ಆಗಿದೆ. ಆದರೆ ಮನೆಯಲ್ಲಿ ಅವರಿಬ್ಬರೇ. ಏಕೆಂದರೆ ಗಂಡು ಮಕ್ಕಳಿದ್ದರೂ ಎಲ್ಲರೂ ಕೂಡ ಬೇರೆ ಬೇರೆ ದೇಶಗಳಲ್ಲಿ ಕೈತುಂಬ ಆದಾಯ ಹೊಂದಿದ್ದಾರೆ. ಅಷ್ಟು ದೊಡ್ಡ ಆದಾಯವನ್ನು ಬಿಟ್ಟು ಮಿತ ಆದಾಯ ಇರುವ ಊರಿಗೆ ಮರಳಲು ಅವರಿಗೆ ಮನಸ್ಸಿಲ್ಲ. ಹಾಗೆಂದು ಅವರೆಲ್ಲ ಧನಪಿಶಾಚಿಗಳೇನೂ ಅಲ್ಲ. ಬಾಲ್ಯದಿಂದಲೂ ಸುಸಂಸ್ಕೃತರು. ಆದರೂ ಅವರ ತಲೆಯಲ್ಲಿ ಬಾಳಿನ ಸಂಜೆಯಲ್ಲಿರುವ ತಮ್ಮ ತಂದೆ-ತಾಯಿಗಳ ಜೊತೆ ತಾವಿರಬೇಕೆಂಬ ಮೌಲ್ಯ ಕೂತಿಲ್ಲ. ತಂದೆ- ತಾಯಿಗಳ ಜೊತೆ ಇದ್ದು ಅವರ ಸೇವೆ ಮಾಡುತ್ತ ಎಲ್ಲ ಅನುಕೂಲವಿರುವ ತಮ್ಮ ಮನೆಯಲ್ಲಿ ತೃಪ್ತಿಯಿಂದ ಜೀವನ ನಡೆಸುವುದು ಅವರಿಗೆ ಬೇಕಿಲ್ಲ. ಬಹುಶಃ ನಗರ ಜೀವನದ ಆಕರ್ಷಣೆಯೂ ಅವರಲ್ಲಿ ಮನೆ ಮಾಡಿರಬಹುದು. ನಮ್ಮ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ. ಮಕ್ಕಳೆಲ್ಲ ಪಟ್ಟಣಗಳಲ್ಲಿ ಸುಖ ಜೀವ (?) ಅನುಭವಿಸುತ್ತಿದ್ದರೆ ವೃದ್ದರು ಹಳ್ಳಿಗಳಲ್ಲಿ ಒಂಟಿತನ ಅನುಭವಿಸುತ್ತಿದ್ದಾರೆ. ರಾತ್ರಿ ಹೊತ್ತು ಅವರ ದೇಹ ಪ್ರಕೃತಿಯಲ್ಲಿ ಏರುಪೇರಾದರೆ ನೋಡಿಕೊಳ್ಳಲು ಯಾರೂ ಇಲ್ಲ. ಪಟ್ಟಣಗಳಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿದೆ. ಕಾಯಿಗೆ ಬಳ್ಳಿ ಭಾರವಾಗುತ್ತಿದೆ. ಇಂದು ವಿವಿಧ ದೇಶಗಳಲ್ಲಿ ಕುಟುಂಬ ಜೀವನ ಶಿಥಿಲವಾಗುತ್ತಿರುವಾಗ ಅದು ಭಾರತದಲ್ಲಿ ಭದ್ರವಾಗಿದೆ ಎಂಬುದು ಜಗತ್ತಿನ ಅಭಿಪ್ರಾಯ. ಅದರೆ ಕುಟುಂಬ ಜೀವನದ ತಳಹದಿಯೋಪಾದಿಯಲ್ಲಿರುವ ತಂದೆ- ತಾಯಿಗಳ ಜೊತೆಗೆ (ಕನಿಷ್ಟ ಪಕ್ಷ ಅವರ ವೃದ್ಧಾಪ್ಯದಲ್ಲಾದರೂ) ಜೀವನ ನಡೆಸುವ ಪದ್ಧತಿ ಛಿದ್ರವಾಗುತ್ತಿರುವ ಈ ಗಂಡಾಂತರ ಪರಿಸ್ಥಿತಿಯ ಬಗ್ಗೆ ಸಮಾಜ ಈಗಲಾದರೂ ಎಚ್ಚರಾಗದಿದ್ದರೆ ಹೇಗೆ? ಸಮಾಜದಲ್ಲಿ ನಾನು ಒಳ್ಳೆಯ ವ್ಯಕ್ತಿಯಾಗಿ ಉಳಿಯಲು ಕಾರಣ ನಮ್ಮ ಹೆತ್ತವರ ಸೇವೆಯನ್ನು ಮಾಡದೆ ಉಳಿದ ಎಲ್ಲಾ ಇರುವ ದೇವರ ಸೇವೆ ಮಾಡಿದರೆ ಪ್ರಯೋಜನವೇ? ನಮ್ಮ ತಂದೆ- ತಾಯಿ ನಮಗೆ ಮೊದಲ ದೇವರು ಎಂಬ ಭಾವನೆ ನಮ್ಮ ಯುವಕ- ಯುವತಿಯರು ಇದನ್ನು ಅರ್ಥ ಮಾಡಿಕೊಂಡರೆ ನಮ್ಮ ಬದುಕು ಎಷ್ಟು ಸುಂದರವಾಗಿರುತ್ತೆ.

- ಎನ್. ಲಕ್ಷ್ಮೀನಾರಾಯಣ
anisikeprabha@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com