ಅಲ್ಪಸಂಖ್ಯಾತರ ತುಷ್ಟೀಕರಣ, ಕೋಮುವಾದ ವೈಭವೀಕರಣ

ಎ.ಕೆ.ಆಂಟನಿ ಅವರು ಗುದ್ದಾಟಗಳಿಂದ ಸುದ್ದಿಯಲ್ಲಿರುವ ವ್ಯಕ್ತಿ ಅಲ್ಲವೇ ಅಲ್ಲ...
ಅಲ್ಪಸಂಖ್ಯಾತರ ತುಷ್ಟೀಕರಣ, ಕೋಮುವಾದ ವೈಭವೀಕರಣ

ಎ. ಕೆ. ಆಂಟನಿ ಅವರು ಗುದ್ದಾಟಗಳಿಂದ ಸುದ್ದಿಯಲ್ಲಿರುವ ವ್ಯಕ್ತಿ ಅಲ್ಲವೇ ಅಲ್ಲ. ಮೌನದ ಮೂಲಕವೇ ಮಾತನಾಡಿ ಸದ್ದಿಲ್ಲದೇ ತಮ್ಮ ಕಾರ್ಯವನ್ನು ಅನುಷ್ಠಾನಗೊಳಿಸುವ ಜಾಯಮಾನ ಅವರದ್ದು. ಆದರೆ ತಮ್ಮದೊಂದು ಸರಳ ಹೇಳಿಕೆಯ ಮೂಲಕ ಅವರು ಈ ಬಾರಿ ತಮ್ಮ ಪಕ್ಷದಲ್ಲಿ ಮಾತ್ರವಲ್ಲದೇ ಉಳಿದೆಲ್ಲ ರಾಜಕೀಯ ಪಕ್ಷಗಳಲ್ಲೂ ಕಂಪನವನ್ನು ಹುಟ್ಟುಹಾಕಿದ್ದಾರೆ. 'ರಾಜಕೀಯ ಕಾರಣಗಳಿಗಾಗಿ ಅಲ್ಪಸಂಖ್ಯಾತರನ್ನು ತುಷ್ಟೀಕರಿಸುವ ನೀತಿಯು ಕೋಮುವಾದಿ ಶಕ್ತಿಗಳನ್ನು ಬಲಪಡಿಸಿದೆ' ಎಂದು ಹೇಳಿದ್ದಕ್ಕೆ ವ್ಯಕ್ತವಾದ ಪ್ರತಿರೋಧ, ಮುಜುಗರ, ಸಮರ್ಥನೆಗಳೆಲ್ಲ ಆಂಟನಿ ಅವರ ಹೇಳಿಕೆಯಲ್ಲಿ ಸತ್ಯವಿದೆ ಎಂಬುದನ್ನು ಜಾಹೀರು ಮಾಡಿದೆ. ಸತ್ಯ ಯಾವತ್ತೂ ನೋವು ತರುತ್ತದೆ.
ಕೇರಳದ ಈ ಕಾಂಗ್ರೆಸ್ ನಾಯಕ ಇಂಥ ಮಾತನಾಡಿದ್ದು ತಮ್ಮ ರಾಜ್ಯ ಹಾಗೂ ಪಕ್ಷದ ಸ್ಥಿತಿಗತಿಗಳನ್ನು ಬಿಂಬಿಸುವ ನಿಟ್ಟಿನಲ್ಲಿ. ಆದರೆ ಲಾಗಾಯ್ತಿನಿಂದಲೂ ದೇಶದೆಲ್ಲೆಡೆ ರಾಜಕೀಯ ಪಕ್ಷಗಳು ಚುನಾವಣೆಯನ್ನು ಗೆಲ್ಲುವುದಕ್ಕೋಸ್ಕರ ಧರ್ಮ ಮತ್ತು ಜಾತಿಗಳ ಆಧಾರದಲ್ಲಿ ವಿಶೇಷ ಸವಲತ್ತುಗಳನ್ನು ಘೋಷಿಸುವುದು ರೂಢಿಯಾಗಿಬಿಟ್ಟಿದೆ. ಇಂಥ ಮತಬ್ಯಾಂಕ್ ಚೌಕಾಶಿಗಳ ಆಧಾರದಲ್ಲೇ ಮುಲಾಯಂ ಸಿಂಗ್, ಲಾಲು ಪ್ರಸಾದ್ ಯಾದವ್, ಮಾಯಾವತಿ ಇವರೆಲ್ಲ ತಮ್ಮ ಅಧಿಕಾರ ಸಾಮ್ರಾಜ್ಯಗಳನ್ನು ಕಟ್ಟಿಕೊಂಡಿದ್ದು. ಕಾಂಗ್ರೆಸ್ ನೇತಾರ ರಾಜೀವ್ ಗಾಂಧಿಯವರು ಇದನ್ನು ವ್ಯತಿರಿಕ್ತ ಹಂತಕ್ಕೆ ತೆಗೆದುಕೊಂಡುಹೋದರು. ಮಡಿವಂತ ಹಿಂದುಗಳನ್ನು ಖುಷಿಪಡಿಸುವುದಕ್ಕಾಗಿ ಬಾಬರಿ ಮಸೀದಿಯ ಬೀಗ ತೆಗೆಸುವ ನಿರ್ಧಾರವನ್ನು ಅವರು ತೆಗೆದುಕೊಂಡರು. ಇದಕ್ಕೂ ಮೊದಲು ಶಹಬಾನು ಪ್ರಕರಣ ನಡೆದಿತ್ತು. ಗಂಡನಿಂದ ಕಾನೂನಿಗೆ ವಿರುದ್ಧವಾಗಿ ವಿಚ್ಛೇದನವಾದಾಗ ಆಕೆ ಕೋರ್ಟ್ ಮೆಟ್ಟಿಲೇರಿದ್ದಳು. ಈ ಬಗ್ಗೆ ಕ್ರೋಧಗೊಂಡ ಮಡಿವಂತ ಮುಸ್ಲಿಮರನ್ನು ಸಂತೃಪ್ತಗೊಳಿಸುವುದಕ್ಕಾಗಿಯೇ ಕಾಂಗ್ರೆಸ್ ಸರ್ಕಾರ ಕಾನೂನಿಗೇ ತಿದ್ದುಪಡಿ ತಂದಿತ್ತು.
ಅಲ್ಪಸಂಖ್ಯಾತರನ್ನು ಓಲೈಸಬೇಕಾದ ಚುನಾವಣೆಯ ತುರ್ತುಗಳಿಗೆ ಎಡಪಂಥೀಯ ಸಿದ್ಧಾಂತದವರೂ ಮಣಿದಿದ್ದಿದೆ. ಕೇರಳದ ಮುಸ್ಲಿಮರನ್ನು ಸಂತೋಷಪಡಿಸುವುದಕ್ಕಾಗಿ ಮಲಪ್ಪುರಮ್ ಎಂಬ ಹೊಸಜಿಲ್ಲೆಯನ್ನು ರೂಪಿಸಿದ್ದು ಎಡಪಂಥೀಯ ನೇತಾರ ಇಎಮ್‌ಎಸ್ ನಂಬದೂರಿಪಾಡ್. ಪಶ್ಚಿಮಬಂಗಾಳದಲ್ಲಿ 2011ರ ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಎಡಪಕ್ಷಗಳು ಮುಸ್ಲಿಮರಿಗೆ ಸರ್ಕಾರಿ ನೌಕರಿ ಮತ್ತು ಸರ್ಕಾರದ ಕಾಲೇಜುಗಳಲ್ಲಿ ಶೇ. 10ರ ಮೀಸಲು ಘೋಷಿಸಿದ್ದಲ್ಲದೇ ಇನ್ನೂ ಹಲವು ಆಕರ್ಷಣೆಗಳನ್ನು ಒಡ್ಡಿತು. ತಾನು ಉರ್ದುವಿನ ಸ್ಥಾನಮಾನವನ್ನು ಎತ್ತರಿಸುತ್ತೇನೆ ಹಾಗೂ ಇಮಾಮರ ಸಂಬಳವನ್ನು ಹೆಚ್ಚಿಸುತ್ತೇನೆ ಅಂತ ತೃಣಮೂಲ ಕಾಂಗ್ರೆಸ್ ಘೋಷಣೆ ಮಾಡಿತು.ಮಹಾರಾಷ್ಟ್ರದ ಕಾಂಗ್ರೆಸ್ ನೇತೃತ್ವದ ಸರ್ಕಾರ ಈಗ ಮುಸ್ಲಿಮರಿಗೆ ಮತ್ತು ಮರಾಠಾ ಮಂದಿಗೆ ವಿಶೇಷ ಮೀಸಲು ಕೊಡುವುದಾಗಿ ಹೇಳಿದೆ. ಶರದ್ ಪವಾರ್ ಇದನ್ನು ಬೆಂಬಲಿಸಿದರು. ತಾನೂ ಸಮಭಾವದಿಂದ ಇರುವುದಾಗಿ ಬಿಂಬಿಸುವುದಕ್ಕೆ ಬಿಜೆಪಿ ಸಹ ಒಂದು ವರ್ಗದ ಮುಸ್ಲಿಮರನ್ನು ಪುಸಲಾಯಿಸುತ್ತಿದೆ. ಆದರೆ ಆ ಪಾಳೆಯದ ಕಟ್ಟರ್ ಹಿಂದುತ್ವ ಸಮರ್ಥಕರ ದ್ವೇಷ ಭಾಷಣಗಳು ಮತ್ತು ಅಪರಾಧಗಳ ಢಾಳುತನದಿಂದ ಈ ನಡೆಗೆ ಯಾವ ಪ್ರಾಮುಖ್ಯವೂ ಬಂದಿಲ್ಲ.
ಹೀಗಾಗಿ ಆಂಟನಿ ಅವರು ಎತ್ತಿರುವ ವಿಚಾರ ನಮ್ಮ ಪ್ರಜಾಪ್ರಭುತ್ವದಲ್ಲಿ ಸರ್ವಾಂತರ್ಯಾಮಿ ಆಗಿರುವುದೇ ಆಗಿದೆ. ಇದು ಬಹಳ ವಿಶೇಷ. ಏಕೆಂದರೆ ಆಂಟನಿ ಅವರು ಆಸ್ತಿಕರಲ್ಲದಿದ್ದರೂ ಅಲ್ಪಸಂಖ್ಯಾತ ಕೋಮಿಗೇ ಸೇರಿದ್ದಾರೆ ಎಂಬುದು ಸತ್ಯ. ಇವರೇ ಅಲ್ಪಸಂಖ್ಯಾತ ತುಷ್ಟೀಕರಣವನ್ನು ವಿರೋಧಿಸಿ ಮಾತನಾಡಿದ್ದಾರೆ. ಅಲ್ಲದೇ, ಈ ತುಷ್ಟೀಕರಣ ನೀತಿಯು ಅಲ್ಪಸಂಖ್ಯಾತರಿಗೇ ಆಗಲೀ, ಪ್ರಜಾಪ್ರಭುತ್ವಕ್ಕೇ ಆಗಲೀ ಯಾವ ಸಹಾಯವನ್ನೂ ಮಾಡಿಲ್ಲ ಎಂಬುದು ತಿಳಿದಿರುವಂಥದ್ದೇ. ಅಲ್ಪಸಂಖ್ಯಾತರಿಗೆ ಏನೆಲ್ಲ ಹಕ್ಕು- ಸವಲತ್ತುಗಳನ್ನು ನೀಡುತ್ತ ಹೋದರೋ ಅದರಿಂದ ಆಯಾ ಸಮುದಾಯದ ನೇತಾರರು ದೊಡ್ಡವರಾದರೇ ವಿನಃ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸಾಮಾನ್ಯನಿಗೆ ಯಾವ ಪ್ರಯೋಜನಗಳೂ ಆಗಲಿಲ್ಲ. ಇವತ್ತಿಗೂ ಮುಸ್ಲಿಮರು ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿರುವುದನ್ನು ಇಲ್ಲಿ ಉದಾಹರಿಸಬಹುದು. ಸಮುದಾಯಕ್ಕೆ ನೀಡಿದ ಹಜ್ ಯಾತ್ರೆಯ ಲಾಭಗಳನ್ನು ರಾಜಕೀಯ ನಾಯಕರು ತಮ್ಮ ಸ್ವಾರ್ಥಕ್ಕೆ ಉಪಯೋಗಿಸಿಕೊಂಡಿದ್ದಾರೆ ಎಂಬುದು ವರದಿಗಳಿಂದ ಜಾಹೀರಾಗಿದೆ. ದಲಿತ ಸಮುದಾಯಕ್ಕೆ ನೀಡಿದ ಸವಲತ್ತುಗಳನ್ನು ಅಲ್ಲಿನ ನಾಯಕರೆನಿಸಿಕೊಂಡವರು ಉಪಯೋಗಿಸಿಕೊಂಡಿರಬಹುದೇ ಹೊರತು ಸಾಮಾನ್ಯ ದಲಿತನಿಗೆ ಯೋಜನೆಗಳು ಮುಟ್ಟಿಲ್ಲ. ಬಹಳಷ್ಟು ಕ್ರೈಸ್ತ ನಾಯಕರು ತಮ್ಮ ಒಡೆತನದ ಶಾಲೆ- ಕಾಲೇಜುಗಳನ್ನು ಲಾಭ ತರುವ ಉದ್ಯಮವನ್ನಾಗಿ ಮಾಡಿಕೊಳ್ಳುವುದಕ್ಕೆ ಮೈನಾರಿಟಿ ಪದವನ್ನು ಉಪಯೋಗಿಸಿಕೊಂಡಿದ್ದಾರೆ.
ಇದು ಅಲ್ಪಸಂಖ್ಯಾತ ಹಕ್ಕುಗಳ ದೌರ್ಭಾಗ್ಯ ಮಾತ್ರವಲ್ಲ, ಬದಲಿಗೆ ನಮ್ಮ ಪ್ರಜಾಪ್ರಭುತ್ವದ್ದೂ ಹೌದು. ರಾಜಕೀಯ ವ್ಯವಸ್ಥೆಯ ಆವರ್ತನ ಕ್ರಮವನ್ನು ಅರಿಸ್ಟಾಟಲ್ ವಿಶ್ಲೇಷಿಸಿದ್ದಾರೆ. ರಾಜಪ್ರಭುತ್ವವು ಅರಾಜಕತೆಯನ್ನು ಸೃಷ್ಟಿಸಿತು. ಹೀಗಾಗಿ ಒಬ್ಬ ರಾಜನಿಗಿಂತ ಹಲವು ಪ್ರಮುಖರು ಸೇರಿ ನಡೆಸುವ ಆಡಳಿತಕ್ಕೆ ಮೊದಲಾಯಿತು. ಅದು ಸಂವಿಧಾನದ ಪರಿಕಲ್ಪನೆಗಳಿಗೆ ಎಡೆ ಮಾಡಿಕೊಚ್ಚಿತು. ಇದೇ ನಂತರದಲ್ಲಿ ಜನರ ಹುಚ್ಚಾಟ ಎಂಬಂತೆ ಆಗಿ ಸರ್ವಾಧಿಕಾರಿತನವೇ ಮೇಲೆನಿಸಿತು. ಅಲ್ಲಿಗೆ ರಾಜಪ್ರಭುತ್ವದ ಹೆಸರಲ್ಲಿ ಯಾವ ರಾಜಕೀಯ ಪರಿಸ್ಥಿತಿ ಇತ್ತೋ ಅದು ಅಲ್ಲಿಗೇ ಬಂದು ನಿಂತಂತೆ ಆಗಿದೆ. ಅರಿಸ್ಟಾಟಲ್ ಜನರ ಹುಚ್ಚಾಟ ಎಂಬ ಪದ ಬಳಸಿರಲಿಲ್ಲ. ಆದರೆ ಪ್ರಜಾಪ್ರಭುತ್ವ ಎಂಬುದನ್ನು ಸೂಚಿಸಿದ್ದರು. ಈ ಪ್ರಜಾಪ್ರಭುತ್ವವೇ ಜನಸಮೂಹದ ಉನ್ಮಾದವಾಗುವ ಅಪಾಯವು ಅರಿಸ್ಟಾಟಲ್‌ಗೆ ಅರಿವಿತ್ತು. ಭಾರತವನ್ನು ಈಗ ಗಮನಿಸಿದರೆ ಅದೆಷ್ಟು ಸರಿ ಎಂದೆನಿಸುತ್ತಿದೆ.
ಆಂಟನಿ ಮಾತಿನ ತಿರುಳು ನಮ್ಮೆಲ್ಲರನ್ನು ಆತಂಕಿತರನ್ನಾಗಿ ಮಾಡಬೇಕಿದೆ. ಅಲ್ಪಸಂಖ್ಯಾತರ ತುಷ್ಟೀಕರಣವು ಕೋಮುವಾದಿ ಬಲವನ್ನು ವೃದ್ಧಿಗೊಳಿಸುತ್ತದೆ ಎಂದವರು ಹೇಳಿದ್ದಾರೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಅವರದ್ದೇ ರಾಜ್ಯ. ಕೇರಳದಲ್ಲಿ ಕ್ರೈಸ್ತರ ಓಲೈಕೆ ರಾಜಕಾರಣ ಹಾಗೂ ಇನ್ನೊಂದು ಬದಿಯಲ್ಲಿ ಮುಸ್ಲಿಂ ಲೀಗ್‌ನ ರಾಜಕಾರಣಗಳು ಅಲ್ಲಿನ ರಾಜಕೀಯವನ್ನು ವಿಷಮಗೊಳಿಸಿವೆ. ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯಗಳೆರಡರಲ್ಲೂ ಇರುವ ಸುಶಿಕ್ಷಿತ ಜನರು ರಾಜಕಾರಣಿಗಳು ಈ ಎರಡೂ ಧರ್ಮಗಳನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಅಸಹ್ಯ ಹೊಂದಿದ್ದಾರೆ. ಪಿಕೆ ಕುಂಜಾಲಿಕುಟ್ಟಿ ಹಲವು ಹಗರಣಗಳ ಕುಪ್ರಸಿದ್ಧಿಯ ರಾಜಕಾರಣಿ. ಇವರೊಮ್ಮೆ ತಾವು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಧಾರ್ಮಿಕ ಕಾರಣಗಳನ್ನು ಮುಂದೊಡ್ಡಿ ದೀಪ ಬೆಳಗುವುದಕ್ಕೆ ನಿರಾಕರಿಸಿದ್ದರು! ಇದಕ್ಕೆ ವ್ಯತಿರಿಕ್ತ ಚಿತ್ರಣ ಬೇಕಿದ್ದರೆ ನೀವು ವಾರಾಣಸಿಯ ಬುರ್ಖಾಧಾರಿ ಮಹಿಳೆಯರು 'ಸಹೋದರ ಮೋದಿ'ಗೆ ರಾಖಿ ಕಳುಹಿಸಿದ ಸಂಭ್ರಮವನ್ನು ನೆನಪಿಸಿಕೊಳ್ಳಬಹುದು. ದೀಪ ಬೆಳಗುವುದು ಅತಿ ಸುಂದರವಾದ ಭಾರತೀಯ ಸಂಪ್ರದಾಯ ಹಾಗೂ ರಾಖಿ ಕಟ್ಟುವುದು ಹಿಂದು ರಿವಾಜು. ಮುಸ್ಲಿಂಲೀಗ್‌ಗೆ ಸೇರಿದ ಶಿಕ್ಷಣ ಸಚಿವರು ಇತ್ತೀಚೆಗೆ ತಮ್ಮ ರಾಜ್ಯ ಕೇರಳದ ಶಾಲಾ ಬೋರ್ಡುಗಳನ್ನೆಲ್ಲ ಕಪ್ಪಿಗೆ ಬದಲಾಗಿ ಹಸಿರಿನಲ್ಲಿ ಇರಿಸಬೇಕು ಎಂದು ಫರ್ಮಾನು ಹೊರಡಿಸಿದ್ದರು. ಕೋಮುವಾದಿ ಶಕ್ತಿಗಳು ಕೇವಲ ಬೆಳೆಯುವುದಲ್ಲ, ಅತ್ಯಂತ ಮೂರ್ಖ ಬೆಳವಣಿಗೆಯನ್ನೂ ಪ್ರದರ್ಶಿಸಬಲ್ಲವು!
ಕೊನೆಯಲ್ಲಿ, ಅಲ್ಪಸಂಖ್ಯಾತರ ತುಷ್ಟೀಕರಣವನ್ನು ವಿರೋಧಿಸಬೇಕು ಎಂದು ಹೇಳುವವರು ಬಹುಸಂಖ್ಯಾತರ ತುಷ್ಟೀಕರಣವೂ ತಪ್ಪು ಎಂದು ಹೇಳುವ ಧೈರ್ಯ ತೆಗೆದುಕೊಂಡಾರೆಯೇ? ಈ ಗಲಾಟೆಯಲ್ಲಿ ಸಿಲುಕುವುದು ಯಾರಿಗೆ ಬೇಕಾಗಿದೆ?

-ಟಿಜೆಎಸ್ ಜಾರ್ಜ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com