ಮಠದೋರು ಕಾಟ ಸ್ಯಾನೆ ಆಗೋಯ್ತು ಅಂದ್ರು ಕೈ ಪಕ್ಸುದೋರು

ಎಐಸಿಸಿ ಅಧಿವೇಶನ ಅಂತ ಕೈ ಪಕ್ಸದ ಲೀಡ್ರುಸು ಡೆಲ್ಲಿಗೋದ್ರು. ಅಲ್ಲಿ ಕೈ ಪಕ್ಸದ...

ಎಐಸಿಸಿ ಅಧಿವೇಶನ ಅಂತ ಕೈ ಪಕ್ಸದ ಲೀಡ್ರುಸು ಡೆಲ್ಲಿಗೋದ್ರು. ಅಲ್ಲಿ ಕೈ ಪಕ್ಸದ ಆಪೀಸು ಗೇಟ್ಗೆ ವೋಯ್ತಾಯಿದ್ದಂಗೆ ದಿಗ್ವಿಜಯ್ ಸಿಂಗು 'ಆವೋ ಅವೋ ಕೈಸಾ ಹೈ ?' ಅಂತ ಕೇಳುದ್ರು.
'ಎಲ್ಲಾರೂ ಸಂದಾಕವ್ರೆ ನನ್ನೋಬ್ಬುನ್ನ ಬುಟ್ಟು' ಅಂದ್ರು ಪ್ರೆಸ್ಡೆಂಟು ಪರಮೇಸ್ವರ್ರು. 'ಕ್ಯಾ ವೋಗಯಾ ಪರಮೇಸ್ವರ್ ಜೀ' ಅಂದ್ರು ಸಿಂಗು.
'ವೋ ಅದಂಗೆ ಬುಡಿ, ಎಲ್ಲಾರೂವೆ ಮಂತ್ರಿಗಳಾಗೋದ್ರು. ನನ್ನುನ್ನ ಮಾತ್ರ ಹಂಗೇ ಮಡ್ಗಿದ್ದೀರಿ. ಅರುಕ್ಕೆ ಹತ್ತಂಗಿಲ್ಲ, ಮೂರುಕ್ಕೆ ಇಳ್ಯಂಗಿಲ್ಲ' ಅಂದ್ರು ಪರಮೇಸ್ವರ್ರು.
'ನಿಮ್ ಮಂತ್ರಿ ವೊಬ್ರು ಗೋಡಾ ಮಡ್ಗವ್ರಂತೆ. ಪೇಪರ್ನಾಗೆ, ಟೀವಿನಾಗೆ ಅದೇ ನ್ಯೂಜಂತೆ. ಹೆಂಗದೆ ಗೋಡಾ? ಕೈಸಾ ಹೈ?' ಅಂದ್ರು ಸಿಂಗು.
'ಗೋಡಾನ? ನಮ್ ಮಂತ್ರಿಗ್ಳು ಪೈಕಿ ಒಂದಿಬ್ರು ಆವಾಗಾವಾಗ ಗೋಡಾ ರೇಸ್ ನೋಡಕ್ಕೆ ವೋಯ್ತಾಯಿರ್ತರೆ ಅಷ್ಟೇಯಾ. ಗೋಡಾ ಯಾರೂ ಸಾಕಿಲ್ವೇ ?' ಅಂದ್ರು ಪರಮೇಸ್ವರ್ರು. 'ಇದೇನು ಹಿಂಗಂತೀರಿ. ಮಂತ್ರಿ ಆಂಜನೇಯ ಅವ್ರು ಗೋಡಾ ಕೇಸ್ನಾಗೆ ಫಿಟ್ ಆಗವ್ರಂತೆ. ವಿಧಾನಸೌಧುಕ್ಕೆ ಯಾಕೆ ಅವ್ರು ಗೋಡಾ ತರಕ್ಕೆ ವೋದ್ರು' ಅಂತ ಸಿಂಗು ಕೇಳುದ್ರು.
'ರೀ ಸ್ವಾಮಿ ಅದು ಗೋಡಾ ಅಲ್ರೀ, ಗೋಡೆ. ವೊಳ್ಳೇ ಕಥೆ ಆಯ್ತು ನಿಮ್ದು. ನಮ್ ಮಂತ್ರಿಗಳ್ಗೆ ಜನ್ರುನ್ನ ನೋಡಕ್ಕೆ ಟೇಮಿಲ್ಲ. ಇನ್ನ ಕುದುರೆ, ಕುರಿ, ಮ್ಯಾಕೆ ಎಲ್ಲಿ ನೋಡ್ಕಂತು ಕೂತಾರು. ಹಿಂದಿನಾಗೆ ಗೋಡಾ ಅಂದ್ರೆ ಕುದುರೆ, ಕನ್ನಡದಾಗ ಗೋಡೆ ಮನ್ಯಾಗಿರಲ್ಲ ಅದು. ಅದೇ ಸ್ವಾಮಿ ಹಿಂದಿನಾಗೆ ದಿವಾರ್ ಅಂತಾರಲ್ಲ. ನಂಗೇ ಪುಲ್ ಕನ್‌ಪ್ಯೂಜು ಮಾಡ್ಬುಟ್ರಿ ಬುಡಿ' ಅಂತೇಳಿ ಪರಮೇಸ್ವರ್ರು ವೊಳಿಕ್ಕೆ ವೋದ್ರು.
'ಇಸ್ಯ ಕೇಳ್ಬುಟ್ಟು ಆಂಜನೇಯ ಅವ್ರು ಆಪೀಸ್ ವೊಳಿಕ್ಕೆ ವೋಗ್ಲೇ ಇಲ್ಲ. ಗೋಡೆ ನೋಡ್ಕಂಡು ಹಂಗೆ ನಿಂತ್ಬುಟ್ರು. ನಿಮ್ದೊಳ್ಳೆ ಕಥೆ ಆಯ್ತು. ಎಲ್ಲೇ ವೋದ್ರು ಗೋಡೆ ನೋಡ್ಕಂಡೇ ಇದ್ದೋಯ್ತೀರಿ. ನಡೀರಿ ವೊಳಿಕ್ಕೆ' ಅಂತೇಳಿ ಪರಮೇಸ್ವರ್ರು ಬಂದು ಎಳ್ಕಂಡು ವೋದ್ರು.
'ವೊಳ್ಗೆ ಮೀಟಿಂಗು ಸುರು ಆಯ್ತಾಯಿದ್ದಂಗೆ ರಾವುಲ್ ಗಾಂಧಿ, ಕರ್ನಾಟಕದಾಗೆ ಕೈ ಪಕ್ಸ ಹೆಂಗದೆ? ಮಂತ್ರಿಗಳು ಹೆಂಗೆ ಕೆಲ್ಸ ಮಾಡ್ತಾವ್ರೆ ?' ಅಂತ ಕೇಳುದ್ರು.
'ಎಲ್ಲಾರೂ ಸಂದಾಕವ್ರೆ. ತಮ್ ತಮ್ ಕೆಲ್ಸ ತಾವು ಮಾಡ್ಕಂಡು ವೋಯ್ತಾವ್ರೆ. ಜನ್ರು ಕೆಲ್ಸ ವೊಂದುನ್ನ ಬುಟ್ಟು' ಅಂತೇಳಿ ಪರಮೇಸ್ವರಪ್ಪ ಡೀಟೇಲಾಗಿ ಯೋಳುದ್ರು.
'ಏನಯ್ಯ ಈವಯ್ಯ ಹಿಂಗೆ ಕಿರಿಕ್ಕು ಮಾಡ್ತಾವ್ರೆ. ಹಿಂಗೇ ಬುಟ್ರೆ ಎಡ್ವಟ್ಟು ಆಗೋಯ್ತದೆ. ನೀನಾದ್ರೂವೆ ವಸಿ ಯೋಳು' ಅಂತ ಪವರ್ ಮಂತ್ರಿ ಸಿವಕುಮಾರ್ ಪಕ್ದಾಗೆ ಇದ್ದ ರೋಸನ್ ಬೇಗು ಅವ್ರುನ್ನ ತಿವುದ್ರು. 'ಏನ್ ಕೆಲ್ಸ ಮಾಡಾದು ಯೋಳಿದ ರಾವುಲ್ ಜೀ. ಮಾಡಕ್ಕೆ ಮಠದೋರು ಬುಟ್ರೆ ತಾನೆ' ಅಂದ್ರು.
'ಬೇಗ್ ಜೀ, ಏನ್ ಹೇಳ್ತಾಯಿದೀರಿ ನೀವು. ವಸಿ ತುಂಡು ಮಾಡಿ ಯೋಳಿ' ಅಂದ್ರು ರಾವುಲ್ ಜೀ. 'ಮಠದೋರು ಕಾಟ ಸ್ಯಾನೆ ಆಬುಟ್ಟದೆ. ಬೆಳ್ಗೆ ವೊತ್ತು ಸಾಲ್ದು ಅಂತ ರಾತ್ರಿ ಕನಸ್ನಾಗೂ ಬಂದು ಕೇಸು ಕೇಸು ಅಂತ ಮೈಂಡು ಪೀಸು ಪೀಸು ಮಾಡ್ತಾವ್ರೆ. ವಿಕ್ರಂ ಔರ್ ಬೇತಾಳ್ ಸೀರಿಯಲ್ಲು ನೋಡಿಲ್ವಾ ನೀವು. ಅದ್ರಾಗೆ ಬೇತಾಳ ರಾಜನ ಹೆಗಲು ಮ್ಯಾಲೇ ಇರ್ತದೆ. ಹಂಗೆ ಈ ಮಠದೋರು ನಮ್ ಹೆಗ್ಲು ಹತ್ಕಂಬುಟ್ಟವ್ರೆ. ಮಾತಾಡುದ್ರೆ ಪೈಲು ಹಿಡ್ಕಂಡು ಟೀವಿ ಮುಂದ್ಲಾಗಡೆ ಕೂತ್ಕತರೆ. ಹಿಂಗಿರೋವಾಗ ಹೆಂಗೆ ಕೆಲ್ಸ ಮಾಡಾದು ಯೋಳಿ ಸಾಬ್‌' ಅಂದ್ರು ಬೇಗು.
'ಕೈ ಪಕ್ಸದ ಗೌರ್ಮೆಂಟು ಬಂದ್ಮೇಲೆ ಮಠದೋರು ಕಂಟ್ರೋಲ್ ಆಬುಟ್ಟವ್ರಲ್ಲಾ? ಇನ್ನೇನು ಪ್ರಾಬ್ಲಮ್ಮು ಸಿದ್ರಾಮಣ್ಣೋರೆ' ಅಂತ ರಾವುಲ್ ಕೇಳುದ್ರು. 'ಬೇಗು, ವಸಿ ಕ್ಲಿಯರ್ರಾಗಿ ಯೋಳಾದು ತಾನೆ. ತುಂಡು ಮಾಡಿ ಯೋಳಿದ್ರೆ ಹಿಂಗೇ ಆಗೋದು. ರಾವುಲ್ ಜೀ, ಅವ್ರು ಯೋಳ್ತಾಯಿರೋ ಮಠ ಬ್ಯಾರೆ. ಅದು ಹಿರೇಮಠ ಅಂತ. ನಾನು ಆವತ್ತೇ ಯೋಳ್ದೆ. ಕೇಸು ಇರೋರ್ನ ತಕ್ಕಳಾದು ಬ್ಯಾಡ ಅಂತ. ಈವಾಗ ನೋಡಿ ಹಿರೇಮಠ ಹೆಂಗೆ ಕಾಟ ಕೋಡ್ತಾವ್ರೆ' ಅಂತ ಅಂದ್ರು ಸಿದ್ರಾಮಣ್ಣೋರು.  
'ಯಡಿಯೋರಪ್ನೋರು ಸಿಎಂ ಆಗಿದ್ದಾಗ ಮಠದೋರು ಸ್ಯಾನೆ ಕ್ಲೋಜಾಗಿದ್ರು. ಯೋಳೋ ಕೆಲ್ಸ ಮಾಡಿ ಕೊಟ್ರೆ ಸೈಲೆಂಟಾಗಿ ಇದ್ದೋಗೋರು. ಈ ಮಠದೋರು ನೋಡಿ ಸಿವಾ ಹಾಕ್ಕಂಡು ರುಬ್ತಾವ್ರೆ. ಇದುಕ್ಕೆ ಏನರ ಮಾಡ್ಬೇಕು ಅಲ್ವಾ?' ಅಂದ್ರು ಮಂತ್ರಿಗ್ಳು ವೊಂದಾಗಿ. 'ಇರಿ ಮಮ್ಮಿನ ಕೇಳ್ಕಂಡು ಬತ್ತೀನಿ' ಅಂತೇಳಿ ರಾವುಲ್ ಎದ್ದೋದ್ರು.



- ಕೆ.ವಿ.ಪ್ರಭಾಕರ್
prabhukolar@yahoo.com


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com