'ಹದಿನಾಲ್ಕು ವರ್ಷದ ಸಂದೀಪ್ ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ. ಮೊದಲಿಗೆ ಚೆನ್ನಾಗಿ ಓದುತ್ತಿದ್ದ ಸಂದೀಪನನ್ನು ಎಂಟನೇ ತರಗತಿಯಿಂದ ಬೇರೆ ಶಾಲೆಗೆ ಸೇರಿಸಿದರು. ಕಳೆದೆರಡು ವರ್ಷಗಳಿಂದ ಅಂದರೆ ಎಂಟನೇ ತರಗತಿ ಸೇರಿದಾಗಿನಿಂದ ಸಂದೀಪ್ ಪಾಠಗಳಲ್ಲಿ ಹಿಂದುಳಿದಿದ್ದ. ಅದೇನೋ ತನ್ನನ್ನು ಕೇಳುವವರೇ ಇಲ್ಲ ಎಂಬ ಭಾವನೆ ಸಂದೀಪನಲ್ಲಿ ಮನೆ ಮಾಡಿದ್ದೇ ಇದಕ್ಕೆ ಕಾರಣ. ಸಂದೀಪನ ಅದೃಷ್ಟವೆಂಬಂತೆ ಒಂಭತ್ತನೇ ತರಗತಿಗೆ ಹೊಸದಾಗಿ ಬಂದ ಉಪಾಧ್ಯಾಯರೊಬ್ಬರು ಒಂಟಿಯಾಗಿರುತ್ತಿದ್ದ ಸಂದೀಪನ ವರ್ತನೆಯನ್ನು ಗಮನಿಸಿದರು. ಸಂದೀಪನನ್ನು ಹತ್ತಿರ ಕರೆದರು. ಅವನ ಅಹವಾಲುಗಳನ್ನು ಸಮಾಧಾನದಿಂದ ಆಲಿಸಿದರು. ಅದರಿಂದ ಸಂದೀಪನಿಗೆ ತನ್ನನ್ನು ಕೇಳುವವರಿದ್ದಾರೆ ಎಂಬ ಭಾವನೆ ಮೂಡಿತು. ಆ ಉಪಾಧ್ಯಾಯರು ಸಂದೀಪನ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ಸ್ಪಂದಿಸುವ ಪ್ರಯತ್ನ ಮಾಡಿದರು. ಕಳೆದೆರಡು ವರ್ಷಗಳಿಂದ ಒಂಟಿಯಾಗಿದ್ದು, ಓದಿನಲ್ಲಿ ಹಿಂದುಳಿದಿದ್ದ ಸಂದೀಪ ಕ್ರಮೇಣ ಓದಿನಲ್ಲಿ ಸುಧಾರಿಸಲು ಪ್ರಾರಂಭಿಸಿದ. ಒಂಟಿತನದಿಂದ ಹೊರಬರಲು ಪ್ರಯತ್ನಿಸಿ ಸಫಲನಾದ.
ಸುಮಾರು ಇಪ್ಪತ್ತೆರಡು ವರ್ಷ ವಯಸ್ಸಿನ ಕಮಲಾಗೆ ಅವಳ ತಂದೆ ತಾಯಂದಿರು ಅದ್ಧೂರಿಯಿಂದ ವಿವಾಹ ಮಾಡಿದರು. ಪತಿ ಪ್ರಸಾದ್ ಒಳ್ಳೆಯ ಬ್ಯಾಂಕ್ ಅಧಿಕಾರಿಯಾಗಿದ್ದರು. ಒಮ್ಮೆ ಆಫೀಸಿಗೆ ಹೋಗುತ್ತಿದ್ದಾಗ ಅಪಘಾತವಾದ ಕಾರಣ ಅವರು ಕೆಲಸ ಕಳೆದುಕೊಳ್ಳಬೇಕಾಯಿತು. ಪ್ರಸಾದ್ರವರನ್ನು ನೋಡಲು ಬಂದವರು ತಮ್ಮ ಸಹಾನುಭೂತಿಯನ್ನು ವ್ಯಕ್ತಪಡಿಸಿದರು. ಎರಡು ಮಕ್ಕಳನ್ನು ಸಾಕಿಕೊಂಡು ಪತಿ ಪ್ರಸಾದರ ಆರೋಗ್ಯವನ್ನು ನೋಡಿಕೊಂಡು ಜೀವನ ನಡೆಸುವುದು ಕಮಲಾರಿಗೆ ದುಸ್ತರವೆನಿಸತೊಡಗಿತು. ತನಗೆ ದೇವರು ಯಾಕೆ ಹೀಗೆ ಶಿಕ್ಷೆ ಕೊಟ್ಟಿದ್ದಾನೆ ಎಂದು ಚಿಂತಿಸತೊಡಗಿದಳು. ಆಗ ಬಾಲ್ಯ ಗೆಳತಿಯಾಗಿದ್ದ ಆಶಾ ಅಕಸ್ಮಾತ್ ಕಮಲಾಳನ್ನು ಭೇಟಿ ಆಗುವ ಸಂದರ್ಭ ಬಂತು. ಕಮಲಾ ತನ್ನ ಸಮಸ್ಯೆಗಳನ್ನು ಹೇಳಿಕೊಂಡಳು. ಗೆಳತಿ ಕಮಲಾಳ ಸಮಸ್ಯೆಗಳನ್ನು ಆಲಿಸಿ ಆಶಾ ಸುಮ್ಮನೆ ಕೂರಲಿಲ್ಲ. ಗೆಳತಿಗೆ ತಾನೇನು ಮಾಡಬಹುದು ಎಂದು ಚಿಂತಿಸಿದಳು. ಅವಳೊಂದಿಗೆ ಕುಳಿತು ಕೆಲವು ಸಲಹೆ ನೀಡಿದಳು. ತಾನೂ ಅದಕ್ಕೆ ಸಹಾಯ ಮಾಡಬಲ್ಲೆನೆಂಬ ವಿಶ್ವಾಸವನ್ನು ಕಮಲಾಳಲ್ಲಿ ಮೂಡಿಸಿದಳು. ಇದರಿಂದ ಕತ್ತಲಾಗಿದ್ದ ಕಮಲಾಳ ಮನಸ್ಸಿನಲ್ಲಿ ಆಶಾಕಿರಣ ಮೂಡಿತು. ಆತ್ಮವಿಶ್ವಾಸ ಹೆಚ್ಚಿತು. ಹೇಗಾದರಾಗಲೀ ತಾನು ಸುಮ್ಮನೇ ಕೂರದೇ ಜೀವನವನ್ನು ಎದುರಿಸಲೇ ಬೇಕೆಂಬ ಹಂಬಲ ಮನಸ್ಸಿನಲ್ಲಿ ಮೂಡಿತು. ಹಾಗೆ ಮಾಡಿ ಅದರಲ್ಲಿ ಯಶಸ್ವಿಯೂ ಆದಳು.
ಮೇಲಿನ ಎರಡೂ ಉದಾಹರಣೆಗಳಲ್ಲಿ ಮಾನಸಿಕ ಆಘಾತದಿಂದ ಚೇತರಿಸಿಕೊಂಡು ಮುಂದಿನ ದಿಟ್ಟ ಹೆಜ್ಜೆ ಇಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಂಶ ಎಂದರೆ ಅದು ಅನುಭೂತಿ ಎಂಬ ಧನ್ವಂತರಿ. ಇದಕ್ಕೆ ಇಂಗ್ಲಿಷಿನಲ್ಲಿ ಊಟಠಛಝಿಣ ಎಂದೂ ಕರೆಯುತ್ತಾರೆ. ಸಾಮಾನ್ಯವಾಗಿ ಒಬ್ಬರು ಕಷ್ಟದಲ್ಲಿದ್ದಾಗ ಎಲ್ಲರೂ ಬಂದು ಸಹಾನುಭೂತಿಯನ್ನು ವ್ಯಕ್ತಪಡಿಸುವುದು ಸಹಜ. 'ಅಯ್ಯೋ, ನಿನ್ನ ಕಷ್ಟ ನನಗೆ ತಿಳಿಯುತ್ತೆ, ಪಾಪ' ಎನ್ನುವವರು ಕೆಲವು ಮಂದಿ. 'ಅಯ್ಯೋ ಹೀಗೇಕಾಯಿತು? ಪಾಪ ಹೀಗಾಗಬಾರದಿತ್ತು' ಎನ್ನುವವರು ಮತ್ತೆ ಕೆಲವರು. ಇದಕ್ಕೆ ಸಹಾನುಭೂತಿ ಎಂದು ಕರೆಯುತ್ತಾರೆ. ಇನ್ನೂ ಕೆಲವರ ವಿಷಯ ಬಿಡಿ. ಸಂಕಷ್ಟದಲ್ಲಿ ಸಿಕ್ಕಿದವರನ್ನು ಕಂಡು 'ಅಯ್ಯೋ ಇದೆಂಥಾ ಕಷ್ಟ. ಇದರಿಂದ ಹೊರಬರೋದು ಬಹಳ ಕಷ್ಟ ಮಾರಾಯಾ' ಎಂದು ಹೆದರಿದವರ ಮೇಲೆ ಹಾವೆಸೆದಂತೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾರೆ. ಅದರಿಂದ ಕಷ್ಟದಲ್ಲಿರುವವರ ಮನಸ್ಸು ಇನ್ನಷ್ಟು ಸಂಕಷ್ಟಕ್ಕೆ ಸಿಕ್ಕಿಕೊಳ್ಳಬಹುದು. ಇದು ಸಹಾನುಭೂತಿ ವ್ಯಕ್ತಪಡಿಸುವ ಪರಿ. ಅದರಿಂದ ಆಗುವ ಪರಿಣಾಮದ ಕುರಿತು ಇಂಥವರಿಗೆ ಅರಿವು ಇರುವುದಿಲ್ಲ.
ಒಬ್ಬರ ಭಾವನೆಯನ್ನು ಆಲಿಸಿ ಅರ್ಥ ಮಾಡಿಕೊಂಡು, ಆ ಭಾವನೆಯನ್ನು ತಾನೂ ಅನುಭವಿಸಿ ನಂತರ ಅದನ್ನು ಅವರೊಂದಿಗೆ ಹಂಚಿಕೊಳ್ಳುವುದಕ್ಕೆ 'ಅನುಭೂತಿ' ಎಂದು ಕರೆಯುತ್ತಾರೆ. ಅನುಭೂತಿಯು ಜೀವನ ಕೌಶಲ್ಯಗಳಲ್ಲೊಂದು. ಅನುಭೂತಿ ಎಂಬ ಈ ಜೀವನ ಕಲೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಹಾಸುಹೊಕ್ಕಾಗಿದೆ ಎಂದರೆ ಅದು ಅತಿಶಯೋಕ್ತಿಯಲ್ಲ. ಅನುಭೂತಿ ಗುಣವನ್ನು ಬೆಳೆಸಿಕೊಳ್ಳುವುದರಿಂದ ಬೇರೆಯವರ ಮನಸ್ಸನ್ನು ಅರ್ಥ ಮಾಡಿಕೊಂಡು ಅವರ ಭಾವನೆಗಳಿಗೆ ಸ್ಪಂದಿಸುವುದು ಒಂದೆಡೆ ಆದರೆ ತನ್ನ ಬಗ್ಗೆಯೂ ಅರಿವುಂಟಾಗುತ್ತದೆ. ಇದು ಅನುಭೂತಿಯ ವಿಶೇಷ ಗುಣ ಎನ್ನಬಹುದು. ನಮ್ಮ ಭಾವನೆಗಳನ್ನು ಹಿಡಿತದಲ್ಲಿಡಲು ಅನುಭೂತಿ ಸಹಾಯ ಮಾಡುತ್ತದೆ. ಜೀವನದ ಮೌಲ್ಯಗಳನ್ನು ನಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಳ್ಳುವುದರಲ್ಲಿ ಅನುಭೂತಿ ಗುಣವು ಅತ್ಯಂತ ಸಹಾಯಕಾರಿ. ಜೀವನದ ಮೌಲ್ಯಗಳನ್ನು ಕಲಿಯುವಲ್ಲಿ ಅದು ಸಹಾಯಕಾರಿಯಾದರೆ, ಜೀವನದಲ್ಲಿ ನಾವು ಬೆಳೆಸಿಕೊಳ್ಳುವ ಅನುಭೂತಿಯು ನಮ್ಮ ವ್ಯಕ್ತಿತ್ವವನ್ನು ಉತ್ತಮಗೊಳಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಅನುಭೂತಿ ಕುರಿತು ಮನೋವಿಜ್ಞಾನ ಕ್ಷೇತ್ರದಲ್ಲಿ ಆಳವಾದ ಸಂಶೋಧನೆಗಳು ನಡೆದಿವೆ. ಅನುಭೂತಿ ಗುಣವನ್ನು ಬೆಳೆಸಿಕೊಳ್ಳಲು ನಮ್ಮ ಮಿದುಳಿನಲ್ಲಿ ಕನ್ನಡಿ ನರಕೋಶಗಳೆಂಬ ವಿಶೇಷ ನರಕೋಶಗಳಿವೆ ಎಂದರೆ ಓದುಗರು ಆಶ್ಚರ್ಯ ಪಡಬಹುದು. ಪ್ರಕೃತಿಯೂ ನಮ್ಮಲ್ಲಿ ಅನುಭೂತಿ ಗುಣವನ್ನು ಬೆಳೆಸಿಕೊಳ್ಳಲು ಆಗಲೇ ಮಿದುಳಿನಲ್ಲಿ ವೇದಿಕೆಯನ್ನು ಕಲ್ಪಿಸಿದೆ ಎಂದು ನಾವು ಊಹೆ ಮಾಡಬಹುದು. ಮತ್ತೊಬ್ಬರ ಭಾವನೆಗಳಿಗೆ ಸ್ಪಂದಿಸಿದಾಗ ಕನ್ನಡಿ ನರಕೋಶಗಳು ಪುಳಕಿತಗೊಂಡು ಭಾವನೆಗಳಿಗೆ ಸಂಬಂಧಿಸಿದ ನರಕೋಶಗಳ ಪ್ರತಿಕ್ರಿಯೆಯನ್ನು ಚುರುಕುಗೊಳಿಸುತ್ತವೆ. ಈ ನರಕೋಶಗಳು ನಮ್ಮ ಮಿದುಳಿನ ಆಯ್ದ ಜಾಗಗಳಲ್ಲಿವೆ ಎಂಬುದೂ ಒಂದು ವಿಶೇಷ. ಇವು ನಮ್ಮ ಯೋಚನೆ ಮತ್ತು ಭಾವನೆಗಳನ್ನು ಕುರಿತು ಕ್ರಿಯಾಶೀಲರಾಗಿ ಇತರ ನರಕೋಶಗಳೊಂದಿಗೆ ಸಂಪರ್ಕ ಹೊಂದಿದ್ದು, ಅವುಗಳ ಮೂಲಕ ಅನುಭೂತಿಯನ್ನು ವ್ಯಕ್ತಪಡಿಸುತ್ತವೆ ಎಂಬುದು ಈಗ ಸಾಬೀತಾದ ಸಂಗತಿ.
ಅನುಭೂತಿ ಗುಣವನ್ನು ನವಜಾತ ಶಿಶುವಿನಲ್ಲೂ ಕಾಣಬಹುದು ಎಂಬುದು ಮನೋವಿಜ್ಞಾನಿಗಳ ಅಭಿಪ್ರಾಯ. ತಾಯಿ ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಎದೆಗೆ ಅವುಚಿಕೊಂಡು ಎದೆ ಹಾಲುಣಿಸುವಾಗ, ತಾಯಿಯ ಆತ್ಮೀಯ ಭಾವನೆಗಳು ಆ ಹಸುಳೆಗೆ ಅರ್ಥವಾಗುತ್ತವೆ. ಆದರೆ ಅದನ್ನು ವ್ಯಕ್ತಪಡಿಸುವ ಸಾಮರ್ಥ್ಯ ಶಿಶುಗಳಿಗೆ ಇರುವುದಿಲ್ಲ. ಸುಮಾರು ಮೂರು ನಾಲ್ಕು ತಿಂಗಳಿಗೆ ಅನುಭೂತಿ ಗುಣವನ್ನು ವ್ಯಕ್ತಪಡಿಸಲು ಮಕ್ಕಳಿಗೆ ಸಾಧ್ಯ ಎಂಬುದು ಸಂಶೋಧನೆಗಳ ವರದಿ. ಅನುಭೂತಿ ಎಂಬುದು ಸಕಾರಾತ್ಮಕ ಭಾವನೆಗಳಲ್ಲೊಂದು. ಪ್ರಕೃತಿದತ್ತವಾದ ಅನುಭೂತಿ ಗುಣವನ್ನು ಬಾಲ್ಯದಲ್ಲಿ ಬೆಳೆಸುವಲ್ಲಿ ಪೋಷಕ -ಮಗುವಿನ ಸಂಬಂಧಗಳು ಪ್ರಮುಖ ಪಾತ್ರ ವಹಿಸುತ್ತವೆ. ಮಕ್ಕಳ ಅನಿಸಿಕೆಗಳಿಗೆ ಪ್ರೀತಿಯಿಂದ ಸ್ಪಂದಿಸಿ, ಪ್ರತಿಕ್ರಿಯಿಸಿದಾಗ ಮಕ್ಕಳಲ್ಲಿ ಅನುಭೂತಿ ಗುಣವು ಮೂಡುತ್ತದೆ. ಅತಿಯಾದ ಶಿಕ್ಷೆ ಮತ್ತು ತಿರಸ್ಕಾರದಿಂದ ಕೂಡಿದ ಪೋಷಕ ಮಗುವಿನ ಸಂಬಂಧವು ಮಕ್ಕಳಲ್ಲಿ ಅನುಭೂತಿಯ ಕೊರತೆಯನ್ನುಂಟು ಮಾಡುತ್ತವೆ. ಈ ದಿಶೆಯಲ್ಲಿ ಪೋಷಕರ ನಡವಳಿಕೆಗಳು, ಮಕ್ಕಳೊಂದಿಗಿನ ಸಂವಹನ ಮತ್ತು ಬಳಸುವ ಶಬ್ದಗಳೂ ಮಕ್ಕಳ ಅನುಭೂತಿಯ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಪೋಷಕರ ಆತ್ಮೀಯ ವರ್ತನೆ, ಪ್ರೀತಿಯ ಮಾತುಗಳು, ಸಮಾಧಾನದ ಮಾರ್ಗದರ್ಶನ ಇವು ಮಕ್ಕಳಲ್ಲಿ ಅನುಭೂತಿ ಗುಣವನ್ನು ಹುಟ್ಟು ಹಾಕಿ ಭವಿಷ್ಯದಲ್ಲಿ ಆರೋಗ್ಯಕರ ವ್ಯಕ್ತಿತ್ವ ಬೆಳವಣಿಗೆಗೆ ನಾಂದಿ.
ಆಟಿಸಂ (Autism) ಎಂಬುದು ಕೆಲವು ಮಕ್ಕಳಲ್ಲಿ ಕಂಡು ಬರುವ ಮಾನಸಿಕ ಸಮಸ್ಯೆ. ಆಟಿಸಂನಿಂದ ನರಳುತ್ತಿರುವ ಮಕ್ಕಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲಾರರು. ತಮ್ಮದೇ ಪ್ರಪಂಚದಲ್ಲೇ ನಿರತರಾಗಿ ನಿರ್ಜೀವ ವಸ್ತುಗಳೊಂದಿಗೆ ಕಾಲ ಕಳೆಯುವುದು ಇಂತಹ ಮಕ್ಕಳ ಲಕ್ಷಣ. ಇವರಲ್ಲಿ ಸಂವಹನದ ಕೊರತೆ ಎದ್ದು ಕಾಣುತ್ತದೆ. ಇದರಿಂದ ಭವಿಷ್ಯದಲ್ಲಿ ವ್ಯಕ್ತಿಯ ಬೆಳವಣಿಗೆಯಲ್ಲಿ ದೋಷಗಳು ಕಾಣುತ್ತವೆ. ಅನುಭೂತಿ ಗುಣದಿಂದ, ಆತ್ಮೀಯ ಮಾರ್ಗದರ್ಶನದಿಂದ, ಪೋಷಕರು ಇಂತಹ ಮಕ್ಕಳನ್ನು ತರಬೇತಿ ನೀಡಿ ಸಹಜ ಮಾರ್ಗಕ್ಕೆ ತರಲು ಅನುಭೂತಿಯ ವರ್ತನೆ ಅವಶ್ಯ. ಕೆಲವು ಮಕ್ಕಳು ಸುಳ್ಳು ಹೇಳುತ್ತಾರೆ. ಮನೆಯಲ್ಲಿ ಹಣ ತೆಗೆಯುತ್ತಾರೆ, ಶಾಲೆಗೆ ತಪ್ಪಿಸುತ್ತಾರೆ. ಅತಿಯಾದ ಕೋಪ ಪ್ರದರ್ಶಿಸುತ್ತಾರೆ. ಇಂಥಹ ಮಕ್ಕಳನ್ನು ಮನೋವೈದ್ಯರ ಚಿಕಿತ್ಸೆಯೊಂದಿಗೆ ತಮ್ಮ ಅನುಭೂತಿ ಗುಣದಿಂದ ಪೋಷಕರು ಸರಿದಾರಿಗೆ ತರಲು ಸಾಧ್ಯ. ಇದರ ಅರಿವಿಲ್ಲದ ಪೋಷಕರು ಇಂತಹ ಮಕ್ಕಳನ್ನು ಶಿಕ್ಷೆಗೆ ಗುರಿಪಡಿಸುತ್ತಾರೆ. ಇದರಿಂದ ಇನ್ನಷ್ಟು ಅನಾಹುತಗಳಾಗುತ್ತವೆ ಎಂಬುದನ್ನು ಪೋಷಕರು ಅರಿಯಬೇಕು.
ಈಗಿನ ದಿನಗಳಲ್ಲಿ ಯಾರನ್ನೇ ಕೇಳಿದರೂ ಹರೆಯದ ಮಕ್ಕಳನ್ನು ನಿಭಾಯಿಸುವ ಸಮಸ್ಯೆ. ಮೊದಲಿಗೆ ಓದುತ್ತಿದ್ದ ನಮ್ಮ ಮಗ -ಮಗಳು ಈಗ ಏಕೋ ಓದೋದೇ ಇಲ್ಲ, ಯಾವಾಗಲೂ ಟಿ.ವಿ. ನೋಡ್ತಾನೆ ಎನ್ನುವವರು ಕೆಲವರು. 'ಮೊದಲು ನಮ್ಮ ಮಗ ಎಷ್ಟು ಒಳ್ಳೆಯವನಾಗಿದ್ದ ಡಾಕ್ಟ್ರೇ, ಆದರೆ ಈಗ ಎರಡು-ಮೂರು ವರ್ಷ ಆಯ್ತು. ಪಿ.ಯು.ಸಿ. ಗೆ ಬಂದಾಗಿನಿಂದ ಅಪ್ಪಪ್ಪಾ ಅವನ ಸಿಟ್ಟು ಅಂದ್ರೆ ಇನ್ನೇನು ಹೊಡದೇ ಬಿಡ್ತಾನೆ ಅನ್ನಿಸುತ್ತೆ. ಮಾತನಾಡಿದ್ರೆ ರೇಗ್ರಾನೆ ಸಾರ್. ನಮಗಂತೂ ಇವನ ಸುಧಾರಿಸೋಕೆ ಆಗೋಲ್ಲ ಸಾರ್. ಹೇಗಾದ್ರೂ ಮಾಡಿ ಈತನ ಕೋಪ ಸ್ವಲ್ಪ ಕಡಿಮೆ ಮಾಡಿಕೊಡಿ' ಎನ್ನುವ ಮಂದಿ ಕೆಲವರು. ಮತ್ತೆ ಕೆಲವು ಪೋಷಕರು ಹೇಳುವುದೇ ಬೇರೆ. 'ಸಾರ್, ನಮ್ಮ ಮಗ ಈಗೀಗ ಕಾಲೇಜಿಂದ ಮನೆಗೆ ಬಂದವನು ಮತ್ತೆ ಹೊರಗೆ ಹೋದ್ರೆ ರಾತ್ರಿ ಒಂಭತ್ತು ಗಂಟೆಗೆ ಬರ್ತಾನೆ. ಎಲ್ಲಿ ಹೋಗಿದ್ದೆ ಅಂತ ಕೇಳಿದ್ರೆ ಸ್ನೇಹಿತನ ಜೊತೆ ಹೋಗಿದ್ದೆ ಅಂತಾನೆ. ಅದೇನು ಮಾಡ್ತಾನೆ ಅಂತಾನೇ ಗೊತ್ತಿಲ್ಲ. ಸಿಗರೇಟು ಸೇದ್ತಾನೆ ಅಂತ ನಮಗೆ ಅನುಮಾನ ಬಂದಿದೆ' ಎನ್ನುತ್ತಾರೆ. ಕೆಲವರು ಗುಟಕ, ಮದ್ಯ, ಗಾಂಜಾ ವಸ್ತುಗಳಿಗೆ ಶರಣಾಗುವುದನ್ನು ನಾವು ನೋಡಬಹುದು. ಇಂತಹ ಹದಿಹರೆಯದ ಮಕ್ಕಳ ಸಮಸ್ಯೆಗಳಿಗೆ ಜ್ಯೋತಿಷಿಗಳ ಹತ್ತಿರ ಹೋಗ್ತಾರೆ. ಗ್ರಹಚಾರ, ಗ್ರಹ ಸಂಧಿ ಎಂದು ಹೋಮ ಹವನ ಮಾಡಿಸುತ್ತಾರೆ. ಅವು ಯಾವುವೂ ಫಲ ಕೊಡದಿದ್ದಾಗ, ಕೊನೆಯ ಅಸ್ತ್ರ ಎಂಬಂತೆ ಒಲ್ಲದ ಮನಸ್ಸಿನಿಂದ ಮನೋವೈದ್ಯರ ಹತ್ತಿರ ಹೋಗುತ್ತಾರೆ. ಯಾವ ಚಿಕಿತ್ಸೆಯೇ ಆಗಲಿ ಅದರೊಂದಿಗೆ ಪೋಷಕರ ಆತ್ಮೀಯ ವರ್ತನೆ, ಮತ್ತು ಅನುಭೂತಿಯ ಸ್ಪಂದನೆಯು ಈ ಎಲ್ಲ ಚಿಕಿತ್ಸೆಗಳೂ ಯಶಸ್ವಿಯಾಗುವಲ್ಲಿ ಹೆಚ್ಚಿನ ಪಾತ್ರ ವಹಿಸುತ್ತದೆ ಎಂಬುದು ಗಮನಾರ್ಹ. ವೈದ್ಯ ರೋಗಿ ಸಂಬಂಧದಲ್ಲಿ ಅನುಭೂತಿಯ ಪಾತ್ರ ಹಿರಿದು. ವೈದ್ಯರಲ್ಲಿ ಚಿಕಿತ್ಸೆಗಾಗಿ ಬರುವ ರೋಗಿಗಳು ವೈದ್ಯರೇ ದೇವರು ಎಂದು ನಂಬಿರುತ್ತಾರೆ. ವೈದ್ಯರಲ್ಲಿ ಇರುವ ನಂಬಿಕೆ, ವಿಶ್ವಾಸಕ್ಕೆ ವೈದ್ಯರು ಸರಿಯಾಗಿ ಸ್ಪಂದಿಸಿದಾಗ ಮಾತ್ರ ಚಿಕಿತ್ಸೆ ಉತ್ತಮ ಫಲ ನೀಡುತ್ತದೆ.
ಸಂಬಂಧಗಳ ನಿರ್ವಹಣೆಯಲ್ಲಿ ಅನುಭೂತಿಯ ಗುಣವು ಅತ್ಯಂತ ಸಹಾಯಕಾರಿ. ಸ್ನೇಹಿತರು ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಲು ಅವರ ಹಿಂದಿರುವ ಭಾವನೆಗಳನ್ನು ಅರಿತು ಕೊಳ್ಳಬೇಕಾಗುತ್ತದೆ. ಸಂಬಂಧಗಳು ಯಾವ ವಿಧದ್ದೇ ಆಗಲಿ ಅಲ್ಲಿ ಅನುಭೂತಿಯ ಪಾತ್ರ ಹಿರಿದು. ಈ ದಿನಗಳಲ್ಲಿ ಕೌಟುಂಬಿಕ ಕಲಹಗಳು ಮತ್ತು ದಾಂಪತ್ಯ ವಿರಸಗಳು ಹೆಚ್ಚು ಹೆಚ್ಚಾಗಿ ಕಂಡು ಬರುತ್ತಿವೆ. ಇದಕ್ಕೆ ಮುಖ್ಯ ಕಾರಣ ಅನುಭೂತಿಯ ಕೊರತೆ. ಸ್ವಹಿತ ಸಾಧನೆಯ ಗುರಿಯಿಂದ ಕುಟುಂಬದ ಸದಸ್ಯರು, ದಂಪತಿಗಳು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದಿಲ್ಲ. ಕೈಗಾರಿಕೆಗಳಲ್ಲಿ, ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಹೆಚ್ಚುತ್ತಿರುವ ಧರಣಿ, ಗಲಭೆಗಳು ಮತ್ತು ಮುಷ್ಕರಗಳಿಗೆ ನಾಯಕ ನೌಕರರ ಮಧ್ಯೆ ಅನುಭೂತಿಯ ಕೊರತೆಯೇ ಕಾರಣ ಎಂಬುದು ನಿರ್ವಿವಾದ.
ಹೀಗಾಗಿ ನೆಮ್ಮದಿಯ ಬಾಳ್ವೆಗೆ 'ಅನುಭೂತಿಯು ಒಂದು ಧನ್ವಂತರಿ' ಎಂದರೆ ಅದು ಅತಿಶಯೋಕ್ತಿಯಲ್ಲ.
- ಡಾ.ಕೆ.ಆರ್.ಶ್ರೀಧರ್
anisikeprabha@gmail.com
Advertisement