ಬಿದ್ರಿಯೋರ್ದು ಹೊಸ ಪಾರ್ಟಿ, ಎಲ್ಲರ ಕೈಗೆ ಬರುತ್ತೆ ಲಾಠಿ

ಬಿಳಿ ಬಟ್ಟೆ, ಹಾಕ್ಕಂಟು ಬಟ್ಟೆ ಮ್ಯಾಲೆ ಘಮಲದೆಣ್ಣೆ ಸುರ್ಕಂಡು ಮೈಲಾರಿ ...

ಬಿಳಿ ಬಟ್ಟೆ, ಹಾಕ್ಕಂಟು ಬಟ್ಟೆ ಮ್ಯಾಲೆ ಘಮಲದೆಣ್ಣೆ ಸುರ್ಕಂಡು ಮೈಲಾರಿ ಯರ್ರಾಬಿರ್ರಿ ವೋಯ್ತಾಯಿದ್ದ. 'ಏನ್ಲಾ ಮೈಲಾರಿ ಉದಯರಂಗ ಬಸ್ ಥರ ಬರ್ರೋ ಅಂತ ವೋಯ್ತಾಯಿದ್ದೀಯ. ವಸಿ ಬ್ರೇಕ್ ಹಾಕಲೇ' ಅಂತ ಅಮಾಸೆ ಕೂಗ್ದ.
'ಅರ್ಜೆಂಟು ಕೆಲ್ಸ ಅದೆ ಶಿಟಿಗೆ ವೋಯ್ತಾಯಿದ್ದೀನಿ. ಬಂದ್ಮೇಕೆ ನಿಂತಾವ ಮಾತಾಡ್ತಾನಿ. ಈವಾಗ ಟೇಮಿಲ್ಲ ಸುಮ್ಕಿರು' ಅಂದ ಮೈಲಾರಿ. 'ವೋ, ಇವ್ನು ಬರಾಕ ಒಬಾಮ. ಸಿಕ್ಕಾಪಟ್ಟೆ ಕೆಲ್ಸ ಅಂತೆ, ಟೇಮಿಲ್ವಂತೆ, ನಿಂತ್ಕಳಲೇ ಕಂಡಿದ್ದೀನಿ' ಅಂದ ಅಮಾಸೆ.
'ವೊಳ್ಳೆ ಕೆಲ್ಸುಕ್ಕೆ ವೋಗೋವಾಗ ನಿಂದೊಳ್ಳೆ ಕಥೆ ಆಯ್ತಲ್ಲ. ಎಷ್ಟಾರ ಆಗ್ಲಿ, ಕುಡಿಯೋ ನೀರ್ನಾಗೆ ಕಡ್ಡಿ ಆಡ್ಸೋದು ನಿನ್ ಜಾಯಮಾನ ಅಲ್ವ ? ಅದೇನಂತ ಯೋಳಲೇ ಬಿಕ್ನಾಸಿ ಮುಂಡೇದೆ' ಅಂತಂದು ಮೈಲಾರಿ ನಿಂತ. 'ಏನದೆ ಕೆಲ್ಸ ಬೆಂಗ್ಳೂರ್ನಾಗೆ' ಅಂತ ಅಮಾಸೆ ಕೇಳ್ದ.
'ಮಾಜಿ ಪೊಲೀಸ್ ಆಪೀಸರ್ರು ಬಿದ್ರಿಯೋರು ಪೋನಾಕಿದ್ರು. ವೊಸ ಪಾರ್ಟಿ ಮಾಡ್ತಾಯಿವ್ನಿ ಬಂದು ಸೇರ್ಕಂಬುಡು. ಪಾರ್ಲಿಮೆಂಟ್ ಎಲೆಕ್ಸನ್ನಾಗೆ ನಿಂಗೇ ಟಿಕೆಟ್ಟು ಕೊಡ್ತೀನಿ ಅಂತ ಯೋಳುದ್ರು. ಅದುಕ್ಕೆ ಬಿಳಿ ಬಟ್ಟೆ ಹಾಕ್ಕಂಡು ವೋಯ್ತಾಯಿದ್ದೀನಿ. ಸಾಹೇಬ್ರು ಪಾರ್ಟಿ ಸೇರ್ಕಂಬುಡ್ತೀನಿ ಕಣ್ಲಾ. ಬರೋಷ್ಟ್ರಾಗೆ ಬಂಟಿಂಗು, ಬ್ಯಾನರ್ರು, ಪ್ಲೆಕ್ಸು ಎಲ್ಲ ಹಾಕ್ಸಿರು. ಖರ್ಚು ಏನಾಯ್ತದೋ ಅದುನ್ನ ಬಂದ್ಮೇಕೆ ಕೊಡ್ತೀನಿ' ಅಂದ ಮೈಲಾರಿ.
'ವುಗೀಲಾ ಇವ್ನು ಮಖುಕ್ಕೆ. ಅಲ್ಲಲೇ, ಬಿದ್ರಿಯೋರು ಯಾವ್ ಪಾರ್ಟಿನಾಗವ್ರೋ ಈವಾಗ. ಬೆಳ್ಗೆ ಎದ್ರೆ ಯಾವ್ ಪಾರ್ಟಿನಾಗೆ ಇರ್ತೀನಿ ಅಂತ ಅವ್ರುಗೇ ತಿಳ್ಯಕಿಲ್ಲ. ಇನ್ನ ನಿನ್ನುನ್ನ ಕರ್ಕಂಡೋಗಿ ಯಾವ್ ಪಾರ್ಟಿ ಕಟ್ತಾರೆ.  ಹಾಳಾಗೋಯ್ತೀಯ ವೋಬ್ಯಾಡ' ಕಣಲೇ ಅಂದ ಅಮಾಸೆ.
'ಡಿಲ್ಲಿನಾಗೆ ಅದ್ಯಾರೋ ಅಮ್ ಆದ್ಮಿ ಪಕ್ಸುದೋರು ಹಿಂಗೇ ಮಾಡಿ ಸರ್ಕಾರ ತಂದವ್ರಂತೆ. ಹಂಗೇ ನಾನೂವೆ ವೊಸ ಪಾರ್ಟಿ ಕಟ್ಕಂಡು ಪಾರ್ಲಿಮೆಂಟ್ ಎಲೆಕ್ಸನ್ನಾಗೆ ಒಂದತ್ತು ಸೀಟು ತಕ್ಕಂಬುಡ್ತೀನಿ. ಅಮೇಲೆ ನೋಡಪ್ಪ ಡಿಲ್ಲಿನೋರೆಲ್ಲ ನನ್ ಮನೆ ಬಾಗ್ಲಾಗೆ ನಿಂತು ಕಾಲಿಂಗು ಬೆಲ್ಲು ವೊತ್ತುತಾಯಿರ್ತರೆ ಅಂತ ಬಿದ್ರಿಯೋರು ಯೋಳವ್ರೆ ಅಮಾಸೆ. ಯಾರುಗ್ಲಾ ಗೊತ್ತು ಯಾರ್ಯಾರ್ದು ನಸೀಬು ಹೆಂಗಿರ್ತದೆ ಅಂತ. ವೋಗಿ ವೊಂದು ಕೈ ನೋಡೇಬುಡಾವ ಬುಡ್ಲಾ' ಅಂದ ಮೈಲಾರಿ.
'ಆಮ್ ಆದ್ಮಿ ಪಾರ್ಟಿಯೋರು ಕಸ ವೊಡ್ಯೋ ಪೊರ್ಕೆನಾ ಸಿಂಬಲ್ಲು ಮಾಡ್ಕಂಡವ್ರೆ. ಜನ ಆ ಪೊರ್ಕೆ ನೋಡಿ ನೋಡಿ ವೋಟಾಕವ್ರೆ. ನೀವು ಯಾವ್ ಸಿಂಬಲ್ ತಕ್ಕತೀರಿ ಅಂತ ಬಿದ್ರಿಯೋರ್ನ ಕೇಳ್ದೆ. ನಂಗೆ ಲಾಠಿ ಅಂದ್ರೆ ಸ್ಯಾನೆ ಲೈಕು. ಅದನ್ನೇ ಸಿಂಬಲ್ಲು ಮಾಡ್ಕಂಬುಡ್ತೀನಿ. ಆಮ್ ಆದ್ಮಿ ಪಕ್ಸುದೋರು ಎಲ್ಲಾರ್ಗೂ ಪೊರ್ಕೆ ಕೊಟ್ಟಂಗೆ ನಾನು ಲಾಠಿ ಕೊಡ್ತೀನಿ. ಜನ ಲಾಠಿನ ಕೈನಾಗೆ ಹಿಡ್ಕಂಡು ವೋಯ್ತಾಯಿದ್ರೆ ವೋಟು ಹಂಗೇ ಬಿದ್ದೋಯ್ತೆವೆ ಅಂದ್ರಪ್ಪ ಸಾಬೇಬ್ರು. ಬರೋವಾಗ ನಿಂಗು ವೊಂದು ಲಾಠಿ ತಕ್ಕಂಡು ಬತ್ತೀನಪ್ಪ ಬ್ಯಾಸ್ರ ಮಾಡ್ಕಂಬ್ಯಾಡ' ಅಂದ ಮೈಲಾರಿ.
'ಪೊರ್ಕೆ ಕೊಡೋರು ವೊಬ್ರು, ಲಾಠಿ ಕೊಡೋರು ಇನ್ನೊಬ್ರು, ಕೈಗೆ ಕಾಸು ಕೊಡೋ ಬಾಸು ಯಾರೂ ಇಲ್ವೇನ್ಲಾ ಮೈಲಾರಿ' ಅಂತ ಅಮಾಸೆ ಕೇಳ್ದ.
'ಕೋಲಾರದ ಕಡೆ ವೋಗ್ಲಾ. ವರ್ತೂರು ಪ್ರಕಾಶಣ್ಣ ಕೈತುಂಬ ಮಡುಗ್ತರೆ. ವೊಟ್ಟೆ ತುಂಬ ವುಣ್ಣಕ್ಕೆ ಇಕ್ತರೆ, ಸ್ಯಾನೆ ಮಾತಾಡುದ್ರೆ ನಾಲ್ಕು ಮಡುಗ್ತರೆ' ಅಂದ ಮೈಲಾರಿ. 'ಮೊನ್ನೆ ಕೋಲಾರುಕ್ಕೆ ವೋಗಿದ್ದೆ ಕಣ್ಲಾ, ಅಣ್ಣ ಸಿಕ್ಕಿದ್ರು. ನಾನೂವೆ ಸ್ಯಾನೆ ವೊತ್ತು ಕಾದೆ. ಏನಾದ್ರೂವೆ ಕೈಗೆ ಕೊಡ್ತಾರೇನೋ ಅಂತ. ಏನ್ಲಾ ಬಂದಿದ್ದು ಅಂದ್ರು, ಸುಮ್ಕೆ ಕಣಣ್ಣ ಅಂದೆ. ಕೊನೆಗೆ ಕೈ ವುಜ್ಕಂಡು ವೊಂಟೋದ್ರು' ಅಂದ ಅಮಾಸೆ.
'ಅಲ್ಲಿದ್ದೋರ್ನ ಕೇಳ್ದೆ, ಅಣ್ಣ ಯಾಕೋ ಕೈ ಬೆಚ್ಗೆ ಮಾಡಿಲ್ಲ ಈವತ್ತು ಅಂತ. ಅಯ್ಯೋ ಪಾಪ, ಎಲ್ಲಿಂದ ತಂದಾರು ಕಾಸು ನಿನ್ ಕೈ ಬೆಚ್ಗೆ ಮಾಡಕ್ಕೆ. ವೋದ್ಕಿತ ಮಂತ್ರಿ ಆಗಿದ್ರು, ಅಲ್ಲೋ, ಇಲ್ಲೋ ಕೆರ್ಕಂಡ್ರು, ವೂರ್ಗೆಲ್ಲ ಹಂಚುದ್ರು. ಈವಾಗ ಪಕ್ಸೇತರ ಶಾಸಕ ಬ್ಯಾರೆ. ಸರ್ಕಾರ್ದಾಗೆ ಅವ್ರು ಕೆಲ್ಸ, ಕಾರ್ಯ ವೊಂದೂ ಆಯ್ತಾಯಿಲ್ವಂತೆ. ಯಾವ್ದಾರ ಕೆಲ್ಸುಕ್ಕೆ ಅವ್ರು ಲೆಟ್ರು ಕೊಟ್ರೆ ಆಗಾಕಿಲ್ವಂತೆ ಅಂದ್ರಪ್ಪ. ಯಾಕೆ ಅಂತಂದೆ. ಎಲ್ಲ ಸಿದ್ರಾಮಣ್ಣೋರು ಆದೇಸ ಕಣಪ್ಪ ಅಂತೇಳುದ್ರು' ಅಂದ ಅಮಾಸೆ. 'ವೋಗ್ಲಿ ಬುಡಪ್ಪ' ಅಂತೇಳಿ ಮೈಲಾರಿ ಬೆಂಗ್ಳೂರು ಬಸ್ ಹತ್ಕಂಡ. ಅಮಾಸೆ ಮನೆಕಡೆ ವೊಂಟ.


-ಕೆ.ವಿ.ಪ್ರಭಾಕರ್
prabhukolar@yahoo.com



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com