
ನಾಲ್ಕು ರಾಜ್ಯಗಳ ಅಸೆಂಬ್ಲಿ ಚುನಾವಣೆಯಲ್ಲಿ ಮಕಾಡೆ ಮಲಗಿದ ನಂತರ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಸಾರ್ವಜನಿಕವಾಗಿ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ, ಹೆಚ್ಚೆಚ್ಚು ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಹಿತದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯೇ. ಇಷ್ಟು ವರ್ಷ ಭ್ರಷ್ಟಾಚಾರದ ಬಗ್ಗೆ, ಅದರ ನಿಗ್ರಹದ ಬಗ್ಗೆ ಬಾಯೇ ಬಿಡದಿದ್ದ ರಾಹುಲ್ ಈಗ ಅದರ ಬಗ್ಗೆಯೇ ಹೆಚ್ಚು ಮಾತನಾಡುತ್ತಿದ್ದಾರೆ. ರಾಜ್ಯಸಭೆಯಲ್ಲಿ ಲೋಕಪಾಲ ಮಸೂದೆ ಜಾರಿಗೆ ಮೊದಲು ಮತ್ತು ನಂತರ ನಾನಾ ವೇದಿಕೆಗಳಲ್ಲಿ ಕಾಣಿಸಿಕೊಂಡ ರಾಹುಲ್ ಭ್ರಷ್ಟಾಚಾರದ ಬಗ್ಗೆ ಹೇಳಿದ್ದು.
'ಇಂದು ದೇಶವನ್ನು ಕಾಡುತ್ತಿರುವ ಅತಿ ದೊಡ್ಡ ಪಿಡುಗೆಂದರೆ ಅದು ಭ್ರಷ್ಟಾಚಾರ. ಈ ಅನಾಚಾರ ದೇಶದ ನೆತ್ತರನ್ನೇ ಹೀರುತ್ತಿದೆ. ಇದರ ವಿರುದ್ಧ ನಾವು ಸಂಘಟಿತರಾಗಿ ಹೋರಾಡದಿದ್ದರೆ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ. ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಕಾಂಗ್ರೆಸ್ ಬದ್ಧವಾಗಿದೆ. ಇದಕ್ಕಾಗಿ ಹಲವಾರು ಕಾನೂನುಗಳನ್ನು ಜಾರಿಗೆ ತರಲು ಮುಂದಾಗಿದೆ. 2005ರಲ್ಲಿ ಜಾರಿಗೆ ಬಂದ ಮಾಹಿತಿ ಹಕ್ಕು ಕಾಯಿದೆ ಈ ನಿಟ್ಟಿನಲ್ಲಿ ಮೊದಲ ಮತ್ತು ಪ್ರಬಲ ಹೆಜ್ಜೆ. ಈಗ ಲೋಕಪಾಲ ಕಾಯಿದೆ ಜಾರಿಯಿಂದ ಈ ಹೋರಾಟಕ್ಕೆ ಮತ್ತಷ್ಟು ಬಲ ಬರಲಿದೆ. ಭ್ರಷ್ಟಾಚಾರದ ವಿರುದ್ಧ ಸಮರಕ್ಕೆ ಒಂದು ವ್ಯೂಹಾತ್ಮಕ ಕಾನೂನ ಸರಪಳಿಯನ್ನೇ ಕಟ್ಟಬೇಕು. ಕೇವಲ ಈ ಎರಡು ಕಾಯಿದೆಗಳಿಂದ ಅದು ಸಾಧ್ಯವಿಲ್ಲ. ಅದಕ್ಕೆಂದೇ ಸರ್ಕಾರ ಪರಿಷ್ಕೃತ ಭ್ರಷ್ಟಾಚಾರ ತಡೆ ಕಾಯಿದೆ, ನಾಗರಿಕ ಹಕ್ಕು, ಸಾರ್ವಜನಿಕ ಕುಂದು ಕೊರತೆ ನಿವಾರಣಾ ಕಾಯಿದೆ ಹಾಗೂ ಪಾರದರ್ಶಕ ಖರೀದಿ ಕಾಯಿದೆಗಳನ್ನು ಜಾರಿಗೆ ತರಬೇಕಿದೆ. ಆಗಷ್ಟೇ ಭ್ರಷ್ಟಾಚಾರವನ್ನು ಅಂಕೆಗೆ ತರಲು ಸಾಧ್ಯ. ಸಂಸತ್ತಿನಲ್ಲಿ ಈಗಷ್ಟೇ ಲೋಕಪಾಲ ಮಸೂದೆಗೆ ಅಂಗೀಕಾರ ದೊರಕಿದೆ. ಇದರ ಜೊತೆಗೇ ಉಳಿದ ಮೂರು ಮಸೂದೆಗಳನ್ನು ಕಾಯಿದೆಯಾಗಿಸಲು ಸಂಸತ್ತು ಮುಂದಾಗಬೇಕು. ಅದಕ್ಕಾಗಿ ಅಗತ್ಯ ಬಿದ್ದರೆ ಚಳಿಗಾಲದ ಅಧಿವೇಶನದ ಅವಧಿಯನ್ನು ವಿಸ್ತರಿಸಬೇಕು ಎಂದು ಮನವಿ ಮಾಡುತ್ತೇನೆ.' ವಿಪರ್ಯಾಸ ಎಂದರೆ ತನ್ನದೇ ಸಂಸದರು ಸರ್ಕಾರದ ವಿರುದ್ಧ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿ, ಊರುಗೋಲು ಪಕ್ಷಗಳ ಗೊಂದಲಗಳ ನಡುವೆ ಅಲ್ಪಮತಕ್ಕಿಳಿದಿದ್ದ ಸರ್ಕಾರ ಲೋಕಸಭೆಯನ್ನು ಎದುರಿಸಲಾಗದೆ ರಾಹುಲ್ ಈ ಮಾತುಗಳನ್ನು ಹೇಳಿದ ಕೆಲವೇ ಕ್ಷಣಗಳಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿತು. ರಾಹುಲ್ ಮಾತಿಗೆ ಅವರದೇ ಸರ್ಕಾರ ನೀಡಿದ ಬೆಲೆ ಇದು. ಇನ್ನು ರಾಹುಲ್ ಭ್ರಷ್ಟಾಚಾರದ ವಿರುದ್ಧ ಪುಂಖಾನುಪುಂಖವಾಗಿ ಮಾತನಾಡಿದ ಬೆನ್ನಲ್ಲಿಯೇ ಮಹಾರಾಷ್ಟ್ರದಲ್ಲಿ ಅದೇ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ತೆಗೆದುಕೊಂಡ ನಿರ್ಧಾರ ರಾಹುಲ್ ಆಶಯವನ್ನೇ ಬುಡಮೇಲಾಗಿಸಿತು.
ಆದರ್ಶ ಹಗರಣ ಯಾವುದೇ ಅಕ್ರಮ, ಹಗರಣ ಆದರ್ಶವಾಗಲು ಸಾಧ್ಯವಿಲ್ಲ. ಆದರೆ, ಕೊಳೆತು ನಾರುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಇಂಥದೊಂದು ಹಗರಣ ರಾಜಕೀಯ ಅನುಕೂಲ ಸಿಂಧುತ್ವಕ್ಕೆ ಆದರ್ಶವೇ ಸರಿ. ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರಯೋಧರ ವಿಧವೆಯರಿಗೆ ನೀಡುವ ನೆಪ ಮಾತ್ರದ ಭರವಸೆಯೊಂದಿಗೆ ಹುಟ್ಟಿಕೊಂಡ ಆದರ್ಶ ಹೌಸಿಂಗ್ ಸೊಸೈಟಿಯ ಕರ್ಮಕಾಂಡದ ಹೂರಣಕ್ಕಿಳಿಯುವ ಮುನ್ನ ಈ ಹಗರಣದ ತನಿಖೆ ಮಾಡಿದ ನ್ಯಾಯಮೂರ್ತಿ (ನಿವೃತ್ತ) ಜೆ.ಎ. ಪಾಟೀಲ್ ವರದಿಯಲ್ಲಿ ಉಲ್ಲೇಖಿಸಿದ ಮಾತುಗಳು ಗಮನಾರ್ಹ. 'ಆದರ್ಶ ಎಂಬುದು ಯಾವುದೇ ಉದಾತ್ತ ಸಹಕಾರ ಚಿಂತನೆಯ ಯೋಜನೆಯಲ್ಲ. ಬದಲಿಗೆ ದತ್ತ ಅಧಿಕಾರದ ದುರ್ಬಳಕೆ, ನಿಯಮಗಳ ಉಲ್ಲಂಘನೆಯ ನಾಚಿಕೆಗೇಡಿನ ಪ್ರಹಸನ. ದುರಾಸೆ, ಸ್ವಜನ ಪಕ್ಷಪಾತ, ನನಗೆ-ನನ್ನವರಿಗೆ ಎಂಬ ಹಪಾಹಪಿತನದ ಪರಮಾವಧಿ ಇದು.' ಈ ಹಗರಣದ ಹಿಂದಿದ್ದ ರಾಜಕಾರಣಿ-ಅಧಿಕಾರ ಶಾಹಿಯನ್ನು ಬಣ್ಣಿಸಲು ನ್ಯಾಯಮೂರ್ತಿ ಪಾಟೀಲ್ ಅವರು ಟಾಲ್‌ಸ್ಟಾಯ್ ಬರೆದ 'ಏ್ಟಢಿ ಝ್ಡ್ಛ ಟಛಟಿಜ ಜ್ಟಜಡ ಛ ಟಛಟಿ ಟಿಜಜಜ?' (ಮನುಷ್ಯನಿಗೆ ಎಷ್ಟು ಭೂಮಿ ಬೇಕು) ಎಂಬ ಕಥೆಯನ್ನು ಉದಾಹರಿಸಿದ್ದಾರೆ. 'ರಷ್ಯಾದಲ್ಲೊಬ್ಬ ಬಡ ರೈತ. ತನ್ನ ಬಳಿ ಇರುವ ಕೃಷಿಭೂಮಿ ತನಗೆ ಏನೇನೂ ಸಾಲದು ಎಂಬುದು ಸದಾ ಆತನ ಕೊರಗು. ಆತನ ಮುಂದೆ ಒಬ್ಬ ಒಂದು ಆಮಿಷ ಒಡ್ಡಿದ. ಅದೆಂದರೆ ಬೆಳಗ್ಗಿನಿಂದ ಸಂಜೆವರೆಗೆ ಅವನು ಎಷ್ಟು ಸುತ್ತು ನಡೆಯಬಹುದೋ ಅಷ್ಟೂ ಭೂಮಿಯನ್ನು ಕೇವಲ 1 ಸಾವಿರ ರೂಬಲ್‌ಗಳಿಗೆ (ರಷ್ಯಾದ ಕರೆನ್ಸಿ) ಖರೀದಿಸಬಹುದು ಎಂದು. ಆ ರೈತನ ಕಣ್ಣರಳಿತು. ಕೂಡಲೇ ಒಪ್ಪಿದ. ಹತ್ತಳ್ಳಿಯಲ್ಲಿ ಯಾರ ಬಳಿಯೂ ಇರದಷ್ಟು ಭೂಮಿಗೆ ತಾನು ಒಡೆಯನಾಗಬೇಕು ಎಂದು ಕನವರಿಸಿದ. ಅದಕ್ಕಾಗಿ ಹಪಹಪಿಸಿದ. ಬೆಳಗಾಗುತ್ತಲೇ ಓಡಲು ಆರಂಭಿಸಿದ. ಎಡಬಿಡದೆ ಸುತ್ತು ಹಾಕಿದ. ಆ ಸುತ್ತು ದೊಡ್ಡದಾಗುತ್ತಲೇ ಹೋಯಿತು. ಜೊತೆಗೆ ಸುಸ್ತೂ ಹೊಡೆಸಿತು. ಆದರೂ ಆತ ನಿಲ್ಲಲಿಲ್ಲ. ವಿರಮಿಸಲಿಲ್ಲ. ದಣಿವಾರಿಸಿಕೊಳ್ಳಲೂ ಸಮಯ ನೀಡದೆ ನಡೆದೇ ನಡೆದ, ಓಡಿಯೇ ಓಡಿದ. ವಿಶಾಲವಾದ ಭೂಮಿ ಆತನ ಕಾಲಳತೆಗೆ ಬಂಧಿಯಾಯಿತು. ಆದರೂ ಆತನ ವಾಂಛೆ ಕರಗಲಿಲ್ಲ. ದಣಿವನ್ನು ದುರಾಸೆ ನುಂಗಿತ್ತು. ಗಾವುದಗಳ ದೂರ ಕ್ರಮಿಸಿದ. ಸಂಜೆ ಕವಿಯಲಾರಂಭಿಸಿತು. ಆತ ಮತ್ತೆ ಎಲ್ಲಿಂದ ಆರಂಭಿಸಿದನೋ ಅಲ್ಲಿಗೆ ವಾಪಸಾಗಬೇಕಿತ್ತು. ಕಾಲುಗಳು ಕುಂದಿದವು. ಆಯಾಸ ಶ್ವಾಸಕ್ಕೆ ಕುಂದು ತಂದಿತ್ತು. ಗುರಿ ಮುಟ್ಟುವ ವೇಳೆಗೆ ಆತನ ಚೈತನ್ಯವೇ ನಿಸ್ತೇಜಗೊಂಡಿತ್ತು. ದುರಾಸೆಯ ಫಲವೇ ನಂಜು ಆತನ ದೇಹವನ್ನು ಶಾಶ್ವತವಾಗಿ ತಣ್ಣಗಾಗಿಸಿತ್ತು. ಆತ ಸತ್ತು ಬಿದ್ದ ಜಾಗದಲ್ಲಿ ಆತನ ಸೇವಕ ಗುಣಿ ತೆಗೆದು ಆತನನ್ನು ಹೂಳಿದ. ಕೇವಲ ಆರಡಿ ಜಾಗದಲ್ಲಿ ಆತನ ದೇಹ ಅಡಕವಾಯಿತು. ಆದರ್ಶ ಹಗರಣದಲ್ಲಿ ಭಾಗಿಯಾದ ಜನ ತೋರಿಸಿದ ದುರಾಸೆಯೂ ಇಂತಹುದೆ. ಇಲ್ಲಿ ಕೆಲವರು ತಮಗೆ ಸಿಕ್ಕ ಒಂದು ಫ್ಲ್ಯಾಟ್‌ನಿಂದ ತೃಪ್ತರಾಗದೆ, ತಮ್ಮವರಿಗೂ ಒಂದೆರಡಿರಲಿ ಎಂದು ಖರೀದಿಸಿದರು. ಅದಕ್ಕಾಗಿ ಬೇನಾಮಿ ವ್ಯವಹಾರ ಮಾಡಿದರು. ಆದರ್ಶ ಎಂಬ ಪದ ಸಂಸ್ಕೃತದಿಂದ ದತ್ತವಾದದ್ದು. ಅಲ್ಲಿ ಅದರ ಅರ್ಥ (ದರ್ಶೌತೆ ಇತಿ ಆದರ್ಶ) ಪ್ರತಿಬಿಂಬ ಎಂದು. ಆದರೆ ಈ ಆದರ್ಶ (ಹಗರಣ)ದ ಪ್ರತಿಬಿಂಬ ಎಂದರೆ ಅಧಿಕಾರಸ್ಥರ ತೀರದ ದುರಾಸೆ'. ಇವು ನ್ಯಾಯಮೂರ್ತಿ ಪಾಟೀಲರ ಕಟು ಟೀಕೆ. ನಾಚಿಕೆ ಇರುವ ಯಾರೇ ಆದರೂ ಈ ಟೀಕೆಗಳಿಂದ ಕುಗ್ಗಿ ಹೋಗಬೇಕಿತ್ತು. ಇಷ್ಟಕ್ಕೂ ಈ ಇಡೀ ದಂಧೆಯ ಹಿಂದೆ ಇದ್ದದ್ದು ಅಂದಿನ ಮುಖ್ಯಮಂತ್ರಿ, ಕಾಂಗ್ರೆಸ್‌ನ ಅಶೋಕ್ ಚವಾಣ್.
ಆದರ್ಶದ ವಿಷಯವಾಗಿ ಚವಾಣ್ ತೆಗೆದುಕೊಂಡ ಆತುರದ ನಿರ್ಧಾರಗಳು, ನಿಯಮಗಳನ್ನು ಗಾಳಿಗೆ ತೂರಿ ನೀಡಿದ ಅನುಮೋದನೆಗಳು ಹಾಗೂ ಅದಕ್ಕೆ ಪ್ರತಿಫಲವಾಗಿ ತಮ್ಮ ಅತ್ತೆ, ಶಡ್ಡಕನಿಗೆ ಫ್ಲ್ಯಾಟ್‌ಗಳನ್ನು ಪಡೆದದ್ದನ್ನು ವರದಿ ಉಲ್ಲೇಖಿಸಿ ಅವರ ವಿರುದ್ಧ ಕಟುಟೀಕೆ ಮಾಡಿದೆ. ಅಷ್ಟೇ ಅಲ್ಲದೆ ಈಗಿನ ಕೇಂದ್ರದ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹಣಕಾಸು ಇಲಾಖೆಯ ಆಕ್ಷೇಪಗಳನ್ನು ಬದಿಗೊತ್ತಿ, ಆದರ್ಶ ಗೃಹ ನಿರ್ಮಾಣ ಸಂಘಕ್ಕೆ ಭೂಮಿ ಮಂಜೂರು ಮಾಡಿದ ಕ್ರಮವನ್ನು ಸಮಿತಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಬೇಲಿಯೇ ಎದ್ದು ಹೊಲ ಮೇಯುವುದು ಎಂದರೆ ಇದೇ ಇರಬೇಕು. 2000ದ ಇಸವಿಯಲ್ಲಿ ಒಬ್ಬ ಯಕಶ್ಚಿತ್ ಉಪವಲಯಾಧಿಕಾರಿ, ಮುಂಬಯಿನ ಕೊಲಾಬಾ ಪ್ರದೇಶದಲ್ಲಿ ಸೇನಾ ಯೋಧರಿಗೆ ವಸತಿ ಸಮುಚ್ಚಯ ನಿರ್ಮಿಸಲು ಆದರ್ಶ ಗೃಹ ನಿರ್ಮಾಣ ಸಂಘಕ್ಕೆ ಜಮೀನು ಮಂಜೂರು ಮಾಡಬೇಕು ಎಂದು ನೇರವಾಗಿ ಮುಖ್ಯಮಂತ್ರಿಗೆ ಪತ್ರ ಬರೆಯುತ್ತಾನೆ. ರಾಜ್ಯವನ್ನಾಳುವ ಘನಕಾರ್ಯದಲ್ಲಿ ಮಗ್ನರಾಗಿದ್ದರೂ, ದಿನಂಪ್ರತಿ ಅದೆಷ್ಟೂ ಕಡತಗಳು ಬರುತ್ತಿದ್ದರೂ, ಈ ಪತ್ರ ತಕ್ಷಣ ಮುಖ್ಯಮಂತ್ರಿ ಕಣ್ಣಿಗೆ ಬಿದ್ದು ಕೂಡಲೇ ಅವರೂ ಕಾರ್ಯಪ್ರವೃತ್ತರಾಗುತ್ತಾರೆ. ನೋಡನೋಡುತ್ತಿದ್ದಂತೆಯೇ ನಾನಾ ಇಲಾಖೆಗಳ ಸರಳುಗಳನ್ನು ದಾಟಿ ಈ ಕಡತ ಜಮೀನು ಮಂಜೂರು ಮಾಡುವವರೆಗೆ ಮುಂದುವರಿಯುತ್ತದೆ. ಆದರೆ, ಉದ್ದೇಶಿತ ವಸತಿ ಸಮುಚ್ಛಯಕ್ಕೆಂದು ಗುರುತಾಗಿದ್ದ ಜಾಗ ಕರಾವಳಿ ಪ್ರತಿಬಂಧಕ ವಲಯದಲ್ಲಿದ್ದು, ಅದು ಅಲ್ಲಿ ನೌಕಾನೆಲೆ ಇರುವ ಹಿನ್ನೆಲೆಯಲ್ಲಿ ಎತ್ತರದ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಲು ನೌಕಾಪಡೆ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಆದರೆ ಸ್ವತಃ ಸೇನಾಧಿಕಾರಿಗಳು ಈ ಆಕ್ಷೇಪಕ್ಕೆ ಸೊಪ್ಪು ಹಾಕುವುದಿಲ್ಲ. ಇದಕ್ಕೆ ಕೇಂದ್ರ ಪರಿಸರ ಇಲಾಖೆಯ ಮಂಜೂರಾತಿಯೂ ಸಿಗುತ್ತದೆ. ಈ ಡೀಲ್‌ನಲ್ಲಿ ತೀರಾ ಅಗತ್ಯವಾದ ಮಂಜೂರಾತಿಗಳಿಗೆ ಸಹಿ ಹಾಕಿದ್ದರ ಪರಿಣಾಮ ಅಶೋಕ್ ಚವಾಣ್‌ಗೆ ಮೂರು ಅಪಾರ್ಟ್‌ಮೆಂಟ್ ಸಿಗುತ್ತದೆ. ಇದರ ಫಲಾನುಭವಿಗಳು ಸೀಮಾ ಶರ್ಮಾ (ಚವಾಣ್ ಪತ್ನಿಯ ಸೋದರನ ಪತ್ನಿ), ಮದನ್‌ಲಾಲ್ ಶರ್ಮಾ(ಚವಾಣ್ ಮಾವನ ಸೋದರ) ಹಾಗೂ ಭಗವತಿ ಶರ್ಮಾ (ಚವಾಣ್ ಅವರ ಅತ್ತೆ). ಈ ಕುರಿತು ಚವಾಣ್‌ರನ್ನು ಆಯೋಗ ವಿಚಾರಣೆಗೆ ಒಳಪಡಿಸಿದಾಗ ಅವರು ಹೇಳಿದ್ದು 'ಈ ಮೂವರು ಅಲ್ಲಿ ಅಪಾರ್ಟ್‌ಮೆಂಟ್‌ಗೆ ಅರ್ಜಿ ಹಾಕಿರುವ ವಿಷಯ ನನಗೆ ತಿಳಿದೇ ಇರಲಿಲ್ಲ' ಎಂದು!
ಅದೇ ಅಶೋಕ್ ಚವಾಣ್ ಈ ಹಗರಣದ ಕುರಿತು ಮುಂಬೈ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾದ ಬಳಿಕ ಮಾಡಿದ ಮೊದಲ ಕೆಲಸವೆಂದರೆ ಈ ಫ್ಲ್ಯಾಟ್‌ಗಳ ಖರೀದಿಗೆಂದು ತಮ್ಮ ಸಹವರ್ತಿಯಿಂದ ಪಡೆದಿದ್ದ 69 ಲಕ್ಷ ರು.ಗಳನ್ನು ಹಿಂತಿರುಗಿಸಿದ್ದು, ಈ ವಿಚಾರವನ್ನು ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಮುಂಬೈ ಹೈಕೋರ್ಟ್‌ನಲ್ಲಿ ದಾಖಲಿಸಿರುವ ಆರೋಪ ಪಟ್ಟಿಯಲ್ಲಿಯೇ ಹೇಳಿದೆ. ಇದು ಚವಾಣ್ ಮತ್ತು ಅವರಂಥವರ ಬಣ್ಣ ಬಯಲು ಮಾಡುತ್ತದೆ. ಇದೆಲ್ಲ ತಿಳಿದಿದ್ದೂ ಮಹಾರಾಷ್ಟ್ರ ಸರ್ಕಾರ ಮಾಡಿದ್ದೇನು? ಮೊನ್ನೆ ವಿಧಾನಸಭೆಯಲ್ಲಿ ವರದಿ ಮಂಡಿಸಿ ಅದರ ಮೇಲೆ ಕ್ರಮ ಕೈಗೊಳ್ಳುವ ಮಾತನ್ನಾಡುವ ಬದಲು ವರದಿಯನ್ನೇ ತಿರಸ್ಕರಿಸಿತು. ಇದಕ್ಕೆ ಚವಾಣ್ ವಿರುದ್ಧ ಕ್ರಮಕ್ಕೆ ರಾಜ್ಯಪಾಲ ಶಂಕರ್‌ನಾರಾಯಣ್ ಒಪ್ಪಿಗೆ ನೀಡಿಲ್ಲ ಎಂಬ ನೆಪ ಬೇರೆ. ಅಧಿಕಾರದ ದುರ್ಬಳಕೆ ಮತ್ತು ದರ್ಪದ ನಗ್ನ ಪ್ರದರ್ಶನಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ?
ಭ್ರಷ್ಟಾಚಾರದ ವಿರುದ್ಧದ ಹೋರಾಟ ಕಾಂಗ್ರೆಸ್‌ನಿಂದಷ್ಟೇ ಸಾಧ್ಯ. ಮಾಹಿತಿ ಹಕ್ಕು ಕಾಯಿದೆ, ಲೋಕಪಾಲ, ಮತ್ತೂ ಮಗದೊಂದು ಕಾಯಿದೆ ತರುತ್ತೇವೆ ಎಂದೆಲ್ಲ ಹೇಳುವ ರಾಹುಲ್ ಗಾಂಧಿ ಅವರಿಗೆ ಭ್ರಷ್ಟಾಚಾರಿಗಳಿಗೆ ತಮ್ಮದೇ ಪಕ್ಷದ ಸರ್ಕಾರ ನೀಡಿರುವ ಶ್ರೀರಕ್ಷೆ ಕಾಣುತ್ತಿಲ್ಲವೇ? ಭ್ರಷ್ಟಾಚಾರದ ವಿರುದ್ಧ ಹೋರಾಡುವ ಧ್ಯೇಯ ನಿಜವೇ ಆಗಿದ್ದರೆ ಮುಂಬೈ ರಾಜ್ಯಪಾಲರನ್ನು ಎತ್ತಂಗಡಿ ಮಾಡಿಸಿ ಅಶೋಕ್ ಚವಾಣ್ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುವವರನ್ನು ತಂದು ಕೂರಿಸುತ್ತಾರೆಯೇ? ಅಥವಾ ನ್ಯಾಯಾಂಗ ತನಿಖೆಯ ವರದಿ ಅಂಗೀಕರಿಸುವಂತೆ ಸಿಎಂ ಪೃಥ್ವಿರಾಜ್ ಚವಾಣ್‌ಗೆ ಸೂಚಿಸುತ್ತಾರೆಯೇ? ಬಹುಶಃ ಅಂತಹ ನಿರೀಕ್ಷೆಯೇ ದೊಡ್ಡ ಅಪರಾಧ. ಮೂರು ದಶಕಗಳ ಹಿಂದೆ ಆಗ ಕಾಂಗ್ರೆಸ್ ಚುಕ್ಕಾಣಿ ಹಿಡಿದಿದ್ದ ರಾಜೀವ್ ಗಾಂಧಿ ಮುಂಬೈಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಕಾಂಗ್ರೆಸ್‌ನಲ್ಲಿ ಹಾಸುಹೊಕ್ಕಾಗಿರುವ ಅನಾಚಾರ, ದುರ್ನಡತೆ, ದಲ್ಲಾಳಿ ಸಂಸ್ಕೃತಿಯ ವಿರುದ್ಧ ಕಿಡಿಕಾರಿದ್ದರು. ಆದರೆ ಎರಡೇ ವರ್ಷಗಳಲ್ಲಿ ಅವರ ತಲೆಗೇ ಅಕ್ರಮದ ಆರೋಪ ಸುತ್ತಿಕೊಂಡಿತ್ತು. ಈಗಲೂ ಅಷ್ಟೇ; ಕಾಂಗ್ರೆಸ್ ಎಂಬ ಆಲದ ಮರದ ಕೆಳಗೆ ರಾಶಿ ಬಿದ್ದಿರುವ ಹೊಲಸನ್ನು ಗುಡಿಸುವ ಕೆಲಸ ಆಗಬೇಕು. ಅದು ರಾಹುಲ್ ಗಾಂಧಿ ಅವರಿಂದಲೇ ಮೊದಲಾಗಬೇಕಿದೆ.
- ಕೆ.ಎಸ್. ಜಗನ್ನಾಥ್
jagannath.kudinoor@gmail.com
Advertisement