ಸತ್ತವರ ಆತ್ಮಗಳು 16 ತಲೆಮಾರಿನವರೆಗೆ ಕಾಪಾಡುತ್ತವೆ ಎನ್ನುವ ಗೌಡಲು

ಪೂಜಾ ಸಮಯದಲ್ಲಿ ದೇವರಿಗೆ ನೈವೇದ್ಯವಾಗಿ ದೋಸೆ ಇಡುವ ಸಂಪ್ರದಾಯ...
ಸತ್ತವರ ಆತ್ಮಗಳು 16 ತಲೆಮಾರಿನವರೆಗೆ ಕಾಪಾಡುತ್ತವೆ ಎನ್ನುವ ಗೌಡಲು

ಪೂಜಾ ಸಮಯದಲ್ಲಿ ದೇವರಿಗೆ ನೈವೇದ್ಯವಾಗಿ ದೋಸೆ ಇಡುವ ಸಂಪ್ರದಾಯ ಸಮುದಾಯವೊಂದರಲ್ಲಿ ಆಚರಣೆಯಲ್ಲಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸಿ, ಗದ್ದೆಗೆ ಹೋಗಿ ಅಲ್ಲಿ ಬಾಳೆಯ ಕಂಬ ನೆಟ್ಟು ಬಲೀಂದ್ರನಿಗೆ ಆಹ್ವಾನ ನೀಡುವ ಮತ್ತೊಂದು ವಿಶಿಷ್ಟವಾದ ಆಚರಣೆಯೂ ಈ ಸಮುದಾಯದಲ್ಲಿದೆ.
ಅದುವೇ ಗೌಡಲು ಎಂಬ ಸಮುದಾಯ. ಗೌಡ ಎಂದರೆ ಊರಿನ, ಸಮುದಾಯದ ಅಥವಾ ಮನೆಯ ಮುಖ್ಯಸ್ಥ ಎಂದರ್ಥ. ಜೊತೆಗೆ ಗೋವುಗಳ ಪಾಲಕ ಎಂಬ ವ್ಯಾಖ್ಯಾನವೂ ಇದೆ. ಗೌಡಲು ಸಮುದಾಯಕ್ಕೆ ಸೇರಿದವರು ಚಿಕ್ಕಮಗಳೂರು, ಕಡೂರು, ಕೊಪ್ಪ, ಶೃಂಗೇರಿ, ಮೂಡಿಗೆರೆ, ತರೀಕೆರೆ ಹಾಗೂ ಮಂಗಳೂರು ಸಮೀಪದ ಪುತ್ತೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ನೂರಾರು ವರ್ಷಗಳ ಹಿಂದೆ ಇವರು ಗುಹೆಗಳಲ್ಲಿ ವಾಸ ಮಾಡುತ್ತಿದ್ದರು ಎಂದ ಹೇಳಲಾಗುತ್ತದೆ. ಆದಿವಾಸಿಗಳಾದ ಗೌಡಲು ಸಮುದಾಯದವರು ಕಾಶಿಯಿಂದ ವಲಸೆ ಬಂದವರು, ವಲಸೆ ಬಂದ ಬಳಿಕ ಕಳಸೇಶ್ವರ ದೇವಾಲಯದಲ್ಲಿ ದೇವರ ಸೇವೆ ಮಾಡಿಕೊಂಡಿದ್ದರು. ಈಚಲು ಮರದಲ್ಲಿ ಖರ್ಜೂರ ಸಂಗ್ರಹಿಸುವುದು ಇವರ ಕುಲ ಕಸುಬು ಆಗಿತ್ತು ಎಂದು ಹಿರಿಯರು ಹೇಳುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಪಾಂಡವರ ವನದಲ್ಲಿ ಈಚಲು ಬಲ ಇದೆ. ಜೊತೆಗೆ ಪಾಂಡವರ ಉಪ್ಪರಿಗೆ ಗುಹೆಗಳು ಕಂಡು ಬರುತ್ತವೆ. ಸಂಗ್ರಹಿಸಿದ ಖರ್ಜೂರವನ್ನು ಗೌಡಲು ಸಮುದಾಯದವರು ಹಸಿವಾದಾಗ ತಿನ್ನುತ್ತಿದ್ದರು. ಅದು ಅವರ ಆಹಾರ ಪದ್ಧತಿಯೂ ಆಗಿತ್ತು ಎಂದು ಇತಿಹಾಸಜ್ಞರು ಹೇಳುತ್ತಾರೆ.

ಕಾಡುಮೇಡುಗಳಲ್ಲಿ ವಾಸ: ಈ ಹಿಂದೆ ಗೌಡಲು ಸಮುದಾಯದವರು ಕಾಡುಮೇಡುಗಳಲ್ಲಿ ವಾಸವಾಗಿದ್ದವರು. ಆರಣ್ಯ ಕಾಯ್ದೆ ಜಾರಿಗೆ ಬಂದ ಬಳಿಕ ಊರುಗಳಿಗೆ ವಲಸೆ ಬಂದರು. ಆದರೂ ಅರಣ್ಯ ಪ್ರದೇಶದ ಅಕ್ಕಪಕ್ಕದಲ್ಲೇ ಇವರ ವಾಸ. ಹೀಗಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇವರು ನೆಲೆಸಿರುವ ಪ್ರದೇಶಗಳೆಲ್ಲವೂ ನಕ್ಸಲ್ ಪೀಡಿತ ಎಂಬ ಹಣೆಪಟ್ಟಿ ಅಂಟಿಸಿಕೊಂಡಿವೆ.
ತುಳುಗೌಡಲು, ವೈಷ್ಣವ, ನಾಮಧಾರಿ, ಮಲೆಗೌಡಲು, ಕುಮ್ರಿ ಗೌಡಲು, ಕಬ್ಬಿನ ಮಲೆಯವರು, ಇವು ಗೌಡಲು ಸಮುದಾಯದಲ್ಲಿನ ಒಳಪಂಗಡಗಳು. ಸರಳ ಮತ್ತು ಸಜ್ಜನಿಕೆಗೆ ಈ ಸಮಾಜ ಹೆಸರುವಾಸಿ. ಯಾರ ತಂಟೆ ತಕರಾರಿಗೂ ಹೋಗದೆ ತಾವಾಯಿತು, ತಮ್ಮ ಜೀವನವಾಯಿತು ಎಂಬಂತೆ ಇರುವುದು ಇವರ ಅಭ್ಯಾಸ. ಜೊತೆಗೆ ಶ್ರಮಜೀವಿಗಳು. ಯಾರಿಗೂ ಕೆಡಕು ಬಯಸದ ಮಂದಿ ಇವರು. ತೋಳಾರ, ಬಾಳೆ, ಶೆಟ್ಟಿ, ಕಂಡಾಲ ಮುಂತಾದ ಬಳಿಗಳು ಇವರಲ್ಲಿವೆ. ಸಮ ಬಳಿಯವರ ಬಳಿ ಮದುವೆ ಸಂಬಂಧ ಬೆಳೆಸುವುದಿಲ್ಲ. ಕಾರಣ, ಸಹೋದರ ಭಾವನೆ. ಹೀಗಾಗಿ ಬೆಸ ಬಳಿಯವರ ಬಳಿ ಮಾತ್ರ ಇವರು ಸಂಬಂಧ ಬೆಳೆಸುತ್ತಾರೆ. ಕೊಡು, ತೆಗೆದುಕೊಳ್ಳುವುದು ಏನಿದ್ದರೂ ಇವರೊಂದಿಗೆ ಮಾತ್ರ.
ತುಳಸಿಪೂಜೆಯನ್ನು ಹೆಚ್ಚಾಗಿ ಮಾಡುವ ಗೌಡಲು, ತಿರುಪತಿಯ ವೆಕಟರಮಣ, ಕೈಲಾಸೇಶ್ವರ, ಲಕ್ಷ್ಮಿ, ಚೌಡೇಶ್ವರಿ, ಬ್ರಹ್ಮದೇವತೆ, ಭಗವತಿ, ಬೇಟೇರಯ್ಯ ಮತ್ತಿತರ ದೇವರುಗಳನ್ನು ಆರಾಧಿಸುತ್ತಾರೆ. ಪಂಜುರ್ಲಿ, ಗುಳಿಗ, ವರ್ತ, ಕಲ್ಕುಟ್ಟಿ, ಮಾರಿ, ಜಟುಗ, ಜಾಡೆ, ರಾಹು, ಭೂತ, ವರ್ಮ, ನಾಗ ಮುಂತಾದವು ಇವರ ಮನೆ ದೈವಗಳು.

ಕಾಡಿನಲ್ಲಿದೆ ದೈವದ ಶಕ್ತಿ : ಕಾಡಿಗೂ ಇವರ ಬದುಕಿಗೂ ಬಿಡಿಸಲಾಗದ ನಂಟು. ನಮ್ಮ ದೈವದ ಶಕ್ತಿ ಇರುವುದೇ ಕಾಡಿನಲ್ಲಿ ಎಂಬುದು ಗೌಡಲು ಸಮುದಾಯದವರ ನಂಬಿಕೆ. ಹೀಗಾಗಿ ಪ್ರಕೃತಿ ಮಾತೆಗೆ ಇವರು ಸದಾ ಪೂಜೆ ಸಲ್ಲಿಸುತ್ತಾರೆ. ಭೂಮಿ ಪೂಜೆಯೂ ಆಚರಣೆಯಲ್ಲಿದೆ. ಭೂಮಿ ಹುಣ್ಣಿಮೆಯಂದು ಉತ್ತಮ ಫಸಲು ಕೋರಿ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಪೂಜೆ, ಪುನಸ್ಕಾರ ನೆರವೇರಿಸುತ್ತಾರೆ.
ಬತ್ತ ತೆನೆ ಒಡೆದಾಗ ಮನೆ ಬಾಗಿಲನ್ನು ತಳಿರು ತೋರಣಗಳಿಂದ ಸಿಂಗರಿಸಿ ಅದ್ದೂರಿಯಾಗಿ ಮತ್ತು ಸಡಗರ ಸಂಭ್ರಮದಿಂದ ಬರ ಮಾಡಿಕೊಳ್ಳುತ್ತಾರೆ. ಭೂಮಿಗೂ ಬಯಕೆಗಳು ಇರುತ್ತವೆ ಎಂಬುದು ಈ ಸಮುದಾಯದವರ ನಂಬಿಕೆ. ಹೀಗಾಗಿ ಎಡೆ ಹಾಕಿ ಪೂಜೆ ಸಲ್ಲಿಸುವ ಸಂಪ್ರದಾಯ ಇವರಲ್ಲಿದೆ. ಅಂಟಿಗೆ ಪಂಟಿಗೆ ಎಂಬುದು ಇವರು 15 ದಿನಗಳ ಕಾಲ ಆಚರಿಸುವ ಒಂದು ಹಬ್ಬ. ಒಂದೊಂದು ಹಬ್ಬಕ್ಕೂ ಒಂದೊಂದು ಹಾಡು ಇವರಲ್ಲಿದೆ. ಕೋಲಾಟ, ಬಸವನ ಕುಣಿತ, ಕರಡಿ ಆಟ, ಹಲ್ಲಿ ಹಬ್ಬ ಮತ್ತು ಹಲ್ಲಿ ಕುಣಿತದಂತಹ ವಿಶೇಷಗಳನ್ನೂ ಈ ಸಮಾಜದಲ್ಲಿ ಕಾಣಬಹುದು.
ಇನ್ನು ಮದುವೆ ಅಂದರಂತೂ ಸಂಭ್ರಮವೋ ಸಂಭ್ರಮ. ಮನೆಯ ಮುಂದೆ ಚಪ್ಪರ ಹಾಕಿ ಹಣ್ಣು ಮತ್ತು ತರಕಾರಿಗಳಿಂದ ಅದನ್ನು ಸಿಂಗರಿಸಿ ಮದುವೆಗೆ ಬಂದವರಿಗೆ ಅದ್ದೂರಿ ಭೋಜನ ಹಾಕಿಸಿ ಖುಷಿಪಡುತ್ತಾರೆ. ಚಪ್ಪರ ಹಾಕಿದವರಿಗೆ ವಿಶೇಷ ಗೌರವ ಸಲ್ಲಿಕೆಯಾಗುತ್ತದೆ. ಈ ಸಂದರ್ಭದಲ್ಲಿ ಚಪ್ಪರ ಪೂಜೆ, ಗೌರಿ ಪೂಜೆ ನೆರವೇರುತ್ತದೆ. ವಧುವಿಗೆ ಅರಿಶಿಣ ಹಚ್ಚಿ ಎಣ್ಣೆ ಸ್ನಾನ ಮಾಡಿಸಲಾಗುತ್ತದೆ. ಮಹೂರ್ತದ ಸಂದರ್ಭದಲ್ಲಿ ತೆರೆ ಪಧ್ಧತಿ ಜಾರಿಯಲ್ಲಿರುತ್ತದೆ.

ಆತ್ಮಗಳು ಅಸ್ತಿತ್ವದಲ್ಲಿರುತ್ತವೆ:
ಸತ್ತವರ ಆತ್ಮಗಳು ಅಸ್ತಿತ್ವದಲ್ಲಿರುತ್ತವೆ ಎಂದು ಗೌಡಲು ಸಮುದಾಯದವರು ನಂಬಿದ್ದಾರೆ. ಆ ಆತ್ಮಗಳೇ ಕುಟುಂಬದ ಆಗುಹೋಗುಗಳನ್ನು ನೋಡಿಕೊಳ್ಳುತ್ತವೆ. ಹೀಗಾಗಿ ಆ ಆತ್ಮಗಳನ್ನು ಸಂತೃಪ್ತಿಯಿಂದ ಇಡಬೇಕು. ಸತ್ತವರ ಆತ್ಮಗಳು 16ನೇ ತಲೆಮಾರಿನವರೆಗೆ ನಮ್ಮನ್ನು ಕಾಪಾಡುತ್ತವೆ ಎನ್ನುತ್ತಾರೆ ಸಮುದಾಯದ ಹಿರಿಯರು.
ಇನ್ನು ಕರಕುಶಲ ಕಲೆಗೂ ಗೌಡಲು ಸಮುದಾಯದವರು ಹೆಸರುವಾಸಿ. ಮುಂಡಗದ ಗಿಡದಿಂದ ಚಾಪೆ ಹೆಣೆಯುವ, ಪೊರಕೆ, ಮರ ತಯಾರಿಸುವ ಕಲೆ ಗೊತ್ತಿದೆ. ಕಾಡಿನಲ್ಲಿ ಗೆಡ್ಡೆ ಗೆಣಸು ತೆಗೆದು ಅದನ್ನು ಬೇಯಿಸಿ ತಿನ್ನುವ ಗೌಡಲು ಸಮುದಾಯದವರಿಗೆ ಇರುವೆಗಳೆಂದರೆ ರುಚಿಯಾದ ಆಹಾರ. ಸಾಮಾನ್ಯವಾಗಿ ಬೇವಿನ ಮರಗಳಲ್ಲಿರುವ ಕೆಂಪು ಇರುವೆಗಳನ್ನು ಸಂಗ್ರಹಿಸಿ ಅದನ್ನು ಬೇಯಿಸಿ ಸೇವಿಸುತ್ತಾರೆ. ಸಿಂಧಿ, ಭಗಿನಿ ಮರದ ಹೆಂಡ, ಅಕ್ಕಿಯಿಂದ ತಯಾರಿಸಿದ ಮದ್ಯವೂ ಇವರಿಗೆ ಅಚ್ಚುಮೆಚ್ಚು. ಕಾಡಿನಲ್ಲಿ ಇದ್ದವರಾದ್ದರಿಂದ ಅಲ್ಲಿ ಸಿಗುವ ಔಷಧಯುಕ್ತ ಗಿಡಮರಗಳ ಬಗ್ಗೆ ಆಪಾರ ಜ್ಞಾನ ಹೊಂದಿದ್ದಾರೆ. ಹೀಗಾಗಿ ಗಿಡ ಮೂಲಿಕೆಗಳನ್ನು ತಂದು ನಾಟಿ ಔಷಧ ತಯಾರು ಮಾಡಿ ಕೊಡುತ್ತಾರೆ. ಜಾಂಡೀಸ್ ಕಾಯಿಲೆಗೆ ಮದ್ದು ನೀಡುವುದರಲ್ಲಿ ಇವರು ಸಿದ್ಧ ಹಸ್ತರು.
ಈ ಹಿಂದೆ ಕಾಡುಮೇಡುಗಳಲ್ಲಿ ವಾಸವಾಗಿದ್ದಾಗ ಬೇಟೆಯಾಡುವುದನ್ನು ಗೌಡಲು ಸಮುದಾಯದವರು ಆಭ್ಯಾಸವನ್ನಾಗಿ ಮಾಡಿಕೊಂಡಿದ್ದರು. ಸಣ್ಣಪುಟ್ಟು ಪ್ರಾಣಿ, ಪಕ್ಷಿಗಳನ್ನು ಹಿಡಿದು ಆಡುಗೆ ಮಾಡಿ ತಿನ್ನುತ್ತಿದ್ದರು. ಈಗ ಬೇಟೆಯನ್ನು ನಿಷೇಧಿಸಲಾಗಿದೆ. ಹೀಗಾಗಿ ಮಾಂಸಾಹಾರಕ್ಕಾಗಿ ಕುರಿ, ಕೋಳಿಗಳನ್ನು ಸಾಕಿಕೊಂಡಿದ್ದಾರೆ. ಜೇನು ಸಾಕಣೆಯೂ ಇವರಲ್ಲಿ ಉಂಟು.

ಸುಧಾರಣೆ ಕಾಣದ ಬದುಕು: ಗೌಡಲು ಕುಟುಂಬಗಳಲ್ಲಿ ಕುಮ್ರಿ ಬೇಸಾಯ ಪದ್ಧತಿ ಜಾರಿಯಲ್ಲಿದೆ. ತಮ್ಮ ಜಮೀನುಗಳಲ್ಲಿ ಅಡಕೆ, ಏಲಕ್ಕಿ, ಮೆಣಸು ಹೆಚ್ಚಾಗಿ ಬೆಳೆಯುತ್ತಾರೆ. ಬಹುತೇಕ ಕುಟುಂಬಗಳು ಬೇಸಾಯವನ್ನೇ ಜೀವನಕ್ಕೆ ಆಧಾರವಾಗಿ ಮಾಡಿಕೊಂಡಿವೆ. ನೀರಿನ ಲಭ್ಯತೆ ನೋಡಿಕೊಂಡು ಯಾವ ಬೆಳೆ ಬೆಳೆಯಬೇಕು ಎಂಬುದನ್ನು ಇವರು ನಿರ್ಧರಿಸುತ್ತಾರೆ. ಮುರುಗನ ಹುಳಿ, ದಾಲ್ ಚಿನ್ನಿ ಇವರ ಪ್ರಮುಖ ಆದಾಯದ ಮೂಲಗಳಾಗಿವೆ. ಇಷ್ಟೆಲ್ಲ ಇದ್ದರೂ ಗೌಡಲು ಜನರ ಬದುಕೇನೂ ಸುಧಾರಣೆ ಕಂಡಿಲ್ಲ.
ಅನಕ್ಷರತೆ, ನಿರುದ್ಯೋಗ, ಬಡತನ ಇವರನ್ನು ಕಾಡುತ್ತಿರುವ ಪ್ರಮುಖವಾದ ಸಮಸ್ಯೆಗಳಾಗಿವೆ. ಇವರು ವಾಸ ಮಾಡುತ್ತಿರುವ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಇವರ ಜೊತೆಗೆ ಪ್ರಾಕೃತಿಕ ಸಂಪತ್ತು ಇದೆ ಎಂಬುದನ್ನು ಬಿಟ್ಟರೆ ಬೇರೇನೂ ಇಲ್ಲ. ನಕ್ಸಲ್‌ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರ ಘೋಷಿಸುವ ಯೋಜನೆಗಳೂ ಈ ಸಮಾಜದವರನ್ನು ಸಮರ್ಪಕವಾಗಿ ತಲುಪಿಲ್ಲ. ಈ ಸಮುದಾಯ ಕುರಿತು ಡಾ. ಕೆ.ಎಂ. ಮೈತ್ರಿ ಅವರು ಅಧ್ಯಯನ ನಡೆಸಿದ್ದಾರೆ. ವಾರ್ತಾ ಇಲಾಖೆ ಸಹಯೋಗದಲ್ಲಿ ಎಂ.ಪಿ. ಭಾರತೀಶಂಕರ್ ಅವರು ಸಾಕ್ಷ್ಯಚಿತ್ರವನ್ನೂ ತಯಾರಿಸಿದ್ದಾರೆ.
ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಈ ಸಮಾಜದ ಜನ ಸಂಘಟನೆ ಕಡೆಗೂ ಬಲವಾದ ಹೆಜ್ಜೆಯನ್ನೇನೂ ಇಟ್ಟಿಲ್ಲ. ಆದರೂ ಕೆಲ ಮುಖಂಡರು ಸಮಾಜದವರ ಒಳಿತಿಗೆ ದುಡಿಯುತ್ತಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

- ಕೆ.ವಿ.ಪ್ರಭಾಕರ  
 prabhukolar@yahoo.com


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com