ರಾಷ್ಟ್ರಪತಿ ಭಾಷಣ: ರಾಜಕೀಯ ಲೇಪವೊ? ಹಿತವಚನವೋ?

ದೇಶದ ಮೊದಲ ಪ್ರಜೆ ಎನಿಸಿಕೊಂಡ ರಾಷ್ಟ್ರಪತಿ ದೇಶವಾಸಿಗಳನ್ನು ಉದ್ದೇಶಿಸಿ...
ರಾಷ್ಟ್ರಪತಿ ಭಾಷಣ: ರಾಜಕೀಯ ಲೇಪವೊ? ಹಿತವಚನವೋ?
Updated on

ದೇಶದ ಮೊದಲ ಪ್ರಜೆ ಎನಿಸಿಕೊಂಡ ರಾಷ್ಟ್ರಪತಿ ದೇಶವಾಸಿಗಳನ್ನು ಉದ್ದೇಶಿಸಿ ಭಾಷಣ ಮಾಡುವುದು ವರ್ಷಕ್ಕೆ ಎರಡೇ ಬಾರಿ. ಒಂದು ಸ್ವಾತಂತ್ರ್ಯ ದಿನಾಚರಣೆ, ಮತ್ತೊಂದು ಗಣರಾಜ್ಯೋತ್ಸವ. ಹೆಚ್ಚಾಗಿ ಈ ಭಾಷಣಗಳು ಜನಹಿತವನ್ನು ಗಮನದಲ್ಲಿಟ್ಟುಕೊಂಡು ದೇಶದ ಸಮಗ್ರತೆಗೆ ಒತ್ತು ನೀಡುವ ಒಂದು ರೀತಿಯ ಆಪ್ತ ಸಲಹೆ ರೂಪದಲ್ಲಿರುತ್ತವೆ. ಮೊದಲೆಲ್ಲ ಈ ಭಾಷಣಗಳಿಗೆ ಇನ್ನಿಲ್ಲದ ಸುದ್ದಿ ಮೌಲ್ಯ ಇರುತ್ತಿತ್ತು. ಜನ ರೇಡಿಯೊಗಳಿಗೆ ಕಿವಿ ಹಚ್ಚಿ ರಾಷ್ಟ್ರಪತಿಯ ಭಾಷಣ ಆಲಿಸುತ್ತಿದ್ದರು. ನಂತರ ತಮ್ಮತಮ್ಮಲ್ಲಿ ಚರ್ಚಿಸಿಕೊಳ್ಳುತ್ತಿದ್ದರು. ಪತ್ರಿಕೆಗಳ ಸುದ್ದಿಮನೆಗಳಲ್ಲಿ ಸಹ ಇದಕ್ಕೆ ಭಾರಿ ಮಹತ್ವ ನೀಡಲಾಗುತ್ತಿತ್ತು. ರಾಷ್ಟ್ರಪತಿ ಆಡಿದ ಪ್ರತಿ ಮಾತನ್ನೂ ಪತ್ರಿಕೆಗಳು ಶ್ರದ್ಧೆಯಿಂದ, ಚಾಚೂ ತಪ್ಪದೆ ಅಚ್ಚು ಮಾಡುತ್ತಿದ್ದವು. ಕಾಲಕ್ರಮೇಣ ಸುದ್ದಿಯ ಸಾರ, ವಿಸ್ತಾರ, ಸ್ವರೂಪ ಬದಲಾದಂತೆ ಈ ಭಾಷಣಗಳಿಗೆ ಸಿಗುತ್ತಿದ್ದ ಪ್ರಾಶಸ್ತ್ಯವೂ ಕ್ಷೀಣಿಸಿದವು. ಈ ಇಡೀ ಪ್ರಕ್ರಿಯೆಯನ್ನು ಒಂದು ಅನಿವಾರ್ಯ ಶಾಸ್ತ್ರ ಎಂದು ನೋಡುವಂತಾಯಿತು. ಇತ್ತೀಚಿನ ದಿನಗಳಲ್ಲಂತೂ ಈ ಭಾಷಣಗಳನ್ನು ನೋಡುವವರ, ಕೇಳುವವರ, ಓದುವವರ ಸಂಖ್ಯೆಯೂ ಕ್ಷೀಣಿಸುತ್ತಿದೆ. ಧಾವಂತದ ಬದುಕಿನಲ್ಲಿ ಜನರಿಗೆ ಅಷ್ಟೊಂದು ಪುರುಸೊತ್ತಾದರೂ ಎಲ್ಲಿಂದ ಇರಬೇಕು? ಇಂತಹುದೇ ಸಂದರ್ಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮೊನ್ನೆ ಗಣರಾಜ್ಯೋತ್ಸವದ ಮುನ್ನಾ ದಿನ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದರು. ಇದೂ ಸಹ ಅವರ ಹಿಂದಿನ ಮತ್ತು ಹಿಂದಿನವರ ಭಾಷಣಗಳಂತೆ ಚುನಾವಣಾ ಜ್ವರ ಏರುತ್ತಿರುವ ಸಂದರ್ಭದಲ್ಲಿ ಕಳೆದುಹೋಗುವ, ಇತಿಹಾಸದ ಕಡತಗಳಲ್ಲಿ ಮಾತ್ರ ದಾಖಲಾಗುವ ಭಾಷಣವಾಗುವ ಸಾಧ್ಯತೆ ಇತ್ತು. ಆದರೆ, ಹಾಗಾಗಲಿಲ್ಲ. ಸಾಮಾನ್ಯವಾಗಿ ರಾಜಕೀಯ ಪಕ್ಷಗಳು ರಾಷ್ಟ್ರಪತಿಗಳ ಇಂತಹ ಭಾಷಣಗಳ ಬಗೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಅವರು ಸಂಸತ್ತನ್ನು ಉದ್ದೇಶಿಸಿ 'ನನ್ನ ಸರ್ಕಾರ' ಎಂದು ಓದುವ ಭಾಷಣಗಳಿಗಷ್ಟೇ ರಾಜಕೀಯ ಚರ್ಚೆ, ಟೀಕೆ, ಸ್ವಾಗತಗಳು ಸೀಮಿತವಾಗಿರುತ್ತವೆ. ಆದರೆ, ಪ್ರಣಬ್ ಮುಖರ್ಜಿ ಅವರು ಭಾಷಣ ಮುಗಿಸಿದ ತರುವಾಯದಲ್ಲೇ ಅದಕ್ಕೆ ರಾಜಕೀಯದ 'ತೂ ತೂ ಮೇ ಮೇ' ಎಂಬಂತಹ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಈ ಭಾಷಣದಲ್ಲಿ ರಾಷ್ಟ್ರಪತಿ ಯಾರಿಗೆ ಚಚ್ಚಿದ್ದಾರೆ, ಯಾರನ್ನು ಗಮನದಲ್ಲಿಟ್ಟುಕೊಂಡು ಭಾಷಣ ಮಾಡಿದ್ದಾರೆ? ಹಾಗಾದರೆ ಈ ಬಾರಿ ರಾಷ್ಟ್ರಪತಿ ನಿಜಕ್ಕೂ ರಾಜಕೀಯ ಲೇಪಿತ ಭಾಷಣ ಮಾಡಿದರೆ? ಜನರನ್ನು ಉದ್ದೇಶಿಸಿ ಮಾತನಾಡುವ ನೆಪದಲ್ಲಿ ರಾಜಕೀಯ ಪಕ್ಷಗಳ ಕಿವಿ ಹಿಂಡುವ ಪ್ರಯತ್ನ ಮಾಡಿದರೆ?
Populist anarchy cannot be a substitute for governance! (ಜನಪ್ರಿಯತೆಯ ಅಮಲಿನಲ್ಲಿ ಸೃಷ್ಟಿಯಾಗುವ ಅರಾಜಕತೆ ವ್ಯವಸ್ಥಿತ ಆಡಳಿತಕ್ಕೆ ಎಂದಿಗೂ ಪರ್ಯಾಯ ಆಗಲು ಸಾಧ್ಯವಿಲ್ಲ). ಜನದನಿಯ ವಕ್ತಾರರೂ, ಜನಪರರು ಎಂದು ಬೀದಿಗಿಳಿದು ಘೋಷಣೆ ಕೂಗಿ, ಬಸ್ಸುಗಳಿಗೆ ಕಲ್ಲು ತೂರಿ, ಪೊಲೀಸರೊಂದಿಗೆ ಸೆಣಸಾಡಿ ಆ ಕ್ಷಣಕ್ಕೆ ಜನರಿಂದ ಭೇಷ್ ಎನಿಸಿಕೊಳ್ಳಬಹುದು. ಅದೇ ಆವೇಶದಲ್ಲಿ ಜನಮತ ಪಡೆದು ಆಡಳಿತಕ್ಕೂ ಬರಬಹುದು. ಆದರೆ, ಆಡಳಿತದ ಚುಕ್ಕಾಣಿ ಹಿಡಿದ ಮೇಲೆಯೂ ಅದೇ ಹಾದಿ ತುಳಿದರೆ ಅದು ಪರ್ಯಾಯ ಆಡಳಿತ ಎನಿಸಿಕೊಳ್ಳುವುದಿಲ್ಲ. ಬದಲಿಗೆ ಅಲ್ಲಿ ಆವರಿಸುವುದು ಅರಾಜಕತೆಯ ಶೂನ್ಯವಷ್ಟೆ. ಇದಕ್ಕೆ ತಕ್ಕ ಉದಾಹರಣೆ ಎಂದರೆ ಆಮ್ ಆದ್ಮಿ ಪಾರ್ಟಿಯ ಆಡಳಿತ ವೈಖರಿ. ಭ್ರಷ್ಟಾಚಾರದ ವಿರುದ್ಧ ಜನರಲ್ಲಿದ್ದ ಆಕ್ರೋಶವನ್ನೇ ಬಿಲ್ಲನ್ನಾಗಿಸಿ ದಿಲ್ಲಿ ಗದ್ದುಗೆಗೆ ಬಾಣ ಹೊಡೆಯುವುದರಲ್ಲಿ ಯಶಸ್ವಿಯಾದ ಆಮ್ ಆದ್ಮಿ ಪಕ್ಷ ಒಂದೇ ತಿಂಗಳಲ್ಲಿ ಸೃಷ್ಟಿಸಿರುವ ಆಡಳಿತ ಶೂನ್ಯ ಯಾರೇ ಆದರೂ ದಿಗಿಲು ಪಡುವಂತಹುದೇ ಆಗಿದೆ. ಒಂದು ರಾಜ್ಯದ ಮುಖ್ಯಮಂತ್ರಿಯ ಹೆಸಿಯತ್ ಮರೆತು ಅರವಿಂದ ಕೇಜ್ರಿವಾಲ್ ತನ್ನದೇ ಪೊಲೀಸರ ವಿರುದ್ಧ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದ ರೀತಿ, ಅದು ಜನರಿಗೆ ಉಂಟು ಮಾಡಿದ ಅನಾನುಕೂಲತೆ ಮತ್ತು ಸ್ವತಃ ಕೇಜ್ರಿವಾಲ್ ತಾನು ಅರಾಜಕತಾವಾದಿ ಎಂದು ಘೋಷಿಸಿದ್ದು, ಇದಾವುದರಿಂದಲೂ ದಿಲ್ಲಿಯ ಜನರ ನೆಮ್ಮದಿ ಕಾಪಾಡಲು ಸಾಧ್ಯವಾಗುವುದಿಲ್ಲ. ಒಂದೂವರೆ ದಶಕದ ಏಕ ಪ್ರಕಾರ ಆಡಳಿತ, ಕೇಂದ್ರ ಸರ್ಕಾರದ ವಿರುದ್ಧ ಮಡುಗಟ್ಟಿದ್ದ ರೋಷದ ಫಲವಾಗಿ, ಹೊಸ ಭರವಸೆಗಳ ಬೀಜ ನೆಟ್ಟ ಕೇಜ್ರಿವಾಲರ ಆಪ್ ಅನ್ನು ದಿಲ್ಲಿ ಜನ ಅಪ್ಪಿಕೊಂಡಿದ್ದು ಅವರು ಚಳವಳಿಗಾರನಂತೆ ಬೀದಿಗಳಿದ ಧರಣಿ, ಪ್ರತಿಭಟನೆ ನಡೆಸಲು, ವ್ಯವಸ್ಥೆಯ ವಿರುದ್ಧ ಘೋಷಣೆ ಕೂಗಲಿ ಎಂದಲ್ಲ. ಬದಲಿಗೆ ಯಾವ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ, ಸುಧಾರಣೆ ಬೇಕೆಂದು ತಾವು ಬೀದಿಗಿಳಿದು ಹೋರಾಟ ಮಾಡಿದ್ದೆವೋ ಮತ್ತು ಅದನ್ನು ಸಾಧ್ಯವಾಗಿಸಲಿ ಎಂದು ತಮ್ಮ ನಡುವೆ ಇದ್ದವರನ್ನೇ ಆಯ್ಕೆ ಮಾಡಿ ಕಳುಹಿಸಿದ್ದೆವೋ ಅವರು ಅದನ್ನು ಈಡೇರಿಸಲಿ ಎಂದು. ಮಾತೆತ್ತಿದರೆ ಎಸ್ಎಂಎಸ್, ಇಂಟರ್ನೆಟ್ ಮೂಲಕ ಜನಾಭಿಪ್ರಾಯ ಪಡೆದು ಆಡಳಿತ ನಡೆಸುವುದಾಗಿ ಹೇಳುವ ಕೇಜ್ರಿವಾಲ್ ತಾವು ಎರಡು ದಿನ ದಿಲ್ಲಿಯ ರಸ್ತೆಗಳಲ್ಲಿ ಸೃಷ್ಟಿಸಿದ ಅರಾಜಕತೆ ಬಗ್ಗೆ ಜನಾಭಿಪ್ರಾಯ ಪಡೆದಿದ್ದರಾ? ಧರಣಿ ಕೂಡುವಂತೆ, ಸಂಚಾರ ಸ್ತಬ್ಧಗೊಳಿಸುವಂತೆ, ನಿತ್ಯದ ಬದುಕು ಹೈರಾಣಾಗಿಸುವಂತೆ ಜನರೇ ಕೇಜ್ರಿವಾಲ್ಗೆ ಹೇಳಿದ್ದರಾ? ಮುಂದೊಂದು ದಿನ ಇದೇ ಕೇಜ್ರಿವಾಲ್ಗೆ ದೇಶವನ್ನಾಳುವ ಅವಕಾಶ ಲಭಿಸೀತೆಂದು ಕಲ್ಪಿಸಿಕೊಳ್ಳಿ. ಆಗ ಅವರು ಸಣ್ಣಪುಟ್ಟ ಸಮಸ್ಯೆಗಳಿಗೆ ಜನರನ್ನು ಗುಂಪು ಕಟ್ಟಿಕೊಂಡು ರಾಷ್ಟ್ರಪತಿ ಭವನದ ಮುಂದೆ ಧರಣಿ ಕುಳಿತು ಅವರ ವಿರುದ್ಧವೇ ಘೋಷಣೆ ಕೂಗುವುದಿಲ್ಲ ಅಥವಾ ಅವರ ರಾಜೀನಾಮೆಯನ್ನೇ ಕೇಳುವುದಿಲ್ಲ ಎಂಬುದಕ್ಕೆ ಯಾವ ಗ್ಯಾರಂಟಿ ಇದೆ? ವ್ಯವಸ್ಥೆಯನ್ನು ಸುಧಾರಿಸುವ ಬದಲು ಅದನ್ನೇ ಬುಡಮೇಲು ಮಾಡಬೇಕೆಂದು ಪಟ್ಟು ಹಿಡಿಯುವುದಿಲ್ಲ ಎಂದು ನಂಬಲು  ಹೇಗೆ ತಾನೆ ಸಾಧ್ಯ? ಇಂತಹ ಅರಾಜಕತೆಯ ಅಪಾಯದ ಬಗ್ಗೆ ಜನರನ್ನು ಎಚ್ಚರಿಸುವುದು, ಅವರಿಗೆ ಕಿವಿ ಮಾತು ಹೇಳುವುದು ರಾಷ್ಟ್ರಪತಿಯ ಕರ್ತವ್ಯ ಎನ್ನುವುದಾದರೆ, ಅವರು ಅದನ್ನೇ ಮಾಡಿದ್ದಾರೆ. ಅವರ ಭಾಷಣದಲ್ಲಿ ಇಂತಹ ಆತಂಕ ವ್ಯಕ್ತವಾಗಿರುವುದಕ್ಕೆ ಕೇಜ್ರಿವಾಲರಂಥವರ ವರ್ತನೆಯೇ ಕಾರಣ ಎನ್ನಲು ಯಾವುದೇ ಅಡ್ಡಿಯಿಲ್ಲ. ಪ್ರಣಬ್ ತಮ್ಮ ಭಾಷಣದ ಕಡೆಯಲ್ಲಿ ಮತ್ತೊಂದು ಮಾತು ಹೇಳಿದರು.
Mavericks who question the integrity of our armed services are irresponsible and should find no place in public life  (ನಮ್ಮ ರಕ್ಷಣಾ ಪಡೆಗಳ ಬದ್ಧತೆಯನ್ನು ಪ್ರಶ್ನಿಸುವ ಸಿನಿಕರು ಹೊಣೆಗೇಡಿಗಳು. ಸಾರ್ವಜನಿಕ ಜೀವನದಲ್ಲಿ ಅಂಥವರಿಗೆ ಸ್ಥಾನ ಇರಕೂಡದು). ರಕ್ಷಣಾ ಪಡೆಗಳ ಸರ್ವೋಚ್ಚ ನಾಯಕರಾಗಿರುವ ರಾಷ್ಟ್ರಪತಿ ಪಡೆಗಳನ್ನು ಹಾಡಿ ಹೊಗಳಬೇಕಾದ್ದು ಸಹಜ. ಆದರೆ, ಈ ಮಾತಿನಲ್ಲಿದ್ದುದು ಒಂದು ರೀತಿಯ ವಿಷಾದ. ನಮ್ಮ ಸೈನಿಕರನ್ನು ಕೀಳುಗರಿಯುವ ಮನಸ್ಸುಗಳ ಬಗೆಗೆ ಆಕ್ರೋಶ ಅಲ್ಲಿ ಅಡಕವಾಗಿತ್ತು. ಇದಕ್ಕೂ ಕಾರಣ ಇಲ್ಲದಿಲ್ಲ. ದಿಲ್ಲಿಯಲ್ಲಿ ಆಮ್ ಆದ್ಮಿ ಪಕ್ಷ ಆಡಳಿತದ ಅ, ಆ, ಇ, ಈ ಕಲಿಯಲು ಆರಂಭಿಸುವ ಮುನ್ನವೇ ಆ ಪಕ್ಷದ ಮೆದುಳಿನಂತೆ, ಸಿದ್ಧಾಂತಿಯಂತೆ ಗುರುತಿಸಿಕೊಂಡಿರುವ ಪ್ರಶಾಂತ್ ಭೂಷಣ್ ತಮ್ಮ ನಾಲಗೆಯನ್ನು ಹರಿಯಬಿಟ್ಟರು. ಕಾಶ್ಮೀರದಲ್ಲಿ ಸೇನಾಪಡೆ ಬೇಕೇ ಬೇಡವೇ ಎಂಬ ಬಗ್ಗೆ ಜನಾಭಿಪ್ರಾಯ ಪಡೆಯಬೇಕೆಂದೂ, ಅವರು ಬೇಡ ಎಂದರೆ ಸೇನೆಯನ್ನು ವಾಪಸ್ ಕರೆಸಿಕೊಳ್ಳಬೇಕು ಎಂದೂ ಹೇಳಿದರು. ಅಷ್ಟೇ ಅಲ್ಲ, ದೇಶದ ಭದ್ರತೆಗೆ ಸವಾಲಾಗಿರುವ ನಕ್ಸಲರ ಬೆನ್ನು ಹತ್ತಲು ಸೇನಾ ಅಥವಾ ಅರೆಸೇನಾ ಪಡೆಗಳನ್ನು ನಿಯೋಜಿಸಬಾರದು ಎಂಬ ಅಸಂಬದ್ಧ ಹೇಳಿಕೆಯನ್ನು ಕೊಟ್ಟರು. ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಸಹ ಸೇನೆಗೆ ನೀಡಲಾಗಿರುವ ವಿಶೇಷಾಧಿಕಾರ ಹಿಂತೆಗೆದುಕೊಳ್ಳಬೇಕೆಂದು ರಾಜಕೀಯ ಹೋರಾಟ ನಡೆಸುತ್ತಿದ್ದಾರೆಯೇ ಹೊರತು ತಮ್ಮ ರಾಜ್ಯದಿಂದ ಸೇನೆಯನ್ನು ವಾಪಸ್ ಕರೆಸಿಕೊಳ್ಳಬೇಕೆಂಬ ಬೇಜವಾಬ್ದಾರಿ ಹೇಳಿಕೆ ನೀಡಿಲ್ಲ. ಇಷ್ಟಕ್ಕೂ ಇದು ದೇಶದ ಗಡಿಗೆ ಸಂಬಂಧಿಸಿದ ಸೂಕ್ಷ್ಮ ವಿಷಯ. ಅಫ್ಘಾನಿಸ್ತಾನದಿಂದ ತನ್ನ ಯೋಧರ ಕಡೆಯ ತುಕಡಿಯನ್ನೂ ವಾಪಸ್ ಕರೆಸಿಕೊಳ್ಳಲು ಅಮೆರಿಕ ಸಿದ್ಧತೆ ನಡೆಸಿದೆ. ಇಂತಹ ಸಂದರ್ಭದಲ್ಲಿ ಕಾಶ್ಮೀರದಿಂದ ಸೇನೆಯನ್ನು ಹಿಂತೆಗೆದುಕೊಂಡರೆ ಅಲ್ಲಿಗೆ ನುಸುಳಿ ಭಯೋತ್ಪಾದನೆಯ ಹೊಸ ಪರ್ವ ಆರಂಭಿಸಲು ಆಫ್ಘನ್ನ ಜಿಹಾದಿ ತಾಲಿಬಾನಿಗಳಿಗೆ ವೀಳ್ಯ ನೀಡಿದಂತಾಗುತ್ತದೆ. ಇದರಿಂದ ದೇಶದ ಸಮಗ್ರತೆಗೆ ಪೆಟ್ಟು ಬೀಳುತ್ತದೆ ಎಂಬ ಸಾಮಾನ್ಯ ಜ್ಞಾನ ಸಹ ಪ್ರಶಾಂತ್ ಭೂಷಣ್ಗೆ ಇದ್ದಂತಿಲ್ಲ. ಇನ್ನು ಅರೆಸೇನಾ ಪಡೆಗಳ ಗುಂಡಿಗೇ ತಲೆಬಾಗದಿರುವ ನಕ್ಸಲರು ಪೊಲೀಸರ ಬಲೆಗೆ ಬೀಳುತ್ತಾರೆಯೇ? ಅದು ಅಷ್ಟು ಸಾಮಾನ್ಯ ವಿಷಯವೇ? ಇನ್ನು ಪ್ರಶಾಂತ್ ಭೂಷಣ್ರಂಥವರು ಆಡಳಿತದ ಆಯಕಟ್ಟಿನ ಸ್ಥಾನದಲ್ಲಿ ಕುಳಿತರೆ ದೇಶದ ಯೋಧರ, ರಕ್ಷಣಾ ಪಡೆಗಳ ಸ್ಥೈರ್ಯ ಕುಗ್ಗುವುದಿಲ್ಲವೇ? ರಾಷ್ಟ್ರಪತಿ ಭಾಷಣದಲ್ಲಿ ವ್ಯಕ್ತವಾಗಿರುವುದೂ ಇದೇ ನಿಲುವೇ.
Government is not a charity shop!  ಇದು ಪ್ರಣಬ್ ಬಾಯಿಂದ ಉದುರಿದ ಮತ್ತೊಂದು ಆಣಿಮುತ್ತು. ಕಳೆದ ದಶಕದ ಯುಪಿಎ ಆಡಳಿತದಅವಧಿಯಲ್ಲಿ ಸರ್ಕಾರ ಮಾಡಿದ್ದು ಇದನ್ನೇ. ಖಜಾನೆಯಲ್ಲಿರುವ ದುಡ್ಡನ್ನು ದತ್ತಿಗೆ ಕೊಟ್ಟಂತೆ ಕೊಟ್ಟು ಈಗ ಆರ್ಥಿಕ ಸಂಕಷ್ಟವನ್ನು ಮೈಮೇಲೆ ಎಳೆದುಕೊಂಡಿರುವುದು ವಾಸ್ತವ. ನರೇಗಾ, ಆಹಾರ ಭದ್ರತೆ, ಸಾಲಮನ್ನಾ, ಹೀಗೆ ಸರ್ಕಾರದ ಅನೇಕ ಯೋಜನೆಗಳು ಆಡಳಿತವನ್ನು ದತ್ತಿ ಅಂಗಡಿಯ ಮಟ್ಟಕ್ಕೆ ಇಳಿಸಿದ್ದನ್ನು ಯಾರೂ ಮರೆಯುವಂತಿಲ್ಲ. ಈ ಕ್ರಮಗಳಿಂದ ದುಡಿಯುವ ಕೈಗಳಿಂದ ದುಡಿಮೆಯನ್ನೇ ಕಿತ್ತುಕೊಂಡಂತಾಗಿದೆ. ಇದರಿಂದಾಗಿ ಕಳೆದ ಮೂರು ವರ್ಷಗಳಲ್ಲಿ ಆರ್ಥಿಕ, ಪರಿಸ್ಥಿತಿ, ಸುಧಾರಣಾ ಕ್ರಮಗಳು ಅಡ್ಡದಾರಿ ಹಿಡಿದಿವೆ. ಇದರ ಜೊತೆಗೆ ಭ್ರಷ್ಟಾಚಾರ ಜನರಲ್ಲಿ ಒಂದು ರೀತಿಯ ರೇಜಿಗೆ ಹುಟ್ಟಿಸಿದೆ (ಇದೆಲ್ಲ ನಡೆಯುವಾಗ ಸ್ವತಃ ಪ್ರಣಬ್ ಮುಖರ್ಜಿ ಸರ್ಕಾರದ ಭಾಗವಾಗಿದ್ದರು ಎಂಬುದು ವಿಪರ್ಯಾಸ). ಇಂತಹ ಪರಿಸ್ಥಿತಿಯಲ್ಲಿ ಮತದಾರನ ಮುಂದೆ ಗಟ್ಟಿ ಭವಿಷ್ಯ ಬರೆಯುವ ಅಥವಾ ಗೊಂದಲಕಾರಿ ಪರಿಸ್ಥಿತಿ ಹುಟ್ಟುಹಾಕುವ ಎರಡು ಆಯ್ಕೆಗಳಿವೆ. ಸೂಕ್ತ ಬಹುಮತ ಇಲ್ಲದ ಅವಕಾಶವಾದಿಗಳ ಮರ್ಜಿಗೆ ನಡೆಯುವ ಸರ್ಕಾರ ಭಾರತದ ಅಭಿವೃದ್ಧಿಗೆ ಮಾರಕ. ಇದು ರಾಷ್ಟ್ರಪತಿ ಭಾಷಣದಲ್ಲೂ ಅಡಕವಾಗಿರುವ ಆತಂಕ. ಇದನ್ನೆಲ್ಲ ಗಮನಿಸಿದರೆ ಪ್ರಣಬ್ ಭಾಷಣ ಖಂಡಿತವಾಗಿಯೂ ರಾಜಕೀಯ ಲೇಪಿತ ಎನ್ನಬಹುದು. ಆದರೆ, ಇಂದಿನ ಪರಿಸರದಲ್ಲಿ ಅಂತಹ ಹಿತವಚನ ತಪ್ಪು ಎಂದು ಭಾವಿಸಲಾಗದು. '1950ರಲ್ಲಿ ನಮ್ಮ ಗಣತಂತ್ರ ಜನ್ಮ ತಾಳಿತು. 2014ರಲ್ಲಿ ಅದು ರೆಕ್ಕೆಬಿಚ್ಚಿ ಸ್ವಚ್ಛಂದವಾಗಿ ಹಾರುವಂತಾಗಲಿ' ಎಂಬ ಪ್ರಣಬ್ ಮಾತುಗಳು ಚುನಾವಣೆಗೆ ಸಜ್ಜಾಗಿ ನಿಂತಿರುವ ರಾಜಕೀಯ ಪಕ್ಷಗಳು ಹಾಗೂ ಅದಕ್ಕಿಂತ ಮುಖ್ಯವಾಗಿ ಮತದಾರರಿಗೆ ಸ್ಪಷ್ಟ, ಆದರೆ, ಎಚ್ಚರಿಕೆ ಮಿಶ್ರಿತ ಸಂದೇಶವಿದೆ.

-ಕೆ.ಎಸ್.ಜಗನ್ನಾಥ್
jagannath.kudinoor@gmail.com


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com