ಬೇಕಾದಾಗ ಕ್ಲೋಜಪ್ಪು, ಬ್ಯಾಡ ಅಂದ್ರೆ ಫುಲ್ ಪ್ಯಾಕಪ್ಪು

'ನಿಲೇಕಣಿ ಅಂದ್ರೆ ಯಾರ್ಲಾ, ಸಂತೆನಾಗೆ ಕಣಿಗಿಣಿ ಯೋಳ್ತರ ಹೆಂಗೆ?' ಅಂತ ಮೈಲಾರಿ..

'ನಿಲೇಕಣಿ ಅಂದ್ರೆ ಯಾರ್ಲಾ, ಸಂತೆನಾಗೆ ಕಣಿಗಿಣಿ ಯೋಳ್ತರ ಹೆಂಗೆ?' ಅಂತ ಮೈಲಾರಿ ಕೇಳ್ದ. 'ಕಣಿ ಯೋಳೋರಲ್ಲಲೇ ಬೇಕೂಪ, ನಮ್ಮೂರ್ನಾಗೆ ರೇಸನ್ ಚೀಟಿ ಥರ, ಅದ್ಯಾವ್ದೋ ಆಧಾರ್ ಚೀಟಿ ಅಂತ ಕೊಡಾಕಿಲ್ವಾ? ಅದುನ್ನ ನೋಡ್ಕತರಂತೆ.

ವತ್ತಾರೆ ವತ್ತಾರೆ ಮೈಲಾರಿ ಮೂಡ್ ಅಪ್ಸೆಟ್ ಮಾಡ್ಕಂಡು ಮನೆ ಮುಂದ್ಲಾಗಡೆ ಕೂತ್ಕಂಬುಟ್ಟಿದ್ದ. ಅಮಾಸೆ ತ್ವಾಟುಕ್ಕೆ ವೊಂಟಿದ್ದೋನು ಬಂದ.
'ಮೈಲಾರಿ, ಯಾಕ್ಲಾ ಮುಂಡೇದೆ, ಮಖ ಸಪ್ಗೆ ಮಾಡ್ಕಂಡು ಕೂತ್ಕಂಬುಟ್ಟಿದ್ದಿ. ತ್ವಾಟುಕ್ಕೆ ವೋಗಾಕಿಲ್ವಾ ? ಕಬ್ಬು ಕೀಳೋ ಕೆಲ್ಸ ಐತೆ ಅಂತ ಯೋಳ್ತಾಯಿದ್ದೆ' ಅಂದ ಅಮಾಸೆ.
'ಇಲ್ಲ ಕಣ್ಲಾ, ಯಾಕೋ ಮನ್ಸು ಕೆಟ್ಟೋಗದೆ. ಕೆಲ್ಸದ ಮ್ಯಾಲೆ ಇಂಟ್ರೆಸ್ಟೇ ಬತ್ತಾಯಿಲ್ಲ. ನೀನು ನಡಿ. ಆಮ್ಯಾಲೆ ಬತ್ತೀನಿ' ಅಂದ ಮೈಲಾರಿ. 'ಯಾಕ್ಲಾ, ಏನಾಯ್ತು? ಮೈನಾಗೆ ವುಸಾರಿಲ್ವಾ? ಮನ್ಯಾಗೆ ಏನರ ಕಿತಾಪತಿ ಮಾಡ್ದೆ ಏನ್ಲಾ? ಇದೇ ಆಗೋಯ್ತು ನಿಂದು ಯಾವಾರ' ಅಂತೇಳಿ ಅಮಾಸೆ ಬೋದ. 'ಇಲ್ಲಪ್ಪೋ, ಅಂಥದ್ದೇನೂ ಇಲ್ಲ. ವತ್ತಾರೆ ಎದ್ದು ನ್ಯೂಸ್ ಪೇಪ್ರು ನೋಡ್ದಾಗಿಂದ ತಲೆ ಕೆಟ್ಟೋಗದೆ' ಅಂತ ಮೈಲಾರಿ ಯೋಳ್ದ. 'ಏನ್ಲಾ ಇತ್ತು ಪೇಪ್ರಾಗೆ ಮೈಲಾರಿ ವೋಬುಟ್ಟ ಅಂತೇನರ ಬರ್ದವ್ರಾ ?' ಅಂದಅಮಾಸೆ. 'ಅದಲ್ಲಪ್ಪೋ, ಹಿಂದಿ ಪಿಚ್ಚರ್ರು ಹಿರೋ ರುತಿಕ್ ರೋಸನ್ ಪ್ಯಾಮಿಲಿನಾಗೆ ಎಡ್ವಟ್ಟು ಆಬುಟ್ಟದೆ. ಗಂಡ,ಹೆಂಡ್ರು ಡೈವೋರ್ಸು ಕೊಟ್ಕತರಂತೆ' ಅಂದ ಮೈಲಾರಿ.
'ವುಗಿಲಾ ಇವ್ನು ಮಖುಕ್ಕೆ. ಅಲ್ಲಲೇ, ಯಾರ್ದೋ ಪ್ಯಾಮಿಲಿ ಕಿತ್ತೋದ್ರೆ ನೀನ್ಯಾಕಲಾ ಕೊರಗ್ತಾಯಿದ್ದೀಯ ಬಡ್ಡೆತ್ತದೆ. ಅಲ್ಲಲೇ ಅವ್ರು ಸಿನ್ಮಾದೋರು, ಬೇಕಾದಾಗ ಆಕ್ಸನ್ ಅಂತರೆ, ಕ್ಲೋಜಪ್ ಆಯ್ತರೆ, ಬ್ಯಾಡ ಅಂದ್ರೆ ಕಟ್ ಅಂತರೆ, ಅವ್ರು ಲೈಫೂ ಸೂಟಿಂಗು ಥರ ಕಣ್ಲಾ. ಬ್ಯಾಸ್ರ ಆದ್ರೆ ಪ್ಯಾಕಪ್ಪು ಮಾಡ್ಕಂಡು ವೋಯ್ತಾಯಿರ್ತರೆ. ವೋಗ್ಲಾ ವೋಗಿ ಕೇಮೆ ನೋಡು' ಅಂದ ಅಮಾಸೆ.
'ಅದೂ ಸರೀನೆಯಾ. ಏನರ ಮಾಡ್ಕಂಡು ವೋಗ್ಲಿ ಬುಡಪ್ಪ ನಮ್ದೇ ಸಾವ್ರ ಅದೆ. ಇನ್ನ ವೂರ್ನೋರು ಇಸ್ಯ ನಮ್ಗೆ ಯಾಕ್ಲಾ ಬೇಕು ಅಮಾಸೆ. ಅಲ್ಲಲೇ, ಪಾರ್ಲಿಮೆಂಟು ಎಲೆಕ್ಸನ್ ಯಾವಾಗ, ಏನು, ಎತ್ತ ಅನ್ನೋದೆ ಗೊತ್ತಾಗಿಲ್ಲ. ಕೈ ಪಕ್ಸುದಾಗೆ ಅವಾಗ್ಲೆ ಟಿಕೆಟ್ಗೆ ಕಿತ್ಲಾಟ ಸುರು ಆಗೋಗದೆ. ಬೆಂಗಳೂರು ದಕ್ಸಿಣ ಕ್ಸೇತ್ರುಕ್ಕೆ ಯಾರ್ಲಾ ನಿಂತಾರು ಕೈ ಪಕ್ಸುದಿಂದ' ಅಂತ ಅಮಾಸೆ ಕೇಳ್ದ.
'ಅದ್ಯಾರೋ ನಿಲೇಕಣಿ ಅಂತೆ ಕಣ್ಲಾ. ಆವಯ್ಯ ನಾನು ನಿಲ್ಲಾಕಿಲ್ಲ ಅಂತ ಯೋಳ್ತಾ ಐತೆ. ಡಿಲ್ಲಿ ಲೀಡ್ರುಸು ನಿಂತ್ಕಳಿ ನಿಂತ್ಕಳಿ ಅಂತ ಕುತ್ಗೆ ಮ್ಯಾಲೆ ಕೂತವ್ರಂತೆ' ಅಂತೇಳ್ದ ಅಮಾಸೆ. 'ನಿಲೇಕಣಿ ಅಂದ್ರೆ ಯಾರ್ಲಾ, ಸಂತೆನಾಗೆ ಕಣಿಗಿಣಿ ಯೋಳ್ತರ ಹೆಂಗೆ ?' ಅಂತ ಮೈಲಾರಿ ಕೇಳ್ದ. 'ಕಣಿ ಯೋಳೋರಲ್ಲಲೇ ಬೇಕೂಪ, ನಮ್ಮೂರ್ನಾಗೆ ರೇಸನ್ ಚೀಟಿ ಥರ, ಅದ್ಯಾವ್ದೋ ಆಧಾರ್ ಚೀಟಿ ಅಂತ ಕೊಡಾಕಿಲ್ವಾ ? ಅದುನ್ನ ನೋಡ್ಕತರಂತೆ. ಅವ್ರುನ್ನ ಹೆಂಗಾರ ಮಾಡಿ ಎಲೆಕ್ಸನ್ಗೆ ನಿಲ್ಲಿಸ್ಬೇಕು ಅಂತೇಳಿ ಕೈ ಪಕ್ಸುದೋರು ವೊದ್ದಾಡ್ತಾವ್ರೆ' ಅಂದ ಅಮಾಸೆ.
'ಅದ್ಯಾಕಂತೆ, ಕೈ ಪಕ್ಸುದಾಗೆ ಜನ ಇಲ್ವಾ ನಿಂತ್ಕಳಕ್ಕೆ. ಥಿಂಕ್‌ಟ್ಯಾಂಕು ಪ್ರೊಫೆಸರ್ ಚಂದ್ರಣ್ಣ ಇರ್ಲಿಲ್ವಾ ? ಅವ್ರುನ್ನೇ ನಿಲ್ಸಾದು. ಜನ ಹಂಗೇ ಬಂದು ವೋಟು ವೊತ್ತಾಕಿ ವೊಂಟೋಯ್ತಾಯಿದ್ರು. ಕೈ ಪಕ್ಸುದೋರು ಮಾಡೋದೆಲ್ಲ ಇಂಥ ಯಡ್ವಟ್ಟು ಕೆಲ್ಸಗಳೇ ಬುಡಪ್ಪ' ಅಂದ ಮೈಲಾರಿ. 'ಅಲ್ಲಲೇ ಮೈಲಾರಿ, ಡಿಲ್ಲಿ ಅಶೆಂಬ್ಲಿ ಎಲೆಕ್ಸನ್ನಾಗೆ ಪೊರ್ಕೆ ಪಾರ್ಟಿನೋರು ಸ್ಯಾನೆ ಸೀಟು ತಕ್ಕಂಡವ್ರಂತೆ. ಅದೆಂಗೆ ?' ಅಂತ ಅಮಾಸೆ ಕೇಳ್ದ. 'ಗುಡ್ಸಿ ಗುಂಡಾಂತ್ರ ಮಾಡುದ್ರು ಅಂತ ಯೋಳಾಕಿಲ್ವಾ ? ಅದು ಹಿಂಗೇ ಕಣ್ಲಾ. ಕೈ ಪಕ್ಸುದೋರು ತಿಂದು ತಿಂದು ಗಲೀಜು ಮಾಡಾಕಿದ್ರು, ಪೊರ್ಕೆ ಪಾರ್ಟಿನೋರು ಕೈ ಪಕ್ಸುದೋರ್ನ ಗುಡ್ಸಾಕುದ್ರು ಅಷ್ಟೇಯ' ಅಂದ ಮೈಲಾರಿ.
'ಮಂಡ್ಯದಾಗೆ ತಿರ್ಗ ಗಲಾಟೆ ಸುರ್ವಾಗದೆ. ನಮ್ ರಮ್ಯಾ ಮೇಡಮ್ಮುಗೆ ಟಿಕೆಟ್ಟು ಬ್ಯಾಡ. ಕಿಸ್ನ ಸಾಹೇಬ್ರುಗೆ ಕೊಡಿ ಅಂತ ಲೀಡ್ರುಸು ಯೋಳ್ತಾವ್ರಂತೆ. ನೋಡ್ದಾ ಹೆಂಗದೆ ?' ಅಂತೇಳ್ದ ಅಮಾಸೆ.  'ರಮ್ಯಾ ಮೇಡಮ್ಮು ಎಲೆಕ್ಸನ್ನಾಗೆ ಗೆದ್ಮೇಕೆ ಪೋಸ್ಟರ್ರು ಹಚ್ಚಕ್ಕೆ, ಬ್ಯಾನರ್ರು ಕಟ್ಟಕ್ಕೆ ಲೀಡ್ರುಸುಗೆ ವುಡುಗ್ರು ಸಿಕ್ತಾಯಿಲ್ವಂತೆ. ಯಾವಾಗ ನೋಡಿದ್ರೂ ರಮ್ಯಾ ಮೇಡಮ್ಮು, ರಮ್ಯಾ ಮೇಡಮ್ಮು ಅಂತ ಹಿಂದಿಂದೆ ವೋಯ್ತಾಯಿರ್ತರಂತೆ. ವೂರ್ನಾಗೆ ಪಕ್ಸ ಕಟ್ದೋರು ನಾವು, ಈವಮ್ಮ ಈವಾಗ ಬಂದು ಸ್ಕೋಪು ತಕ್ಕತಾ ಐತೆ ಅಂತ ಲೀಡ್ರುಸುಗೆ ಕ್ವಾಪ ಬಂದೋಗದೆ. ಅದುಕ್ಕೆ ಅವಮ್ಮುಂಗೆ ಟಿಕೆಟ್ಟು ಬ್ಯಾಡ ಅಂತೇಳಿ ರಾಗ ತಗ್ದವ್ರೆ ಕಣ್ಲಾ' ಅಂತ ಮೈಲಾರಿ ಯೋಳ್ದ. 'ವೊಳ್ಳೇ ನಿನ್ಮಾದೋರು ಸಾವಾಸ ಆಯ್ತು ಕಣ್ಲಾ. ನಡೀ ತ್ವಾಟುಕ್ಕೆ ವೋಗಾವ' ಅಂತೇಳಿ ಅಮಾಸೆ ವೊಂಟ.

-ಕೆ.ವಿ.ಪ್ರಭಾಕರ್
prabhukolar@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com