ಅತ್ಲಾಗಿಂದ ಫೋನು ಬಂದ್ರೆ ಇತ್ಲಾಗಿಂದ ಬೆಂಕಿ ಬರುತ್ತಂತೆ

'ಲೇ ಅಮಾಸೆ, ಸಳಿ ಏನ್ಲಾ ಈ ಪಾಟಿ ಅದೆ. ಎರಡು ಕಂಬ್ಳಿ ವೊದ್ಕಂಡು ಬಿದ್ಕಂಡ್ರೂ...

'ಲೇ ಅಮಾಸೆ, ಸಳಿ ಏನ್ಲಾ ಈ ಪಾಟಿ ಅದೆ. ಎರಡು ಕಂಬ್ಳಿ ವೊದ್ಕಂಡು ಬಿದ್ಕಂಡ್ರೂ ವೋಗಂಗಿಲ್ಲ. ಅಲ್ಲಲೇ ಪಾರಿನ್ನಾಗೆ ಆ ಪಾಟಿ ಹಿಮ ಸುರೀತಾ ಇರ್ತದೆ. ಜನ ಅಲ್ಲಿ ಹೆಂಗಲಾ ಇದ್ದಾರು?' ಅಂತ ಮೈಲಾರಿ ವೋಟ್ಲಾಗೆ ಟೀ ವೊಡ್ಕಂಡು ಕೇಳ್ದ.
'ಪಾರಿನ್ನಾಗೆ ಮನೆವೊಳ್ಗೆ ವೊಲೆ ಮಡಿಕ್ಕಂಡಿರ್ತರೆ. ಪಿಚ್ಚೆರ್ನಾಗೆ ನೀನು ನೋಡಿಲ್ಲೇನು ? ಸಳಿ ಜಾಸ್ತಿ ಆಗೋದ್ರೆ ಆ ವೊಲೆ ಮೇಲೆ ಕೂತ್ಕಂಬುಡ್ತರೆ. ಬೆಚ್ಗೆ ಆಗೋಯ್ತದೆ ಅಷ್ಟೇಯ' ಅಂದ ಅಮಾಸೆ. 'ವೋಗಿ ವೋಗಿ ನಿನ್ನುನ್ನ ಕೇಳ್ದೆ ನೋಡು. ನನ್ ಎಕ್ಡ ತಕ್ಕಂಡು ನಾನೇ ವೊಡ್ಕಬೇಕು. ಅಲ್ಲಲೇ ವೊಂದು ವಾರ ನಾನು ವೂರ್ನಾಗೆ ಇರ್ಲಿಲ್ಲ. ನೆಂಟ್ರು ವೂರ್ಗೆ ವೋಗಿದ್ದೆ. ಏನೋ ಹೆಂಗಿದ್ದೀಯ? ಅಂತ ಕೇಳಿ ನಿಂಗೆ ಪತ್ರ ಬರುದ್ರೆ ಲೆಟ್ರು ಬಂದದೆ ಅಂತೇಳಿ ವೊಂದು ಲೈನ್ನಾಗೆ ಉತ್ರ ಕೊಡ್ತೀಯಲ್ಲೋ ಮಂಗ ನನ್ ಮಗ್ನೇ' ಅಂತೇಳಿ ಮೈಲಾರಿ ಬೋದ.
'ಯಾರೇ ಪತ್ರ ಬರುದ್ರೂ ವೊಂದೇ ಲೈನ್ನಾಗೆ ಉತ್ರ ಕೊಡ್ಬೇಕು ಅಂತೇಳಿ ಸಿಎಂ ಸಿದ್ರಾಮಣ್ಣ ಯೋಳವ್ರೆ. ಮಾಜಿ ಪ್ರಧಾನಿ ದ್ಯಾವೇಗೌಡ್ರು ಬಂಡ್ಲುಗಟ್ಲೆ ಕಾಗ್ದ ಬರುದ್ರೂ ಅವ್ರು ವೊಂದೇ ಲೈನಂತೆ ಉತ್ರ ಬರ್ದಾಕಿದ್ದು. ಅದುಕ್ಕೆ ಗೌಡ್ರುಗೆ ಬೇಜಾರು ಬಂದೋಗಿ ನಾನು ಇನ್ಮೇಕೆ ಸಿಎಂಗೆ ಪತ್ರ ಬರ್ಯಾಕಿಲ್ಲ ಅಂತ ಡಿಸೈಡು ಮಾಡಿ ಯೋಳ್ಬುಟ್ಟವ್ರೆ ಕಣ್ಲಾ' ಅಂದ ಅಮಾಸೆ. 'ಅಲ್ಲಲೇ, ಪತ್ರ ಬರ್ದು ಯಾಕೆ ಕೈ ನೋಯಿಸ್ಕಬೇಕು. ಫೋನದೆ, ಸಿದ್ರಾಮಣ್ಣ ಹಿಂಗಲ್ಲ ಹಿಂಗೆ ಅಂತ ಯೋಳಿದ್ರೆ ಆಯ್ತಪ್ಪ. ಅದೂ ಬ್ಯಾಡ, ಮೊಬೈಲ್ ಫೋನ್ನಾಗೆ ವೊಂದು ಮೆಸೇಜು ಮಾಡ್ಬುಟ್ರೆ ಕೆಲ್ಸ ಮುಗ್ದೋತದೆ. ಈ ಕಾಲ್ದಾಗೆ ಯಾರ್ಲಾ ವುದ್ದುದ್ದ ಪತ್ರ ಬರ್ಕಂಡು ಕೂತಾರು, ಪೇಪ್ರು ವೇಸ್ಟು, ಟೈಮೂ ವೇಸ್ಟು ಅಂದ ಅಮಾಸೆ. ಈಕಿತ ಬೆಂಗ್ಳೂರ್ಗೆ ವೋದಾಗ ಗೌಡ್ರುಗೆ ಈ ವಿಚಾರ ಯೋಳ್ತೀನಪ್ಪ' ಅಂದ ಮೈಲಾರಿ.
'ಸಂದಾಕಿ ಯೋಳ್ದೆ ಬುಡು, ಗೌಡ್ರು ಪೋನಾಕುದ್ರೆ ಸಿದ್ರಾಮಣ್ಣ ಕಿವಿನಾಗೆ ಮಡಿಕ್ಕಂಡು ಹಲೋ ಹಲೋ ಅಂತಾರೇನ್ಲ. ಆ ಕಡ್ಯಾಗಿಂದ ಗೌಡ್ರು ಪೋನು ಬಂದದೆ ಅಂತಾಯಿದ್ದಂಗೆ ಸಿಎಂ ಕಿವಿನಾಗೆ ಈ ಕಡ್ಯಾಗಿಂದ ಬೆಂಕಿ ಬಂದೋಯ್ತದೆ ಅಷ್ಟೇಯ. ವೋಗ್ಲಿ ಬುಡಪ್ಪ ದೊಡ್ಡೋರು ವಿಚಾರ ನಮ್ಗೆ ಯಾಕ್ಲಾ ಬೇಕು ? ನಮ್ ಗೌರ್ನರ್ರು ತಣ್ಗೆ ಆದಂಗೆ ಕಾಣ್ತದೆ. ಸರ್ಕಾರ ಅಂದ್ರೆ ಸಾಕು ಫೈರ್ ಇಂಜಿನ್ ಥರ ಬೆಂಕಿ ಬುಡ್ತಾಯಿದ್ರು. ಇದ್ಕಿದ್ದಂಗೆ ನೋಡಪ್ಪ ಸರ್ಕಾರ ಸಂದಾಗಿ ನಡುಸ್ತಾವ್ರೆ. ಸಿದ್ರಾಮಣ್ಣ ಪಸಂದಾಗಿ ಆಡಳ್ತ ಮಾಡ್ತಾವ್ರೆ ಅಂತೇಳಿ ಗೌರ್ನರ್ರು ಸರ್ಟಿಪಿಕೇಟು ಕೊಟ್ಟವ್ರೆ. ಅದೆಂಗೆ ಚೇಂಜು ಆಬುಟ್ರು ಅಂತೀನಿ' ಅಂದ ಅಮಾಸೆ.
'ಮೊನ್ನೆ ಕೈ ಪಕ್ಸದ ಲೀಡ್ರು ಡಿಗ್ಗಿ ಮಹಾರಾಜ ಅದೇ ಕಣ್ಲಾ ದಿಗ್ವಿಜಯಸಿಂಗು ಬೆಂಗ್ಳೂರ್ಗೆ ಬಂದಿದ್ರಂತೆ. ಹಂಗೇ ರಾಜಭವನುಕ್ಕೆ ವೋಬುಟ್ಟು ಗೌರ್ನರ್ರು ಸಾಹೇಬ್ರುತವ ಮಾತಾಡ್ಕಂಡು ವೋದ್ರಂತೆ. ಆದಾದ್ಮೇಕೆ ರಾಜಭವನದ ಹುಲಿ ತಣ್ಗೆ ಆಬುಟ್ಟದಂತೆ' ಅಂದ ಮೈಲಾರಿ. 'ಅದೇನ್ಲಾ ಯೋಳಿದ್ದಾರು ಸಿಂಗು ಗೌರ್ನರ್ರುಗೆ ಅಂತೇಳಿ ಅಮಾಸೆ ಕೇಳ್ದ. ಕಮ್ಲ ಪಕ್ಸುದೋರು ಸರ್ಕಾರ ಇದ್ದಾಗ ದಿನಾ ಬೈತಾಯಿದ್ರಿ. ಅದು ಸರಿ. ಈವಾಗ ಬಂದಿರಾದು ಕೈ ಪಕ್ಸುದ್ದು ಸ್ವಾಮಿ. ನೀವೇ ಬೆಳ್ಗೆ ಎದ್ದು ಸರ್ಕಾರ ಹಂಗೆ ಹಿಂಗೆ ಅಂತ ಸುಪ್ರಭಾತ ಹಾಡ್ಕಂಡು ಕೂತ್ಕಂಡ್ರೆ ಸರಿ ವೋಯ್ತದಾ ? ಅಂದ್ರಂತೆ. ಅದುಕ್ಕೆ ಗೌರ್ನರ್ರು, ಕಮ್ಲ ಪಕ್ಸದ ಸರ್ಕಾರಾನ ಬೈದು ಬೈದು ಅಭ್ಯಾಸ ಆಗೋಗಿತ್ತು. ಅದುಕ್ಕೆ ಸರ್ಕಾರ ಅಂದ್ರೆ ಸಾಕು ಬೈಯ್ಯಂಗೆ ಆಬುಟ್ಟದೆ. ಐಯಾಮ್ ವೆರಿ ಸಾರಿ, ಇನ್ಮೇಕೆ ಸರ್ಕಾರನಾ ಹೊಗಳೋದು ಹೆಂಗೆ ಅಂತ ಈವತ್ತೇ ಪ್ರಾಕ್ಟೀಸು ಮಾಡ್ಕತೀನಿ. ನೋಡ್ತಾಯಿರಿ, ನಾಳೆಯಿಂದ ಹೆಂಗೆ ಯೋಳ್ತೀನಿ ಅಂದ್ರಂತೆ. ಅದ್ರುದ್ದು ಎಫೆಕ್ಟು ಈವಾಗ ಕಾಣುಸ್ತಾ ಐತೆ ನೋಡ್ಲಾ' ಅಂತೇಳ್ದ ಮೈಲಾರಿ.
'ಮೈಲಾರಿ ಕೈ ಪಕ್ಸದ ಟೈಗರ್ರು ಕಾಣ್ತಾಯಿಲ್ವಲ್ಲ?' ಅಂದ ಅಮಾಸೆ. 'ಯಾರ್ಲಾ ಅದು ಟೈಗರ್ರು?' ಅಂತ ಕೇಳ್ದ ಮೈಲಾರಿ. 'ನಮ್ ಸಿವಕುಮಾರು ಮುಂಡೇದೆ. ಅಷ್ಟೂ ತಿಳ್ಯಾಕಿಲ್ವಾ?' ಎಂದ ಅಮಾಸೆ. ಮೊನ್ನೆ ಪೋನಾಕಿದ್ದೆ, ಡೆಲ್ಲಿನಾಗವ್ರೆ ಅಂದ್ರಪ್ಪ' ಅಂತ ಯೋಳ್ದ ಮೈಲಾರಿ. 'ಮಂತ್ರಿ ಆಗಕ್ಕೆ ಪುಲ್ ಟ್ರೈ ಮಾಡ್ತಾವ್ರೆ ಕಣ್ಲಾ ಸಿವಕುಮಾರು, ಮಗಂದು ಆಯ್ತಾಯಿಲ್ಲ. ಆದ್ಯಾರೋ ಹಿರೇಮಠು ಅನ್ನೋರು ತಡೆ ಹಾಕ್ಸವ್ರಂತೆ' ಅಂದ ಅಮಾಸೆ. 'ಅಷ್ಟೇ ತಾನೆ, ನಮ್ ದ್ಯಾವೇಗೌಡ್ರು ಸನ್ನು ರೇವಣ್ಣೋರ್ನ ಕೇಳುದ್ರೆ ಸಾಕು, ಯಾವ್ ದೇವುಸ್ಥಾನ್ದಾಗೆ ತಡೆ ವೊಡೀತರೆ ಅಂತ ಪುಲ್ ಡೀಟೇಲು ಕೊಡ್ತರೆ. ಅದುಕ್ಕೆ ಯಾಕೆ ತಲೆ ಕೆಡಿಸ್ಕಾಬೇಕು ನಡಿ ನಡಿ' ಅಂತೇಳಿ ಮೈಲಾರಿ ವೊಂಟ.

- ಕೆ.ವಿ.ಪ್ರಭಾಕರ್
prabhukolar@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com