ರಂಜಿತಾ ಸನ್ಯಾಸಿ ಆದ್ರೇನು, ಸ್ವಾಮಿ ಆಗೋದ್ರೆ ಏನು?

'ನೋಡ್ದಾ ಎಂಥ ಕೆಲ್ಸ ಆಗೋಯ್ತು ಆಮಾಸೆ' ಅಂತೇಳಿ ಮೈಲಾರಿ ಕೈನಾಗೆ ಪೇಪ್ರು ...

'ನೋಡ್ದಾ ಎಂಥ ಕೆಲ್ಸ ಆಗೋಯ್ತು ಆಮಾಸೆ' ಅಂತೇಳಿ ಮೈಲಾರಿ ಕೈನಾಗೆ ಪೇಪ್ರು ಹಿಡ್ಕಂಡು ವೋಡೋಡಿ ಬಂದ. 'ಏನ್ಲಾ ಆಯ್ತು, ಲಾಟ್ರಿ ಏನರ ವೊಡೀತೇನ್ಲ ? ಹಿಂಗೆ ವೋಡೋಡಿ ಬತ್ತಾ ಇದ್ದೀಯ. ಸಮಾಧಾನ, ಸಮಾಧಾನ' ಅಂದ ಅಮಾಸೆ.
'ಎಲ್ಲಲಾ ಅದೆ ಸಮಾಧಾನ, ಪೇಪ್ರು ನೋಡ್ಲಾ ಇಲ್ಲಿ. ಆ ಪಿಚ್ಚರ್ರು ಆಕ್ಟರ್ರು ರಂಜಿತಾ ಸನ್ಯಾಸಿ ಆಬುಟ್ಟು ಮಠ ಸೇರ್ಕಂಬುಟ್ಟದಂತೆ' ಅಂದ ಮೈಲಾರಿ. 'ಲೇ ಅವಮ್ಮ ಸನ್ಯಾಸಿ ಆದ್ರೆ ಏನು ? ಸ್ವಾಮಿ ಆಗೋದ್ರೆ ನಿಂಗೇನಲ ? ನೀನ್ಯಾಕಲೇ ತಲೆಕೆಡಿಸ್ಕಂಬುಟ್ಟಿದ್ದೀಯ?' ಅಂತ ಅಮಾಸೆ ಬೈದ.
'ಮುಂಡೇದೆ, ಅದು ಹಂಗಲಲ್ಲೇ, ಆವಮ್ಮ ಇದ್ದಿದ್ದೇ ಬೆಡ್ ಸ್ವಾಮಿ ನಿತ್ಯಾನಂದನ ಮಠದಾಗೆ. ಅಲ್ಲೇ ತಾನೆ ಸ್ವಾಮ್ಗಳಿಂದ ಯೋಗ ಕಲೀತಾ ಇದ್ದಿದ್ದು. ಈವಾಗ ಸನ್ಯಾಸಿ ಆಗಿರೋದ್ರಾಗೆ ಏನದೆ ಪೆಸಲ್ಲು ? ಬಿಳಿ ಬಟ್ಟೆ ಬುಟ್ಟಾಕಿ ಕಾವಿ ಬಟ್ಟೆ ಹಾಕ್ಕತದೆ ಅಷ್ಟೇ ಅಲ್ವಾ ?' ಅಂದ ಮೈಲಾರಿ.
ಅಷ್ಟ್ರಾಗೆ ಮೈಲಾರಿ ಮಿಸ್ಸಸ್ಸು ಕೊಡ ಹೊತ್ಕಂಡು ಬಂತು. 'ನೋಡಣ್ಣ, ಈ ಮೂದೇವಿ ಮಾಡೋ ಕೆಲ್ಸ ಬುಟ್ಟು, ಯಾರೋ ಸನ್ಯಾಸಿ ಆಬುಟ್ರು ಅಂತೇಳಿ ತಲೆಮ್ಯಾಲೆ ಕೈ ವೊತ್ಕಂಡು ಕೂತದೆ. ಇದುನ್ನು ಕಟ್ಕಳೋ ಬದ್ಲು ಯಾವ್ದಾರ ಕಲ್ಲು ಕಟ್ಕಬೋದಾಗಿತ್ತು. ನಮ್ಮಪ್ಪ ಬಡ್ಕಂಡ, ಬ್ಯಾಡವ್ವ ಇವುನ್ನ ಮದ್ವೆ ಆಬೇಡ. ಗಿಣಿನ ತಕ್ಕಂಡೋಗಿ ಗಿಡುಗನ ಕೈನಾಗೆ ಮಡುಗ್ದಂಗೆ ಆಯ್ತದೆ ಅಂತ. ನಂಗೆ ಅದೇನು ಬಡ್ಕಂಡಿತ್ತೋ ಏನೋ, ತಲೆ ಬಗ್ಗಿಸ್ಕಂಡು ತಾಳಿ ಕಟ್ಟುಸ್ಕಂಬುಟ್ಟೆ' ಅಂತು ಮಿಸ್ಸಸ್ಸು.
'ಈವಾಗ ಏನಾಗದೆ ಅಂಥದ್ದು?' ಅಂದ ಮೈಲಾರಿ. 'ಏನಾಗಿಲ್ಲ ಅಂತ ಕೇಳು. ಆ ಸಾಸ್ಕರು ವರ್ಸುಕ್ಕೆ ಒಂದಪ ಹೆಂಡ್ರು ಮಕ್ಳುನ್ನ ಕರ್ಕಂಡು ಪಾರಿನ್ನು ಟೂರು ವೋಯ್ತರಂತೆ. ಈ ಮೂದೇವಿ ಮದ್ವೆ ಆದಾಗಿಂದ ವೂರಿಂದ ಆಚ್ಗೇ ಕರ್ಕಂಡೋಗಿಲ್ಲಟ'.
'ಮೂದೇವಿ, ಯಾವ್ದಾರ ಎಲೆಕ್ಸನ್ಗೆ ನಿಂತ್ಕ, ಸಾಸ್ಕ ಆಗು, ನನ್ನುನ್ನ ಪಾರಿನ್ ಟೂರ್ಗೆ ಕರ್ಕಂಡೋಗು ಅಂತ ಬಡ್ಕತಾಯಿದ್ದೀನಿ. ಸಾಸ್ಕ ಆಗೋದು ಬ್ಯಾಡ, ಈ ಮೂತಿಗೆ ಪಂಚಾಯ್ತಿ ಮೆಂಬ್ರೂ ಆಗಿಲ್ಲ. ಎಲ್ಲ ಬುಟ್ಟು, ವೂರ್ನಾಗಿರೋ ಯಾವಾರುಕ್ಕೆಲ್ಲ ತಲೆ ಹಾಕಕ್ಕೆ ವೋಯ್ತದೆ. ರಂಜಿತಾ ಸನ್ಯಾನಿ ಆಬುಟ್ಟದೆ, ರೈಲ್ನಾಗೆ ವೋಡಾಡಿ ಉಮಾಸ್ರೀ ಮೇಡಮ್ಗೆ ಮೈಕೈ ನೋವು ಬಂದದೆ, ಅದು ಆಗೋಗದೆ, ಇದು ಬಂದೋಗದೆ ಅಂತೇಳಿ ಈವಯ್ಯ ವೊಡ್ಕತಾಯಿರ್ತದೆ' ಅಂತಂದು ಮಿಸ್ಸಸ್ಸು ಪುಲ್ ಗರಂ ಆಗೋಯ್ತು.
'ಸುಮ್ಕಿರಮ್ಮಿ ನಿಂತಾವ ಇರೋದು ರಾಂಗ್ ಇನ್‌ಪರ್ಮೇಸನ್ನು. ಸಾಸ್ಕರು ಪಾರಿನ್ಗೆ ವೋದಕ್ಕೆ ಅಂತೇಳಿ ವೋಗಾದು. ಪಾರಿನ್ನಾಗೆ ಜನ ಹೆಂಗವ್ರೆ, ಅಲ್ಲಿರೋ ಸರ್ಕಾರ ಹೆಂಗೆ ಆಡಳ್ತ ಮಾಡ್ತದೆ. ರೋಡ್ನಾಗೆ ಕಸ ಬಿದ್ದೈತ, ಟಾಯ್ಲೆಟ್ಟು ಹೆಂಗದೆ, ಬಾತ್‌ರೂಂ ಇನ್ನೆಂಗೆ ಕಟ್ಟವ್ರೆ ಅನ್ನೋದ್ನ ನೋಡಕ್ಕೆ, ತಿಳ್ಕಂಡು ಬರಾಕ್ಕೆ ವೋಗಾದು. ಹೆಂಡ್ರು, ಮಕ್ಳುನ್ನ ಕರ್ಕಂಡು ಅವ್ರು ಏನರ ಪಿಕ್‌ನಿಕ್ಕು ವೋದಾರೇನು ?' ಅಂದ ಮೈಲಾರಿ.
'ಲೇ ಮೈಲಾರಿ ತಲ್ಯಾಗೆ ಅದೇನಲ ಮಡಿಕ್ಕಂಡು ಮಾತಾಡ್ತೀಯ. ಸಾಸ್ಕರು ವರ್ಸ ವರ್ಸ ಪಾರಿನ್ಗೆ ವೋಯ್ತಾವ್ರೆ, ಬತ್ತಾವ್ರೆ. ಅದೇನ್ಲಾ ತಂದು ಗುಡ್ಡೆ ಹಾಕವ್ರೆ ಇಲ್ಲಿ. ಸಮುದ್ರುಕ್ಕೆ ವೋಗಿ ಆಟ ಆಡೋದು, ಹೆಣ್ ಐಕ್ಳು ಜತ್ಯಾಗೆ ಕುಣ್ಯಾದು, ಮಾಂಸ, ಮಡ್ಡಿ ತಿಂದು ತೇಗಾದು ಇಷ್ಟೇ ಅಲ್ವೇನ್ಲಾ. ಪಾಪ ನಮ್ ಸಿದ್ರಾಮಣ್ಣ ಖಜಾನೆಯೊಳ್ಗೆ ಕಾಸಿಲ್ಲ ಕಾಸಿಲ್ಲ ಅಂತ ತಲೆ ತಲೆ ಚಚ್ಕತಾಯಿರ್ತದೆ. ನಮ್ ಸಾಸ್ಕರು ನೋಡುದ್ರೆ ವುಂಡಾಡಿ ಗುಂಡಣ್ಣೋರಂಗೆ ಪಾರಿನ್ನು ಅಲ್ಲಿ ಇಲ್ಲಿ ಅಂತ ಅಲೀತಾಯಿರ್ತವೆ. ಸಾಸ್ಕರು ಪಾರಿನ್ಗೆ ವೋಗಿಲ್ಲ ಅಂದ್ರೆ ಯಾರ್ಲಾ ಅಳ್ತರೆ ? ಅವ್ರು ಹೆಂಡ್ರು, ಮಕ್ಳುನ್ನ ಬುಟ್ಟು' ಅಂದ ಅಮಾಸೆ.
ಠಅದುಕ್ಕೆ ಕಣ್ಲಾ ನಮ್ ಮಾಜಿ ಮಂತ್ರಿ ಮೇಟಿಯೋರು ಹೇಳಿರಾದು. ವೂರ್ನಾಗೆ ಬರ ಬಂದ್ರೆ ಜನ ತಿನ್ನೋದು ಬುಟ್ಟವ್ರಾ. ನಾವು ಪಾರಿನ್ಗೆ ವೋಗೋದೆ, ಮಜಾ ವುಡಾಯ್ಸೋದೆ ಅಂತ. ವೋಗಿ ಬರ್ಲಿ ಬುಡ್ಲಾ ?' ಅಂದ ಮೈಲಾರಿ.
'ಪುಕ್ಕಟ್ಟೆ ಸಿಕ್ಕುದ್ರೆ ಪಾರಿನ್ಗೂ ವೋಯ್ತರೆ, ಚಂದ್ರಲೋಕುಕ್ಕೂ ವೋಯ್ತರೆ. ಸ್ವಂತ ಕಾಸ್ನಾಗೆ ಸಾಸ್ಕರು ವೋಗ್ಲಿ ಅಂತೇಳಿ ಸರ್ಕಾರ ಆದೇಸ ಮಾಡ್ಬುಟ್ರೆ ವೊಬ್ರು ವೋಗ್ಲಿ ನೋಡಾವ. ಜನಗ್ಳು ಕಾಸು ಅಂತಂದ್ರೆ ಏನ್ಲಾ ತಿಳ್ಕಂಡವ್ರೆ ಇವ್ರು' ಅಂತೇಳಿ ಅಮಾಸೆನೂವೆ ರಾಂಗ್ ಆಬುಟ್ಟ. 'ಯಾರು ಎಲ್ಲಾರ ವೋಗ್ಲಿ, ನಂಗೆ ಅರ್ಜೆಂಟು ನಾನು ವೋಯ್ತೀನಪ್ಪ ನಮ್ ವೂರ್ನಾಗಿರೋ ಪಾರಿನ್ಗೆ' ಅಂತೇಳಿ ಮೈಲಾರಿ ಚೊಂಬು ಹಿಡ್ಕಂಡು ವೋದ.


- ಕೆ.ವಿ.ಪ್ರಭಾಕರ್
prabhukolar@yahoo.com


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com