ಬೆಳಗಾವಿಯ ಭ್ರಷ್ಟ ಅಧಿಕಾರಿಗಳಿಗೆ ಬರೆ ಹಾಕಿದ ಲೋಕಾಯುಕ್ತರು

Updated on

ನಾಗರಿಕರಿಗೆ ಸಹಜವಾಗಿ ಸಲ್ಲಬೇಕಾದ ಕೆಲವು ಸೇವೆಗಳಿಗೂ ಸಹ ಸರ್ಕಾರಿ ಸಿಬ್ಬಂದಿಗಳು ಲಂಚ ಕೇಳುತ್ತಾರೆ ಅಥವಾ ಅನಾವಶ್ಯಕವಾಗಿ ಹಿಂಸೆ ಕೊಡುತ್ತಾರೆ ಎಂದು ಬಹಳಷ್ಟು ದೂರುಗಳು ಕೇಳಿ ಬರುತ್ತವೆ. ಸಾಮಾನ್ಯವಾಗಿ ಆ ದೂರುಗಳನ್ನು ಸರ್ಕಾರದ ಮಟ್ಟದಿಂದ ಅಥವಾ ಜಿಲ್ಲಾ ಮಟ್ಟಗಳಿಂದ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಸರಿಪಡಿಸಲು ಹೇಳಿದರೂ ಸಹ ನಾಗರಿಕರಿಗೆ ನ್ಯಾಯ ಸಿಗುವುದಿಲ್ಲ. ಏಕೆಂದರೆ, ಕೆಲವೊಮ್ಮೆ ಮೇಲಧಿಕಾರಿಗಳು ಸಹ ಕಿರಿಯ ಅಧಿಕಾರಿಗಳೊಂದಿಗೆ ಶಾಮೀಲಾಗಿರುತ್ತಾರೆ. ಆಗ ನಿಷ್ಪಕ್ಷವಾದಂತಹ ಒಂದು ಸಂಸ್ಥೆ ನ್ಯಾಯವನ್ನು ಒದಗಿಸಬೇಕಾದ ಅಗತ್ಯವಿರುತ್ತದೆ. ಇಂತಹ ಒಂದು ವ್ಯವಸ್ಥೆಯನ್ನು ದೇಶದಲ್ಲಿ ಪ್ರಪ್ರಥಮವಾಗಿ ಕರ್ನಾಟಕ ರಾಜ್ಯ, ಲೋಕಾಯುಕ್ತ ಅಧಿನಿಯಮದ ಮೂಲಕ 1985 ರಲ್ಲಿ ಜಾರಿಗೆ ತಂದಿತ್ತು. 2006ರಲ್ಲಿ ಲೋಕಾಯುಕ್ತರು ಪ್ರತಿ ಜಿಲ್ಲೆಗೆ ಹೋಗಿ ಸಾರ್ವಜನಿಕರಿಗೆ ಹೆಚ್ಚು ತೊಂದರೆಗಳನ್ನು ಕೊಡುತ್ತಿರುವ ಇಲಾಖೆಗಳ ತಪಾಸಣೆ ಮಾಡಿ ದೂರುಗಳನ್ನು ಸ್ವೀಕರಿಸಲು ಕ್ರಮ ಜರುಗಿಸಿತ್ತು. ಅದೇ ರೀತಿ ಬೆಳಗಾವಿಗೆ ಸಹ ಲೋಕಾಯುಕ್ತರು ತಮ್ಮ ತಂಡದೊಂದಿಗೆ ಮೂರು ದಿವಸದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಬೆಳಗಾವಿಗೆ ಲೋಕಾಯುಕ್ತರ ಭೇಟಿ ನನ್ನ ಆಡಳಿತ ಜೀವನದ ಅವಿಸ್ಮರಣೀಯ ಅನುಭವವಾಗಿದೆ.  
ಸನ್ಮಾನ್ಯ ಲೋಕಾಯುಕ್ತರು ಪ್ರತೀ ತಾಲೂಕಿನಲ್ಲಿ ಬೆಳಿಗ್ಗೆ ಒಂಬತ್ತರಿಂದ ಹನ್ನೊಂದು ಗಂಟೆಯವರೆಗೆ ಅನಿರೀಕ್ಷಿತವಾಗಿ ತಪಾಸಣೆಯನ್ನು ಮಾಡಿದರು. ನಂತರ ಬೆಳಿಗ್ಗೆ ಹನ್ನೊಂದು ಗಂಟೆಯಿಂದ ರಾತ್ರಿ ಒಂಬತ್ತು ಗಂಟೆಗಳವರೆಗೂ ನಿರಂತರವಾಗಿ ಜನ ಸಾಮಾನ್ಯರ ದೂರುಗಳನ್ನು ಒಂದೊಂದಾಗಿ ಆಲಿಸುತ್ತಾ, ಸ್ಥಳದಲ್ಲಿಯೇ ಸಂಬಂಧಪಟ್ಟ ಇಲಾಖೆ ಅಧಿಕಾರಿಯ ವಿಚಾರಣೆ ಮಾಡಿ ನಿರ್ಣಯ ಘೋಷಣೆ ಮಾಡುತ್ತಿದ್ದರು. ಅವರು ವಿಶೇಷವಾಗಿ ಮೂರು ಇಲಾಖೆಗಳ ಮೇಲೆ ಗಮನವಿಟ್ಟಿದ್ದರು. ಮೊದಲನೆಯದಾಗಿ, ಆರೋಗ್ಯ ಇಲಾಖೆಗಳಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಲಭ್ಯವಿರುವ ಸೇವೆಗಳ ಬಗ್ಗೆ ಅವರು ಅಲ್ಲಿ ಬಂದಿರುವ ರೋಗಿಗಳಿಂದ ವಿಚಾರಿಸುತ್ತಾ ಇದ್ದರು. ಹೆರಿಗೆ ಅಥವಾ ಇನ್ನಿತರ ಶಸ್ತ್ರಚಿಕಿತ್ಸೆಗೆ ಬಂದಿರುವ ರೋಗಿಗಳಿಂದ ಅಲ್ಲಿನ ಕೆಲಸಗಾರರು ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ದೂರು ಕೇಳಿಬಂತು. ಮಾತ್ರವಲ್ಲ, ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ನೀಡಬೇಕಾದ ಆಹಾರದಲ್ಲಿ ಗುಣಮಟ್ಟದ ಕೊರತೆ ಇದ್ದು, ಜೊತೆಗೆ ಸರ್ಕಾರಿ ಔಷಧಾಲಯದಲ್ಲಿ ಅತಿ ಮುಖ್ಯ ಔಷಧಗಳು ಇರಲಿಲ್ಲ ಎನ್ನುವುದು ತಿಳಿಯಿತು. ಆಸ್ಪತ್ರೆಗಳ ಶೌಚಾಲಯಗಳು ಸುತ್ತ ಮುತ್ತಲ ಚರಂಡಿ ಅಥವಾ ಪರಿಸರ ಸಹ ಸ್ವಚ್ಛವಾಗಿರದೇ ಇದ್ದುದನ್ನು ಅಧಿಕಾರಿಗಳು ತುಂಬಾ ಗಂಭೀರವಾಗಿ ಗಮನಿಸುತ್ತಿದ್ದರು. ಆಸ್ಪತ್ರೆಗಳಲ್ಲಿ ಸಿಬ್ಬಂದಿಯ ಕೊರತೆಯಿಂದ ಅಥವಾ ನಿರ್ವಹಣೆಯ ನಿರ್ಲಕ್ಷ್ಯದಿಂದ ಸಮಯಕ್ಕೆ ಸರಿಯಾಗಿ ಸಾಮಾಗ್ರಿಗಳ ಸರಬರಾಜು ಆಗದೇ ಅಲ್ಲಿಗೆ ಹಣ ಇದ್ದವರು ಬರಲು ಇಷ್ಟಪಡುವುದಿಲ್ಲ. ಆದರೆ ಬಡವರು ಮಾತ್ರ ನಿರ್ವಾಹವಿಲ್ಲದೆ ಈ ಒಂದು ವ್ಯವಸ್ಥೆಗೆ ಒಗ್ಗಿಕೊಂಡಿರುತ್ತಾರೆ. ಸರ್ಕಾರದಿಂದ ಎಲ್ಲಾ ಸಂಪನ್ಮೂಲಗಳನ್ನು ಆಸ್ಪತ್ರೆಗಳಿಗೆ ಒದಗಿಸಿದ್ದರೂ ಸಹ ಬಡವರಿಗೆ ಗುಣಮಟ್ಟದ ಸೇವೆಯನ್ನು ನೀಡದೇ ಇರುವುದು ಭ್ರಷ್ಟಾಚಾರದ ಇನ್ನೊಂದು ರೂಪವೇ. ಆಸ್ಪತ್ರೆಗಳ ಆಡಳಿದಲ್ಲಿ ಇರುವವರು ರೋಗಿಗಳ ಸೇವೆಯೇ ಮುಖ್ಯ ಧ್ಯೇಯವೆಂದು ಭಾವಿಸದೆ ಸಣ್ಣಪುಟ್ಟ ಖರೀದಿಗಳಲ್ಲಿ ಮತ್ತು ಗುತ್ತಿಗೆದಾರರ ಬಳಿ ದಳ್ಳಾಳಿ ರುಸುಮನ್ನು ಪಡೆದು ಭ್ರಷ್ಟಾಚಾರದ ರಾಯಭಾರಿಗಳಾಗಿರುತ್ತಾರೆ. ಯಾವುದೇ ಖರೀದಿಯಲ್ಲಿ ಮೂರು ಕೊಟೇಶನ್ನುಗಳನ್ನು ತೆಗೆದುಕೊಳ್ಳಬೇಕು ಎಂಬ ನಿಯಮವಿದೆ. ಆದರೆ ಅಸ್ತಿತ್ವದಲ್ಲಿಯೇ ಇರದ ಸಂಸ್ಥೆಗಳ ಲೆಟರ್ ಪ್ಯಾಡುಗಳ ಮೇಲೆ ಒಬ್ಬನೇ ಮಾರಾಟಗಾರ ಮೂರು ಕೊಟೇಶನ್ನುಗಳನ್ನು ಕೊಟ್ಟು ಅವರಿಗೆ ಇಷ್ಟವಾದ ಬೆಲೆಯಲ್ಲಿ ಸರ್ಕಾರಕ್ಕೆ ಸಾಮಾನುಗಳನ್ನು ನೀಡುತ್ತಿದ್ದುದು ಸಾಮಾನ್ಯವಾಗಿತ್ತು. ವಾಣಿಜ್ಯ ತೆರಿಗೆ ಇಲಾಖೆಯಿಂದ ಈ ಬೋಗಸ್ಸು ಸಂಸ್ಥೆಗಳ ವಿಚಾರಣೆ ಮಾಡಿ ವರದಿ ನೀಡಲು ಲೋಕಾಯುಕ್ತರು ಸೂಚಿಸಿದರು.
ಎರಡನೆಯದಾಗಿ, ಲೋಕಾಯುಕ್ತರು ಗಮನ ಕೊಟ್ಟಿದ್ದು, ಕಂದಾಯ ಇಲಾಖೆಯಿಂದ ವೃದ್ಧಾಪ್ಯ ವೇತನವನ್ನು ಅಥವಾ ಅಂಗವಿಕಲರ ಪಿಂಚಣಿಯನ್ನು ನೀಡುವ ವ್ಯವಸ್ಥೆಯತ್ತ. ಸಂಬಂಧಪಟ್ಟ ಕಚೇರಿಗಳಲ್ಲಿ ಹೋಗಿ ಗುಮಾಸ್ತರ ಕಡತಗಳನ್ನು ಹೊರತೆಗೆದು ಅವರು ಈಗಾಗಲೇ ತಿರಸ್ಕರಿಸಿದ ಪಿಂಚಣಿ ಅರ್ಜಿಗಳನ್ನು ಅವರು ಪರಿಶೀಲಿಸಿದರು.  ಸದರಿ ಕಡತಗಳಲ್ಲಿ ಅರ್ಜಿದಾರರು ಅನರ್ಹರಾಗುವುದಕ್ಕೆ ಅವರಿಗೆ ಹದಿನೆಂಟು ವರ್ಷದ ಮಗ ಇದ್ದಾನೆ ಎನ್ನುವುದು ಕಾರಣವಾಗಿತ್ತು. ಕಂದಾಯ ಇಲಾಖೆಯ ಸುತ್ತೋಲೆಯಂತೆ ಒಬ್ಬ ವಿಧವೆಗೆ ಹದಿನೆಂಟು ವರ್ಷಕ್ಕಿಂತ ಹೆಚ್ಚು ವಯಸ್ಸಿನ ಮಗ ಇದ್ದರೆ ಪಿಂಚಣಿ ಕೊಡುವ ಅವಶ್ಯಕತೆ ಇಲ್ಲ.  ಆದರೆ, ಲೋಕಾಯುಕ್ತರ ಪ್ರಶ್ನೆ ಏನೆಂದರೆ, ಒಂದು ವೇಳೆ ಆ ಮಗ ನಿರುದ್ಯೋಗಿ ಆಗಿದ್ದರೆ ತನ್ನ ಪೋಷಣೆ ಹಾಗೂ ತನ್ನ ತಾಯಿ ಪೋಷಣೆ ಹೇಗೆ ಮಾಡುತ್ತಾನೆ ಎಂಬುದು. ಈ ಬಗ್ಗೆ ಸರಿಯಾಗಿ ವಿಚಾರಣೆ ಮಾಡದೇ ಕೇವಲ ನಿಯಮಗಳನ್ನು ನೇರವಾಗಿ ಪಾಲಿಸುವ ನೆಪದಲ್ಲಿ ಸರ್ಕಾರದಿಂದ ಬಡವರಿಗೆ ಕೊಡತಕ್ಕಂಥ ಸೌಲಭ್ಯವನ್ನು ವಂಚಿತಗೊಳಿಸುವುದು ಉತ್ತಮ ಆಡಳಿತದ ಅಂಶ ಆಗಿರುವುದಿಲ್ಲ. ಅಲ್ಲದೇ, ಕೆಲವು ಪ್ರಕರಣಗಳಲ್ಲಿ ಲಂಚ ತೆಗೆದುಕೊಂಡು ಪಿಂಚಣಿ ನೀಡಲಾಗುತ್ತಿದೆ ಎಂದು ನಾಗರಿಕರು ದೂರು ಕೊಟ್ಟ ಹಿನ್ನೆಲೆಯಲ್ಲಿ, ಈ ವ್ಯವಸ್ಥೆಯನ್ನು ಸರಿಪಡಿಸಲು ಸುತ್ತೋಲೆಯನ್ನು ಪರಿಷ್ಕರಿಸಲಾಯಿತು.  
ಬೃಹತ್ ಭ್ರಷ್ಟಾಚಾರದ ಇನ್ನೊಂದು ಕೇಂದ್ರವಾಗಿದ್ದುದು ಮುದ್ರಾಂಕ ಹಾಗೂ ಆಸ್ತಿ ನೋಂದಣಿ ಇಲಾಖೆ. ಒಬ್ಬ ವ್ಯಕ್ತಿ ಯಾವುದೇ ಆಸ್ತಿಯನ್ನು ಕ್ರಯಕ್ಕೆ ತೆಗೆದುಕೊಂಡರೆ, ಈ ಇಲಾಖೆಯಲ್ಲಿ ನೋಂದಣಿ ಮಾಡಿಸುವುದು ಅಗತ್ಯವಾಗಿರುತ್ತದೆ. ಇಲ್ಲವಾದಲ್ಲಿ ಅವರು ಅಧಿಕೃತವಾಗಿ ಭೂಮಿ ಅಥವಾ ಆಸ್ತಿ ಮಾಲೀಕರು ಆಗುವುದಿಲ್ಲ ಹಾಗೂ ಭೂಮಿಯ ಹಕ್ಕುಪತ್ರದಲ್ಲಿ ಅವರ ಹೆಸರು ಸಹ ಬದಲಾವಣೆ ಆಗುವುದಿಲ್ಲ. ಆದರೆ ಜನರು ಮಾರುಕಟ್ಟೆಯಲ್ಲಿ ಇರುವ ನೈಜ ಬೆಲೆಯನ್ನು ತೋರಿಸದೇ ಕಡಿಮೆ ದರವನ್ನು ನಮೂದಿಸಿ ಒಪ್ಪಂದಗಳನ್ನು ಮಾಡುತ್ತಿದ್ದರು. ಅದರಿಂದ ಸರ್ಕಾರಕ್ಕೆ ನೀಡಬೇಕಾದ ಮುದ್ರಾಂಕ ಶುಲ್ಕ ಅನುಕ್ರಮವಾಗಿ ಕಡಿಮೆ ಮಾಡಲಾಗುತ್ತಿತ್ತು. ನೋಂದಣಿ ಅಧಿಕಾರಿ, ನಿಯಮದ ಪ್ರಕಾರ ಹಿಂದಿನ ಮೂರು ವರ್ಷದ ಮಾರುಕಟ್ಟೆ ದರ ಅಥವಾ ನೋಂದಣಿ ಆಗಿರುವ ಸರಾಸರಿ ದರವನ್ನು ಆಧರಿಸಿ ಶುಲ್ಕವನ್ನು ನಿಗದಿಪಡಿಸುವ ಅಧಿಕಾರವನ್ನು ಹೊಂದಿರುತ್ತಾರೆ. ನೈಜ ಮಾರುಕಟ್ಟೆ ಪರಿಸ್ಥಿತಿಯನ್ನು ವಿಚಾರಿಸುವ ಅಧಿಕಾರ ಅವರಿಗೆ ಸರ್ಕಾರ ನೀಡಿದೆ.  ಸರ್ಕಾರದ ಬೊಕ್ಕಸಕ್ಕೆ ಹಾನಿಯಾಗದಂತೆ ಸರಿಯಾದ ಶುಲ್ಕವನ್ನು ನಿಗದಿಪಡಿಸಿ ವಸೂಲಿ ಮಾಡುವಂಥ ಜವಾಬ್ದಾರಿ ಇರುವ ಈ ಇಲಾಖೆಯಲ್ಲಿ ವೈಯಕ್ತಿಕ ಲಾಭ ಪಡೆಯುವ ಉದ್ದೇಶದಿಂದ ಕಡಿಮೆ ಶುಲ್ಕವನ್ನು ನಿಗದಿಪಡಿಸುವ ಕ್ರಮದ ಬಗ್ಗೆ ಲೋಕಾಯುಕ್ತರಿಗೆ ಸುಮಾರು ದೂರುಗಳು ಬಂದಿದ್ದವು. ಯಾವ ನಾಗರಿಕರು ಲಂಚವನ್ನು ಕೊಡುವುದಿಲ್ಲವೋ ಅವರ ಆಸ್ತಿ ನೋಂದಣಿ ಆಗುತ್ತಿರಲಿಲ್ಲ ಅಥವಾ ಹೆಚ್ಚು ಶುಲ್ಕವನ್ನು ನಿಗದಿಪಡಿಸಿ  ಆತಂಕ ಮೂಡಿಸಲಾಗುತ್ತಿತ್ತು. ಲೋಕಾಯುಕ್ತರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದುದರಿಂದ ಇಲಾಖೆಯಲ್ಲಿ ಬಹಳಷ್ಟು ಸುಧಾರಣೆಗಳನ್ನು ಮಾಡಲು ಸಾಧ್ಯವಾಯಿತು. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಿ ಜನ ಜಾಗೃತಿ ಮೂಡಿಸಲಾಯಿತು.
ಸಾಮಾನ್ಯವಾಗಿ ನಾಗರಿಕರು ಸರ್ಕಾರಿ ನೌಕರರ ಬಗ್ಗೆ ದೂರು ನೀಡಲು ಹಿಂಜರಿಯುತ್ತಾರೆ.  ಏಕೆಂದರೆ, ಎಷ್ಟು ಸಲ ಲೋಕಾಯುಕ್ತರು ಅವರ ನೆರವಿಗೆ ಬರಬಹುದು? ದಿನನಿತ್ಯ ಅದೇ ಅಧಿಕಾರಿಗಳೊಂದಿಗೆ ಅವರು ವ್ಯವಹರಿಸಬೇಕಾಗುತ್ತದೆ.  ಒಮ್ಮೆ ಒಬ್ಬ ಅಧಿಕಾರಿಗಳ ಬಗ್ಗೆ ದೂರು ನೀಡಿ ಶಿಕ್ಷೆ ಕೊಡಿಸಿದರೆ ಮುಂದಿನ ದಿವಸಗಳಲ್ಲಿ ಅದೇ ಅಧಿಕಾರಿಯಿಂದ ಹೆಚ್ಚಿನ ಶೋಷಣೆ ಹಾಗೂ ಅಸಹಕಾರವನ್ನು ಅನುಭವಿಸಬೇಕಾಗುತ್ತದೆ. ಈ ಒಂದು ಕಾರಣದಿಂದ ಆಡಳಿತದಲ್ಲಿ ಇರುವ ಕೊರತೆಗಳು ಸಾಮಾನ್ಯವಾಗಿ ಬೆಳಕಿಗೆ ಬರುವುದಿಲ್ಲ. ಆದರೆ, ಲೋಕಾಯುಕ್ತರ ಮೇಲೆ ಇರುವ ವಿಶ್ವಾಸದಿಂದ ಸಹಸ್ರಾರು ನಾಗರಿಕರು ಬಹಿರಂಗವಾಗಿ ತಮ್ಮ ದೂರುಗಳನ್ನು ನೀಡಲು ಮುಂದೆ ಬಂದದ್ದು, ಪ್ರಜಾಪ್ರಭುತ್ವದ ಬಗ್ಗೆ ಜನರಿಗೆ ಇನ್ನೂ ನಂಬಿಕೆ ಬಲವಾಗಿದೆ ಎನ್ನುವುದನ್ನು ತೋರುತ್ತದೆ ಅಲ್ಲವೇ? ಒಂದು ರಾಜ್ಯದಲ್ಲಿ ಒಬ್ಬ ಲೋಕಾಯುಕ್ತರು ಮಾಡಬಹುದಾದ ಕೆಲಸವನ್ನು ಜಾಗೃತಗೊಂಡ ಜನರು ತಮ್ಮದೇ ಸಂಘಗಳನ್ನು ಕಟ್ಟಿಕೊಂಡು ಮಾಡಲು ಕಟಿಬದ್ಧರಾದರೆ, ಲಂಚ ಕೊಡುವುದಿಲ್ಲ ಎಂದು ಸಾರ್ವಜನಿಕವಾಗಿ, ಒಂದೊಂದು ದಿನ ಒಂದೊಂದು ಕಚೇರಿಯಲ್ಲಿ ಈ ಸಂದೇಶವನ್ನು ಸಾರಿದರೆ, ಜನರು ಜಾಗೃತರಾಗುತ್ತಾರೆ. ಅಧಿಕಾರಿಗಳೂ ಜಾಗೃತರಾಗುತ್ತಾರೆ. 'ಜನ ತಮ್ಮ ಹಕ್ಕು ಚಲಾಯಿಸಲು ಆರಂಭಿಸಿದಾಗ ಮಹಾತ್ಮ ಗಾಂಧಿಯವರ ಕನಸಿನ ರಾಮರಾಜ್ಯ ಸಾಕಾರವಾಗುತ್ತದೆ' ಎನ್ನುವ ಮಾತು ನಿಜವಾಗುತ್ತದೆ.
(ಮುಂದುವರೆಯುವುದು)

- ಶಾಲಿನಿ ರಜನೀಶ್, ಐಎಎಸ್
anisikeprabha@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com