ಆಡಳಿತ ನಡೆಸುವುದೆಂದರೆ ಚಂದಮಾಮ, ಅಮರ ಚಿತ್ರಕತೆಗಳಂತೆ ಅಲ್ಲ!

ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಆತನ ಪ್ರಾಮಾಣಿಕತೆ, ಜನಪರ ಕಾಳಜಿ...
ಆಡಳಿತ ನಡೆಸುವುದೆಂದರೆ ಚಂದಮಾಮ, ಅಮರ ಚಿತ್ರಕತೆಗಳಂತೆ ಅಲ್ಲ!
Updated on

ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಆತನ ಪ್ರಾಮಾಣಿಕತೆ, ಜನಪರ ಕಾಳಜಿಯನ್ನು ಜನ ಕೊಂಡಾಡುತ್ತಿದ್ದರು. ಆತನನ್ನು ಸತ್ಯ ದುರಂಧರನೆಂದೂ, ಜನತಾ ಜನಾರ್ದನನೆಂದೂ ಜನ ಹೊಗಳುತ್ತಿದ್ದರು. ಆ ರಾಜನೊ ಜನರಿಗಾಗಿಯೇ ನಾನು ಎಂಬಂತಿದ್ದ. ಜನರ ನಡುವೆ ಬೆರೆಯಲು, ಅವರ ಕಷ್ಟ, ಸುಖ ಆಲಿಸಲು ಎಂದೂ ಮುಂದು. ಅದೇ ರೀತಿ ಜನರ ಜೊತೆಯೇ ಬದುಕುವಂತೆ ತನ್ನ ಮಂತ್ರಿಗಳಿಗೂ ಸೂಚಿಸಿದ್ದ. ಆತನ ಆಣತಿಯಂತೆ ಮಹಾಮಂತ್ರಿ ನಿಯಮಿತವಾಗಿ ಛದ್ಮವೇಷ ಧರಿಸಿ ಬೀದಿಗಳಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದ. ಜನರ ಕಷ್ಟಗಳನ್ನು ಕಣ್ಣಾರೆ ಕಂಡು ಅವರಿಗೆ ನೆರವು ನೀಡುತ್ತಿದ್ದ. ಜನ ತಪ್ಪಿ ನಡೆಯುತ್ತಿದ್ದರೆ ಅವರನ್ನು ಅಲ್ಲಿಯೇ ಶಿಕ್ಷಿಸುವಂತೆ ರಾಜಭಟರಿಗೆ ಸೂಚಿಸುತ್ತಿದ್ದ. ಒಂದು ವೇಳೆ ರಾಜಾಧಿಕಾರಿಗಳು ಜನರನ್ನು ಶೋಷಿಸುವುದನ್ನು ಕಂಡರೆ ಸ್ಥಳದಲ್ಲಿಯೇ ಅವರ ವಿರುದ್ಧ ಉಗ್ರಕ್ರಮ ಕೈಗೊಳ್ಳುತ್ತಿದ್ದ. ಮಾರನೆಯ ದಿನ ದರ್ಬಾರಿನಲ್ಲಿ ತಾನು ಕಂಡಿದ್ದು, ಕ್ರಮ ಕೈಗೊಂಡಿದ್ದು, ಜನರ ಕಣ್ಣೀರು ಒರೆಸಿದ್ದು, ಪೀಡಕ ಅಧಿಕಾರಿಗಳ ವಿರುದ್ಧ ಚಾಟಿ ಬೀಸಿದ್ದು ಎಲ್ಲವನ್ನೂ ರಾಜನಿಗೆ ವರದಿ ಒಪ್ಪಿಸುತ್ತಿದ್ದ. ಇದನ್ನು ಕೇಳಿ ರಾಜ ಸುಪ್ರೀತನಾಗುತ್ತಿದ್ದ. ಮಂತ್ರಿಯನ್ನು ಹೊಗಳಿ ಅಟ್ಟಕ್ಕೇರಿಸುತ್ತಿದ್ದ. ಕೈಗೆ ಸಿಕ್ಕ ಕಾಣಿಕೆ ನೀಡಿ ಕೃತಾರ್ಥನಾಗುತ್ತಿದ್ದ. ಇದನ್ನು ಕಂಡ ಜನ ಮಂತ್ರಮುಗ್ಧರಾಗುತ್ತಿದ್ದರು. ಮಹಾಮಂತ್ರಿಗೆ ಜೈಕಾರ ಹಾಕುತ್ತಿದ್ದರು. ಹಾಗೆಯೇ ಅಂತಹ ದಕ್ಷ ಮಂತ್ರಿಯನ್ನು ನೀಡಿದ್ದಕ್ಕಾಗಿ ರಾಜನಿಗೆ ಉಘೇ ಎನ್ನುತ್ತಿದ್ದರು. ಚಂದಮಾಮ, ಬಾಲಮಿತ್ರದಲ್ಲೋ ಇಲ್ಲ ಅಮರ ಚಿತ್ರಕಥಾದಲ್ಲೋ ಇಂತಹ ಆದರ್ಶ ರಾಜನ ಕಥೆಗಳನ್ನು ಎಲ್ಲರೂ ಓದಿದ್ದೇವೆ, ಇಲ್ಲವೇ ಕೇಳಿದ್ದೇವೆ. ಇದೆಲ್ಲ ಯಾವುದೂ ಒಂದು ಕೈಗೆಟುಕದ, ದಿನನಿತ್ಯದಲ್ಲಿ ಊಹೆಗೆ ಮಾತ್ರ ನಿಲುಕಬಲ್ಲ ಆದರ್ಶ ಸಾರುವ ಕಥೆಗಳಷ್ಟೆ. ಹೆಚ್ಚೆಂದರೆ ಒಂದು ಆಶಾಭಾವ, ರಮ್ಯತೆಯ ಅನುಭವವನ್ನು ಓದುಗರಿಗೆ ನೀಡುತ್ತದೆ. ಅದನ್ನು ನೋಡಿ, ಓದಿ ನಿಜ ಜೀವನದಲ್ಲಿಯೂ ಹಾಗೆಯೇ ನಡೆಯಬಹುದು, ಅಂತಹ ಜನ ಇರಬಹುದು ಎಂದು ಅವರಿಗಾಗಿ ಹುಡುಕುವುದು ಒಂದು ಭ್ರಮೆಯೇ ಸರಿ. ಆದರೆ, ದಿಲ್ಲಿಯ ಜನ ನಿಜಕ್ಕೂ ಭಾಗ್ಯವಂತರು. ಈಗ ಅವರಿಗೆ ಮೇಲೆ ಹೇಳಿದಂತಹ ಮಂತ್ರಿಯೂ, ರಾಜನಂತಹ ಮುಖ್ಯಮಂತ್ರಿಯೂ ದೊರಕಿರುವಂತಿದೆ! ಅಥವಾ..
ಮೊನ್ನೆ ಬುಧವಾರ ರಾತ್ರಿ ಕೊರೆಯುವ ಚಳಿಗೆ ದಿಲ್ಲಿ ಮಲಗಿದ್ದಾಗ ಅದರ ಕಾನೂನು ಮಂತ್ರಿ ಸೋಮನಾಥ ಭಾರತಿ ಎಚ್ಚರವಾಗಿದ್ದರು. ತಮ್ಮ ಕಾರ್ಯಕ್ಷೇತ್ರ ಮಾಳವೀಯ ನಗರದಲ್ಲಿ ಜನ ಎಷ್ಟು ನಿರಾಳವಾಗಿ ರಾತ್ರಿ ಕಳೆಯುತ್ತಿದ್ದಾರೆ ಎಂಬುದನ್ನು ಖುದ್ದಾಗಿ ವೀಕ್ಷಿಸಲು ನಿರ್ಧರಿಸಿದರು. ಸರಿ, ತಮ್ಮ ಬೆಂಬಲಿಗರ ದಂಡನ್ನು ಕಟ್ಟಿಕೊಂಡು ಬೀದಿಗಿಳಿದರು. ಆಗ ಅವರಿಗೆ ಮಾಳವೀಯ ನಗರದ ಬುರ್ಕಿ ಬಡಾವಣೆಯಲ್ಲಿ ಒಂದು ಮನೆ ಇರುವುದಾಗಿಯೂ, ಅಲ್ಲಿ ಪರದೇಶದ ಯುವತಿಯರು ವಾಸವಿದ್ದು ಅವರು ಡ್ರಗ್ಸ್ ಮತ್ತು ಇತರ ಅನೈತಿಕ ದಂಧೆಯಲ್ಲಿ ತೊಡಗಿರುವುದಾಗಿಯೂ ಯಾರೊ ಕಿವಿಯಲ್ಲಿ ಉಸುರಿದರು. ಮಂತ್ರಿಗಳ ಸವಾರಿ ನೇರ ಆ ಸ್ಥಳಕ್ಕೇ ಬಂದು ನಿಂತಿತು. ಅಲ್ಲಿನ ಪೊಲೀಸರಿಗೆ ಬರ ಹೇಳಿದರು. ಹಿಂದು-ಮುಂದು ನೋಡದೆ ತಾವು ಹೇಳಿದ ಮನೆಯ ಮೇಲೆ ದಂಡೆತ್ತಿ ಹೋಗಿ ಅಲ್ಲಿರುವವರನ್ನು ಬಂಧಿಸಿ ಸೆರೆ ಮನೆಗೆ ತಳ್ಳಿ ಎಂದು ಆಜ್ಞಾಪಿಸಿದರು. ಆದರೆ, ಪೊಲೀಸರು ಹಿಂದೆ ಮುಂದೆ ನೋಡಿದರು. ಯಾರನ್ನೇ ಆಗಲಿ ಬಂಧಿಸಲು ವಾರಂಟ್ ಬೇಕು ಎಂದರು. ಅದು ರಾಜನಿಯಮ (ಪೊಲೀಸ್ ಕಾಯ್ದೆ) ಎಂಬುದನ್ನು ಮಂತ್ರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು. ಮಂತ್ರಿ ಕೆಂಡಾಮಂಡಲರಾದರು. ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದರು. 'ನಾನೇ ಹೇಳಿದ ಮೇಲೆ ವಾರಂಟ್ ಯಾಕೆ ಬೇಕು? ನನ್ನ ಮಾತೇ ವೇದವಾಕ್ಯವಲ್ಲವೇ?' ಎಂದು ವಾದಿಸಿದರು. ಆದರೂ ನಿಯಮಗಳಂತೆಯೇ ಕ್ರಮ ಜರುಗಿಸಬೇಕು ಎಂದು ಪೊಲೀಸರು ಹೇಳಿದಾಗ ಅದನ್ನು ಅವರ ಉದ್ಧಟತನ ಎಂದು ಮಂತ್ರಿಗಳು ಭಾವಿಸಿದರು. ಅವರತ್ತ ಬೆರಳು ತೋರಿ ಬೆದರಿಸಿದರು. ಇಷ್ಟಾದರೂ ಪೊಲೀಸರು ಮನವೊಲಿಕೆ ನಿಲ್ಲಿಸಲಿಲ್ಲ. ನಿಯಮಗಳನ್ನು ತಿಳಿ ಹೇಳಿದರು. ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳುವುದಾಗಿ ಸಾರಿ ಸಾರಿ ಹೇಳಿದರು. ಆದರೆ, ಮಂತ್ರಿಗಳು ಜಪ್ಪಯ್ಯ ಎನ್ನಲಿಲ್ಲ. ನೀವು ಮಾಡಲಾಗದ ಕೆಲಸವನ್ನು ನಾವೇ ಮಾಡುತ್ತೇವೆ ಎಂದರು. ಅವರ ಬೆಂಬಲಿಗರು ಆ ಮನೆಯ ಮೇಲೆ ದಂಡೆತ್ತಿ ಹೋಗಿ ಅದರೊಳಗಿದ್ದ ಉಗಾಂಡಾ ದೇಶದ ಯುವತಿಯರನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಬಹಿರ್ದೆಶೆಗೆ ಹೋಗಲೂ ಅವರಿಗೆ ಅವಕಾಶ ನೀಡದೆ ರಸ್ತೆಯ ಮೂಲೆಯಲ್ಲಿಯೇ ತೀರಿಸಿಕೊಳ್ಳಲು ಆದೇಶಿಸಿದರು. ಪೊಲೀಸರು ಮೂಕರಾಗಿ ಈ ಎಲ್ಲವನ್ನು ನೋಡುತ್ತ ನಿಲ್ಲಬೇಕಾಗಿ ಬಂದದ್ದೇ ವಿಪರ್ಯಾಸ! ರಾತ್ರಿ ನಡೆದ ಈ ನಾಟಕವನ್ನು ಮಂತ್ರಿ ಭಾರತಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಳಿ ನಿವೇದಿಸಿಕೊಳ್ಳುವ ಮೊದಲೇ ಪ್ರಕರಣ ಜಗಜ್ಜಾಹೀರಾಯಿತು. ಬೀದಿಯಲ್ಲಿ ತಮ್ಮನ್ನು ಅವಮಾನಿಸಿದವರ ವಿರುದ್ಧ ಕ್ರಮಕ್ಕೆ ಉಗಾಂಡಾದ ಯುವತಿಯರು ಮೊರೆ ಇಟ್ಟರು. ಅಲ್ಲಿನ ರಾಜ ತಾಂತ್ರಿಕರ ದಂಡೊಂದು ರಕ್ಷಣಾ ವ್ಯವಹಾರಗಳ ಸಚಿವಾಲಯದಿಂದ ವಿವರಣೆ ಕೇಳಿತು. ಇದಕ್ಕೆ ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದಾದರೂ ಹೇಗೆ? 'ಸಚಿವ ಭಾರತಿ ಅವರ ನಡವಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಜನರ ನೆಮ್ಮದಿ ಕದಡುವಂತಹ ಚಟುವಟಿಕೆಯಲ್ಲಿ ತೊಡಗಿದ್ದವರ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರಿಗೆ ಆದೇಶಿಸಿದ್ದರಲ್ಲಿ ಯಾವ ತಪ್ಪೂ ಕಾಣುತ್ತಿಲ್ಲ. ಒಬ್ಬ ಜನಪರ, ಜನರಿಂದ ಆಯ್ಕೆಯಾದ ಸಚಿವ ತನ್ನ ಜನರ ಕಷ್ಟಕ್ಕಾಗುವುದನ್ನು ತಪ್ಪಾಗಿ ಅರ್ಥೈಸುವುದು ಯಾಕೆ' ಎಂದು ಕೇಳಿದರು. ಆದರೆ ಇಲ್ಲಿ ಕೇಜ್ರಿವಾಲ್ ಒಂದು ವಿಷಯ ಮರೆಯಬಾರದು. ಆಫ್ರಿಕಾ ಖಂಡದ ದೇಶಗಳಿಗೂ ಭಾರತಕ್ಕೂ ಆಯಕಟ್ಟಿನ ರಾಜತಾಂತ್ರಿಕ ಸಂಬಂಧವಿದೆ. ಅಲ್ಲಿನ ತೈಲ ನಿಕ್ಷೇಪಗಳಲ್ಲಿ ಭಾರತ ಸಾವಿರಾರು ಕೋಟಿ ರೂ.ಗಳ ಬಂಡವಾಳ ಹೂಡಿದೆ. ಅನ್ಯಾಯ, ತುಳಿತದ ಛಾಯೆಯಲ್ಲಿ ನಲುಗಿದ್ದ ಈ ದೇಶಗಳ ಪರವಾಗಿ ಭಾರತ ಎಂದೂ ನಿಂತಿದೆ. ಅಲ್ಲಿನ ಜನದನಿಗೆ ವಿರುದ್ಧವಾಗಿ ಭಾರತ ಎಂದೂ ಚಕಾರವೆತ್ತಿಲ್ಲ. ಜನಾಂದೋಲನದ ಮೂಲಕವೇ ಅಧಿಕಾರಕ್ಕೆ ಬಂದ ಕೇಜ್ರಿವಾಲ್ ಕಣ್ಣಿಗೆ ಇದಾವುದೂ ಗೋಚರಿಸಿದಂತಿಲ್ಲ. ರಾತ್ರೋರಾತ್ರಿ ಅನುಭವಿಸಿದ ಯಾತನೆಯ ಕುರಿತು ಆ ಹೆಣ್ಣುಮಕ್ಕಳು ನೀಡಿದ ದೂರು ಆಫ್ರಿಕನ್ ದೇಶಗಳ ಕಣ್ಣಲ್ಲಿ ಭಾರತದ ಇಮೇಜಿಗೇ ಧಕ್ಕೆ ತರುವಂತಿದೆ. ಇಂದು 21 ಆಫ್ರಿಕನ್ ದೇಶಗಳು ಈ ಬಗ್ಗೆ ಭಾರತದಿಂದ ವಿವರಣೆ ಕೋರಿವೆ. ಈಗ ಹೇಳಿ ಇವರ ರಸ್ತೆರೋಷಕ್ಕೆ ಇತರ ದೇಶಗಳ ಮುಂದೆ ನಾವು ತಲೆ ತಗ್ಗಿಸಿ ನಿಲ್ಲಬೇಕೆ? ಒಂದು ವೇಳೆ ಆ ಮಹಿಳೆಯು ತಪ್ಪು ಮಾಡಿದ್ದೇ ಆಗಿದ್ದಲ್ಲಿ, ಅವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳುವುದು ಬಿಟ್ಟು ಸರಿ ರಾತ್ರಿಯಲ್ಲಿ ಬೀದಿಗೆಳೆದು ರಂಪ ಮಾಡುವುದು ಯಾವ ಸೀಮೆ ನ್ಯಾಯ.
ಇನ್ನೂ ಅಷ್ಟಕ್ಕೇ ನಿಲ್ಲಲಿಲ್ಲ ಕೇಜ್ರಿವಾಲ್ ವರಸೆ. ಸಚಿವರು ತಮ್ಮ ಕೆಲಸ ನಿರ್ವಹಿಸಲು ಮುಂದಾದಾಗ ಅವರ ಮಾತನ್ನು ಧಿಕ್ಕರಿಸಿ, ಅವರನ್ನು ತಡೆಯುವ ದಾರ್ಷ್ಟ್ಯ ಪ್ರದರ್ಶಿಸಿದ್ದಕ್ಕಾಗಿ ಸಂಬಂಧಪಟ್ಟ ಪೊಲೀಸರನ್ನು ಸೇವೆಯಿಂದ ವಜಾ ಮಾಡಬೇಕೆಂದರು. ಅದಕ್ಕಾಗಿ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದರು. ಈಗ ತಾವು ಒಂದು ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ಮರೆತು ದಿಲ್ಲಿಯ ರಸ್ತೆಯಲ್ಲಿ ಜನರ ದೊಡ್ಡ ಗುಂಪು ಕಟ್ಟಿಕೊಂಡು ತಮ್ಮ ಬೇಡಿಕೆ ಈಡೇರಿಸಲು ಆಗ್ರಹಿಸಿ ಧರಣಿ ಕುಳಿತಿದ್ದಾರೆ. ಇನ್ನೂ 10 ದಿನ ತಮ್ಮ ಧರಣಿ ಮುಂದುವರಿಸುವುದಾಗಿ ಧಮಕಿ ಹಾಕಿದ್ದಾರೆ. ಇವರ ಈ ಧರಣಿ ಸಲುವಾಗಿ ಸೋಮವಾರ ದಿಲ್ಲಿ ಮೆಟ್ರೋದ ನಾಲ್ಕು ಮಾರ್ಗಗಳು ಬಂದಾಗಿವೆ. ಇನ್ನು ಈ ಪ್ರತಿಭಟನೆ ಹೀಗೇ ನಡೆದರೆ ಮೆಟ್ರೋ ಸಂಚಾರಕ್ಕೇ ಸಂಚಕಾರ ಬರುವ ಸಾಧ್ಯತೆ ಇದೆ. ಪರಿಸ್ಥಿತಿಯ ವ್ಯಂಗ್ಯ ಎಂದರೆ ಸಚಿವರಿಗೆ, ಮುಖ್ಯಮಂತ್ರಿಗೆ ಕೆಂಪು ಗೂಟದ ಕಾರು ಕೊಟ್ಟು ಅವರ ಸಂಚಾರಕ್ಕೆಂದು ದಾರಿ ಸುಗಮ ಮಾಡುವುದರಿಂದ ಜನ ಸಂಚಾರಕ್ಕೆ ಅಡಚಣೆಯಾಗುತ್ತದೆ ಎಂದು ಕೆಂಪು ಗೂಟದ ಕಾರು ತಿರಸ್ಕರಿಸಿ ಜನ ಸಾಮಾನ್ಯರ ನಡುವೆ ಸಂಚರಿಸುವುದಾಗಿ ಬೊಬ್ಬೆ ಹಾಕಿದ ಕೇಜ್ರಿವಾಲ್ ಈಗ ತಮ್ಮ ಧರಣಿಯಿಂದಾಗಿ ದಿಲ್ಲಿ ಜನತೆ ರಸ್ತೆಯಲ್ಲಿ ಓಡಾಡದಂತೆ, ಸಂಚಾರ ಸ್ತಬ್ಧವಾಗುವಂತೆ ಮಾಡುತ್ತಾರೆ ಎಂದರೆ ಇವರ ಮಾತಿಗೂ, ಕೃತಿಗೂ ಎಷ್ಟು ವ್ಯತ್ಯಾಸ ಇದೆ ಎಂಬುದು ತಿಳಿಯುತ್ತದೆ. ಒಬ್ಬ ರಾಜನೇ ತನ್ನ ಸೇನಾಧಿಪತಿಯ ವಿರುದ್ಧ ಅಥವಾ ಮಂತ್ರಿ ತನ್ನ ಕೈಕೆಳಗಿನ ಅಧಿಕಾರಿಯ ವಿರುದ್ಧ ಬೀದಿಗೆ ಬಂದು ಧರಣಿ ಕುಳಿತರೆ, ಜನರ ಗುಂಪು ಸೇರಿಸಿಕೊಂಡು ಘೋಷಣೆ ಕೂಗಿದರೆ ಅದು ಯಾರ ಸಾಮರ್ಥ್ಯ ತೋರುತ್ತದೆ? ತಮ್ಮ ಅಡಿ ಬರುವ ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಡಲಾಗದವ ರಾಜ್ಯಭಾರವನ್ನು ತಾನೆ ಹೇಗೆ ನಿಭಾಯಿಸಬಲ್ಲ? ಈ ಭಾರ್ತಿ ದಿಲ್ಲಿಯ ಕಾನೂನು ಮಂತ್ರಿಯಾಗಲು ಅವರಿಗಿದ್ದ ಅರ್ಹತೆ ಎಂದರೆ ವೃತ್ತಿಯಲ್ಲಿ ಆತ ವಕೀಲ ಎಂಬುದು. ಆದರೆ, ಈ ವಕೀಲಿಕೆಯಲ್ಲಿ ಆತ ಕಕ್ಷಿದಾರರ ದಿಕ್ಕು ತಪ್ಪಿಸಿದ್ದ ಎಂದು ನ್ಯಾಯಾಲಯ ಆತನ ಮೇಲೆ ಬೊಟ್ಟು ಮಾಡಿದಾಗಲೂ ಇದೇ ಕೇಜ್ರಿವಾಲ್ ನ್ಯಾಯಾಧೀಶರನ್ನೇ ಪ್ರಶ್ನಿಸಿದರು. ವ್ಯವಸ್ಥೆಯ ವಿರುದ್ಧ ಮಡುಗಟ್ಟಿದ ರೋಷ, ಪರ್ಯಾಯ ಆಯ್ಕೆ ಕುರಿತ ಗೊಂದಲ, ನಮ್ಮ ಪರಿಸರದಲ್ಲೇ ಬೆಳೆದವರು ಎಂಬ ನಲ್ಮೆಯಿಂದಾಗಿ ದಿಲ್ಲಿಯ ಜನ ಆಮ್ ಆದ್ಮಿ ಪಕ್ಷಕ್ಕೆ ಅತಿ ಹೆಚ್ಚು ಸೀಟು ಕೊಟ್ಟು ಗದ್ದುಗೆಯ ಹತ್ತಿರ ತಂದರು. ಅದಾಗಿ ಮೂರು ವಾರಗಳೇ ಕಳೆದಿದೆ. ಈ ಮೂರು ವಾರಗಳಲ್ಲಿ ಕೇಜ್ರಿವಾಲ್ ಸರ್ಕಾರ ಕೈಗೊಂಡಿರುವ ಮೂರು ಪ್ರಮುಖ ನಿರ್ಣಯಗಳನ್ನು ಪಟ್ಟಿ ಮಾಡುವುದಾದರೆ, ಅವು
1. ಸಚಿವರು, ಅಧಿಕಾರಿಗಳಿಗೆ ಕೆಂಪು ಗೂಟದ ಕಾರು, ಭದ್ರತಾ ಸಿಬ್ಬಂದಿ ರದ್ದು ಮಾಡಿದ್ದು.
2. ದಿಲ್ಲಿಯ ನಾಗರಿಕರಿಗೆ 3 ತಿಂಗಳ ಅವಧಿಗೆ 700 ಲೀ. ಪುಕ್ಕಟೆ ನೀರು ನೀಡಿದ್ದು.
3. ವಿದ್ಯುತ್ ದರ ತಗ್ಗಿಸಿ ವಿದ್ಯುತ್ ಕಳುವಿನ ಬಗ್ಗೆ ಕಂಪನಿಗಳ ಆಡಿಟ್‌ಗೆ ಆದೇಶಿಸಿದ್ದು.
ಆ ಕ್ಷಣಕ್ಕೆ ಜನರಿಗೆ ಇಷ್ಟವಾಗುವಂತಹ ನಿರ್ಧಾರಗಳೇ. ಆದರೆ, ಇದರಿಂದಷ್ಟೇ ಅವರ ಜೀವನ ಪಾವನವಾಗುತ್ತದೆಯೇ? ಮೂರು ತಿಂಗಳ ನಂತರ ದಿಲ್ಲಿಗೆ ಬಿರುಬೇಸಿಗೆ ತಟ್ಟುತ್ತದೆ. ಆಗ ನೀರು ಒದಗಿಸಲು ಯಾವ ಪರ್ಯಾಯ ಮಾರ್ಗ ಯೋಜಿಸಲಾಗಿದೆ? ವಿದ್ಯುತ್ ಅನ್ನು ಈರುಳ್ಳಿಗಿಂತಲೂ ಹೆಚ್ಚಾಗಿ ಬಳಸುವ ದಿಲ್ಲಿ ಜನರಿಗೆ ಏರುತ್ತಲೇ ಇರುವ ಬೇಡಿಕೆ ತಣಿಸಲು ಉತ್ಪಾದನೆ ಖರೀದಿ ಅಥವಾ ಸೋರಿಕೆ ತಡೆಗೆ ಯಾವ ಕ್ರಮ ರೂಪಿಸಲಾಗಿದೆ? ಕರ್ನಾಟಕವೂ ಸೇರಿದಂತೆ ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು ಜನರ ದೂರು, ದುಮ್ಮಾನ ಆಲಿಸಲು ಜನತಾದರ್ಶನ ನಡೆಸುತ್ತಾರೆ. ಅವು ವ್ಯವಸ್ಥಿತವಾಗಿ ನಿಗದಿತ ಸ್ಥಳದಲ್ಲಿ ನಡೆಯುತ್ತಿವೆ. ಆದರೆ, ಜನರೇ ನನ್ನ ನಾಯಕರು ಎನ್ನುವ ಕೇಜ್ರಿವಾಲ್ ಒಂದೇ ಒಂದು ಜನತಾ ದರ್ಶನಕ್ಕೆ ಹೈರಾಣಾಗಿದ್ದು ಏಕೆ? ಜನತಾ ದರ್ಶನವನ್ನು ಊರ ಸಂತೆಯಾಗಿ ಪರಿವರ್ತಿಸಿದ ಕೀರ್ತಿ ಬಹುಶಃ ಕೇಜ್ರಿವಾಲ್‌ಗೇ ಸಲ್ಲಬೇಕಷ್ಟೆ. ಜನಪರ ಚಳವಳಿಗಳು ರಾಜಕೀಯ ಸ್ವರೂಪ ಪಡೆದು ಅಧಿಕಾರದ ಗದ್ದುಗೆಗೆ ಏರಿ ಸ್ವಲ್ಪ ಸಮಯದಲ್ಲಿಯೇ ದಿಕ್ಕುತಪ್ಪಿ ಇತಿಹಾಸ ಸೇರಿದ ಅನೇಕ ಉದಾಹರಣೆಗಳಿವೆ. ವ್ಯವಸ್ಥೆಯ ವಿರುದ್ಧ ತೊಡೆತಟ್ಟಿ ನಿಂತಾಗ ಕನಿಷ್ಟ ವ್ಯವಸ್ಥೆ ಕೆಡವುವ ಗುರಿ ಇರುತ್ತದೆ. ಅದು ಸಾಧ್ಯವಾದ ನಂತರ ಮುಂದೇನು ಎಂಬ ಪ್ರಶ್ನೆಗೆ ಅನೇಕ ಚಳವಳಿಗಳು ಉತ್ತರ ಕಂಡುಕೊಳ್ಳದೆ ಸೊರಗಿ ಹೋಗಿವೆ. 1970ರ ದಶಕದಲ್ಲಿ ಇಂದಿರಾಗಾಂಧಿ ಸರ್ವಾಧಿಕಾರದ ವಿರುದ್ಧ ಗಾಂಧಿವಾದಿ ಜಯಪ್ರಕಾಶ್ ನಾರಾಯಣ್ ಕರೆಕೊಟ್ಟ ಸಮಗ್ರ ಕ್ರಾಂತಿಯ ರಾಜಕೀಯ ರೂಪವಾಗಿ ಜನತಾ ಪಕ್ಷ ಅವತರಿಸಿ ಸರ್ಕಾರವನ್ನು ರಚಿಸಿತು. ಈ ಜನತಾ ಪರಿವಾರದಲ್ಲಿ ಬೇರೆ ಬೇರೆ ಎಳೆಗಳಿಂದ ಬಂದಿದ್ದ ರಾಜಕೀಯ ಧುರೀಣರಿದ್ದರು. ಇಂದಿರಾಗಾಂಧಿ ಅವರನ್ನು ಕಿತ್ತೊಗೆಯುವ ಒಂದೇ ಉದ್ದೇಶಕ್ಕೆ ಇವರೆಲ್ಲ ಒಂದೇ ಛತ್ರಿಯಡಿ ಬಂದಿದ್ದರು. ಚುನಾವಣೆಯಲ್ಲಿ ಇಂದಿರಾ ಸೋತು ಇವರೇ ಅಧಿಕಾರಕ್ಕೆ ಬಂದಾಗ ಮುಂದಿನ ಗುರಿಗಳು ನಿಗದಿಯಾಗಲಿಲ್ಲ. ಒಂದು ಬಣಕ್ಕೆ ಬೇಕಾದ್ದು ಮತ್ತೊಂದು ಬಣಕ್ಕೆ ಬೇಡವಾಯಿತು. ಜನತಾ ಪರಿವಾರ ಯಾವುದೇ ಸಾಂಸ್ಥಿಕ ಸ್ವರೂಪ ಪಡೆದುಕೊಳ್ಳಲಿಲ್ಲ. ಮೂರೇ ವರ್ಷದಲ್ಲಿ ಇವರನ್ನೆಲ್ಲ ಒಂದುಗೂಡಿಸಿದ್ದ ದಾರ ಹರಿದು ಪರಿವಾರ ಛಿದ್ರವಾಯಿತು. ಅಷ್ಟೇಕೆ ಮೂರು ವರ್ಷಗಳ ಹಿಂದೆ ಈಜಿಪ್ತ್‌ನ ಬೀದಿ ಬೀದಿಗಳಲ್ಲಿ ಹೋಸ್ನಿ ಮುಬಾರಕ್ ಆಡಳಿತದ ವಿರುದ್ಧ ಜನ ದಂಗೆ ಎದ್ದರು. ಪ್ರಸಿದ್ಧ ತಹ್ರೀರ್ ಚೌಕದಲ್ಲಿ ಲಕ್ಷಗಟ್ಟಲೆ ಜನ ತಿಂಗಳುಗಟ್ಟಲೇ ಧರಣಿ ನಡೆಸಿದರು. ಇದರ ಫಲವಾಗಿ ಜನ್ಮತಾಳಿದ ಮುಸ್ಲಿಂ ಬ್ರದರ್‌ಹುಡ್ ಮುಬಾರಕ್‌ರನ್ನು ಕಿತ್ತೊಗೆಯುವಲ್ಲಿ ಯಶಸ್ವಿಯಾಗಿ ಅಧಿಕಾರವನ್ನು ಪಡೆಯಿತು. ಆದರೆ ಅದಾಗಿ ಎರಡೇ ವರ್ಷಗಳಲ್ಲಿ ತನ್ನ ವಿರುದ್ಧವೇ ಜನ ಬೀದಿಗಿಳಿಯುವುದನ್ನು ನೋಡಬೇಕಾಯಿತು. ಅಧಿಕಾರವೂ ಕೈತಪ್ಪಿತು. ಇನ್ನು ಟರ್ಕಿಯಲ್ಲಿ ಸರ್ಕಾರದ ವಿರುದ್ಧದ ಜನದನಿಯ ಫಲವಾಗಿ ಹುಟ್ಟಿದ ಜಸ್ಟೀಸ್ ಮತ್ತು ಫ್ರೀಡಂ ಪಾರ್ಟಿ (ಆಓಕಿ) ಜನರ ಕಣ್ಣಲ್ಲಿ ನಾನಾ ಕನಸು ಬಿತ್ತಿತು. ಜನರ ಬದುಕು ಹಸನುಗೊಳಿಸುವ ದೊಡ್ಡ ಸೇತುವೆ ನಿರ್ಮಿಸುವ, ರಾಜಧಾನಿಯ ಮೂಲ ಸೌಕರ್ಯದ ಚರ್ಯೆ ಬದಲಿಸುವ ಮಾತನ್ನಾಡಿತು. ಭ್ರಷ್ಟಾಚಾರ ನಿಗ್ರಹಿಸುವ ವಚನ ನೀಡಿತು. ಇಂದು ಅದೇ ಟರ್ಕಿ ಜನ ಅದೇ ಪಕ್ಷದ ವಿರುದ್ಧ ಬೀದಿಗಿಳಿದಿದ್ದಾರೆ. ಯಾವ ಮೂಲ ಸೌಕರ್ಯದ ಬಗ್ಗೆ ಆ ಪಕ್ಷ ಹೇಳಿತ್ತೊ ಅದರ ಕಾಮಗಾರಿಯಲ್ಲಿಯೇ ಭ್ರಷ್ಟಾಚಾರದ ಗುರುತರ ಆರೋಪಗಳು ಕೇಳಿ ಬಂದಿವೆ. ಇಷ್ಟಾದರೂ ಎರ್ಡೊಗನ್ ನೇತೃತ್ವದ ಎಕೆಪಿ, ತಾನೂ ಜನಪರ ಎಂದು ಹೇಳುತ್ತಿದೆ. ನಮ್ಮ ವಿರುದ್ಧ ಇದು ಷಡ್ಯಂತ್ರ ಎಂದು ಹೇಳಿದೆ. ಅವರ ವಿರುದ್ಧ ಬೀದಿಗಿಳಿಯುವಂತೆ ಜನರನ್ನು ಪ್ರೇರೇಪಿಸುತ್ತಿದೆ. ಧರಣಿ-ಸತ್ಯಾಗ್ರಹಗಳಿಂದ ವ್ಯವಸ್ಥೆ ಬದಲಿಸಲು ಸಾಧ್ಯವಿಲ್ಲ. ರಾಜಕಾರಣದ ಕೊಳಕನ್ನು ರಾಜಕೀಯಕ್ಕಿಳಿದೇ ಸ್ವಚ್ಛ ಮಾಡಬೇಕು ಎಂದು ಹೇಳಿ ಭ್ರಷ್ಟಾಚಾರ ವಿರುದ್ಧದ ಅಣ್ಣಾ ಹಜಾರೆ ಹೋರಾಟದ ಲಾಭ ಪಡೆದು, ಅದರಿಂದ ಹೊರಬಂದು ಆಮ್ ಆದ್ಮಿ ಪಾರ್ಟಿ ಕಟ್ಟಿದ ಅರವಿಂದ್ ಕೇಜ್ರಿವಾಲ್ ಇಂದು ಇತಿಹಾಸದಲ್ಲಿ ಆಗಿಹೋದ ಇಂತಹ ಚಳವಳಿಯಾಧಾರಿತ ರಾಜಕೀಯ ರೂಪಾಂತರದ ಅವಾಂತರಗಳನ್ನು ಉಪೇಕ್ಷಿಸಬಾರದು. ಇಲ್ಲದಿದ್ದರೆ ಇತಿಹಾಸವೂ ಅವರನ್ನು, ಅವರ ಪಕ್ಷವನ್ನೂ ಉಪೇಕ್ಷಿಸುತ್ತದೆ. ಚಂದಮಾಮಾ, ಅಮರ ಚಿತ್ರಕತೆ ಓದಿಕೊಂಡು ಆಡಳಿತ ನಡೆಸುವುದು ಸಾಧ್ಯವಿಲ್ಲ. ಅನ್ನ ಆಗಿದೆಯೇ ಎಂದು ನೋಡಲು ಒಂದು ಅಗಳು ಸಾಕು, ಹಾಗೆಂದು ಬೇಳೆ ಬೇಯುವ ತನಕ ಕಾಯುವ ತಾಳ್ಮೆ ಈಗಿನ ಜನಕ್ಕಿಲ್ಲ ಎಂಬುದನ್ನು ಆಮ್ ಆದ್ಮಿ ಪಾರ್ಟಿ ಮರೆಯಬಾರದು.


- ಕೆ.ಎಸ್.ಜಗನ್ನಾಥ್
jagannath.kudinoor@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com