ಬಿಲ ಬಗೆದು ಇಲಿ ಹಿಡಿಯುವ ಇರುಳಿಗರು

ಆಚಾರ ವಿಚಾರ ಮತ್ತು ಸಂಪ್ರದಾಯಗಳು ಒಂದು ಜಾತಿಯಿಂದ ಮತ್ತೊಂದು ಜಾತಿಗೆ..
ಬಿಲ ಬಗೆದು ಇಲಿ ಹಿಡಿಯುವ ಇರುಳಿಗರು

ಆಚಾರ ವಿಚಾರ ಮತ್ತು ಸಂಪ್ರದಾಯಗಳು ಒಂದು ಜಾತಿಯಿಂದ ಮತ್ತೊಂದು ಜಾತಿಗೆ ಹೇಗೆ ಭಿನ್ನವಾಗಿ ಸಾಗುವುದೋ ಅದೇ ರೀತಿ ಅಹಾರ ಪದ್ಧತಿಯಲ್ಲೂ ಬದಲಾವಣೆಗಳನ್ನು ಕಾಣಬಹುದು.
ಕೆಲ ಸಮುದಾಯಗಳು ಸಸ್ಯಾಹಾರವನ್ನು ಕಡ್ಡಾಯವಾಗಿ ಪಾಲನೆ ಮಾಡಿದರೆ, ಕೆಲ ಜಾತಿಗಳ ಪಾಲಿಗೆ ಮಾಂಸದ ಆಹಾರ ಭಾರಿ ಶ್ರೇಷ್ಠ. ಮಾಂಸಹಾರ ಎಂದರೆ ಕೇವಲ ಕುರಿ, ಕೋಳಿ, ಮೀನು,ಮೇಕೆ, ಹಂದಿ ಇವುಗಳಿಗೆ ಮಾತ್ರ ಸೀಮಿತ ಅಲ್ಲ. ಹಾವು, ಇಲಿಗಳನ್ನೂ ಹಿಡಿದು ತಿನ್ನುವ ಮಂದಿ ಇದ್ದಾರೆ.
ಇರುಳಿಗ ಎಂಬ ಸಮುದಾಯವಿದೆ. ಆ ಜಾತಿಯ ಜನರಿಗೆ ಇಲಿ ಬೇಯಿಸಿ ಮಾಡುವ ಆಹಾರವೇ ಶ್ರೇಷ್ಠ. ಇಲಿ ತಿಂದರೆ, ದೇಹ ಗಟ್ಟಿಮುಟ್ಟಾಗಿರುತ್ತದೆ. ದೇಹದಲ್ಲಿ ರಕ್ತ ಸಂಚಾರ ಸುಲಭವಾಗುತ್ತದೆ ಎಂದು ಇರುಳಿಗರು ಬಲವಾಗಿ ನಂಬಿದ್ದಾರೆ. ಹೀಗಾಗಿ ಅವರಿಗೆ ಇರುಳಿಗರು ಎಂಬ ಹೆಸರು ಬಂದಿರಬಹುದು ಎಂದು ಹೇಳಲಾಗುತ್ತದೆ.

ಇಲಿ ಹಿಡಿಯುವ ತಂತ್ರಜ್ಞಾನ
ಇರುಳಿಗರು ಇಲಿ ಹಿಡಿಯುವುದರಲ್ಲೂ ಚಾಕಚಕ್ಯತೆ ಮೆರೆಯುತ್ತಾರೆ. ಇದಕ್ಕೆ ಅವರದ್ದೇ ಆದ ತಂತ್ರಜ್ಞಾನ ಇದೆ. ಹೆಜ್ಜೆಯ ಗುರುತಿನ ಜಾಡು ಹಿಡಿದು ಹೋಗುವ ಈ ಮಂದಿ ಇಲಿ ಯಾವ ಬಿಲದಲ್ಲಿದೆ ಎಂಬುದನ್ನು ಮೊದಲು ನೋಡಿಕೊಳ್ಳುತ್ತಾರೆ. ಬಳಿಕ ಬಿಲದ ಅಕ್ಕಪಕ್ಕ ಎರಡು ರಂಧ್ರಗಳನ್ನು ಕೊರೆಯುತ್ತಾರೆ. ಒಂದು ರಂಧ್ರದಲ್ಲಿ ಮಡಕೆ ತೂರಿಸಿ ಅದರ ಹಿಂಭಾಗದಲ್ಲಿ ರಂಧ್ರ ಕೊರೆಯುತ್ತಾರೆ. ಆ ರಂಧ್ರದ ಮೂಲಕ ಬಿಲದ ಒಳಗೆ ಹೊಗೆ ಊದುತ್ತಾರೆ. ಆಗ ಇಲಿ ಉಸಿರುಗಟ್ಟಿದ ಪರಿಣಾಮ ಇನ್ನೊಂದು ರಂಧ್ರದಲ್ಲಿ ಹೊರಗೆ ಬರುತ್ತದೆ. ಆಗ ಹಿಡಿದುಕೊಳ್ಳುತ್ತಾರೆ.
ಹೀಗೆ ಕ್ಷಣಾರ್ಧದಲ್ಲಿ ಹತ್ತಾರು ಇಲಿಗಳನ್ನು ಹಿಡಿದು ರಾಶಿ ಹಾಕುತ್ತಾರೆ. ಇಲಿ ಹಿಡಿದ ತಕ್ಷಣ ಆದರ ಬಾಲ ಮುರಿದು ಗಾಯ ಮಾಡುತ್ತಾರೆ. ಬಳಿಕ ಭರ್ಜರಿ ಇಲಿ ಭೋಜನ ಸಿದ್ಧವಾಗುತ್ತದೆ. ಇರುಳಿಗರನ್ನು ಇರುಳ, ಇರುಳರ್ ಎಂಬ ಹೆಸರಿನಿಂದಲೂ ಕರೆಯುವುದುಂಟು. ಈ ಸಮುದಾಯ ಕುರಿತು ಡಾ. ಕೆ.ಎಂ.ಮೈತ್ರಿ ಅವರು ಅಧ್ಯಯನ ನಡೆಸಿದ್ದಾರೆ. ಜೊತೆಗೆ ವಾರ್ತಾ ಇಲಾಖೆ ಶಿವಕುಮಾರ್ ಅವರ ನಿರ್ದೇಶನ ಮತ್ತು ಬಸವರಾಜು ಅವರ ಮಾರ್ಗದರ್ಶನದಲ್ಲಿ ಸಾಕ್ಷ್ಯಚಿತ್ರವನ್ನೂ ತಯಾರಿಸಿದೆ.
ಇರುಳಿಗ ಸಮುದಾಯಕ್ಕೆ ಸೇರಿದ ಕುಟುಂಬಗಳು ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯ ಹಲವೆಡೆ ಹೆಚ್ಚಾಗಿ ಕಂಡು ಬರುತ್ತವೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಹಲವು ಗ್ರಾಮಗಳಲ್ಲಿ ಇರುಳಿಗರು ಇದ್ದಾರೆ. ಇವರ ಜನಸಂಖ್ಯೆ 25 ಸಾವಿರ ಎಂದು ಅಂದಾಜು ಮಾಡಲಾಗಿದೆ. ತಮಿಳುನಾಡು ಮತ್ತು ಅಂಧ್ರದಲ್ಲಿಯೂ ಈ ಸಮುದಾಯದ ಜನರನ್ನು ಕಾಣಬಹುದು. ಒಂದು ಅಧ್ಯಯನದ ಪ್ರಕಾರ ಇವರು ಅಲ್ಲಿಂದಲೇ ವಲಸೆ ಬಂದವರು ಎಂದು ಹೇಳಲಾಗುತ್ತದೆ.

ಇಲಿ ಹಿಡಿಯುವುದೇ ಕಸುಬು

ಮೊದಲೇ ಹೇಳಿದಂತೆ ಇಲಿ ಹಿಡಿಯುವುದೇ ಇರುಳಿಗರ ಸಂಸ್ಕೃತಿ. ಅದು ಅವರ ಪಾಲಿಗೆ ಮೆಚ್ಚಿನ ಆಹಾರವೂ ಹೌದು. ಉಳಿದಂತೆ ಕಾಡುಗಳಲ್ಲಿ ವಾಸವಿದ್ದಾಗ ಇವರು ಜೇನು ಕೀಳುವ, ಕಸಪೊರಕೆ ತಯಾರಿಸುವ ಕಾಯಕ ಮಾಡುತ್ತಿದ್ದರು. ಕೆಲವರು ಬಿದಿರು, ಸೌದೆಯನ್ನು ಆರಣ್ಯದಿಂದ ಕಡಿದು ತಂದು ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಮಾರುತ್ತಿದ್ದರು. ಆದರೆ, ಅರಣ್ಯ ಕಾಯಿದೆ ಜಾರಿಗೆ ಬಂದ ಬಳಿಕ ಇರುಳಿಗರು ಕಾಡು ಬಿಟ್ಟು ಊರುಗಳ ಪಾಲಾಗಿದ್ದಾರೆ. ಅದರೂ ತಮ್ಮ ಸಂಪ್ರದಾಯಗಳನ್ನು ಕೆಲವರು ಇನ್ನೂ ಮರೆತಿಲ್ಲ. ಉಳಿದವರು ಮಾತ್ರ ನಾಗರಿಕತೆಗೆ ಒಗ್ಗಿಕೊಂಡುಬಿಟ್ಟಿದ್ದಾರೆ. ಈ ಹಿಂದೆ ಅವರು ಕಾಡುಗಳಲ್ಲಿ ಗುಹೆ, ಪೊಟರೆಗಳಲ್ಲಿ ವಾಸ ಮಾಡುತ್ತಿದ್ದರು. ಇಲಿ, ಮೊಲ, ಉಡದ ಭೇಟೆಯಾಡುತ್ತಿದ್ದರು. ಗೆಡ್ಡೆ, ಗೆಣಸು, ಹಣ್ಣು, ಹಂಪಲುಗಳ ಮೂಲಕ ಜೀವನ ಸಾಗಿಸುತ್ತಿದ್ದರು.

ಮೈಮೇಲೆ ದೇವರು ಬರುತ್ತದೆ
ತಮಗೆ ಏನೇ ಕಷ್ಟ ಎದುರಾದರೂ ಇರುಳಿಗರು ಮೊದಲು ಹೋಗುವುದು ದೇವರ ಪೂಜಾರಿಯ ಬಳಿಗೆ. ನಮಗೆ ಇಂಥ ಕಷ್ಟ ಬಂದಿದೆ. ಅದನ್ನು ಬಗೆಹರಿಸಿಕೊಡಿ ಎಂದು ಪೂಜಾರಿ ಬಳಿ ಅವರು ನಿವೇದಿಸಿಕೊಳ್ಳುತ್ತಾರೆ. ಆಗ ಪೂಜಾರಿ ಅಕ್ಕಿ ಸ್ವಚ್ಛ ಮಾಡುವ ಮರದಲ್ಲಿ ಅಕ್ಕಿ ಅಥವಾ ಗೋಧಿ ಹಿಟ್ಟು ಹಾಕಿಕೊಂಡು ಮಂತ್ರ ಉಚ್ಛಾರಣೆ ಮಾಡಿಕೊಂಡು ಉಜ್ಜುತ್ತಾರೆ. ಹಾಗೆಯೇ ದೇವರಿಗೆ ಆಹ್ವಾನ ನೀಡುತ್ತಾರೆ. ದೇವರು ಮೈಮೇಲೆ ಬಂದಾಗ ಕಷ್ಟ ಎಂದು ಹೇಳಿಕೊಂಡು ಬಂದವರಿಗೆ ಪರಿಹಾರ ಸೂಚಿಸುತ್ತಾರೆ. ಬಂದವರ ಕಷ್ಟಗಳನ್ನು ಮೈಮೇಲೆ ಬರುವ  ದೇವರು ವಶಪಡಿಸಿಕೊಂಡು ಒಳ್ಳೆಯದು ಮಾಡುತ್ತಾನೆ ಎಂಬುದು ಪೂಜಾರಿ ಮತ್ತು ಸಮುದಾಯದ ಜನರ ನಂಬಿಕೆ.
ಇರುಳಿಗರ ಆಡುಭಾಷೆ ಕನ್ನಡ ಮತ್ತು ತಮಿಳು ಮಿಶ್ರಿತವಾಗಿರುತ್ತದೆ. ಅರಣ್ಯಕ್ಕೆ ಸಂಬಂಧಿಸಿದ ದೇವರುಗಳನ್ನು ಪೂಜೆ ಮಾಡುತ್ತಿದ್ದುದರಿಂದ ಇವರಿಗೆ ಕಾಡು ಪೂಜಾರಿಗಳೆಂಬ ಹೆಸರೂ ಇದೆ. ಮಾದಮ್ಮ, ಎಲ್ಲಮ್ಮ, ಬರಿಯಮ್ಮ, ಮದ್ದೂರಮ್ಮ, ಮರಿಯಮ್ಮ, ಶಿವ, ಮತ್ತರಾಯ ಮತ್ತಿತರ ದೇವರುಗಳನ್ನು ಪೂಜಿಸುತ್ತಾರೆ. ಈ ದೇವರುಗಳಿಗೆ ಕುರಿ,ಕೋಳಿ ಬಲಿಕೊಡುತ್ತಾರೆ. ಹುಲಿ ಮತ್ತು ಹಾವುಗಳಿಗೂ ಇವರಿಂದ ಪೂಜೆ ಸಲ್ಲಿಕೆಯಾಗುತ್ತದೆ. ಹುಲಿ ಪೂಜೆ ಮಾಡುವುದರ ಹಿಂದೆ ಕಥೆಯೂ ಇದೆ.

ಹುಲಿಗಳು ಮಾಯವಾದವು
ಹುಲಿ ಮಾದಪ್ಪನ ವಾಹನ. ಈ ಹಿಂದೆ ಇರುಳಿಗ ಸಮುದಾಯದ ಹಿರಿಯ ಹುಲಿಯ ಮೇಲೆ ಕುಳಿತು ಬೇಟೆಗೆ ಹೋದಾಗ ಮಾರ್ಗಮಧ್ಯೆ ಮಹಿಳೆ ಎದುರಾಗುತ್ತಾಳೆ. ಆಗ ಆ ಹಿರಿಯ ಆಕೆಯಿಂದ ಸುಣ್ಣವನ್ನು ಕೇಳಿ ಪಡೆಯುತ್ತಾನೆ. ಮೈಲಿಗೆ ಆಯಿತು ಎಂಬ ಕಾರಣಕ್ಕೆ ಹುಲಿಗಳು ಹಿರಿಯನನ್ನು ಕೊಂದು ದೇಹವನ್ನು ಎರಡು ಭಾಗ ಮಾಡಿ ಕಾವಲು ಕೂರುತ್ತವೆ. ಜನ ಹಿರಿಯನನ್ನು ಹುಡುಕಿಕೊಂಡು ಹೋಗುತ್ತಾರೆ. ಅವರನ್ನು ಕಂಡ ಕೂಡಲೆ ಹುಲಿಗಳು ಮಾಯವಾದವಂತೆ. ಅಂದಿನಿಂದ ಇವರು ಮಲೆ ಮಹದೇಶ್ವರ ಆರಾಧಕರಾಗುತ್ತಾರೆ.

ಶವದ ಮೇಲೆ ಕಲ್ಲುಗಳು
ಇರುಳಿಗ ಸಮುದಾಯದಲ್ಲಿ ಯಾರಾದರೂ ಸತ್ತರೆ ಕಾಡಿನಲ್ಲಿ ವಿಶಾಲವಾದ ಬಂಡೆಯ ಮೇಲೆ ಅಥವಾ ಬಂಡೆಗಳ ನಡುವೆ ಶವವನ್ನು ಮಲಗಿಸುತ್ತಾರೆ. ಶವಸಂಸ್ಕಾರವನ್ನು ಅವರು ಶಿಲಾಯುಗದ ಮಾದರಿ ಅನುಸರಿಸುತ್ತಾರೆ. ಹೇಗೆ ಅಂದರೆ, ಅಂತ್ಯಸಂಸ್ಕಾರಕ್ಕೆ ಬಂದವರೆಲ್ಲರೂ ಒಂದೊಂದೇ ಕಲ್ಲುಗಳನ್ನು ತೆಗೆದುಕೊಂಡು ಶವದ ಮೇಲೆ ಜೋಡಿಸುತ್ತಾರೆ. ಬಳಿಕ ಪೂಜೆ ನೆರವೇರಿಸಲಾಗುತ್ತದೆ. ಇನ್ನು ಬಾಲಕಿಯರು ಋತುಮತಿಯರಾದರೆ ಊರಿನ ಹೊರಗೆ ಜೋಪಡಿ ಕಟ್ಟಿ ಅಲ್ಲಿ ಕೂರಿಸಲಾಗುತ್ತದೆ. ಸೋದರ ಮಾವನಿಂದ ಶಾಸ್ತ್ರ ನೆರವೇರುತ್ತದೆ.
ಕುಲದ ಪಂಚಾಯಿತಿಯಲ್ಲೂ ವಿಶೇಷವಿದೆ. ತಂಟೆ, ತಕರಾರು ಉಂಟಾದಾಗ ಕುಲದ ಮುಖ್ಯಸ್ಥ ಎಲ್ಲ ಜಾತಿ ಜನಾಂಗದ ಮುಖಂಡರನ್ನು ಪಂಚಾಯಿತಿಗೆ ಬರುವಂತೆ ಆಹ್ವಾನಿಸುತ್ತಾನೆ. ಬಳಿಕ ನೆಲದ ಮೇಲೆ ಕಪ್ಪು ಕಂಬಳಿ ಹಾಕಿ ಅದರ ಮೇಲೆ ವಿಭೂತಿಯಿಂದ ಸರ್ಪ, ಸೂರ್ಯ, ಚಂದ್ರರ ಆಕೃತಿಗಳನ್ನು ರಚಿಸಲಾಗುತ್ತದೆ. ಈ ಸಂದರ್ಭದಲ್ಲಿ ಗದ್ದುಗೆ ಪೂಜೆಯೂ ನೆರವೇರುತ್ತದೆ. ಬಳಿಕ ಯಜಮಾನ ಎಲ್ಲ ಕುಲದವರ ಮುಂದೆ ನ್ಯಾಯ, ಅನ್ಯಾಯ ತೀರ್ಮಾನ ಮಾಡುತ್ತಾನೆ. ನೊಂದವರಿಗೆ ಪರಿಹಾರ ಒದಗಿಸುವುದರ ಜೊತೆಗೆ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುತ್ತಾನೆ ಎನ್ನುತ್ತಾರೆ ಸುಮುದಾಯದ ಹಿರಿಯರಾದ ಮುನಿಯಪ್ಪ. ಜಾನಪದ ಗೀತೆಗಳ ಗಾಯನ ಇವರ ಮತ್ತೊಂದು ವಿಶೇಷವಾಗಿದೆ. ಹಬ್ಬ ಹರಿದಿನ ಮತ್ತು ಶುಭ ಕಾರ್ಯಕ್ರಮಗಳ ವೇಳೆ ಮನೆ ಮಂದಿ ಸೇರಿ ಹಾಡಿ ನಲಿಯುತ್ತಾರೆ.

ನಾಗರಿಕತೆಯತ್ತ ಮುಖ
ಈ ಹಿಂದೆ ಇರುಳಿಗ ಸಮುದಾಯದಲ್ಲಿ ಸಾಕ್ಷರತೆ ಪ್ರಮಾಣ ತೀರಾ ಕೆಳಮಟ್ಟದಲ್ಲಿ ಇತ್ತು. ಮಕ್ಕಳು ಶಾಲೆಯ ಮುಖ ನೋಡಿದವರೇ ಇಲ್ಲ. ಕಾಡುಮೇಡು ಅಲೆಯುತ್ತಿದ್ದ ಅವರಿಗೆ ಆ ಬಗ್ಗೆ ಯೋಚಿಸಲೂ ಪುರುಸೊತ್ತು ಇರಲಿಲ್ಲ. ಆದರೀಗ ಸನ್ನಿವೇಶ ಬದಲಾಗಿದೆ. ಇರುಳಿಗರ ಮಕ್ಕಳು ಶಾಲೆ ಪ್ರವೇಶ ಪಡೆದಿದ್ದಾರೆ. ಓದಿಕೊಂಡ ಮಂದಿ ಉದ್ಯೋಗದ ಕಡೆ ಮುಖ ಮಾಡುತ್ತಿದ್ದಾರೆ. ಸರ್ಕಾರದಿಂದಲೂ ಅವರಿಗೆ ನಾನಾ ಸವಲತ್ತುಗಳು ದೊರೆಯುತ್ತಿವೆ. ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದವರು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಆದರೆ, ಎಲ್ಲರಿಗೂ ಸೌಲಭ್ಯಗಳು ಸಿಕ್ಕಿಲ್ಲ. ಇದಕ್ಕೆ ಅರಿವಿನ ಕೊರತೆಯೂ ಕಾರಣ ಇರಬಹುದು. ಜನಸಂಖ್ಯೆ ಕಡಿಮೆ ಇರುವುದರಿಂದ ಸಂಘಟನಾ ಸಾಮರ್ಥ್ಯವೂ ಇವರಿಗೆ ಇಲ್ಲ.

- ಕೆ.ವಿ. ಪ್ರಭಾಕರ
prabhukolar@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com