ಕುಲಾಂತರಿ ವಿರೋಧಿ ಆಂದೋಲನದ ಹಿಂದಿರುವ ಉದ್ದೇಶವೇನು?

Updated on

ಪ್ರಸ್ತುತ ದಿನಗಳಲ್ಲಿ ರಾಜಕಾರಣವಿಲ್ಲದೆ ದೇವರಪೂಜೆ ಕೂಡ ಮಾಡಲಾಗುವುದಿಲ್ಲ. ರಾಜಕೀಯ ಎಲ್ಲಾ ಕ್ಷೇತ್ರಗಳಲ್ಲೂ ಹಾಸು ಹೊಕ್ಕಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರವಾಗಲೀ ಅಥವಾ ಸರ್ಕಾರೇತರ ಸಂಘ, ಸಂಸ್ಥೆಗಳ ಚಟುವಟಿಕೆಗಳಾಗಲಿ, ರಾಜಕೀಯದಿಂದ ಹೊರತಾಗಿಲ್ಲ. ಆಯಾ ಕ್ಷೇತ್ರದ ಒಳಹೊಕ್ಕು ಕೆಲಸ ಮಾಡುವವರಿಗೆ ಮಾತ್ರ ಈ ಒಳಸತ್ಯ ತಿಳಿದಿರುತ್ತದೆ. ಅದರಲ್ಲೂ ಯಾವುದೇ ಹೋರಾಟ ಕೈಗೆತ್ತಿಕೊಂಡಾಗ ಮತ್ತು ಅದನ್ನು ಜನಾಂದೋಲನದ ಮುಖೇನ ಕಾರ್ಯಗತವಾಗಿಸಬೇಕಾದರೆ, ನಾಲ್ಕು ಜನರ ಸಹಾಯ, ಸಹಯೋಗ ಬೇಕಾಗುತ್ತದೆ ಮತ್ತು ಮುಖ್ಯವಾಗಿ ಹಣವಿಲ್ಲದೇ ಯಾವ ಕೆಲಸವೂ ಸಾಧ್ಯವಾಗುವುದಿಲ್ಲ. ಸತತವಾಗಿ ಹೊರದೇಶದಿಂದ ಹಣ ಹರಿದು ಬರದೇ ಇದ್ದರೆ, ಈ ತರಹದ ಆಂದೋಲನಗಳನ್ನು ವರ್ಷಂಪ್ರತಿ ನಡೆಸಿಕೊಂಡು ಹೋಗಲು ಸಾಧ್ಯವಾಗುವುದಿಲ್ಲ. ಪ್ರಧಾನಿ ಡಾ. ಮನಮೋಹನ ಸಿಂಗ್ ಹೇಳಿರುವಂತೆ ಕೂಡಂಕುಲಂ ಅಣುಸ್ಥಾವರ ವಿರೋಧ ಮತ್ತು ಕುಲಾಂತರಿ ವಿರೋಧಿ ಆಂದೋಲನಕ್ಕೆ ಹೊರದೇಶದಿಂದ ಹಣ ಹರಿದು ಬರುತ್ತಿರುವುದು ಖಚಿತ ಸಂಗತಿ.
ಪ್ರಪಂಚದಾದ್ಯಂತದ ಕುಲಾಂತರಿ ವಿರೋಧಿ ಆಂದೋಲನವನ್ನು ಸುಮಾರು ಮೂವತ್ತು ವರ್ಷಗಳಿಂದ ಅವಲೋಕಿಸಿಕೊಂಡು ಬಂದಿರುವ ನನಗೆ ಅರ್ಥವಾದ ಮುಖ್ಯ ಅಂಶಗಳೆಂದರೆ, ಹೊರಗಿನಿಂದ ನೋಡುವವರಿಗೆ "ವಿರೋಧಿಗಳು ಗಹನವಾದ ವೈಜ್ಞಾನಿಕಾಧಾರದ ಮೇಲೆ ತಮ್ಮ ಆತಂಕ ವ್ಯಕ್ತಪಡಿಸುತ್ತಿದ್ದಾರೆ" ಎಂದೆನಿಸಿರುತ್ತದೆ ಎಂದು. ಆದರೆ ಈ ವಿರೋಧಗಳನ್ನು ಕೂಲಂಕಷವಾಗಿ ಪರೀಕ್ಷಿಸಿದಾಗ ಅವ್ಯಾವುದಕ್ಕೂ ವೈಜ್ಞಾನಿಕ ಆಧಾರವಿರುವುದಿಲ್ಲ ಎಂಬುದು ತಿಳಿಯುತ್ತದೆ. ಸುಮಾರು ಮೂವತ್ತು ವರ್ಷಗಳಿಂದ ನಮ್ಮಂತಹ ವಿಜ್ಞಾನಿಗಳು ವಿವಿಧ ದೇಶಗಳಲ್ಲಿ, ಸಾವಿರಾರು ವೇದಿಕೆಗಳಲ್ಲಿ ಹಾಗೂ ಅಧಿಕೃತ ವೈಜ್ಞಾನಿಕ ವರದಿಗಳು ಮತ್ತು ಸಂಶೋಧನಾ ಲೇಖನಗಳ ಮೂಲಕ ಪದೇ, ಪದೇ ತಿಳಿ ಹೇಳಿದರೂ, ಅದೆಲ್ಲವನ್ನೂ ತಿರಸ್ಕರಿಸಿ, ಹೇಳಿದ್ದೇ ಹೇಳೋ ಕಿಸುಬಾಯಿ ದಾಸರಂತೆ, ಈ ವಿರೋಧಿಗಳು ಆತಂಕ ಸೃಷ್ಟಿಸಿ ಮತ್ತು ರಾಜಕಾರಣಿಗಳ ತಲೆ ಕೆಡಿಸಿ ತಂತ್ರಜ್ಞಾನ ವಿರೋಧಿ ನೀತಿಗಳನ್ನು ಜಾರಿ ಮಾಡಿಸುತ್ತಿದ್ದಾರೆ. ಇತ್ತೀಚೆಗೆ ನನ್ನ ವಿಜ್ಞಾನಿ ಸಹೋದ್ಯೋಗಿಗಳಾದ ಎಡಿನ್‌ಬರೋ ವಿ.ವಿ.ಯ ಪ್ರೊ. ಅಂಥೋನಿ ಟ್ರೆವವಾಸ್ ಮತ್ತು ಆಕ್ಸ್‌ಫರ್ಡ್ ವಿ.ವಿ.ಯ ಪ್ರೊ. ಕ್ರಿಸ್ಟೋಫರ್ ಲೀವರ್, ವಿರೋಧಿಗಳ ವಿರೋಧಾಭಾಸಗಳನ್ನು ಪಟ್ಟಿ ಮಾಡಿ ಮತ್ತೊಮ್ಮೆ ಬಿಡಿ ಬಿಡಿಯಾಗಿ ವೈಜ್ಞಾನಿಕಾಧಾರದ ಉತ್ತರಗಳನ್ನು ನೀಡಿದ್ದಾರೆ. EMBRO Reports ಎಂಬ ಯುರೋಪಿನ ಪ್ರತಿಷ್ಠಿತ ಸಂಶೋಧನಾ ಜರ್ನಲ್‌ನಲ್ಲಿ ಸತ್ಯವನ್ನು ಪುನರುಚ್ಚರಿಸಿ, ಇನ್ನಾದರೂ ಅವೈಜ್ಞಾನಿಕ ವಿರೋಧಗಳನ್ನು ನಿಲ್ಲಿಸಿ ಎಂದು ವಿನಂತಿಸಿಕೊಂಡಿದ್ದಾರೆ. ಮುಂದೇನಾಗುತ್ತದೋ ಎನ್ನುವುದನ್ನು ನಾವೆಲ್ಲ ಮತ್ತೊಮ್ಮೆ ಕಾದು ನೋಡಬೇಕು.
ಕಳೆದ ವಾರ ಫಿಲಿಪೀನ್ಸ್‌ನ ಉಚ್ಚ ನ್ಯಾಯಾಲಯ ಈ ಕುಲಾಂತರಿ ವಿರೋಧಿಗಳ ವಾದವನ್ನು ಆಲಿಸಿ ಬೀಟಿ ಬದನೆಕಾಯಿಯನ್ನು ನಿಷೇದಗೊಳಿಸುತ್ತಾ ನೀಡಿದ ವ್ಯಾಖ್ಯಾನವೇನೆಂದರೆ-"ಯಾವುದೇ ಮನುಷ್ಯನಿಗೆ ಕ್ರಿಮಿ-ಕೀಟಗಳ ಮತ್ತು ಪ್ರಾಣಿ ಸಂಕುಲಗಳ ಆಹಾರವನ್ನು ಕಸಿದುಕೊಳ್ಳುವುದಕ್ಕೆ ಹಕ್ಕಿಲ್ಲ" ಎಂದು. ಇದರರ್ಥ ಏನಪ್ಪಾ ಅಂದರೆ ಕ್ರಿಮಿ-ಕೀಟಗಳು ಬೆಳೆಗಳನ್ನು ತಿಂದು ಬದುಕಲಿ. ಆಮೇಲೇನಾದರೂ ಉಳಿದಿದ್ದರೆ ಅದನ್ನು ಮನುಷ್ಯ ಆಹಾರವಾಗಿ ಉಪಯೋಗಿಸಬಹುದು ಎಂದು. ಹೇಗಿದೆ ನೋಡಿ ವಿಪರ್ಯಾಸ! ಅಂದರೆ ಕೀಟನಾಶಕಗಳನ್ನು ಉಪಯೋಗಿಸದೆಯೇ ಕೃಷಿ ಮಾಡಿ ಬದುಕಬೇಕೆಂದು ಅದು ಹೇಳುತ್ತದೆ. ಈ ತೀರ್ಪು ಕೃಷಿಯನ್ನು ಬುಡಮೇಲಾಗಿಸುತ್ತದೆ. ಈ ರೀತಿಯ ತೀರ್ಪನ್ನು ನ್ಯಾಯಾಲಯ ನೀಡಿದರೆ ದೇಶ ಹೇಗೆ ಉದ್ಧಾರವಾಗಬೇಕು? ಭಾರತದ ಸಕಲ ಕೃಷಿ ವಿಜ್ಞಾನಿಗಳು ಸದ್ಯದಲ್ಲಿ ಬಹಳ ಆತಂಕಿತರಾಗಿದ್ದಾರೆ. ಏಕೆಂದರೆ, ಒಂದು ಕುಲಾಂತರಿ ವಿರೋಧಿ ಬಣ ಸುಮಾರು ಐದು ವರ್ಷದಿಂದ ಸುಪ್ರೀಂ ಕೋರ್ಟಿನಲ್ಲಿ "ಕುಲಾಂತರಿ ತಂತ್ರಜ್ಞಾನದ ಮೇಲೆ ಸಂಪೂರ್ಣವಾಗಿ ನಿಷೇಧ ಹೇರಬೇಕು" ಎಂದು ಹೆಣಗಾಡುತ್ತಿದೆ. ನವೆಂಬರ್ 18ನೇ ತಾರೀಖು ಆ ಕೇಸಿನ ತೀರ್ಪಿನ ದಿನ. ಇನ್ನೊಂದು ತಿಂಗಳಲ್ಲಿ ಕುಲಾಂತರಿ ತಂತ್ರಜ್ಞಾನದ ಹಣೆಬರಹ ಇತ್ಯರ್ಥವಾಗಲಿದೆ. ಸಾವಿರ ಸಲ ಸುಳ್ಳು ಹೇಳಿದರೆ, ಸುಳ್ಳೇ ಸತ್ಯವಾಗುತ್ತದಂತೆ. ಹಾಗಾಗಿದೆ ಭಾರತ ದೇಶದ ಕೃಷಿ ವಿಜ್ಞಾನದ ಸ್ಥಿತಿ. ಕುಲಾಂತರಿ ವಿರೋಧಿ ಆಂದೋಲನ ಸಂಪೂರ್ಣವಾಗಿ ರಾಜಕೀಯಮಯವಾಗಿ ಬಿಟ್ಟಿದೆ. ಅಂದರೆ, ಸಂಸದ್ ಸಮಿತಿಯ ಎಲ್ಲಾ ಪಾರ್ಟಿಗಳ ಮೂವತ್ತು ಸಂಸದರು ಸರ್ವ ಸಮ್ಮತದಿಂದ ಸುಳ್ಳು ಆಧಾರ ಹಿಡಿದುಕೊಂಡು ಕುಲಾಂತರಿ ತಂತ್ರಜ್ಞಾನವನ್ನು ನಿಷೇಧಿಸಬೇಕೆಂದು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ. ವಿಪರ್ಯಾಸವೆಂದರೆ ದೇಶದ ಅತ್ಯುನ್ನತ ವಿಜ್ಞಾನ ಅಕಾಡೆಮಿಗಳ ಮತ್ತು ವಿಜ್ಞಾನಿಗಳ ಹೇಳಿಕೆಗಳನ್ನು ಅವರು ಪರಿಗಣಿಸಲೇ ಇಲ್ಲ. ನಾನೂ ಸಹ ಖುದ್ದಾಗಿ ಸಂಸದ್ ಸಮಿತಿಯ ಅಧ್ಯಕ್ಷ, ಬಾಸುದೇಬ್ ಆಚಾರ್ಯರೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಮಾತನಾಡಿ ಪ್ರಪಂಚದ ಅತ್ಯುತ್ತಮ ಅಕಾಡೆಮಿಗಳ  ಇಪ್ಪತ್ತು ವರದಿಗಳನ್ನು ಮತ್ತು ಸಂಶೋಧನಾ ಲೇಖನಗಳನ್ನು ಕೊಟ್ಟು ಬಂದಿದ್ದೆ. ಭೇಟಿಯ ಸಂದರ್ಭದಲ್ಲಿ ಈ ಆಚಾರ್ಯ ಮಹಾಶಯರಿಗೆ ವಿಜ್ಞಾನದ ಗಂಧ-ಗಾಳಿಯೂ ಗೊತ್ತಿಲ್ಲ ಎಂದು ಖಚಿತವಾಯಿತು. ಆತ ಕೇಳಿದ ಪ್ರಶ್ನೆಗಳೆಲ್ಲಾ ಈ ವಿರೋಧಿಗಳ ಸುಳ್ಳುಗಳೇ ಕಾಣಿಸುತ್ತಿದ್ದವು. ಅಂದರೆ, ಆತನ ತಲೆ ತುಂಬಿರುವವರೆಲ್ಲಾ 'ಗ್ರೀನ್ ಪೀಸ್‌'ನ ಸದಸ್ಯರೆಂದು ತಿಳಿದು ಬಂತು. ನಾನು ಆಚಾರ್ಯ ಅವರನ್ನು ಭೇಟಿಮಾಡಿದ ಸಂದರ್ಭದಲ್ಲಿ, ಈ ಗ್ರೀನ್‌ಪೀಸ್‌ನವರ ಅವೈಜ್ಞಾನಿಕ ಕುಲಾಂತರಿ ವಿರೋಧಿ ವರದಿಯನ್ನು ಆಚಾರ್ಯ ಬಿಡುಗಡೆ ಮಾಡಿದ್ದ ಸುದ್ಧಿ ಪತ್ರಿಕೆಗಳಲ್ಲಿ ಪ್ರಕಟವಾಯಿತು. ಅಷ್ಟೇ ಅಲ್ಲದೇ ತಮ್ಮ ಸಂಸದ್ ಸಮಿತಿಯ ವರದಿಯಲ್ಲಿ ಗ್ರೀನ್ ಪೀಸ್‌ನ ವರದಿಯನ್ನೇ ಅವರು ಭಟ್ಟಿ ಇಳಿಸಿದ್ದಾರೆ. ಇನ್ನು ಕೇರಳದ ಮಾಜಿ ಅರ್ಥ ಮಂತ್ರಿ ಡಾ. ಥಾಮಸ್ ಐಸಾಕ್ ನನಗೆ ಹೇಳಿದ್ದೇನೆಂದರೆ- "ನಮ್ಮ ಸರ್ಕಾರಕ್ಕೆ ಯಾವ ವೈಜ್ಞಾನಿಕಾಧಾರವೂ ಬೇಕಿಲ್ಲ. ನಮಗೆ ಕುಲಾಂತರಿ ಅಂದರೆ ಮಾನ್ಸಾಂಟೋ. ಮಾನ್ಸಾಂಟೋ ಅಂದರೆ ಕುಲಾಂತರಿ. ಅಷ್ಟೇ ಸಾಕು ನಿಷೇಧ ಹೇರುವುದಕ್ಕೆ"
ಚರ್ಚೆಗೆ ಅವರು ಆಸ್ಪದವೇ ಕೊಡಲಿಲ್ಲ. ಹೀಗಾಗಿ, ಕೇರಳ ರಾಜ್ಯ ಭಾರತದಲ್ಲೇ ಪ್ರಪ್ರಥಮವಾಗಿ ಕುಲಾಂತರಿ ತಳಿಗಳನ್ನು ನಿಷೇಧಿಸಿದ ರಾಜ್ಯವೆಂದು ಹೇಳಬಹುದು. ನಮ್ಮ ದೇಶದಲ್ಲಿ ಯಾವುದೇ ಸಾರ್ವಜನಿಕ ವಿಷಯವಾಗಲಿ, ಒಂದು ರಾಜ್ಯದಲ್ಲಿ ಒಂದು ತೀರ್ಮಾನ ತೆಗೆದುಕೊಂಡರೆ, ವಿವಿಧ ರಾಜ್ಯಗಳಲ್ಲೂ ಅದೇ ತೀರ್ಮಾನ ತೆಗೆದುಕೊಳ್ಳಬೇಕೆಂದು ಒತ್ತಾಯ ಬರುತ್ತದೆ. ಹಾಗಾಗಿ ಕರ್ನಾಟಕದ ಕೆಲ ರೈತ ಮುಖಂಡರು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ, ಕೇರಳ ರಾಜ್ಯದಂತೆ ಕರ್ನಾಟಕದಲ್ಲೂ ಕುಲಾಂತರಿ ಮೇಲೆ ನಿಷೇಧ ಹೇರಬೇಕೆಂದು ಒತ್ತಾಯಿಸಿದ್ದರು. ಅದು ಕೈಗೂಡುವ ವೇಳೆಗೆ ಯಡಿಯೂರಪ್ಪ ಪದವಿಯಿಂದ ನಿರ್ಗಮಿಸಿದ್ದರು. ಹಾಗಂತ ಅವರುಗಳು ಸುಮ್ಮನಾಗಿದ್ದಾರೆ ಎನ್ನುವ ಹಾಗೂ ಇಲ್ಲ. ಯಾವಾಗ ಬೇಕಾದರೂ ಸಿದ್ದರಾಮಯ್ಯನವರ ಮೇಲೆ ಅವರು ಒತ್ತಾಯ ಹೇರಬಹುದು. ಹೀಗೇ ಹೇಳುತ್ತಾ ಹೋದರೆ ಕುಲಾಂತರಿ ವಿರೋಧಿಗಳ ರಾಜಕಾರಣದ ಕಥೆ ಕೊನೆಯಿಲ್ಲದೆ ಸಾಗುತ್ತದೆ! ವಿಜ್ಞಾನದ ಪಾಡನ್ನು ಕೇಳುವವರೂ ಇಲ್ಲ, ಹೇಳುವವರೂ ಇಲ್ಲ. ಕಂಪನಿಗಳಿಂದ ದುಡ್ಡು ತಿಂದು ಕುಲಾಂತರಿ ತಂತ್ರಜ್ಞಾನವನ್ನು ದೇಶದ ಬಡ ರೈತನ ಮೇಲೆ ಹೇರುತ್ತಿದ್ದಾರೆ ಎಂದು ಬೊಬ್ಬೆ ಇಡುತ್ತಾರೆಂದು ಹೆದರಿ, ವಿಜ್ಞಾನಿಗಳು ಈ ಆಂದೋಲನದ ಬಗ್ಗೆ ಚಕಾರವೆತ್ತುವುದಿಲ್ಲ. ಹೀಗಾಗಿ, ಕುಲಾಂತರಿ ರಾಜಕೀಯ ರಾಜಾರೋಷವಾಗಿ ಸಾಗುತ್ತಿದೆ. ಇವೆಲ್ಲದರ ನಡುವೆಯೇ ಒಂದೇ ಒಂದು ಭರವಸೆ ಚಿಕ್ಕದಾಗಿ ಚಿಗುರೊಡೆದಿದೆ. ಅದೇನಪ್ಪಾ ಎಂದರೆ ನವೆಂಬರ್ 18ನೇ ತಾರೀಖಿನಂದು ದೇಶದ ವಿಜ್ಞಾನ ಅಕಾಡೆಮಿಗಳು, ಕೇಂದ್ರ ಕೃಷಿ ಮಂತ್ರಾಲಯ ಮತ್ತು ಭಾರತೀಯ ಕೃಷಿ ಅನುಸಂಧಾನ ಪರಿಷತ್ ಬಲವಾದ ವೈಜ್ಞಾನಿಕಾಧಾರವುಳ್ಳ ಸಾಕ್ಷಿಗಳನ್ನು ಭಾರತದ ಅಟಾರ್ನಿ ಜನರಲ್ ಮುಖೇನ ಸುಪ್ರೀಂಕೋರ್ಟ್‌ಗೆ ಮಂಡಿಸಹೊರಟಿವೆ.
ಅಲೆಸಾಂಡ್ರೋ ನಿಕೋಲಿಯ ಮತ್ತು ಆತನ ಸಹವಿಜ್ಞಾನಿಗಳು ಇಟಲಿಯ ಪೆರುಜಿಯ ವಿವಿದಿಂದ Critical Review of Biotechnology ಎಂಬ ಸಂಶೋಧನಾ ಜರ್ನಲ್‌ನಲ್ಲಿ 2002ರಿಂದ 2012ರವರೆಗೆ ಪ್ರಕಟವಾಗಿರುವ ಒಂದು ಸಾವಿರದ ಏಳುನೂರು ಎಂಭತ್ತೇಳು ಅಧಿಕೃತ ವೈಜ್ಞಾನಿಕ ಸಂಶೋಧನಾ ಲೇಖನಗಳನ್ನು ಸಂಸ್ಕರಿಸಿ ಮತ್ತು ಪರಿಶೋಧಿಸಿ ಕುಲಾಂತರಿ ಬೆಳೆಗಳಿಂದಾಗಲೀ ಅಥವಾ ಆಹಾರದಿಂದಾಗಲೀ ಮನುಷ್ಯ/ಪ್ರಾಣಿ ಅಥವಾ ಪರಿಸರಕ್ಕೆ ಯಾವುದೇ ತರಹ ಧಕ್ಕೆ ಉಂಟಾಗುವುದಿಲ್ಲವೆಂದು ಎತ್ತಿ ತೋರಿಸಿದ್ದಾರೆ. ಈ ವರದಿಯನ್ನು ಭಾರತ ಸರ್ಕಾರ ಸುಪ್ರೀಂಕೋರ್ಟ್‌ಗೆ ನವೆಂಬರ್ 18ರಂದು ಸಲ್ಲಿಸಲಿದೆ. ಅಂತಿಮ ತೀರ್ಪಿಗಾಗಿ ಕಾದು ನೋಡಬೇಕಾಗಿದೆ. ನೀವೇ ನಿರ್ಧರಿಸಿ ಈ ಆಂದೋಲನ ವೈಜ್ಞಾನಿಕಾಧಾರವಾಗಿದೆಯೋ ಅಥವಾ ರಾಜಕೀಯದಿಂದ ಕೂಡಿದೆಯೋ ಎಂದು!

- ಪ್ರೊ. ಶಾಂತು ಶಾಂತಾರಾಮ್
ಐಯೋವ ರಾಜ್ಯ ಕೃಷಿ ವಿವಿ
Shanthus@iastate.edu

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com