ಪರದೇಸಕ್ಕೋಗಿ ಸಾಸ್ಕರು ಸಿಕ್ಕಾಪಟ್ಟೆ ಕಲಿತು ಬಂದ್ರಂತೆ

'ಲೇ ಅಮಾಸೆ, ಬಿರ್ನೆ ಬಾರ್ಲಾ. ಮಂತ್ರಿ ಆಂಜನೇಯಪ್ನೋರುನ್ನ ನೋಡ್ಕಂಡು ಬರಾವ'

'ಲೇ ಅಮಾಸೆ, ಬಿರ್ನೆ ಬಾರ್ಲಾ. ಮಂತ್ರಿ ಆಂಜನೇಯಪ್ನೋರುನ್ನ ನೋಡ್ಕಂಡು ಬರಾವ' ಅಂತ ಮೈಲಾರಿ ಕೂಗು ಹಾಗ್ದ.
'ಯಾಕ್ಲಾ ಮೈಲಾರಿ, ಏನದೆ ಅವ್ರುತವ ಕೆಲ್ಸ. ಸರ್ಕಾರಿ ಕೆಲ್ಸದಾಗೆ ಅವ್ರು ಬಿಜಿ ಇರ್ತರೆ, ನೀನ್ಯಾಕಲೇ ವೋಯ್ತೀಯ ತಲೆ ತಿನ್ನಕ್ಕೆ ತೆಪ್ಗೆ ಇರಕ್ಕೆ ಆಗಾಕಿಲ್ವಾ ?' ಅಂತೇಳ್ದ ಅಮಾಸೆ.
'ಲೇ ಅಮಾಸೆ, ಆವಯ್ಯ ಗೋಡೆನಾ ಮೈಮ್ಯಾಲೆ ಕೆಡ್ವುಕಂಡದಂತೆ. ಪಾಪ, ಏಟು ಮಾಡ್ಕಂಡಿರ್ಬೋದು. ವೋಗಿ ನೋಡ್ಕಂಡು, ಮಾತಾಡುಸ್ಕಂಡು ಬರಾವ ಬಾರ್ಲಾ. ಬಂದ್ರೆ ನಿನ್ ಗಂಟೇನರ ವೋಯ್ತದೇನ್ಲಾ ?' ಅಂದ ಮೈಲಾರಿ.
'ಗೋಡೆನಾ ಮೈಮ್ಯಾಲೂ ಕೆಡ್ವುಕಂಡಿಲ್ಲ, ಎಲ್ಲಿಗೂ ಕೆಡ್ವುಕಂಡಿಲ್ಲ. ವಿಧಾನಸೌಧದಾಗೆ ಸಾಹೇಬ್ರುದ್ದು ಚೇಂಬರ್ರು ಐತಲ್ಲ, ಅದ್ರಾಗೆ ಗೋಡೆ ವೊಡ್ದಾಕವ್ರಂತೆ ಅಷ್ಟೇಯ. ನೀನು ನೋಡುದ್ರೆ ಗೋಡೇನೇ ವೋಗಿ ಅವ್ರು ಮ್ಯಾಲೆ ಬಿತ್ತು ಅನ್ನೋ ಥರುಕ್ಕೆ ಯೋಳ್ತಾಯಿದ್ದೀಯ ವೋಗಲೇ' ಅಂತೇಳ್ದ ಅಮಾಸೆ.
'ಗೋಡೆ ಕೆಡುವುದ್ರಂತಾ, ಅದ್ಯಾಕೆ ? ಗೋಡೆ ಏನ್ಲಾ ಮಾಡಿತ್ತು ಅವ್ರುಗೆ ?' ಅಂದ ಮೈಲಾರಿ. 'ಕೊಟ್ಟಿರೋ ಚೇಂಬರ್ರು ಸಣ್ಣುದಂತೆ. ಕೂರಕ್ಕೆ ಏಳಕ್ಕೆ, ಜನ್ರು ಬರಕ್ಕೆ ವೋಗಕ್ಕೆ ಆಗಾಕಿಲ್ವಂತೆ ಅದುಕ್ಕೆ ಗೋಡೆ ವೊಡ್ದು ಚೇಂಬರ್ರು ದೊಡ್ದು ಮಾಡ್ಕಂಡವ್ರಂತೆ' ಅಂದ ಅಮಾಸೆ.
'ಅಲ್ಲಲೇ, ಚೇಂಬರ್ನಾಗೆ ಮಂತ್ರಿಗ್ಳು ಏನರ ಸಂಸಾರ ನಡುಸ್ಬೇಕಾ? ಬಂದೋರೆಲ್ಲಾ ಗೋಡೆ ಕೆಡುವುಕಂಡು ವೋದ್ರೆ ನಾಳಿಗೆ ವಿಧಾನಸೌಧವನ್ನೇ ಕೆಡುವೋರು ಬತ್ತರೆ ಅಷ್ಟೇಯ. ಇದ್ಯಾಕೋ ಸ್ಯಾನೆ ಆಗೋಯ್ತು ಬುಡಪ್ಪ. ನಿಮ್ ಮನೆ ಸಣ್ದು ಗೋಡೆ ವೋಡ್ಕಳಿ ಅಂತ ಯೋಳುದ್ರೆ ಮಂತ್ರಿಗ್ಳು ಕೇಳ್ತಾರೇನು ?' ಅಂತ ಮೈಲಾರಿ ಕೇಳ್ದ. 'ಹೆಂಗೂ ವೋಯ್ತಾಯಿದ್ದೀಯಲ್ಲ ವೋಗಿ ಕೇಳು' ಅಂದ ಅಮಾಸೆ. 'ನಾ ಯಾಕೆ ವೋಗ್ಲಿ, ವೋಗಾಕಿಲ್ಲ, ಏನೋ ಗೋಡೆ ಕೆಡುವುಕಂಡ್ರು ಅಂತ ಯಾರೋ ರಾಂಗ್ ಇನ್‌ಫರ್‌ಮೇಸನ್ ಕೊಟ್ರು ನಂಗೆ. ಅದುಕ್ಕೆ ವೋಗಾವ ಅಂತೇಳಿದ್ದು' ಅಂತ ಮೈಲಾರಿ ಯೋಳ್ದ.
'ಪಾರಿನ್ ಟೂರ್ಗೆ ವೋಗಿದ್ರಲ್ಲ ಸಾಸ್ಕರು ವಾಪ್ಸು ಬಂದವ್ರಂತೆ. ಅಲ್ಲ ಸಾ, ಬ್ಯಾಡ ಬ್ಯಾಡ ಅಂದ್ರೂವೆ ವೋಗಿ ಬಂದ್ರಲ್ಲ, ಸರೀನಾ ? ಅಂತ ಪೇಪರ್ನೋರು ಕೇಳುದ್ರಂತೆ. ವೋಗ್ರಿ ರೀ, ನಾವು ವೋಗಿ ಬಂದಿದ್ಕೆ ಆಕಾಶ ಏನರ ಕಳಚ್ಕಂಡು ನೆತ್ತಿಮ್ಯಾಲೆ ಬಿತ್ತಾ ? ಭೂಮಿ ತಿರ್ಗಾದು ಏನರ ನಿಂತೋಯ್ತಾ ? ಅಂತ ಎಂಎಲ್‌ಎ ಯಾವ್ಗಲ್ ಸಾವ್ಕಾರ್ರು ಕೇಳುದ್ರಂತೆ ನೋಡಪ್ಪ' ಅಂದ ಅಮಾಸೆ.
'ಹಂಗರೆ, ಅವ್ರು ಪಾರಿನ್ಗೆ ವೋಗಿ ಬಂದಿದ್ಕೆ ವೂರು ವುದ್ಧಾರ ಆಗೋಯ್ತಾ ? ಅವ್ರು ಕ್ಸೇತ್ರ ಏನರ ಲಕಲಕ ಅಂತೇಳಿ ವೊಳ್ಕಂಬುಡ್ತಾ ? ನೋಡಾವ ಯಾವ್ಗಲ್ ಸಾಹೇಬ್ರು ಪಾರಿನ್ಗೆ ವೋಗಿ ಬಂದು ಇಲ್ಲಿ ಅದೇನು ದಬ್ಬಾಕ್ತರೆ ಅಂತ ನೋಡೇಬುಡಾವ. ಅಲ್ಲಲೇ, ಆವಯ್ಯ ಇರೋದ್ರಗೆ ವಸಿ ನೆಟ್ಗೆ ಇದ್ರಪ್ಪ. ಅದ್ಯಾಕೋ ಪರದೇಸುಕ್ಕೆ ವೋಗಿ ಬಂದು ಸೊಟ್ ಸೊಟ್ಗೆ ಮಾತಾಡ್ತಾವ್ರೆ. ಅದೇನು ತಿಂದ್ರೋ ಏನೋ ಅಲ್ಲಿ, ಅದ್ಯಾರು ಏನು ಮಾಡುಸ್ಬುಟ್ರೋ ಏನೋ. ಯಾರ್ದೋ ದುಡ್ಡು ಎಲ್ಲಮ್ಮನ ಜಾತ್ರೆ ವೋಗ್ಲಿ ಬುಡಪ್ಪ. ನಂದು ನಿಂದು ಏನು ವೋಬೇಕು' ಅಂತೇಳ್ದ ಮೈಲಾರಿ.
'ಯಾವ್ಗಲ್ ಸಾವ್ಕಾರ್ರು ಪರದೇಸದಾಗೆ ಸ್ಯಾನೆ ಕಲ್ತು ಬಂದವ್ರಂತೆ. ಅದುನ್ನ ಕ್ಸೇತ್ರುದಾಗೆ ಹಂಗೇ ಇಳುಸ್ತರಂತೆ. ಏನೇನು ನೋಡ್ಕಂಡು ಬಂದ್ರಿ ಸಾಹೇಬ್ರೆ ಅಂತ ಯಾರೋ ಕೇಳುದ್ರುಪ್ಪ. ಬೆಂಚು ಕಾರು ವೋಡಾಡಂಗೆ ರೋಡು ಮಾಡೋದು ಹೆಂಗೆ ? ಸಮುದ್ರುಕ್ಕೆ ಹಡ್ಗು ಬುಡಾದು ಹೆಂಗೆ ? ಹೆಣ್ಣಕ್ಳು, ಗಂಡ್ಮಕ್ಳು ಹೆಂಗೆ ಬಟ್ಟೆ ಹಾಕ್ಕಬೇಕು, ಏನೇನು ತಿನ್ಬೇಕು ಅನ್ನೋದ್ನ ಸಿಕ್ಕಾಪಟ್ಟು ಅಧ್ಯಯನ ಮಾಡ್ಬುಟ್ಟವ್ರಂತೆ ಕಣ್ಲಾ. ಕ್ಸೇತ್ರದ ಜನ್ರು ವುದ್ಧಾರ ಆಗೋಯ್ತರೆ ಬುಡ್ಲಾ' ಅಂದ ಅಮಾಸೆ.
'ಲೇ ಮುಂಡೇದೆ, ಅವ್ರು ವೂರ್ಗೆ ವೋಗಕ್ಕೆ ನೆಟ್ಗೆ ರೋಡೇ ಇಲ್ಲ. ಇನ್ನ ಬೆಂಚು ಕಾರು ವೋಯ್ತದೇನ್ಲಾ? ಹಡ್ಗು ಬುಡಕ್ಕೆ ಅವ್ರು ವೂರ್ನಾಗೆ ಯಾವ್ ಸಮುದ್ರ ಐತಲೇ ಮಂಕ್ ನನ್ ಮಗನೇ' ಅಂತ ಮೈಲಾರಿ ಬೈದ. 'ಇಲ್ಲ ಅಂದ್ರೆ ಏನಪ್ಪೋ, ಅವ್ರುದ್ದೇ ಸರ್ಕಾರ ಅದೆ. ಸಿದ್ರಾಮಣ್ಣೋರ್ಗೆ ಯೋಳಿ ರೋಡು, ಸಮುದ್ರ ಎಲ್ಲಾನೂವೆ ಮಂಜೂರು ಮಾಡಿಸ್ಕತರೆ ಅಷ್ಟೇಯ. ಅದುಕ್ಕೆ ಯಾಕೆ ತಲೆಬಿಸಿ ಮಾಡ್ಕಬೇಕು' ಅಂತೇಳಿ ಆಮಾಸೆ ಯೋಳ್ದ.
'ನಿನ್ ತಲೆ ತಕ್ಕಂಡೋಗಿ ಯಾವ್ದಾರ ರೈಲು ಕೆಳ್ಗೆ ಮಡ್ಗಲೇ ಮುಂಡೇದೆ' ಅಂತೇಳಿ ಮೈಲಾರಿ ಜಾಗ ಖಾಲಿ ಮಾಡ್ದ.


- ಕೆ.ವಿ.ಪ್ರಭಾಕರ್
prabhukolar@yahoo.com


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com