ಮೇದರ ಸಮುದಾಯದವರ ಬದುಕಿಗೆ ಬೆಂಗಾವಲಾಗಿ ನಿಂತ ಬಿದಿರು

ಬಿದಿರು ನಾನ್ಯಾರಿಗಲ್ಲಾದವಳು, ಹುಟ್ಟುತ್ತ ಹುಲ್ಲಾದೆ, ಬೆಳೆಯುತ್ತ ಮರವಾದೆ...
ಮೇದರ ಸಮುದಾಯದವರ ಬದುಕಿಗೆ ಬೆಂಗಾವಲಾಗಿ ನಿಂತ ಬಿದಿರು

ಬಿದಿರು ನಾನ್ಯಾರಿಗಲ್ಲಾದವಳು, ಹುಟ್ಟುತ್ತ ಹುಲ್ಲಾದೆ, ಬೆಳೆಯುತ್ತ ಮರವಾದೆ...
ಈ ಜಾನಪದ ಗೀತೆಯನ್ನು ಕೇಳದವರು ಯಾರಿದ್ದಾರೆ ಹೇಳಿ? ಬಿದಿರು ಮತ್ತು ಅದರಿಂದ ತಯಾರಿಸುವ ಪರಿಕರಗಳ ಮಹತ್ವವನ್ನು ಈ ಹಾಡು ಮನಮುಟ್ಟುವಂತೆ ಹೇಳುತ್ತದೆ. ಪ್ರಕೃತಿ ನಮಗೆ ಕೊಟ್ಟಿರುವ ಸಂಪತ್ತಿನ ಪೈಕಿ ಬಿದಿರು ಸಹ ಒಂದು. ಬಿದಿರು ಎಂದಾಕ್ಷಣ ನಮ್ಮ ನೆನಪಿಗೆ ಬರುವುದು ಅದರಿಂದ ತಯಾರಿಸುವ ಪರಿಕರಗಳು ಒಂದೆಡೆಯಾದರೆ, ಕಾಡಿನಲ್ಲಿ ಇರುವ ಅನೆಗಳಿಗಂತೂ ಬಿದಿರು ಅಚ್ಚುಮೆಚ್ಚಿನ ಆಹಾರ. ಅರಣ್ಯ ಪ್ರದೇಶದಲ್ಲಿ ಬಿದಿರು ಯಥೇಚ್ಛವಾಗಿ ಬೆಳೆದಿದ್ದರೆ ಆನೆಗಳು ಕಾಡು ಬಿಟ್ಟು ಹೊರಗೆ ಬರುವುದೇ ಇಲ್ಲ. ಇದು ಬಿದಿರಿಗೆ ಇರುವ ಮಹತ್ವವಾದರೆ, ಅದೇ ಬಿದಿರಿನೊಂದಿಗೆ ಬದುಕು ಕಟ್ಟಿಕೊಂಡಿರುವ ಸಮುದಾಯವೂ ನಮ್ಮ ನಡುವೆ ಇದೆ. ಅದುವೇ ಮೇದರು ಜನಾಂಗ. ಈ ಸಮುದಾಯಕ್ಕೆ ಮ್ಯಾದರ, ಮೇದಾರ ಎಂಬಿತ್ಯಾದಿ ಹೆಸರುಗಳೂ ಇವೆ.

ಅರಣ್ಯಗಳಲ್ಲಿದ್ದ ಮೇದರು
ಬುಡಕಟ್ಟು ಸಮುದಾಯಕ್ಕೆ ಸೇರಿರುವ ಮೇದರು ಈ ಮೊದಲು ಅರಣ್ಯ ಪ್ರದೇಶಗಳಲ್ಲಿ ವಾಸವಿದ್ದವರು. ಅದರಲ್ಲೂ ಬಿದಿರು ಹೆಚ್ಚಾಗಿ ಬೆಳೆಯುವ ಕಾಡುಗಳನ್ನೇ ಇವರು ತಮ್ಮ ವಾಸ್ತವ್ಯಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಏಕೆಂದರೆ, ಬಿದಿರು ಅವರ ಜೀವನಕ್ಕೆ, ಕುಲುಕಸುಬಿಗೆ ಆಧಾರ.
ದೇಶದ ನಾನಾ ರಾಜ್ಯಗಳಲ್ಲಿ ಮೇದರು ಸಮುದಾಯದವರನ್ನು ಕಾಣಬಹುದು. ಅದೇ ರೀತಿ ಕರ್ನಾಟಕದಲ್ಲೂ ಈ ಜಾತಿಯ ಜನರಿದ್ದಾರೆ. ಈ ಮೊದಲು ಶಿವಮೊಗ್ಗ, ಕಡೂರು, ಮೈಸೂರು ಭಾಗದಲ್ಲಿ ಮಾತ್ರ ಇದ್ದ ಇವರು ಈಗ ರಾಜ್ಯದ ಬಹುತೇಕ ಕಡೆಗಳಲ್ಲಿ ನೆಲೆಸಿದ್ದಾರೆ. ಮೇದರು ಇಲ್ಲದ ಯಾವುದೇ ನಗರ ಮತ್ತು ಪಟ್ಟಣ ಪ್ರದೇಶವೇ ಇಲ್ಲ ಎಂದು ಹೇಳಬಹುದು. ಆದರೆ, ಸಂಘಟಿತರಾಗಿಲ್ಲ ಅಷ್ಟೇ. ಕಾಡಿನಲ್ಲಿ ವಾಸ ಮಾಡುತ್ತಿದ್ದಾಗ ಬಿದಿರು ಸುಲಭವಾಗಿ ಸಿಗುತ್ತಿತ್ತು. ಈಗ ಅಲ್ಲಿಗೆ ಹೋಗುವಂತಿಲ್ಲ, ಬಿದಿರು ಇರಲಿ, ಅದರ ಎಲೆಯನ್ನು ತರುವಂತಿಲ್ಲ. ಹೀಗಾಗಿ ಬಿದಿರಿಗೆ ದೊಡ್ಡ ದೊಡ್ಡ ವ್ಯಾಪಾರಿಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಬಂದೋದಗಿದೆ. ಅಂಗಡಿಗಳಿಂದ ಗಳ ತಂದು ಅದನ್ನು ಸೀಳಿ ಬುಟ್ಟಿ, ತೊಟ್ಟಿಲು ಮತ್ತಿತರ ಪರಿಕರಣಗಳನ್ನು ತಯಾರಿಸುತ್ತಾರೆ. ಅದನ್ನು ಗಳ ಕೊಟ್ಟವರಿಗೆ ಮಾರುತ್ತಾರೆ. ಇಲ್ಲವೇ, ತಾವೇ ಮಾರುಕಟ್ಟೆಗೆ ಕೊಂಡೊಯ್ದು ನೇರವಾಗಿ ಮಾರಾಟ ಮಾಡುತ್ತಾರೆ.

ಬೇಡಿಕೆ ಕಳೆದುಕೊಂಡ ಬಿದಿರು
ನಗರ ಮತ್ತು ಪಟ್ಟಣ ಪ್ರದೇಶಗಳ ಪ್ರಮುಖ ವೃತ್ತಗಳಲ್ಲಿ ಬಿಡಾರ ಹೂಡಿ ಬಿದಿರಿನ ಪರಿಕರಗಳನ್ನು ತಯಾರು ಮಾಡುವ ಮೇದರನ್ನು ಇಂದಿಗೂ ಕಾಣಬಹುದಾಗಿದೆ. ಅದರೆ, ಬೇಡಿಕೆ ಮಾತ್ರ ಹಿಂದಿನಂತೆ ಇಲ್ಲ. ಪ್ರಾಸ್ಟಿಕ್, ಫೈಬರ್‌ನಿಂದ ತಯಾರಿಸುವ ಪರಿಕರಗಳ ಮೇಲೆ ಜನರ ಒಲವು ಹೆಚ್ಚಾಗಿರುವುದು ಇದಕ್ಕೆ ಕಾರಣ. ಮದುವೆ ಸೀಸನ್‌ನಲ್ಲಿ ಮಾತ್ರ ಮೇದರ ಬಿದಿರಿನ ಪರಿಕರಗಳಿಗೆ ಕೊಂಚ ಬೇಡಿಕೆ ಹೆಚ್ಚಾಗಿರುತ್ತದೆ. ಉಳಿದಂತೆ ನಿತ್ಯ ನೂರು ಅಥವಾ ಇನ್ನೂರು ವ್ಯಾಪರವಾದರೆ ಅದೇ ಹೆಚ್ಚು.
ಮೇದರು ಆಯಾ ಪ್ರದೇಶಗಳಿಗೆ ಅನುಗುಣವಾಗಿ ಸಂಪ್ರದಾಯಗಳನ್ನು ಪಾಲನೆ ಮಾಡುತ್ತಾರೆ. ಹೀಗಾಗಿ ಅವರ ಅಚರಣೆಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಬದಲಾಗುತ್ತಾ ಸಾಗುತ್ತದೆ. ಈ ಸಮುದಾಯದ ಜನ ಈ ಹಿಂದೆ ತಮ್ಮ ಗುಡಿಸಲುಗಳನ್ನು ಬೊಂಬು ಮತ್ತು ಬಿದಿರು ಬಳಕೆ ಮಾಡಿ ನಿರ್ಮಿಸಿಕೊಳ್ಳುತ್ತಿದ್ದರು. ಹತ್ತಾರು ಗುಡಿಸಲುಗಳು ತಲೆ ಎತ್ತಿದ ಬಳಿಕ ಆ ಜಾಗದಲ್ಲಿ ಒಂದು ಬೊಂಬು ನೆಟ್ಟು ಇದು ತಮ್ಮ ಹಾಡಿ ಎಂದು ನಿರ್ಧಾರ ಮಾಡುತ್ತಿದ್ದರು. ಹಾಡಿಯ ರಕ್ಷಣೆಗಳಾಗಿ ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸುತ್ತಿದ್ದರು.

ವಧುದಕ್ಷಿಣೆ ಪದ್ಧತಿ ಇತ್ತು
ಮೇದರು ಸಮುದಾಯದಲ್ಲಿ ಈ ಹಿಂದೆ ವಧುದಕ್ಷಿಣೆ ಪದ್ಧತಿ ಇತ್ತು. ಅಂದರೆ, ವರನ ಕಡೆಯವರು ವಧುವಿಗೆ ಕನ್ಯಾಶುಲ್ಕ ಕೊಟ್ಟು ಮದುವೆ ಮಾಡಿಕೊಳ್ಳಬೇಕಿತ್ತು. ವಿವಾಹ ಆಡಂಬರವಾಗಿರದೆ ಅತ್ಯಂತ ಸರಳವಾಗಿ ನೆರವೇರುತ್ತಿತ್ತು. ಧಾರೆಗೆ ಎರಡು ಗಂಟೆ ಮುಂಚಿತವಾಗಿ ನದಿ, ಕೆರೆ ಅಥವಾ ಬಾವಿಯಿಂದ ನೀರು ತಂದು ವಧು-ವರನಿಗೆ ಸ್ನಾನ ಮಾಡಿಸುವುದು ಇವರ ಮತ್ತೊಂದು ವಿಶೇಷ. ಮದುವೆ ಎಂದರೆ ಅದು ಇವರಲ್ಲಿ ಹಾಡುಪಾಡು ಮತ್ತು ಸೋಬಾನೆ ಪದಗಳಿಂದ ಕೂಡಿರುತ್ತದೆ. ಅದು, ಮನಸ್ಥಿತಿ ಮತ್ತು ಅಶೋತ್ತರಗಳನ್ನು ತಿಳಿಸುತ್ತದೆ ಎಂಬ ನಂಬಿಕೆ ಇದೆ.
ಮೇದರು ಸಮುದಾಯದವರು ಪೂಜಿಸುವ ಹಲವಾರು ದೇವರುಗಳಿವೆ. ಆದರೆ, ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋದಾಗ ಅಲ್ಲಿ ಸಿಗುವ ದೇವಾಲಯಗಳಿಗೆ ನಡೆದುಕೊಳ್ಳುತ್ತಾರೆ. ಅದೇ ದೇವರುಗಳನ್ನು ಭಕ್ತಿಯಿಂದ ಪೂಜಿಸುತ್ತಾರೆ. ಮಳವಳ್ಳಿ ಸುತ್ತುಮುತ್ತ ನೆಲೆಸಿರುವ ಮೇದರು ಮುತ್ತತ್ತಿರಾಯನ ಆರಾಧಕರಾದರೆ ಮೈಸೂರು ಭಾಗದವರು ಚಾಮುಂಡೇಶ್ವರಿಯನ್ನು ಪೂಜಿಸುತ್ತಾರೆ. ಲಕ್ಕವಳ್ಳಿ, ಆಜ್ಜಂಪುರ, ತರೀಕೆರೆ ಮತ್ತಿತರ ಕಡೆಗಳಲ್ಲಿ ಕೊಲ್ಲಾರಮ್ಮ, ಗುಳ್ಳಿಯಮ್ಮ, ಅಂತರಘಟ್ಟಮ್ಮನನ್ನು ಪೂಜಿಸುತ್ತಾರೆ.
ಇನ್ನು ಶಿವಶರಣರಾದ ಕೇತಯ್ಯ, ಆತನ ಮಗ ಲಿಂಗಯ್ಯ ಶಿವಪ್ರೇರಿತ ಬದುಕನ್ನು ಮಾದರಿಯಾಗಿಟ್ಟುಕೊಂಡಿದ್ದಾರೆ. ಮೇದರ ಚನ್ನಯ್ಯ, ಮೇದರ ತೋಡಯ್ಯ ಅವರುಗಳು ಬಸವಣ್ಣನ ಅನುಭವ ಮಂಟಪದಲ್ಲಿ ಆದ್ಯತೆ ಪಡೆದುಕೊಂಡಿದ್ದ ವಚನಕಾರರಾಗಿದ್ದರು. ಇವರೆಲ್ಲರ ಬದುಕು, ಪವಾಡ ಸಮುದಾಯದವರ ಪಾಲಿಗೆ ಸದಾ ಮಾರ್ಗದರ್ಶನವಾಗಿದೆ.

ಕೇತಯ್ಯ, ತೋಡಯ್ಯನ ಧ್ಯಾನ
ಕಾಡಿನಲ್ಲಿ ಬೊಂಬು ಮತ್ತು ಬಿದಿರು ಕಡಿಯುವಾಗ ಮೇದರು ಕೇತಯ್ಯ, ತೋಡಯ್ಯನ ಧ್ಯಾನ ಮಾಡುತ್ತಾರೆ. ಸರ್ಪಗಳು ಅಥವಾ ದುಷ್ಟ ಪ್ರಾಣಿಗಳಿಂದ ಅಪಾಯವಾಗಬಾರದು ಎಂದು ಪ್ರಾರ್ಥಿಸುತ್ತಾರೆ. ಇವರು ಹಬ್ಬ ಹರಿದಿನಗಳನ್ನು ಆಚರಿಸುವಾಗಲೂ ಭಿನ್ನತೆ ಕಾಪಾಡಿಕೊಳ್ಳುತ್ತಾರೆ. ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಹತ್ತಿ ಹಬ್ಬವನ್ನು ಮೇದರು ಸಡಗರ, ಸಂಭ್ರಮದಿಂದ ಆಚರಿಸುತ್ತಾರೆ. ಇದನ್ನು ಬಿದಿರು ಕಡಿಯುವ ಮುನ್ನ ಆಚರಿಸಲಾಗುತ್ತದೆ. ಇತರೆ ಬುಡಕಟ್ಟು ಸಮುದಾಯಗಳಂತೆ ಮೇದರು ಸಹ ಠಾಣೆ, ಕೋರ್ಟು ಮೆಟ್ಟಿಲು ಹತ್ತಿದವರಲ್ಲ. ಏನೇ ವ್ಯಾಜ್ಯ ಇದ್ದರೂ ಒಂದೆಡೆ ಕುಳಿತು ಬಗೆಹರಿಸಿಕೊಳ್ಳುತ್ತಿದ್ದರು. ಇದಕ್ಕಾಗಿ ಒಬ್ಬ ಮುಖಂಡನನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆ ಮುಖಂಡ ತಿಳಿವಳಿಕೆ ಇರುವವನನ್ನು ತನ್ನ ಸಹಾಯಕರನ್ನಾಗಿ ನೇಮಕ ಮಾಡಿಕೊಳ್ಳುತ್ತಿದ್ದ. ಕೌಟುಂಬಿಕ ಕಲಹ, ಕಳ್ಳತನ, ಅನೈತಿಕ ಸಂಬಂಧ, ಹೀಗೆ ಏನೋ ತಕರಾರು ಇದ್ದರೂ ಮುಖಂಡನ ಸಮ್ಮುಖದಲ್ಲೇ ಇತ್ಯರ್ಥವಾಗುತ್ತಿತ್ತು. ಆತ ನೀಡುವ ತೀರ್ಪಿಗೆ ಗೌರವ ಕೊಟ್ಟು ಎಲ್ಲರೂ ನಡೆದುಕೊಳ್ಳುತ್ತಿದ್ದರು.
ಬಿದಿರು ಮರಕ್ಕೆ 60 ವರ್ಷ ಆಯಸ್ಸು. ಬಳಿಕ ಮತ್ತೆ ಅದು ಚಿಗುರೆಡೆಯಬೇಕು. ಜೊತೆಗೆ ಈಗ ಕಾಡುಗಳ ಪ್ರವೇಶ ನಿರ್ಬಂಧಿಸಿರುವುದರಿಂದ ಮೇದರ ಸಮುದಾಯದವರಿಗೆ ಬಿದಿರು ಭಾರಿ ಪ್ರಮಾಣದಲ್ಲಿ ಸಿಗುತ್ತಿಲ್ಲ. ಡಿಪೋಗಳವರಿಂದ ಖರೀದಿಸಬೇಕು. ಅಥವಾ ನೆರೆ ರಾಜ್ಯಗಳಿಂದ ತರಿಸಿಕೊಳ್ಳಬೇಕು. ಹೆಚ್ಚಿನ ಹಣ ಕೊಟ್ಟು ಬಿದಿರು ಖರೀದಿ ಮಾಡುವುದು ಸಹ ಕಷ್ಟ ಎನ್ನುತ್ತಾರೆ ಸಮಾಜದ ಮುಖಂಡರಾದ ಬಾಬುರೆಡ್ಡಿ ಅವರು.  ಬಹುತೇಕ ಮಂದಿ ಈಗಲೂ ಕುಲಕಸುಬು ಮುಂದುವರಿಸಿದ್ದಾರೆ. ಅನೇಕರು ಕಷ್ಟ ಮತ್ತು ಲಾಭವಿಲ್ಲ ಎಂಬ ಕಾರಣಕ್ಕೆ ಕೈಬಿಟ್ಟು ಜೀವನೋಪಾಯಕ್ಕೆ ಬೇರೆ ಬೇರೆ ಮಾರ್ಗ ಹುಡುಕಿಕೊಂಡಿದ್ದಾರೆ. ಮಕ್ಕಳನ್ನು ಓದಿಸಿ ವಿದ್ಯಾವಂತರನ್ನಾಗಿ ಮಾಡುತ್ತಿದ್ದಾರೆ. ಕೆಲವರು ಇರುವ ಜಮೀನಿನಲ್ಲಿ ಬೇಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಬಿದಿರು ಚಿಗುರುವಾಗ ಬಿಡುವು
ಬಿದಿರು ಚಿಗುರವಾಗ ಮಾತ್ರ ಮೇದರ ಸಮುದಾಯದವರಿಗೆ ಬಿಡುವು. ಆ ಸಂದರ್ಭದಲ್ಲಿ ಅವರು ಮನರಂಜನೆಗೆ ಆದ್ಯತೆ ನೀಡುತ್ತಿದ್ದರು. ಆಟಪಾಠಗಳಲ್ಲಿ ಕಾಲ ಕಳೆಯುತ್ತಿದ್ದರು. ಕೋಲು ವರಸೆ, ಬೆಂಕಿ ಕೋಲಾಟ, ಇವರ ಪ್ರಮುಖ ಆಟಗಳು. ಆಡಿ ಪಂಡಿಗೆ ಹಬ್ಬವನ್ನು ಮೇದರು ವಿಶಿಷ್ಟವಾಗಿ ಆಚರಣೆ ಮಾಡುತ್ತಾರೆ. ಪ್ಲಾಸ್ಟಿಕ್ ಬಳಕೆ ಹೆಚ್ಚಾದ ಬಳಿಕ ಬಿದಿರಿಗೆ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ಸರ್ಕಾರ ಬಿದಿರು ಉತ್ಪನ್ನಗಳಿಗೆ ಬೇಡಿಕೆ ಸಿಗುವಂತೆ ಮಾಡಬೇಕು. ಇದಕ್ಕೆ ಸಂಶೋಧನೆ ನಡೆಯಬೇಕು. ಬಿದಿರು ತ್ಯಾಗದ ಸಂಕೇತ. ಅದರೊಂದಿಗೆ ಇರುವ ನಮ್ಮ ಬಾಂಧವ್ಯ ಅನನ್ಯವಾದದ್ದು ಎನ್ನುತ್ತಾರೆ ಸಮಾಜದ ಹಿರಿಯರು. ಮೇದರ ಸಮುದಾಯ ಕುರಿತು ವಾರ್ತಾ ಇಲಾಖೆ ಎಂ.ಎಸ್.ಮುತ್ತುರಾಜ್ ನಿರ್ದೇಶನದಲ್ಲಿ, ವಾರ್ತಾ ಇಲಾಖೆ ಅಧಿಕಾರಿ ಬಸವರಾಜು ಅವರ ಮಾರ್ಗದರ್ಶನದಲ್ಲಿ ಸಾಕ್ಷ್ಯಚಿತ್ರ ನಿರ್ಮಿಸಿದೆ.

- ಕೆ.ವಿ.ಪ್ರಭಾಕರ 
prabhukolar@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com