ಆಧುನಿಕ ತಂತ್ರಜ್ಞಾನಗಳೇ ದೇಶದ ಅಭಿವೃದ್ಧಿಯ ಬೇರು. ಸದ್ಯ ಬಯೋಟೆಕ್ನಾಲಜಿ ಮತ್ತು ಅಣು ವಿದ್ಯುತ್ ತಂತ್ರಜ್ಞಾನ ಭಾರತದಲ್ಲಿ ಅತ್ಯಂತ ಚರ್ಚೆಯಲ್ಲಿರುವ ಅಂಶಗಳು. ಆದರೆ ಭಾರತದಲ್ಲಿ ವಿಜ್ಞಾನ ವಿರೋಧಿ ಶಕ್ತಿಗಳೆಲ್ಲಾ ಒಗ್ಗೂಡಿ ಸಿಡಿದೆದ್ದು ನಿಂತಂತಿವೆ. ಬಯೋಟೆಕ್ನಾಲಜಿಯ ಬಗ್ಗೆ ಏಳುತ್ತಿರುವ ಕೂಗಿಗೆ ಇತ್ತೀಚಿನ ಸೇರ್ಪಡೆಯೆಂದರೆ ಉನ್ನತ ಮಟ್ಟದ ತಾಂತ್ರಿಕ ಪರಿಣಿತರ ಸಮಿತಿಯೊಂದು ಸುಪ್ರೀಂಕೋರ್ಟ್‌ನಿಂದ ನೇಮಕಗೊಂಡು ಬಿಟಿ ತಳಿಗಳ ಬಗ್ಗೆ ನೀಡಿರುವ ವರದಿ. ಕೂಡಂಕುಲಂನ ಅಣುವಿದ್ಯುತ್ ಸ್ಥಾವರ ವಿರೋಧಿಸುತ್ತಿರುವ ಸ್ವಯಂಸೇವಾ ಸಂಘಟನೆಗಳು ಮತ್ತು ಚಳವಳಿಗಾರರು ನಡೆಸುತ್ತಿರುವ ತೀವ್ರ ಪ್ರತಿಭಟನೆಗೆ ವಿದೇಶಿ ಶಕ್ತಿಗಳು ಧನಸಹಾಯ ನೀಡುತ್ತಿವೆ ಎಂಬುದಾಗಿ ಪ್ರಧಾನಮಂತ್ರಿ ಆಕ್ಷೇಪಿಸಿದ್ದರು. ಜೈವಿಕ ತಂತ್ರಜ್ಞಾನ ವಿರೋಧಿ ಅಲೆಗೂ ಇದೇ ಶಕ್ತಿಗಳು ಹಣಕಾಸು ನೆರವು ನೀಡುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ಜೈವಿಕ ತಂತ್ರಜ್ಞಾನ ಅಭಿವೃದ್ಧಿಗೆ ಸರ್ಕಾರ ಕಠಿಣ ಕ್ರಮಕೈಗೊಳ್ಳುವ ಮನಸು ಮಾಡುವುದು ಅತ್ಯಗತ್ಯ. ಯಾಕೆಂದರೆ ಸದ್ಯ ಈ ತಾಂತ್ರಿಕತೆಯನ್ನು ವಿರೋಧಿಸುತ್ತಿರುವ ಮನೋಸ್ಥಿತಿಗಳಿಗೆ ಜೈವಿಕ ತಳಿಯ ಸುರಕ್ಷತೆ ಅಥವಾ ಅಸುರಕ್ಷತೆಯ ಬಗ್ಗೆ ಕಾಳಜಿಯಿಲ್ಲ. ಇದೊಂದು ಕೇವಲ ಆಧುನಿಕ ವಿಜ್ಞಾನ ಮತ್ತು ಅಭಿವೃದ್ಧಿಯ ಮಧ್ಯದ ಸಂಘರ್ಷವಷ್ಟೆ.
ಕೃಷಿ ಸಂಬಂಧಿತ ಸಂಸದೀಯ ಸ್ಥಾಯಿ ಸಮಿತಿಯು 500 ಪುಟಗಳ ಒಂದು ಸಮಗ್ರ ವರದಿಯನ್ನು ಸಿದ್ಧಪಡಿಸಿದೆ. ಈ ವರದಿ ಅನುಷ್ಠಾನಗೊಂಡಲ್ಲಿ ಜೈವಿಕ ತಳಿಯ ತಂತ್ರಜ್ಞಾನ ಭಾರಿ ಪರಿಣಾಮ ಎದುರಿಸುವುದು ಖಂಡಿತ. ಜೈವಿಕ ತಳಿ ಪರೀಕ್ಷೆ ಕ್ಷೇತ್ರಕ್ಕೂ ತೆರಿಗೆ ವಿಧಿಸುವ ಪ್ರಸ್ತಾವನೆಯನ್ನು ಇದರಲ್ಲಿ ಮಾಡಲಾಗಿದ್ದು, ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳು ಈ ವರದಿಯಿಂದ ಬಾಧಿತವಾಗುವುದು ನಿಶ್ಚಿತ. ಇದೇ ಅಂಶಗಳನ್ನು ಟಿಇಸಿ ವರದಿಯೂ ಹೊಂದಿದೆ. ಪ್ರಸ್ತುತ ಇತರೆಲ್ಲ ದೇಶಗಳಲ್ಲಿ ಅಭಿವೃದ್ಧಿ ಹೊಂದುತ್ತಿರುವ ಒಂದು ತಂತ್ರಜ್ಞಾನದ ಬಗ್ಗೆ ಸೂಕ್ತ ತಿಳಿವಳಿಕೆಯಿಲ್ಲದೆಯೇ ವಿರೋಧಿಸುವುದರಿಂದ ಖಂಡಿತವಾಗಿಯೂ ದೇಶದ ಪ್ರಗತಿ ಗಂಭೀರವಾಗಿ ಕುಂಠಿತಗೊಳ್ಳುತ್ತದೆ. ಅಷ್ಟೇ ಅಲ್ಲ, ತೀವ್ರ ಪರಿಣಾಮ ಎದುರಿಸುವುದು ದೇಶದ ಕೃಷಿ ಕ್ಷೇತ್ರ. ಸ್ಫೋಟಗೊಳ್ಳುತ್ತಿರವ ಜನಸಂಖ್ಯೆ ಮತ್ತು ವರ್ಷವರ್ಷಕ್ಕೂ ಬದಲಾಗುತ್ತಿರುವ ವಾತಾವರಣದಿಂದಾಗಿ ಸಾಕಷ್ಟು ಪ್ರಮಾಣದ ಆಹಾರ ಉತ್ಪಾದನೆ ಸದ್ಯದ ಸನ್ನಿವೇಶದಲ್ಲಿ ಅತ್ಯಂತ ಕಷ್ಟಸಾಧ್ಯ. ಸದ್ಯ ಕೃಷಿ ಉತ್ಪಾದನೆ ಪ್ರಮಾಣವಂತೂ ಕನಿಷ್ಟ ಮಟ್ಟಕ್ಕೆ ಇಳಿದಿದೆ. ಇನ್ನು ಆಹಾರ ಭದ್ರತೆ ಮಸೂದೆ ಜಾರಿಗೆ ಸಾಕಷ್ಟು ಆಹಾರ ಧಾನ್ಯ ಪೂರೈಸಲು ಸದ್ಯಕ್ಕೆ ಅಸಾಧ್ಯವಾದ್ದರಿಂದ ದಶಕಗಳವರೆಗೆ ಕಾಗದದ ಮೇಲೆಯೇ ಅದರ ಅಸ್ತಿತ್ವ ಎಂಬುದಂತೂ ಖಚಿತ.
ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಾಜಕಾರಣಿಗಳು ಎಲ್ಲ ಆಟವನ್ನೂ ಆಡುತ್ತಾರೆ ಎಂಬುದು ಜನಜನಿತ. ಆದರೆ ಟಿಇಸಿ ವಿಜ್ಞಾನಿಗಳ ಕೃತ್ಯ ಜಾಗತಿಕ ವೈಜ್ಞಾನಿಕ ಸಿದ್ಧಾಂತಗಳಿಗೆ ತೀರಾ ವಿರುದ್ಧವಾದುದು. ಈ ಹಿನ್ನೆಲೆಯಲ್ಲಿ ಟಿಇಸಿ ವರದಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲೇಬೇಕು. ಇನ್ನು ಸಂಸದೀಯ ಸಮಿತಿ ವರದಿ ಕೂಡಾ ಇದೇ ಗೊಡ್ಡು ಸೈದ್ಧಾಂತಿಕ ನಿಲುವನ್ನೇ ಹೊಂದಿದೆ. ಜೈವಿಕ ತಂತ್ರಜ್ಞಾನ ವಿರೋಧಿಗಳ ಅನಾಮಿಕ ವರದಿಯಂತಿದೆ ಇದು. ಜೈವಿಕ ತಳಿ ವಿರೋಧಕ್ಕೆ ನೀಡಿರುವ ಪ್ರತಿಯೊಂದು ಕಾರಣವೂ ಪ್ರತಿಭಟನಾಕಾರರ ಘೋಷಣೆಗಳ ಪಟ್ಟಿಯಂತಿದೆ. ಅಪಾರ ಯಶಸ್ಸು ಕಂಡ ಬಿಟಿ ಹತ್ತಿಯನ್ನು ಭಾರತೀಯರ ಕೃಷಿಕರ ದೌರ್ಭಾಗ್ಯ ಎಂದು ಬಣ್ಣಿಸಲಾಗಿದೆ. ಸೂಕ್ತ ಸಾಕ್ಷ್ಯವೇ ಇಲ್ಲದೇ ವಿದರ್ಭ ಪ್ರಾಂತ್ಯದಲ್ಲಿ ನಡೆದ ಕೃಷಿಕರ ಆತ್ಮಹತ್ಯೆಗೆ ಬಿಟಿ ಹತ್ತಿಯೇ ಕಾರಣ ಎಂದು ಆರೋಪಿಸಲಾಗಿದೆ. ಹೈದರಾಬಾದ್‌ನ ಆರ್ಥಿಕ ಮತ್ತು ಸಾಮಾಜಿಕ ವಿಜ್ಞಾನ ಸಂಸ್ಥೆ (ಸಿಇಎಸ್‌ಎಸ್) ಮತ್ತು ವಾಷಿಂಗ್‌ಟನ್ ಅಂತಾರಾಷ್ಟ್ರೀಯ ಆಹಾರ ಯೋಜನೆ ಸಂಶೋಧನೆ ಸಂಸ್ಥೆ (ಐಎಫ್‌ಪಿಆರ್‌ಐ) ನೀಡಿದ ದಾಖಲೆಗಳಿಗೆ ಇದು ತೀರಾ ವಿರುದ್ಧವಾಗಿದೆ. ಭಾರತದ ಜಿಎಂ ಬೆಳೆಗಳ ಬಗ್ಗೆ ಇಂಟರ್ ಅಕಾಡೆಮಿ ವರದಿ, ಭಾರತೀಯ ನ್ಯಾಷನಲ್ ಅಕಾಡೆಮಿ ಆಫ್ ಅಗ್ರಿಕಲ್ಚರ್‌ನ ಆರ್ಥಿಕ ವಿಶ್ಲೇಷಣೆ, ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ಐಸಿಎಆರ್), ಆಂಧ್ರ ವಿಶ್ವವಿದ್ಯಾಲಯ, ಗೋಖಲೆ ಇನ್ಸ್‌ಟಿಟ್ಯೂಟ್ ಪುಣೆ, ಕಾರ್ನಲ್ ವಿ.ವಿ., ಇತಾಕಾ ನ್ಯೂಯಾರ್ಕ್ ಸಂಸ್ಥೆಗಳು ಮತ್ತು ಸೈನ್ಸ್ ಮತ್ತು ಪ್ರೊಸೀಡಿಂಗ್ಸ್ ಆಫ್ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ಯುಎಸ್‌ಎಯಂಥ ನಿಯತಕಾಲಿಕೆಗಳ ವರದಿಗಳು ಭಾರತದಲ್ಲಿ ಬಿಟಿ ಹತ್ತಿಯ ಬೃಹತ್ ಯಶಸ್ಸನ್ನು ದಾಖಲಿಸಿವೆ. ದೇಶದ ಹತ್ತಿ ಬೆಳೆ ಪ್ರದೇಶದ ಶೇ 95ರಷ್ಟರಲ್ಲಿ ಬಿಟಿ ಕಾಟನ್ ಬೆಳೆಯಲಾಗುತ್ತಿದೆ. ಪರಿಸರ ರಕ್ಷಣೆ, ಕೀಟನಾಶಕಗಳಿಗೆ ಮನುಷ್ಯರು ತುತ್ತಾಗುವುದು ಮತ್ತು ಸಾಮಾಜಿಕ ಹಾಗೂ ಆರ್ಥಿಕ ಲಾಭಗಳಂಥ ನಿವ್ವಳ ಲಾಭಗಳು ಈ ಬಿಟಿ ಹತ್ತಿಯಿಂದ ಉಂಟಾಗಿರುವುದು ಸುಸ್ಪಷ್ಟ.
ಟಿಇಸಿಗೆ ಡಾ ವಿ ಎಲ್ ಚೋಪ್ರಾ ಬದಲಿಗೆ ಡಾ. ಆರ್‌ಎಸ್. ಪರೋಡಾರ ಅಧಿಕಾರ ವಹಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ ಸೂಚಿಸಿದ ಕೂಡಲೇ ಜಿಎಂ ವಿರೋಧಿ ಲಾಬಿದಾರರು ಮೊಸಳೆ ಕಣ್ಣೀರು ಆರಂಭಿಸಿದರು. ಅಷ್ಟೇ ಅಲ್ಲ, ಡಾ ಆರ್ ಎಸ್ ಪರೋಡಾ ಅವರ ವೃತ್ತಿ ನೈಪುಣ್ಯತೆಯ ಮೇಲೆಯೇ ಸಂಶಯ ವ್ಯಕ್ತಪಡಿಸಿದರು. ಆದರೆ ಜಿಎಂ ವಿರೋಧಿ ಸದಸ್ಯ ಡಾ. ಪಿ. ಸಿ. ಕೇಶವನ್ ಇದೇ ಸಮಿತಿಯಲ್ಲಿರುವುದು ಇವರ ಗಮನಕ್ಕೆ ಬರಲೇ ಇಲ್ಲ. ಹಾಗೆಯೇ ಜಿಎಂ ವಿರೋಧಿ ಲಾಬಿಯ 'ಪೋಸ್ಟರ್ ಬಾಯ್' ಡಾ. ಪಿ ಎಂ ಭಾರ್ಗವ ಅವರ ಪ್ರಭಾವಕ್ಕೆ ಒಳಗಾಗಿರುವ ಡಾ ಇಮ್ರಾನ್ ಸಿದ್ದಿಕಿ ಇರುವುದು ಕೂಡಾ ಇವರ ಗಣನೆಗೆ ಬಂದೇ ಇಲ್ಲ.
ಇವರಿಗಿಂತ ಕೃಷಿ ಹಾಗೂ ಆಧುನಿಕ ಬಯಾಲಜಿಯಲ್ಲಿ ಸಾಕಷ್ಟು ಪರಿಣಿತಿ ಮತ್ತು ಕ್ಷೇತ್ರ ಅನುಭವ ಇರುವ ಇತರ ತಜ್ಞರೇ ಎಷ್ಟೋ ಮೇಲು. ಡಾ.ಪರೋಡಾರನ್ನು ಉಳಿಸಿಕೊಳ್ಳಿ, ಇವರನ್ನು ಹೊರತುಪಡಿಸಿ ಕೃಷಿ, ಅಗ್ರಾನಮಿ, ಆಹಾರ ಸುರಕ್ಷತೆ ಮತ್ತು ಜಿಎಂ ಬೆಳೆಯ ಪರಿಸರ ವಿಶ್ಲೇಷಣೆಯಲ್ಲಿ ಇಷ್ಟು ಆಳವಾದ ಜ್ಞಾನ ಇನ್ಯಾರಿಗೂ ಇಲ್ಲ. ಇಂಥಾ ತಜ್ಞರನ್ನು ಟಿಇಸಿಯಿಂದ ಹೊರಗಿಡಬೇಡಿ. ಜಿಎಂ ತಳಿಯ ರಕ್ಷಣೆಯಲ್ಲಿ ಯಾವುದೇ ಸೈದ್ಥಾಂತಿಕ ಮತ್ತು ವೈಜ್ಞಾನಿಕ ವಸ್ತುನಿಷ್ಠತೆಯನ್ನು ಟಿಇಸಿ ವ್ಯಕ್ತಪಡಿಸಿಲ್ಲ. ಈ ಎಲ್ಲಾ ಅಂಶಗಳನ್ನು ಸಾರಾಸಗಟಾಗಿ ಗಾಳಿಗೆ ತೂರಲಾಗಿದೆ.
ಇದೇ ವೇಳೆ ಸಂಸದೀಯ ಸಮಿತಿಯು ಬಿಟಿ ಬದನೆಯ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿತ್ತು. ಆಗಲೂ ಮತ್ತದೇ ಪಟ್ಟಭದ್ರ ಹಿತಾಸಕ್ತಿಗಳು ರೊಚ್ಚಿಗೆದ್ದವು. ಆಧುನಿಕತೆ ವಿರೋಧಿ ಗಣಗಳು ಹೇಳುವ ಪ್ರಕಾರ ಭಾರತದಲ್ಲಿ 2200 ಪ್ರಬೇಧದ ಬದನೆ ಇವೆ. ಒಂದೊಮ್ಮೆ ಬಿಟಿ ಬದನೆ ಭಾರತಕ್ಕೆ ಕಾಲಿಡುತ್ತಿದ್ದಂತೆಯೇ ಈ ಎಲ್ಲಾ ಪ್ರಭೇದಗಳು ಕಣ್ಮರೆಯಾಗಲಿವೆ ಎಂದು ಬೊಬ್ಬಿಡಲು ಆರಂಭಿಸಿದವು. ಆದರೆ ವೈಜ್ಞಾನಿಕ ವರದಿಯೇ ಬೇರೆ. 200ಕ್ಕಿಂತ ಹೆಚ್ಚು ಬದನೆ ತಳಿಗಳು ದಾಖಲಾಗಿಯೇ ಇಲ್ಲ. ಇವುಗಳಲ್ಲೂ ಬಹುತೇಕ ಪ್ರಬೇಧಗಳು ಈಗ ಅಸ್ತಿತ್ವದಲ್ಲಿಲ್ಲ. ಇಷ್ಟಕ್ಕೂ ಇನ್ನೂ ಒಂದು ಮಹತ್ವದ ಸಂಗತಿಯೆಂದರೆ ಈಗ ಬೆಳೆಯಲಾಗುತ್ತಿರುವ ಬಹುತೇಕ ಅಂದರೆ ಶೇ 70ರಷ್ಟು ಬದನೆ ತಳಿಗಳನ್ನು ಆಧುನಿಕವಾಗಿ ಸಂಸ್ಕರಿಸಲಾಗಿದೆ. ತಾಂತ್ರಿಕ ಅಭಿವೃದ್ಧಿಗೊಳಿಸಿದ ತಳಿಯನ್ನೇ ಕೃಷಿಕರು ಬದನೆ ಬೆಳೆಗೆ ಬಳಸುತ್ತಿದ್ದಾರೆ. ಪ್ರಬೇಧಗಳ ವ್ಯಾಪ್ತಿಯನ್ನು ಹೊಂದುವ ಗ್ರಾಹಕರ ಆಸಕ್ತಿಯಷ್ಟೇ, ಕೃಷಿಕರಿಗೆ ಹೆಚ್ಚು ಇಳುವರಿ ಕೊಡುವ ಬೆಳೆ ಬೆಳೆಯುವುದೂ ಕೂಡಾ ಪ್ರಾಮುಖ್ಯ. ಇವೆರಡರ ಸಮತೋಲನವೇ ಆಧುನಿಕ ಕೃಷಿ. ಕೃಷಿಕರಿಗೆ ಲಾಭವಾದರೆ ಗ್ರಾಹಕರಿಗೆ ಅಗ್ಗದ ದರದಲ್ಲಿ ಪೌಷ್ಠಿಕಾಂಶ ದೊರೆಯುವ ಹೊಸ ಅವಕಾಶವಿದು.
ಭಾರತದಲ್ಲಿ ಕೇವಲ ಒಂದೇ ರೀತಿಯ ಬಿಟಿ ಬದನೆಯನ್ನು ಅಭಿವೃದ್ಧಿಗೊಳಿಸಿಲ್ಲ. ತಮಿಳುನಾಡಿನ ಕೊಯಮತ್ತೂರು ಕೃಷಿ ವಿಶ್ವವಿದ್ಯಾಲಯ ಮತ್ತು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಟಿ ಬದನೆಯ ಹಲವು ವೈವಿಧ್ಯಗಳನ್ನು ಸಂಶೋಧಿಸಲಾಗಿದೆ. ಸುಮಾರು 8 ವರ್ಷಗಳ ಸತತ ಪರಿಶ್ರಮದಿಂದ ವಿಜ್ಞಾನಿಗಳು ಈ ಸಂಶೋಧನೆ ಮಾಡಿದ್ದಾರೆ. ಅಷ್ಟೇ ಅಲ್ಲ, ಜಿಇಎಸಿಯಿಂದ ಅನುಮತಿ ಪಡೆಯುವುದಕ್ಕೂ ಮೊದಲು ಇಬ್ಬರು ಜಾಗತಿಕ ಮಟ್ಟದ ತಜ್ಞರು ಪರೀಕ್ಷಿಸಿ ಪ್ರಮಾಣ ಪತ್ರ ನೀಡಿದ್ದಾರೆ.
ಇಷ್ಟಾಗಿಯೂ ಕೊನೆಗೆ ದೇಶದ 7 ನಗರಗಳ ಸಾರ್ವಜನಿಕರ ಜತೆ ಸಂವಾದ ನಡೆಸಿದ ಜೈರಾಂ ರಮೇಶ್ ಇದೇ ಅನಿರ್ದಿಷ್ಟಾವಧಿ ನಿಷೇಧವನ್ನೇ ಬಿಟಿ ಬದನೆ ಮೇಲೆ ಹೇರುವಂತಾಯಿತು. ಇದೇ ವೇಳೆ, ಅವರ ಕ್ಷೇತ್ರದಲ್ಲಿ ಪರಿಸರ ಸಂರಕ್ಷಣಾ ಎನಿನ್‌ಜಿಒಗಳು ಸ್ಥಾಪನೆಗೊಳ್ಳುವುದಕ್ಕೆ ಈ ಚಳವಳಿ ಕಾರಣವಾಯಿತು. ಹಾಗಂತ ಯಾವುದೇ ಸಮಯದಲ್ಲೂ ಈ ನಿಷೇಧಕ್ಕೆ ಬ್ರೇಕ್ ಬೀಳುವ ಲಕ್ಷಣವಿದೆ. ಈ ಮೂಲಕ ದೇಶದಲ್ಲಿ ಬಿಟಿ ಬದನೆಯ ಬೆಳೆಯಲ್ಲಿ ಕ್ರಾಂತಿ ಸೃಷ್ಟಿಯ ಸನ್ನಿವೇಶಕ್ಕೆ ಎದುರು ನೋಡಲಾಗುತ್ತಿದೆ.
ಐವರು ಸದಸ್ಯರ ಟಿಇಸಿ ಸಮಿತಿ ಜಿಎಂ ತಳಿಯನ್ನು ಸುರಕ್ಷತಾ ಪರೀಕ್ಷೆಗೆ ನಾರ್ವೆ ಮೂಲದ ಬಯೋಸೇಫ್ಟಿ ಸಂಸ್ಥೆಯಾದ ಜೆನೋಕ್‌ಅನ್ನು ನೇಮಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಆದರೆ ದುರಾದೃಷ್ಟವಶಾತ್ ಜೆನೋಕ್ ಜಿಎಂ ವಿರೋಧಿ ಸಂಸ್ಥೆ. ಡಾ. ಎಸ್. ಸೆರಾಲಿನಿ, ಜಾಕ್ ಹೇನ್ಮನ್, ಜುಡಿ ಕಾರ್ಮನ್ ಮತ್ತು ಪಿ. ಭಾರ್ಗವ ಇವರನ್ನು ಈ ಸಂಸ್ಥೆ ಒಳಗೊಂಡಿದೆ. ಐರೋಪ್ಯ ಖಂಡದ ಯಾವುದೇ ದೇಶವೂ ಜಿಎಂ ತಳಿಯ ಪರೀಕ್ಷೆಗಾಗಿ ಜೆನೋಕ್ ನೆರವು ಪಡೆದಿಲ್ಲ, ಶಿಫಾರಸನ್ನೂ ಮಾಡಲಾಗಿಲ್ಲ. ಆದರೆ ಟಿಇಸಿ ಮಾತ್ರ ಶಿಫಾರಸು ಮಾಡಿದ್ದರ ಅರ್ಥವೇ ಇದು- ಜಾಗತಿಕ ಸ್ಫರ್ಧೆಯಲ್ಲಿ ಯುರೋಪ್ ಕುಸಿತ ಕಾಣುತ್ತಿದ್ದಂತೆಯೇ ಅವರದೇ ನಿರ್ದೇಶನದಲ್ಲಿ ಉತ್ತರ ಅಮೆರಿಕದಲ್ಲಿ ಈ ಸಂಸ್ಥೆ ಸ್ಥಾಪನೆಯಾಗಿದೆ. ಅಮೆರಿಕವನ್ನು ಸೂಜಿಮೊನೆಯಂಚಿಗೆ ನಿಲ್ಲಿಸಲು ಎಲ್ಲಾ ರೀತಿಯ ಕೃತ್ಯಕ್ಕೂ ಇದು ನೆರವು ನೀಡುತ್ತಿದೆ. ಇಲ್ಲಿನ ತಜ್ಞರು ಜಿಎಂ ತಂತ್ರಜ್ಞಾನದ ಪರೀಕ್ಷೆ ಮತ್ತು ಸಂಶೋಧನೆಯಲ್ಲಿ ತೊಡಗಿಕೊಂಡು ಅವುಗಳನ್ನು ಹೇಗೆ ವಿನಾಶದಂಚಿಗೆ ತಂದು ನಿಲ್ಲಿಸಬಹುದು ಎಂಬ ಬಗ್ಗೆಯೇ ಚಿಂತನೆ ನಡೆಸುತ್ತಿದ್ದಾರೆ. ಜಿಎಂ ತಂತ್ರಜ್ಞಾನವನ್ನು ಅರ್ಥೈಸಿಕೊಂಡಿರುವ ಹಾಗೂ ತಳಿಗಳನ್ನು ಅಭಿವೃದ್ಧಿ ಪರೀಕ್ಷಿಸುವ, ಸುರಕ್ಷತೆ ಪರಿವೀಕ್ಷಿಸುವ ಯಾವ ಸಂಸ್ಥೆಯನ್ನೂ ಟಿಇಸಿ ಶಿಫಾರಸು ಮಾಡಿಲ್ಲ.
ಹರ್ಬಿಸೈಡ್ ಟಾಲರೆಂಟ್ (ಎಚ್ಟಿ) ತಳಿಯನ್ನು ಟಿಇಸಿ ಸಾರಾಸಗಟಾಗಿ ನಿಷೇಧಿಸಲು ಶಿಫಾರಸು ಮಾಡಿದೆ. ಇದು ಅತ್ಯಂತ ಅವಿವೇಚನಾಯುಕ್ತ ಕೃತ್ಯ. ಶುದ್ಧ ಜಿಎಂ ತಳಿ ವಿರೋಧಿಗಳ ಉದ್ದೇಶವಿದು. ಇದಕ್ಕೆ ಕೊಡುವ ಕಾರಣವಂತೂ ತೀರಾ ಬಾಲಿಶ. ಈ ತಳಿಯಿಂದಾಗಿ ಬಡ ಕೃಷಿ ಕಾರ್ಮಿಕರು, ಮಹಿಳೆಯರು ಹಾಗೂ ಅವರ ಮಕ್ಕಳು ಇದರಿಂದ ಬಾಧೆಗೊಳಗಾಗುತ್ತಾರೆ ಎಂಬುದಾಗಿ ಟಿಇಸಿ ಕಾರಣ ನೀಡಿದೆ! ಕೂಲಿ ಕಾರ್ಮಿಕರಿಗೆ ಇದರಿಂದ ಯಾವ ಅನಾನುಕೂಲ ಉಂಟಾಗಲಿದೆ ಎಂಬುದು ವರದಿಯಲ್ಲಿ ಸ್ಪಷ್ಟವಾಗಿಯೇ ಇಲ್ಲ. ಇಡೀ ದೇಶದಲ್ಲಿ ಕೃಷಿ ಕಾರ್ಮಿಕರ ಸ್ಪಷ್ಟ ಕೊರತೆ ಎದ್ದು ಕಾಣುತ್ತಿದೆ. ಅಷ್ಟೇ ಅಲ್ಲ, ದೇಶದೆಲ್ಲೆಡೆ ಕೃಷಿಕರು ಕಡಿಮೆ ಮಾನವ ಸಂಪನ್ಮೂಲದಲ್ಲಿ ಹೆಚ್ಚು ಲಾಭ ಮತ್ತು ಉತ್ತಮ ಆದಾಯಕ್ಕಾಗಿ ಎದುರು ನೋಡುತ್ತಿರುವಾಗ ಟಿಇಸಿಯ ಇಂಥದ್ದೊಂದು ನಿರ್ಧಾರ ಅತ್ಯಂತ ಹೇಯ. ಕಳೆಯಿಂದಾಗಿ ಪ್ರತಿ ವರ್ಷ ಸುಮಾರು 30-40 ಪ್ರತಿಶತ ಬೆಳೆನಾಶವಾಗುತ್ತಿದೆ. ಕಳೆ ನಿರ್ವಹಣೆಯ ಅಗತ್ಯ ಕೇವಲ ಬಿಟಿ ಬದನೆ ಅಥವಾ ಬಿಟಿ ಬೆಳೆಗಳಲ್ಲಿ ಮಾತ್ರವಲ್ಲ. ಇಡೀ ದೇಶದ ಎಲ್ಲಾ ಬೆಳೆಗಳಿಗೂ ಅಗತ್ಯವಿದೆ. ಸರ್ಕಾರ ಇನ್ನಾದರೂ ಕಣ್ತರೆಯಬೇಕು. ಜಿಎಂ ತಂತ್ರಜ್ಞಾನ ಕೇವಲ ದೇಶದ ಕೃಷಿ ಉತ್ಪಾದನೆಗೆ ನೆರವಾಗುವುದಲ್ಲ, ಬದಲಿಗೆ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಇದು ಅತ್ಯಗತ್ಯ. ಈ ನಿಟ್ಟಿನಲ್ಲಿ ಸರ್ಕಾರ ಜಿಎಂ ತಳಿಗಳನ್ನು ಬೆಂಬಲಿಸಬೇಕು. ಇನ್ನಷ್ಟು ಸಂಶೋಧನೆಗಳಿಗೆ ಪ್ರೋತ್ಸಾಹಿಸಬೇಕು. ಈ ಬಗ್ಗೆ ಸಮಾಜಮುಖಿ ವರದಿಗಳು, ವಿಶ್ಲೇಷಣೆಗಳನ್ನು ಸರ್ಕಾರ ಪರಿಗಣಿಸಬೇಕು.
- ಪ್ರೊ. ಶಾಂತು ಶಾಂತಾರಾಮ್
ಐಯೋವ ರಾಜ್ಯ ಕೃಷಿ ವಿವಿ
Shanthus@iastate.edu
Advertisement