ಕೀಟನಾಶಕಗಳು ಮನುಷ್ಯನಿಗೆ ಮತ್ತು ವಾತಾವರಣಕ್ಕೆ ಹಾನಿ ಮಾಡುವುದರ ಜೊತೆಗೆ ಎಷ್ಟೋ ತರಹದ ಒಳಿತನ್ನೂ ಮಾಡಿವೆ. ಕೋಟ್ಯಂತರ ಜನರ ಹಸಿವು ನೀಗಿಸಿ, ಮಲೇರಿಯಾದಂತಹ ರೋಗಗಳನ್ನು ಹತ್ತಿಕ್ಕಿ, ಲಕ್ಷಾಂತರ ಜನರನ್ನು ರಕ್ಷಿಸಿವೆ. ಕಳೆದ ಶತಮಾನದ "ಹಸಿರುಕ್ರಾಂತಿ"ಗೆ ಮೂಲ ಕಾರಣ-ರಾಸಾಯನಿಕ ಕೀಟನಾಶಕಗಳು ಮತ್ತು ರಸಾಯನಿಕ ಗೊಬ್ಬರಗಳ ಜೊತೆಗೆ ಅಭಿವೃದ್ಧಿಪಡಿಸಿದ ತಳಿಗಳು. ಕಳೆದ ನೂರು ವರ್ಷದಲ್ಲಿ ಕೋಟ್ಯಂತರ ಮನುಷ್ಯರನ್ನು, ಬೇರೆ ಇನ್ಯಾವ ತಂತ್ರಜ್ಞಾನದಿಂದಾಗಲೀ ಅಥವಾ ಔಷಧಗಳಿಂದಾಗಲೀ ಈ ಪರಿ ರಕ್ಷಿಸಲು ಸಾಧ್ಯವಾಗಿಲ್ಲ. ಇದು ಎಷ್ಟೇ ಅತಿಶಯೋಕ್ತಿ ಅನಿಸಿದರೂ, ಈ ಸತ್ಯವನ್ನು ಆಧಾರಗಳಿಂದ ದೃಢಪಡಿಸಬಹುದಾಗಿದೆ. ಇಷ್ಟಾದರೂ ಸಹ ಕೀಟನಾಶಕ ಮತ್ತು ಇತರೆ ಕೃಷಿ ರಾಸಾಯನಿಕಗಳಿಂದ ಆಗಿರುವ ಪರಿಸರ ಹಾನಿಯನ್ನು ಅಲ್ಲಗಳೆಯುವುದಕ್ಕೆ ಸಾಧ್ಯವಿಲ್ಲ. ಕಳೆದ ಶತಮಾನದಲ್ಲಿ ಹೇಗೆ ರಾಸಾಯನಿಕ ಕ್ರಾಂತಿಯಾಯಿತೋ ಅದೇರೀತಿ ಇಪ್ಪತ್ತೊಂದನೇ ಶತಮಾನದಲ್ಲಿ ಅಷ್ಟೇ ಪರಿಣಾಮಕಾರಿಯಾಗಿ ಆಧುನಿಕ ಜೈವಿಕ ತಂತ್ರಜ್ಞಾನದಿಂದ ಕ್ರಾಂತಿ ಉಂಟು ಮಾಡಬೇಕಿದೆ.
ರಾಸಾಯನಿಕ ಕೀಟನಾಶಕಗಳಿಂದ ಪರಿಸರ ಮತ್ತು ಆರೋಗ್ಯಹಾನಿಗಳನ್ನು ಅರಿಯಬೇಕಾದರೆ ವೈಜ್ಞಾನಿಕವಾಗಿ ಅವುಗಳ ಬಳಕೆ ಮತ್ತು ಅವುಗಳು ಯಾವ, ಯಾವ ರೀತಿಯಲ್ಲಿ ಪರಿಸರದಲ್ಲಿ ಹರಿದಾಡುತ್ತವೆ ಎಂಬುದನ್ನು ಖಚಿತವಾಗಿ ಅರಿಯಬೇಕು ಮತ್ತು ಪರ್ಯಾಯ ಕೀಟ ನಿಯಂತ್ರಣ ವಿಧಾನಗಳನ್ನು ಕಂಡು ಹಿಡಿಯಬೇಕು. ಈ ನಿಟ್ಟಿನಲ್ಲಿ ಸಾವಯವ, ನೈಸರ್ಗಿಕ, ಕೀಟನಾಶಕರಹಿತ ಕೃಷಿ ಪದ್ಧತಿ ಮತ್ತು ಆಧುನಿಕ ಜೈವಿಕ ತಂತ್ರಜ್ಞಾನಗಳು ಉಪಯುಕ್ತವಾಗುತ್ತವೆ. ಈ ಪರ್ಯಾಯ ವಿಧಾನಗಳಲ್ಲಿ ಯಾವ ವಿಧಾನ ಅತ್ಯಂತ ಪರಿಣಾಮಕಾರಿ ಹಾಗೂ ಲಾಭಕಾರಿ ಎಂದು ನಿಶ್ಚಯಿಸುವುದು ಪ್ರಮುಖವಾಗುತ್ತದೆ. ಅದರಲ್ಲೂ ಎಲ್ಲಾ ವಿಧಾನಗಳ ಪರಿಸರ ಪರಿಣಾಮಗಳನ್ನು ಪರಾಮರ್ಶಿಸುವುದು ಕೂಡ ಈ ದಿನಗಳಲ್ಲಿ ಬಹಳಷ್ಟು ಮುಖ್ಯವಾಗುತ್ತದೆ.
"ಮೈಕ್ರೊ ಅರ್ರೆ" ಎಂಬ ಅತ್ಯಾಧುನಿಕ ಸಂಶೋಧನಾ ವಿಧಾನದಿಂದ ಸಾವಿರಾರು ರಾಸಾಯನಿಕ ಅಣುತಂಡಗಳನ್ನು ಕಡಿಮೆ ವೇಳೆಯಲ್ಲಿ ಶೋಧಿಸಿ ಹೊಸ, ಹೊಸ ಕೀಟನಾಶಕಗಳನ್ನು ಕಂಡು ಹಿಡಿಯುವುದರಲ್ಲಿ ವಿಜ್ಞಾನಿಗಳು ಯಶಸ್ಸು ಸಾಧಿಸುತ್ತಿದ್ದಾರೆ. ಹೀಗಾಗಿ, ಆಧುನಿಕ ಹಾಗೂ ಸುರಕ್ಷಿತ ಕೀಟನಾಶಕಗಳು ಅತಿ ವೇಗದಲ್ಲಿ ಅಭಿವೃದ್ಧಿಯಾಗುತ್ತಿವೆ.
ಕೀಟನಾಶಕಗಳ ಅಧಿಕ ದುರ್ಬಳಕೆಯಾಗುತ್ತಿರುವುದು ಏಷಿಯಾ ಖಂಡದಲ್ಲಿ. ಜೊತೆಗೆ, ಏಷಿಯಾ ಖಂಡದಲ್ಲಿ, ಒಂದು ವರ್ಷದಲ್ಲಿ ಸರಾಸರಿ 300,000 ಜನ ಕೀಟನಾಶಕಗಳನ್ನು ಸೇವಿಸಿ ಪ್ರಾಣಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗೆ ಇಷ್ಟು ಭಯಾನಕ ಪರಿಣಾಮ ಹೊಂದಿರುವ ಕೀಟನಾಶಕಗಳನ್ನು ಅತ್ಯಂತ ಜಾಗರೂಕತೆಯಿಂದ ಮಾರುಕಟ್ಟೆಗೆ ತರಬೇಕು ಮತ್ತು ಮಾರುಕಟ್ಟೆಗೆ ಬಂದ ಮೇಲೆ ಅದನ್ನು ಜವಾಬ್ದಾರಿಯುತವಾಗಿ ಉಪಯೋಗಿಸುವಂತೆ ನೀತಿ, ನಿಯಮ ಮತ್ತು ನಿಯಂತ್ರಣಗಳನ್ನು ಹೇರಬೇಕಾಗಿದೆ.
ಇತ್ತೀಚೆಗೆ, ಯುರೋಪ್ ಖಂಡ "ನಿಯೋನಿಕೊಟಿನಾಯಡ್ಸ್" (neonicotinoids) ಎಂಬ ಜಾತಿಗೆ ಸೇರಿದ ಮೂರು ಕೀಟನಾಶಕಗಳನ್ನು ಎರಡು ವರ್ಷಗಳಿಗೆ ನಿಷೇಧಿಸಿದೆ. ಕಾರಣ, ಯುರೋಪ್‌ನ ಆಹಾರ ಸಂರಕ್ಷಣಾ ಸಂಸ್ಥೆಯ ಒಂದು ವೈಜ್ಞಾನಿಕ ವರದಿ ಮೇಲ್ಕಂಡ ಕೀಟನಾಶಕಗಳಿಂದ ದುಂಬಿಗಳಿಗೆ ತೀವ್ರವಾದ ಹಾನಿಯಾಗಬಹುದೆಂದು ಹೇಳಿದ್ದು. ಕಳೆದ ಐದಾರು ವರ್ಷಗಳಲ್ಲಿ ಪ್ರಪಂಚದಲ್ಲಿ "ದುಂಬಿ"ಗಳು ನಶಿಸುತ್ತಾ ಬಂದಿವೆ.
ಕೀಟನಾಶಕಗಳ ಭವಿಷ್ಯದತ್ತ ಕಣ್ಣು ಹಾಯಿಸಿದಾಗ, ನಮಗೆ ಕಾಣಸಿಗುವುದೆಂದರೆ, ಕೃತಕ ಸಂಯೋಗದ ರಾಸಾಯನಿಕಗಳು ಮತ್ತು ಕೀಟನಾಶಕಗಳೇ ಇರದ ಬೆಳೆಗಳು. ಆಧುನಿಕ ಜೈವಿಕ ತಂತ್ರಜ್ಞಾನದಿಂದ ಆವಿಷ್ಕರಿಸಿದ ಕೀಟಗಳಿಂದ ರಕ್ಷಣೆ ಪಡೆದ ವಂಶವಾಹಿ ಬೆಳೆಗಳು. ಈಗಾಗಲೇ ಬೀಟಿ ಹತ್ತಿ ಮತ್ತು ಬೀಟಿ ಬದನೆಯ ವಂಶವಾಹಿ ಸಸ್ಯಗಳನ್ನು ತಯಾರಿಸಿ ಬೆಳೆದದ್ದಾಗಿದೆ. ಆದರೆ ಮುಂಬರುವ ವಂಶವಾಹಿ ಬೆಳೆಗಳು irna ತಂತ್ರಜ್ಞಾನದಿಂದ ಇನ್ನು ಕೇವಲ ಹತ್ತು ವರ್ಷದೊಳಗೆ ಮಾರುಕಟ್ಟೆಗೆ ಬರಲಿವೆ. ಜೈವಿಕ ತಂತ್ರಜ್ಞಾನಿಗಳ ಮಹದಾಸೆ ಎಂದರೆ, ಯಾವುದೇ ತರಹದ ಕೀಟನಾಶಕಗಳಾಗಲೀ ಅಥವಾ ರಸಗೊಬ್ಬರವಾಗಲೀ ಉಪಯೋಗಿಸದೇ ಕೃಷಿ ಮಾಡುವುದು. ಈ ತರಹದ ವೈಜ್ಞಾನಿಕ ಕನಸುಗಳು ಸದ್ಯದಲ್ಲೇ ನನಸಾಗುವುದರಲ್ಲಿ ಸಂದೇಹವೇ ಇಲ್ಲ.
ಇನ್ನು ಮುಂದೆ ಉತ್ತಮ ಮಾದರಿಯ ಕೀಟನಾಶಕಗಳನ್ನೇ ಮಾರುಕಟ್ಟೆಗೆ ಬಿಡಲಾಗುತ್ತದೆ. ಏಕೆಂದರೆ, ಕಳೆದ ಎಂಭತ್ತು ವರ್ಷಗಳಲ್ಲಿ ರಾಸಾಯನಿಕ ಕೀಟನಾಶಕಗಳನ್ನು ಉಪಯೋಗಿಸಿ ಅವುಗಳಿಂದ ಆಗಬಹುದಾದ ದುಷ್ಪರಿಣಾಮಗಳನ್ನು ಅರಿತುಕೊಂಡು, ಆ ತರಹದ ದುಷ್ಪರಿಣಾಮಗಳನ್ನು ಉಂಟು ಮಾಡದಂತಹ ಕೀಟನಾಶಕಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬೇಕಾಗುತ್ತದೆ. ಬೇರೆ ವಿಧಿಯೇ ಇಲ್ಲವಲ್ಲ!
ಆಂಡ್ರ್ಯೂಫೈರ್ ಮತ್ತು ಕ್ರೇಗ್ ಮೆಲ್ಲೋ ಎಂಬ ವಿಜ್ಞಾನಿಗಳಿಗೆ 2006ರಲ್ಲಿ ನೊಬೆಲ್ ಪ್ರಶಸ್ತಿ ದೊರಕಿತು. ಅವರು RNAi (RNA interference)ಎಂಬ ಮೂಲಭೂತ ಜೀವಶಾಸ್ತ್ರದ ವಿಷಯವನ್ನು ಕಂಡು ಹಿಡಿದುದನ್ನು, ನೊಬೆಲ್ ಸಮಿತಿ ಈ ರೀತಿ ವ್ಯಾಖ್ಯಾನ ಮಾಡಿತ್ತು- "RNAi ತಂತ್ರಜ್ಞಾನ ವೈರಾಣುಗಳ ಸೋಂಕು, ಕ್ಯಾನ್ಸರ್ ಮತ್ತು ಹೃದ್ರೋಗಳಿಗೆ ಚಿಕಿತ್ಸೆ ಮಾಡುವುದಕ್ಕೆ ಮಹದುಪಕಾರಿಯಾಗಬಲ್ಲದು" ಎಂದು. ಆದರೆ, ಕೇವಲ ಐದೇ ವರ್ಷಗಳಲ್ಲಿ RNAi ತಂತ್ರಜ್ಞಾನದಿಂದ ಕೀಟ ನಿರೋಧನೆ ಮಾಡಬಹುದೆಂದು ತೋರಿಸಿಕೊಡಲಾಗಿದೆ ಹಾಗೂ ಈ ತಂತ್ರಜ್ಞಾನದಿಂದ ಆವಿಷ್ಕರಿಸಿದ ಬೆಳೆಗಳನ್ನು ಅಮೆರಿಕದ ರೈತರು ತಮ್ಮ ಜಮೀನುಗಳಲ್ಲಿ ಬೆಳಸುತ್ತಿದ್ದಾರೆ.
ಕೀಟಗಳನ್ನು ಭೂಮಿಯ ಮೇಲಿಂದ ಸಂಪೂರ್ಣವಾಗಿ ನಾಶಮಾಡುವುದಕ್ಕೆ ಅರ್ಥವೂ ಇಲ್ಲ ಹಾಗೂ ಸಾಧ್ಯವೂ ಇಲ್ಲ. ಈ ಭೂಮಿಯ ಮೇಲೆ, ಸುಮಾರು 30 ಮಿಲಿಯನ್ ಜಾತಿಯ ಕೀಟಗಳಿವೆ ಎಂದು ಅಂದಾಜು ಮಾಡಲಾಗಿದೆ. ಸದ್ಯಕ್ಕೆ 10 ಕ್ವಿಂಟಲಿಯನ್ (10, 000, 000, 000, 000, 000, 000) ಕೀಟಗಳಿವೆ ಎನ್ನುವುದು ಇನ್ನೊಂದು ಅಂದಾಜು. "ಪೇಲಿಯೋ ಜೋಯಿಕ್" ಕಾಲದಿಂದ ಕೀಟಗಳು ಉಳಿದು ಬಂದಿವೆ ಎಂದು ಪಳೆಯುಳಿಕೆಗಳಾಧಾರದ ಮೇಲೆ ನಿರ್ಧರಿಸಲಾಗಿದೆ. ಕ್ವಿಂಟಲೀಯನ್‌ನಷ್ಟು ಕೀಟಗಳನ್ನು ಸಂಪೂರ್ಣವಾಗಿ ತೊಡೆದು ಹಾಕುವ ತಾಕತ್ತು ಯಾವ ತಂತ್ರಜ್ಞಾನಕ್ಕೂ ಇಲ್ಲ. ಹಾಗಾಗಿ "ಕೀಟನಾಶಕ" ಎಂಬ ಯುದ್ಧ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಈ ಯುದ್ಧದಲ್ಲಿ ಅಲ್ಲಿ, ಇಲ್ಲಿ ಅಥವಾ ಒಂದು ನಿಖರವಾದ ಜಾಗದಲ್ಲಿ ಮತ್ತು ನಿಖರವಾದ ವೇಳೆಯಲ್ಲಿ ಸಣ್ಣ ಪುಟ್ಟ ಗೆಲುವುಗಳನ್ನು ವಿಜ್ಞಾನಿಗಳು ಸಾಧಿಸಿದ್ದಾರೆ ಅಷ್ಟೇ. ಈ ಸಣ್ಣ ಪುಟ್ಟ ಸಮರಗಳ ಜಯ ಮುಖ್ಯವಾಗಿ ಕೃಷಿ ಭೂಮಿಯಲ್ಲಿ ಸಾಧಿಸಲಾಗಿದೆ. ಆದರೂ ಸಂಪೂರ್ಣವಾಗಿ ಅಲ್ಲ. ಏಕೆಂದರೆ ಕೀಟಗಳು ಅತ್ಯಂತ ಜಾಣತನದಿಂದ ಕೀಟನಾಶಕಗಳನ್ನು ವಿರೋಧಿಸುವ ಶಕ್ತಿಯನ್ನು ಪಡೆದುಕೊಳ್ಳುವ ಗುಣ ಪಡೆದುಕೊಳ್ಳುತ್ತವೆ. ಈ ಗುಣ ಗುಣಾಣುಗಳಾಧಾರವಾದದ್ದು. ಹಾಗಾಗಿ ಸಂತತಿಯಿಂದ ಸಂತತಿಗೆ ವರ್ಗಾಯಿಸುತ್ತಾ ಸಾಗುತ್ತವೆ. ಬೆಳೆಗಳನ್ನು ಕೀಟಗಳಿಂದ ರಕ್ಷಿಸಬೇಕಾದರೆ ಕೀಟನಾಶಕಗಳು ಬೇಕೇ ಬೇಕು. ಇದಕ್ಕೆ ಸಾವಯವ ವಿಧಾನದ ಕೃಷಿಯೂ ಹೊರತಲ್ಲ! ಪರಿಸ್ಥಿತಿ ಹೀಗಿರುವಾಗ, ಪ್ರಪಂಚದ ಕೆಲ ಸಮುದಾಯಗಳಲ್ಲಿ ಕೀಟಗಳನ್ನೇ ಆಹಾರವಾಗಿ ಸೇವಿಸುತ್ತಾರೆ.
UN-FAO ಪ್ರಕಾರ, ಪ್ರಪಂಚದಲ್ಲಿ ಸುಮಾರು 1909 ತರಹದ ಕೀಟಗಳನ್ನು ಮನುಷ್ಯರು ನೇರ ಆಹಾರವಾಗಿ ಸೇವಿಸುತ್ತಿದ್ದಾರೆ. ಹಾಗಾಗಿ "INSECT FARMING"ಎಂಬ ಕೃಷಿ ಪದ್ಧತಿಯನ್ನು FAO ವಿಜ್ಞಾನಿಗಳು ಸಿದ್ಧಪಡಿಸಿದ್ದಾರೆ.
ಆಗಸ್ಟ್ 16, 2013ರ 'ಸೈನ್ಸ್' ಎಂಬ ಅಮೆರಿಕದ ಪ್ರತಿಷ್ಠಿತ ವೈಜ್ಞಾನಿಕ ಜರ್ನಲ್‌ನಲ್ಲಿ -"SMARTER PEST CONTROL" ಎಂಬ ಶೀರ್ಷಿಕೆಯಡಿ, ಮುಂಬರುವ ಕೀಟ ನಾಶಕಗಳ ಸಾಧಕ-ಭಾಧಕಗಳ ಬಗ್ಗೆ ವಿಶ್ಲೇಷಿಸಿಸಲಾಗಿದೆ. ಯಾವುದೇ ಕೀಟನಾಶಕ ವಿಧಾನವಾಗಲಿ ಅದು Integrated Pest Management ಎಂಬ ಸಮತೋಲನವಾದ ನಿಯಂತ್ರಣ ನಿಯಮದಡಿಯಲ್ಲಿ ಮಾರುಕಟ್ಟೆಗೆ ಬರಬೇಕಾಗುತ್ತದೆ. ಮುಖ್ಯವಾಗಿ ಆಧುನಿಕ ಜೈವಿಕ ತಂತ್ರಜ್ಞಾನದಿಂದ ಆವಿಷ್ಕರಿಸಿದ ಯಾವುದೇ ವಿಧಾನ ಐಕಿಂ ಗೆ ಹೊಂದಿಕೊಂಡೇ ಇವೆ ಮತ್ತು ಇರುತ್ತವೆ. ಹಾಗಾಗಿ, ರಾಸಾಯನಿಕ ಕೀಟನಾಶಕಗಳಿಗಿಂತ ಜೈವಿಕಾಧಾರಿತವಾದ ಕೀಟನಾಶಕ ತಂತ್ರಜ್ಞಾನ ಆರೋಗ್ಯ ಮತ್ತು ಪರಿಸರ ಸ್ನೇಹಿಯಾಗಿರುವುದಕ್ಕೆ ಹೇಳಿ ಮಾಡಿಸಿದಂತಿರುತ್ತದೆ.
- ಪ್ರೊ. ಶಾಂತು ಶಾಂತಾರಾಮ್
ಐಯೋವ ರಾಜ್ಯ ಕೃಷಿ ವಿವಿ
Shanthus@iastate.edu
Advertisement