
ಗಾರ್ಫೀಲ್ಡ್ ಸೋಬರ್ಸ್
ಇಯಾನ್ ಬೋಥಮ್
ಕಪಿಲ್ ದೇವ್ ನಿಖಾಂಜ್
ಇಮ್ರಾನ್ ಖಾನ್
ಇವರೆಲ್ಲ ಕ್ರಿಕೆಟ್ನ ಯಾವುದೇ ಒಂದು ವಿಭಾಗಕ್ಕೆ ಸೀಮಿತರಾಗದೆ ಎಲ್ಲ ವಿಭಾಗಗಳಲ್ಲಿಯೂ ಕೈ ಚಳಕ ಮೆರೆದ ಕೀರ್ತಿ, ಖ್ಯಾತಿಯ ಉತ್ತುಂಗ ನೋಡಿದ ಆಟಗಾರರು. ಬ್ಯಾಟ್ಸ್ಮನ್ನ ಕಲಾವಂತಿಕೆ, ಬೌಲರ್ನ ಜೀವಂತಿಕೆ, ಕ್ಷೇತ್ರರಕ್ಷಕನ ಚುರುಕುತನವನ್ನು ಪ್ರತ್ಯೇಕ ಆಟಗಾರರಲ್ಲಿ ಕಂಡು ಅವರನ್ನೇ ಆರಾಧಿಸುತ್ತಿದ್ದ ಪ್ರೇಕ್ಷಕ ಗಣಕ್ಕೆ ಆ ಎಲ್ಲ ಗುಣಗಳನ್ನೂ ಒಂದೇ ವ್ಯಕ್ತಿಯಲ್ಲಿ ಅಡಕಗೊಳಿಸಿ ರಸಾಸ್ವಾದನೆಯ ಹೊಸ ಆಯಾಮ ನೀಡಿದ ಆಟಗಾರರಿವರು. ಒಂದು ಓವರ್ನ ಎಲ್ಲ ಆರು ಎಸೆತಗಳಲ್ಲಿ ಸಿಕ್ಸರ್ ಬಾರಿಸಿದ, ತನ್ನ ಎಡಗೈನಿಂದ ಮಧ್ಯಮ ವೇಗ ಹಾಗೂ ಫಿರ್ಕಿ(ಸ್ಪಿನ್) ಎಸೆಯುವುದರಲ್ಲಿ ನಿಷ್ಣಾತರಾಗಿದ್ದ ಸೋಬರ್ಸ್ ಎಂದರೆ ಆತ ಕ್ರಿಕೆಟ್ನ ಅಥ್ಲೆಟಿಸಿಸಮ್ನ (ಪುಟಿಯುವ ಉತ್ಸಾಹ) ಪ್ರತೀಕವೇ ಆಗಿದ್ದರು. ಇಂದಿಗೂ ಸೋಬರ್ಸ್ ಹೆಸರೆತ್ತಿದರೆ ಕ್ರಿಕೆಟ್ ಅಭಿಮಾನಿಗಳಲ್ಲಿ ಯಾವುದೋ ಒಂದು ರೀತಿಯ ರಮ್ಯ ಪುಳಕ ಉಂಟಾಗುತ್ತದೆ. ಸೋಬರ್ಸ್ಗೆ ಮುನ್ನವೂ ಇಂತಹ ಸವ್ಯಸಾಚಿ ಆಟಗಾರರಿದ್ದರು. ಆದರೆ, ಅದು ಲೆಕ್ಕಕ್ಕೆ ಮಾತ್ರ ಎಂಬಂತಿತ್ತು. ಈ ಆಲ್ರೌಂಡರ್ಗಳ ಜಮಾನಾ ಆರಂಭವಾದದ್ದೇ ಸೋಬರ್ಸ್ರಿಂದ. ಕ್ರಿಕೆಟ್ ಮೈದಾನದಲ್ಲಿ ಆತ ಮಾಡಲಾಗದ ಕಾರ್ಯವೇ ಇರಲಿಲ್ಲ. ಸೋಬರ್ಸ್ ಬ್ಯಾಟ್ ಮಾಡಿದರೂ ಸುದ್ದಿ, ಬೌಲ್ ಮಾಡಿದರೂ ಸುದ್ದಿ. ಜೊತೆಗೆ ಫೀಲ್ಡಿಂಗ್ ಕೂಡ. ಒಂದು ರೀತಿಯ ಪರಿಪೂರ್ಣ ಕ್ರಿಕೆಟ್ ಎಂದರೆ ಈತನೇ ಎಂಬಂತಹ ಪ್ರಭಾವಳಿ ಸೋಬರ್ಸ್ ತಲೆಗೆ ಅಂಟಿತ್ತು. ಕ್ರಿಕೆಟ್ ಎಂದರೆ ಬ್ರಾಡ್ಮನ್ ಎಂಬ ಗುಂಗಿನಲ್ಲಿದ್ದ ಪ್ರೇಕ್ಷಕರಿಗೆ ಸೋಬರ್ಸ್ ಹೊಸ ಪರ್ಯಾಯವಾಗಿ ಕಂಡರು. ಸೋಬರ್ಸ್ ತಮ್ಮ ವೃತ್ತಿಗೆ ಶಟರ್ ಎಳೆಯುವ ಸಂದರ್ಭದಲ್ಲಿ ಅವರ ಸ್ಥಾನ ಯಾರು ತುಂಬಬಹುದು ಎಂಬ ಪ್ರಶ್ನೆ ಇತ್ತು. ಆದರೆ, ಒಬ್ಬರಲ್ಲ ನಾಲ್ಕು ಮಂದಿ ಆಟಗಾರರು ಸೋಬರ್ಸ್ ಉತ್ತರಾಧಿಕಾರಿಯಾಗಲು ದಾವೆ ಹೂಡಿದರು. ಬೋಥಮ್, ಇಮ್ರಾನ್, ಕಪಿಲ್ ಜೊತೆಗೆ ರಿಚರ್ಡ್ ಹ್ಯಾಡ್ಲಿ ಸಹ ತಮ್ಮ ಅಪರಿಮಿತ ಸಾಮರ್ಥ್ಯದಿಂದ ಎಲ್ಲರ ಗಮನ ಸೆಳೆದರು. 1970ರ ದಶಕದ ಮಧ್ಯಭಾಗದಿಂದ 1990ರ ವರೆಗೆ ಕ್ರಿಕೆಟ್ನ ಸುದ್ದಿ ಸುತ್ತಿದ್ದೇ ಈ ನಾಲ್ವರ ಸುತ್ತ. ಇಂಗ್ಲೆಂಡ್ ಪಾಲಿಗೆ ಬೋಥಮ್ ಅವತಾರ ಪುರುಷನಂತಾಗಿದ್ದ. ಆತ ಏನು ಮಾಡಿದರೂ ಜನ ಮುಗಿಬೀಳುತ್ತಿದ್ದರು. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧದ ಜಿದ್ದಿನ ಆ್ಯಷಸ್ ಸರಣಿಗಳಲ್ಲಿ ಬೋಥಮ್ ನೀಡಿದ ಪ್ರದರ್ಶನಗಳು ಆತನನ್ನು ಐಕಾನ್ ಆಗಿಸಿತ್ತು. ಚೆಂಡು ಮೊಣಕಾಲೆತ್ತರಕ್ಕೆ ಪುಟಿಯುವುದೇ ದುಸ್ತರ ಎಂಬಂತಿದ್ದ ಭಾರತೀಯ ಉಪಖಂಡದ ಪಿಚ್ಗಳಲ್ಲಿ ಕಪಿಲ್ದೇವ್ ಮತ್ತು ಇಮ್ರಾನ್ಖಾನ್ ಮಾಡಿದ ಕೃಷಿ ಅಸಾಮಾನ್ಯ. ವೇಗ ಅಳೆಯುವ ಯಂತ್ರಗಳಿಲ್ಲದಿದ್ದಾಗಲೂ ಬಿರುಗಾಳಿ ವೇಗದಲ್ಲಿ ಚೆಂಡೆಸೆಯುತ್ತಿದ್ದ, ಆ ವೇಗದಲ್ಲಿ ಚೆಂಡನ್ನು ಇನ್ಸ್ವಿಂಗ್ ಆಗುವಂತೆ ಮಾಡುತ್ತಿದ್ದ ಇಮ್ರಾನ್ ಖಾನ್ ಒಂದು ದಂತಕತೆ. ಇಮ್ರಾನ್ ವೇಗ ಇಲ್ಲದೆಯೂ ಚೆಂಡನ್ನು ವಿಕೆಟ್ನ ಅತ್ತಿತ್ತ ಸುಳಿದಾಡಿಸುತ್ತಿದ್ದ ಕಪಿಲ್ದು ಇನ್ನೊಂದು ಸ್ತರ. ಬ್ಯಾಟಿಂಗ್ ವಿಷಯಕ್ಕೆ ಬಂದರೆ ಬೋಥಮ್ ಮತ್ತು ಕಪಿಲ್ ಒಂದು ಕಡೆಯಾದರೆ ಇಮ್ರಾನ್ ಮತ್ತು ಹ್ಯಾಡ್ಲಿ ಮತ್ತೊಂದು ಕಡೆ. ಹ್ಯಾಡ್ಲಿಯಂತೂ ನ್ಯೂಜಿಲೆಂಡ್ ತಂಡದ ಜೀವಾಳವೇ ಆಗಿದ್ದರು. ಕಪಿಲ್ ಮತ್ತು ಇಮ್ರಾನ್ ತಮ್ಮ ದೇಶಗಳಿಗೆ ವಿಶ್ವಕಪ್ ಗೆದ್ದುಕೊಟ್ಟರೆ ಬೋಥಮ್ ಮತ್ತು ಹ್ಯಾಡ್ಲಿಗೆ ಆ ಭಾಗ್ಯ ಸಿಗಲಿಲ್ಲ. ಈ ನಾಲ್ವರ ಆಗಮನ ಮತ್ತು ನಿರ್ಗಮನ ಹೆಚ್ಚು ಕಡಿಮೆ ಒಂದೇ ಅವಧಿಯಲ್ಲಾಯಿತು. ಈ ನಾಲ್ವರಲ್ಲಿ ಸೋಬರ್ಸ್ ಮುಂಚೂಣಿ ನಾಯಕ. ಕ್ರಿಕೆಟ್ ಇತಿಹಾಸದಲ್ಲಿ ಈ ಗುಂಪಿಗೆ ಪ್ರತ್ಯೇಕ ಅಧ್ಯಾಯವೇ ರಚನೆಯಾಯಿತು. 1990ರ ದಶಕದ ಮಧ್ಯಭಾಗದ ವೇಳೆಗೆ ಇವರೆಲ್ಲರೂ ಇತಿಹಾಸ ಸೇರಿದರು. ಜಗತ್ತು ಹೊಸ ಆಲ್ರೌಂಡ್ ಆಟಗಾರನನ್ನು ಎದುರು ನೋಡಿತು. ಎಲ್ಲ ತಂಡಗಳಲ್ಲೂ ತುಂಡು ಆಲ್ರೌಂಡರ್ಗಳು (ಹತ್ತಿಪತ್ತು ರನ್ ಗಳಿಸಬಲ್ಲ ಬೌಲರ್ಗಳು ಅಥವಾ ಒಂದೆರಡು ವಿಕೆಟ್ ಕೀಳಬಲ್ಲ ಬ್ಯಾಟ್ಸ್ಮನ್ಗಳು) ದಂಡಿಯಾಗಿ ಕಾಣಿಸಿಕೊಂಡರು. ಆದರೆ, ಅವರೆಲ್ಲರ ನಡುವಿನಿಂದ ಪ್ರತ್ಯೇಕವಾಗಿ ನಿಂತು ಕಳೆದ 18 ವರ್ಷಗಳಲ್ಲಿ ಕ್ರಿಕೆಟ್ ಜಗತ್ತಿನ ಅತಿ ಪ್ರಭಾವಿ, ಪರಿಣಾಮಕಾರಿ ಆಲ್ರೌಂಡರ್ ಎಂದರೆ ಅದು ಸೋಮವಾರವಷ್ಟೇ ತಮ್ಮ ಕಡೆಯ ಟೆಸ್ಟ್ ಪಂದ್ಯ ಆಡಿದ ಜಾಕ್ ಕಾಲಿಸ್ ಮಾತ್ರ! 1998ರಲ್ಲಿ ಡರ್ಬನ್ ಕಿಂಗ್ಸ್ಮೇಡ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ತಂಡ ಇಂಗ್ಲೆಂಡ್ ವಿರುದ್ದ ಸೆಣಸಲು ಸಜ್ಜಾಗಿತ್ತು. 1992ರಲ್ಲಷ್ಟೇ ವರ್ಣಭೇದ ನೀತಿಯ ನಿಷೇಧದಿಂದ ಹೊರಬಂದು ಕ್ರಿಕೆಟ್ಗೆ ಮರಳಿದ ದಕ್ಷಿಣ ಆಫ್ರಿಕಾ, ಹೊಸ ತಲೆಮಾರಿನ ಆಟಗಾರರ ತಲಾಶೆಯಲ್ಲಿತ್ತು. ನಿಷೇಧ ತೆರವಿನ ನಂತರ ಸ್ಪರ್ಧಾತ್ಮಕ ತಂಡ ಅಣಿಗೊಳಿಸುವಲ್ಲಿ ದಕ್ಷಿಣ ಆಫ್ರಿಕಾ ಯಶಸ್ವಿಯಾಗಿತ್ತಾದರೂ ಅವರಾರೂ ದೀರ್ಘಕಾಲೀನ ಬಂಡವಾಳವಾಗಿರಲಿಲ್ಲ. ಇಂತಹ ಸಂದರ್ಭದಲ್ಲಿಯೇ ಹೊಸಬರ ಕೋಟಾದಡಿ ಜಾಕ್ ಕಾಲಿಸ್ಗೆ ಸ್ಥಾನ ನೀಡಲಾಗಿತ್ತು. ಜೂನಿಯರ್ ಮಟ್ಟದಲ್ಲಿ ಸಾಕಷ್ಟು ಮಿಂಚಿದ್ದ ಕಾಲಿಸ್ ಮೇಲೆ ಭಾರಿ ಭರವಸೆ ಇತ್ತು. ಅಂದು ಕಾಲಿಸ್ ಇಂಗ್ಲೆಂಡ್ ಬೌಲರ್ಗಳನ್ನು ಎದುರಿಸಲು ಮೈದಾನಕ್ಕಿಳಿದಾಗ ಮೋಡ ಮುಸುಕಿದ ವಾತಾವರಣ ಇತ್ತು, ಮೊದಲೇ ಹೆಚ್ಚು ಹಸಿರು ಹುಲ್ಲಿನ ಪಿಚ್. ಇಂಗ್ಲೆಂಡ್ನ ಸ್ಪಿಂಗ್ ಬೌಲರ್ಗಳಿಗೆ ಸ್ವರ್ಗ ಕಂಡಷ್ಟು ಖುಷಿ. ಜೊತೆಗೆ ಹವಾಮಾನದ ಒತ್ತಾಸೆ. ಹೀಗಾಗಿ ಚೆಂಡು ಮಾತನಾಡುತ್ತಿತ್ತು. ಗಟ್ಟಿಗರಿಗೇ ಅಲ್ಲಿ ನಿಂತು ಆಡುವುದು ಕಷ್ಟ ಸಾಧ್ಯ ಎನ್ನುವಂತಹ ವಾತಾವರಣದಲ್ಲಿ ಕಾಲಿಸ್ ಅಂಪೈರ್ರಿಂದ ಗಾರ್ಡ್ ಸ್ವೀಕರಿಸಿದ್ದ. ಇಡೀ ತಂಡ ಮತ್ತು ವ್ಯವಸ್ಥೆ ಕಾಲಿಸ್ ಮೇಲೆ ಕಣ್ಣಿಟ್ಟಿತ್ತು. ಕಠಿಣ ಪರಿಸ್ಥಿತಿಯನ್ನು ಈತ ಯಾವ ರೀತಿ ನಿಭಾಯಿಸಬಲ್ಲ ಎಂದು ಕುತೂಹಲದಿಂದ ಎದುರು ನೋಡುತ್ತಿತ್ತು. ಆದರೆ ಅಂದು ಕಾಲಿಸ್ ತಂಡದ ಕೈ ಹಿಡಿಯಲಿಲ್ಲ. ಹತ್ತೇ ನಿಮಿಷದಲ್ಲಿ ಪೆವಿಲಿಯನ್ಗೆ ವಾಪಸಾಗಿದ್ದ. 12 ಎಸೆತಗಳಿಗೆ ಆತನ ಚೊಚ್ಚಲ ಟೆಸ್ಟ್ ಇನ್ನಿಂಗ್ಸ್ ಸಮಾಪ್ತಿಯಾಗಿತ್ತು, ಅಷ್ಟೇ ಅಲ್ಲ, ಅದಾದ ನಂತರ ನಾಲ್ಕೂ ಟೆಸ್ಟ್ಗಳಿಲ್ಲಿಯೂ ಕಾಲಿಸ್ ಏನೂ ಕಿಸಿಯಲಿಲ್ಲ. ಆಡಿದ ಮೊದಲ ಐದು ಟೆಸ್ಟ್ ಪಂದ್ಯಗಳಲ್ಲಿ ಆತನ ಬ್ಯಾಟಿಂಗ್ ಸರಾಸರಿ ಕೇವಲ 8.17 ಆಗಿತ್ತು. ಬೇರೆ ಯಾರೇ ಆಗಿದ್ದರೂ ಅದಾದ ಬಳಿಕ ತಂಡದಲ್ಲಿ ಉಳಿಯುತ್ತಿರಲಿಲ್ಲ. ಆದರೆ, ಕಾಲಿಸ್ ಮತ್ತೂ ಆಯ್ಕೆಯಾದ. ಇದಕ್ಕೆ ಇಂಬು ನೀಡಿದ್ದೆಂದರೆ ಪೋರ್ಟ್ ಎಲಿಜಬೆತ್ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಕೇವಲ 29 ರನ್ನಗಳಿಗೆ ಆಸ್ಟ್ರೇಲಿಯಾದ ಮೂವರು ಆಟಗಾರರನ್ನು ಬಲಿ ತೆಗೆದುಕೊಂಡಿದ್ದು ಕಾಲಿಸ್ ನೆರೆವಿಗೆ ಬಂತು. ದಕ್ಷಿಣ ಆಫ್ರಿಕಾದ ಆಯ್ಕೆದಾರರು ಈತನಲ್ಲಿ ಒಬ್ಬ ನಿಜವಾದ ಬೌಲರ್ನನ್ನು ಕಂಡರು. ಅದರ ಪರಿಣಾಮವಾಗಿ ತಂಡದಲ್ಲಿ ಕಾಲಿಸ್ಗೆ ಮತ್ತೆ ಅವಕಾಶ ದೊರಕಿತು. ಆ ಅರ್ಥದಲ್ಲಿ ಕಾಲಿಸ್ ಅದೃಷ್ಟಶಾಲಿ. ಏಕೆಂದರೆ ಅವಕಾಶಗಳು ಪದೇಪದೆ ಹುಡುಕಿ ಬರುವುದಿಲ್ಲ. ಆದರೆ, ತನ್ನ ವೃತ್ತಿ ಜೀವನದ ಪ್ರಯಾಣವನ್ನು, ಅಲ್ಲಿ ಹಂಬಲಿಸಿದ್ದ ಸಾಧನೆಯನ್ನು ಅದೃಷ್ಟದ ಕೈಗೊಪ್ಪಿಸಲು ಕಾಲಿಸ್ ಸಿದ್ಧನಿರಲಿಲ್ಲ. ಮೊದಲ ಹೆಜ್ಜೆ ಇಡಲು ತಡ ಮಾಡಿದರೂ ತನ್ನ ಹೆಜ್ಜೆ ಗುರುತುಗಳನ್ನು ಕಂಡುಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. 1997ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕಾಲಿಸ್ನ ನಿಜ ಸಾಮರ್ಥ್ಯದ ತುಣುಕು ಗೋಚರಿಸಿತು. ಡಿಸೆಂಬರ್ ತಿಂಗಳಿಗೂ, ಕಾಲಿಸ್ಗೂ ಬಿಡಿಸದ ನಂಟಿದೆ. ಚೊಚ್ಚಲ ಮತ್ತು ಕೊನೆಯ ಪಂದ್ಯ ಆಡಿದ್ದು ಇದೇ ತಿಂಗಳಲ್ಲಿ. ಅಷ್ಟೇ ಅಲ್ಲದೆ ಕಾಲಿಸ್ ಚೊಚ್ಚಲ ಶತಕ ದಾಖಲಾಗಿದ್ದೂ ಡಿಸೆಂಬರ್ನಲ್ಲೇ! 1997 ರಲ್ಲಿ ಮೆಲ್ಬೋರ್ನ್ನಲ್ಲಿ ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಕಾಲಿಸ್ಗೆ ಮೊದಲ ಅಗ್ನಿ ಪರೀಕ್ಷೆಯಾಗಿತ್ತು. ದಕ್ಷಿಣ ಆಫ್ರಿಕಾ ಸೋಲಿನತ್ತ ಮುಖ ಮಾಡಿತ್ತು. ಪಂದ್ಯ ಉಳಿಸಿಕೊಳ್ಳಲು ಎರಡನೇ ಇನಿಂಗ್ಸ್ನಲ್ಲಿ ದಿಟ್ಟ ಹೋರಾಟದ ಅಗತ್ಯವಿತ್ತು. ಅಂದು ಈ ಹೋರಾಟಕ್ಕೆ ಎದೆ ಕೊಟ್ಟಿದ್ದು ಕಾಲಿಸ್. ಸರಿಸುಮಾರು ಒಂದಿಡೀ ದಿನ (ಆರು ಗಂಟೆ) ಮೆಗ್ರಾತ್, ವಾರ್ನ್, ಕಾಸ್ಪ್ರೊವಿಚ್ಗಳ ವಿಭಿನ್ನ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಕಾಲಿಸ್ ಚೊಚ್ಚಲ ಶತಕ (101) ದಾಖಲಿಸಿದ್ದೇ ಅಲ್ಲದೆ ತಂಡವನ್ನು ಖಚಿತ ಸೋಲಿನಿಂದ ಪಾರು ಮಾಡಿದರು. ಅಲ್ಲಿಂದಾಚೆಗೆ ಕಾಲಿಸ್ ವೃತ್ತಿ ಜೀವನದ ದಿಕ್ಕು ಬದಲಿಸಿತು. ಆರಂಭದ ದಿನಗಳ ಗೊಂದಲ ದೂರವಾಯಿತು. ಚೆಂಡೇ ಇರಲಿ, ಅದು ಕಾಲಿಸ್ ಕೈಯಲ್ಲಿ ಯಶಸ್ಸಿನ ಮಂತ್ರದಂಡವಾಗಿ ಮಾರ್ಪಾಟಾಯಿತು. ಇಷ್ಟಾದರೂ ಕಾಲಿಸ್ ಪರಿಪೂರ್ಣ ಆಲ್ರೌಂಡರ್ ಆಗಿ ಪರಿವರ್ತನೆ ಕಂಡಿದ್ದು 1998ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ (ಆಗ ಅದು ವಿಲ್ಸ್ ಕಪ್) ಪಂದ್ಯಾವಳಿಯಲ್ಲಿ. ಸೆಮಿಫೈನಲ್ನಲ್ಲಿ ಶ್ರೀಲಂಕಾ ವಿರುದ್ಧ ಶತಕ, ಫೈನಲ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಐದು ವಿಕೆಟ್ ಸಾಧನೆ ಕಾಲಿಸ್ರನ್ನು ಕ್ರಿಕೆಟ್ ಜಗತ್ತಿನ ಮುಂಚೂಣಿ ಆಲ್ರೌಂಡರ್ ಆಗಿ ಪ್ರತಿಷ್ಠಾಪಿಸಿತು.
ಇದರ ನಂತರ 2000ನೇ ಇಸವಿಯಲ್ಲಿನ ಭಾರತದ ಪ್ರವಾಸ ಕಾಲಿಸ್ಗೆ ಹಲವು ರೀತಿಯಲ್ಲಿ ಅವಿಸ್ಮರಣೀಯ. ಬೆಂಗಳೂರಿನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಕೇವಲ ಐದು ರನ್ಗಳಿಂದ ಶತಕ ವಂಚಿತನಾದರೂ ಒಟ್ಟಾರೆಯಾಗಿ ಸರಣಿಯಲ್ಲಿ ಬ್ಯಾಟ್ ಮತ್ತು ಚೆಂಡಿನ ಮೂಲಕ ಅದ್ಭುತ ಪ್ರದರ್ಶನ ನೀಡಿದ ಕಾಲಿಸ್ ಸರಣಿ ಪುರುಷೋತ್ತಮ ಎನಿಸಿದರು. ಆದರೆ, ಈ ಸಂತಸ ಹೆಚ್ಚು ಕಾಲ ಉಳಿಯಲಿಲ್ಲ. ಪ್ರವಾಸ ಮುಗಿಸುತ್ತಿದ್ದಂತೆಯೆ ಮ್ಯಾಚ್ ಫಿಕ್ಸಿಂಗ್ ಭೂತ ವಕ್ಕರಿಸಿತು. ಸಮರ್ಥ ಆಟಗಾರನಾಗಿ ಕಾಲಿಸ್ ಬೆಳವಣಿಗೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದ ದಕ್ಷಿಣ ಆಫ್ರಿಕಾದ ನಾಯಕ ಹ್ಯಾನ್ಸಿ ಕ್ರೋನಿಯೆ ಈ ಹಗರಣದಲ್ಲಿ ಸಿಕ್ಕಿಬಿದ್ದರು. ಅವರ ಜೊತೆ ತಂಡದ ಇನ್ನಿಬ್ಬರು ಆಟಗಾರರ ಮೇಲೂ ಸಂಶಯದ ಮುಳ್ಳು ತಿರುಗಿತು. ಬಳಿಕ ಕ್ರೋನಿಯೆ ತಪ್ಪೊಪ್ಪಿಗೆ ಮತ್ತು ಅಕಾಲಿಕ ಸಾವು ಕಾಲಿಸ್ ಮೇಲೆ ಗಾಢ ಪರಿಣಾಮ ಬೀರಿತು. ಆದರೆ, ಕಾಲಿಸ್ರದು ಚಂಚಲ ಚಿತ್ತ ಅಲ್ಲ. ಕ್ರಿಕೆಟ್ ಆಡಲೆಂದೇ, ಅದರಲ್ಲಿ ಉನ್ನತಿ ಸಾಧಿಸಲೆಂದೇ ನೀನು ಹುಟ್ಟಿರುವುದು ಎಂಬರ್ಥದಲ್ಲಿ ತಂದೆ ಹೆನ್ರಿ ಕಾಲಿಸ್ ಎಳೆಯ ಹುಡುಗನ ಮನಸ್ಸಿನಲ್ಲಿ ಹಾಕಿದ್ದ ಅಡಿಪಾಯ ಎಂದೂ ಆತನ ಮನಸ್ಸಿನಿಂದ ದೂರವಾಗಲಿಲ್ಲ. ಅದೇ ದೃಢತೆಯೇ 18 ವರ್ಷ ಕಾಲ ಕಾಲಿಸ್ ವೃತ್ತಿಯ ದ್ಯೋತಕವಾಯಿತು.
ನಿವೃತ್ತಿ ಘೋಷಿಸಿದ ಸಂದರ್ಭದಲ್ಲಿ ಕಾಲಿಸ್ ಹೇಳಿದ್ದು 'ಇಂದು ನಾನೇನಾಗಿದ್ದೇನೆಯೋ ಅದು ನನ್ನ ಪರಿಶ್ರಮದ ಫಲ. ನಾನು ಯಾರಿಂದಲೂ ಏನನ್ನೂ ನಿರೀಕ್ಷಿಸಲಿಲ್ಲ, ಹಾಗೆ ನಿರೀಕ್ಷಿಸದ್ದನ್ನು ಸ್ವೀಕರಿಸುವ ಮನೋಭಾವವೂ ನನ್ನದಲ್ಲ. ತಂಡಕ್ಕಾಗಿ ವಿಶ್ವಕಪ್ ಗೆಲ್ಲಬೇಕೆಂಬ ಬಯಕೆಯಿಂದ ಏಕದಿನ ಪಂದ್ಯಗಳಿಗೆ ನಿವೃತ್ತಿ ಪಡೆದಿಲ್ಲ. ನನ್ನಿಂದ ತಂಡಕ್ಕೆ ಕೊಡುಗೆ ನೀಡಲು ಸಾಧ್ಯವಿಲ್ಲ ಎಂದು ನನಗನ್ನಿಸಿದ್ದರೆ ಈಗಲೇ ಹಿಂದೆ ಸರಿಯುತ್ತಿದ್ದೆ. ಆದರೆ, ನನಗೆ ಹಾಗೆನಿಸುತ್ತಿಲ್ಲ' ಎಂದು. ನಿಜ, ವಿಶ್ವಕಪ್ ಇನ್ನೂ ಒಂದೂವರೆ ವರ್ಷ ದೂರವಿದೆ. ಆ ವೇಳೆಗೆ ಕಾಲಿಸ್ 40 ದಾಟಿರುತ್ತಾರೆ. ಬದಲಿಗೆ ಕನಿಷ್ಠ ಇನ್ನೊಂದು ವರ್ಷ ಟೆಸ್ಟ್ ಪಂದ್ಯಗಳನ್ನಾಡಿದ್ದರೆ ಸಚಿನ್ ತೆಂಡೂಲ್ಕರ್ ಅವರ ಟೆಸ್ಟ್ ಶತಕಗಳ ದಾಖಲೆ ಮುರಿಯುವ ಅವಕಾಶ ಇತ್ತು (ಸಚಿನ್ 51, ಕಾಲಿಸ್ 45). 'ಸಚಿನ್ಗಿಂತ ನೀನು ಗ್ರೇಟ್' ಎಂದು ಬೆನ್ನು ತಟ್ಟಿಸಿಕೊಳ್ಳಬಹುದಿತ್ತು. ಆದರೆ, ಕಾಲಿಸ್ಗೆ ಅದಕ್ಕಿಂತ ಮುಖ್ಯವಾಗಿ ಕಂಡಿದ್ದು ತಂಡಕ್ಕಾಗಿ ವಿಶ್ವಕಪ್ ಗೆಲ್ಲುವ ನಿಸ್ವಾರ್ಥ ಅನುಭವ. ಅದನ್ನೇ ಅವರು ಆಯ್ಕೆ ಮಾಡಿಕೊಂಡಿದ್ದಾರೆ. ಈಗಲೂ ಹಿಂದಿನ ಪೀಳಿಗೆಯ ಜನ ಸೋಬರ್ಸ್ಗೂ, ನಡು ಪೀಳಿಗೆಯವರು ಬೋಥಮ್, ಕಪಿಲ್, ಇಮ್ರಾನ್ರ ಅಮಲನ್ನೇ ನೆಚ್ಚಿಕೊಳ್ಳಬಹುದು. ಅವರ ಆಟದಲ್ಲಿನ ರಮ್ಯತೆ, ರೋಚಕತೆ, ಆಕ್ರಮಣಶೀಲತೆಯ ಬಗ್ಗೆ ಕನವರಿಸಬಹುದು. ಆದರೆ, ಅವರೆಲ್ಲರ ಸಾಮರ್ಥ್ಯವನ್ನು ಒಗ್ಗೂಡಿಸಿದ ಪ್ಯಾಕೇಜ್ ರೀತಿಯಲ್ಲಿ ಕಾಲಿಸ್ ಕ್ರಿಕೆಟ್ ಇತಿಹಾಸದಲ್ಲಿ ದಾಖಲಾಗುತ್ತಾರೆ. ಕಳೆದ 18 ವರ್ಷಗಳಿಂದ ಇದ್ದ ರಕ್ಷಾಕವಚದ ನಿರ್ವಾತದಿಂದ ಹೊರಬರುವುದು ದಕ್ಷಿಣ ಆಫ್ರಿಕಾಗೆ ಸುಲಭದ ಕೆಲಸವಲ್ಲ, ಹಾಗೆಯೇ ಕಾಲಿಸ್ರಂಥ ನಿಗರ್ವಿ, ಪ್ರಭಾವಿ, ಪರಿಣಾಮಕಾರಿ ಸಾಧಕನ ಶೂನ್ಯ ತುಂಬುವುದು ಕ್ರಿಕೆಟ್ ಜಗತ್ತಿಗೂ ಕಷ್ಟವೇ. ಮನಸ್ಸಿನಲ್ಲಿ ಹಲವು ಮಧುರ ನೆನಪುಗಳ ಗಿಡ ನೆಟ್ಟಿರುವ ಕಾಲಿಸ್ಗೆ ಮತ್ತು ಆತನ ಆಟಕ್ಕೆ HATS OFF!
- ಕೆ.ಎಸ್.ಜಗನ್ನಾಥ್
jagannath.kudinoor@gmail.com
Advertisement