ಅಬ್ಬರಿಸದಿದ್ದರೂ ಅಭಿವೃದ್ಧಿಯಿಂದ ಸದ್ದು

ಪಾಟೀಲರು ತಮ್ಮ ಹುಟ್ಟೂರಾದ ಬೀಳಗಿಯ ಬಾಡಗಂಡಿಯಲ್ಲಿ ಅಂತಾರಾಷ್ಟ್ರೀಯ..
ಅಬ್ಬರಿಸದಿದ್ದರೂ ಅಭಿವೃದ್ಧಿಯಿಂದ ಸದ್ದು

ಪಾಟೀಲರು ತಮ್ಮ ಹುಟ್ಟೂರಾದ ಬೀಳಗಿಯ ಬಾಡಗಂಡಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಸತಿ ಶಾಲೆಯನ್ನು ನಿರ್ಮಿಸಿದ್ದಾರೆ. ಸುಮಾರು ಇಪ್ಪತ್ತೈದು ಎಕರೆ ಪ್ರದೇಶದಲ್ಲಿ ಸುಸಜ್ಜಿತ ಕಟ್ಟಡದಿಂದ ತಲೆಯೆತ್ತಿರುವ ಈ ಶಾಲೆ, ಬೆಂಗಳೂರಿನಲ್ಲಿರುವ ಆಧುನಿಕ, ಐಷಾರಾಮಿ ಶಾಲೆಗಳಿಗೆ ಯಾವುದೇ ರೀತಿಯಲ್ಲೂ ಕಮ್ಮಿಯಿಲ್ಲ.

ನಮ್ಮ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಾದ ಎಸ್.ಆರ್. ಪಾಟೀಲ್ ಅವರ ಜನ್ಮದಿನದ ಪ್ರಯುಕ್ತ ಅವರ ಹುಟ್ಟೂರಾದ ಬಾಗಲಕೋಟ ಜಿಲ್ಲೆಯ ಬೀಳಗಿ ತಾಲೂಕಿನ ಸನಿಹದ ಕುಂದರಗಿ ಗ್ರಾಮದಲ್ಲಿ ಒಂದು ಕಾರ್ಯಕ್ರಮವನ್ನಿಟ್ಟುಕೊಂಡಿದ್ದರು. ಊರಿನ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಸಚಿವರು, ಅಧಿಕಾರಿಗಳ ಸಮ್ಮುಖದಲ್ಲಿ ನಿವೇದಿಸಿಕೊಂಡು ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳುವ ಇ-ಸ್ಪಂದನ ಎಂಬ ವಿನೂತನ ಕಾರ್ಯಕ್ರಮದ ಉದ್ಘಾಟನೆಗೆ ಸಚಿವರು ನನ್ನನ್ನು ಆಹ್ವಾನಿಸಿದ್ದರು. ಸಚಿವರ ಅಥವಾ ರಾಜಕಾರಣಿಗಳ ಹುಟ್ಟುಹಬ್ಬದ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ನಾನು ಪಾಲ್ಗೊಳ್ಳುವುದಿಲ್ಲ. ಆದರೆ ಎಸ್.ಆರ್. ಪಾಟೀಲರು ಕರೆದಾಗ, ಇಲ್ಲ ಎನ್ನಲು ಮನಸ್ಸು ಬರಲಿಲ್ಲ.
ನಿಮಗೆ ಗೊತ್ತಿರಲೂಬಹುದು. ಪಾಟೀಲರು ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿರುವ ಅತ್ಯಂತ ಸಜ್ಜನ ಮಂತ್ರಿ. ಸಂಭಾವಿತರು, ಸುಸಂಸ್ಕೃತರು, ಮರ್ಯಾದಸ್ಥರು ಎಂಬ ವಿಶೇಷಣಗಳನ್ನು ಈ ಕಾಲದ ರಾಜಕಾರಣಿಗಳಿಗೆ ಬಳಸಿದರೆ, ಹಾಗೆ ಬಳಸಿದವರನ್ನೇ ತಪ್ಪಾಗಿ ಭಾವಿಸುವ ಕಾಲದಲ್ಲಿ ನಾವು ಬದುಕುತ್ತಿದ್ದೇವೆ. ರಾಜಕಾರಣಿಗಳು ಇದನ್ನು ನಿಜವಾಗಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿರುವುದು ನಮಗೆಲ್ಲ ಗೊತ್ತಿದೆ. ಸಜ್ಜನ-ಸಂಭಾವಿತ ಎಂಬುದು ರಾಜಕಾರಣಿಗೆ ಒಪ್ಪುವುದಿಲ್ಲ. ಕಾರಣ ಅವೆರಡೂ ಪರಸ್ಪರ ವಿರುದ್ಧಾರ್ಥ ಪದಗಳೆಂದು ಜನ ಭಾವಿಸುವ ಅಪಾಯವಿದೆ.
ಆದರೆ ಈ ಪದಗಳನ್ನು ಬಹಳ ಕಾಳಜಿಯಿಂದ, ಜಾಗರೂಕತೆಯಿಂದ ಬಳಸಬಹುದಾದರೆ ಅವನ್ನು ಪಾಟೀಲರಿಗೆ ಅನ್ವಯಿಸಿ ಪ್ರಯೋಗಿಸಬಹುದು. ಈ ಮಾತನ್ನು ಹೇಳುವ ಮುನ್ನ, ಹತ್ತಾರು ಜನರನ್ನು ಹಾಗೂ ಅವರ ರಾಜಕೀಯ ವಿರೋಧಿಗಳನ್ನೂ ಕೇಳಿದ್ದೇನೆ. ಈ ವಿಶೇಷಣಗಳನ್ನು ಧಾರಾಳವಾಗಿ ಬಳಸುವಷ್ಟು ಸಾಚಾತನ, ಸಂಪನ್ನತೆಯನ್ನು ಅವರು ಉಳಿಸಿಕೊಂಡಿದ್ದಾರೆ. ಈ ಗುಣಗಳನ್ನು ಇಟ್ಟುಕೊಂಡೂ ರಾಜಕಾರಣ ಮಾಡಬಹುದು ಹಾಗೂ ತಕ್ಕಮಟ್ಟಿಗೆ ಯಶಸ್ವಿಯೂ ಆಗಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಸಚಿವರಾಗುವುದಕ್ಕೆ ಮುನ್ನ ಅವರು ವಿಧಾನಪರಿಷತ್‌ನಲ್ಲಿ ಪ್ರತಿಪಕ್ಷದ ನಾಯಕರಾಗಿದ್ದರು. ಈಗ ಆಡಳಿತ ಪಕ್ಷದ ಸಭಾನಾಯಕರೂ ಅವರೇ. ಕೂಗದ, ಕಿರುಚದ, ಅಬ್ಬರಿಸಿ ಬೊಬ್ಬಿರಿಯದ, ತೊಡೆತಟ್ಟದ ಪ್ರತಿಪಕ್ಷ ನಾಯಕ ಎಂದೇ ಅವರು ತಮ್ಮನ್ನು ರೂಪಿಸಿಕೊಂಡಿದ್ದರು. ಈ ಗುಣ ವಿಶೇಷಣಗಳು ಅವರ ಕರ್ತವ್ಯ ನಿರ್ವಹಣೆಗೆ ಅಡ್ಡಿಯಾಗಲಿಲ್ಲ.
ಪಾಟೀಲರು ತಮ್ಮ ಹುಟ್ಟೂರಾದ ಬೀಳಗಿಯ ಬಾಡಗಂಡಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಸತಿ ಶಾಲೆಯನ್ನು ನಿರ್ಮಿಸಿದ್ದಾರೆ. ಸುಮಾರು ಇಪ್ಪತ್ತೈದು ಎಕರೆ ಪ್ರದೇಶದಲ್ಲಿ ಸುಸಜ್ಜಿತ ಕಟ್ಟಡದಿಂದ ತಲೆಯೆತ್ತಿರುವ ಈ ಶಾಲೆ, ಬೆಂಗಳೂರಿನಲ್ಲಿರುವ ಆಧುನಿಕ, ಐಷಾರಾಮಿ ಶಾಲೆಗಳಿಗೆ ಯಾವುದೇ ರೀತಿಯಲ್ಲೂ ಕಮ್ಮಿಯಿಲ್ಲ. ಪಾಟೀಲರು ಹತ್ತಾರು ಕೋಟಿ ರುಪಾಯಿ ಸ್ವಂತ ಹಣ ಹಾಕಿ ಈ ಶಾಲೆ ನಿರ್ಮಾಣ ಮಾಡಿರುವುದು ವಿಶೇಷ. ವ್ಯಾವಹಾರಿಕವಾಗಿ ಈ ಶಾಲೆ ಲಾಭ ತರದಿದ್ದರೂ, ತಮ್ಮ ಊರಿನಲ್ಲಿ ವಿದ್ಯಾಸಂಸ್ಥೆಯನ್ನು ಕಟ್ಟಬೇಕೆಂಬ ಸದಾಶಯದಿಂದ ಪಾಟೀಲರು ಆ ಕೆಲಸಕ್ಕೆ ಮುಂದಾಗಿದ್ದಾರೆ. ಸುಮಾರು ಒಂದೂವರೆ ಸಾವಿರ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಐದನೆ ತರಗತಿಯಿಂದ ಪಿಯುಸಿವರೆಗೆ ಓದುತ್ತಿದ್ದಾರೆ. ನಗರದ ಆಧುನಿಕ ಸೌಲಭ್ಯಗಳೆಲ್ಲ ಗ್ರಾಮೀಣ ಪ್ರದೇಶಗಳಲ್ಲಿರುವವರಿಗೂ ಸಿಗಲೇಬೇಕೆಂಬ ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಮ್ ಅವರ ಪುರ (ಕ್ಖಿಖಆ) ಸಿದ್ಧಾಂತದಿಂದ ಪ್ರಭಾವಿತರಾಗಿ ಪಾಟೀಲರು ಈ 'ಸಾಹಸ'ಕ್ಕೆ ಮುಂದಾಗಿದ್ದಾರೆ.
ನಾನು ಬಾಗಲಕೋಟ, ಬೀಳಗಿ ಹಾಗೂ ಸುತ್ತಮುತ್ತಲ ಊರುಗಳಿಗೆ ಹೋಗದೇ ಐದಾರು ವರ್ಷಗಳೇ ಆಗಿದ್ದವು. ಬಾಗಲಕೋಟ ಗುರುತು ಹತ್ತದಷ್ಟು ಸುಂದರವಾಗಿ ತಲೆಯೆತ್ತಿದೆ. ಮುಳುಗಡೆಯಿಂದ ತಲೆಯೆತ್ತಿದ ನವನಗರ ವ್ಯವಸ್ಥಿತವಾಗಿದೆ. ಮನೆ ಕಳೆದುಕೊಂಡವರ ಬದುಕಿನಲ್ಲಿ ಮನೆಮಾಡಿದ್ದ ಅನಿಶ್ಚಿತತೆ, ದುಗುಡ, ಆತಂಕಗಳೆಲ್ಲ ನಿವಾರಣೆಯಾಗಿ ಜೀವನದಲ್ಲಿ ಹೊಸ ನಿರೀಕ್ಷೆಗಳು ಇಣುಕುತ್ತಿವೆ. ಚೆನ್ನಾಗಿ ಬಿದ್ದಮಳೆ, ಮೈದುಂಬಿದ ಆಲಮಟ್ಟಿ, ಎಲ್ಲೆಡೆ ನಳನಳಿಸುತ್ತಿರುವ ಹಸುರು ಬದುಕು ಸಮೃದ್ಧತೆಯತ್ತ ಹೊರಳುತ್ತಿರುವುದತ್ತ ಸೂಚನೆಯಂತೆ ಕಾಣಿಸುತ್ತದೆ. ಬೀಳಗಿಯ ಶಾಸಕ ಜೆ.ಟಿ. ಪಾಟೀಲ್‌ರ ಜತೆ ಕಳೆದ ಮೂರು ತಾಸು ಗ್ರಾಮೀಣ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಡೆಸಿದ ಪ್ರಯತ್ನಗಳಿಗೆ ಮೆಲುಕು ಹಾಕಿದಂತಿದ್ದವು. ನಾನು ನೋಡಿದ್ದ ಬಾಗಲಕೋಟೆಯ ಚಿತ್ರದ ಮೇಲೆ ಈಗಿರುವುದು ನೆನಪು ಮಾತ್ರ. ಹೊಸ ಬಾಗಲಕೋಟ ಮಾತ್ರ ಭರವಸೆಯ ಪ್ರತಿರೂಪದಂತೆ ತಲೆಯೆತ್ತುತ್ತಿದೆ. ಇದು ನೆಮ್ಮದಿಯ ಸಂಗತಿ.
ಸ್ಲಿಮ್ ಹೇಗಾಗ್ತಾರೆ?
ಜಗತ್ತಿನ ಎರಡನೆಯ ಶ್ರೀಮಂತ ವ್ಯಕ್ತಿ ಕಾರ್ಲೋಸ್ ಸ್ಲಿಮ್ ಇತ್ತೀಚೆಗೆ ಒಂದು ಆಪ್ತ ಸಲಹೆ ನೀಡಿದ್ದಾನೆ. 'ಸಾಕು, ವಾರದಲ್ಲಿ ಮೂರು ದಿನ ಮಾತ್ರ ಕೆಲಸ ಮಾಡಿ' ಎಂದು ಹೇಳಿದ್ದಾನೆ.
ಇದಕ್ಕೆ ಆಂಗ್ಲಪತ್ರಿಕೆಗಳು 'Work for three days: Slim'ಎಂಬ ಹೆಡ್‌ಲೈನ್ ಕೊಟ್ಟಿವೆ. ಸ್ಲಿಮ್ ಹೇಳಿಕೆ ಕೇಳಿದ ನಂತರ ಅನಿಸಿದ್ದು-'ವಾರವಿಡೀ ಕೆಲಸ ಮಾಡಿದರೇ ಸ್ಲಿಮ್ ಆಗೊಲ್ಲ. ಇನ್ನೂ ಮೂರು ದಿನ ಕೆಲಸ ಮಾಡಿದರೆ ಸ್ಲಿಮ್ ಆಗ್ತಾರಾ?'
ಒಂದೇ ದಿನ!
ಥಾಮಸ್ ಜಫರ್‌ಸನ್ ಹಾಗೂ ಜಾನ್ ಆಡಮ್ಸ್ ಹೆಸರುಗಳನ್ನು ನೀವು ಕೇಳಿರುತ್ತೀರಿ. ಇಬ್ಬರೂ ಅಮೆರಿಕದ ಅಧ್ಯಕ್ಷರಾಗಿದ್ದವರು. ಇವರಿಬ್ಬರಿಗೂ ಒಂದು ಸಾಮ್ಯತೆಯಿದೆ. ಅದೇನು ಗೊತ್ತಾ? ಇಬ್ಬರೂ ಒಂದೇ ದಿನ (4 ಜುಲೈ, 1826) ನಿಧನರಾದರು.
ಅವರು ಹಾಂಗೆ, ಇವರು ಹೀಂಗೆ
ಎಸ್.ಎಲ್. ಭೈರಪ್ಪನವರ ನೂತನ ಕಾದಂಬರಿ 'ಯಾನ' ಬಿಡುಗಡೆಯಾಗಿದೆ. ವಾರದೊಳಗೆ ಇಪ್ಪತ್ತೋ-ಇಪ್ಪತ್ತೈದು ಸಾವಿರ ಪ್ರತಿಗಳು ಮಾರಾಟವಾಗಿವೆ. ಭೈರಪ್ಪನವರ ಕಾದಂಬರಿಗಳ ಬಗ್ಗೆ ಇಂದಿಗೂ ಕನ್ನಡದ ಓದುಗರು ಅತೀವ ಆಸಕ್ತಿ ಉಳಿಸಿಕೊಂಡಿರುವುದು ಕೌತುಕವೇ. ಭೈರಪ್ಪನವರು ಇದೊಂದೇ ಕಾರಣದಿಂದ ಅಂದರೆ ತಮ್ಮ ಪುಸ್ತಕ, ಬರವಣಿಗೆಯಿಂದ ಸಕ್ರಿಯರಾಗಿದ್ದಾರೆ ಹಾಗೂ ಸುದ್ದಿಯಲ್ಲಿರುತ್ತಾರೆ. ಕನ್ನಡದ ಬಹುತೇಕ ಸಾಹಿತಿಗಳು ಮಾಜಿಗಳಾಗಿದ್ದಾರೆ. ಎಷ್ಟೋ ಸಾಹಿತಿಗಳಿಗೆ ತಮ್ಮ ಕೊನೆಯ ಕೃತಿಯ ಹೆಸರು ಮರೆತು ಹೋಗಿರಬಹುದು ಅಥವಾ ಅದೊಂದೇ ನೆನಪಿನಲ್ಲೂ ಇದ್ದಿರಬಹುದು.
ಕೆಲವು ಸಾಹಿತಿಗಳು ಬರವಣಿಗೆ ಹಾಗೂ ಅಧ್ಯಯನವೊಂದನ್ನು ಬಿಟ್ಟು ಉಳಿದೆಲ್ಲ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಇನ್ನು ಕೆಲವರು ಸಾಹಿತ್ಯ ಚಟುವಟಿಕೆ ಅಂದ್ರೆ ಇದೇ ಅಂತ ಭಾವಿಸಿದ್ದಾರೆ. ಕೆಲವರಿಗಂತೂ ವಿವಾದಗಳಲ್ಲಿರುವುದೇ ಹೆಚ್ಚು ಆಸಕ್ತಿ. ಅದು ಸಾಹಿತ್ಯ ರಚನೆಗಿಂತ ಸುಲಭವಾಗಿ ಲೈಮ್‌ಲೈಟಿನಲ್ಲಿ ಉಳಿಯುವ ಮಾರ್ಗವಾಗಿ ಪರಿಣಮಿಸಿದೆ. ನಮ್ಮಲ್ಲಿ ಕೆಲವರು ಪತ್ರಿಕೆಯ 'ವಾಚಕರವಾಣಿ, ಸಂಪಾದಕರ ಪತ್ರ ವಿಭಾಗಕ್ಕೆ ಬರೆಯುವ ಮೂಲಕ ತಾವಿನ್ನೂ ಬರಹಗಾರರಾಗಿ ಜೀವಂತವಾಗಿದ್ದೇವೆ ಎಂದು ಕಾಲಕಾಲಕ್ಕೆ ಹೇಳುತ್ತಿರುತ್ತಾರೆ. ಅವರಲ್ಲಿ ಒಂದು ಗುಂಪು ಸ್ವತಂತ್ರವಾಗಿಯೂ ಪತ್ರ ಬರೆಯುವುದಿಲ್ಲ. ಏಳೆಂಟು ಮಂದಿ ಸೇರಿ ಒಂದು ಪತ್ರ ಬರೆದು ಅಥವಾ ಒಬ್ಬರು ಬರೆದಿದ್ದಕ್ಕೆ ಸಹಿ ಹಾಕುವುದರ ಮೂಲಕ ತಾವು ಪ್ರಗತಿಪರರು, ಬುದ್ಧಿಜೀವಿಗಳು ಎಂದು ತಮ್ಮನ್ನೇ ನಂಬಿಸಿಕೊಳ್ಳುತ್ತಿದ್ದಾರೆ.
 ಆದರೆ ಭೈರಪ್ಪನವರು ತಮಗೆ ಗೊತ್ತಿರುವ ಬರೆಯುವ, ಓದುವ, ಮನನ ಮಾಡಿಕೊಳ್ಳುವ ಕ್ರಿಯೆಯಲ್ಲಿ ಮಾತ್ರ ನಿರತರಾಗಿದ್ದಾರೆ. ಹೀಗಾಗಿ ಅವರಿಗೆ ವರ್ಷಕ್ಕೊಮ್ಮೆ ಅಥವಾ ಎರಡು ವರ್ಷಗಳಿಗೊಮ್ಮೆ ಮೌಲಿಕವಾದ ಕೃತಿಯನ್ನು ರಚಿಸಲು ಸಾಧ್ಯವಾಗಿದೆ. ಇವಿಷ್ಟನ್ನು ಬಿಟ್ಟು ಅವರು ಮತ್ತ್ಯಾವ ಉಸಾಬರಿಗೂ, ಉಪದ್ವ್ಯಾಪಿತನಕ್ಕೂ ಹೋಗುವುದಿಲ್ಲ. ಬಿಟ್ಟಿ ಪ್ರಚಾರವೂ ಬೇಕಾಗಿಲ್ಲ. ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಲ್ಲೂ ಅವರಿಗೆ ನಂಬಿಕೆಯಿಲ್ಲ. 'ಹೊಸ ಪುಸ್ತಕದ ಬಗ್ಗೆ ಮಾತಾಡಿ, ಸಂದರ್ಶನ ಕೊಡ್ತೀರಾ?' ಅಂತ ಕೇಳಿದರೆ, 'ಪುಸ್ತಕವೇ ಮಾತಾಡಲಿ ಬಿಡಿ, ಸಂದರ್ಶನ ಬೇಡವೇ ಬೇಡ' ಎಂದು ಸುಮ್ಮನಾಗುತ್ತಾರೆ. ಮುಂದಿನ ಪುಸ್ತಕದ ಬಗ್ಗೆ ಯೋಚಿಸಲಾರಂಭಿಸುತ್ತಾರೆ.
 ಭೈರಪ್ಪನವರ 'ಯಾನ' ಬಿಡುಗಡೆಯಾಗಿರುವ ಈ ಸಂದರ್ಭದಲ್ಲಿ ಫೇಸ್‌ಬುಕ್, ವಾಟ್ಸ್ ಆ್ಯಪ್‌ಗಳಲ್ಲಿ ಒಂದು ಸಾಲು ಹರಿದಾಡುತ್ತಿದೆ. ಅದು ಅವರಿಗೆ ಹಾಗೂ ಉಳಿದವರಿಗೆ ಇರುವ ವ್ಯತ್ಯಾಸವನ್ನು ಹೇಳುತ್ತಿದೆ. 'ಭೈರಪ್ಪನವರು ಬರೆದು ದೊಡ್ಡವರಾಗುತ್ತಾರೆ. ಉಳಿದವರು ಅವರ ಬಗ್ಗೆ ಟೀಕೆ ಮಾಡಿ ದೊಡ್ಡವರಾಗಲು ಪ್ರಯತ್ನಿಸುತ್ತಾರೆ.'
ಎಷ್ಟು ನಿಜ ತಾನೆ!
ಅವರೇ ಮುಂದು
ನಟ ಮಿಥುನ್ ಚಕ್ರವರ್ತಿ ರಾಜ್ಯಸಭೆ ಸದಸ್ಯರಾಗಿದ್ದಕ್ಕೆ ಪಶ್ಚಿಮ ಬಂಗಾಲದ ಸಿಪಿಐ ನಾಯಕರೊಬ್ಬರು, 'ಭಾರತೀಯರಿಗೆ ಜವಾಬ್ದಾರಿಯೇ ಇಲ್ಲ. ನಮಗಿನ್ನೂ ಪ್ರಜಾಪ್ರಭುತ್ವದ ಮಹತ್ವವೇ ಗೊತ್ತಾಗಿಲ್ಲ. ನಾವು ಯಾರ್ಯಾರನ್ನೋ ನಮ್ಮ ಶಾಸಕರು, ಸಂಸದರನ್ನಾಗಿ ಆಯ್ಕೆ ಮಾಡುತ್ತಿದ್ದೇವೆ. ದಕ್ಷಿಣ ಭಾರತೀಯರು ಸಿನಿಮಾ ನಟ, ನಟಿಯರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ನಟನೆ ಮಾಡುವುದಕ್ಕೂ, ಮುಖ್ಯಮಂತ್ರಿಯಾಗಿ ಆಡಳಿತ ನಡೆಸುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಇಂಥ ಹುಚ್ಚಾಟಗಳು ನಮ್ಮ ದೇಶದಲ್ಲಿ ಮಾತ್ರ ನಡೆಯುತ್ತವೆ.' ಎಂದು ಕಾರ್ಯಕ್ರಮದಲ್ಲಿ ಹೇಳಿರುವುದು ಕೋಲ್ಕತಾದ 'ದಿ ಟೆಲಿಗ್ರಾಫ್‌' ಪತ್ರಿಕೆಯಲ್ಲಿ ವರದಿಯಾಗಿದೆ.
ಪ್ರಾಯಶಃ ಈ ನಾಯಕರಿಗೆ ಮಿಥುನ್ ಚಕ್ರವರ್ತಿ ಬಗ್ಗೆ ಅದೆಂಥ ಹೊಟ್ಟೆಕಿಚ್ಚು ಇತ್ತೋ ಗೊತ್ತಿಲ್ಲ. ಆದರೆ ಇವರ ರಾಜಕೀಯ ಜ್ಞಾನಕ್ಕೆ ಮರುಗಲೇಬೇಕು. ಕಾರಣ ಇವರು ತಮ್ಮ ಭಾಷಣದಲ್ಲಿ 'ಅಮೆರಿಕದಂಥ ದೇಶದಲ್ಲಿ ಇಂಥ ಹುಚ್ಚಾಟಗಳೆಲ್ಲ ನಡೆಯುವುದಿಲ್ಲ. ಸಿನಿಮಾ ನಟ-ನಟಿಯರನ್ನು ತಮ್ಮ ಪ್ರತಿನಿಧಿಗಳನ್ನಾಗಿ ಅಥವಾ ಅಧ್ಯಕ್ಷರನ್ನಾಗಿ ಅವರು ಮಾಡುವುದಿಲ್ಲ' ಎಂದು ಹೇಳಿದರು. ಖ್ಯಾತ ಹಾಲಿವುಡ್ ನಟ, 'ಟರ್ಮಿನೇಟರ್‌' ಸಿನಿಮಾ ಖ್ಯಾತಿಯ ಅರ್ನಾಲ್ಡ್ ಷವರ್ನಾಗರ್ ಗವರ್ನರ್ ಆಗಿದ್ದರು.
ಅದಕ್ಕಿಂತ ಮುಖ್ಯವಾಗಿ, ಅಮೆರಿಕದ ಅಧ್ಯಕ್ಷರಾಗಿದ್ದ ರೊನಾಲ್ಡ್ ರೇಗನ್ ಪ್ರೊಫೆಶನಲ್ ನಟರಾಗಿದ್ದರು. ಅವರು ಐವತ್ತಕ್ಕೂ ಹೆಚ್ಚು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದರು. ರೇಗನ್ ಹಾಗೂ ಅವರ ಎರಡನೆ ಪತ್ನಿ ನ್ಯಾನ್ಸಿ ಡೇವಿಸ್ ಒಟ್ಟಾಗಿ 'ಹೆಲ್‌ಕ್ಯಾಟ್ಸ್ ಆಫ್ ದಿ ನೇವಿ' ಚಿತ್ರದಲ್ಲಿ ನಟಿಸಿದ್ದರು. 1981ರಲ್ಲಿಯೇ ಅವರು ಅಮೆರಿಕದ ನಲವತ್ತನೆಯ ಅಧ್ಯಕ್ಷರಾಗಿ ಅಧಿಕಾರಕ್ಕೆ ಬಂದಿದ್ದರು. ಆಗ ಆಂಧ್ರದಲ್ಲಿ ಎನ್.ಟಿ. ರಾಮರಾವ್ ಹಾಗೂ ತಮಿಳುನಾಡಿನಲ್ಲಿ ಜಯಲಲಿತಾ ಮುಖ್ಯಮಂತ್ರಿಯಾಗಿರಲಿಲ್ಲ. (ಎನ್‌ಟಿಆರ್ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದು 1983ರಲ್ಲಿ ಹಾಗೂ ಜಯಲಲಿತಾ 1991ರಲ್ಲಿ. ಎಂ.ಜಿ.ಆರ್. ಮುಖ್ಯಮಂತ್ರಿಯಾಗಿದ್ದು 1977ರಲ್ಲಿ.)
ಈ ವಿಷಯದಲ್ಲೂ ಅಮೆರಿಕನ್‌ರು ಕಮ್ಮಿಯೇನಿಲ್ಲ. ನಮ್ಮ ಸಿನಿಮಾ ನಟರು ಮುಖ್ಯಮಂತ್ರಿಯಾದರೆ, ಅಲ್ಲಿನವರು ದೇಶದ ಅಧ್ಯಕ್ಷರೇ ಆಗಿದ್ದಾರೆ.
ಪ್ರವಾಸಿಗರೆಂದರೆ...!
ಖ್ಯಾತ ಚಿಂತಕ, ದಾರ್ಶನಿಕ ಲಾವೋಟ್ಸು ಪ್ರವಾಸಿಗರ ಬಗ್ಗೆ ಒಂದು ಸೊಗಸಾದ ಮಾತನ್ನು ಹೇಳಿದ್ದಾನೆ-'A good traveller has no fixed Plans and is no intent on arriving.' ಸದ್ಯದ ಸಂದರ್ಭದಲ್ಲಿ ಈ ಮಾತು ಮಲೇಷಿಯನ್ ಏರ್‌ಲೈನ್ಸ್‌ಗೆ ಮಾತ್ರ ಸೂಕ್ತವಾಗಿ ಒಪ್ಪಬಹುದೇನೋ?
ಸುಖ ಸಂಸಾರದಲ್ಲಿ ಗಂಡನ ಪಾತ್ರ
ಗೆಳೆಯ: ಅಲ್ವೋ ಕೋಲ್ಯ, ನೀನು ಮತ್ತು ನಿನ್ನ ಹೆಂಡತಿ ಯಾವಾಗ್ಲೂ ನಗುನಗುತ್ತಾ ಇರ್ತಿರ. ಏನೋ ನಿಮ್ಮ ಸುಖ ಸಂಸಾರದ ಗುಟ್ಟು?  
ಕೋಲ್ಯ: ನಮ್ಮ ಮೇಲಿನ ಜವಾಬ್ದಾರೀನ ಸಂತೋಷದಿಂದ ನಿಭಾಯಿಸೋದು, ಪರಸ್ಪರರ ನಿರ್ಧಾರವನ್ನು ಗೌರವಿಸೋದು.
ಗೆಳೆಯ: ಸ್ವಲ್ಪ ವಿವರವಾಗಿ ಹೇಳೋ ಮಾರಾಯ...
ಕೋಲ್ಯ: ಈಗ ಏನಪ್ಪಾ ಅಂದ್ರೆ...ಚಿಕ್ಕ, ಚಿಕ್ಕ ವಿಷಯಗಳ ಬಗ್ಗೆ ನನ್ನ ಹೆಂಡತಿ ನಿರ್ಧಾರ ಮಾಡ್ತಾಳೆ. ಅಂದ್ರೆ, ಯಾವ ಕಾರು ಖರೀದಿಸಬೇಕು, ಎಷ್ಟು ಹಣ ಉಳಿಸಬೇಕು, ಪ್ರವಾಸಕ್ಕೆ ಯಾವಾಗ-ಎಲ್ಲಿಗೆ ಹೋಗಬೇಕು, ಸೋಫಾ ಕಲರ್ ಯಾವುದಿರಬೇಕು, ರೆಫ್ರಿಜರೇಟರ್ ಯಾವ ಮಾಡೆಲ್ ತರಬೇಕು, ಇತ್ಯಾದಿ. ನಾನು ಅವಳ ನಿರ್ಧಾರಗಳನ್ನು ಪ್ರಶ್ನಿಸೋದಿಲ್ಲ.
ಗೆಳೆಯ: ಹಾಗಿದ್ದರೆ ನೀನ್ಯಾವ ನಿರ್ಧಾರಗಳನ್ನು ತೊಗೊಳ್ತೀಯಾ?
ಕೋಲ್ಯ: ನನ್ನ ನಿರ್ಧಾರಗಳು ಬರೀ ದೊಡ್ಡ ದೊಡ್ಡ ವಿಷಯಗಳ ಬಗ್ಗೆಯೇ ಇರುತ್ತೆ. ಅಂದ್ರೆ....ಅಮೆರಿಕ ಇರಾನ್ ಮೇಲೆ ದಾಳಿ ಮಾಡಬೇಕೋ ಬೇಡ್ವೋ, ಜಿಂಬಾಬ್ವೆಗೆ ಬ್ರಿಟನ್ ಎಷ್ಟು ಅನುದಾನ ಕೊಡಬೇಕು, ತೆಲಂಗಾಣ ರಚನೆ ಬೇಕಾಗಿತ್ತಾ, ಧೋನಿ ನಿವೃತ್ತಿ ಪಡೆಯಬೇಕಾ, ಸಲ್ಮಾನ್ ಖಾನ್ ಯಾರನ್ನು ಮದುವೆಯಾಗಬೇಕು, ಇತ್ಯಾದಿ, ಇತ್ಯಾದಿ. ನಿನಗೆ ಗೊತ್ತಾ, ನನ್ನ ನಿರ್ಧಾರಗಳನ್ನು ನನ್ನ ಮಡದಿ ಯಾವತ್ತೂ ಪ್ರಶ್ನಿಸಿಲ್ಲ!
--
ಕಳ್ಳನ ಮಗ ಪರೀಕ್ಷೆಯಲ್ಲಿ ಫೇಲಾದ ನಂತರ ತನ್ನ ತಂದೆಗೆ ಈ ವಿಷಯವನ್ನು ತಿಳಿಸಿದ್ದು ಹೀಗೆ:
"ಅಪ್ಪ, ಅವರು 3 ಗಂಟೆ ನನ್ನನ್ನು ಪ್ರಶ್ನಿಸಿದರು. ಆದರೆ ನಾನು ಮಾತ್ರ ಯಾವುದಕ್ಕೂ ಉತ್ತರಿಸಲಿಲ್ಲ!!"
-
ಚರ್ಚ್‌ಗಳಲ್ಲಿ ಪ್ರಾರ್ಥಿಸುವವರಿಗೆ ಮತ್ತು ಕೆಸಿನೋ (ಜೂಜು ಕೇಂದ್ರ)ಗಳಲ್ಲಿ ಪ್ರಾರ್ಥಿಸುವವರಿಗೆ ವ್ಯತ್ಯಾಸವೇನು?
"ಕೆಸಿನೋಗಳಲ್ಲಿರುವವರು ಗಂಭೀರವಾಗಿ ಪ್ರಾರ್ಥಿಸುತ್ತಾರೆ".
-
ಚಿಕ್ಕ ಹುಡಗನೊಬ್ಬ ತನ್ನ ತಂದೆಯನ್ನು ಕೇಳಿದ: "ಅಪ್ಪ ನನಗೆ ಬುದ್ಧಿವಂತಿಕೆ ಎಲ್ಲಿಂದ ಬಂತು?"
ತಂದೆ ಉತ್ತರಿಸಿದ: "ಬಹುಶಃ ಅದು ನಿನ್ನ ಅಮ್ಮನಿಂದ ಬಂದಿರಬೇಕು. ಏಕೆಂದರೆ ನನ್ನ ಬುದ್ಧಿವಂತಿಕೆ ನನ್ನ ಬಳಿಯೇ ಇದೆ".
-
ಮರಿಕೋಲ್ಯನ ಟೀಚರ್ ಅವನ ತಾಯಿಗೆ ಸಂದೇಶ ಕಳುಹಿಸಿದಳು: "ನಿಮ್ಮ ಮಗ ಬುದ್ಧಿವಂತನೇ, ಆದರೆ ಯಾವಾಗಲೂ ಹುಡುಗಿಯರ ಬಗ್ಗೆಯೇ ಯೋಚಿಸುತ್ತಿರುತ್ತಾನೆ"
ಕೆಲವೇ ಕ್ಷಣಗಳಲ್ಲಿ ಆಕೆಗೆ ತಾಯಿಯಿಂದ ಮೆಸೇಜ್ ಬಂತು: "ಇದಕ್ಕೆ ಪರಿಹಾರ ಸಿಕ್ಕರೆ ದಯವಿಟ್ಟು ನನಗೂ ತಿಳಿಸಿ. ಇದೇ ಸಮಸ್ಯೆ ಅವನ ಅಪ್ಪನಿಗೂ ಇದೆ!"

-ವಿಶ್ವೇಶ್ವರ ಭಟ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com