

ಹನ್ನೆರಡನೇ ಶತಮಾನದ ವಚನಕಾರ ಸಿದ್ದರಾಮನು ಶ್ರೀಶೈಲದ ಮಲ್ಲಿಕಾರ್ಜುನನ ಭಕ್ತ. ಈ ಶ್ರೀಶೈಲವು ಒಂದು ಪ್ರಸಿದ್ಧ ಮೈಲಾರಲಿಂಗ ಕ್ಷೇತ್ರವಾಗಿತ್ತು. ಆದ್ದರಿಂದಲೇ ಮುಂದೆ ಕಲ್ಯಾಣಕ್ಕೆ ಹೋಗಿ ಲಿಂಗದೀಕ್ಷೆ ಪಡೆದು ವಚನಕಾರನಾದಾಗ ತನ್ನ ಇಷ್ಟ ದೈವವಾದ ಶ್ರೀಶೈಲದ ಮಲ್ಲಿಕಾರ್ಜುನನನ್ನು ಸ್ಮರಿಸಲು ಕಪಿಲಸಿದ್ಧ ಮಲ್ಲಿಕಾರ್ಜುನಾ ಎಂಬ ಅಂಕಿತನಾಮವನ್ನು ಇಟ್ಟುಕೊಳ್ಳುತ್ತಾನೆ ಸಿದ್ದರಾಮ.
ಬಾಲಕನಾಗಿದ್ದಾಗಲೇ ಶ್ರೀಶೈಲದ ಮಲ್ಲಿಕಾರ್ಜುನನ ಕರೆಗೆ ಓಗೊಟ್ಟು ಮನೆ ತೊರೆದು ಶ್ರೀಶೈಲಕ್ಕೆ ಹೋಗುವನು. ಅಲೆದಲೆದು ಕಾಲ್ನಡಿಗೆಯಲ್ಲೇ ನೂರಾರು ಮೈಲುಗಲ್ಲುಗಳನ್ನು ಕ್ರಮಿಸಿ ಶ್ರೀಶೈಲ ತಲುಪುವ ಬಾಲಕ ಧೂಳಿಮಾಕಾಳ ಅಲ್ಲಿ ಮಲ್ಲಿಕಾರ್ಜುನನಿಗೆ ಸೇವೆ ಸಲ್ಲಿಸುತ್ತಾನೆ. ಅಲ್ಲಿ ಆತನಿಗೆ ಶಿವ ಸಾಕ್ಷಾತ್ಕಾರವಾಗುವುದು. ಆದ್ದರಿಂದ ಆತನು ಸ್ವಯಂ ಸಿದ್ದರಾಮನೆಂದು ಹೆಸರು ಧರಿಸುತ್ತಾನೆ. ಹೀಗೆ ಬಾಲಕನಾಗಿದ್ದಾಗಲೇ ಭಗವಂತನನ್ನರಸಿ ಹೋದ ಮಹಾಭಕ್ತ ಸಿದ್ದರಾಮ, ಈತ ಮುಂದೆ ಪುನಃ ತನ್ನ ಊರಾದ ಸೊನ್ನಲಿಗೆ ಬಂದು ಮಲ್ಲಿಕಾರ್ಜುನನ ಆತ್ಮ ಲಿಂಗವನ್ನು ಶ್ರೀಶೈಲದಿಂದ ತಂದು ಅಲ್ಲಿ ಪ್ರತಿಷ್ಠಾಪಿಸಿ ದೇವಸ್ಥಾನ ಕಟ್ಟಿಸುತ್ತಾನೆ. ಅದು ಇಂದಿನ ಸೊಲ್ಲಾಪೂರ ಪಟ್ಟಣದಲ್ಲಿದೆ. ಹೀಗೆ ಆತನ ಸಮಾಜಮುಖಿ ಬದುಕು ಯೌವ್ವನದಲ್ಲೇ ಪ್ರಾರಂಭವಾಗುತ್ತದೆ. ಸಿದ್ದರಾಮ ಸೊಲ್ಲಾಪುರದಲ್ಲಿ ಕೆರೆಯನ್ನು ಕಟ್ಟಿಸಿ, ಛತ್ರಗಳನ್ನು ಕಟ್ಟಿಸಿ, ಅನ್ನದಾನ ಮಾಡುತ್ತಾ ಜನರ ಕಂದಾಚಾರ ಮೌಢ್ಯಗಳನ್ನು ಪರಿಹರಿಸುತ್ತಾ ಅವರನ್ನು ಉದ್ಧರಿಸಲು ಪ್ರಯತ್ನಿಸಿರುವುದು ಕಂಡುಬರುತ್ತದೆ.
ನಿರ್ಗತಿಕರಿಗಾಗಿ ಸಾವಿರ ಮದುವೆಗಳನ್ನು ಮಾಡುತ್ತಾನೆ. ಜನರು ಇತರರಲ್ಲಿ ಸಾಲ ಮಾಡಿದ್ದನ್ನು ತೀರಿಸುವ ಕೆಲಸವನ್ನು ಮಾಡುತ್ತಾನೆ. ಸಮಾಜ ಸುಧಾರಣೆಯ ಅವನ ಕೆಲಸಗಳು ಅವಿಸ್ಮರಣೀಯ ಕರ್ಮಯೋಗಿ ಎಂಬ ಬಿರುದು ಅವನಿಗೆ ಸಲ್ಲುತ್ತದೆ. ಶೈವಭಕ್ತಿಯ ಜೊತೆ ಜೊತೆಗೇ ಜನಹಿತಾಸಕ್ತಿ ಅವನ ಬದುಕಿನ ಎರಡು ಕಣ್ಣುಗಳಾಗಿದ್ದವು. ಅವನಿಗೆ ಮೂರು ಕಣ್ಣುಗಳಿದ್ದವೆಂದು ಪ್ರತೀತಿ. ಇವನು ಯೋಗಶಕ್ತಿ ಪವಾಡ ಶಕ್ತಿಗಳಿಂದ ಇಡೀ ಜನಸಮೂಹದ ಆರಾಧ್ಯ ದೈವವಾಗಿದ್ದನು. ಹೀಗೆ ಸಿದ್ದರಾಮನು ಯೌವ್ವನದಲ್ಲೇ ಸೊಲ್ಲಾಪುರ ಮತ್ತು ಕಲ್ಯಾಣ ಭಾಗದಲ್ಲೆಲ್ಲಾ ಪ್ರಸಿದ್ಧನಾಗಿದ್ದನು.
ಇಮ್ಮಡಿ ಬಿಜ್ಜಳನ ಸಾವಿನ ನಂತರ ರೇವಣ ಸಿದ್ದೇಶ್ವರರು ಮಂಗಳವಾಡವನ್ನು ತೊರೆದು ದಕ್ಷಿಣ ಭಾರತದತ್ತ ವಿಶೇಷವಾಗಿ ದಕ್ಷಿಣ ಕರ್ನಾಟಕದತ್ತ ಲೋಕ ಸಂಚಾರವನ್ನಾರಂಭಿಸುತ್ತಾರೆ. ಆಗ ಅವರ ಜತೆಗೆ ರೇವಣ ಸಿದ್ದೇಶ್ವರರ ಪುತ್ರ ರುದ್ರಮುನಿ ಮತ್ತು ಸಿದ್ದರಾಮ ಹಾಗೂ ಮರುಳಸಿದ್ದ ಎಂಬುವವರಿದ್ದರು. ಸಿದ್ದರಾಮನು ಬದುಕಿದ್ದಾಗಲೇ ದೈವತ್ವಕ್ಕೇರಿದ ಮಹಾಮಾನವ, ಸಿದ್ಧರಾಮನ ಲಿಂಗ ಶಿವಗಂಗೆ ಬೆಟ್ಟದಲ್ಲಿ, ರೇವಣ ಸಿದ್ದೇಶ್ವರ ಬೆಟ್ಟದಲ್ಲಿ ಈಗಲೂ ಇರುವುದನ್ನು ಕಾಣಬಹುದು. ತುಮಕೂರು, ಚಿಕ್ಕಮಗಳೂರು, ಬೆಂಗಳೂರು ಮತ್ತು ಮೈಸೂರು ಜಿಲ್ಲೆಗಳಲ್ಲಿ ಈಗಲೂ ಸಿದ್ದರಾಮನ ಹೆಸರಿನ ಊರುಗಳು, ದೇವಸ್ಥಾನಗಳು ಅಪಾರವಾಗಿರುವುದನ್ನು ಗಮನಿಸಿದರೆ ಅವನು ಈ ಪ್ರದೇಶದಲ್ಲಿ ಬಹಳ ಕಾಲ ಸುತ್ತಾಡಿರಬೇಕು ಎಂಬುದನ್ನು ಸೂಚಿಸುತ್ತದೆ. ಅದರಲ್ಲೂ ತುಮಕೂರು ಜಿಲ್ಲೆಯಲ್ಲಿ ಸಿದ್ದರಾಮನ ದೇವಸ್ಥಾನಗಳು ಬಹಳ ಇವೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕು ಅಜ್ಜಂಪುರದ ಬಳಿಯ ಸೊಲ್ಲಾಪುರದಲ್ಲಿ ಹನ್ನೆರಡು ವರುಷಕ್ಕೊಮ್ಮೆ ಜರುಗುವ ಜಾತ್ರೆಯಲ್ಲಿ ಅದರ ವಿವಿಧ ಆಚರಣೆಗಳಲ್ಲಿ ಕುರುಬರೇ ಭಾಗವಹಿಸುತ್ತಾರೆಂದು ತಿಳಿದು ಬರುತ್ತದೆ.
ಕರ್ಮಯೋಗಿ ಸಿದ್ದರಾಮನು ಕಲ್ಯಾಣಕ್ಕೆ ಮಹಾ ಶಿವಯೋಗಿ ಎಂದು ಹೆಸರು ಪಡೆದನು. ಆ ನಂತರ ಅವನು ವಿವಿಧೆಡೆಗಳಲ್ಲಿ ಶಿವತತ್ವ ಪ್ರಚಾರದಲ್ಲಿ ತೊಡಗಿದ್ದಾನೆ. ಸಿದ್ದರಾಮನು ತನ್ನ ರಾಜರ್ಷಿ ಮತ್ತು ಬ್ರಹ್ಮರ್ಷಿ ಗುಣ ಸಾಮರ್ಥ್ಯಗಳಿಂದ ಅತ್ಯಂತ ಜನಪ್ರಿಯನಾದ್ದರಿಂದ ಅವನನ್ನು ಜನರು ಮಹಾದೇವನ ಅವತಾರವೆಂದೇ ಪೂಜಿಸತೊಡಗಿದ್ದರು. ಸಿದ್ದರಾಮನ ಸಾಧನೆ ಮತ್ತು ಸಂದೇಶ ಕುರಿತು ಕೆಳಕಂಡಂತೆ ಕೆಲ ವಿದ್ವಾಂಸರು ಬರೆಯತ್ತಾರೆ.
ಸಿದ್ದರಾಮ ಎಷ್ಟು ಪ್ರಭಾವಶಾಲಿ, ಗೌರವಶಾಲಿ ವ್ಯಕ್ತಿತ್ವ ಹೊಂದಿದ್ದನೆಂದರೆ ದೇವಗಿರಿ ಯಾದವರ ಶಾಸನದಲ್ಲಿ ಸಿದ್ದರಾಮನ ಎರಡು ವಚನಗಳು ಕೆತ್ತನೆಗೊಂಡಿವೆ. ಅವನು ತಾನು ಕಟ್ಟಿಸಿದ ಕೆರೆಯ ಅಂಗಳದಲ್ಲೇ ಸಮಾಧಿಗೊಳ್ಳುವ ಮೊದಲು ಹಾವಿನಹಾಳ ಕಲ್ಲಯ್ಯ ಮೊದಲಾದ ಶಿಷ್ಯರಿಗೆ ಈ ಕ್ಷೇತ್ರದ ಆಚರಣೆಗಳನ್ನು ಎಂದೂ ತಪ್ಪಿಸಬಾರದೆಂದೂ ಹಾಗೆ ನಡೆಸಿಕೊಂಡು ಹೇಳಿ ಶಿವೈಕ್ಯರಾದರೆಂದು ತಿಳಿದುಬರುತ್ತದೆ. ಹುಲಜಂತಿಯ ಮಹಾಲಿಂಗರಾಯರ ಮೊಮ್ಮಗನಾದ ಬರಹಗಾಲ ಸಿದ್ದನು ಅವನ ಸ್ಮರಣಾರ್ಥವಾಗಿ ವರುಷಕ್ಕೊಮ್ಮೆ ಅಲ್ಲಿ ಜಾತ್ರೆಯ ಕಾಲದಲ್ಲಿ ಸಾಧು ಸತ್ಪುರುಷರಿಗೆ ಸಾವಿರ ಕೌಪೀನ ಕಂಬಳಿಗಳನ್ನು ದಾನ ಮಾಡುವ ಪದ್ಧತಿಯನ್ನು ಜಾರಿಗೆ ತಂದನೆಂದು ತಿಳಿದುಬರುತ್ತದೆ. ಜಲಶಾಸ್ತ್ರ ಜ್ಞಾನ, ಸಾಮಾಜಿಕ ಅಭಿವೃದ್ಧಿ ಕಾರ್ಯಗಳ ಪರಿಕಲ್ಪನೆ ಎಲ್ಲವೂ ಕೃಷಿಕ ಮೂಲದ ನಾಯಕತ್ವ ಗುಣಗಳುಳ್ಳ ವ್ಯಕ್ತಿಗೆ ಮಾತ್ರವೇ ಸಾಧ್ಯ.
ಸುಡ್ಡಳ ಚಾಚರಸನೆಂಬ ವಚನಕಾರನು ಸಿದ್ದರಾಮನ ಬಗೆಗೆ ಹೀಗೆ ಹೇಳಿದ್ದಾನೆ.
ಉಂಡುಂಡು ಜರೆವವನು ಯೋಗಿಯೇ
ಆತನಕ್ಕಳುವವನು ಯೋಗಿಯೇ
ವ್ಯಸನಕ್ಕೆ ಮರುಗುವವನು ಯೋಗಿಯೇ
ಆದಿವ್ಯಾಧಿಯುಳ್ಳವ ಯೋಗಿಯೆ
ಯೋಗಿಗಳೆಂದರೆ ಮೂಗನಾಗಳ ಕೊಯ್ದೆ
ಯೋಗಿಗಳ ಯೋಗಿ ಶಿವಯೋಗಿ
ಸಿದ್ಧರಾಮನೊಬ್ಬನೆ ಯೋಗಿ.
ದುಗ್ಗಳೆ ಎಂಬ ಶರಣೆಯು ಯೋಗಿಯಾದಡೆ ಸಿದ್ದರಾಮಯ್ಯನಂತಾಗಬೇಕು ಎಂದು ಅಭಿಮಾನಪೂರ್ವಕವಾಗಿ ನುಡಿದಿದ್ದಾಳೆ.
ಸಿದ್ದರಾಮನು ತನ್ನ ಸ್ವಂತ ಗಳಿಕೆಯಿಂದ ಬಡವರ ಸಾಲಗಳನ್ನು ತೀರಿಸುತ್ತಾನೆ. ಈ ಕೆಲಸವನ್ನು ಇಂದು ಆಧುನಿಕ ಸರ್ಕಾರಗಳು ಮಾಡುತ್ತಿರುವುದನ್ನು ನಾವು ಋಣ ಪರಿಹಾರವೆನ್ನುತ್ತೇವೆ. ಅಂದು ಸಿದ್ದರಾಮರು ತಾನೇ ಸರ್ಕಾರ (ಪ್ರಭುತ್ವ) ಮಾಡಬೇಕಾದ ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದನು. ಬಡವರಿಗಾಗಿ ಕರ್ಮಯೋಗಿ ಸಿದ್ದರಾಮನು ಹಗಲಿರುಳೆನ್ನದೆ ದುಡಿದಿದ್ದನು. ಈ ಬಡವರು ಕಷ್ಟಪಡುವುದನ್ನು ಕಂಡು ಪ್ರಗತಿಪರ ಚಿಂತನೆ- ಮುನ್ನೋಟಗಳನ್ನು ಹೊಂದಿದ್ದ ಸಿದ್ದರಾಮನು ಸಾಮೂಹಿಕ ವಿವಾಹಗಳ ಕಾರ್ಯಕ್ರಮವನ್ನು ಜಾರಿಗೆ ತರುವನು. ಈಗ ಸಿದ್ದರಾಮನ ಪರಿಕಲ್ಪನೆಯು ಜನಾನುರಾಗಿಯಾಗಿದೆ. ಪ್ರಸ್ತುತ ಮಠಗಳು ದೇವಸ್ಥಾನಗಳು, ಸ್ವಯಂಸೇವಾ ಸಂಘಗಳು ಉಚಿತ ಸಾಮೂಹಿಕ ವಿವಾಹ ಸಮಾರಂಭಗಳನ್ನು ಏರ್ಪಡಿಸುತ್ತಿವೆ. ಇದೇ ಕೆಲಸವನ್ನು ಸುಮಾರು ಎಂಟುನೂರು ವರ್ಷಗಳ ಹಿಂದೆ ಸಿದ್ದರಾಮನು ಮಾಡಿದ್ದನು.
ಸಿದ್ದರಾಮನ ವ್ಯಕ್ತಿತ್ವವು ಎಲ್ಲಾ ಜನರಿಗೆ ಮಾದರಿಯಾಗಿದೆ. ಹಿಂದುಳಿದ ವರ್ಗಗಳ ಕುರುಬರೂ ಸೇರಿದಂತೆ ರಾಜಕೀಯ ನಾಯಕರಿಗೆ ಮತ್ತು ಸ್ವಯಂಸೇವಾ ಸಂಘಗಳ ಪದಾಧಿಕಾರಿಗಳಿಗೆ ಸಿದ್ದರಾಮನು ಮತ್ತು ಆತನ ಸಮಾಜಮುಖಿ ವ್ಯಕ್ತಿತ್ವವು ಆದರ್ಶಪ್ರಾಯವಾಗಿದೆ. ಸಮಾಜದ ಎಲ್ಲಾ ವರ್ಗಗಳ ಜನರು ಸಿದ್ದರಾಮನ ಜೀವನ ವಿವರಗಳನ್ನು ತಿಳಿಯುವುದರಿಂದ, ಆತನ ವಚನಗಳನ್ನು ಅಧ್ಯಯನ ಮಾಡುವುದರಿಂದ ಅವರಿಗೆ ಅಪಾರವಾದ, ಪ್ರಯೋಜನವಿದೆ. ನೊಳಂಬ ವೀರಶೈವ ಸಮಾಜವು ಸಿದ್ಧ ಆಗಮನನ್ನು ಗುರುಸ್ಥಾನದಲ್ಲಿಟ್ಟು ಪೂಜಿಸುತ್ತಿದೆ. ಅದು ಸಿದ್ದರಾಮನನ್ನು ಆರಾಧನಾಭಾವದಿಂದ ಕಂಡು ಗೌರವಿಸುತ್ತಿರುವುದು ಕುರುಬರಿಗೆ ಮತ್ತು ಇತರರಿಗೆ ಅನುಕರಣೀಯವಾಗಿದೆ.
ಯಾರು ಏನಾದರೂ ಹೇಳಲಿ ಹನ್ನೆರಡನೇ ಶತಮಾನಕ್ಕಿಂತ ಮುಂಚೆ ಆಳ್ವಿಕೆಯಲ್ಲಿದ್ದ ನೊಳಂಬ ರಾಜರ ಶ್ರೀ ಸಿದ್ಧರಾಮನನ್ನು ಗುರುವೆಂದು ಸ್ವೀಕರಿಸಿದವರು ಇಂದಿಗೂ ಆ ಸಂಪ್ರದಾಯವನ್ನು ಮುಂದುವರಿಸಿದ್ದಾರೆ. ಇದೇ ಜನವರಿ 14 ಕರ್ಮಯೋಗಿ ಸಿದ್ದರಾಮನ 841 ನೇ ಜಯಂತಿಯನ್ನು ನೊಳಂಬ ವೀರಶೈವ ಸಮಾಜವು, ಪ್ರತಿ ವರುಷದಂತೆ ಈ ಬಾರಿ ಕಡೂರಿನಲ್ಲಿ ಎರಡು ದಿನ ಜಯಂತಿ ಮಹೋತ್ಸವವನ್ನಾಗಿ ಆಚರಿಸುತ್ತಿದೆ.
-ಶೋಭಾ.ಹೆಚ್.ಜಿ
ಸಂಪಾದಕರು ಸ್ತ್ರೀ ಜಾಗೃತಿ ಮಾಸಪತ್ರಿಕೆ
Advertisement