ದಾರಿನಾಗೆ ಹೋಗೋರ್ನೂ ಕಾರ್ಪೊರೇಸನ್ನೋರು ಅಡ ಇಡ್ತರಂತೆ

'ಲೇ ಅಮಾಸೆ, ಮೊನ್ನೆ ಬೆಂಗ್ಳೂರ್ಗೆ ವೋಗಿದ್ದೆ ಕಣ್ಲಾ. ಕಾರ್ಪೊರೇಸನ್ ಸರ್ಕಲ್ನಾಗೆ ಬಸ್ಸು...

'ಲೇ ಅಮಾಸೆ, ಮೊನ್ನೆ ಬೆಂಗ್ಳೂರ್ಗೆ ವೋಗಿದ್ದೆ ಕಣ್ಲಾ. ಕಾರ್ಪೊರೇಸನ್ ಸರ್ಕಲ್ನಾಗೆ ಬಸ್ಸು ಇಳ್ದು ಹಂಗೇ  ಬಿಬಿಎಂಪಿ ಬಿಲ್ಡಿಂಗ್ ವೊಳಿಕ್ಕೆ ವೋಗಿದ್ದೆ. ಭಲೆ ಸಂದಾಕದೆ, ನೋಡೇ ಇರ್ಲಿಲ್ಲ' ಅಂದ ಮೈಲಾರಿ.
'ಅಯ್ಯೋ ದಡ್ ಮುಂಡೇದೆ, ಅಲ್ಗೆ ಯಾಕ್ಲಾ ವೋಗಿದ್ದೆ. ಇನ್ನೊಂದ್ಕಿತ ಏನರ ಆತವ ವೋದೀಯ' ಅಂತಂದ ಅಮಾಸೆ. 'ಯಾಕ್ಲಾ ಏನದೆ ಅಲ್ಲಿ ಅಂಥದ್ದು?' ಅಂತೇಳಿ ಮೈಲಾರಿ ಕೇಳ್ದ.
'ಇಸ್ಯ ಗೊತ್ತಿಲ್ವಾ ನಿಂಗೆ. ಕಾರ್ಪೊರೇಸನ್ನೋರುತವ ದುಡ್ಡು ಇಲ್ವಂತೆ ಗೊತ್ತಾ?' ಅಂದ ಅಮಾಸೆ. 'ಅವ್ರುತವ ದುಡ್ಡು ಇಲ್ದೇ ಇರಕ್ಕೂ ನಾನು ಅಲ್ಗೆ ವೋಗಕ್ಕೂ ಏನ್ಲಾ ಲಿಂಕು. ವಸಿ ತುಂಡು ಮಾಡಿ ಯೋಳಲೇ ಹಳೇ ಬೇವಾರ್ಸಿ' ಅಂತೇಳಿ ಮೈಲಾರಿ ಬೈದ.
'ಕಾಸಿಲ್ಲ ಅಂತೇಳಿ ಕಣ್ಗೆ ಕಾಣ್ಸೋ ಬ್ಯಾಂಕ್ನಾಗೆಲ್ಲ ಕಾರ್ಪೊರೇಸನ್ನೋರು ಸಾಲ ಮಾಡ್ತಾವ್ರಂತೆ. ಬ್ಯಾಂಕ್ನೋರು ಸಾಲ ಸುಮ್ಕೆ ಕೊಡ್ತಾರೇನು? ಅದುಕ್ಕೆ ಏನರ ಅಡ ಇಡ್ಬೇಕಲ್ಲ. ಮೇಯರ್ರು, ಮೆಂಬ್ರುಗಳು ಆಸ್ತಿನ ಅಡ ಇಡಕ್ಕೆ ಆಯ್ತದಾ? ಅದುಕ್ಕೆ ಆ ಬಿಲ್ಡಿಂಗು, ಈ ಬಿಲ್ಡಿಂಗು ಅಂತೇಳಿ ಅಡ ಮಡುಗ್ತಾವ್ರೆ. ಬಿಲ್ಡಿಂಗು ಮುಗ್ದೋದ್ಮೇಲೆ ಜನ್ರುನ್ನೂ ಅಡ ಮಡುಗ್ತರಂತೆ. ಆವಾಗೇನರ ನೀನು ಕೈಗೆ ಸಿಕ್ಬುಟ್ರೆ ನಿನ್ನೂ ತಕ್ಕಂಡೋಗಿ ಬ್ಯಾಂಕ್ ಲಾಕರ್ನಾಗೆ ಸೇರುಸ್ತರೆ. ವುಸಾರು' ಕಣಲೇ ಅಂದ ಅಮಾಸೆ.
'ಏನ್ಲಾ ಸ್ಟೋರಿ ಹಿಂಗದೆ. ಮೊದ್ಲೇ ಯೋಳಿ ವೊಳ್ಳೆ ಕೆಲ್ಸ ಮಾಡ್ದೆ ಬುಡಪ್ಪ. ಕನಸ್ನಾಗೂ ನಾನು ಇನ್ಮೇಕೆ ಆ ಕಡೀಕೆ ವೋಗಾಕಿಲ್ಲ' ಅಂತಂದ ಮೈಲಾರಿ.
'ಕಾರ್ಪೊರೇಸನ್ನು ವಿಚಾರ ಬುಟ್ಟಾಕು. ಅಂತೂ ನಮ್ ಸಿವಕುಮಾರು ಮಂತ್ರಿ ಅಬುಟ್ರು. ಸ್ಯಾನೆ ಖುಸಿ ಆಗೋಗಿರ್ಬೇಕು. ಅಭಿನಂದನೆ ಯೋಳಕ್ಕೆ ಅಂತ ಪೋನಾಕಿದ್ದೆ. ಪುಲ್ ಬಿಜಿ ಬತ್ತಾ ಇತ್ತು. ಪಿಎಗೆ ಪೋನಾಕಿ ಕೇಳ್ದೆ. ಸಾಹೇಬ್ರು ಬಿಜಿನಾ ಅಂತ. ಹಿರೇಮಠ್ರುತವ ಮಾತಾಡ್ತಾವ್ರೆ ಅಂತಂದ್ರು ಸುಮ್ಕೆ ಆಬುಟ್ಟೆ. ನಮ್ ರೋಸನ್ ಬ್ಯಾಗುನೂವೆ ಮಂತ್ರಿ ಆಬುಟ್ಟವ್ರೆ. ಲಕ್ಕು ಅಲ್ವಾ?' ಅಂದ ಅಮಾಸೆ.
'ನಿನ್ ನಾಲ್ಗೆನ ಏನಾದ್ರೂ ಹಾಕಿ ತಿಕ್ಬೇಕು ಕಣಲೇ, ರೋಸನ್ ಬ್ಯಾಗು ಅಲ್ಲಲೇ, ಬೇಗು ಅಂತ ಅವ್ರು ಹೆಸ್ರು. ನಾಲ್ಕು ಅಕ್ಸರ ಕಲ್ಕೋ ಮುಂಡೇದೆ ಅಂತ ಬಡ್ಕಂಡೆ. ಎಲ್ಲಿ ಕೇಳ್ತೀಯ ನನ್ ಮಾತು. ಮಂತ್ರಿ ಅಬುಟ್ಟು ಬೇಗು ಸಾಹೇಬ್ರು ನಂಗೆ ಹಜ್ ಖಾತೇನೇ ಬೇಕು ಅಂತ ರಚ್ಚೆ ಹಿಡ್ಕಂಬುಟ್ಟಿದ್ರಂತೆ. ಅಮ್ಯಾಲೆ ಸಿಎಂ ಸಿದ್ರಾಮಣ್ಣೋರು ಪಾಪ ಖಮ್ರುಲ್ ಇಸ್ಲಾಮುತವ ಇತ್ತಲ್ಲ ಆ ಖಾತೇನಾ ಕಿತ್ತು ಕೊಟ್ರಂತೆ. ಏನದೆ ಆ ಖಾತೆನಾಗಿ ಅಂಥ ವಿಸೇಸ' ಅಂತ ಮೈಲಾರಿ ಕೇಳ್ದ.
'ಇನ್ನೇನ್ಲ, ಕಿತ್ತೋಗಿರೋ ಖಾತೆ ಕೊಟ್ರೆ ಯಾರ್ಗೆ ಸಮಾಧಾನ ಆಯ್ತದೆ ಯೋಳು. ಕಾಪಿ, ಟೀಗೂ ಕಾಸು ಹುಟ್ಟಾಕಿಲ್ಲ ಅದ್ರಾಗೆ. ಅಂಥ ಖಾತೆಗಳ್ನ ಮಡಿಕ್ಕಂಡು ನೋಣ ವೋಡ್ಕಂಡು ಇರಕ್ಕೆ ಆಯ್ತದಾ? ಅದುಕ್ಕೆ ಬೇಗು ಗಲಾಟೆ ಮಾಡಿದ್ದು' ಅಂತ ಅಮಾಸೆ ಯೋಳ್ದ.
'ಮಂತ್ರಿ ನಾನಾಗ್ಬೇಕು ನಾನಾಗ್ಬೇಕು ಅಂತೇಳಿ ಕೈ ಪಕ್ಸುದಾಗೆ ಸ್ಯಾನೆ ಜನ ಎದ್ದು ಕುಂತವ್ರೆ. ಸಾಸ್ಕ ಗುತ್ತೇದಾರ್ರು ಕಣ್ಣು ಕಾಣಿಸ್ದೋರು, ಕಿವಿ ಕೇಳಿಸ್ದೋರು, ಎದ್ರೆ ಕೂರಕ್ಕೆ ಆಗ್ದೋರು, ಕೂತ್ರೆಏಳಕ್ಕೆ ಆಗ್ದೋರೆಲ್ಲಾ ಮಂತ್ರಿ ಅಬುಟ್ಟವ್ರೆ ಸಿವನೇ ಅಂತ ಗೋಳಾಡ್ತವ್ರೆ. ಅಲ್ಲ, ಮಂತ್ರಿ ಮಾಡೋವಾಗ ಡಾಕ್ಟರ್ರು ಸರ್ಟಿಫಿಕೆಟ್ಟು ತಕ್ಕಂಡು ಬನ್ನಿ ಅಂತ ಸಿದ್ರಾಮಣ್ಣ ಯೋಳಕ್ಕೆ ಆಯ್ತದಾ ?. ಹಾಸ್ಗೆ ಹಿಡ್ದೋರೆಲ್ಲ ಮಂತ್ರಿ ಆದ್ಮೇಕೆ ಎದ್ದು ವೋಡಾಡೋದ್ನ ನಾವು ನೋಡಿಲ್ಲೇನು?' ಅಂದ ಮೈಲಾರಿ.
'ನೀನು ಯೋಳಾದು ಸರಿಯಾಗದೆ ಬುಡ್ಲಾ. ಸಿವಕುಮಾರುಗೆ ವೊಳ್ಳೆ ಖಾತೆ ಸಿಕ್ಕೋಗದೆ. ಪವರ್ರು ಅಂತೆ. ಕರೆಂಟ್ ಸಮಾಚಾರ ಎಲ್ಲ ಅವ್ರೇ ನೋಡ್ಕಳಾದಂತೆ. ಬುಡ್ಲಾ ಇನ್ನ ನಮ್ ಪಂಪ್‌ಸೆಟ್ಗೆ ಕರೆಂಟು ಪ್ರಾಬ್ಲಮ್ಮೇ ಇರಕ್ಕಿಲ್ಲ' ಅಂತಂದ ಮೈಲಾರಿ. 'ಹೌದಪ್ಪ, ನಿನ್ ಪಂಪ್‌ಸೆಟ್ಗೆ ಕರೆಂಟ್ ಬುಡಕ್ಕೆ ಆವಯ್ಯ ವೊದ್ದಾಡಿ ವೊದ್ದಾಡಿ ಮಂತ್ರಿ ಆಗಿರಾದು. ವೋಗಿ ಹಂಗಂತ ಯೋಳು. ಎಲೆ, ಅಡ್ಕೆ ಹಾಕ್ಕಂಡು ವುಗೀತಾರೆ' ಅಂದ ಅಮಾಸೆ.
'ವೋಗ್ಲಿ ಬುಡಪ್ಪ, ಯಡೂರಪ್ನೋರು ತೆಂಗಿನ ಕಾಯಿ ಬುಟ್ಟು ತಿರ್ಗಿ ಕಮ್ಲ ಹಿಡ್ಕಂಡ್ರಂತೆ. ನಡೆಯೋರು ಎಡುವ್ತಾರೆ ಅಂತ ಯೋಳವ್ರೆ.  ಸುತ್ತಮುತ್ತ ಆಳುಕಾಳು ಇರ್ತರೆ ನಡೆಯೋವಾಗ ನೋಡ್ಕಬೇಕಲ್ಲ. ದಡ್ ಮುಂಡೇವು. ಎಡುವುದ್ಮೇಲೆ ಏಟು ರಾಮಾಯ್ಣ ಆಗೋಯ್ತು ನೋಡು' ಅಂದ ಮೈಲಾರಿ.  

-ಕೆ.ವಿ.ಪ್ರಭಾಕರ್
prabhukolar@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com