ಚುನಾವಣಾ ಚಾಣಕ್ಯನಿಗೆ ಸವಾಲಿನ 'ಅಮೃತ'

ಚುನಾವಣಾ ಚಾಣಕ್ಯನಿಗೆ ಸವಾಲಿನ 'ಅಮೃತ', ಪ್ರಮೋದ್ ಮಹಾಜನ್ ನಂತರ...
ಚುನಾವಣಾ ಚಾಣಕ್ಯನಿಗೆ ಸವಾಲಿನ 'ಅಮೃತ'

ಪ್ರಮೋದ್ ಮಹಾಜನ್ ನಂತರ ಬಿಜೆಪಿಯ ಚುನಾವಣಾ ಚಾಣಕ್ಯ ಕರ್ನಾಟಕದಿಂದ ಹಿಡಿದು ರಾಜಸ್ಥಾನದವರೆಗೆ ತಂತ್ರಗಾರಿಕೆಯಿಂದ ಚುನಾವಣೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅರುಣ್ ಜೇಟ್ಲಿ ಪಂಜಾಬ್‌ನ ಸಿಖ್ ಗುರುನಗರಿ ಅಮೃತಸರದಲ್ಲಿ ಮಾತ್ರ ಪ್ರಚಂಡ ಮೋದಿ ಅಲೆಯ ಮಧ್ಯದಲ್ಲಿ ಕೂಡ ಬೆವರು ಸುರಿಸುತ್ತಿದ್ದಾರೆ. ಯಡಿಯೂರಪ್ಪ, ವಸುಂಧರಾ ಸೇರಿದಂತೆ ಘಟಾನುಘಟಿಗಳಿಗೆಲ್ಲ ಚುನಾವಣೆ ಗೆಲ್ಲುವುದು ಹೇಗೆ ಎಂದು ಪಾಠ ಮಾಡುತ್ತಿದ್ದ ಜೇಟ್ಲಿ ಸಾಹೇಬರು ಅಮೃತಸರದಲ್ಲಿ ಮಾತ್ರ ಗೆದ್ದರೆ ಆಶ್ಚರ್ಯ ಎನ್ನುವ ಸ್ಥಿತಿ ತಲುಪಿದ್ದಾರೆ.

ಭಾರತದಲ್ಲಿ ಚುನಾವಣೆಗಳು ನಿಜಾರ್ಥದಲ್ಲಿ ಪ್ರಜಾಪ್ರಭುತ್ವದ ಜಾತ್ರೆಗಳು. ಯಾವಾಗ ಜನರು ಯಾರನ್ನು ತಲೆ ಮೇಲೆ ಕೂರಿಸಿಕೊಂಡು ಮೆರೆಸುತ್ತಾರೆ, ಯಾವಾಗ ಕೆಳಗಿಳಿಸಿ ಮುಂದೆ ಹೋಗುತ್ತಾರೆ ಹೇಳಲು ಬಾರದು.  

ಸಿಖ್ ಗುರುಗಳ ಪವಿತ್ರ ಭೂಮಿ ಗುರು ರಾಮದಾಸರಿಂದ ನಿರ್ಮಿತ ಅಮೃತಸರದಲ್ಲಿ ಎಲ್ಲಿ ನೋಡಿದರಲ್ಲಿ ಗುರುದ್ವಾರಗಳಿವೆ. ಬಹುತೇಕ 300ಕ್ಕೂ ಹೆಚ್ಚು ಗುರುದ್ವಾರಗಳು ಹತ್ತು ಲಕ್ಷದ ಜನಸಂಖ್ಯೆಯ ನಗರದಲ್ಲಿವೆ. ಯಾವ ರಸ್ತೆಯಲ್ಲಿ ಹೋದರೂ ಕೂಡ ಸುಶ್ರಾವ್ಯ ಗುರು ಕಿ ಬಾಣಿ ಸಂಗೀತ ರೂಪದಲ್ಲಿ ಕೇಳಿ ಬರುತ್ತಿರುತ್ತದೆ. ಸ್ವರ್ಣ ಮಂದಿರಕ್ಕೆ ಹೋಗಿ ಹರಮಂದಿರ ಸಾಹೇಬದಲ್ಲಿ ಸ್ವಚ್ಛ ಪರಿಸರ ನೋಡಿದಾಗ ಮನಕೆ ಏನೋ ಆನಂದ, ಪವಿತ್ರ ಭಾವ. ಮುಖ್ಯವಾಗಿ ಬೇಧ ಭಾವದ ಗಂಧ ಗಾಳಿ ಇಲ್ಲ. ಗುರು ಕಾ ಲಂಗರ್ ಅಂದರೆ ಭೋಜನ ಶಾಲೆಯಲ್ಲಿ ಎಲ್ಲರೂ ಸಮಾನರು. ಗುರು ಗ್ರಂಥ ಸಾಹೇಬದ ವಾಕ್ಯಗಳನ್ನು ಓದಿದಾಗ ನಮ್ಮ ಬಸವಣ್ಣನ ಮಾತುಗಳೇ. ಅರ್ಥ ಇಷ್ಟೇ- ಎಲ್ಲರೂ ಸಮಾನರು.

ಪವಿತ್ರ ಕ್ಷೇತ್ರದಿಂದ ಸ್ವಲ್ಪ ಆಚೆಗೆ ಬಂದರೆ ಮಾತ್ರ ಕಾಣುವುದು ಕೇವಲ ರಾಜಕೀಯ ಪೋಸ್ಟರ್‌ಗಳು. ಒಂದು ಕಡೆ ಅರುಣ್ ಜೇಟ್ಲಿ ಇನ್ನೊಂದು ಕಡೆ ಕ್ಯಾಪ್ಟನ್ ಅಮರಿಂದರ್ ಸಿಂಗ್. ಇಬ್ಬರು ಘಟಾನುಘಟಿ ರಾಜಕೀಯ ನಾಯಕರು. ಇಬ್ಬರೂ ಅಮೃತಸರದವರಲ್ಲ. ಆದರೆ ವಾರಾಣಸಿ ಬಿಟ್ಟರೆ ಉತ್ತರ ಭಾರತದಲ್ಲಿ ಅತ್ಯಂತ ಹೆಚ್ಚಿನ ಕಣ್ಣು ನೆಟ್ಟಿರುವುದು ಇದೇ ಕ್ಷೇತ್ರದ ಮೇಲೆ.

ಅಮೃತಸರವನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಪ್ರತಿನಿಧಿಸಿದವರು ನವಜ್ಯೋತ್ ಸಿಂಗ್ ಸಿದ್ದು . ಆದರೆ ಟಿವಿಯಲ್ಲಿ ಕುಳಿತುಕೊಂಡು 'ಥೊಕೊ ತಾಲಿ' ಎನ್ನುತ್ತಲೇ ಕಾಲ ಕಳೆಯುತ್ತಿದ್ದ ಸಿದ್ದು ಸ್ಥಳೀಯ ಬಿಜೆಪಿ ಕಾರ್ಯಕರ್ತರೊಂದಿಗೆ ಬಾಂಧವ್ಯ ಕೆಡಿಸಿಕೊಂಡ ಕಾರಣದಿಂದ ಈ ಬಾರಿ ಅಕಾಲಿ ಬಿಜೆಪಿ ಮೈತ್ರಿಕೂಟ ಅರುಣ್ ಜೇಟ್ಲಿ ಅವರನ್ನು ಒಪ್ಪಿಸಿತು. ನೀವು ಬರಿ ನಾಮಪತ್ರ ಹಾಕಿ ಬನ್ನಿ ನಾವು ಗೆಲ್ಲಿಸುತ್ತೇವೆ ಎಂದು ಪ್ರಕಾಶ್ ಸಿಂಗ್ ಬಾದಲ್ ಹೇಳಿದ ನಂತರ ಸ್ಪರ್ಧೆಗೆ ಒಪ್ಪಿಕೊಂಡ ಅರುಣ್ ಜೇಟ್ಲಿ ಕಳೆದ 27 ದಿನಗಳಿಂದ ಸತತವಾಗಿ ಬೇರೆ ಎಲ್ಲಿಗೂ ಹೋಗದೇ ಪ್ರಚಾರ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ ಇಲ್ಲಿನ ಬಿಜೆಪಿ ಸ್ಥಿತಿ ನೋಡಿ ಸುಮಾರು 3 ಸಾವಿರ ದೆಹಲಿಯ ಕಾರ್ಯಕರ್ತರನ್ನು ಕರೆದುಕೊಂಡು ಬಂದು ಜೇಟ್ಲಿ ಠಿಕಾಣಿ ಹೂಡಿದ್ದಾರೆ.

ಪಟಿಯಾಲಾ ಮಹಾರಾಜ, ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಚುನಾವಣೆಗೆ ನಿಲ್ಲಿಸಿ ಅರುಣ್ ಜೇಟ್ಲಿಗೆ ಕಾಂಗ್ರೆಸ್ ಮಾಸ್ಟರ್‌ಸ್ಟ್ರೋಕ್ ಕೊಟ್ಟಿದ್ದು ಅಮೃತಸರ ಮದಗಜಗಳ ಕಾಳಗಕ್ಕೆ ಸಾಕ್ಷಿಯಾಗಿದೆ. 67 ಪ್ರತಿಶತ ಕೇಶಧಾರಿ ಸಿಖ್ಖರು ವಾಸಿಸುವ ಅಮೃತಸರದಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಕಾಂಗ್ರೆಸ್ ಅಖಾಡಕ್ಕೆ ಇಳಿಸಿರುವುದು ನಿಶ್ಚಿತವಾಗಿ ಜೇಟ್ಲಿ ಪಾಳೆಯದ ಚಿಂತೆಗೆ ಕಾರಣವಾಗಿದೆ.

ಹಾಗೆ ನೋಡಿದರೆ ದೇಶದ ಬಹುತೇಕ ನಗರ ಭಾಗದಲ್ಲಿ ಬಿಜೆಪಿ ಮೋದಿ ಪರ ಗಾಳಿಯಿದೆ. ಆದರೆ ವಿಚಿತ್ರ ಎಂದರೆ ಅಮೃತಸರದ ಶಹರ ಭಾಗದಲ್ಲಿ ಮಾತ್ರ ಬಿಜೆಪಿ ಅಕಾಲಿ ದಳದ ಸರ್ಕಾರದ ವಿರುದ್ಧ ಪ್ರಚಂಡ ಜನಾಕ್ರೋಶವಿದೆ. ಕಳೆದ 7 ವರ್ಷಗಳಿಂದ ಪಂಜಾಬ್‌ಲ್ಲಿ ಆಡಳಿತ ನಡೆಸುತ್ತಿರುವ ಅಕಾಲಿಗಳು ಒಂದು ರೀತಿ ಉತ್ತರ ಪ್ರದೇಶದ ಮುಲಾಯಂ ಕುಟುಂಬದಂತೆ ಆಡಳಿತ ನಡೆಸುತ್ತಿದ್ದಾರೆ. ಪುತ್ರ - ಅಳಿಯ - ಸೊಸೆ- ಸೊಸೆಯ ತಮ್ಮ ಹೀಗೆ ಎಲ್ಲೆಡೆ ಕುಟುಂಬದ ದರ್ಬಾರ್. ಕುಟುಂಬದ ಕೃಪಾ ಪೋಷಿತ ಗೂಂಡಾಗಿರಿ ಜಾಸ್ತಿಯಿದ್ದು ಜನಕ್ಕೆ ಈ ಬಗ್ಗೆ ಬೇಸರವಿದೆ, ಆಕ್ರೋಶವಿದೆ.

ಅಮೃತಸರದ ಸುಲ್ತಾನ್ ವಿಂಡ್‌ನಲ್ಲಿ ಹಾಲಿನ ಅಂಗಡಿ ನಡೆಸುವ ಯುವಕ ಅಂಗದ್ ಸಿಂಗ್, ತಾನು ಅಕಾಲಿ ಬೆಂಬಲಿಗ. ಆದರೆ ಈ ಚುನಾವಣೆ ಅಕಾಲಿಗಳಿಗೆ ಮದ ಇಳಿಸಲೆಬೇಕಾದ ಚುನಾವಣೆ. ಅರುಣ್ ಜೇಟ್ಲಿ ಒಳ್ಳೆಯ ಮನುಷ್ಯ. ಆದರೆ ನಾವು ಮತ ಕೊಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಾನೆ. ಅಲ್ಲಿಯೇ ಹತ್ತಿರದಲ್ಲಿ ಚಹಾದ ಅಂಗಡಿ ನಡೆಸುವ ಮುದುಕ ಹರವಿಂದರ್ ಸಿಂಗ್, 'ಇಲ್ಲಿ ಮೋದಿ ನಡೆಯುವುದಿಲ್ಲ. ಆಸ್ತಿ ಕರ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಸ್ವಂತ ಮನೆಯಿದ್ದರೂ ಸರ್ಕಾರಕ್ಕೆ ಕರ ರೂಪದಲ್ಲಿ ಬಾಡಿಗೆ ಕಟ್ಟಿ ಬದುಕುವ ಸ್ಥಿತಿ ಬಂದಿದೆ. ಇದೆಲ್ಲ ಸುಖಬೀರ್ ಬಾದಲ್ ಕೆಲಸ. ನನ್ನ ಮತ ಅಕಾಲಿ -ಬಿಜೆಪಿಯನ್ನು ಯಾರು ಸೋಲಿಸುತ್ತಾರೆಯೋ ಅವರಿಗೆ'  ಎಂದು ಹೇಳಿ ಒಳ್ಳೆಯ ಮಲಾಯಿ ಮಾರಕೆ ಚಹಾ ಮಾಡಿ ಕೊಟ್ಟ. ದುಡ್ಡು ಮಾತ್ರ ತೆಗೆದು ಕೊಳ್ಳಲಿಲ್ಲ. ಇಲ್ಲಿನ ಜನ ದೊಡ್ಡ ಹೃದಯದವರು. ನೀವು ಯಾರ ಮನೆಗೂ ಅಂಗಡಿಗೂ ಹೋಗಿ ಚಹಾ ಸ್ವಲ್ಪ ಸಿಹಿ ಇಲ್ಲದೆ ಕಳಿಸುವುದಿಲ್ಲ. ಬಾದಲ್ ಸರ್ಕಾರ ಹಾಕಿರುವ ಆಸ್ತಿ ಕರ ಜನರ ಈ ಪಾಟಿ ಆಕ್ರೋಶಕ್ಕೆ ಕಾರಣವಾಗಿದ್ದರೆ ಮರಳು ಮಾಫಿಯಾ ಪ್ರಭಾವದಿಂದ ಟ್ರಾಲಿಗೆ 700 ರುಪಾಯಿಯಿದ್ದ ಉಸುಕು 3500 ರುಪಾಯಿಗೆ ಸಿಗುತ್ತಿದ್ದು ಜನ ಅಕಾಲಿ ಬಾದಲ್  ಎಂದರೆ ಸಾಕು ರೊಚ್ಚಿಗೇಳುವಂತೆ ಮಾಡಿದೆ.

ಅರುಣ್ ಜೇಟ್ಲಿ ಕೊನೆಯ ದಿನ ಪ್ರಚಾರ ನಡೆಸುತ್ತಿದ್ದ ಬಾಬಾ ಪೌಡಿ ವಾಲಾ ಚೌಕ್‌ದಲ್ಲಿ ರೋಡ್ ಶೋ ಏನೋ ಭರ್ಜರಿಯಾಗಿ ನಡೆಯಿತು.

ಆ ಕಡೆ ಜೇಟ್ಲಿ ತೆರಳಿದ ನಂತರ ಅಲ್ಲಿನ ಸಣ್ಣ ಬಿಜೆಪಿ ಕಾರ್ಯಾಲಯದಲ್ಲಿ ಕಾರ್ಯಕರ್ತರನ್ನು ಮಾತಿಗೆಳೆದರೆ ಬಿಜೆಪಿ ಕಾರ್ಯಕರ್ತರು ಹಾಕಿದ್ದು ಮಾತ್ರ ಅಕಾಲಿ ಸರ್ಕಾರಕ್ಕೆ ಸಹಸ್ರನಾಮ. ಆಸ್ತಿ ಕರ ಸಿಕ್ಕಾಪಟ್ಟೆ ವಸೂಲಿ ಮಾಡಲಾಗುತ್ತಿದೆ, ಸ್ಥಳೀಯ ಅಕಾಲಿ ನಾಯಕರ ಗೂಂಡಾಗಿರಿ ಜಾಸ್ತಿಯಿದೆ, ಯಾವುದೇ ಅಭಿವೃದ್ಧಿ ನಗರದಲ್ಲಿ ನಡೆದಿಲ್ಲ ಎಂದು ತಮ್ಮ ಸರ್ಕಾರದ ಬಗ್ಗೆಯೇ ಹೇಳುವ ಕಾರ್ಯಕರ್ತರು ಬಿಜೆಪಿ -ಅಕಾಲಿ ದಳದ ಪೋಸ್ಟರ್‌ನಲ್ಲಿ ಸುಖಬೀರ್ ಬಾದಲ್ ಹೆಂಡತಿಯ ತಮ್ಮ  ಬಿಕ್ರಂ ಸಿಂಗ್ ಮಜೆಥಿಯಾ ಚಿತ್ರ ತೋರಿಸಿ ಇವನೇ ನೋಡಿ ಸಮಸ್ಯೆಯ ಮೂಲ ಎನ್ನುತ್ತಾರೆ. ದೆಹಲಿಯಿಂದ ಹೋಗಿ ಚುನಾವಣೆಗೆ ನಿಂತಿರುವ ಅರುಣ್ ಜೇಟ್ಲಿಗೆ ದೊಡ್ಡ ತಲೆನೋವು ಪಂಜಾಬ್‌ನ ಕಂದಾಯ ಸಚಿವ ಬಿಕ್ರಂ ಮಜೆಥಿಯಾ. ಅಮೃತಸರದ ಶ್ರೀಮಂತರ ಬಡಾವಣೆ ರಂಜಿತ್ ಅವೆನ್ಯೂದಿಂದ ಹಿಡಿದು ತೀರ ಬಡವರು ವಾಸಿಸುವ ಮಕಬೂಲಪುರದ ವರೆಗೆ ಜನ ಈ ಮಜೆಥಿಯಾನಿಗೆ ಹಿಡಿ ಶಾಪ ಹಾಕುತ್ತಾರೆ. ಮದ್ಯದ ಅಂಗಡಿಯಿಂದ ಹಿಡಿದು ಉಸುಕಿನ ವ್ಯಾಪಾರದವರೆಗೆ ಎಲ್ಲವೂ ಮಜೆಥಿಯಾ ಕೈಯಲ್ಲಿದೆ. ಅಮೃತಸರ ಮಜೆಥಿಯಾನ ಇಷಾರೆಯ ಮೇಲೆ ನಡೆಯುತ್ತದೆ. ಇಲ್ಲಿ ಮಜೆಥಿಯಾಗೆ ಟಕ್ಕರ್ ಕೊಟ್ಟವನು ಎಂದರೆ ನವಜ್ಯೋತ್ ಸಿದ್ದು ಮಾತ್ರ. ಹೀಗಾಗಿಯೇ ಮಜೆಥಿಯಾ ಸಿದ್ದು ಟಿಕೆಟ್ ತಪ್ಪಿಸಿ ಜೇಟ್ಲಿ ಅವರನ್ನು ಕರೆದುಕೊಂಡು ಬಂದಿದ್ದು ಎಂದು ಜನ ಹೇಳುತ್ತಾರೆ. ಚುನಾವಣೆಯ 3 ದಿನ ಮುಂಚೆ ಗುರು ಗೋವಿಂದ್ ಸಿಂಗ್ ಅವರ ಶಬ್ದ ತಿರುಚಿ ಜೇಟ್ಲಿ ಪರ ಪ್ರಚಾರ ನಡೆಸಿದ್ದಕ್ಕೆ ಅಕಾಲ್ ತಕ್ತ್, ಮಜೆಥಿಯಾನನ್ನು ತರಾಟೆಗೆ ತೆಗೆದುಕೊಂಡು ಸಮಾಜದಿಂದ ಹೊರಗಿಟ್ಟಿದೆ.

ಅಮೃತಸರ ಲೋಕಸಭಾ ಕ್ಷೇತ್ರದಲ್ಲಿ 9 ವಿಧಾನ ಸಭಾ ಕ್ಷೇತ್ರಗಳಿದ್ದು 5 ಶಹರದ ಕ್ಷೇತ್ರಗಳು 4 ಗ್ರಾಮೀಣ ಕ್ಷೇತ್ರಗಳು. ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ಅಜ್ನಾಲಾಗೆ ಹೋಗುವಾಗ ಗ್ರಾಮೀಣ ಭಾಗದಲ್ಲಿ ರಸ್ತೆಗಳು ಚೆನ್ನಾಗಿವೆ. ಬಾದಲ್ ಮಾಡಿದ ಒಂದು ಒಳ್ಳೆಯ ಕೆಲಸ ಎಂದರೆ ರಸ್ತೆಗಳು ಮತ್ತು 24 ಗಂಟೆ ವಿದ್ಯುತ್. ಪ್ರತಿಯೊಂದು ಹಳ್ಳಿಯಲ್ಲೂ ಈ ಬಗ್ಗೆ ಜನ ಮಾತನಾಡುತ್ತಾರೆ. ಆದರೆ ಹಳ್ಳಿಗರನ್ನು ಕಾಡುವ ದೊಡ್ಡ ಆತಂಕ ಡ್ರಗ್ಸ್. ಪಂಜಾಬ್‌ನ ಹಳ್ಳಿಗಳಲ್ಲಿ ಡ್ರಗ್ಸ್ ಸೇವನೆ ವಿಪರೀತವಾಗಿದ್ದು ಹೆರಾಯಿನ್ ಖುಲೇ ಆಮ್ ಸಿಗುತ್ತದೆ. ಒಂದು ಗ್ರಾಂ ಬೆಲೆ 1600 ರುಪಾಯಿಯಂತೆ. ಪಾಕಿಸ್ತಾನದಿಂದ ಬರುವ ಡ್ರಗ್ಸ್ ಹೀಗೆ ಹಳ್ಳಿಗಳಲ್ಲಿ ಮುಕ್ತವಾಗಿ ಮಾರಾಟವಾಗುತ್ತಿರುವುದು ನಿಜಕ್ಕೂ ಆತಂಕಕಾರಿ ಸಂಗತಿ.

ಪಂಜಾಬಿಯಲ್ಲಿ ಪಿಂಡ್ ಎಂದರೆ ಹಳ್ಳಿ. ಇಂಥದೇ ಒಂದು ಪಿಂಡ್ ಉಚ್ಚಕಿಲಾಕ್ಕೆ ಹೋದಾಗ ಅಲ್ಲಿನ ಜನ ಮೊದಲು ಮಾತನಾಡಲು ಹಿಂಜರಿಕೆ ತೋರಿಸಿದರು. ಆದರೆ ನಂತರ ಅಲ್ಲಿನ ಕಿರಾಣಿ ಅಂಗಡಿ ನಡೆಸುವ ಶಾರ್ದುಲ್ ಸಿಂಗ್ 'ಇಲ್ಲಿ ನಮ್ಮ ಹಳ್ಳಿಯ ಪ್ರಧಾನ ಡ್ರಗ್ಸ್ ವ್ಯಾಪಾರ ನಡೆಸುತ್ತಾನೆ ಅಂತ ಎಲ್ಲರಿಗೂ ಗೊತ್ತಿದೆ. ಆದರೆ ಮಜೆಥಿಯಾ ಬೆಂಬಲ ಅವನಿಗಿದೆ' ಎಂದು ಹೇಳುತ್ತಾ ಈ ಚುನಾವಣೆಯಲ್ಲಿ ಮಜೆಥಿಯಾ ವಿರುದ್ಧ ಮತ ಹಾಕುವುದಾಗಿ ಹೇಳುತ್ತಾನೆ. ಅಂದರೆ ಯಾರಿಗೆ ಎಂದು ಕೇಳಿದರೆ 'ಅಮರಿಂದರ್ ಕೋ' ಎನ್ನುತ್ತಾನೆ. ಇಲ್ಲಿ ಭೋಲಾ ಪೈಲ್ವಾನ್‌ನ ಮನೆಯಲ್ಲಿ 5 ಕೋಟಿ ಮೌಲ್ಯದ ಹೆರಾಯಿನ್ ದೊರೆತರೆ ಆತ ಮಜೆಥಿಯಾ ಹೆಸರು ಹೇಳಿದ್ದ ಎನ್ನುತ್ತಾರೆ ಪಿಂಡ್ ಬಗ್ಗಾಸೇನಾದ ಪ್ರತಾಪ್ ಸಿಂಗ್. ಆದರೆ ಇಲ್ಲಿನ ಜನ ಬಹಿರಂಗವಾಗಿ ಮಜೆಥಿಯಾ ಬಗ್ಗೆ ಕ್ಯಾಮೆರಾ ಎದುರು ಮಾತನಾಡಲು ಹಿಂಜರಿಯುತ್ತಾರೆ.                                   

ಪ್ರಚಾರದ ಕೊನೆಯ ದಿನ ಕಾಶ್ಮೀರ್ ಅವೆನ್ಯೂನಲ್ಲಿ ಪ್ರಚಾರ ನಡೆಸುತ್ತಿದ್ದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಮಾತಿಗೆಳೆದಾಗ 'ಬಾದಲ್ ಕುಟುಂಬದ ದುರಾಡಳಿತ ಮಜೆಥಿಯಾನ ಗೂಂಡಾಗಿರಿ ಡ್ರಗ್ಸ್ ಮತ್ತು ಬದಲಾವಣೆ ಬೇಕು ಎಂಬ ಹಿನ್ನೆಲೆಯಲಿ  ಜನ ನನ್ನನ್ನು ಗೆಲ್ಲಿಸುತ್ತಾರೆ' ಎಂದು ಹೇಳಿದರು. ದೇಶದಲ್ಲಿ ಏನೇನೆಲ್ಲ ಭಾಷಣ ಮಾಡುವ ನರೇಂದ್ರ ಮೋದಿ ಪಂಜಾಬ್‌ನಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ಏಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸುವ ಅಮರಿಂದರ್ ಸಿಂಗ್, ಅರುಣ್ ಜೇಟ್ಲಿ ವಾಪಸ್ ದೆಹಲಿಗೆ ಖಾಲಿ ಕೈಯಲ್ಲಿ ಹೋಗುತ್ತಾರೆ ಎನ್ನುತ್ತಾರೆ.

ಅಮೃತಸರ ಕ್ಷೇತ್ರದಲ್ಲಿ ಆಮ್ ಅದ್ಮಿ ಪಕ್ಷದಿಂದ ಡಾಕ್ಟರ್ ದಲ್ಜೀತ್ ಸಿಂಗ್ ಸ್ಪರ್ಧಿಸುತ್ತಿದ್ದು ಇವರು ಯಾರ ಮತ ಪಡೆಯುತ್ತಾರೆ ಎನ್ನುವುದು ಕುತೂಹಲದ ಸಂಗತಿ. ಮಹತ್ವದ ಉಲ್ಲೇಖನೀಯ ಸಂಗತಿ ಎಂದರೆ ಪಂಜಾಬ್‌ನ ಹಳ್ಳಿಗಳಲ್ಲಿ ಅರವಿಂದ್ ಕೇಜ್ರಿವಾಲ್‌ಗೆ ಇರುವ ಭಾರಿ ಜನಪ್ರಿಯತೆ. ವಾಘಾ ಗಡಿಯ ಅಟ್ಟಾರಿ ಯಲ್ಲಿ ಗೋದಿ ತುಂಬಿದ ಟ್ರಾಕ್ಟರ್ ತೆಗೆದುಕೊಂಡು ಹೋಗುತ್ತಿದ್ದ ರಘುಬೀರ್‌ಸಿಂಗ್‌ರನ್ನು ಮಾತನಾಡಿಸಿದಾಗ ಕೇಜ್ರಿವಾಲ್ ಒಬ್ಬನೇ ಈ ಅಕಾಲಿಗಳ ದುರಾಡಳಿತಕ್ಕೆ ಅಂತ್ಯ ಹಾಡಬಲ, ಕಾಂಗ್ರೆಸ್‌ನಿಂದ ಇದು ಸಾಧ್ಯವಿಲ್ಲ   ಎನ್ನುತ್ತಾನೆ. ಹಳ್ಳಿಗಳಲ್ಲಿ ಬಹುತೇಕರು ಮೋದಿ ಬಗ್ಗೆ ಉತ್ಸುಕತೆ ತೋರುವುದಿಲ್ಲ, ಆದರೆ ಕೇಜ್ರಿವಾಲ್ ಬಗ್ಗೆ ಉತ್ಸುಕತೆ ತೋರುತ್ತಾರೆ. ತಮಿಳುನಾಡಿನಿಂದ ಬಿಹಾರದವರೆಗೆ ಜನ ನರೇಂದ್ರ ಮೋದಿ ಬಗ್ಗೆ ಮಾತನಾಡುವಾಗ ಅಮೃತಸರದ ನಗರವಾಸಿ ಇರಲಿ ಹಳ್ಳಿಗನಿರಲಿ ಮೋದಿ ಬಗ್ಗೆ ತುಂಬಾ ಮಾತನಾಡದೇ ಇರುವುದು ಮೋದಿಯ ರಾಜಕೀಯ ಮಿತ್ರ ಅರುಣ್ ಜೇಟ್ಲಿಗೆ ಒಳ್ಳೆಯ ಸಂಕೇತವಂತೂ ಅಲ್ಲ. ಇಲ್ಲಿನ ಜನಕ್ಕೆ ಅಕಾಲಿ ದಳ ಬಿಜೆಪಿ ಸರ್ಕಾರದ ವಿರುದ್ಧ ಇರುವ ಆಕ್ರೋಶವು ಇದಕ್ಕೆ ಕಾರಣವಾಗಿರಬಹುದು.

ಒಟ್ಟಾರೆ ಅಮೃತಸರದಲ್ಲಿ ಕ್ಯಾಮೆರಾದಿಂದ ದೂರ ಹೋಗಿ ಮಾತನಾಡಿಸಿದಾಗ ಜನರು ಅಲ್ಲಿನ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶದ ಕಾರಣದಿಂದ ಕಾಂಗ್ರೆಸ್ ಕಡೆ ವಾಲುವ ಲಕ್ಷಣವಂತೂ ಕಾಣುತ್ತಿದೆ. ಈ ಸ್ಥಿತಿಯಲ್ಲಿ ಅರುಣ್ ಜೇಟ್ಲಿ ಗೆದ್ದರೆ ನಿಜಕ್ಕೂ ಆಶ್ಚರ್ಯ ಮತ್ತು ಇದು ಅವರ ರಾಜಕೀಯ ಪ್ರಬಂಧನಕ್ಕೆ ಸವಾಲು ಕೂಡ ಹೌದು. ದೆಹಲಿಯಿಂದ ಜೇಟ್ಲಿ ಪರವಾಗಿ ಪ್ರಚಾರ ನಡೆಸಲು ಬಂದಿದ್ದ ನಾಯಕನೊಬ್ಬ  'ಜೇಟ್ಲಿ  ಸಾಹೇಬರು ಅಮೃತಸರಕ್ಕೆ ಬಂದು ರಾಜಕೀಯದ ರಿಸ್ಕ್ ತೆಗೆದುಕೊಳ್ಳುವುದಾದರೆ ನವದೆಹಲಿ ಕ್ಷೇತ್ರದಲ್ಲೇ ರಿಸ್ಕ್ ತೆಗೆದುಕೊಳ್ಳಬೇಕಿತ್ತು. ಇಲ್ಲಿ ಎಲ್ಲವೂ ಹಳ್ಳಿಗಳಲ್ಲಿ ಅಕಾಲಿಗಳು ಹಾಕಿಸುವ ಮತಗಳ ಮೇಲೆ ನಿರ್ಧಾರ' ಅಂತ   ಹೇಳಿದ್ದು ಅಮೃತಸರದ ಸದ್ಯದ ರಾಜಕೀಯದ ಕಥೆ. ಇವತ್ತು ಇಲ್ಲಿ ಚುನಾವಣೆ ನಡೆಯಲಿದೆ.

- ಪ್ರಶಾಂತ್ ನಾಥು
ಸುವರ್ಣ ನ್ಯೂಸ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com