ಭಾರತದಲ್ಲಿ ಬಡತನ ನೀರಿನಲ್ಲಿ ಉಪ್ಪಿನಂತೆ ಕರಗುತ್ತಿದೆಯೇ?
ಯೋಜನಾ ಆಯೋಗ ನೀಡಿರುವ ಅಂಕಿ-ಅಂಶಗಳನ್ನು ನಂಬುವುದಾದರೆ ಇದು ವಾಸ್ತವ. ಘನ ಯುಪಿಎ ಸರ್ಕಾರ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ (2004) ಶೇ.38ರಷ್ಟಿದ್ದ ಬಡವರ ಸಂಖ್ಯೆ 2012ರ ವೇಳೆಗೆ ಶೇ.21ಕ್ಕೆ ಕುಸಿದಿದೆ. ಅಂದರೆ ಚೀನಾ 15 ವರ್ಷಗಳಲ್ಲಿ ಮಾಡಿದ್ದನ್ನು ಭಾರತ ಎಂಟೇ ವರ್ಷಗಳಲ್ಲಿ ಮಾಡಿದೆ. ಈ ಅವಧಿಯಲ್ಲಿ ಸುಮಾರು 5 ಕೋಟಿ ಜನ ಬಡತನದ ಬ್ರಾಕೆಟ್‌ನಿಂದ ಹೊರ ಬಂದಿದ್ದಾರೆ. ಈಗವರು ತಿಂಗಳಿಗೆ ತಲಾ 880 ರೂ. ಖರ್ಚು ಮಾಡುವಷ್ಟು ಸಿರಿವಂತರಾಗಿದ್ದಾರೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಇನ್ನು ನಾಲ್ಕಾರು ವರ್ಷಗಳಲ್ಲಿ ಭಾರತದಲ್ಲಿ ಬಡವರೇ ಇರುವುದಿಲ್ಲ! ನಿಜಕ್ಕೂ ಯಾವುದೇ ದೇಶ ಹೆಮ್ಮೆಪಟ್ಟುಕೊಳ್ಳಬೇಕಾದ ಸಾಧನೆಯೇ ಸರಿ. ಸುಖಿ, ಸುಭಿಕ್ಷ, ಸಮೃದ್ಧ ದೇಶದ ಕುರುಹು ಇದೇ ಅಲ್ಲವೆ? ಇಂತಹ ಸಾಧನೆ ಮಾಡಿದ ಯಾವುದೇ ಸರ್ಕಾರಕ್ಕೆ ದೇಶ ಚಿರಋಣಿ ಆಗಿರಲೇಬೇಕು. ಹೀಗಾಗಿ ಇಂದು ಯುಪಿಎ ಸರ್ಕಾರ ತನ್ನ ಬೆನ್ನು ತಾನೇ ತಟ್ಟಿಕೊಳ್ಳುತ್ತಿದ್ದರೆ ಅದರಲ್ಲಿ ತಪ್ಪೇನೂ ಇಲ್ಲ.
ಆಹಾರ ಭದ್ರತಾ ಕಾಯಿದೆ.
ತಿಂಗಳ ಹಿಂದಷ್ಟೇ ಇದೇ ಸರ್ಕಾರ ದೇಶದ ಬಹುಪಾಲು ಜನರಿಗೆ ತುತ್ತಿನ ಹಕ್ಕು ನೀಡುವ ಸುಗ್ರೀವಾಜ್ಞೆ ಹೊರಡಿಸಿದೆ. ಏನೇ ರಾಜಿ ಮಾಡಿಕೊಂಡಾದರೂ ಸರಿ, ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಈ ಸುಗ್ರೀವಾಜ್ಞೆಗೆ ಕಾಯಿದೆಯ ರೂಪ ಕೊಡಲು ತುದಿಗಾಲ ಮೇಲೆ ನಿಂತಿದೆ. ಅದಕ್ಕಾಗಿ ತನ್ನನ್ನು ಥೂ ಛೀ ಎಂದೆಲ್ಲ ಬಯ್ದು ದೂರಾಗಿದ್ದ ಡಿಎಂಕೆಯ ಮನವೊಲಿಸಿದೆ. ಮುಲಾಯಂ, ಮಾಯಾವತಿ ಮೇಲಿನ ಸಿಬಿಐ ಕೇಸುಗಳ ಬುಡ ಕತ್ತರಿಸಿದೆ. ಜೆಡಿಯುನ ನಿತೀಶ್ ಕುಮಾರ್ ಮೂಗಿಗೆ ತುಪ್ಪ ಸವರಿ ಬಿಜೆಪಿ ಸಖ್ಯ ಕಡಿದುಕೊಳ್ಳುವಂತೆ ಮಾಡಿದೆ. ಜನಾದೇಶಕ್ಕಿಂತ ಸೋನಿಯಾದೇಶಕ್ಕೆ ತಲೆ ಬಾಗಿ ಭಾರೀ ತರಾತುರಿಯಲ್ಲಿ ಈ ಹಕ್ಕನ್ನು ಜನರಿಗೆ ನೀಡಲು ಮುಂದಾಗಿದೆ. ಮೊದ ಮೊದಲು ದೇಶದ ಶೇ. 80ರಷ್ಟು ಜನರನ್ನು ಈ ಹಕ್ಕಿನಡಿ ತರುವ ಮಾತಾಡಿತ್ತಾದರೂ ಕೊನೆಗೆ ಶೇ. 65 ಬಡಜನರಿಗೆ ತುತ್ತಿನ ಖಾತರಿ ಮಾಡಲು ಸರ್ಕಾರ ಮುಂದಾಗಿದೆ. ಪ್ರಶ್ನೆ ಇರುವುದೇ ಇಲ್ಲಿ. ಸರ್ಕಾರದ ಅಂಗವಾದ ಯೋಜನಾ ಆಯೋಗದ ಪ್ರಕಾರ ದೇಶದಲ್ಲಿ ಬಡವರ ಪ್ರಮಾಣ ಶೇ.21. ಆಹಾರ ಭದ್ರತೆಯ ಮೂಲಕ ಸರ್ಕಾರ ಹಕ್ಕು ನೀಡುತ್ತಿರುವುದು ಶೇ.65 ರಷ್ಟು ಬಡವರಿಗೆ. ಈ ನಡುವಿನ ಅಂತರ ಶೇ. 44. ಅಂದರೆ ಈ ನವ ಸಿರಿವಂತರು ಸಹ ಭದ್ರತೆಯ ವ್ಯಾಪ್ತಿಗೆ ಬರುತ್ತಾರೆ. ಬಡಜನರ ಕಲ್ಯಾಣಕ್ಕೆ ರೂಪಿಸಿರುವ ಯೋಜನೆಯಲ್ಲಿ ಈ ನವಸಿರಿವಂತರನ್ನು ಸೇರಿಸಬೇಕಿತ್ತೇ? ಅಥವಾ ಇವರು ಯಾವಾಗ ಬೇಕಾದರೂ ಮತ್ತೆ ಬಡತನ ರೇಖೆಗಿಂತ ಕೆಳಗೆ ಜಾರಬಹುದು ಎಂಬ ಅನುಮಾನ ಸರ್ಕಾರವನ್ನು ಕಾಡುತ್ತಿದೆಯೇ? ಉತ್ತರ ಸ್ವತಃ ಸರ್ಕಾರಕ್ಕೇ ತಿಳಿದಂತಿಲ್ಲ. ತಿಳಿದಿದ್ದರೆ ಬಡತನದ ಲೆಕ್ಕಾಚಾರದಲ್ಲಿ ಚೆಲ್ಲಾಟವಾಡಲು ಮುಂದಾಗುತ್ತಿರಲಿಲ್ಲ. ಒಂದು ರೂಪಾಯಿಗೆ ನಾಲ್ಕು ಕಳ್ಳೆಬೀಜ ಸಿಗದಿರುವಾಗ ಹೊಟ್ಟೆ ತುಂಬ ಊಟ ಸಿಗುತ್ತದೆ ಎಂಬ ಅಪಹಾಸ್ಯದ ಮಾತುಗಳು ಮತ್ತು ಅದರ ಸಮರ್ಥನೆಗಳು ಕಾಂಗ್ರೆಸ್ ಪಕ್ಷದ ಮುಖಂಡರಿಂದ ಬರುತ್ತಿರಲಿಲ್ಲ. ಇಷ್ಟಕ್ಕೂ ಏನಿದು ಬಡತನದ ರೇಖೆ? ಇದನ್ನು ಅಳೆಯುವುದು ಹೇಗೆ? 2004ರಲ್ಲಿ ಅಧಿಕಾರಕ್ಕೆ ಬಂದ ಯುಪಿಎ ಸರ್ಕಾರ ಬಡತನದ ವ್ಯಾಖ್ಯಾನ ಮತ್ತು ಅದನ್ನು ನಿಖರವಾಗಿ, ವೈಜ್ಞಾನಿಕವಾಗಿ ಗುರುತಿಸುವುದು ಹೇಗೆ ಎಂಬುದರ ಅಧ್ಯಯನಕ್ಕೆ ಸುರೇಶ್ ತೆಂಡೂಲ್ಕರ್ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಆಗಿದ್ದ ಬಡಜನರ ಪ್ರಮಾಣ ಶೇ.38. ಕಲ್ಯಾಣ ಕಾರ್ಯಕ್ರಮಗಳು ನೇರವಾಗಿ ಬಡವರ ಪಾಲಾಗುವಂತೆ ಮಾಡಲು ಅವರ ನಿಖರ ಅಂದಾಜು ಸರ್ಕಾರಕ್ಕೆ ಬೇಕಿತ್ತು. ಇದಕ್ಕಾಗಿಯೇ ತೆಂಡೂಲ್ಕರ್ ಸಮಿತಿ ರಚನೆಯಾಯಿತು. ಈ ಸಮಿತಿಯು ಗ್ರಾಮೀಣ ಪ್ರದೇಶದಲ್ಲಿ ದಿನವೊಂದಕ್ಕೆ 29 ರು.ಗಳು (ಈಗದು 27ರು.ಗಳಿಗೆ ಇಳಿದಿದೆ) ಹಾಗೂ ನಗರ ಪ್ರದೇಶಗಳಲ್ಲಿ 32 ರು.ಗಳನ್ನು ಖರ್ಚು ಮಾಡಲಾಗದವರನ್ನು ಬಡವರೆಂದು ಗುರುತಿಸುವ ಶಿಫಾರಸು ಮಾಡಿತು. ಕೇವಲ 32 ರು.ಗಳಲ್ಲಿ ಬಡತನವನ್ನು ಅಳೆಯುವುದು ತರವಲ್ಲ ಎಂದು ಎಲ್ಲರೂ ಬೊಬ್ಬೆ ಹಾಕಿದರು. ಸರ್ಕಾರಕ್ಕೆ ಈ ಶಿಫಾರಸು ಆಪ್ತವಾಯಿತಾದರೂ ಕಾಂಗ್ರೆಸ್ ಪಕ್ಷಕ್ಕೆ ಅಪಥ್ಯವಾಯಿತು. ಬಡತನದ ವ್ಯಾಖ್ಯೆ ಮರುನಿಗದಿ ಮಾಡಲು ಸರ್ಕಾರ ಸಿ. ರಂಗರಾಜನ್ ನೇತೃತ್ವದಲ್ಲಿ ಸಮಿತಿ ರಚಿಸಿತು. ಈ ಸಮಿತಿಯ ಶಿಫಾರಸುಗಳು 2014ರಲ್ಲಷ್ಟೇ ಹೊರಬೀಳಲಿದೆ. ಹಾಗಿದ್ದರೆ ಯೋಜನಾ ಆಯೋಗ ಈಗೇಕೆ ಈ ಅಂಕಿ-ಅಂಶಗಳನ್ನು ನೀಡಿದೆ? ರಂಗರಾಜನ್ ಸಮಿತಿ ವರದಿ ಬರುವವರೆಗೆ ಕಾಯುವ ತಾಳ್ಮೆ ಅದಕ್ಕಿರಲಿಲ್ಲವೇ? ವಿಪರ್ಯಾಸವೆಂದರೆ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ನಡೆಸಿರುವ ಸಮೀಕ್ಷೆಯ ಪ್ರಕಾರ ಯೋಜನಾ ಆಯೋಗ ನೀಡಿರುವುದಕ್ಕಿಂತ 3.2 ಕೋಟಿ ಹೆಚ್ಚಿನ ಜನ ಬಡತನ ರೇಖೆಗಿಂತ ಕೆಳಗಿದ್ದಾರೆ! ಒಂದು ಕಡೆ ಬಡವನ ಕಿಸೆಗೆ 10 ರು. ತುರುಕಿ ನೀನಿನ್ನು ಬಡವನಲ್ಲ ಎಂದು ಹೇಳುವುದು, ಇನ್ನೊಂದೆಡೆ ಆತನ ಕಿಸೆಯಿಂದ 10 ರು. ಕಸಿದುಕೊಂಡು ಇಂದಿನಿಂದ ನೀನು ಬಡವ ಎಂದು ಹೇಳುವ ಮೂಲಕ ಈ ಸರ್ಕಾರ ಬಡತನ ಎಂಬ ಗಂಭೀರ ಸಮಸ್ಯೆಯನ್ನು ವಿಡಂಬನೆಯ ಮಟ್ಟಕ್ಕೆ ಇಳಿಸಿದೆಯೇ ಎಂಬ ಸಂಶಯ ಮೂಡುತ್ತದೆ. ಯಾವುದೇ ವಿಷಯದಲ್ಲಾದರೂ ಪಾಲಿಟಿಕ್ಸ್ ಮಾಡಬಹುದು, ಹಾಗೆಂದು ಬಡವರ, ಬಡತನದ ವಿಷಯದಲ್ಲೂ ಪಾಲಿಟಿಕ್ಸ್ ಮಾಡುವುದು ಎಂದರೆ ಅದಕ್ಕಿಂತ ದೊಡ್ಡ ಹೇಸಿಗೆ ಇನ್ನೊಂದಿಲ್ಲ. ಸಾಲ ಮಾಡಿದ ರೈತನಿಗೆ ಸಾಲ ಹಿಂತಿರುಗಿಸಬೇಡ ಎಂದು ಹೇಳಿ ದುಡಿಯುವ ಕೈಗಳಿಗೆ ವರ್ಷಕ್ಕೆ 100 ದಿನಗಳ ದುಡಿಮೆಯ ಖಾತ್ರಿ ನೀಡಿದ್ದಕ್ಕೇ 2009ರಲ್ಲಿ ಎರಡನೇ ಬಾರಿಗೆ ಜನಾದೇಶ ಪಡೆದಿರುವುದಾಗಿ ನಂಬಿರುವ ಕಾಂಗ್ರೆಸ್ ಪಕ್ಷ ಈಗ ಆಹಾರ ಭದ್ರತೆ ಹಕ್ಕಿನ ವಿಷಯವಾಗಿ ಮತ್ತೆ ಜನರನ್ನು ಮರುಳು ಮಾಡಲು ಮುಂದಾಗಿದ್ದು ಅದಕ್ಕಾಗಿ ಬಡತನದ ವಿಚಾರವಾಗಿ ರಾಜಕೀಯ ಮಾಡುತ್ತಿದೆ. ಸರ್ಕಾರ ಕೊಡುವ ಕಾಸಿನಿಂದಷ್ಟೇ ಬಡವ ಬಲ್ಲಿದವನಾಗುತ್ತಾನೆ ಎಂದಾದರೆ 1980ರ ದಶಕದಲ್ಲಿ ಜನಾರ್ದನ ಪೂಜಾರಿ ನಡೆಸಿದ ಸಾಲ ಮೇಳ ಅದೆಷ್ಟೋ ಬಡವರನ್ನು ಸಿರಿವಂತರನ್ನಾಗಿಸಬೇಕಿತ್ತು.
ಇಷ್ಟಕ್ಕೂ ರೈತರ ಸಾಲ ಮನ್ನಾ ಮತ್ತು ನರೇಗಾ ಜಾರಿಯಿಂದಷ್ಟೇ ದೇಶದಲ್ಲಿ ಬಡವರು ಉದ್ಧಾರವಾದರೆ ಎಂಬ ಪ್ರಶ್ನೆ ಬರುತ್ತದೆ. 2004ರಿಂದ 2008ರವರೆಗಿನ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿದರೆ ಅದರಲ್ಲಿಯೇ ಈ ಪ್ರಶ್ನೆಗೆ ಉತ್ತರ ಅಡಕವಾಗಿದೆ. ಸದೃಢ ಮತ್ತು ಸುಸ್ಥಿರ ಆರ್ಥಿಕ ವಾತಾವರಣದಿಂದಾಗಿ ಜನರ ಕೊಳ್ಳುವ ಶಕ್ತಿ, ದುಡಿಮೆಗೆ ಹೊಸ ಅವಕಾಶಗಳು ಸೃಷ್ಟಿಯಾದ ಸಂದರ್ಭವದು. ಹಣದುಬ್ಬರ ಅಂಕೆಯಲ್ಲಿದ್ದು ಜನರ ಜೇಬಿನಲ್ಲಿ ಹಣ ಹರಿದಾಡುತ್ತಿತ್ತು. ಬ್ಯಾಂಕುಗಳೂ ಸಾಲ ನೀಡಲು ಹಿಂದು-ಮುಂದು ನೋಡುತ್ತಿರಲಿಲ್ಲ. ದುಡಿದರೆ ದುಡ್ಡು ಗಳಿಸಬಹುದು ಎಂಬ ನಂಬಿಕೆ ಒಡಮೂಡಿತ್ತು. ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡೇ ಜನ ಹೊಟ್ಟೆ ತುಂಬಿಸಿಕೊಳ್ಳಬಹುದಿತ್ತು. ಉತ್ಪಾದನಾ ವಲಯ ಚುರುಕಾಗಿದ್ದಿದ್ದರಿಂದ ವಸ್ತುಗಳೂ ಅಗ್ಗವಾಗಿದ್ದವು. ಈ ಒಟ್ಟಾರೆ ಸಕಾರಾತ್ಮಕ ಆರ್ಥಿಕತೆಗೆ ಭವಿಷ್ಯದ ಭದ್ರ ಬುನಾದಿ ಹಾಕಿ ಅದರಿಂದ ಜನರನ್ನು ಸಬಲರನ್ನಾಗಿಸುವ ಬದಲು ಸರ್ಕಾರ ನರೇಗಾದಂತಹ ಯೋಜನೆ ಜಾರಿಗೊಳಿಸಿ ಅದರಿಂದ ಸುಲಭದ ಹಣ ಕೈಗೆಟಕುವಂತೆ ಮಾಡಿತು. ಇದರಿಂದ ಕೃಷಿ ಚಟುವಟಿಕೆ ಮೇಲೆ ಸಹ ಪ್ರತಿಕೂಲ ಪರಿಣಾಮ ಉಂಟಾಯಿತು. ಜೊತೆಗೆ ಪೂರೈಕೆಯ ವಿಧಿ ವಿಧಾನಗಳು ಭದ್ರವಾಗಿಲ್ಲದ ಕಾರಣ ನರೇಗಾದ ಹೆಸರಲ್ಲಿ ಭಾರೀ ಪ್ರಮಾಣದಲ್ಲಿ ಹಣ ಪೋಲಾಯಿತು. ಜಾಗತಿಕ ಆರ್ಥಿಕ ಸಂಕಷ್ಟದ ಅಡ್ಡ ಪರಿಣಾಮ ತಡೆಯಲು ಸರ್ಕಾರ ತೆಗೆದುಕೊಂಡ ಕ್ರಮಗಳು ಮತ್ತು ಸಕಾಲಕ್ಕೆ ಅದನ್ನು ಹಿಂತೆಗೆದುಕೊಳ್ಳದ್ದರ ಪರಿಣಾಮವಾಗಿ ಇಂದು ಆರ್ಥಿಕತೆ ಶಿಥಿಲವಾಗಿದೆ. ಉತ್ಪಾದನೆ ಕುಸಿದಿದ್ದು, ದುಡಿಯುವ ವರ್ಗ ಸಹ ಖಾಲಿ ಕೈಯಾಗಿದೆ. ಒಂದೆರಡು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲ ರಂಗಗಳಲ್ಲಿ ಅಭದ್ರತೆ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಬಡತನದ ಪ್ರಮಾಣದ ಬಗ್ಗೆ ಸರ್ಕಾರದ ವ್ಯಾಖ್ಯಾನ ಚರ್ಚಾಸ್ಪದವಾಗಿದೆ. ಬಡತನದ ಪ್ರಮಾಣ ಗುರುತಿಸಲು ಸರ್ಕಾರ ಅನುಸರಿಸುತ್ತಿರುವ ಕ್ರಮವೂ ಪ್ರಶ್ನಾರ್ಹವಾಗಿದೆ. ರಾಷ್ಟ್ರೀಯ ಮಾದರಿ ಸರ್ವೆ (ಎನ್‌ಎಸ್‌ಎಸ್) ಯಾವುದೇ ಒಂದು ಕುಟುಂಬ ಕಳೆದ ಒಂದು ವರ್ಷದಲ್ಲಿ ಏನೇನಕ್ಕೆ ಎಷ್ಟೆಷ್ಟು ಖರ್ಚು ಮಾಡಿತ್ತು ಎಂಬುದನ್ನು ಆಧರಿಸಿ ಅವರ ಬಡತನ ಅಳೆಯುತ್ತದೆ. ಆ ಅವಧಿಯಲ್ಲಿ ಐದು ಜನರಿರುವ ಯಾವುದೇ ಕುಟುಂಬ ಟಿವಿ, ಫ್ರಿಜ್ಜು, ದ್ವಿಚಕ್ರವಾಹನ, ಅಷ್ಟೇಕೆ ಸೈಕಲ್ ಕೊಂಡಿದ್ದರೂ ಅವರು ಬಡತನ ರೇಖೆಯ ಮೇಲೇಳುತ್ತಾರೆ. ಅಂದರೆ ಕೈಯಲ್ಲಿ ಒಂದೆರಡು ಕಾಸು ಓಡಾಡಿದಾಗ ಸೈಕಲ್ಲೊ, ಟಿವಿಯನ್ನೊ ಕೊಂಡು, ಕಷ್ಟ ಕಾಲದಲ್ಲಿ ಅದನ್ನು ಮಾರಿಕೊಂಡಿದ್ದರೂ ಅವರು ಬಡವರೆನಿಸಿಕೊಳ್ಳುವುದಿಲ್ಲ!
ಇದರ ಬದಲಿಗೆ ಒಂದುವಾರದ ಅವಧಿಯಲ್ಲಿ ಯಾವುದೇ ಕುಟುಂಬ ಏನೇನಕ್ಕೆಲ್ಲ ವೆಚ್ಚ ಮಾಡಿತ್ತು ಎಂಬುದರ ಆಧಾರದ ಮೇಲೆ ಅವರ ಆರ್ಥಿಕ ಚೈತನ್ಯ ಗುರುತಿಸುವುದು ಹೆಚ್ಚು ಸೂಕ್ತ ಮಾರ್ಗ ಎಂಬುದು ತಜ್ಞರ ಅಭಿಪ್ರಾಯ. ಆದರೆ ಸರ್ಕಾರದ ಕಿವಿಗೆ ಇದು ಬೀಳುವುದೇ ಇಲ್ಲ. ಈ ಕಳೆದ ನಾಲ್ಕು ವರ್ಷಗಳ ಆಡಳಿತದಲ್ಲಿ ನಲವತ್ತು ವರ್ಷಗಳಿಗೆ ಆಹಾರವಾಗುವಷ್ಟು ಹಗರಣಗಳನ್ನು ಎಸಗಿರುವ ಸರ್ಕಾರಕ್ಕೆ ಮತ್ತೆ ಅಧಿಕಾರದ ಗದ್ದುಗೆ ಏರುವುದು ಕಷ್ಟ ಎಂಬ ಸತ್ಯ ತಿಳಿಯದ್ದೇನಲ್ಲ. ಸರ್ಕಾರ ತಾನು ಕೊಚ್ಚಿಕೊಂಡಿರುವಂತೆ ಕಳೆದ ಎಂಟು ವರ್ಷಗಳಲ್ಲಿ ಅಸಂಖ್ಯ ಜನರನ್ನು ಬಡತನದ ಬೇಗೆಯಿಂದ ಪಾರು ಮಾಡಿಲ್ಲ. ಪಾರು ಮಾಡಲು ಬೇಕಾದ ಗಟ್ಟಿ ಆರ್ಥಿಕ ನೀತಿಗಳನ್ನು ಅನುಸರಿಸಿಯೂ ಇಲ್ಲ. ದೇಶದ ಆರ್ಥಿಕ ಬಲವೇ ಕುಸಿದಿರುವಾಗ ಸಹಜವಾಗಿಯೇ ಬಡತನದ ರೇಖೆ ಇನ್ನಷ್ಟು ಗಾಢವಾಗಿದೆ. ಆದರೆ ಅಂಕಿ-ಸಂಖ್ಯೆಯ ಕರಾಮತ್ತಿನ ಮೂಲಕ ಹಾಗೂ ಬಡವರನ್ನು ಹಾಗೆಯೇ ಉಳಿಸುವಂತಹ ಯೋಜನೆಗಳ ಮೂಲಕ ಅವರ ಕಿವಿಗೆ ಹೂಮುಡಿಸಿ ಮಂಗ್ಯಾ ಮಾಡಲು ಹೊರಟಿದೆ. ಗಟ್ಟಿ ಮತ್ತು ವಾಸ್ತವದ ನೀತಿಗಳನ್ನು ಜಾರಿಗೆ ತಂದು ಜನರಲ್ಲಿ ಆರ್ಥಿಕ ಚೈತನ್ಯ ತುಂಬುವ ಮೂಲಕವಷ್ಟೇ ನಿಜವಾದ ಅರ್ಥದಲ್ಲಿ ಬಡವರ ಕಲ್ಯಾಣ ಸಾಧ್ಯ. ಆದರೆ ವಾಸ್ತವಕ್ಕೆ ಕಣ್ಣು, ಕಿವಿ, ಮೂಗುಗಳನ್ನು ಮುಚ್ಚಿಕೊಂಡು ಅಧಿಕಾರದ ಸ್ವಪ್ನದಲ್ಲಿಯೇ ಸಾರ್ಥಕತೆ ಕಾಣುತ್ತಿರುವ ಸರ್ಕಾರದಿಂದ ಇಂತಹ ಯಾವುದೇ ಸ್ವಾಭಾವಿಕ ನಿರೀಕ್ಷೆ ಇಟ್ಟುಕೊಳ್ಳುವುದೇ ಅಪಾಯ ಎನ್ನುವಂತಾಗಿದೆ.
- ಕೆ.ಎಸ್.ಜಗನ್ನಾಥ್
jagannath.kudinoor@gmail.com
Advertisement