ಜಯಂತಿ, ಜೈರಾಮ; ಅಭಿವೃದ್ಧಿ ಪಂಗನಾಮ

1960ರ ದಶಕದಲ್ಲಿ ಮೈನವಿರೇಳಿಸುವ ಸಾಹಸ ಬೇಹುಗಾರಿಕಾ ಪಟ್ಟುಗಳ ನಾವೀನ್ಯತೆಯನ್ನು...
ಜಯಂತಿ, ಜೈರಾಮ; ಅಭಿವೃದ್ಧಿ ಪಂಗನಾಮ
Updated on

Dr.No
1960ರ ದಶಕದಲ್ಲಿ ಮೈನವಿರೇಳಿಸುವ ಸಾಹಸ ಬೇಹುಗಾರಿಕಾ ಪಟ್ಟುಗಳ ನಾವೀನ್ಯತೆಯನ್ನು ಪರಿಚಯಿಸಿದ ಜೇಮ್ಸ್‌ಬಾಂಡ್ ಚಿತ್ರ ಮಾಲಿಕೆಯ ಮೊದಲ ಅವತರಿಣಿಕೆಯ ಚಿತ್ರದ ಹೆಸರೇ 'ಡಾಕ್ಟರ್ ನೊ.' ಶಾನ್ ಕಾನರಿ ಈ ಚಿತ್ರದ ಮೂಲಕ ಜಗತ್ತಿನ ಮೊಟ್ಟ ಮೊದಲ ಬಾಂಡ್ ಆಗಿ ಹೊರಹೊಮ್ಮಿದರು. ಇದರ ಜನಪ್ರಿಯತೆ ಯಾವ ಮಟ್ಟಿಗೆ ಇತ್ತೆಂದರೆ ಇಂದಿಗೂ, ಅಂದರೆ ಸುಮಾರು 5 ದಶಕಗಳ ನಂತರವೂ ಜೇಮ್ಸ್ ಬಾಂಡ್ ಚಿತ್ರಗಳು ಬರುತ್ತಲೇ ಇವೆ, ಗಲ್ಲಾಪೆಟ್ಟಿಗೆಯನ್ನು ಕೊಳ್ಳೆ ಹೊಡೆಯುತ್ತಲೇ ಇವೆ. ಈ ಸರಣಿಯ ಜನಪ್ರಿಯತೆಯ ಪ್ರಭಾವಳಿಯಲ್ಲಿಯೇ ಕಾನರಿ ಒಬ್ಬ ಜನಜನಿತ ನಟನಾಗಿ ರೂಪುಗೊಂಡಿದ್ದೂ ಇದೆ. ಇವತ್ತಿಗೆ ಅದೆಷ್ಟೊ ಬಾಂಡ್ ಚಿತ್ರಗಳು ಬಂದು ಹೋಗಿದ್ದರೂ ಈ 'ಡಾಕ್ಟರ್ ನೊ'ನನ್ನು ಚಿತ್ರಪ್ರೇಮಿಗಳು ಮರೆತಿಲ್ಲ.
2009ರಲ್ಲಿ ಮಧ್ಯಮ ವರ್ಗ ಮತ್ತು ನಗರವಾಸಿ ಮತದಾರರು ಹೊಸದೊಂದು ಕನಸು ಕಟ್ಟಿಕೊಂಡು, ನೆಮ್ಮದಿಯ ಬದುಕಿನ ಥ್ರಿಲ್ ಅನುಭವಿಸುವ ಆಶಯದೊಂದಿಗೆ ಬೆನ್ನುತಟ್ಟಿ ಗೆಲ್ಲಿಸಿದ ಯುಪಿಎ ಸರ್ಕಾರದಲ್ಲೊಬ್ಬ ಮಂತ್ರಿ ಮಹೋದಯ ಇದೇ ಹೆಸರಿಗೆ ಉಪಮೆಯಾದರು. ಚಿತ್ರದಲ್ಲಿ ನಾಯಕ ಬ್ರಿಟನ್ನಿಗೆ ಕಂಟಕವಾಗಿದ್ದ ಖೂಳರ ದಂಡನ್ನು ಸದೆ ಬಡಿದು ಬೀಗಿದರೆ, ಈ ಮಂತ್ರಿ ಅನುಮತಿಗಾಗಿ ತಮ್ಮ ಬಳಿ ಬರುವ ಯಾವುದೇ ಪ್ರಸ್ತಾಪ, ಫೈಲುಗಳಿಗೆ ಶಾಶ್ವತವಾಗಿ ಕೊಕ್ಕೆ ಹಾಕುವ ಮೂಲಕ 'ಡಾಕ್ಟರ್ ನೊ' ಎಂಬ ಬಿರುದು ಪಡೆದರು. ಶಾನ್ ಕಾನರಿಯ ಪಾತ್ರದ ಪ್ರತಿ ನಡೆಯಲ್ಲೂ ರೋಚಕತೆ, ಕುತೂಹಲ ಮತ್ತು ಭರವಸೆ ಅಡಗಿದ್ದರೆ ಈ ಮಂತ್ರಿಯ ಪ್ರತಿ ನಡೆ, ನುಡಿಯಲ್ಲೂ ನಕಾರಾತ್ಮಕ ಧೋರಣೆಯೇ ಎದ್ದು ಕಾಣುತ್ತಿತ್ತು. ಅದು ಬೇರಾರೂ ಅಲ್ಲ; ಜೈರಾಮ ರಮೇಶ್. ಕಾಂಗ್ರೆಸ್‌ನ ಅಂತಃಪುರದ ಬಂಟನಾಗಿದ್ದ ರಮೇಶ್ ದೇಶದ ಪರಿಸರ ಮತ್ತು ಅರಣ್ಯ ಸಚಿವರಾಗಿ ಪ್ರಮಾಣ ಸ್ವೀಕರಿಸಿದಾಗ ಅವರನ್ನು ಸುಧಾರಣೆಯ ಹರಿಕಾರ ಎಂದೇ ಬೆಂಬಲಿಗರ ಪಡೆ ಉಘೇ ಎಂದಿತ್ತು. ಕೈಗಾರಿಕೋದ್ಯಮಿಗಳಲ್ಲಿಯೂ ಒಂದು ಸಣ್ಣ ಭರವಸೆ ಮನೆ ಮಾಡಿತ್ತು. 2008ರ ಜಾಗತಿಕ ಆರ್ಥಿಕ ಕುಸಿತದ ಅಡ್ಡ ಪರಿಣಾಮದಿಂದ ಪಾರಾಗಿದ್ದ ಭಾರತಕ್ಕೆ ಆಗ ತುರ್ತಾಗಿ ಬೇಕಿದ್ದುದು ಹೊಸ ಹೊಸ ಕೈಗಾರಿಕೆಗಳ ಸ್ಥಾಪನೆ, ಅದಕ್ಕಾಗಿ ಬಂಡವಾಳದ ಭರಪೂರ ಹರಿವು. ಭಾರತದ ಭೂ ಪ್ರದೇಶದ ಗರ್ಭದಲ್ಲಿ ಅಡಗಿರುವ ಖನಿಜ ಸಂಪತ್ತಿನ ಬಳಕೆ, ವಿದ್ಯುತ್, ರಸ್ತೆ, ಬಂದರು, ಗಣಿಗಾರಿಕೆ ಮುಂತಾದ ಕ್ಷೇತ್ರಗಳಲ್ಲಿ ಬಂಡವಾಳ ತೊಡಗಿಸಲು, ತನ್ಮೂಲಕ ದೇಶದ ಖಜಾನೆ ಮತ್ತು ನಿರುದ್ಯೋಗಿಗಳಿಗೆ ಕಾಯಕ ಭಾಗ್ಯ ಒದಗಿಸಲು, ಜೊತೆಗೆ ವ್ಯಾಪಾರ, ವಹಿವಾಟು ವಿಸ್ತರಿಸಿಕೊಳ್ಳಲು ಕೈಗಾರಿಕೋದ್ಯಮಿಗಳು ತುದಿಗಾಲ ಮೇಲೆ ನಿಂತಿದ್ದರು. ಯಾವುದೇ ಅಡೆ-ತಡೆಗಳಿಲ್ಲದ ಬಂಡವಾಳ ಹೈವೇ ಅವರೆಲ್ಲರ ಕನಸಾಗಿತ್ತು. ಇದೊಂದು ರೀತಿ ಎರಡನೇ ತಲೆಮಾರಿನ ಆರ್ಥಿಕ ಸುಧಾರಣೆಯ ತಳಪಾಯವೂ ಆಗಿತ್ತು. ಆರ್ಥಿಕ ಪಂಡಿತ ಮನಮೋಹನ್ ಸಿಂಗ್ ಮುಂದಾಳತ್ವದ ಸರ್ಕಾರದಲ್ಲಿ ಇವೆಲ್ಲವೂ ಚಿಟಿಕೆ ಹೊಡೆದಷ್ಟು ಸುಲಭವಾಗಿ ಆಗಿಯೇ ಬಿಡುತ್ತದೆ ಎಂದು ಹೂಡಿಕೆದಾರರು ಆಶಿಸಿದ್ದರು. ಆದರೆ, ಅವರ ಕಲ್ಪನೆಯ ಬಂಡವಾಳ ಹೈವೇಯಲ್ಲಿ ಎರಡು ದೊಡ್ಡ ಸ್ಪೀಡ್ ಬ್ರೇಕರ್‌ಗಳು ಉದ್ಭವಿಸಿದರು.
ಒಂದು ಅಂದಿನ ಹಣಕಾಸು ಮಂತ್ರಿ ಪ್ರಣಬ್ ಮುಖರ್ಜಿ. ಮತ್ತೊಂದು ಅಂದಿನ ಪರಿಸರ ಮತ್ತು ಅರಣ್ಯ ಮಂತ್ರಿ ಜೈರಾಮ ರಮೇಶ್. ದೇಶದ ಆರ್ಥಿಕತೆಯ ಅಗತ್ಯಗಳಿಗೆ, ಜಾಗತಿಕ ಬದಲಾವಣೆಗಳಿಗೆ, ಹೂಡಿಕೆದಾರರ ಆಶಯಗಳಿಗೆ ಸ್ಪಂದಿಸುವ, ಅದಕ್ಕೆ ತಕ್ಕಂತೆ ಆರ್ಥಿಕ ಕ್ರಮಗಳನ್ನು ಕೈಗೊಳ್ಳುವ ಬದಲು ಪ್ರಣಬ್ ಮುಖರ್ಜಿ ಶಾಲಾ ಮಾಸ್ತರನಂತೆ ಕೈಗಾರಿಕೆಗಳ ಬೆನ್ನಿಗೆ ಬಿದ್ದರು. ಜಾಗತಿಕ ಆರ್ಥಿಕ ಕುಸಿತದ ಪ್ರಭಾವ ತಡೆಯಲು ಜಾರಿಗೊಳಿಸಲಾಗಿದ್ದ ಉಪಕ್ರಮಗಳು ದೀರ್ಘಕಾಲದಲ್ಲಿ ಆರ್ಥಿಕ ಚೈತನ್ಯಕ್ಕೆ ಪಟ್ಟು ನೀಡಬಾರದು ಎಂದು ತಿಳಿದಿದ್ದರೂ ಹಟಕ್ಕೆ ಬಿದ್ದವರಂತೆ ಅವುಗಳನ್ನು ಹಿಂತೆಗೆದುಕೊಳ್ಳುವ, ಅವುಗಳ ಸ್ಥಾನದಲ್ಲಿ ಉದಾರೀಕರಣಕ್ಕೆ ಒತ್ತು ನೀಡುವ, ಉದ್ಯೋಗ ಸೃಷ್ಟಿ, ತಯಾರಿಕಾ ರಂಗಕ್ಕೆ ಉತ್ತೇಜನ ನೀಡುವ ಕ್ರಮಗಳನ್ನು ಜಾರಿಗೆ ತರಲು ಪ್ರಣಬ್ ಹಿಂದೇಟು ಹಾಕಿದ ಪರಿಣಾಮ ಆರ್ಥಿಕ ಸದೃಢತೆಯ ಬಲೂನಿಗೆ ತೂತು ಬಿದ್ದು ಹೊಸ ಬಂಡವಾಳ ಹೂಡಿಕೆ ಬಹುತೇಕ ಸ್ಥಗಿತವಾಯಿತು. ಇನ್ನು ಇದನ್ನು ತಾಳಿಕೊಂಡು, ದಾಟಿಕೊಂಡು ಮುಂದೆ ಸಾಗುವ ಧೈರ್ಯ ತೋರಿದ ಬಂಡವಾಳದಾರರಿಗೆ ಎದುರಾದದ್ದು ಜೈರಾಮ ರಮೇಶ್ ಎಂಬ ತಡೆಗೋಡೆ. ಮೂಲಭೂತ ಸೌಕರ್ಯದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಾವುದೇ ದೊಡ್ಡ ಯೋಜನೆ ಕಾರ್ಯರೂಪಕ್ಕೆ ಬರಬೇಕಾದರೆ ಅದಕ್ಕೆ ಕೇಂದ್ರ ಪರಿಸರ ಖಾತೆಯ ನಿರಾಕ್ಷೇಪಣೆ ಪತ್ರ ಬೇಕೇ ಬೇಕು. ಅದು ರಾಷ್ಟ್ರೀಯ ಹೆದ್ದಾರಿ ಇರಬಹುದು, ವಿದ್ಯುತ್ ಉತ್ಪಾದನೆ, ಗಣಿಗಾರಿಕೆ, ಬಂದರು, ವಿಶೇಷ ವಿತ್ತ ವಲಯ, ಉಕ್ಕು, ಅದಿರು ಕೈಗಾರಿಕೆಗಳಿರಬಹುದು. ಅವೆಲ್ಲವಕ್ಕೂ ಈ ಇಲಾಖೆಯಿಂದ ಅನುಮತಿ ಅತ್ಯಗತ್ಯ. 1992ರಷ್ಟು ಹಿಂದೆಯೇ ಭಾರತದಲ್ಲಿ ಅಧಿಕಾರಶಾಹಿ ತಡೆಗೋಡೆ (ರೆಡ್‌ಟೇಪ್) ಕಳಚಿ ಬಿದ್ದಿದ್ದರೂ ಇಂತಹ ಇಲಾಖಾ ಅನುಮತಿಗಳ ರೂಪದಲ್ಲಿ ಅದು ಇನ್ನೂ ಉಳಿದುಕೊಂಡಿದೆ. ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿ ಖಂಡಿತ ಒಂದಕ್ಕೊಂದು ಪೂರಕ ಅಲ್ಲ. ಇವೆರೆಡೂ ಇದ್ದೆಡೆ ಘರ್ಷಣೆ ಗ್ಯಾರಂಟಿ. ರಸ್ತೆ ಮಾಡಲೆಂದು ಮರ ಕಡಿದರೆ ಅದು ಪರಿಸರ ನಾಶ, ಹಾಗೆಂದು ರಸ್ತೆ ಮಾಡದಿದ್ದರೆ ಅಭಿವೃದ್ಧಿ ನಾಸ್ತಿ. ಈ ಎರಡರ ಪರ ವಕಾಲತ್ತು ವಹಿಸುವ ದಂಡಿಗೇನೂ ಕಡಿಮೆ ಇಲ್ಲ. ಇಲ್ಲಿ ಮಂತ್ರಿ ಸ್ಥಾನದಲ್ಲಿ ಕುಳಿತ ವ್ಯಕ್ತಿ ಈ ಎರಡರ ನಡುವೆ ಸಮನ್ವಯದ ಮನೋಭಾವ ರೂಢಿಸಿಕೊಳ್ಳಬೇಕು. ಅದು ಬಿಟ್ಟು ಅವರೇ activist ನಂತೆ ವರ್ತಿಸಿದರೆ ಪರಿಣಾಮ ಭೀಕರ. ಸುಮಾರು ಎರಡು ವರ್ಷ ದೇಶದ ಪರಿಸರ ಮಂತ್ರಿಯ ಗುರುತರ ಜವಾಬ್ದಾರಿ ಹೊತ್ತಿದ್ದ ಜೈರಾಂ ರಮೇಶ್ ಮಾಡಿದ್ದು ಇದನ್ನೇ. ಕೃಷಿ ವಲಯದಲ್ಲಿ ಇಳುವರಿ ಹೆಚ್ಚಿಸುವ, ತನ್ಮೂಲಕ ಉಳುವ ಕೈಗಳಿಗೆ ನೆಮ್ಮದಿಯ ಬದುಕು ಕಲ್ಪಿಸುವ ಬಿಟಿ ತಂತ್ರಜ್ಞಾನದ ಬಗ್ಗೆ ದೇಶದೆಲ್ಲೆಡೆ ಪರ-ವಿರೋಧ ಚರ್ಚೆ ನಡೆದಾಗ ಅವುಗಳನ್ನು ಆಲಿಸಿ, ಸಾಧಕ-ಬಾಧಕಗಳನ್ನು ಪರಾಮರ್ಶಿಸಿ ನಿರ್ಧಾರ ಕೈಗೊಳ್ಳಬೇಕಾಗಿದ್ದ ಜೈರಾಂ, ಸ್ವತಃ ತಾವೇ ಈ ಚರ್ಚೆಗಳಲ್ಲಿ ಭಾಗವಹಿಸಿ ಬಿಟಿ ಭಾರತಕ್ಕೆ ಬಾಧಕ ಎಂದು ಫರ್ಮಾನು ಹೊರಡಿಸಿದ್ದುಂಟು. ಈ ಮಹಾನುಭಾವರ ಆಡಳಿತದ ಅವಧಿಯಲ್ಲಿ 64 ಯೋಜನೆಗಳು ಸ್ಥಗಿತಗೊಂಡರೆ 400ಕ್ಕೂ ಹೆಚ್ಚು ಪ್ರಸ್ತಾಪಗಳು ಕಸದ ಬುಟ್ಟಿ ಸೇರಿದವು. ಇವುಗಳ ಒಟ್ಟು ಬಂಡವಾಳ ಪ್ರಮಾಣ 7.8 ಲಕ್ಷ ಕೋಟಿ ರೂ.ಗಳನ್ನು ದಾಟಿತ್ತು. ಅದು ಒಡಿಶಾದಲ್ಲಿ ಪೋಸ್ಕೊ ಕಂಪನಿ ಸ್ಥಾಪಿಸಲು ಉದ್ದೇಶಿಸಿದ್ದ ಉಕ್ಕು ಘಟಕ, ಬಂದರು ನಿರ್ಮಾಣ, ಬಾಕ್ಸೈಟ್ ಗಣಿಗಾರಿಕೆ, ನವಿ ಮುಂಬಯಿ ವಿತ್ತ ವಲಯ, ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ನಿರ್ಮಾಣ ಎಲ್ಲವೂ ಸೇರಿತ್ತು. ನಮ್ಮ ಗುಂಡ್ಯಾ ಜಲವಿದ್ಯುತ್ ಯೋಜನೆಗೂ ಧೂಳು ಹಿಡಿದದ್ದು ಇವರ ಅವಧಿಯಲ್ಲಿಯೇ. ಈ ಜೈರಾಮರನ್ನು ತಿದ್ದಲು ಸಾಧ್ಯವಿಲ್ಲ ಎಂಬುದು ಮನವರಿಕೆಯಾದಾಗ ಅವರ ಸ್ಥಾನಕ್ಕೆ ಹಣೆಯಲ್ಲಿ ಸದಾ ಕಾಸಗಲ ಕುಂಕುಮದ ಜಯಂತಿ ನಟರಾಜನ್‌ರನ್ನು ತಂದು ಕೂರಿಸಲಾಯಿತು.
ಮತ್ತೆ ನಿರೀಕ್ಷೆಗಳು ಗರಿಗೆದರಿದವು. ಪ್ರಧಾನಿ ಮನಮೋಹನ್ ಸಿಂಗ್ ಒತ್ತಾಸೆಯ ಮೇಲೆಯೇ ಜಯಂತಿ ನಟರಾಜನ್ ಆ ಸ್ಥಾನಕ್ಕೆ ಬಂದಿರುವುದರಿಂದ ಫೈಲುಗಳು ಮತ್ತೆ ಜೀವ ಪಡೆದು ಓಡಾಡುತ್ತವೆ ಎಂದು ಉದ್ಯಮ ವಲಯ ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತ ಕುಳಿತವು. ಆದರೆ ಅವರು ಹಾಗೆ ಕುಳಿತದ್ದೇ ಬಂತು. ಇವರ ಅವಧಿಯಲ್ಲಿ ಅನುಮತಿಗೆ ಬಾಕಿ ಉಳಿದ ಯೋಜನೆಗಳ ಸಂಖ್ಯೆ 92ಕ್ಕೇರಿತು. ಅವರದೇ ಪಕ್ಷದ ಆಡಳಿತವಿರುವ ರಾಜ್ಯಗಳ ಯೋಜನೆಗಳಿಗೂ ಹಸಿರು ನಿಶಾನೆ ತೋರಲಿಲ್ಲ. ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಸ್ವತಃ ಈ ಬಗ್ಗೆ ಪ್ರಧಾನಿ ಬಳಿ ದೂರಿದ್ದಾಯಿತು. ಇನ್ನು ವಿರೋಧ ಪಕ್ಷಗಳ ಆಡಳಿತದಲ್ಲಿರುವ ರಾಜ್ಯಗಳ ಪ್ರಸ್ತಾವಗಳಂತೂ ಸಂಪೂರ್ಣವಾಗಿ ನನೆಗುದಿಗೆ ಬಿದ್ದವು. ಇದಕ್ಕೆ ಪೂರಕವಾಗಿ ಸುಪ್ರೀಂಕೋರ್ಟು ದೇಶಾದ್ಯಂತ ಅದಿರು ಗಣಿಗಾರಿಕೆಗೆ ಅಂಕುಶ ಹಾಕಿದ್ದು, ಹೊಸ ಗಣಿಗಾರಿಕೆಗಳಿಗೆ ಅನುಮತಿ ನೀಡುವ ವಿಚಾರದಲ್ಲಿ ಲಕ್ಷ್ಮಣ ರೇಖೆ ಹಾಕಿದ್ದು ಜಯಂತಿ ನಟರಾಜನ್ ಅವರಿಗೆ ವರದಾನವಾಗಿ ಪರಿಣಮಿಸಿತು. ಪರಿಸ್ಥಿತಿ ಎಷ್ಟರ ಮಟ್ಟಿಗೆ ಹೋಯಿತೆಂದರೆ ಕಿಲೋ ಮೀಟರ್‌ಗಟ್ಟಲೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಮುಂದಾಗಿದ್ದ ಎರಡು ಬೃಹತ್ ಬಂಡವಾಳದಾರರು ಭೂ ಹಂಚಿಕೆಗಾಗಿ ವರ್ಷಾನುಗಟ್ಟಲೆ ಕಾದು ಕೊನೆಗೆ ಪ್ರಯೋಜನ ಇಲ್ಲವೆಂದು ಯೋಜನೆಯಿಂದ ಹೊರ ನಡೆದರು. ಇಷ್ಟೆಲ್ಲ ಆದರೂ ಪರಿಸರ ಸಂರಕ್ಷಣೆ, ಪಾರದರ್ಶಕತೆಯ ಸೋಗಿನಲ್ಲಿ ಜಯಂತಿ ನಟರಾಜನ್ ತಮ್ಮ ನಿಲುವಿನಿಂದ ಜಪ್ಪಯ್ಯ ಕದಲಲಿಲ್ಲ. ಇವರ ಭಂಡತನ ಎಷ್ಟರ ಮಟ್ಟಿಗಿತ್ತೆಂದರೆ ಒಂದು ಸಾವಿರ ಕೋಟಿ ರೂ.ಗಳಿಗಿಂತ ಹೆಚ್ಚಿನ ಮೊತ್ತದ ಬಂಡವಾಳ ಹೂಡಿಕೆ ಪ್ರಸ್ತಾಪಗಳಿಗೆ ತ್ವರಿತಗತಿಯಲ್ಲಿ ಅನುಮತಿ ನೀಡಲೆಂದು ಪ್ರತ್ಯೇಕ ಕ್ಯಾಬಿನೆಟ್ ಸಮಿತಿ ರಚಿಸಲು ಸ್ವತಃ ಪ್ರಧಾನಿ ಮುಂದಾದಾಗ, ಇದು ಸಚಿವರ ಅಧಿಕಾರಕ್ಕೆ ಕತ್ತರಿ ಹಾಕುವ, ಅವರ ಕೆಲಸದಲ್ಲಿ ಮೂಗು ತೂರಿಸುವ ಕೆಲಸ. ಇದರಿಂದ ಕ್ಯಾಬಿನೆಟ್‌ನ ಸಾಂಘಿಕ ಉತ್ತರದಾಯಿತ್ವಕ್ಕೆ ಧಕ್ಕೆ ಬರುತ್ತದೆ ಎಂದು ಪತ್ರ ಬರೆದು ತಗಾದೆ ತೆಗೆದರು. 15 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ಬಂಡವಾಳ ಹೂಡಿಕೆ ಪ್ರಸ್ತಾಪಗಳು, ಅದರಿಂದ ಆಗಬಹುದಾದ ಅಭಿವೃದ್ಧಿಯ ಬಗ್ಗೆ ಗಮನ ಹರಿಸುವ ಬದಲು ಜಯಂತಿ ಅವರು ತಮ್ಮ ಅಧಿಕಾರಕ್ಕೆ ಧಕ್ಕೆ ಆಗುತ್ತದೆ ಎಂದು ಬೊಬ್ಬಿಟ್ಟಿದ್ದು ವಿಪರ್ಯಾಸ. ಜೈರಾಮ ಮತ್ತು ಜಯಂತಿ ಇಬ್ಬರೂ ದಡ್ಡರೇನಲ್ಲ. ಪರಿಸರ ರಕ್ಷಣೆ ಮತ್ತು ಅಭಿವೃದ್ಧಿಯ ನಡುವಿನ ತಾಕಲಾಟ ಅರಿಯದವರೇನಲ್ಲ. ಲೋಕಜ್ಞಾನವುಳ್ಳ ಇವರು ಪೆಟ್ರೋಲ್ ಬದಲು ಗ್ಯಾಸೊಲಿನ್ ಬಳಕೆ ಜಾರಿಗೆ ತರುವ ಸಣ್ಣ ವಿಚಾರದಲ್ಲಿ ಅಮೆರಿಕ ಅನುಸರಿಸಿದ ನೀತಿಯನ್ನು ಪರಾಮರ್ಶಿಸಿದ್ದರೂ ಸಾಕಿತ್ತು. ಈ ತಾಕಲಾಟದ ನಡುವೆ ಸಮತೋಲನ ಸಾಧಿಸಬಹುದಿತ್ತು. ಪಾಶ್ಚಾತ್ಯ ದೇಶಗಳು ಕಳೆದೆರಡು ದಶಕಗಳಲ್ಲಿ ಪರಿಸರ ಮಾಲಿನ್ಯ ಮತ್ತು ಪರಿಸರ ನಾಶ ತಡೆಯಲು ನಾನಾ ಕ್ರಮಗಳನ್ನು ಕೈಗೊಂಡಿವೆ. ಮತ್ತು ಅದರಲ್ಲಿ ಯಶಸ್ಸೂ ಕಂಡಿವೆ. ಆದರೆ, ಈ ಅವಧಿಯಲ್ಲಿ ಒಂದೇ ಒಂದು ಅಭಿವೃದ್ಧಿ ಪೂರಕ ಯೋಜನೆಯನ್ನೂ ಸ್ಥಗಿತಗೊಳಿಸಿಲ್ಲ. ಇಂದು ದೇಶದಲ್ಲಿ ಅರಣ್ಯ ಹಕ್ಕು, ಪರಿಸರ ನಾಶ ತಡೆ, ಪರಿಸರ ಸಂರಕ್ಷಣೆ, ವನ್ಯಜೀವಿ ಸಂರಕ್ಷಣೆ, ಹೀಗೆ ನಾನಾ ಕಾಯಿದೆಗಳು ಜಾರಿಯಲ್ಲಿವೆ. ಇದು ಒಂಥರಾ ಜೇಡರ ಬಲೆಯಿದ್ದಂತೆ, ಇದರ ತಲೆಯ ಮೇಲೆ ಈ ಪರಿಸರ ಇಲಾಖೆ.  ಜಯಂತಿ ಆಗಲಿ, ಜೈರಾಮ ಆಗಲಿ ಈ ಗೋಜಲುಗಳನ್ನು ಬಿಡಿಸುವ ಒಂದೇ ಒಂದು ಉಪಕ್ರಮಕ್ಕೂ ಮುಂದಾಗಲಿಲ್ಲ. ಎಲ್ಲವನ್ನೂ ತಮ್ಮ ಸುಪರ್ದಿನಲ್ಲಿಯೇ ಇಟ್ಟುಕೊಳ್ಳುವ ಬದಲು ವಿದ್ಯುತ್, ಟೆಲಿಕಾಂ ರಂಗಗಳಲ್ಲಿರುವಂತೆ ಪರಿಸರ ನಿಯಂತ್ರಣ ಪ್ರಾಧಿಕಾರ ರಚಿಸಬಹುದಿತ್ತು. ಆ ಮೂಲಕ ಅಭಿವೃದ್ಧಿ ಯೋಜನೆಗಳಿಗೆ ಪರಿಸರದ ಸಾಧಕ-ಬಾಧಕ ಅಧ್ಯಯನ ಮಾಡಿ ಅನುಮತಿ ನೀಡಲು ಮಾರ್ಗಸೂಚಿಗಳನ್ನು ರೂಪಿಸುವ ಅಧಿಕಾರವನ್ನು ಪ್ರಾಧಿಕಾರಕ್ಕೆ ನೀಡಬಹುದಿತ್ತು. ಇಂತಹ ಸರಳ ಸೂತ್ರವನ್ನು ಸುಪ್ರೀಂಕೋರ್ಟ್‌ನಿಂದ (ಇತ್ತೀಚಿನ ಆದೇಶ) ಹೇಳಿಸಿಕೊಳ್ಳುವ ಬೌದ್ಧಿಕ ದಾರಿದ್ರ್ಯ ಇವರನ್ನು ಆವರಿಸಿತ್ತು. ಒಡಿಶಾದ ನಿಯಮಗಿರಿಯಲ್ಲಿ ಗಿರಿಜನರು ಬಾಕ್ಸೆ ೈಟ್ ಗಣಿಗಾರಿಕೆ ವಿರುದ್ಧ ಹೋರಾಡಿದಾಗ 'ನಿಮ್ಮ ಕೂಗಿಗೆ ನಾನು ದಿಲ್ಲಿಯಲ್ಲಿ ಧ್ವನಿಯಾಗುವೆ' ಎಂದ ರಾಹುಲ್ ಗಾಂಧಿ ಇತ್ತೀಚೆಗೆ ಕೈಗಾರಿಕಾ ಒಕ್ಕೂಟದ ಸಭೆಯಲ್ಲಿ ಪರಿಸರ ನಾಶದ ನೆಪದಿಂದ ಅಭಿವೃದ್ಧಿ ಕುಂಠಿತವಾಗಲು ಬಿಡಬಾರದು ಎನ್ನುತ್ತಾರೆ. ಇದೊಂದು ರೀತಿ ಪ್ರೇಕ್ಷಕರನ್ನು ಆಧರಿಸಿ ಹಾಡು ಹೇಳುವ ಗಾಯಕನಂತೆ ಇಲ್ಲಿ ಏನು ಮಾಡಬೇಕು, ಏನು ಬೇಡ ಎಂಬ ಸ್ಪಷ್ಟತೆಯೇ ಇಲ್ಲ. ಇವರ ಬಾಲಬಡುಕರಂತೆ ವರ್ತಿಸುವ ಜೈರಾಮ, ಜಯಂತಿ ಅಂತಹವರಿಂದ ಅಭಿವೃದ್ಧಿ ಮರೀಚಿಕೆಯೇ ಸರಿ. ಈಗ ಜಯಂತಿ ಅವರ ಸ್ಥಾನದಲ್ಲಿ ಕುಳಿತಿರುವ ವೀರಪ್ಪ ಮೊಯಿಲಿ ಒಡಿಶಾದ ಪೋಸ್ಕೊ ಉಕ್ಕು ಸ್ಥಾವರ ಸೇರಿದಂತೆ ಸುಮಾರು 1.5 ಲಕ್ಷ ಕೋಟಿ ರೂ.ಗಳ ಬಂಡವಾಳ ಹೂಡಿಕೆಯ ಪ್ರಸ್ತಾಪಗಳಿಗೆ ಅನುಮತಿ ನೀಡಿದ್ದಾರೆ. ಇವು ಕಾರ್ಯರೂಪಕ್ಕೆ ಬರಲು ಇನ್ನು ನಾಲ್ಕೈದು ವರ್ಷಗಳಾದರೂ ಬೇಕು. ಇದೇ ಕೆಲಸವನ್ನು ಹಿಂದಿನ ಪರಿಸರ ಸಚಿವರು ಮಾಡಿದ್ದರೆ ಈ ವೇಳೆಗೆ ಅವು ಕಾರ್ಯಾಚರಿಸುತ್ತಿದ್ದವು. ಗೋವಾದಲ್ಲಿ ಆಯೋಜಿಸಿದ್ದ ಬಿಜೆಪಿ ರ್ಯಾಲಿಯಲ್ಲಿ ಕೇಂದ್ರ ಪರಿಸರ ಇಲಾಖೆಯಲ್ಲಿ ಅದರಲ್ಲೂ ಮುಖ್ಯವಾಗಿ ಜಯಂತಿ ನಟರಾಜನ್ ಅವಧಿಯಲ್ಲಿ ತಾಂಡವವಾಡಿದ ನಿರ್ವೀರ್ಯತೆಯ ಬಗ್ಗೆ ನರೇಂದ್ರ ಮೋದಿ ಕೆಂಡ ಕಾರಿದ್ದಾರೆ. ವಾಸ್ತವಾಂಶ ಪರಾಮರ್ಶಿಸಿದರೆ ಅವರ ಮಾತಿನಲ್ಲಿ ಯಾವುದೇ ಅತಿಶಯೋಕ್ತಿ ಕಾಣುತ್ತಿಲ್ಲ. ಏಕೆಂದರೆ ಜೈರಾಮ, ಜಯಂತಿ ಅವಧಿಯಲ್ಲಿ ಭಾರತದಲ್ಲಿ ಅಭಿವೃದ್ಧಿಗೆ ದಕ್ಕಿದ್ದು ಪಂಗನಾಮವೇ ಸರಿ!



- ಕೆ.ಎಸ್.ಜಗನ್ನಾಥ್
jagannath.kudinoor@gmail.com


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com