ಸಿರಿಗನ್ನಡಂ ಗೆಲ್ಗೆ ಮತ್ತು ಕರುನಾಡಿನ ಮೂಲ

ಕನ್ನಡಿಗರ ಹೆಮ್ಮೆಯ ಘೋಷಣೆ "ಸಿರಿಗನ್ನಡಂ ಗೆಲ್ಗೆ" ಎಂದು ಎಲ್ಲರೂ, ಮತ್ತು ತಮ್ಮ ನಾಡು "ಕರುನಾಡು" ಎಂದು ಹೇಳಿಕೊಳ್ಳಲು ಕೆಲವರು ಹೆಮ್ಮೆ ಪಡುತ್ತಾರೆ. ಅವುಗಳ ಮೂಲ ಏನು ಎಂಬುದನ್ನು ಸ್ಪಷ್ಟಪಡಿಸುವುದು ಈ ಕಿರುಲೇಖನದ ಉದ್ದೇಶ.
ನಾನು ಸೇರಿದಂತೆ ಬಹುತೇಕರು ಅಂದುಕೊಂಡಿದ್ದಂತೆ "ಸಿರಿಗನ್ನಡಂ ಗೆಲ್ಗೆ" ಘೋಷಣೆಯ ಕರ್ತೃ ಖಂಡಿತ ಆಚಾರ್ಯ ಬಿ.ಎಂ. ಶ್ರೀಕಂಠಯ್ಯನವರು. (ರಾಮಚಂದ್ರ ಹಣಮಂತ ದೇಶಪಾಂಡೆ 1861-1931). ಅವರೇ 1890ರಲ್ಲಿ ಕನ್ನಡದ ಅಭಿಮಾನವನ್ನು ಉತ್ತರಕರ್ನಾಟಕದಲ್ಲಿ ಬೆಳೆಸಿದ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಿ ಬೆಳೆಸಿದವರು. ಅವರ ಬಗೆಗಿನ ಈ ಲೇಖನದಲ್ಲಿ ಉಲ್ಲೇಖಿಸಿರುವ ದಾಖಲೆಗಳನ್ನು ಒದಗಿಸಿರುವವರು. ಅವರ ಮೊಮ್ಮಗ, ಈಚೆಗೆ ಕರ್ನಾಟಕ ವಿ.ವಿ.ದಿಂದ ಗೌರವ ಡಾಕ್ಟೋರೆಟ್ ಪದವಿ ಪಡೆದ ಭಾರತದ ಶ್ರೇಷ್ಠ ಗ್ರಂಥಪಾಲಕರಲ್ಲಿ ಒಬ್ಬರಾದ ತೊಂಬತ್ತು ವರ್ಷದ ಡಾ. ಜಿ.ಎಸ್. ದೇಶಪಾಂಡೆ. (ಅವರು ಬೆಂಗಳೂರು ವಿ.ವಿ.ದ ಗ್ರಂಥಪಾಲಕರಾಗಿದ್ದಾಗ ನಾನು ಕನ್ನಡ ರೀಡರ್ ಆಗಿದ್ದು).
ರಾ.ಹ. ದೇಶಪಾಂಡೆಯವರು 13.7.1890 ರಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಸದಸ್ಯರಿಗೆ ಕಳುಹಿಸಿರುವ ಅಚ್ಚಾದ ಮನವಿ ಪತ್ರದಲ್ಲಿ ಈ ವಾಕ್ಯವಿದೆ- "ತಮ್ಮ ಸಹಾಯದಿಂದ ಕರ್ನಾಟಕ ವಿದ್ಯಾವರ್ಧಕ ಸಂಘದ ಕೆಲಸವು ಈ ಹೊತ್ತಿನ ತನಕ ನಡೆದು 3000 ರುಪಾಯಿಯ ಅಂಕೆಗಳು ಬಿದ್ದಿರುತ್ತವೆ"- ಎಂದು ಹೇಳಿ 20.7.1890ರಂದು ನಡೆಯಲಿರುವ ಸಭೆ ವಿಷಯ ತಿಳಿಸಲಾಗಿದೆ. ಕೆಳಗೆ "ತಮ್ಮ ಸೇವಕ ರಾ.ಹ. ದೇಶಪಾಂಡೆ" ಎಂದು ಅಚ್ಚಾಗಿದ್ದರೆ ಮೇಲೆ "ಕನ್ನಡ ಬೆಳೆಯಲಿ" ಎಂದು ಅಚ್ಚಾಗಿದೆ. (ನೋಡಿ-ಆಹ್ವಾನ ಪತ್ರ). ಎಂದರೆ "ಸಿರಿಗನ್ನಡಂ ಗೆಲ್ಗೆ" ಘೋಷಣೆಯು ಅವರಿಗೆ ಹೊಳೆದು ಧಾರವಾಡದ ಜನರಿಗೆ ಗೊತ್ತಾದುದು 1893ರ ಅಕ್ಟೋಬರಿನಲ್ಲಿ. ಈ ಅರ್ಥಪೂರ್ಣ, ಹಳಗನ್ನಡ ಭಾಷೆಯ ಘೋಷಣೆಯು ಮುಂದೆ ಜನಪ್ರಿಯವಾಗಿ ಕನ್ನಡಿಗರ ಮನಸ್ಸು ಗೆದ್ದು ಎಲ್ಲೆಡೆ ಪ್ರಚಾರಗೊಂಡಿತು. ಕರ್ನಾಟಕ ರಾಜ್ಯದ ಉದಯದ ಮುನ್ನ ಮತ್ತು ಆಮೇಲೂ ಅದು ಕನ್ನಡಿಗರ ಸ್ಫೂರ್ತಿಯನ್ನು ಹೆಚ್ಚಿಸಿದೆ. ಅದು ಎಲ್ಲ ದೃಷ್ಟಿಗಳಿಂದ ಬಂಕಿಮ ಚಟರ್ಜಿಯವರ "ವಂದೇ ಮಾತರಂ" ಘೋಷಣೆಯನ್ನು ಹೋಲುತ್ತದೆ.
ರಾಮಚಂದ್ರ ಹಣಮಂತ ದೇಶಪಾಂಡೆಯವರೇ "ಸಿರಿಗನ್ನಡಂ ಗೆಲ್ಗೆ" ಘೋಷಣೆಯ ಮೂಲ ಪ್ರವರ್ತಕರು ಎಂಬುದನ್ನು ಮುದವೀಡು ಕೃಷ್ಣರಾಯರು 16.4.1940ರಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನೀಡಿದ ಭಾಷಣದಲ್ಲಿ ದೃಢೀಕರಿಸಿದ್ದಾರೆ. ಆ ದಿನ ಸಂಘದಲ್ಲಿ ರಾ.ಹ.ದೇ. ಅವರ ಭಾವಚಿತ್ರ ಅನಾವರಣಗೊಳಿಸಲಾಯ್ತು. ಆ ದಿನ ಆಚಾರ್ಯ ಬಿ.ಎಂ. ಶ್ರೀಯವರು ಆ ಸಮಾರಂಭದಲ್ಲಿ ಹಾಜರಿದ್ದರು. ಇದು 17.4.1940ರ ಸಂಯುಕ್ತ ಕರ್ನಾಟಕದಲ್ಲಿ ವರದಿಯಾಗಿದೆ. "ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು" ಎಂಬ ಹುಯಿಲಗೋಳ ನಾರಾಯಣರಾಯರು ಕವಿತೆಯ ಪ್ರಾರ್ಥನೆಯ ಬಳಿಕ ಬಿ.ಎಂ. ಶ್ರೀಯವರ ಭಾಷಣಕ್ಕಿಂತ ಮುನ್ನ ಮುದವೀಡು ಕೃಷ್ಣರಾಯರ ಭಾಷಣದ ವರದಿಯಿದು.
"ದಿ. ದೇಶಪಾಂಡೆಯವರ ಉತ್ಕಟ ಕನ್ನಡಾಭಿಮಾನವನ್ನು ಬಣ್ಣಿಸುತ್ತ ಈ ಭಾಗದ ಕನ್ನಡಿಗರಲ್ಲಿ ಎಂ.ಎ. ಪಾಸಾದವರಲ್ಲಿ ಮೊತ್ತ ಮೊದಲಿಗರೆಂದೂ ಮಹಾರಾಷ್ಟ್ರ ಮೋಹದಿಂದ ಮೈಮರೆತ ಧಾರವಾಡವನ್ನು ಎಚ್ಚರಿಸಿ ಕಾರ್ಯತತ್ಪರರನ್ನಾಗಿ ಮಾಡಿದ, 'ಸಿರಿಗನ್ನಡಂ ಗೆಲ್ಗೆ' ಎಂಬ ಸಪ್ತಾಕ್ಷರಿ ಮಂತ್ರದ ಮೂಲ ದ್ರಷ್ಟಾರರೆಂದೂ ಅವರು ಬಿತ್ತಿದ ಬೀಜ ಎಂದು ಮೊಳೆತು, ಹೂತು, ಕಾತು ಏಕೀಕೃತ ಕರ್ನಾಟಕವೆಂಬ ಅಮೃತ ಫಲವನ್ನು ಕೊಡುವಂತಾಗಿದೆಯೆಂದೂ ಹೇಳಿದರು." (ಏಕೀಕೃತ ಕರ್ನಾಟಕವು ಮುಂದೆ 1956ರಲ್ಲಿ ರೂಪುಗೊಂಡಿತು).
ರಾ.ಹ. ದೇಶಪಾಂಡೆಯವರ "ಸಿರಿಗನ್ನಡಂ ಗೆಲ್ಗೆ" ಉಕ್ತಿಯ ಹಳಗನ್ನಡ ಭಾಷೆಯು ಕನ್ನಡದ ಪ್ರಾಚೀನತೆಯನ್ನು, 'ಸಿರಿ'ಯು ಕನ್ನಡದ ಸಂಪತ್ತನ್ನು, "ಗೆಲ್ಗೆ" ಎಂಬುದು ಕನ್ನಡದ ಉಜ್ವಲ ಭವಿಷ್ಯವನ್ನು ಧ್ವನಿಸುತ್ತದೆ. "ವಂದೇಮಾತರಂ" ಮಂತ್ರದ್ರಷ್ಟಾರ ಬಂಕಿಂ ಚಂದ್ರಚಟರ್ಜಿಯವರಷ್ಟೇ ಕನ್ನಡಿಗರಿಗೆ ಡಾ. ಹ.ದೇ. ಗೌರವ ಸ್ಮರಣಾರ್ಹರು.
"ಕರುನಾಡು": "ಕರ್ನಾಟ" ಅಥವಾ "ಕರ್ನಾಟಕ" ಕನ್ನಡ ಭಾಷೆಯನ್ನಾಡುವ ಜನರ ಪ್ರದೇಶ ಎಂಬರ್ಥದಲ್ಲಿ ಕ್ರಿಸ್ತಪೂರ್ವ ಸಂಸ್ಕೃತ ಮಹಾಭಾರತದಲ್ಲಿಯೇ ಬಳಕೆಯಾಗಿದೆ. ಆ ಹೆಸರು ಒಂದು ನಾಡಾಗಿ ಶೂದ್ರಕ, ವರಾಹಮಿಹಿರ, ಸೋಮದೇವ ಇತ್ಯಾದಿ ಸಂಸ್ಕೃತ ಕೃತಿಕಾರರ ಕೃತಿಗಳಲ್ಲಿ ಮಾತ್ರವಲ್ಲದೆ ಕರ್ನಾಟಕದ ಹಿಂದಿನ ನೂರಾರು ಕಾವ್ಯ, ಶಾಸನಗಳಲ್ಲಿ ಉಲ್ಲೇಖವಾಗಿದೆ. ಅದೇ ಅರ್ಥದಲ್ಲಿ "ಕನ್ನಡನಾಡು" ಎಂಬ ಪದವೂ ಬಳಕೆಯಾಗಿದೆ. (ಉದಾ: ಕವಿರಾಜಮಾರ್ಗದ 'ನಾಡದಾ ಕನ್ನಡದೊಳ್‌'). ಒಂದಂತೂ ಸ್ಪಷ್ಟ-'ಕರ್ನಾಟ' ಅಥವಾ 'ಕರ್ನಾಟಕ'ವು ದೇಶವಾಚಿ, 'ಕನ್ನಡ'ವು ಆ ದೇಶದ ಭಾಷಾವಾಚಿ. ಸಾಮಾನ್ಯವಾಗಿ ದೇಶವಾಚಿ ಪದ ಮೊದಲು, ಭಾಷಾವಾಚಿ ಆದ ಆಮೇಲಿನದು. (ಇದಕ್ಕೆ ವಿನಾಯ್ತಿ ಇವೆ, ವಿರಳವಾಗಿ). ಉದಾಹರಣೆಗೆ, ಫ್ರಾನ್ಸ್-ಫ್ರೆಂಚ್, ಗ್ರೀಸ್- ಗ್ರೀಕ್, ಮಹಾರಾಷ್ಟ್ರ-ಮರಾಠಿ, ಬಂಗಾಳ, ಬಂಗಾಳಿ, ಹಾಗೆಯೇ ಕರ್ನಾಟ(ಕ)-ಕನ್ನಡ. "ಕರ್ನಾಟ" ಭೂಪ್ರದೇಶದ ಜನ ಆಡುವ ಭಾಷೆಯೇ "ಕನ್ನಡ" ಎಂಬುದು ಸ್ಪಷ್ಟ. ಎಂದರೆ, "ಕರ್ನಾಟ" ಎಂಬುದೇ ಸರಳಗೊಂಡು, ಭಿನ್ನ ವ್ಯಂಜನಗಳ ದ್ವಿತ್ವವು ಏಕವ್ಯಂಜನ ದ್ವಿತ್ವವಾಗಿ, ಪದ ಮಧ್ಯದ -ಟ-ವು- ಡ- ಆಗಿ "ಕನ್ನಡ" ಆಗಿದೆ. ಈ ಊಹೆ ಬಹುತೇಕ ನಿಲ್ಲತಕ್ಕದ್ದು. "ಕರ್ನಾಟ" ಕ್ಕೆ ನಾವು ಏನೇ ನಿಷ್ಪತ್ತಿ ಹೇಳಲಿ- ಅದರ ರೂಪಾಂತರವೇ "ಕನ್ನಡ". "ಕರ್ನಾಟ" ನಾಡಿನ ಭಾಷೆಯೇ "ಕನ್ನಡ". (ಕರ್ನಾಟ-ಕನ್ನಡ).
ಆದರೆ, "ಕರುನಾಡು" ಹಲವರು ಭಾವಿಸಿರುವಂತೆ ದೇಶವಾಚಿ ಯಾವ ಪ್ರತ್ಯೇಕ ಪದ ಅಲ್ಲ. ಕನ್ನಡ ನಿಘಂಟು "ಕರುನಾಡು" ಪದವನ್ನು ಕನ್ನಡನಾಡು ಎಂಬುದಕ್ಕೆ ಸಮಾನವಾಗಿ ಕೊಟ್ಟು, ಎತ್ತರವಾದ ಪ್ರದೇಶ ಎಂಬರ್ಥ ನೀಡಿರುವುದು ಖಂಡಿತ ಸರಿ ಅಲ್ಲ. "ಕರ್ನಾಟ" ಪದದಂತೆ "ಕರುನಾಡು" ಪದಕ್ಕೆ ಪ್ರಾಚೀನ ಪ್ರಯೋಗಗಳೇ ಇಲ್ಲ. ತಮಿಳಿನ ಕ್ರಿ.ಶ. 2-3ನೇ ಶತಮಾನದ ಶಿಲಸ್ಪದಿಗಾರಂ ಕೃತಿಯಲ್ಲಿ "ಕರುನಾಡರ್‌" (ಕರುನಾಡಿನವರು, ಕನ್ನಡಿಗರು), ಪಾಂಡ್ಯದೊರೆ ಪರಾಂತಕನ ಸು. 770ರ ತಮಿಳು ಶಾಸನದಲ್ಲಿ "ಕರುನಾಡಗನ್‌" (ಕರುನಾಡಿನವನು, ಕನ್ನಡಿಗ) ಎಂಬ ಪ್ರಯೋಗಗಳಿವೆ. ಎಂದರೆ "ಕರ್ನಾಟ" ಎಂಬ ಕನ್ನಡಪದ ತಮಿಳಿನ ಉಚ್ಛಾರಕ್ಕನುಗುಣವಾಗಿ "ಕರುನಾಡ" ಎಂದು ರೂಪಾಂತರಗೊಂಡಿದೆ. ತಮಿಳಿನಲ್ಲಿ ವಿದಮಧ್ಯದ "ಟ"ವು "ಡ" ಆಗುತ್ತದೆ. "ಕರ್ನಾಟಕರ್‌" ಎಂಬುದು ತಮಿಳಿನಲ್ಲಿ "ಕರುನಾಡರ್‌" ಆಗಿದೆ. ಆಂಗ್ಲರ ಉಚ್ಚಾರದಲ್ಲಿ 'ಕನ್ನಡ'ವು "ಕೆನರೆ" ಆದಂತೆ (South Canara= ದಕ್ಷಿಣ ಕನ್ನಡ). "ಕೆನರ" ಪದದಂತೆ "ಕರುನಾಡು" ಪದಕ್ಕೆ ಸ್ವತಂತ್ರ ಅಸ್ತಿತ್ವವಿಲ್ಲ. "ಕರುನಾಡು" ಎಂದರೆ ಉತ್ತರಪ್ರದೇಶ ಎಂಬರ್ಥ ಕೊಡುವುದು ಸಂಪೂರ್ಣ ಕಲ್ಪಿತ. "ಸಿರಿಗನ್ನಡಂ ಗೆಲ್ಗೆ" ಎಂಬ ಘೋಷಣೆಯ ಬಗ್ಗೆ ಕನ್ನಡಿಗರು ಹೆಮ್ಮೆಪಟ್ಟುಕೊಳ್ಳುವುದು ಸರಿ; ಆದರೆ ಕರ್ನಾಟಕವನ್ನು "ಕರುನಾಡು" ಎಂದು ಕರೆಯಲು ಯಾವ ಹೆಮ್ಮೆಯ ಕಾರಣವೂ ಇಲ್ಲ.

-  ಡಾ. ಎಂ. ಚಿದಾನಂದಮೂರ್ತಿ
ಸಂಶೋಧಕರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com