ವಿಜ್ಞಾನ ಸಂವಹನ ಎಷ್ಟು ವಿಜ್ಞಾನಿಗಳಿಗೆ ಗೊತ್ತು?

Updated on

ವಿಜ್ಞಾನ ಸಂವಹನ ಎಂದರೆ "ಕಬ್ಬಿಣದ ಕಡಲೆ" ಎಂದೇ ಭಾವಿಸಲಾಗುತ್ತದೆ. ಯಾರಿಗೂ ವಿಜ್ಞಾನ ವಿಷಯಗಳ ಬಗ್ಗೆ ಕೂಲಂಕಷವಾಗಿ ಅರಿತುಕೊಳ್ಳಲು ಸಹನೆಯೇ ಇರುವುದಿಲ್ಲ. ವಿಪರ್ಯಾಸವೆಂದರೆ ಮುಖ್ಯವಾಗಿ ಗಣತಂತ್ರ ರಾಜ್ಯದಲ್ಲಿ 'ವಿಜ್ಞಾನ ಮತ್ತು ತಂತ್ರಜ್ಞಾನದ' ನೀತಿ-ನಿಯಮಗಳನ್ನು ರೂಪಿಸುವ ಚುನಾಯಿತ ಪ್ರತಿನಿಧಿಗಳಿಗೆ ವಿಜ್ಞಾನದ ಗಂಧ-ಗಾಳಿಯೂ ಗೊತ್ತಿರುವುದಿಲ್ಲ. ಇವರಿಗೆಲ್ಲ ತಪ್ಪು ದಾರಿ ತೋರಿಸುವವರೆಂದರೆ ರಾಜಕಾರಣಿಗಳಷ್ಟೇ ಜ್ಞಾನ ಹೊಂದಿರುವ ಎಂಗೋಗಳು! ಪ್ರಸ್ತುತ ಅತ್ಯಂತ ವಿವಾದಕ್ಕೊಳಗಾಗಿರುವ ತಂತ್ರಜ್ಞಾನಗಳೆಂದರೆ ಅಣುಶಕ್ತಿ ಮತ್ತು ಜೈವಿಕ ತಂತ್ರಜ್ಞಾನ. ಈ ಎರಡು ತಂತ್ರಜ್ಞಾನಗಳಿಗೆ ವಕ್ಕರಿಸಿಕೊಂಡಿರುವ ಎಂಗೋಗಳು ದಂತಕತೆಗಳನ್ನು ಸೃಷ್ಟಿಸಿ ವಿವಾದ ಹುಟ್ಟು ಹಾಕಿದ್ದಾರೆ. ಇಂಥ ವಿಷಯಗಳಲ್ಲಿ ರಾಜಕಾರಣಿಗಳು, ದಾರಿ ತಪ್ಪಿಸುವ ಎಂಗೋಗಳನ್ನೇ ಅತಿಯಾಗಿ ನಂಬುತ್ತಾರೆ. ವಿಜ್ಞಾನಿಗಳ ಮತ್ತು ತಂತ್ರಜ್ಞರ ಮಾತುಗಳನ್ನು ಕೇಳುವುದೇ ಇಲ್ಲ. ನಾನು ಪ್ರಪಂಚದ ವಿವಿಧ ದೇಶಗಳಲ್ಲಿ ರಾಜಕಾರಣಿಗಳನ್ನು ಮತ್ತು ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಅವರೆಲ್ಲರೂ ನಾಲ್ಕು ಗೋಡೆಯ ನಡುವೆ  ವಿಜ್ಞಾನಿಗಳೆದುರು ಈ ತಂತ್ರಜ್ಞಾನದ ಸುರಕ್ಷತೆಯ ಬಗ್ಗೆ ಒಪ್ಪಿಕೊಳ್ಳುತ್ತಾರೆ. ಆದರೆ ಈ ಎಂಗೋಗಳು ಸೃಷ್ಟಿಸಿರುವ ಆತಂಕಗಳಿಗೆ ಹೆದರಿ ಸಾರ್ವಜನಿಕವಾಗಿ ಒಪ್ಪಿಕೊಳ್ಳುವುದಿಲ್ಲ. ಎಷ್ಟರ ಮಟ್ಟಿಗೆ ಎಂಗೋಗಳು ಅಧಿಕಾರಿಗಳನ್ನು ಮತ್ತು ರಾಜಕಾರಣಿಗಳನ್ನು ಬೆದರಿಸಿದ್ದಾರೆಂಬುದನ್ನು ನೀವೇ ಲೆಕ್ಕ ಹಾಕಿ. ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ವಿಜ್ಞಾನ ಮತ್ತು ತಂತ್ರಜ್ಞಾನ ವಿರೋಧಿಗಳು ಎಷ್ಟರ ಮಟ್ಟಿಗೆ ವಿಜ್ಞಾನ ಸಂವಹನ ಕಾರ್ಯದಲ್ಲಿ ಗೆದ್ದಿದ್ದಾರೆಂದು. ಅಷ್ಟರಮಟ್ಟಿಗೆ ನಾನು ಈ ಎಂಗೋಗಳಿಗೆ ಹ್ಯಾಟ್ಸ್ ಆಫ್ ಹೇಳುತ್ತೇನೆ, ಹೇಳಲೇಬೇಕು! ಆದರೆ, ಕಾಲಾನುಕಾಲದಿಂದ ವಿಜ್ಞಾನಿಗಳಿಗೆ, ಜನಸಾಮಾನ್ಯರಿಗೆ ಅರ್ಥವಾಗುವಂತೆ ವಿಜ್ಞಾನ ಸಂವಹನವನ್ನು ಸಾಧಿಸಲು ಸಾಧ್ಯವೇ ಆಗಿಲ್ಲ. ಮತ್ತೊಂದು ವಿಷಯವೆಂದರೆ ವಿಜ್ಞಾನಿಗಳೇ, ಸಂವಹನಕಾರನಾದ ವಿಜ್ಞಾನಿಗೆ ಅಷ್ಟೊಂದು ಗೌರವ ಕೊಡುವುದಿಲ್ಲ. ಕಳೆದ ಶತಮಾನದಲ್ಲಿ ಪ್ರೊ. ಕಾರ್ಲ್ ಸೇಗನ್ ಎಂಬ ಕಾರ್ನೆಲ್ ವಿಶ್ವವಿದ್ಯಾಲಯದ ಅತ್ಯಂತ ಪ್ರಭಾವಿ ವಿಜ್ಞಾನ ಸಂವಹನಕಾರನಿಗೆ, ಅಮೆರಿಕದ ಅತ್ಯಂತ ಜೇಷ್ಠ ದರ್ಜೆಯ ನ್ಯಾಷನಲ್ ಸೈನ್ಸ್ ಅಕಾಡೆಮಿಗೆ ಸದಸ್ಯತ್ವ ಸಿಗಲೇ ಇಲ್ಲ. ಯಾವ ವಿಜ್ಞಾನಿ ಸಂಶೋಧನೆ ಮಾಡುವಲ್ಲಿ ಆಸಕ್ತಿ ಮತ್ತು ಶಕ್ತಿ ಕಳೆದುಕೊಂಡಿರುತ್ತಾನೋ, ಅಂಥವನು ಮಾತ್ರ ಸಂವಹನೆ ಮಾಡುತ್ತಾನೆಂದು ಅವರನ್ನು ಹೀಯಾಳಿಸಲಾಯಿತು. ಭಾರತದಲ್ಲೇ ನೋಡಿ ಎಷ್ಟು ಜನ ವಿಜ್ಞಾನಿಗಳು ಅಣುಶಕ್ತಿ ಅಥವಾ ಜೈವಿಕ ತಂತ್ರಜ್ಞಾನದ ಬಗ್ಗೆ ಕೆಲವರು ಸುಳ್ಳು ವದಂತಿಗಳನ್ನು ಹಬ್ಬಿಸಿ ಜನಸಾಮಾನ್ಯರ ದಿಕ್ಕುತಪ್ಪಿಸುತ್ತಿದ್ದರೂ ತುಟಿಕ್ ಪಿಟಿಕ್ ಅನ್ನದೇ ಸುಮ್ಮನೆ ಕುಳಿತಿದ್ದಾರೆ ಎಂದು? ಯಾರೋ ಒಬ್ಬ ವಿಜ್ಞಾನಿ ಈ ವಿರೋಧಿಗಳ ಸುಳ್ಳುಗಳನ್ನು ವಿರೋಧಿಸಲು ನಿಂತರೆ, ತಕ್ಷಣ ಅವನನ್ನು ಯಾವುದೋ ದೇಶದ ಅಥವಾ ಬಹುರಾಷ್ಟ್ರೀಯ ಕಂಪನಿಯ ಏಜೆಂಟೆಂದು ಗುಲ್ಲೆಬ್ಬಿಸುತ್ತಾರೆ! ಹಾಗೆಂದ ತಕ್ಷಣ ವಿಜ್ಞಾನಿಗಳು ಬಾಲ ಮುದುರಿಕೊಂಡುತಮ್ಮ ತಮ್ಮ ಬಿಲದೊಳಗೆ ಅಡಗಿಕೊಳ್ಳುತ್ತಾರೆ. ಇದರ ಜೊತೆಗೆ ಪತ್ರಿಕೆಗಳೂ ಸಹ ಈ ತರಹದ ವಿಜ್ಞಾನ ವಿರೋಧಿಗಳಿಗೆ ಮಾತ್ರ ಉತ್ತೇಜನ ಕೊಡುತ್ತವೆ. ಯಾಕೆಂದರೆ ಸಾಮಾನ್ಯವಾಗಿ ದೈನಿಕ ಸುದ್ದಿ ಪತ್ರಿಕೆಗಳಲ್ಲಿ ವಿಜ್ಞಾನ ಅಥವಾ ಪರಿಸರ ವರದಿಗಾರರು ಅಭಾವವಿರುವುದು. ವಿಜ್ಞಾನದಲ್ಲಿ ಪರಿಣಿತಿ ಇದ್ದು ಜೊತೆಗೆ ಪತ್ರಕರ್ತ ತರಬೇತಿ ಹೊಂದಿರುವವರನ್ನು ಎಲ್ಲಾ ದಿನಪತ್ರಿಕೆಗಳೂ ಕೆಲಸಕ್ಕೆ ಇಟ್ಟುಕೊಂಡಿರುವುದಿಲ್ಲ. ಅಲ್ಲದೆ, Good news is no news; bad news makes news headlines ಎಂಬ ನಾಣ್ಣುಡಿಯಂತೆ ನೆಗೆಟಿವ್ ವರದಿಗಳನ್ನೇ  sensational ಆಗಿ ತಿಳಿಸುವುದೇ ಪತ್ರಿಕೆಗಳ ಕೆಲಸವಾಗಿಬಿಟ್ಟಿದೆ. ಇದನ್ನು ನಾನು ಜೈವಿಕ ತಂತ್ರಜ್ಞಾನದ ವಿರೋಧಿ ಆಂದೋಲನವನ್ನು ಕಂಡು, ಕೇಳಿ ಅರಿತುಕೊಂಡಿದ್ದೇನೆ. ಹಾಗಾದರೆ, ಸತ್ಯವಾದ ವಿಜ್ಞಾನ ಸಂವಹನ ಮಾಡುವುದಾದರೂ ಹೇಗೆ ಮತ್ತು ಸಾಮಾನ್ಯ ಓದುಗರಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಅಥವಾ ಸಾಮಾನ್ಯ ಜ್ಞಾನವನ್ನು ಹೇಗೆ ಹುಟ್ಟು ಹಾಕಬೇಕು?May 21-22, 2011 ರಲ್ಲಿ ಅಮೆರಿಕದ ನ್ಯಾಷನಲ್ ಸೈನ್ಸ್ ಅಕಾಡೆಮಿ, ಕಾರ್ನ್‌ಗಿ-ಮೆಲ್ಲನ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ  ''Arthur M. Sackle ಎಂಬ ಶೈಕ್ಷಣಿಕ ಸಮ್ಮೇಳನವೊಂದನ್ನು ಏರ್ಪಡಿಸಿತ್ತು. ಈ  ಸಮ್ಮೇಳನದ ವಿಷಯ- ''The Science of Science Communication' ಎಂದು.
ಆ ಸಭೆಯಲ್ಲಿ ಮಂಡಿಸಿದ ಹತ್ತಾರು ವಿದ್ವತ್ ಪ್ರಬಂಧಗಳನ್ನು ಆಗಸ್ಟ್ 2013ರಲ್ಲಿ ತನ್ನದೇ ಆದ Proceedings of the National Academy of Science of USAಯಲ್ಲಿ ಪ್ರಕಟಣೆ ಮಾಡಿದೆ. ಆ ಪ್ರಬಂಧಗಳಿಂದ ನನಗೆ ತಿಳಿದು ಬಂದಿರುವ ವಿಷಯಗಳನ್ನು ಕೆಳಗೆ ತಿಳಿಸಿದ್ದೇನೆ:  ಸಾಮಾನ್ಯ ಜನ ಪ್ರತಿದಿನದ ಜೀವನದಲ್ಲಿ ಯಾವುದೇ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾದರೆ, ಅದನ್ನು ಕಾರ್ಯಗತ ಮಾಡಲು ಸಕ್ರಮವಾದ ವಿಜ್ಞಾನದ ಅರಿವಿರಬೇಕು. ಹಾಗಾದರೆ, ಸಾಮಾನ್ಯ ಜನರಿಗೆ ಅರಿವಾಗುವಂತೆ, ಯಾವ ರೀತಿ ವಿಜ್ಞಾನ ಸಂವಹನೆ ಬೇಕು ಎಂಬುದು ಅತ್ಯಂತ ಕ್ಲಿಷ್ಟಕರ ಪ್ರಶ್ನೆ. ಸಂವಹನದ ವಿಷಯದಲ್ಲಿ ಪರಿಣಿತರಾಗಿರುವವರನ್ನು ಕೇಳಿದರೆ ವಿಜ್ಞಾನ ಸಾಮಾನ್ಯ ಜನತೆಗೆ ಕಬ್ಬಿಣದ ಕಡಲೆ ಆಗಿರುವುದಕ್ಕೆ ವಿಜ್ಞಾನಿಗಳೇ ಕಾರಣ ಎನ್ನುತ್ತಾರೆ. ವಿಜ್ಞಾನ ವಿಷಯವನ್ನು ಸುಲಭವಾಗಿ ಅರ್ಥಮಾಡಿಸಲು ವಿಜ್ಞಾನಿಗಳು ಸೋಲುತ್ತಾರೆ. ಇದಕ್ಕೆ ಕಾರಣ ಅವರ ಸಂವಹನಾ ದೌರ್ಬಲ್ಯ. ಇದಕ್ಕೆ ವಿಜ್ಞಾನಿಯೇ ಪರಿಹಾರ ಕಂಡುಕೊಳ್ಳಬೇಕು. ಅಮೆರಿಕದಲ್ಲಂತೂ ಬೇರೆ ಬೇರೆ ಮಟ್ಟದ ಕೋರ್ಟುಗಳು "ಯಾವುದೇ ವಿಜ್ಞಾನವಾಗಲಿ ಅಥವಾ ತಂತ್ರಜ್ಞಾನವಾಗಲಿ, ಒಬ್ಬ ಹತ್ತನೆ ತರಗತಿಯ ವಿದ್ಯಾವಂತನಿಗೆ ಅರ್ಥವಾಗುವಂತೆ ಬರೆಯಬೇಕೆಂದು" ಖಡಾ ಖಂಡಿತವಾಗಿ ತಿಳಿಸಿವೆ. ಹಾಗೂ ಯಾವ ಸಾರ್ವಜನಿಕ ದಾಖಲೆಗಳನ್ನು ಆ ಮಟ್ಟದಲ್ಲಿ ಬರೆಯಲಾಗಿಲ್ಲವೋ ಅವುಗಳನ್ನು ತಿರಸ್ಕರಿಸಿ, ಸರ್ಕಾರಕ್ಕೆ ದಂಡ ವಿಧಿಸಿವೆ. ಹಾಗಾಗಿ ವೈಜ್ಞಾನಿಕ ದಾಖಲೆಗಳನ್ನು ಒಂದು ಸಾಫ್ಟ್‌ವೇರ್ ಮುಖಾಂತರ ತರ್ಜುಮೆ ಮಾಡಿ ಅದರಿಂದ ಹೊರಲ್ಪಟ್ಟ ಸರ್ಟಿಫಿಕೇಟ್ ಮೇಲೆಯೇ ಅದನ್ನು ಸರ್ಕಾರ ಸಾರ್ವಜನಿಕರಿಗೆ ಬಿಡುಗಡೆ ಮಾಡುತ್ತವೆ. ಇಷ್ಟಾದರೂ ಎಷ್ಟೋ ಅತ್ಯಂತ ಆಧುನಿಕ ವೈಜ್ಞಾನಿಕ ಅಥವಾ ತಂತ್ರಜ್ಞಾನದ ವರದಿಗಳನ್ನು ಅಥವಾ ದಾಖಲೆಗಳನ್ನು ಸುಲಭವಾಗಿ ಸಾಮಾನ್ಯ ಜನರಿಗೆ ತಿಳಿಸುವುದು ಕಷ್ಟವಾಗಿದೆ. ಇದಕ್ಕಾಗಿ, ವಿವಿಧ ವಿಶ್ವವಿದ್ಯಾಲಯಗಳಲ್ಲಿ Social and Decision Sciences ಎಂಬ ಪ್ರತ್ಯೇಕ ವಿಭಾಗಗಳನ್ನು ತೆರೆದಿದ್ದಾರೆ. ಮತ್ತಷ್ಟು ವಿವಿಗಳಲ್ಲಿ Department of Life Sciences Communicationಗಳನ್ನೂ ತೆರೆದಿದ್ದಾರೆ. ಹಲವಾರು ಸಂದರ್ಭಗಳಲ್ಲಿ ವಿಜ್ಞಾನದ ತಪ್ಪು ಗ್ರಹಿಕೆಗಳನ್ನು ದೂರ ಮಾಡುವವರು ಸಫಲಕರ ಸಂವಹನಕಾರರೆನಿಸಿಕೊಳ್ಳುತ್ತಾರೆ. ಆಧುನಿಕ ಕುಲಾಂತರಿ (ವಂಶಾಂತರಿ) ತಂತ್ರಜ್ಞಾನವನ್ನೇ ತೆಗೆದುಕೊಳ್ಳಿ. ತಂತ್ರಜ್ಞಾನ ವಿರೋಧಿಗಳು ಸಂವಹನಾ ಚತುರರು. ಇವರುಗಳು ಮಾಡಿರುವ ಸಮಾಜ ಹಾನಿಯನ್ನು ಸರಿಪಡಿಸುವುದು ಅತ್ಯಂತ ಕಷ್ಟ. undoing a damage is many times difficult ಎಂಬಂತೆ, ವಿಜ್ಞಾನಿಗಳು ಸಮಾಜಮುಖಿಯಾಗಿ ಮುಂದೆ ಬಂದು ಸಮಾಜವನ್ನು ದಾರಿ ತಪ್ಪಿಸುವ ಜನಗಳಿಂದ ಕಾಪಾಡಬೇಕು. ವಿಜ್ಞಾನಿಗಳು ಪರಿಣಾಮಕಾರಿ ಸಂವಹನಾಕಾರರಾಗಬೇಕಾದರೆ ಸಮಾಜದಿಂದ ಏಳುವ ನೈತಿಕತೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸರಿಯಾದ ರೀತಿಯಲ್ಲಿ ಉತ್ತರಿಸಬೇಕು. ಸಾಮಾಜಿಕ ಶಾಸ್ತ್ರದಿಂದ ಹೊರಬರುವ ಸಂಶೋಧನಾಧಾರದ ಮೇಲೆ ವಿಜ್ಞಾನ ಸಂವಹನವನ್ನು ತಯಾರಿಸಬೇಕು.
ಉದಾಹರಣೆಗೆ ಸಂಯೋಗ ಜೀವಶಾಸ್ತ್ರ ಮತ್ತು stem cell ಸಂಶೋಧನೆ ಬಗ್ಗೆ ಸಮಾಜದ ನೀತಿ-ತತ್ವಗಳ ನಿಲುವೇನು ಎಂಬುದನ್ನು ವಿಜ್ಞಾನಿಯಾದವನು ಅಳೆದು ತೂಗಿ ನೋಡಬೇಕು, ಅದಕ್ಕೆ ತಕ್ಕಂತೆ ತನ್ನ ವಾದವನ್ನು  ರೂಪಿಸಬೇಕು. ಅಂತರ್ ದೃಷ್ಟಿಯಿಂದಲೋ ಅಥವಾ ಯಾವುದೋ ದಂತಕಥೆಯಾಧರಿಸಿಯೋ ಸಂವಹವನ್ನು ಮಾಡತಕ್ಕದ್ದಲ್ಲ. ಕಣ್ಣೆದುರಿಗಿರುವ ವೈಜ್ಞಾನಿಕಾಧಾರವನ್ನು ಎತ್ತಿ ತೋರಿಸದೇ ಹೋದರೆ ಮೂರ್ಖತನವಾಗುತ್ತದೆ. Decision Sciences ಪ್ರಕಾರ, ಪೂರ್ವಗ್ರಹಪೀಡಿತ ದೃಷ್ಟಿಕೋನದಿಂದ ವಿಜ್ಞಾನ ಸಂವಹನ ಮಾಡಿದರೆ ಅದು ಮಹಾಪರಾಧವಾಗುತ್ತದೆ.  ವಿಜ್ಞಾನ ಸಂವಹನ ಕಾರ್ಯ ಬಹಳ ದುಬಾರಿಯಾದದ್ದು. ವಿಜ್ಞಾನಕ್ಕೆ ಸಮಾಜದ ಪ್ರೋತ್ಸಾಹ ಬೇಕೇ ಬೇಕು. ಯಾಕೆಂದರೆ ಸಾಮಾನ್ಯ ಜನರ ತೆರಿಗೆ ಹಣದಿಂದಲೇ ವಿಜ್ಞಾನಿ ತನ್ನ ಸಂಶೋಧನೆ ನಡೆಸಬೇಕು. ಹಾಗಾಗಿ ಸಮಾಜ, ವಿಜ್ಞಾನವನ್ನು ಒಪ್ಪಿಕೊಳ್ಳುತ್ತದೆಯೇ ಮತ್ತು ನಂಬುತ್ತದೆಯೇ ಎಂಬ ಪ್ರಶ್ನೆಗೆ ಕಾಲಕಾಲಕ್ಕೆ ಉತ್ತರಿಸಬೇಕಾಗುತ್ತದೆ. ಸಂಶೋಧನೆಯಿಂದ ಆಗುವ ಪ್ರಯೋಜನವಾದರೂ ಏನು? ಅದರಿಂದ ಉದ್ಯೋಗ ಸೃಷ್ಟಿಯಾಗುತ್ತದೆಯೇ? ಅದರಿಂದ ಪರಿಸರದ ಮೇಲೆ ಉಂಟಾಗುವ ಪರಿಣಾಮವೇನು? ಎಂಬ ಪ್ರಶ್ನೆಗಳು ಸದಾ ಏಳುತ್ತಿರಬೇಕು ಮತ್ತು ವಿಜ್ಞಾನಿಗಳು ಈ ಕುರಿತು ಆತ್ಮಾವಲೋಕನ ಮಾಡಿಕೊಂಡು ಸಮಾಜಕ್ಕೆ ಸರಿ ಉತ್ತರ ನೀಡಬೇಕು.
ವಿಜ್ಞಾನ ಸಂವಹನ ಕಾರ್ಯ ಸುಲಭವಾದುದಲ್ಲ ಹಾಗೂ ಎಲ್ಲ ವಿಜ್ಞಾನಿಗಳೂ ಸಂವಹನದಲ್ಲಿ ನಿಪುಣರಾಗಿರುವುದಿಲ್ಲ. ಹಾಗಾಗಿ ಅದನ್ನೇ ಕಸುಬಾಗಿಸಿಕೊಂಡಂಥ ಸಮಾಜಶಾಸ್ತ್ರ ಪಂಡಿತರು, ಮನಃಶಾಸ್ತ್ರಜ್ಞರು  ಮತ್ತು ರಾಜಕೀಯ ಪರಿಣತರೊಂದಿಗೆ ಸೇರಿ ವಿಜ್ಞಾನಿಗಳು ಕೆಲಸ ಮಾಡಬೇಕು.

- ಪ್ರೊ. ಶಾಂತು ಶಾಂತಾರಾಮ್
shanthus@iastate.edu

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com