ಬಾಹ್ಯಾಕಾಶದಲ್ಲೊಂದು ಹೊಸ ನಕ್ಷತ್ರವಾದ ಭಾರತ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಇಸ್ರೋದ "ಮಿಷನ್ ಮಾರ್ಸ್‌"...
ಬಾಹ್ಯಾಕಾಶದಲ್ಲೊಂದು ಹೊಸ ನಕ್ಷತ್ರವಾದ ಭಾರತ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಇಸ್ರೋದ "ಮಿಷನ್ ಮಾರ್ಸ್‌" (ಮಾರ್ಸ್ ಆರ್ಬಿಟರಿ ಮಿಷನ್) ಉಪಗ್ರಹ, ಯಶಸ್ವಿಯಾಗಿ ಉಡಾವಣೆಗೊಂಡಿದೆ. ಮಂಗಳವಾರ ಶ್ರೀಹರಿಕೋಟಾದಿಂದ ಪಿಎಸ್‌ಎಲ್‌ವಿಸಿ-25 ಉಡಾವಣಾ ವಾಹಕವು ಉಪಗ್ರಹದೊಂದಿಗೆ ಮಂಗಳನತ್ತ ತನ್ನ ಯಾನ ಆರಂಭಿಸಿದೆ. ಮಂಗಳಕ್ಕೆ ತಲುಪುವುದಕ್ಕೆ 9 ತಿಂಗಳ ಈ ಪಯಣ ನಡೆಸಲಿರುವ ಮಾರ್ಸ್ ಆರ್ಬಿಟರ್ ನಂತರ ಮಂಗಳ ಗ್ರಹದ ಕಕ್ಷೆಯಲ್ಲಿ ಸುತ್ತುಹಾಕಿ ಅಲ್ಲಿನ ವಾತಾವರಣದಲ್ಲಿ ಅನೇಕ ವೈಜ್ಞಾನಿಕ ಪರೀಕ್ಷೆಗಳನ್ನು ನಡೆಸಲಿದೆ. ಭಾರತದ ಈ ತಂತ್ರಜ್ಞಾನಿಕ ಸಾಹಸವನ್ನು ನೋಡಿ ಅನೇಕ ರಾಷ್ಟ್ರಗಳು ಕಣ್ಕಣ್ಣು ಬಿಡುತ್ತಿದ್ದಾವಾದರೂ, ಎಲ್ಲ ದೇಶಗಳಿಗಿಂತಲೂ ಹೆಚ್ಚಾಗಿ ಅಮೆರಿಕ ಭಾರತದ ಈ ಕಾರ್ಯಕ್ರಮದತ್ತ ಚಿತ್ತ ಅಲುಗಿಸದೇ ನೋಡುತ್ತಾ ಕುಳಿತಿರುವುದು ಸುಳ್ಳಲ್ಲ.  
"ಒಂದು ವೇಳೆ ಈ ಮಿಷನ್ ಯಶಸ್ವಿಯಾದರೆ, ಭಾರತಕ್ಕೆ ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತಷ್ಟು ಶಕ್ತಿ ಬರಲಿದೆ. ಇದರಿಂದಾಗಿ ಭಾರತ ಅಂತರಿಕ್ಷ ಸಂಶೋಧನೆಯಲ್ಲಿ ಚೀನಾ ಮತ್ತು ಜಪಾನ್‌ಗಳನ್ನು ಹಿಂದಿಕ್ಕಲಿರುವುದಂತೂ ನಿಶ್ಚಿತ"ಎಂದು ವಾಲ್ ಸ್ಟ್ರೀಟ್ ಜರ್ನಲ್ ಮಂಗಳವಾರ ವರದಿ ಮಾಡಿದೆ.
ಇದು ಭಾರತದ ಮೊದಲ ಮಂಗಳಯಾನವಾಗಿರುವುದರಿಂದ ಬಾಹ್ಯಾಕಾಶ ಕೇಂದ್ರದಲ್ಲಿ ತುಸು ಭಯಮಿಶ್ರಿತ ವಾತಾವರಣವಿರುವುದಂತೂ ನಿಜ. ಇದುವರೆಗೂ ಯಾವ ರಾಷ್ಟ್ರವೂ ಸಹ ತನ್ನ ಮೊದಲ ಪ್ರಯತ್ನದಲಿ ಯಶಸ್ವಿಯಾದ ಉದಾಹರಣೆಯಿಲ್ಲ. ಈ ವಿಷಯದಲ್ಲಿ ಭಾರತ ವಿಭಿನ್ನವಾಗಿ ನಿಲ್ಲಬಹುದಾ? ಜಪಾನ್ ಮಂಗಳನ ಅಂಗಳಕ್ಕೆ ನೆಗೆಯಲು 1999ರಲ್ಲೇ ಪ್ರಯತ್ನಪಟ್ಟು ವೈಫಲ್ಯ ಅನುಭವಿಸಿತ್ತು. ಇನ್ನು ಚೀನಾ ಎರಡು ವರ್ಷದ ಹಿಂದೆ ಹಾರಿಸಲು ಹೋದ ರಾಕೆಟ್ ನೆಲಕಚ್ಚಿತ್ತು!     
 "ಮಂಗಳ ಗ್ರಹಕ್ಕೆ ಉಪಗ್ರಹವೊಂದನ್ನು ಕಳುಹಿಸುವುದರಿಂದ ಭಾರತಕ್ಕೆ ಬಹಳ ಹೆಸರು ಬರುತ್ತದಾದರೂ, ನಾವು ಒಂದು ವಿಷಯವನ್ನು ಅರ್ಥಮಾಡಿಕೊಳ್ಳಬೇಕು. ನಾವು ಈ ಪ್ರಯತ್ನಕ್ಕೆ ಮುಂದಾಗಿರುವುದು ನಮ್ಮ ಹಿತದೃಷ್ಟಿಯಿಂದಲೇ. ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಗಳ ಪ್ರಮುಖ ಗುರಿ ಸಾಮಾನ್ಯ ಜನರಿಗೆ ಮತ್ತು ಸಮಾಜಕ್ಕೆ ಒಳ್ಳೆಯದಾಗಲಿ ಎಂಬುದು" ಎನ್ನುತ್ತಾರೆ ಇಸ್ರೋದ ಮುಖ್ಯಸ್ಥ ಕೆ. ರಾಧಾಕೃಷ್ಣನ್.
ಮಾರ್ಸ್ ಮಿಷನ್‌ಗೆ ತಗುಲುವ ವೆಚ್ಚ 83 ಮಿಲಿಯನ್ ಡಾಲರ್‌ಗಳು ಎಂದು ಅಂದಾಜಿಸಲಾಗಿದೆ. ಒಂದು ವೇಳೆ ನಮ್ಮ ಉಪಗ್ರಹ ಕೆಂಪು ಗ್ರಹದ ಕಕ್ಷೆಗೆ ತಲುಪಲು ಯಶಸ್ವಿಯಾಯಿತೆಂದರೆ, ಸೋವಿಯತ್ ಒಕ್ಕೂಟ, ಅಮೆರಿಕ ಮತ್ತು ಯುರೋಪ್‌ಗಳ ಸಾಲಲ್ಲಿ ಭಾರತವೂ ಹೆಮ್ಮೆಯಿಂದ ನಿಲ್ಲಲಿದೆ.  
ಇನ್ನು, ಭಾರತದಂಥ ಬಡರಾಷ್ಟ್ರವೊಂದು ಬಾಹ್ಯಾಕಾಶ ಯೋಜನೆಗೆ ಈ ಪರಿ ಖರ್ಚು ಮಾಡುವುದೇಕೆ, ಇದರ ಬದಲು ಆ ಹಣವನ್ನು ಬಡವರ ಉದ್ಧಾರಕ್ಕಾಗಿ ಬಳಸಬಹುದಲ್ಲವೇ? ಎಂದು ಪ್ರಶ್ನಿಸುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಈ ರೀತಿ ಪ್ರಶ್ನಿಸುವವರಿಗೆ ನಮ್ಮ ವಿಜ್ಞಾನಿಗಳ ಯಾವ ಉತ್ತರವೂ ಅರ್ಥವಾಗರದು. ಕಳೆದ ವರ್ಷ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಇದೇ ರೀತಿಯ ಪ್ರಶ್ನೆ ಎದುರಾದಾಗ ಅವರು, "ಒಂದು ರಾಷ್ಟ್ರ ಅಭಿವೃದ್ಧಿಯಾಗಬೇಕೆಂದರೆ, ಅಲ್ಲಿನ ತಂತ್ರಜ್ಞಾನವೂ ಮುಂಚೂಣಿಯಲ್ಲಿರಬೇಕು. ಈ ಹಿನ್ನೆಲೆಯಲ್ಲಿ ನಾವು ಈ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ನೋಡಬೇಕು" ಎಂದು ಹೇಳಿದ್ದರು.     
್ಡಹಾಗೆ ನೋಡಿದರೆ ಇಸ್ರೋದ ಬಜೆಟ್ ನಾಸಾದ ಬಜೆಟ್‌ಗಿಂತ ಬಹಳ ಕಡಿಮೆಯಿದೆಯಾದರೂ, ಇಸ್ರೋ ಇಂದು ಪ್ರಪಂಚದ ಅತ್ಯುತ್ತಮ ಆರು ಬಾಹ್ಯಾಕಾಶ ಸಂಸ್ಥೆಗಳಲ್ಲಿ ಒಂದಾಗಿದೆ ಎನ್ನುವುದಂತೂ ಸುಳ್ಳಲ್ಲ. ಈ ಮಾತನ್ನು ಪ್ರಪಂಚದ ಖ್ಯಾತ ಬಾಹ್ಯಾಕಾಶ ವಿಜ್ಞಾನಿಗಳೇ ಒಪ್ಪಿಕೊಳ್ಳುತ್ತಾರೆ.
ದಕ್ಷಿಣ ಏಷಿಯಾದ ಉಪ ಪ್ರಧಾನ ಕಾರ್ಯದರ್ಶಿ ಜೆಫ್ರಿ ಪ್ಯಾಟ್, ಭಾರತದ ಮಂಗಳ ಯಾನ ಯೋಜನೆಯಿಂದಾಗಿ ಭವಿಷ್ಯದಲ್ಲಿ 'ಅಮೆರಿಕ ಮತ್ತು ಭಾರತ' ಇನ್ನಷ್ಟು ಕ್ಲಿಷ್ಟಕರ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿವೆ" ಎನ್ನುತ್ತಾರೆ.
2012ರಲ್ಲಿ ನಾಸಾದ ಕ್ಯೂರಿಯಾಸಿಟಿ ರೋವರ್ ಮಂಗಳ ಗ್ರಹಕ್ಕೆ ಇಳಿದಾಗ ಭಾರತದ ಈ ಮಹತ್ವಾಕಾಂಕ್ಷಿ ಯೋಜನೆಯ ಬಗ್ಗೆ ಇದ್ದ ಕುತೂಹಲ ತುಸು ಕಡಿಮೆಯಾಗಿದ್ದು ನಿಜ. ಆದರೆ ಅಮೆರಿಕ ಮಾತ್ರ ಭಾರತದ ಈ ಹೆಜ್ಜೆಯನ್ನು ಬಹಳ ಉತ್ಸುಕವಾಗಿ ನೋಡುತ್ತಿದೆ. ಈ ತಿಂಗಳ ಕೊನೆಯಲ್ಲಿ ತಾನು ಕೈಗೊಳ್ಳಲಿರುವ ಮಾರ್ಸ್ ಅಟ್ಮಾಸ್ಫಿಯರ್ ವೊಲಾಟೈಲ್ ಎವಲ್ಯೂಷನ್ ಮಿಷನ್(ಮೇವೆನ್)ನ್ ಅಲ್ಲದೆ, ಭಾರತ ಕಲೆಹಾಕುವ ಮಾಹಿತಿಯೂ ಸೇರೆ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲೊಂದು ಸ್ಥಾಪನೆಯಾಗಬಹುದು ಎಂದು ಅಮೆರಿಕ ಲೆಕ್ಕಹಾಕುತ್ತಿದೆ.
ಅದಾಗಲೇ ಕ್ಯೂರಿಯಾಸಿಟಿ ಮತ್ತು ಇನ್ನೂ ಆರು ರೋವರ್‌ಗಳು ಮಂಗಳ ಗ್ರಹದಿಂದ ಭೂಮಿಗೆ ಅತಿ ಮಹತ್ವದ ಮಾಹಿತಿ ರವಾನಿಸುತ್ತಿವೆಯಾದರೂ, ಭಾರತ ಕಳುಹಿಸುತ್ತಿರುವ ಉಪಗ್ರಹ, ಜೀವಿಗಳು ಇದ್ದ ಕುರುಹು ಪತ್ತೆಹಚ್ಚಲು ಮೀಥೇನ್‌ನ ಇರುವಿಕೆಯ ಅಧ್ಯಯನ ನಡೆಸಲಿರುವುದರಿಂದ ಈ ಯೋಜನೆ ಯಶಸ್ವಿಯಾಗಲೆಂದು ಅಮೆರಿಕವೂ ಪ್ರಾರ್ಥಿಸುತ್ತಿದೆ.
ಈಗ ಸಮಯ ಬದಲಾಗಿದೆ. ಎಲ್ಲಾ ರಾಷ್ಟ್ರಗಳು ಸೇರಿಕೊಂಡು ಭೂಮಿಯ ಜೀವ ಸಂಕುಲಕ್ಕೆ ಉಪಯೋಗವಾಗಬಲ್ಲ ಕೆಲಸವನ್ನು ಒಟ್ಟಾಗಿ ಮಾಡಬೇಕಿದೆ. ಚಂದ್ರನನ್ನು ಯಾರು ಮೊದಲು ತಲುಪುತ್ತಾರೆ ಎನ್ನುವ ಸ್ಪರ್ಧೆ ಇದಲ್ಲ, ಇದು ಒಲಿಪಿಂಕ್ಸ್ ಓಟವೂ ಅಲ್ಲ. ಇದು ಜಗತ್ತಿಗೆ ವಿಜ್ಞಾನದ ಚಿಕ್ಕ ಸೇವೆಯಷ್ಟೆ" ಎಂದು ವಾಯ್ಸ್ ಆಫ್ ಅಮೆರಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಬಾಹ್ಯಾಕಾಶ ಪರಿಣತ ಜೇಮ್ಸ್ ಓಬರ್ಗ್ ಹೇಳುತ್ತಾರೆ. ಮುಂದುವರಿಯುತ್ತಾ, "ಭಾರತ ಇಂದು ಸಿದ್ಧಪಡಿಸಿರುವ ತಂತ್ರಜ್ಞಾನ ಅತಿ ಮಹತ್ವದ್ದಾಗಿದೆ. ಬಾಹ್ಯಾಕಾಶ ರಂಗದಲ್ಲಿ ಭಾರತ ದಿಟ್ಟ ಹೆಜ್ಜೆಯಿಟ್ಟಿರುವುದು ಸಂತಸದ ಸಂಗತಿ. ಇನ್ನು ಈ ಯೋಜನೆಯ ಹಿಂದೆ ಭಾರತಕ್ಕೆ ಉತ್ತಮ ಉದ್ದೇಶವಿದೆಯೆಂದೇ ನಾನು ಭಾವಿಸುತ್ತೇನೆ. ಇದು ಕೇವಲ ಭಾರತಕ್ಕಷ್ಟೇ ಅಲ್ಲ, ಇಡೀ ಪ್ರಪಂಚಕ್ಕೇ ಕೊಡುಗೆ ನೀಡಲಿರುವ ಯೋಜನೆ" ಎನ್ನುತ್ತಾರೆ.
ಹಿಂದು ಮಹಾಸಾಗರದಲ್ಲಿ ಚೀನಿ ನೌಕಾದಳದ ಪ್ರಾಬಲ್ಯವಿದೆಯೆಂದು ಗೊತ್ತಿದ್ದರೂ ಕೂಡ, ಇದೇ ವರ್ಷದ ಆಗಸ್ಟ್ ತಿಂಗಳಲ್ಲಿ ಭಾರತ ಮೊಟ್ಟ ಮೊದಲ ಬಾರಿಗೆ ನೌಕಾದಳಗಳ ಮೇಲೆ ಕಣ್ಗಾವಲಿಡಲು ಮಿಲಿಟರಿ ಸ್ಯಾಟಲೈಟ್ ಒಂದನ್ನು ಅಂತರಿಕ್ಷಕ್ಕೆ ಹಾರಿಬಿಟ್ಟಿತು. ಇದೇನೇ ಇದ್ದರೂ ಒಟ್ಟಲ್ಲಿ ಚೀನಿಯರಷ್ಟೇ ಅಲ್ಲದೆ, ನಮ್ಮ ನೆರೆರಾಷ್ಟ್ರಗಳೆಲ್ಲ ಭಾರತೀಯ ಬಾಹ್ಯಾಕಾಶ ಯೋಜನೆಯ ವೇಗವನ್ನು ನೋಡಿ ಕಕ್ಕಾಬಿಕ್ಕಿಯಾಗಿರುವುದಂತೂ ಸುಳ್ಳಲ್ಲ!

- ಉತ್ತರಾ ಚೌಧರಿ
ಫಸ್ಟ್‌ಪೋಸ್ಟ್ ಜಾಲತಾಣ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com