ಹೋಳಿ ಹಬ್ಬದಲ್ಲಿ ಹೆಂಗಸರಿಂದ ಗಂಡಸರಿಗೆ ಧರ್ಮದೇಟು

ಹಳೆಯ ತಲೆಮಾರುಗಳು ಅನುಸರಿಸುತ್ತಿದ್ದ ಆಚಾರ ವಿಚಾರ, ಸಂಪ್ರದಾಯಗಳನ್ನು...
ಹೋಳಿ ಹಬ್ಬದಲ್ಲಿ ಹೆಂಗಸರಿಂದ ಗಂಡಸರಿಗೆ ಧರ್ಮದೇಟು

ನಮ್ಮ ಜನಜೀವನ ಅಧುನೀಕರಣದತ್ತ ವಾಲಿರುವ ಈ ಸಂದರ್ಭದಲ್ಲಿ ಪ್ರಾಚೀನ ಕಾಲದ ಪಳೆಯುಳಿಕೆಗಳಂತೆ ಇರುವ ಬುಡಕಟ್ಟು ಸಮುದಾಯಗಳತ್ತ ಗಮನ ಹರಿಸುವುದು ಕಡಿಮೆ. ನಮ್ಮ ಇತಿಹಾಸ, ಹಿಂದಿನ ಜೀವನ ಶೈಲಿ ಬಗ್ಗೆ ತಿಳಿಯಬೇಕಾದರೆ ಆದಿವಾಸಿಗಳ ಬದುಕನ್ನು ಒಮ್ಮೆ ಗಮನಿಸಬೇಕು.
ಏಕೆಂದರೆ, ಹಳೆಯ ತಲೆಮಾರುಗಳು ಅನುಸರಿಸುತ್ತಿದ್ದ ಆಚಾರ ವಿಚಾರ, ಸಂಪ್ರದಾಯಗಳನ್ನು ಈ ಬುಡಕಟ್ಟು ಸಮುದಾಯಗಳು ಪಾಲಿಸಿಕೊಂಡು ಬರುತ್ತಿವೆ. ಜೀವನ ಆಧುನೀಕರಣದ ಕಡೆ ಮುಖ ಮಾಡಿದ್ದರೂ ಎಷ್ಟೋ ಜಾತಿಗಳು ಅದರ ನೆರಳು ತಮ್ಮ ಮೇಲೆ ಬೀಳದಂತೆ ನೋಡಿಕೊಂಡಿವೆ. ಹೀಗಾಗಿಯೇ ಹಳೆಯ ಕುಲ ಕಸುಬುಗಳು ಇಂದಿಗೂ ಮುಂದುವರಿದಿವೆ. ಅಂತಹ ಸಮುದಾಯಗಳಲ್ಲಿ 'ಡುಂಗ್ರಿ ಗರಾಸಿಯ' ಜಾತಿಯೂ ಒಂದಾಗಿದೆ.
ಕೇಳಲು ವಿಚಿತ್ರವಾದ ಹೆಸರಿದು. ಆದರೆ, ಈ ಬುಡಕಟ್ಟು ಸಮುದಾಯ ಹಳೆಯ ಪದ್ಧತಿಗಳನ್ನು ಇಂದಿಗೂ ಜೀವಂತವಾಗಿರಿಸಿಕೊಂಡು ಬಂದಿದೆ. ಡುಂಗ್ರಿ ಎಂದರೆ ಕಾಡು, ಬೆಟ್ಟ, ಗುಡ್ಡ ಎಂದರ್ಥ. ಗರ್, ಸಿಯಾ, ಆಸಿಯಾ ಎಂದರೆ ಅವರ ಭಾಷೆಯಲ್ಲಿ ಮನೆ. ಹೆಸರೇ ಹೇಳುವಂತೆ ಇವರು ಕಾಡುಮೇಡುಗಳಲ್ಲಿ ವಾಸವಿದ್ದಂತಹ ಜನ. ಅರಣ್ಯ ಕಾಯ್ದೆ ಎಂಬ ಆಡಕತ್ತರಿಗೆ ಸಿಕ್ಕಿ ಅಲ್ಲಿಂದ ಹೊರಬಂದು ಅರಣ್ಯ ಪ್ರದೇಶ, ನದಿ-ನಾಲೆಗಳ ಅಕ್ಕಪಕ್ಕದಲ್ಲಿ ಬದುಕು ಕಟ್ಟಿಕೊಂಡವರು ಇವರು.  
ನೂರಾರು ವರ್ಷಗಳ ಹಿಂದೆ ವಲಸೆ: ಡುಂಗ್ರಿ ಗರಾಸಿಯಾ ಜಾತಿಯ ಜನ ಮೂಲತ: ರಾಜಸ್ಥಾನ, ಗುಜರಾತ್ ಸೇರಿದಂತೆ ಉತ್ತರದ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದವರು. ಭಿಲ್ ಎಂಬ ಒಳ ಪಂಗಡಕ್ಕೆ ಸೇರಿದವರು. ರಾಣಾ ಪ್ರತಾಪಸಿಂಹನ ಕಾಲದಲ್ಲಿ ಸದ್ದು ಮಾಡಿದವರು. ಯುದ್ಧ ಸಂದರ್ಭದಲ್ಲಿ ಅಂದರೆ ನೂರಾರು ವರ್ಷಗಳ ಹಿಂದೆ ಇವರು ವಲಸೆ ಆರಂಭಿಸಿದರು. ಕೆಲವರು ಕರ್ನಾಟಕಕ್ಕೂ ಬಂದು ನೆಲೆ ಕಂಡುಕೊಂಡರು.
ತಮಿಳುನಾಡು ಮತ್ತು ಕೇರಳ ಹೊರತುಪಡಿಸಿದರೆ ದೇಶದ ನಾನಾ ರಾಜ್ಯಗಳಲ್ಲಿ ಡುಂಗ್ರಿ ಗರಾಸಿಯ ಸಮುದಾಯದ ಕುಟುಂಬಗಳಿವೆ. ಕರ್ನಾಟಕದಲ್ಲಿ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಅರಣ್ಯ ಪ್ರದೇಶಗಳ ಬಳಿ ಇವರನ್ನು ಕಾಣಬಹುದು. ರಾಜಸ್ಥಾನದಲ್ಲಿ ಈ ಸಮುದಾಯ ತನ್ನ ಜೀವನಶೈಲಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಗಮನ ಸೆಳೆಯುತ್ತದೆ.
ಈ ಸಮುದಾಯಕ್ಕೆ ತನ್ನದೇ ಆದ ಭಾಷೆ ಇದೆ. ಆದರೆ, ಕರ್ನಾಟಕದಲ್ಲಿ ನೆಲೆಸಿರುವ ಮಂದಿ ಕನ್ನಡ ಕಲಿತಿದ್ದು ಅದನ್ನೇ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಈ ಹಿಂದೆ ಇವರು ಮಣ್ಣು ಅಥವಾ ಬಿದಿರಿನಿಂದ ನಿರ್ಮಿಸಿದ ಮನೆಗಳಲ್ಲಿ ವಾಸಿಸುತ್ತಿದ್ದರು. ಈ ಜಾತಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ಇರುತ್ತಿರಲಿಲ್ಲ. ಗಂಡಸರ ಮುಂದೆ ಅವರು ತಲೆ ಎತ್ತಿ ನಿಲ್ಲದಂತಹ ಪರಿಸ್ಥಿತಿಯೂ ಇತ್ತು. ಇಂದಿಗೂ ಅನೇಕ ಕಡೆಗಳಲ್ಲಿ ಡುಂಗ್ರಿ ಗರಾಸಿಯಾ ಮಹಿಳೆಯರು ಹಿರಿಯರು ಅಥವಾ ಸಂಬಂಧಿಕರ ಮುಂದೆ ನಿಲ್ಲುವಾಗ ಮುಖ ಕಾಣದಂತೆ ಸೀರೆಯ ಸೆರಗಿನಿಂದ ಮುಚ್ಚಿಕೊಳ್ಳುತ್ತಾರೆ.

ಲಿವಿಂಗ್ ಟುಗೆದರ್ ಪದ್ಧತಿ: ಮನೆಯೊಳಗಿನ ಕೆಲಸಗಳು ಅಂದರೆ, ಅಡುಗೆ, ಜಾನುವಾರು ಸಾಕಣೆ, ಮಕ್ಕಳ ಲಾಲನೆ, ಪೋಷಣೆಯನ್ನು ಮಹಿಳೆಯರಿಗೆ ಮೀಸಲಿಡಲಾಗಿತ್ತು. ಮನೆಯ ಹೊರಗಿನ ಕೆಲಸಗಳು ಅಂದರೆ ಕೃಷಿ ಚಟುವಟಿಕೆ ಮತ್ತಿತರ ಕೆಲಸ ಕಾರ್ಯಗಳನ್ನು ಪುರುಷರು ನೋಡಿಕೊಳ್ಳುತ್ತಿದ್ದರು. ವಯಸ್ಸಿಗೆ ಬಂದ ಯುವಕ, ಯುವತಿಯರು ತಮ್ಮ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿತ್ತು. ಆ ವಿಚಾರದಲ್ಲಿ ಅವರಿಗೆ ಸ್ವಾತಂತ್ರ್ಯ ಇತ್ತು. ಇನ್ನೊಂದು ವಿಶೇಷ ಎಂದರೆ ಮದುವೆಗೆ ಮುನ್ನವೆ ಯುವಕ-ಯುವತಿ ಒಟ್ಟಿಗೆ ಬಾಳಲು ಅವಕಾಶ ಇತ್ತು. ಈ ಸಂಪ್ರದಾಯ ರಾಜಸ್ಥಾನ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತಿತ್ತು.
ಕೌಟುಂಬಿಕ ಜೀವನ ವಿಚಾರದಲ್ಲಿ ಡುಂಗ್ರಿ ಗರಾಸಿಯ ಸಮುದಾಯದಲ್ಲಿ ಭಾರಿ ಕಟ್ಟುನಿಟ್ಟು. ಗಂಡು ಮಕ್ಕಳು ತಂದೆ-ತಾಯಿ ಜೊತೆ ಇರುತ್ತಿದ್ದರು. ತಮ್ಮ ಮಕ್ಕಳು ವಯಸ್ಸಿಗೆ ಬರುವವರೆಗೆ ಅವರು ತಂದೆ-ತಾಯಿ ಬಿಟ್ಟು ಹೋಗುವಂತೆ ಇರಲಿಲ್ಲ. ಸಮುದಾಯದ ಬಟ್ಟೆಬರೆ, ವೇಷಭೂಷಣಗಳಲ್ಲಿಯೂ ಭಾರಿ ವಿಶೇಷ ಕಾಣಬಹುದು. ಮಹಿಳೆಯರ ಸಿಂಗಾರವಂತೂ ಗಮನ ಸೆಳೆಯುತ್ತದೆ. ಹಬ್ಬ-ಹರಿದಿನಗಳು, ಶುಭ ಕಾರ್ಯಕ್ರಮಗಳ ವೇಳೆ ಮಹಿಳೆಯರು ಒಪ್ಪವಾಗಿ ಸಿಂಗರಿಸಿಕೊಂಡು ಹಾಡು, ಕುಣಿತಗಳಲ್ಲಿ ತಲ್ಲೀನರಾಗುವ ದೃಶ್ಯವನ್ನೂ ಇಂದಿಗೂ ಕಾಣಬಹುದು. ವಾರ್ತಾ ಇಲಾಖೆ ಈ ಸಮುದಾಯದ ಕುರಿತು ಎಂ.ಭಾರತೀಶ್ ಅವರ ನಿದೇರ್ಶನದಲ್ಲಿ ಸಾಕ್ಷ್ಯಚಿತ್ರ ತಯಾರಿಸಿದೆ.

ಧಾರ್ಮಿಕ ಸಂಕೇತವಾಗಿ ಧ್ವಜ: ಈ ಸಮುದಾಯದವರಲ್ಲಿ ಮತ್ತೊಂದು ವಿಶೇಷವಿದೆ. ಇವರು ಎಲ್ಲಿಯೇ ಮನೆ ಕಟ್ಟಿದರೂ ಆ ಮನೆಯ ಮುಂದೆ ನೆಲವನ್ನು ಸಾರಿಸಿ ಒಂದು ಧ್ವಜ ನೆಡುತ್ತಾರೆ. ಅದು ಇವರ ಧಾರ್ಮಿಕ ಸಂಕೇತ. ಕೆಲಸ ಕಾರ್ಯಗಳಿಗಾಗಿ ಹೊರಗೆ ಹೋಗುವಾಗಧ್ವಜಕ್ಕೆ ಶ್ರದ್ಧಾ ಭಕ್ತಿಯಿಂದ ನಮಸ್ಕರಿಸಿ ಹೊರಡುತ್ತಾರೆ. ಒಂದೇ ಸ್ಥಳದಲ್ಲಿ ಹೆಚ್ಚಿನ ದಿನ ಇದ್ದರೆ ಅವರು ಕಟ್ಟಿಕೊಂಡಿದ್ದ ಗುಡಾರಗಳೇ ಜೋಪಡಿಗಳಾಗುತ್ತವೆ. ಕತ್ತೆಗಳ ಮೇಲೆ ಹೇರಿಕೊಂಡು ಬರುವ ಸಾಮಾನು, ಸರಂಜಾಮುಗಳನ್ನು ಆ ಮನೆಯಲ್ಲಿ ಒಪ್ಪವಾಗಿ ಜೋಡಿಸಿಕೊಳ್ಳುತ್ತಾರೆ. ಮನೆಯ ಒಳ ಮತ್ತು ಹೊರ ಆವರಣವನ್ನು ಸಿಂಗರಿಸಿಕೊಳ್ಳುತ್ತಾರೆ. ಮನೆಗೆ ಅತಿಥಿಗಳು ಬಂದರೆ ಅವರನ್ನು ಗೌರವಿಸಿ, ಜಾನಪದ ಹಾಡು, ನೃತ್ಯದ ಮೂಲಕ ಸತ್ಕರಿಸುತ್ತಾರೆ. ಹಲವು ದೈವಗಳ ಪೂಜೆಯನ್ನೂ ಈ ಸಂದರ್ಭದಲ್ಲಿ ನೆರವೇರಿಸುವ ಸಂಪ್ರದಾಯ ಉಂಟು
ಅರಣ್ಯ ಪ್ರದೇಶದಲ್ಲಿ ವಾಸವಿದ್ದಾಗ ಭೇಟೆ ಇವರ ಕಸುಬು ಆಗಿತ್ತು. ಜೊತೆಗೆ ಕಾಡಿನಲ್ಲಿ ಸಿಗುತ್ತಿದ್ದ ಗೆಡ್ಡೆ ಗೆಣಸುಗಳನ್ನು ಬೇಯಿಸಿ ಆಹಾರವಾಗಿ ಸೇವಿಸುತ್ತಿದ್ದರು. ಈಗ ಅನೇಕ ಮಂದಿ ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ. ಇನ್ನೂ ಕೆಲವರು ಹಳೆಯ ಪ್ರಾಸ್ಟಿಕ್, ಚಿಂದಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ. ಕೆಲವರು ನೀರಿನ ಮಡುವಿನಲ್ಲಿ ಮೀನು ಹಿಡಿಯುತ್ತಾರೆ. ಕಾಡಿನಿಂದ ದೂರ ಇದ್ದರೂ ಅಲ್ಲಿಯ ವಾಸನೆ ಇವರನ್ನು ಬಿಟ್ಟು ಹೋಗಿಲ್ಲ. ಕಾಡಿನ ಗಿಡ, ಮರಗಳ ಪರಿಚಯ ಇಂದಿಗೂ ಇದೆ. ಹೀಗಾಗಿಯೇ ಅಲ್ಲಿಂದ ಗಿಡಮೂಲಿಕೆಗಳನ್ನು ತಂದು ನಾಟಿ ಔಷಧವನ್ನಾಗಿ ಮಾಡಿ ಹಲವು ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಾರೆ.

ಗಂಡಸರಿಗೆ ಧರ್ಮದೇಟು: ಇವರ ಮದುವೆ ಕಾರ್ಯಕ್ರಮವಂತೂ ಅತ್ಯಂತ ಸರಳ. ಕಲ್ಲನ್ನು ದೇವರಾಗಿ ಪೂಜಿಸಿ, ವಧು-ವರರಿಗೆ ಅರಿಶಿಣದ ನೀರಿನಿಂದ ಸ್ನಾನ ಮಾಡಿಸಿ ಕೂರಿಸುತ್ತಾರೆ. ತೆಂಗಿನ ಕಾಯಿ ಚಿಪ್ಪಿನಿಂದ ಮಾಡಿದ ಸರವೇ ನೂತನ ದಂಪತಿಗೆ ಆಭರಣವಾಗುತ್ತದೆ. ವಿವಾಹದ ಸಂದರ್ಭಧಲ್ಲಿ ಬಗೆಬಗೆಯ ಆಟಗಳೂ ಉಂಟು. ಇಡೀ ಗುಂಪು ಈ ಸಂಭ್ರಮದಲ್ಲಿ ಭಾಗಿಯಾಗುತ್ತದೆ.
ಹೋಳಿ ಹಬ್ಬದ ಸಂದರ್ಭದಲ್ಲಿ ಐದಳದ ಗಿಡ ನೆಟ್ಟು ಅನ್ನದ ಎಡೆ ಹಾಕುವ ಪದ್ಧತಿಯನ್ನು ಸಮುದಾಯದವರು ಅನುಸರಿಸುತ್ತಾರೆ. ಅಲ್ಲದೇ, ಹಬ್ಬದ ವೇಳೆ ಬೆಂಕಿ ಹಾಕಿ ನರ್ತನ ಮಾಡುತ್ತಾರೆ. ವಿವಿಧ ವಸ್ತುಗಳನ್ನು ಹಿಡಿದು ಕುಣಿದು ಕುಪ್ಪಳಿಸುತ್ತಾರೆ. ಹಬ್ಬದ ಮರುದಿನ ಬೆಂಕಿ ನಂದಿಸಿ, ಜಯದ ಸಂಕೇತವಾಗಿ ಧ್ವಜ ನೆಡುತ್ತಾರೆ. ಈ ಸಂದರ್ಭದಲ್ಲಿ ತಮ್ಮ ಹತ್ತಿರ ಬರುವ ಗಂಡಸರ ಮೇಲೆ ಸಗಣಿ ಮತ್ತು ಬೂದಿ ಮಿಶ್ರಿತ ನೀರು ಎರಚಿ, ಅದರಿಂದ ಅವರನ್ನು ಹೊಡೆದು ಮಹಿಳೆಯರು ತಮ್ಮ ಆಕ್ರೋಶವನ್ನು ಸಾಂಕೇತಿಕವಾಗಿ ವ್ಯಕ್ತಪಡಿಸುತ್ತಾರೆ. ನೆಟ್ಟ ಬಾವುಟವನ್ನು ಕಿತ್ತು ಯಾರು ಎತ್ತಿ ಹಿಡಿಯುವರೋ ಅವರೇ ಆಟದಲ್ಲಿ ಗೆದ್ದವರಾಗುತ್ತಾರೆ. ಇನ್ನು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಂಜುಗಳನ್ನು ಎಸೆದು ಅದರಲ್ಲಿ ಬೆಳಕು ಮೂಡಿಸಿ ಕುಸ್ತಿ ಆಡುವ ಸಂಪ್ರದಾಯವೂ ಇವರಲ್ಲಿದೆ.
ಖಂಡೋಬಾ, ಅಂಬಾ ಭವಾನಿ, ತುಳುಜಾ ಭವಾನಿ, ದುರ್ಗೆ, ಸಿಕೋತರಾ ಮತ್ತಿತರ ದೇವರುಗಳನ್ನು ಈ ಸಮುದಾಯದ ಜನ ಪೂಜಿಸುತ್ತಾರೆ. ನಾಮಕರಣದ ವೇಳೆ ಮಕ್ಕಳನ್ನು ದೇವರ ಮುಂದೆ ಮಲಗಿಸುತ್ತಾರೆ. ಆಗ ಪೂಜಾರಿಯ ಮೈಮೇಲೆ ದೇವರು ಬಂದು ಆತ ಎಲ್ಲರಿಗೂ ಪ್ರಸಾದ ಹಂಚುತ್ತಾನೆ. ಆಗ ನಾಮಕರಣ ಪ್ರಕ್ರಿಯೆ ಪೂರ್ಣವಾಗುತ್ತದೆ.
ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ತೀರಾ ಹಿಂದುಳಿದಿದ್ದ ಈ ಸಮುದಾಯ ಈಗೀಗ ಚೇತರಿಸಿಕೊಳ್ಳುತ್ತಿದೆ. ಮಕ್ಕಳು ಓದಿ ವಿದ್ಯಾವಂತರಾಗುತ್ತಿದ್ದಾರೆ. ಆರ್ಥಿಕವಾಗಿ ಮೇಲೆ ಏಳಲು ಯುವಕರು ಸಹಕಾರ ಸಂಘ ಕಟ್ಟಿಕೊಂಡಿದ್ದಾರೆ. ಸಣ್ಣದಾಗಿ ಪ್ಲಾಸ್ಟಿಕ್ ಕಾರ್ಖಾನೆಯನ್ನೂ ತೆರೆದಿದ್ದಾರೆ. ಆದರೆ, ಸರ್ಕಾರದ ಸಹಾಯ ಮತ್ತು ಸವಲತ್ತು ಸಿಕ್ಕರೆ ಇವರ ಜೀವನ ಇನ್ನಷ್ಟು ಸುಧಾರಿಸುತ್ತದೆ.

- ಕೆ.ವಿ.ಪ್ರಭಾಕರ  
prabhukolar@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com