ಸುಮಾರು ಒಂದು ತಿಂಗಳಿಂದೀಚೆಗೆ ಆಶ್ಚರ್ಯಕರ ರೀತಿಯಲ್ಲಿ ಪ್ರಪಂಚದಾದ್ಯಂತ ತೀವ್ರವಾಗಿ ಚರ್ಚೆಗೆ ಗ್ರಾಸವಾಗಿರುವ ಒಂದು ಸಂಶೋಧನಾ ಲೇಖನವೆಂದರೆ, ಭಾರತದ ಮೂಲದವರಾದ ದೀಪಕ್ ರೇ ಮತ್ತು ಸಂಗಡಿಗರು ಪ್ರಕಟಿಸಿರುವ ""Yield Trends Are Insufficient to Double Global Crop Production by 2050".ಈ ಲೇಖನದ ಬಗ್ಗೆ ಪ್ರತಿಷ್ಠಿತ ಪತ್ರಿಕೆಗಳಾದ ದಿ ವಾಶಿಂಗ್ಟನ್ ಪೋಸ್ಟ್ ಮತ್ತು ನ್ಯೂಯಾರ್ಕ್ ಟೈಮ್ಸ್ ವಿವರವಾಗಿ ವಿಮರ್ಶಿಸಿವೆ.
ದೀಪಕ್‌ರೇ ಅವರ ಲೇಖನದ ಮುಖ್ಯ ಸಾರಾಂಶವೆಂದರೆ, 'ಕೃಷಿ ಉತ್ಪನ್ನದರ ಇದೇ ರೀತಿಯಲ್ಲಿ ಸಾಗಿದರೆ, 2050ರದ ಹೊತ್ತಿಗೆ ಬೆಳೆದು ನಿಲ್ಲುವ 9.6. ಬಿಲಿಯನ್ ಜನಸಂಖ್ಯೆಗೆ "ಆಹಾರದ ಭದ್ರತೆ" ನೀಡಲು ಸಾಧ್ಯವಾಗುವುದಿಲ್ಲ' ಎನ್ನುವುದು. ದೀಪಕ್‌ರೇ ಅವರು ಭಾರತದ ಬಗ್ಗೆ ಬರೆಯುತ್ತಾ, ಹೀಗೆ ಹೇಳುತ್ತಾರೆ- 'ಭಾರತದ ಹಸಿರು ಕ್ರಾಂತಿಯ ತಳಿಗಳ ಉತ್ಪನ್ನ ದರ ಒಂದು ರೀತಿಯಲ್ಲಿ ತಳ ಹಿಡಿದು ದಶಕಗಳೇ ಆಗುತ್ತಾ ಬಂದಿವೆ. ಈ ತಳಿಗಳನ್ನು ಪುನಃಶ್ಚೇತನಗೊಳಿಸಬೇಕು ಅಥವಾ ಇನ್ನೂ ಅಧಿಕ ಇಳುವರಿ ಕೊಡುವ ತಳಿಗಳನ್ನು ತಯಾರು ಮಾಡಬೇಕು'.
ಭಾರತದ ಪ್ರಸಿದ್ಧ ಕೃಷಿ ತಜ್ಞ ಡಾ. ಎಂ.ಎಸ್. ಸ್ವಾಮಿನಾಥನ್‌ರವರೂ ಸಹ "Green revolution has fatigued" ಎಂದು ಸುಮಾರು ಹತ್ತು, ಹದಿನೈದು ವರ್ಷಗಳಿಂದ ಹೇಳುತ್ತಲೇ ಬಂದಿದ್ದಾರೆ. ಕೃಷಿ ಕ್ಷೇತ್ರದ ಅವನತಿ ಹೀಗಿದ್ದರೂ ಸಹ ಸರ್ಕಾರಗಳು ಕೃಷಿ ಕ್ಷೇತ್ರಕ್ಕೆ ನೀಡುವ ಅನುದಾನವನ್ನು ವರ್ಷದಿಂದ ವರ್ಷಕ್ಕೆ ಕಡಿಮೆ ಮಾಡುತ್ತಾ ಬಂದಿವೆ. ಕೃಷಿ ಕ್ಷೇತ್ರ ತಮ್ಮ ವ್ಯಾಪ್ತಿಯ ವಿಷಯ ಎಂದು ತಮ್ಮ, ತಮ್ಮ ಪ್ರೌಢಾಭಿತ್ಯವನ್ನು ಸಮರ್ಥನೆ ಮಾಡಿಕೊಂಡು ಬಂದಿವೆ ರಾಜ್ಯ ಸರ್ಕಾರಗಳು. ಕೃಷಿ ವಿವಿಗಳಿಗೆ ಸಂಬಳ, ಸಾರಿಗೆ, ತುಟ್ಟಿಭತ್ಯೆ ಕೊಡುವುದನ್ನು ಬಿಟ್ಟರೆ ಸಂಶೋಧನೆಗೆಂದು ಮೂರು ಕಾಸೂ ಕೊಡುವುದಿಲ್ಲ. ಎಲ್ಲಾ ಸಂಶೋಧನಾ ಅನುದಾನಗಳು ಕೇಂದ್ರದ ಕೃಷಿ ಅನುಸಂಧಾನ ಪರಿಷತ್ತನ್ನೇ ನಂಬಿಕೊಂಡಿರಬೇಕಾದಂತಹ ಪರಿಸ್ಥಿತಿ ನಮ್ಮ ಕೃಷಿ ವಿವಿಗಳದ್ದು. ಹೀಗಿರಬೇಕಾದರೆ, ಕೇಂದ್ರ ಸರ್ಕಾರ ಯಾವ ಯಾವ ಸಂಶೋಧನೆಗಳಿಗೆ ಅನುದಾನ ನೀಡುತ್ತದೋ ಆ ವಿಷಯಗಳಲ್ಲಿ ಮಾತ್ರ ಕೃಷಿ ವಿವಿಗಳೇ ಸಂಶೋಧನೆ ಮಾಡಬೇಕಾಗುತ್ತದೆ. ಹಾಗಾದರೆ, ರಾಜ್ಯದ ಕೃಷಿಗೆ ಹೊಂದುವಂತಹ ಸಂಶೋಧನೆ ಹೇಗೆ ಮಾಡುವುದು?
ಮುಂಬರುವ ದಶಕಗಳಲ್ಲಿ ಭಾರತವೂ ಸೇರಿದಂತೆ ಪ್ರಪಂಚದ ಎಲ್ಲಾ ದೇಶಗಳಲ್ಲಿನ ಕೃಷಿ ಎದುರಿಸಬೇಕಾದ ಕಷ್ಟಕರ ಸಂಗತಿಯೆಂದರೆ "ಹವಾಮಾನ ಬದಲಾವಣೆ" (global warming)ಮತ್ತು ನೀರಿನ ಅಭಾವ. ಈಗಾಗಲೇ ಈ ಎರಡು ವೈಪರೀತ್ಯಗಳು ಭಾರತವನ್ನು ಕಾಡುವುದಕ್ಕೆ ಆರಂಭವಾಗಿ ದಶಕಗಳೇ ಆಗಿವೆ. ಆದರೂ ಸಹ, ಈ ಹವಾಮಾನ ವೈಪರೀತ್ಯಗಳನ್ನು ಎದುರಿಸಲು ಯಾವುದೇ ಕ್ರಮದ ಬಗ್ಗೆ ಭಾರತದ ರಾಜ್ಯ ಸರ್ಕಾರಗಳು ಪ್ರಾಮಾಣಿಕವಾಗಿ ಯೋಚಿಸುವ ಗೊಡವೆಗೇ ಹೋದಂತಿಲ್ಲ. ಕೃಷಿ ಕ್ಷೇತ್ರದಲ್ಲಿ ದೂರದೃಷ್ಟಿ ಇಟ್ಟುಕೊಂಡು ಕನಿಷ್ಠ ಹತ್ತು ವರ್ಷಗಳ ಯೋಜನೆಯನ್ನು ನಿರೂಪಿಸಬೇಕು. ಆದರೆ ಭಾರತದ ರಾಜಕೀಯ ಲಕ್ಷಣಗಳನ್ನು ಅವಲೋಕಿಸಿದರೆ, ಸಕಲ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಮೂಗಿನ ತುದಿಯಿಂದ ಮುಂದಾಗುವ ಯಾವುದೇ ಕಾರ್ಯ ಕೈಗೊಳ್ಳುವುದಿಲ್ಲ. ಪ್ರಾಮಾಣಿಕವಾಗಿ ಎಲ್ಲಾ ಪಕ್ಷಗಳಿಗೂ ಮತ್ತು ರಾಜಕಾರಣಿಗಳಿಗೂ ಕೃಷಿಯ ಬಗ್ಗೆಯಾಗಲಿ ಅಥವಾ ರೈತರ ಬಗ್ಗೆ ನಿಜವಾದ ಕಾಳಜಿಯಿದ್ದರೆ, ಎಲ್ಲ ಪಕ್ಷದವರೂ ಸಂವೇದನೆಯಿಂದ ದೂರದೃಷ್ಟಿಯುಳ್ಳ ಮತ್ತು ಉಪಯುಕ್ತವಾದ ಕೃಷಿ ನೀತಿ ಮತ್ತು ಯೋಜನೆಗಳನ್ನು ರೂಪಿಸಿ, ಯಾವುದೇ ಪಕ್ಷ ಆಡಳಿತಕ್ಕೆ ಬಂದರೂ ಸಹ ಒಪ್ಪಿಕೊಂಡ ನೀತಿಗಳನ್ನಾಗಲೀ ಅಥವಾ ಯೋಜನೆಗಳನ್ನಾಗಲಿ ಬದಲಾಯಿಸುವುದಿಲ್ಲ ಎಂದು ಪ್ರಮಾಣ ಮಾಡಬೇಕು. ಆಗ ಮಾತ್ರ ನಿಜವಾದ ಕೃಷಿ ಅಭಿವೃದ್ಧಿ ಹಾಗೂ ಆಹಾರ ಭದ್ರತೆ ಸಾಧ್ಯವಾಗಬಹುದು.
ಆಹಾರ ಭದ್ರತೆಗೆ ಮುಖ್ಯವಾಗಿ ಬೇಕಾದುದು ಕಡಿಮೆ ವೆಚ್ಚದಲ್ಲಿ ಸಾಧ್ಯವಾದಷ್ಟೂ ಅಧಿಕ ಇಳುವರಿಯನ್ನು ಪಡೆಯುವುದು. ಇದಕ್ಕೆ ಮುಖ್ಯವಾಗಿ ಲಭ್ಯವಾಗುವಂತಹ ತಳಿ ಬೀಜ ತಯಾರಿಸಬೇಕಾದರೆ, ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಬಹಳ ಮುಖ್ಯವಾಗುತ್ತವೆ. ವಿಪರ್ಯಾಸವೆಂದರೆ, ಆಧುನಿಕ ವಿಜ್ಞಾನವಾಗಲೀ ಅಥವಾ ತಂತ್ರಜ್ಞಾನವಾಗಲೀ ಬೇಡ ಎಂದು ಆಂದೋಲನ ನಡೆಸುತ್ತಿರುವ ಎಂಗೋಗಳು ಮತ್ತು ಅವರ ತಾಳಕ್ಕೆ ಕುಣಿಯುತ್ತಿರುವ ರಾಜಕೀಯ ಪಕ್ಷಗಳಿಂದಾಗಿ ಸದ್ಯಕ್ಕಂತೂ ಕುಲಾಂತರಿ ತಳಿಗಳ ಸಂಶೋಧನೆಯನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ. ವಿಜ್ಞಾನ ಅಥವಾ ತಂತ್ರಜ್ಞಾನದ ಕನಿಷ್ಟ ಮಟ್ಟದ ತಿಳಿವಳಿಕೆ ಇಲ್ಲದ ರಾಜ್ಯದ ಆಡಳಿತ ಪಕ್ಷಗಳೆಲ್ಲಾ ಸೇರಿ ಭಾರತದ ರೈತನಿಗೆ ಸಿಗಬೇಕಾದ ತಂತ್ರಜ್ಞಾನ ಲಾಭವನ್ನು ತಡೆಗಟ್ಟುತ್ತಿವೆ.
ಅಮೆರಿಕದಲ್ಲಿ ನೋಡಿ. ಈ ವರ್ಷ, ಮೊಟ್ಟ ಮೊದಲ ಬಾರಿಗೆ ಕನಿಷ್ಟ ನೀರಿನಲ್ಲಿ ಬೆಳೆಯುವ ಕುಲಾಂತರಿ ಮೆಕ್ಕೆಜೋಳವನ್ನು ಮಾರುಕಟ್ಟೆಗೆ ತಂದಾಗಿದೆ. ರೈತರು ಅದನ್ನು ಬೆಳೆಯುತ್ತಿದ್ದಾರೆ. ಹಾಗೆಯೇ ಜೂಲಿಯನ್ ಶ್ರೋಡರ್ ಮತ್ತು ಸಂಗಡಿಗರು ಮೇ 2, 2013 ರಂದು ಪ್ರತಿಷ್ಠಿತ Nature ಎಂಬ ಜರ್ನಲ್‌ನಲ್ಲಿ ಪ್ರಕಟಿಸಿದ ಲೇಖನದಲ್ಲಿ "membrane trasporters" ಎಂಬ ಜೀವಕೋಶದ ಪದರದಲ್ಲಿ ಬದಲಾವಣೆ ಮಾಡಿದರೆ, ಪ್ರಪಂಚದ ಪ್ರಮುಖ ಆಹಾರ ಧಾನ್ಯಗಳ ಸ್ವತ್ತನ್ನು ಅಧಿಕಗೊಳಿಸಿ ಮತ್ತು ಬೆಳೆಗಳ ಪ್ರಮುಖವಾದ ಜೀವ ಮತ್ತು ಅಜೀವ ತಡೆಗಳನ್ನು ಹತ್ತಿಕ್ಕಬಲ್ಲ ಕುಲಾಂತರಿ ತಳಿಗಳನ್ನು ತಯಾರಿಸಬಹುದೆಂದು ತಿಳಿಸಿದ್ದಾರೆ. ಈ ತರಹದ ಸೂಪರ್ ಕುಲಾಂತರಿ ತಳಿಗಳು ಇನ್ನೂ 5-8 ವರ್ಷಗಳಲ್ಲಿ ಮಾರುಕಟ್ಟೆಗಳಲ್ಲಿ ಲಭ್ಯವಾಗುವುದಾಗಿ ತಿಳಿಸಿದ್ದಾರೆ. ಈ ತಳಿಗಳಿಂದ ಬಹಳಷ್ಟು ಕಾಲ ಸಮೃದ್ಧಿಯಾಗಿ ಬೆಳೆಗಳನ್ನು ಬೆಳೆಸಬಹುದಾಗಿದೆ. ಈ ತರಹದ ತಂತ್ರಜ್ಞಾನವನ್ನು ಭಾರತ ಕೈ ಬಿಟ್ಟರೆ, ದೇಶದ ರೈತರುಗಳಿಗೆ ಮುಂಬರುವ ದಶಕಗಳಲ್ಲಿ ಎದುರಾಗುವ ಸಂಕಷ್ಟಗಳು ಅನೇಕ. ಅದಕ್ಕೆಲ್ಲ ಪರಿಹಾರ ಕೊಡುವವರು ಯಾರು? ದೇಶಾದ್ಯಂತ, ಗಂಭೀರವಾದ ಕೃಷಿ ನೀತಿ ಮತ್ತು ಯೋಜನೆಗಳ ಬಗ್ಗೆ ಚರ್ಚೆಯಾಗಬೇಕಿದೆ. ಹಾಗೆಂದು, ಬರೀ ಚರ್ಚೆಯಲ್ಲೇ ಕಾಲಹರಣ ಮಾಡುವುದು ತರವಲ್ಲ. ಏಕೆಂದರೆ ಭಾರತೀಯರು ದಿನಕ್ಕೆ 24 ಗಂಟೆ ಚರ್ಚೆ(Argumentative Indians) ಮಾಡುವುದರಲ್ಲಿ ನಿಪುಣರು!
ಸದ್ಯದಲ್ಲೇ ಭಾರತ "ಆಹಾರ ಭದ್ರತೆ" ಕಾಯ್ದೆಯನ್ನು ತರಲಿದೆ. ಅದರಿಂದ ದೇಶದ ಸುಮಾರು ಶೇ. 65 ಜನರಿಗೆ ಆಹಾರ ಭದ್ರತೆ ಒದಗಿಸುವ ಕನಸು ಕಾಣಲಾಗುತ್ತಿದೆ. ಆದರೆ ಈ ಕಾಯ್ದೆ ಬರೀ ಕಾಯ್ದೆಯಾಗಿರದೆ, ಕನಸನ್ನು ಸಾಕಾರಗೊಳಿಸಬಲ್ಲ ಕ್ಷಮತೆ ಹೊಂದಬೇಕಾದರೆ ಗಂಭೀರವಾಗಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಕೃಷಿಗೆ ಪೂರಕವಾಗಿ ಅಳವಡಿಸಿಕೊಳ್ಳಬೇಕಾಗಿದೆ.
- ಪ್ರೊ. ಶಾಂತು ಶಾಂತಾರಾಮ್
ಐಯೋವ ರಾಜ್ಯ ಕೃಷಿ ವಿವಿ
Shanthus@iastate.edu
Advertisement