
ಅವರ ಕಣ್ಣಲ್ಲಿ ಕನಸಿತ್ತು. ಮನದಲ್ಲಿ ತೀರದ ಹಂಬಲ ಇತ್ತು. ಕಳಕೊಂಡದ್ದನ್ನು ಪಡೆದೇ ತೀರಬೇಕು ಎಂಬ ಛಲ ಇತ್ತು. ಅದಕ್ಕಾಗಿ ಎಷ್ಟೇ ಹೋರಾಟ ಮಾಡಬೇಕಾಗಿ ಬಂದರೂ ಹಿಂದಡಿ ಇಡದ ದೃಢತೆ ಇತ್ತು. ಪರಿಸ್ಥಿತಿ ಎಸೆಯುವ ಸವಾಲುಗಳನ್ನು ಎದೆಯೊಡ್ಡಿ ಸ್ವೀಕರಿಸಿ ಅದಕ್ಕೇ ಸವಾಲು ಹಾಕುವ ಗಟ್ಟಿತನ ಅವರಲ್ಲಿತ್ತು. ಹಿಡಿದ ಗುರಿ ಸಾಧಿಸಲು ಏನೆಲ್ಲ ಅಡ್ಡಿ, ಆತಂಕ, ಏಳುಬೀಳುಗಳು ಎದುರಾದರೂ ಎದೆಗುಂದದೆ ಸಾಗುವ ವಿಶ್ವಾಸ ಇತ್ತು. ಯಾರೋ ಒಬ್ಬರಿಂದ ಮಾತ್ರ ನಮ್ಮ ಉದ್ಧಾರ ಸಾಧ್ಯ, ಅವರು ವಿಫಲರಾದರೆ ಹೇಗೆ? ಗಾಯಾಳುವಾಗಿ ಹೊರಗುಳಿದರೆ ಮುಂದೇನು? ಎಂಬ ಪ್ರಶ್ನೆಗಳು ಅವರನ್ನು ಕಾಡಲಿಲ್ಲ. ಯಾರೋ ಒಬ್ಬಿಬ್ಬರನ್ನು ನಂಬಿ ಕನಸಿನ ಹುತ್ತ ಕಟ್ಟಿರಲಿಲ್ಲ. ಸಂಕಷ್ಟದಲ್ಲಿ ಸಾಂತ್ವನ ನೀಡಿ ಸ್ಥಿರತೆ ತರಲು ಯಾರಾದರೊಬ್ಬರು ಇದ್ದೇ ಇರುತ್ತಿದ್ದರು.
ಹೈದರಾಬಾದ್ ಅನತಿ ದೂರದ ಉಪ್ಪಳದಲ್ಲಿರುವ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆದ ರಣಜಿಟ್ರೋಫಿ ಫೈನಲ್ ಪಂದ್ಯದ ಫೈನಲ್ ಕ್ಷಣಗಳನ್ನು ನೋಡಿದಾಗ, ಕರ್ನಾಟಕ ಆಟಗಾರರು ಭವ್ಯ ಇತಿಹಾಸವಿರುವ ಆ ಟ್ರೋಫಿಯ ಮೇಲೆ ಕೈಯಿಟ್ಟು ಕೇಕೆ ಹಾಕಿದಾಗ, ಕುಣಿದು ಕುಪ್ಪಳಿಸಿದಾಗ ಅವರೆಲ್ಲರ ಮುಖದಲ್ಲಿ ಈ ಎಲ್ಲ ಭಾವನೆಗಳಿದ್ದವು. 14 ವರ್ಷ ಬೇರೆಯವರ ಸಂಭ್ರಮವನ್ನು ಕಣ್ತುಂಬಿಸಿಕೊಳ್ಳುತ್ತಲೇ ಕೈ ಕೈ ಹೊಸಕಿಕೊಳ್ಳುತ್ತಿದ್ದ, 'ಛೆ ನಮ್ಮ ಕೈಲಾಗಲಿಲ್ಲವಲ್ಲ' ಎಂದು ಕೊರಗುತ್ತಿದ್ದಾಗ ಚಿಗುರೊಡೆದ ಕನಸೊಂದು ತನ್ನ ಸಾರ್ಥಕ್ಯ ಕಂಡ ಕ್ಷಣ ಅದಾಗಿತ್ತು. ನಾಲ್ಕು ವರ್ಷದ ಹಿಂದೆ ಮೈಸೂರಿನಲ್ಲಿ ಕೇವಲ ಎಂಟು ರನ್‌ಗಳಿಂದ ಮುಂಬೈ ವಿರುದ್ಧ ಮುದುಡಿ ನಿಂತಾಗ ಮನಸ್ಸುಗಳಿಗೆ ಆಗಿದ್ದ ಗಾಯಕ್ಕೆ ಈ ಜಯ ಉಪಶಮನದ ಮುಲಾಮಾಯಿತು. ಪ್ರತಿಯೊಬ್ಬರ ಮುಖದಲ್ಲಿ ಅರಳಿದ್ದ ನಗೆಯಲ್ಲಿ ಹಲವಾರು ನೋವುಗಳು ಕರಗಿ ಹೋಗಿದ್ದವು. ಪಂದ್ಯ ಗೆಲ್ಲಲು ಕರ್ನಾಟಕಕ್ಕೆ 157ರನ್ ಗಳಿಸಬೇಕಾದ ಸವಾಲು ಎಸೆದಿತ್ತು ಮಹಾರಾಷ್ಟ್ರ ತಂಡ. ಈ ರಣಜಿ ಋತುವಿನಲ್ಲಿ ತನ್ನ ಪ್ರತಿಭೆಯ ಹೊಸ ಆಯಾಮಗಳನ್ನು ತೆರೆದಿಟ್ಟ ಹುಡುಗ ರಾಹುಲ್ ಇನಿಂಗ್ಸ್ ಆರಂಭಿಸಿದ್ದ. ಮತ್ತೊಂದು ತುದಿಯಲ್ಲಿ ರಾಬಿನ್ ಉತ್ತಪ್ಪ ಎಂದಿನಂತೆ ಪಟಪಟನೆ ರನ್ ಹೊಡೆದು ಗುರಿ ಸಲೀಸಾಗಿಸುತ್ತಿದ್ದರೆ ಮತ್ತೊಂದೆಡೆ ರಾಹುಲ್ ಅಚಲನಾಗಿ ನಿಂತಿದ್ದ. ಯಾವುದೇ ಎಡವಟ್ಟಿಗೆ ಆಸ್ಪದ ನೀಡಬಾರದು ಎಂಬುದೇ ಆತನ ಉದ್ದೇಶವಾಗಿತ್ತು. ರಾಬಿನ್ ನಿರ್ಗಮಿಸಿದ ಮೇಲಂತೂ ಈ ದೃಢತೆ ಮತ್ತಷ್ಟು ಗಟ್ಟಿಯಾಗಿತ್ತು. ಆದರೂ ಇನ್ನೂ 70 ಚಿಲ್ಲರೆ ರನ್‌ಗಳ ಅವಶ್ಯಕತೆ ಇದ್ದಾಗ ರಾಹುಲ್ ತಪ್ಪು ಹೊಡೆತಕ್ಕೆ ಕೈ ಹಾಕಿ ವಿಕೆಟ್ ಚೆಲ್ಲಿದ. ಅದಾಗಿ ಪೆವಿಲಿಯನ್‌ಗೆ ಹಿಂತಿರುಗುವಾಗ ಡ್ರೆಸ್ಸಿಂಗ್ ರೂಮಿನಲ್ಲಿದ್ದ ಕರ್ನಾಟಕದ ಆಟಗಾರರು ಚಪ್ಪಾಳೆ ತಟ್ಟಿ ಆತನನ್ನು ಹುರಿದುಂಬಿಸುತ್ತಿದ್ದರು. ಆದರೆ, ರಾಹುಲ್ ಮಾತ್ರ ಅಂಗಳದಿಂದ ಹೊರಹೋಗಲು ಇಷ್ಟವಿಲ್ಲದವನಂತೆ ಒಂದೊಂದೇ ಹೆಜ್ಜೆ ಇಡುತ್ತ ಬಂದವನೇ ಬೌಂಡರಿ ಗೆರೆ ದಾಟಿ ಬಂದ ನಂತರ ತನ್ನನ್ನು ತಾನೇ ತೀವ್ರವಾಗಿ ಶಪಿಸಿಕೊಂಡ. ಕೊನೆಯವರೆಗೂ ಇದ್ದು ತಾನೇ ಜಯದ ರನ್ ಹೊಡೆಯಬೇಕಿತ್ತು. ಛೆ ಅವಕಾಶ ಕೈತಪ್ಪಿತಲ್ಲ ಎಂಬ ಗಾಢ ಬೇಸರ ಅವನ ಮುಖದಲ್ಲಿತ್ತು. ಅದಾಗಲೇ 10 ಪಂದ್ಯಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ರನ್ನು ಹೊಡೆದಿದ್ದರೂ ಅವನ ದಾಹ ಇಂಗಿದಂತೆ ಕಾಣಲಿಲ್ಲ. ರಾಹುಲ್‌ನದ್ದು ಈ ಸ್ಥಿತಿಯಾದರೆ ಕೊನೆಯ ತನಕ ಕ್ರೀಸಿನಲ್ಲಿದ್ದ ಮನೀಶ್ ಪಾಂಡೆಯದು ಬೇರೆ ಕತೆ. 2009-10ರ ರಣಜಿ ಫೈನಲ್‌ನ ಕಡೆಯ ಸರದಿಯಲ್ಲಿ ಕರ್ನಾಟಕಕ್ಕೆ ಇದ್ದ ಗುರಿ 337. ಎದುರಾಳಿಯೋ ಪ್ರಬಲ ಮುಂಬೈ ತಂಡ. ಆತನಕ ತಂಡದ ಕೈಹಿಡಿದಿದ್ದ ರಾಹುಲ್ ದ್ರಾವಿಡ್ ರಾಷ್ಟ್ರೀಯ ತಂಡ ಕೂಡಿಕೊಳ್ಳಬೇಕಾದ ಅನಿವಾರ್ಯತೆಯಿಂದ ಫೈನಲ್ ಆಡಲಿಲ್ಲ. ಯುವ ಆಟಗಾರರ ಮೇಲೆ ಜವಾಬ್ದಾರಿಯ ದೊಡ್ಡ ಹೊರೆಯೇ ಇತ್ತು. ಆ 337 ರನ್‌ಗಳು ಅವರ ಆವರೆಗಿನ ಶ್ರಮವನ್ನು ಯಶಸ್ಸಾಗಿ ಪರಿವರ್ತಿಸಿಕೊಳ್ಳಲು ತೆರಬೇಕಾಗಿದ್ದ ದಂಡವಾಗಿತ್ತು. ಮುಂಬೈ ದಾಳಿಯಲ್ಲಿ ಮೊನಚಿತ್ತು. ಆದರೆ, ಆ ಮೊನಚಿಗೆ ಸೆಡ್ಡು ಹೊಡೆದು ನಿಲ್ಲುವ ಛಲಗಾರಿಕೆ ಯುವ ಆಟಗಾರರಲ್ಲಿತ್ತು. ಈಗ ರಾಹುಲ್‌ಗಿರುವ ಪ್ರಭಾವಳಿ ಆಗ ಮನೀಶ್ ತಲೆಯ ಮೇಲಿತ್ತು. ಸುಲಭವಲ್ಲದ ಗುರಿ ಬೆನ್ನು ಹತ್ತುವ ಕಾಯಕದಲ್ಲಿ ಅಂದು ಪ್ರಧಾನ ಭೂಮಿಕೆ ನಿರ್ವಹಿಸಿದ್ದು ಈತನೇ. ಮನೀಶ್ ಬ್ಯಾಟಿನಿಂದ ಅಂದು ಹರಿದಿದ್ದು 144 ರನ್. ಅಷ್ಟಾದರೂ ಜಯ ದಕ್ಕಲಿಲ್ಲ. ಇನ್ನು ಆರು ರನ್ ಗಳಿಸಿದ್ದರೆ.... ಎಂಬ ಹತಾಶೆಯಲ್ಲಿಯೇ ಅಂದು ಮನೀಶ್ ಸೊರಗಿ ಹೋಗಿದ್ದ. ಈ ಕಹಿ ನೆನಪುಗಳ ಭಾರ ಇನ್ನೂ ಸಂಪೂರ್ಣವಾಗಿ ಇಳಿದಿಲ್ಲವೇನೋ ಎಂಬಂತಿತ್ತು ಭಾನುವಾರದ ಅವನ ಆಟ. ಎಚ್ಚರಿಕೆ, ಪ್ರತಿ ನಡೆಯಲ್ಲೂ ವ್ಯಕ್ತವಾಗಿತ್ತು. ಅಪ್ಪಿ ತಪ್ಪಿಯೂ ಚೆಂಡನ್ನು ಮೇಲೆತ್ತಿ ಆಡಲು ಪ್ರಯತ್ನಿಸಲಿಲ್ಲ. ರನ್ ಗಳಿಕೆ ನಿಧಾನವಾದರೂ ಸೈ ವಿಕೆಟ್ ಕಳೆದುಕೊಳ್ಳಬಾರದು ಎಂಬುದೇ ಆತನ ಆದ್ಯತೆಯಾಗಿತ್ತು. ಅದರಿಂದ ಫಲಿತಾಂಶ ವಿಳಂಬವಾಯಿತಾದರೂ ಆತನ ಏಕಾಗ್ರತೆಗೆ ಧಕ್ಕೆ ತರಲಿಲ್ಲ. ಕಡೆಗೆ ಕರುಣ್ ನಾಯರ್ ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ಆಟಕ್ಕೆ ತೆರೆ ಎಳೆದು ಕರ್ನಾಟಕದ ವಿಜಯ ಪತಾಕೆ ಹಾರಿಸಿದಾಗ ಮತ್ತೊಂದು ತುದಿಯಲ್ಲಿದ್ದ ಮನೀಶ್ ಮುಖದ ಮೇಲೆ ಮೂಡಿದ ಸಂತೃಪ್ತಿಯ ಭಾವ ಈ ನಾಲ್ಕು ವರ್ಷಗಳ ನೋವನ್ನು ನಿವಾಳಿಸಿ ಬಿಸಾಕಿದಂತಿತ್ತು. ಈ ಇಬ್ಬರ ವಿಭಿನ್ನ ಹಾವಭಾವಗಳಲ್ಲಿ ಇಡೀ ತಂಡದ ಭಾವನೆ ಅಡಕವಾಗಿತ್ತು. ಕೆಲವರಿಗೆ ಇದು ಮೊದಲ ಬಾರಿಗೇ ಸಿಕ್ಕ ಸೀರುಂಡೆಯಾದರೆ ಮತ್ತೆ ಹಲವರ ಪಾಲಿಗೆ ಕೈಗೆಟುಕದ ದ್ರಾಕ್ಷಿಯನ್ನು ನೆಗೆದು, ಹಿಡಿದು, ಬಾಯಿಗೆ ಹಾಕಿ ಸವಿದಂತಹ ಅನುಭವ.
ಇಷ್ಟಕ್ಕೂ ಇದೇನು ವಿಶ್ವಕಪ್ಪಾ?
ಕ್ರಿಕೆಟ್ ಇತರ ಆಟಗಳಂತಲ್ಲ. ಇಂದಿಗೂ ಈ ಕ್ರೀಡೆ ದೇಶ-ಭಾಷೆಗಳ ಪರಿಧಿಯೊಳಗೆ ಪಾರುಪತ್ಯಕ್ಕಾಗಿ ನಡೆಯುವ ಕ್ರೀಡೆಯಾಗಿಯೇ ಉಳಿದಿದೆ. ಎರಡು ದೇಶಗಳ ನಡುವಿನ ಜಿದ್ದಾಜಿದ್ದಿ ಸರಣಿಗಳು ಇದಕ್ಕೆ ಸಾಕ್ಷಿ. ಇಂದಿಗೂ ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವಿನ ಆ್ಯಷಸ್ ಸರಣಿ ಇಲ್ಲವೇ ಭಾರತ-ಪಾಕ್, ಭಾರತ-ಆಸ್ಟ್ರೇಲಿಯಾ ನಡುವಿನ ಸರಣಿಗಳು ನೀಡುವ ರೋಚಕತೆ, ಕಾದಾಟದ ತೀವ್ರತೆಗಳೇ ಈ ಆಟದ ಮೇರು ಪರ್ವ. ಆ ರೋಮಾಂಚನಕ್ಕೆ ಕೋಟಿ ಮನಸ್ಸುಗಳು ಹಾತೊರೆಯುತ್ತವೆ. ಗೆದ್ದಾಗ ಬೀಗುತ್ತವೆ, ಸೋತಾಗ ಕೊರಗುತ್ತವೆ. ತಂಡದ 11 ಆಟಗಾರರ ಸುತ್ತ ಇಡೀ ದೇಶಗಳ ಭರವಸೆ, ನಿರೀಕ್ಷೆಗಳು ಗಿರಕಿ ಹೊಡೆಯುತ್ತವೆ. ಪಂದ್ಯಗಳು ಎಲ್ಲಿಯೇ ನಡೆಯಲಿ ಸೂಜಿ ಮೊನೆಗೂ ಜಾಗ ಇಲ್ಲದಂತೆ ಜನ ತುಂಬಿತುಳುಕುತ್ತಾರೆ. ಕೇಕೆ, ಕರತಾಡನಗಳಿಗೆ ಮುಗಿಲು ತಲೆಬಾಗುತ್ತದೆ. ಆಟಗಾರರು ಹೋದಲ್ಲಿ ಬಂದಲ್ಲಿ ಜನ ಮುತ್ತಿಕೊಳ್ಳುತ್ತಾರೆ. ಮನೆಯಲ್ಲಿ ದೇವರ ಪಟಕ್ಕೂ ಹಚ್ಚದ ಅಗರಬತ್ತಿಯನ್ನು ನೆಚ್ಚಿನ ಆಟಗಾರರಿಗೆ ಹಚ್ಚುವ, ಅದರಲ್ಲೇ ಉನ್ಮಾದ ಕಾಣುವ ಹುಚ್ಚು ಅಭಿಮಾನಿಗಳು ಲೆಕ್ಕಕ್ಕೆ ನಿಲುಕದಷ್ಟಿರುತ್ತಾರೆ. ಇದು ಅತ್ಯಂತ ದುಬಾರಿ ಆಟ. ಲಕ್ಷಗಳನ್ನು ದಾಟಿ ಕೋಟಿಗಳಲ್ಲಿ ವ್ಯವಹರಿಸುವ ಕ್ರೀಡೆ. ಅಲ್ಲಿ ಎಲ್ಲವೂ ರಂಗೀಲಾ, ಸ್ಟಾರ್‌ಮಯ. ಸಾಧನೆಗೆ ತಕ್ಕ ಪ್ರತಿಫಲ ಲಭ್ಯ. ಇದಕ್ಕೆ ಹೋಲಿಸಿದರೆ ರಣಜಿ ಟ್ರೋಫಿ ಇದರ ಬಡ ದಾಯಾದಿಯಂತೆ. ಈಗ ಒಂದು ದಶಕದ ಹಿಂದಿನವರೆಗೂ ದಿನಭತ್ಯೆಯ ಮೇಲೆ ಆಟಗಾರರು ಅವಲಂಬಿತರಾಗಿದ್ದರು. ಬೆಳಗ್ಗೆ ಎದ್ದು ಲೋಕಲ್ ಟ್ರೇನ್ ಹತ್ತಿ (ಮುಂಬೈ) ಇಲ್ಲವೇ ಆಟೋ ಹಿಡಿದು ಮೈದಾನಕ್ಕೆ ಬಂದು ಆಡುತ್ತಿದ್ದರು. ಈಗ ಕೊಂಚ ಬದಲಾವಣೆ ಕಂಡಿದೆ. ಇಷ್ಟಾದರೂ ರಣಜಿಯಲ್ಲಿ ಆಡುವ, ಅಲ್ಲಿ ಗೆಲ್ಲಬೇಕೆಂಬ ಛಲ ತೋರುವ, ಅದರ ಸಾಧನೆಗೆ ಇನ್ನಿಲ್ಲದ ಪರಿಶ್ರಮ ವಹಿಸುವ ಆಟಗಾರರಿಗೇನೂ ಕೊರತೆ ಇಲ್ಲ. ತಾವೆಂದೂ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ಸಾಧ್ಯವಿಲ್ಲ ಎಂದು ತಿಳಿದಿದ್ದರೂ ಅನೇಕರು ಇದನ್ನು ಒಂದು ತಪಸ್ಸಿನಂತೆ ಆಚರಿಸುತ್ತಾರೆ. ಪದಮ್‌ಕರ್ ಶಿವಲ್ಕರ್, ರಾಜೇಂದರ್ ಹನ್ಸ್, ಅಮೋಲ್ ಮಜುಂದಾರ್, ವಿಜಯಕೃಷ್ಣ, ಸುಧಾಕರ ರಾವ್, ಅಮರ್‌ಜೀತ್ ಕೇಪಿ, ವಿ.ವಿ. ಕುಮಾರ್, ರಾಜೇಂದರ್ ಗೋಯೆಲ್ ಮುಂತಾದವರು ವರ್ಷಗಳ ಕಾಲ ರಣಜಿ ಟ್ರೋಫಿ ಮತ್ತಿತರ ದೇಶೀಯ ಟೂರ್ನಿಗಳಲ್ಲಿಯೇ ಸಾರ್ಥಕತೆ ಕಂಡುಕೊಂಡಿದ್ದಾರೆ. ಇವರಲ್ಲಿ ಕೆಲವರು ರಾಷ್ಟ್ರೀಯ ತಂಡದ ಕದ ತಟ್ಟಿ ಬಂದವರಿದ್ದರೆ, ಮತ್ತೆ ಕೆಲವರಿಗೆ ಆ ಕದ ತೆರೆಯಲೇ ಇಲ್ಲ. ಆದರೆ, ಆ ನಿರಾಸೆ ಈ ಕಾಯಕ ಮುಂದುವರಿಸಲು ಇವರಾರಿಗೂ ಅಡ್ಡಿಯಾಗಿಲ್ಲ. ಟನ್‌ಗಟ್ಟಲೆ ರನ್‌ಗಳು, ನೂರರ ಗುಣಾಕಾರದಲ್ಲಿ ವಿಕೆಟ್‌ಗಳು ಇವರ ಖಾತೆಗೆ ಜಮೆಯಾಗಿವೆ. ಇನ್ನೂ ಕೆಲವರಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀರಾ ಅಲ್ಪ ಸಮಯ ಆಡಿ ಮತ್ತೆ ವಾಪಸ್ ಆಗುವುದು ಸಾಧ್ಯವೇ ಇಲ್ಲ ಎಂದು ತಿಳಿದಿದ್ದರೂ ರಣಜಿಯಲ್ಲಿ ಆ ಕಹಿಯನ್ನು ಕರಗಿಸಿ ಕುಡಿದವರು. ನಮ್ಮ ಬ್ರಿಜೇಶ್ ಪಟೇಲ್ ಅವರನ್ನೇ ತೆಗೆದುಕೊಳ್ಳಿ, ಭಾರತದ ಪರ 21 ಟೆಸ್ಟ್ ಆಡಿ ಹತ್ತಿರ ಸಾವಿರ ರನ್ ಮಾಡಿ ಒಂದು ಶತಕ, ಐದು ಅರ್ಧ ಶತಕ ಸಿಡಿಸಿ ಆಯ್ಕೆದಾರರ ಅವಕೃಪೆಗೆ ತುತ್ತಾದ ನಂತರವೂ ಬ್ರಿಜೇಶ್ ಸುಮಾರು ಒಂದು ದಶಕ ಕಾಲ ರಣಜಿಯಲ್ಲಿಯೇ ಏಗಿದರು. ಅವರ ಭೋರ್ಗರೆವ ಬ್ಯಾಟಿಂಗ್ ಅನ್ನು, ಅವರ ಬ್ಯಾಟಿನಿಂದ ಸಿಡಿಯುತ್ತಿದ್ದ ಶತಕಗಳು, ಬೌಂಡರಿ, ಸಿಕ್ಸರ್‌ಗಳನ್ನು ಕಣ್ತುಂಬಿಸಿಕೊಂಡವರು ಎಂದಿಗೂ ಅದು ನೀಡುತ್ತಿದ್ದ ರೋಮಾಂಚನವನ್ನು ಮರೆಯಲು ಸಾಧ್ಯವೇ ಇಲ್ಲ.
ದೇಶದ ನಾನಾ ಮೂಲೆಗಳಲ್ಲಿ ಬ್ರಿಜೇಶ್‌ರನ್ನು ಕಂಡವರು, ಅವರ ಆಟದ ವೈಖರಿಯನ್ನು ಕೇಳಿದವರು ಅವರಿಗೆ 'ರಣಜಿ ಹುಲಿ' ಎಂದೇ ಹೆಸರಿಟ್ಟರು. ಆ ಪರಿ ಬ್ರಿಜೇಶ್ ದೇಶೀಯ ಕ್ರಿಕೆಟ್ ಅನ್ನು ಆವರಿಸಿಕೊಂಡಿದ್ದರು. 1991ರ ವೇಳೆಗೆ ದಿಲೀಪ್ ವೆಂಗ್‌ಸರ್ಕರ್ ನಿವೃತ್ತಿ ಅಂಚಿಗೆ ತಲುಪಿದ್ದರು. ಆದರೂ ಅವಕಾಶ ಸಿಕ್ಕಾಗ ರಣಜಿಯಲ್ಲಿ ಆಡುವುದನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಉನ್ನತ ಮಟ್ಟದಲ್ಲಿ ಆಡುವಾಗ ಇದ್ದ ಠಛಡಡ್ಝ್ಟಟಿ ಅನ್ನು ಅವರು ರಣಜಿಯಲ್ಲೂ ಉಳಿಸಿಕೊಂಡಿದ್ದರು. ದೆಹಲಿ ವಿರುದ್ಧದ ಫೈನಲ್‌ನಲ್ಲಿ ಏಕಾಂಗಿ ವೀರನಂತೆ ಹೋರಾಡಿ ದೊಡ್ಡ ಮೊತ್ತವನ್ನು ಬೆನ್ನು ಹತ್ತಿ ಶತಕ ದಾಖಲಿಸಿದರೂ ತಂಡ ಸೋತದನ್ನು ತಾಳಲಾಗದೆ ಮೈದಾನದಲ್ಲಿಯೇ ಕುಸಿದು ಕಣ್ಣೀರಿಟ್ಟರು. ಪ್ರಸಿದ್ಧ ಲಾರ್ಡ್ಸ್ ಮೈದಾನದಲ್ಲಿ ಸತತ ಮೂರು ಶತಕ ದಾಖಲಿಸಿದ್ದ, ದೇಶದ ಅತಿ ದೊಡ್ಡ ಕ್ರಿಕೆಟ್ ತಾರೆಯಂತೆ ಮೆರೆದಿದ್ದ ವೆಂಗ್‌ಸರ್ಕರ್‌ಗೆ ಈ ಜಯವಾಗಲಿ, ಶತಕವಾಗಲಿ ಹೆಚ್ಚುಗಾರಿಕೆಯಾಗಿರಲಿಲ್ಲ. ಆದರೂ ತನ್ನ ರಾಜ್ಯ, ತನ್ನ ತಂಡ, ತನ್ನ ಓರಗೆಯ ಆಟಗಾರರ ಸಂಗ, ಆಡಿ ಬೆಳೆದ, ಬೆಳೆದು ದೊಡ್ಡ ಮಟ್ಟದ ಕೀರ್ತಿ ಸಂಪಾದನೆಗೆ ಅಡಿಗಲ್ಲಾದ ಪರಿಸರ, ಅದು ನೀಡುವ ಖುಷಿ, ಸಂತೃಪ್ತಿ ಇದೆಲ್ಲವೂ ಮನಸ್ಸಿಗೆ ತೀರಾ ಹತ್ತಿರವಾದದ್ದು. ವೆಂಗ್‌ಸರ್ಕರ್, ಬ್ರಿಜೇಶ್ ಮತ್ತು ಅವರಂತಹ ಅನೇಕರು ಆಡಿದ್ದು, ಆಡುತ್ತಿರುವುದೂ ಅದಕ್ಕಾಗಿಯೇ. ಹಾಗೆಂದು ಇಲ್ಲಿ ಪೈಪೋಟಿಯ ಮಟ್ಟ ಕಡಿಮೆ ಎಂದೇನಲ್ಲ. ಕರ್ನಾಟಕದ ವಿಷಯಕ್ಕೆ ಬರುವುದೇ ಆದರೆ ಈ ಪ್ರಶಸ್ತಿಗಾಗಿ ತಂಡ 14 ವರ್ಷ ಕಾಯಬೇಕಾಗಿ ಬಂತು. ಅದೂ ದ್ರಾವಿಡ್, ಕುಂಬ್ಳೆ, ಶ್ರೀನಾಥ್, ಪ್ರಸಾದ್, ಜೋಶಿ ಮುಂತಾದ ಘಟಾನುಘಟಿ ಆಟಗಾರರು ಇದ್ದಾಗ್ಯೂ (ಬಿಡುವಿದ್ದಾಗಲೆಲ್ಲ) ಕರ್ನಾಟಕಕ್ಕೆ ಈ ಪ್ರಶಸ್ತಿ ದಕ್ಕಲಿಲ್ಲ. ಈಗ ಹೊಸ ತಲೆಮಾರಿನ ಹುಡುಗರು ಅದನ್ನು ಸಾಧ್ಯವಾಗಿಸಿದ್ದಾರೆ. ಇವರಲ್ಲಿ ಯಾರು ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗುತ್ತಾರೆ, ಮಿಂಚುತ್ತಾರೆ ಎಂಬುದು ದೊಡ್ಡದಲ್ಲ. ಆದರೆ, ಇಂತಹ ಸಾಧನೆ ಮಾಡಿದ್ದನ್ನು ಅವರು ತಮ್ಮ ಮುಂದಿನ ಪೀಳಿಗೆಗೆ ಹೆಮ್ಮೆಯಿಂದ ಹೇಳಿಕೊಳ್ಳಬಹುದು. ದೇಶಾಭಿಮಾನ ಜಾಗೃತಗೊಳಿಸಲು ಟೆಸ್ಟ್-ಏಕದಿನ ಪಂದ್ಯಗಳಿವೆ. ರಂಗಿನಾಟಕ್ಕೆ ಟಿ-20 ಪಂದ್ಯಗಳಿವೆ ಆದರೆ, ನಾಳಿನ ಪೀಳಿಗೆಗೆ ಇಂದಿನ ಹುಡುಗರ ಸಾಧನೆಯ ಹೆಜ್ಜೆಗಳು, ಏರಿದ ಮೆಟ್ಟಿಲುಗಳ ಕತೆ ಹೇಳಲು ರಣಜಿ ಇದೆ. ಆ ಕಾರಣಕ್ಕಾಗಿಯೇ ಇದರಲ್ಲಿ ಆಪ್ತತೆ ಇದೆ. ಈ ಆಪ್ತತೆಯನ್ನು ಸಾಧ್ಯವಾಗಿಸಿದ ರಾಜ್ಯದ ಎಲ್ಲ ಆಟಗಾರರಿಗೂ HATS OFF!
- ಕೆ.ಎಸ್.ಜಗನ್ನಾಥ್
jagannath.kudinoor@gmail.com
Advertisement