'ಜೇಡಿ ಮಣ್ಣಿನಲ್ಲಿ ಕೆಲಸ ಮಾಡಿ ಸುಂದರ ಶೈಲಿಯ ಮಡಕೆಗಳನ್ನು ತಯಾರಿಸುವ ಭಾರತೀಯ ಕುಂಬಾರರು ಪ್ರಪಂಚದಲ್ಲೇ ಅತ್ಯಂತ ಕುಶಲಿಗಳಾದ ಕುಂಬಾರರಾಗಿದ್ದಾರೆ'.
-ಇತಿಹಾಸಜ್ಞ ಬರ್ಡ್‌ವುಡ್ ಎಂಬುವರ ಈ ಮಾತು ನಿಜವೂ ಹೌದು. ಕುಂಬಾರರ ಕರಕುಶಲತೆಗೆ ಮನ ಸೋಲದವರು ಯಾರಿದ್ದಾರೆ ಹೇಳಿ ?
ನಾಗರಿಕತೆ ಬೆಳೆದಂತೆ ಮಾನವ ಒಂದೆಡೆ ನೆಲೆ ನಿಲ್ಲುವುದನ್ನು ಕಲಿತ. ಗೆಡ್ಡೆ, ಗೆಣಸು ತಿನ್ನುತ್ತಿದ್ದವನು ಆಹಾರವನ್ನು ಬೇಯಿಸಿ ತಿನ್ನಲು ಶುರು ಮಾಡಿದ. ಆದರೆ, ಆಹಾರ ಪದಾರ್ಥಗಳನ್ನು ಬೇಯಿಸಲು ಏನಾದರೂ ಬೇಕಲ್ಲ. ಆಗ ಬೆಳಕಿಗೆ ಬಂದಿದ್ದು ಜೇಡಿ ಮಣ್ಣಿನಿಂದ ಮಾಡಿದ ಮಡಕೆಗಳು.
ಈ ಮಡಕೆಗಳು ಮುಂದೆ ಜನ ಜೀವನದ ಅವಿಭಾಜ್ಯ ಅಂಗವಾಯಿತು. ಅಷ್ಟೇ ಅಲ್ಲ, ನಾಗರಿಕತೆಯ ಬೆಳವಣಿಗೆಯಲ್ಲೂ ಕುಂಬಾರಿಕೆ ಪ್ರಮುಖ ಪಾತ್ರ ವಹಿಸಿತು. ಕುಂಬಾರಿಕೆಯನ್ನು ವೃತ್ತಿ ಮಾಡಿಕೊಂಡವರು ಕುಂಬಾರರಾದರು. ಅವರೊಂದು ಸಮುದಾಯವಾಗಿಯೂ ಬೆಳೆದರು.
ಕುಂಬಾರ ಸಮುದಾಯದ ಹುಟ್ಟಿನ ಬಗ್ಗೆ ಹಲವಾರು ಪುರಾಣ ಕಥೆಗಳಿವೆ. ಮಹಾಭಾರತದ ಪ್ರಕಾರ ದ್ರೌಪದಿ ಸ್ವಯಂವರ ಕಾಲದಲ್ಲಿ ಪಾಂಡವರು ಕುಂಬಾರನ ಕೊಟ್ಟಿಗೆಯಲ್ಲಿ ವಾಸವಿದ್ದರಂತೆ. ಮತ್ತೊಂದು ಕಥೆಯಂತೆ ಯಾಗ, ಯಜ್ಞ ಮಾಡುವ ಸಂದರ್ಭದಲ್ಲಿ ಬೇಕಾದ ಗಡಿಗೆಗಳನ್ನು ಋಷಿ ಮುನಿಗಳು ತಾವೇ ತಯಾರು ಮಾಡಿಕೊಳ್ಳುತ್ತಿದ್ದರಂತೆ. ಕೊನೆಗೆ ಈ ಕೆಲಸಕ್ಕಾಗಿ ಕುಂಬಾರರನ್ನು ಬ್ರಹ್ಮದೇವ ಸೃಷ್ಟಿ ಮಾಡಿದನಂತೆ.
ನಾವು ಬ್ರಹ್ಮನ ಮಗನ ಮೂಲದವರು ಎನ್ನುತ್ತಾರೆ ಕುಂಬಾರರು. ಏಕೆಂದರೆ ತಾನೂ ಸಹ ತಂದೆಯಂತೆ ಸೃಷ್ಟಿಕರ್ತ ಆಗಬೇಕುಎಂದು ಮಗ ಬಯಸಿದಾಗ ಬ್ರಹ್ಮ ಆತನನ್ನು ಕುಂಬಾರನನ್ನಾಗಿ ಮಾಡಿದನಂತೆ.
ಕರಕುಶಲದಲ್ಲಿ ಎತ್ತಿದ ಕೈ : ಪುರಾಣ ಕಥೆಗಳೇನೇ ಇದ್ದರೂ ಕರಕುಶಲದಲ್ಲಿ ಕುಂಬಾರರು ಎತ್ತಿದ ಕೈ ಎಂಬುದರಲ್ಲಿ ಎರಡನೇ ಮಾತೇ ಇಲ್ಲ. ಸ್ಟೀಲ್ ಮತ್ತು ಅಲ್ಯುಮಿನಿಯಂ ಪಾತ್ರೆ ಪಡಗಗಳ ಪ್ರವೇಶ ಮಾಡುವವರೆಗೂ ಕುಂಬಾರಣ್ಣ ಮಾಡಿದ ಮಡಕೆ, ಕುಡಿಕೆಗಳೇ ಮನೆಗಳಲ್ಲಿ ತುಂಬಿರುತ್ತಿದ್ದವು. ಗ್ರಾಮೀಣ ಪ್ರದೇಶದಲ್ಲಿ ಹಲವೆಡೆ ಈಗಲೂ ಅವುಗಳನ್ನು ಕಾಣಬಹುದು. ಅದರಲ್ಲೂ ಬೇಸಿಗೆ ಸಂದರ್ಭದಲ್ಲಿ ನಗರ ಪ್ರದೇಶದಲ್ಲಿಯೂ ಮಡಕೆಯಲ್ಲಿಟ್ಟ ನೀರನ್ನು ಕುಡಿಯುವ ವಾಡಿಕೆ ಇದೆ. ಏಕೆಂದರೆ ಮಡಕೆಯಲ್ಲಿಡುವ ನೀರು ತಂಪಾಗಿರುತ್ತದೆ.
ಸಮುದಾಯದ ವಿಚಾರವಾಗಿ ಹೇಳುವುದಾದರೆ ಕುಂಬಾರರನ್ನು ಕರ್ನಾಟಕದಲ್ಲಿ ಪ್ರಾದೇಶಿಕವಾರು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕ ಮತ್ತೊಂದು ಕರಾವಳಿ ಕುಂಬಾರರು ಎನ್ನುತ್ತಾರೆ ಕರ್ನಾಟಕ ರಾಜ್ಯ ಕುಂಬಾರರ ಸಂಘದ ಅಧ್ಯಕ್ಷ ಡಿ. ಚಂದಪ್ಪ ಮೂಲ್ಯ ಅವರು.
ಯಾರ್ಯಾರು ಎಲ್ಲೆಲ್ಲಿ : ಅವರ ಪ್ರಕಾರ, ಲಿಂಗಾಯತ ಕುಂಬಾರರ ಜನಸಂಖ್ಯೆ ಹೆಚ್ಚು. ಅವರು ಮಂಡ್ಯ, ಮೈಸೂರು, ಕೋಲಾರ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಜಿಲ್ಲೆಗಳಲ್ಲಿ ಇದ್ದಾರೆ. ಇವರು ಶೈವ ಭಕ್ತರು ಮತ್ತು ಸಸ್ಯಾಹಾರಿಗಳು. ಇನ್ನೊಂದು ಪಂಗಡವೆಂದರೆ ಅದು ಸಜ್ಜನ ಕುಂಬಾರರು. ಇವರು ತುಮಕೂರು, ಬೆಂಗಳೂರು, ಕೋಲಾರ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ತುಳು ನಾಡಿನ ಕುಲಾಲರು ಕರಾವಳಿ ಜಿಲ್ಲೆಗಳಾದ ಉಡುಪಿ, ಮಂಗಳೂರು ಮತ್ತು ಕೇರಳದ ಕಾಸರಗೋಡು ಕಡೆ ಕಂಡು ಬರುತ್ತಾರೆ. ತುಳು ನಾಡಿನ ಕನ್ನಡ ಕುಂಬಾರರು ದಕ್ಷಿಣ ಕನ್ನಡದ ಬೆಳ್ತಂಗಡಿ, ಕಡಬ, ಉಪ್ಪಿನಂಗಡಿ, ಉಜಿರೆ, ಕಕ್ಕಿಂಜೆ, ಅರೆಕಾಲ, ಚಾರ್ಮುಡಿಯಲ್ಲಿ ನೆಲೆಸಿದ್ದಾರೆ.
ಉತ್ತರ ಕನ್ನಡದ ಭಟ್ಕಳದಿಂದ ಕಾರವಾರದವರೆಗೆ ಗುನುಗ ಕುಂಬಾರರು ಇದ್ದಾರೆ. ಇವರಲ್ಲಿ ಕೆಲವರು ಶಾಖಾಹಾರಿಗಳು. ಇನ್ನೂ ಕೆಲವರು ಬ್ರಾಹ್ಮಣರಂತೆ ಜನಿವಾರ ಧರಿಸುತ್ತಾರೆ. ಕೊಡಗು ಜಿಲ್ಲೆಯಲ್ಲೂ ಕುಂಬಾರರು ಇದ್ದಾರೆ ಎಂಬುದಕ್ಕೆ ದಾಖಲೆಗಳಿವೆ. ಇನ್ನು ತೆಲುಗು ಕುಂಬಾರರು ಕೋಲಾರ, ಗುಲ್ಬರ್ಗ, ಬೀದರ್, ರಾಯಚೂರು, ಬಳ್ಳಾರಿ, ಬೆಂಗಳೂರು ನಗರ ಮತ್ತಿತರ ಕಡೆಗಳಲ್ಲಿ ನೆಲೆ ನಿಂತಿದ್ದಾರೆ.
ತಮಿಳುನಾಡಿನಿಂದ ಕರ್ನಾಟಕಕ್ಕೆ ಬಂದು ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವವರು ತಮಿಳು ಕುಂಬಾರರು. ಮಹಾರಾಷ್ಟ್ರದಿಂದ ಬಂದವರು ಲಾಡ ಮತ್ತು ಗುಜರಾತಿನಿಂದ ಬಂದು ಬೀದರ್ ಮತ್ತಿತರ ಕಡೆ ಇರುವವರು ಗೊಂಬಿ ಕುಂಬಾರರು. ಉತ್ತರ ಭಾರತದ ಅನೇಕ ಕಡೆ ಇರುವ ಸಮುದಾಯದ ಜನರನ್ನು ಪ್ರಜಾಪತಿ ಎಂದು ಕರೆಯಲಾಗುತ್ತದೆ. ಇವರಲ್ಲದೆ ಬಯಲು ಕುಂಬಾರರು, ರೆಡ್ಡಿ ಕುಂಬಾರರು ಮತ್ತು ಕ್ಷತ್ರಿಯ ಕುಂಬಾರರೂ ಕರ್ನಾಟಕದಲ್ಲಿ ಇದ್ದಾರೆ ಎನ್ನುತ್ತಾರೆ ಚಂದಪ್ಪ ಮೂಲ್ಯ.
ಆಚಾರ ವಿಚಾರಗಳಲ್ಲಿ ಪ್ರತ್ಯೇಕತೆ : ವಿಶೇಷ ಎಂದರೆ ಒಂದೊಂದು ಪಂಗಡಕ್ಕೆ ಒಂದೊಂದು ಹೆಸರು ಇರುವಂತೆ ಆಚಾರ ವಿಚಾರಗಳಲ್ಲಿಯೂ ಪ್ರತ್ಯೇಕತೆ ಇದೆ. ಆಯಾ ಪ್ರದೇಶದ ಸಂಸ್ಕೃತಿಗೆ ಅನುಗುಣವಾಗಿ ನಡೆದುಕೊಳ್ಳುವವರು ಈ ಸಮುದಾಯದ ಜನ. ಅದನ್ನು ಲೇಖಕ ಬಸವರಾಜ ಕುಂಚೂರು ಅವರು ಅದ್ಭುತವಾಗಿ ವಿವರಿಸಿದ್ದಾರೆ. ಅವರ ಪ್ರಕಾರ, ಲಿಂಗಾಯತ ಕುಂಬಾರರು ಈಶ್ವರ, ಬಸವಣ್ಣ ಮತ್ತು ವೀರಭದ್ರ ದೇವರುಗಳನ್ನು ಆರಾಧಿಸುತ್ತಾರೆ. ಮೈಲಾರ ಲಿಂಗ, ಸವದತ್ತಿ ಯಲ್ಲಮ್ಮ, ಬನಶಂಕರಿ ಮತ್ತಿತರ ದೇವರುಗಳನ್ನೂ ಪೂಜಿಸುತ್ತಾರೆ. ಹೆಚ್ಚಾಗಿ ಇವರು ಶ್ರೀಶೈಲ ಪೀಠಕ್ಕೆ ನಡೆದುಕೊಳ್ಳುತ್ತಾರಂತೆ. ಸಜ್ಜನ ಕುಂಬಾರರೂ ಮೊದಲು ಲಿಂಗಾಯತರೇ ಆಗಿದ್ದರಂತೆ. ಅವರಲ್ಲಿ ಒಬ್ಬ ಮಹಾ ಮಾಂತ್ರಿಕನಿದ್ದನಂತೆ. ಆತ ಲಿಂಗಾಯತರ ಆಚರಣೆಗಳನ್ನು ಧಿಕ್ಕರಿಸಿ ಮಾಂಸಹಾರಿಯಾಗಿದ್ದರಿಂದ ಕುಲದಿಂದ ಹೊರಗೆ ಹಾಕಿದರು. ಅದರಿಂದ ಕುಪಿತಗೊಂಡ ಮಾಂತ್ರಿಕ ಪ್ಲೇಗು ಹರಡುವಂತೆ ಮಾಡಿ ಲಿಂಗಾಯತರೂ ಮದ್ಯ, ಮಾಂಸ ಸೇವನೆ ಮಾಡುವವರೆಗೆ ಕಾಡಿದನಂತೆ. ಹೀಗೆ ಶಾಖಾಹಾರಿಗಳಾದವರು ಸಜ್ಜನ ಕುಂಬಾರರಾದರು. ಆತನಿಂದ ತಪ್ಪಿಸಿಕೊಂಡು ಹೋದವರು ಲಿಂಗಾಯತ ಕುಂಬಾರರಾಗಿ ಉಳಿದುಕೊಂಡರು ಎಂದು ಬಸವರಾಜ ಕುಂಚೂರು ವಿವರಿಸಿದ್ದಾರೆ. ತುಳು ನಾಡಿನ ಕುಲಾಲರು ನಾಗಾರಾಧನೆ ಮತ್ತು ಬರಿ ಪದ್ಧತಿ ಅನುಸರಿಸುತ್ತಾರೆ. ಭೂತಾರಾಧಾನೆಯೂ ಇವರಲ್ಲಿ ಕಂಡು ಬರುತ್ತದೆ.
ಸಹಾಯ, ಸವಲತ್ತು ಸಿಗುತ್ತಿಲ್ಲ: ಜನಸಂಖ್ಯೆ ಸುಮಾರು 22 ಲಕ್ಷದಷ್ಟಿದ್ದರೂ ಕುಂಬಾರರಿಗೆ ಸರ್ಕಾರದಿಂದ ಸಹಾಯ ಮತ್ತು ಸವಲತ್ತು ಸಮರ್ಪಕವಾಗಿ ಸಿಗುತ್ತಿಲ್ಲ. ಒಗ್ಗಟ್ಟಿನ ಕೊರತೆಯಿಂದಾಗಿ ರಾಜಕೀಯ ಪ್ರಾತಿನಿಧ್ಯವೂ ಅಷ್ಟಕ್ಕಷ್ಟೇ ಎಂಬಂತೆ ಇದೆ. ಲಕ್ಷ್ಮೀಸಾಗರ್ ಅವರು ಶಾಸಕರಾಗಿ ಮಂತ್ರಿಗಳಾಗಿದ್ದನ್ನು ಹೊರತು ಪಡಿಸಿದರೆ ಬೇರೆ ಯಾರೂ ಆ ಮಟ್ಟಕ್ಕೆ ಹೋಗಿಲ್ಲ. ಕುಂಬಾರರ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಈಡೇರದೇ ಉಳಿದಿದೆ. ಪ್ರಸ್ತುತ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಡಿ ಒಂದು ನಿಗಮ ಇದೆಯಾದರೂ ಪ್ರತ್ಯೇಕವಾಗಿ ಬೇಕು ಎಂಬುದು ಸಮುದಾಯದವರ ಮನವಿ. ಬೇಡಿಕೆ ಈ ಹಿಂದೆ ಈಡೇರುವ ಸನ್ನಿವೇಶ ನಿರ್ಮಾಣವಾಗಿತ್ತಾದರೂ ನಮ್ಮವರಲ್ಲೇ ಪರಸ್ಪರ ಕಾಲೆಳೆಯುವ ಕೆಲಸ ಮಾಡಿದ್ದರಿಂದ ಆಗಲಿಲ್ಲ ಎನ್ನುತ್ತಾರೆ ಚಂದಪ್ಪ ಮೂಲ್ಯ ಅವರು.
ಶೈಕ್ಷಣಿಕ ವಿಚಾರದಲ್ಲಿ ಕುಂಬಾರ ಸಮುದಾಯದವರು ಒಕೆ ಎನ್ನಬಹುದು. ಅದರಲ್ಲೂ ಕರಾವಳಿ ಮತ್ತು ಉಡುಪಿ ಭಾಗದಲ್ಲಿ ಮಕ್ಕಳು ವಿದ್ಯಾವಂತರಾಗುತ್ತಿದ್ದಾರೆ. ಆದರೆ, ಉತ್ತರ ಕರ್ನಾಟಕದ ಕಡೆ ಇನ್ನೂ ಮೂಲ ಕಸುಬು ಮುಂದುವರಿದಿರುವುದರಿಂದ ಅಲ್ಲಿ ಶೈಕ್ಷಣಿಕ ಮಟ್ಟ ಕೊಂಚ ಕಡಿಮೆ. ಸಾಮಾಜಿಕವಾಗಿಯೂ ಈ ಸಮಾಜ ಮುಂದುವರಿಯುತ್ತಿದೆ.
ಮತ್ತೊಂದು ಸಂಗತಿ ಎಂದರೆ ಕುಂಬಾರರಿಂದಲೇ ಕುಂಬಾರರ ಶೋಷಣೆಯಾಗುತ್ತಿದೆ. ಅಂದರೆ ಈ ಸಮಾಜದ ಅಭಿವೃದ್ಧಿಗೆ ಸರ್ಕಾರ ಬಿಡುಗಡೆ ಮಾಡಿದ ಅನುದಾನವನ್ನು ಕೆಲವರು ಟ್ರಸ್ಟ್, ಸಂಘ ಮತ್ತಿತರ ಹೆಸರಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪವಿದೆ.
-ಕೆ.ವಿ.ಪ್ರಭಾಕರ
prabhukolar@yahoo.com
Advertisement