ಬದುಕಿನ ವಿವಿಧ ಹಂತಗಳಲ್ಲಿ ನಮಗೆ ಯಾರ್ಯಾರೋ ಎದುರಾಗುತ್ತಾರೆ. ಆ ಪೈಕಿ ಕೆಲವರು ರಕ್ತಸಂಬಂಧಿಗಳಿಗಿಂತ ಹೆಚ್ಚು ಆಪ್ತರಾಗುತ್ತಾರೆ. ಅಗತ್ಯ ಸಂದರ್ಭಗಳಲ್ಲಿ ಸಲಹೆ ಕೊಡುತ್ತಾರೆ. ಸ್ವಲ್ಪ ಉದಾರಿಗಳಾದರೆ ಸಾಲವನ್ನೂ ಕೊಡುತ್ತಾರೆ. ನಾವು ಯಾವುದೋ ಹೊಸ ಸಂಕಟಕ್ಕೆ ಸಿಕ್ಕಿಕೊಂಡರೆ ಸಹಾಯಕ್ಕೆ ಧಾವಿಸುತ್ತಾರೆ. ಸಮಾಧಾನ ಹೇಳುತ್ತಾರೆ. ಸ್ವಾರಸ್ಯವೆಂದರೆ, ಆಕಸ್ಮಿಕವಾಗಿ ಪರಿಚಯವಾದವರ ಉಪಕಾರವನ್ನು ತೀರಿಸಲು, ಅವರ ಋಣಭಾರದಿಂದ ಮುಕ್ತರಾಗಲು ಜನ ಯೋಚಿಸುತ್ತಲೇ ಇರುತ್ತಾರೆ. ಪರಮಾಪ್ತರೊಂದಿಗೆ ಅಥವಾ ಕುಟುಂಬದವರೊಂದಿಗೆ ಅದೂ ಇದೂ ಮಾತಾಡುತ್ತಾ-'ಅವರು' ನಮಗೆ ಬದುಕಿನ ಪ್ರತಿ ಹಂತದಲ್ಲೂ ಮಾರ್ಗದರ್ಶನ ಮಾಡಿದ್ದಾರೆ. ಸಹಾಯಕ್ಕೆ ನಿಂತಿದ್ದಾರೆ. ಅವರ ಸಪೋರ್ಟ್ ಇಲ್ಲದೇ ಹೋಗಿದ್ರೆ ನಾವು ಈ ಸ್ಟೇಜ್‌ಗೆ ಬರಲು ಸಾಧ್ಯವೇ ಇರಲಿಲ್ಲ ಅನ್ನುತ್ತಾರೆ. ಅಷ್ಟೇ ಅಲ್ಲ, ತಮಗೆ ಸಹಾಯ ಮಾಡಿದವರಿಗೆ ಯಾವುದಾದರೂ ರೀತಿಯಲ್ಲಿ ಥ್ಯಾಂಕ್ಸ್ ಹೇಳಿ, ಅಬ್ಬಾ, ಕಡೆಗೂ ಅವರ ಋಣದಿಂದ ಸ್ವಲ್ಪ ಮಟ್ಟಿಗಾದರೂ ಮುಕ್ತನಾದೆ ಎಂದು ನಿಟ್ಟುಸಿರು ಬಿಡುತ್ತಾರೆ.
ಆದರೆ, ಇಲ್ಲಿ ಹೇಳಲೇಬೇಕಾದ ಸಂಗತಿಯೊಂದಿದೆ. ಏನೆಂದರೆ-ಗೆಳೆಯ, ಗೆಳತಿ, ಅಣ್ಣ, ತಮ್ಮ, ಅಕ್ಕ-ತಂಗಿ, ಸೋದರಮಾವ, ಕಂಪನಿಯ ಬಾಸ್... ಇವರೆಲ್ಲರ ಋಣವನ್ನೂ ತೀರಿಸಬಹುದು. ಆದರೆ ಹೆತ್ತವರ ಋಣ ತೀರಿಸುವುದು ಯಾರಿಂದಲೂ ಸಾಧ್ಯವಿಲ್ಲದ ಮಾತು. ಕೆಲವೊಂದು ಸಂದರ್ಭದಲ್ಲಿ ಮಕ್ಕಳು, ಅಪ್ಪ-ಅಮ್ಮನ ಋಣ ತೀರಿಸಬೇಕು ಎಂದೂ ಯೋಚಿಸುವುದುಂಟು. ಅಂಥದೊಂದು ಯೋಚನೆ ಮಾಡಿ, ಎಲ್ಲವನ್ನೂ ಕಮರ್ಷಿಯಲ್ ಆಗಿಯೇ ಲೆಕ್ಕ ಹಾಕಿ, ಕಡೆಗೆ ಇಂಗು ತಿಂದ ಮಂಗನಂತಾಗಿ ಅಮ್ಮನೆದುರು ತಲೆತಗ್ಗಿಸಿ ಕೂತ ಮಗನೊಬ್ಬನ ಕತೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನ್ನಿಸಿತು. ಆ ಕಥೆಯ ವಿವರಣೆ ಹೀಗೆ:
ಅವನು, ಭಾರಿ ಸಂಬಳದ ನೌಕರಿಯಲ್ಲಿದ್ದ ಹುಡುಗ. ಕಡು ಬಡತನದ ಮಧ್ಯೆ ಅಮ್ಮ ತನ್ನನ್ನು ಬಹಳ ಕಷ್ಟದಿಂದ ಬೆಳೆಸಿದಳು. ತನ್ನ ಏಳಿಗೆಗಾಗಿ ಆಕೆ ಹಗಲಿರುಳು ಶ್ರಮಿಸಿದಳು ಎಂದು ಅವನಿಗೆ ಚೆನ್ನಾಗಿ ನೆನಪಿತ್ತು. ತನ್ನ ಏಳಿಗೆಗಾಗಿ ಶ್ರಮಿಸಿದ ಅಮ್ಮನ ಋಣ ತೀರಿಸಬೇಕು ಎಂಬ ಯೋಚನೆಯೊಂದು ಅವನಿಗೆ ಬಂತು. ಅದೊಂದು ದಿನ ತಾಯಿಯ ಮುಂದೆ ನಿಂತು ಹೇಳಿದ: 'ಅಮ್ಮಾ, ನನ್ನ ಏಳಿಗೆಗಾಗಿ ನೀನು ಬದುಕಿಡೀ ಜೀವ ತೇಯ್ದಿದ್ದೀಯ. ನನಗಾಗಿ, ನೀನು ಅನುಭವಿಸಿದ ಕಷ್ಟ ಹಾಗೂ ಮಾಡಿದ ತ್ಯಾಗದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ನಿನ್ನ ತ್ಯಾಗಕ್ಕೆ ಪ್ರತಿಫಲದ ರೂಪದಲ್ಲಿ ಹೇಗಾದ್ರೂ ಥ್ಯಾಂಕ್ಸ್ ಹೇಳಬೇಕು. ನಾನು ಏನು ಮಾಡಿದ್ರೆ, ನಿಂಗೆ ಖುಷಿಯಾಗುತ್ತೆ? ಪ್ಲೀಸ್, ತಿಳಿಸಮ್ಮಾ' ಎಂದು ದುಂಬಾಲು ಬಿದ್ದ.
'ಮಗೂ, ಪ್ರತಿ ತಾಯಿಯೂ ಮಕ್ಕಳ ಏಳಿಗೆಗಾಗಿ ಮಾಡ್ತಾಳಲ್ಲ, ಆ ಕೆಲಸವನ್ನಷ್ಟೇ ನಾನು ಮಾಡಿದ್ದೇನೆ. ಮಗನ ಏಳಿಗೆಗಾಗಿ ಕಷ್ಟಪಡಬೇಕಾದದ್ದು ನನ್ನ ಕರ್ತವ್ಯ. ಅದನ್ನಷ್ಟೇ ನಾನು ಮಾಡಿದ್ದೇನೆ. ಯಾವುದೇ ಪ್ರತಿಫಲ ಬಯಸಿ ನಾನು ಆ ಕೆಲಸ ಮಾಡಲಿಲ್ಲ ಎಂದು ಆ ತಾಯಿ ವಿವರಿಸಿದಳು. ಆದರೂ ಈ ಮಗರಾಯ ಪಟ್ಟು ಬಿಡಲಿಲ್ಲ. ಹೇಗಾದರೂ ಸರಿ, ನಿನ್ನ ಋಣ ತೀರಿಸಬೇಕು ಎಂದು ನಾನು ನಿರ್ಧರಿಸಿ ಆಗಿದೆ. ಅದಕ್ಕೆ ಒಂದು ಅವಕಾಶ ಒದಗಿಸಿಕೊಡಮ್ಮ. ನಾನು ಆ ಯಾವ ಕೆಲಸ ಮಾಡಿದರೆ ನಿನಗೆ ಖುಷಿಯಾಗುತ್ತೆ ಅಂತ ಹೇಳಿಬಿಡು. ನಿನ್ನ ಮಾತನ್ನು ಶಿರಸಾ ವಹಿಸಿ ಪಾಲಿಸುತ್ತೇನೆ ಎಂದು ಹಠಕ್ಕೆ ಬಿದ್ದ. ಮಗ ತನ್ನ ಪಟ್ಟು ಬಿಡುವುದಿಲ್ಲ ಎಂಬುದು ಖಚಿತವಾದಾಗ ತಾಯಿ ಹೇಳಿದಳು: 'ಚಿಕ್ಕ ಮಗುವಾಗಿದ್ದಾಗ ನನ್ನ ಮಡಿಲಲ್ಲಿ ಮಲಗ್ತಾ ಇದ್ದೆ ನೋಡು? ಆ ಥರಾನೇ ಇವತ್ತು ರಾತ್ರಿಯೂ ಮಲಗು. ನೀನು ಹಾಗೆ ಮಾಡಿದ್ರೆ ನನಗೆ ತುಂಬಾ ಖುಷಿಯಾಗುತ್ತೆ...'
ನಯಾಪೈಸೆ ಖರ್ಚಿಲ್ಲದ, ಒಂದು ರೀತಿಯಲ್ಲಿ ವಿಚಿತ್ರದ್ದು ಅನ್ನಬಹುದಾದ ಅಮ್ಮನ ಕೋರಿಕೆಯಿಂದ ಮಗನಿಗೆ ಆಶ್ಚರ್ಯವಾಯಿತು. ಆದರೆ ಏನೂ ಮಾಡುವಂತಿರಲಿಲ್ಲ. ಹೇಳಿ ಕೇಳಿ ದೊಡ್ಡ ಸಂಬಳದ ಆಸಾಮಿಯಲ್ಲವೆ? ಬೆಳಗಿನಿಂದ ಸಂಜೆಯವರೆಗೂ ಮೀಟಿಂಗು, ಪ್ರೆಸ್ ಕಾನ್ಫರೆನ್ಸು, ಇಂಟರ್‌ವ್ಯೂ, ಸ್ಪಾಟ್ ವಿಸಿಟ್ ಎಂದೆಲ್ಲಾ ಬ್ಯುಸಿಯಾಗಿ ಉಸ್ಸಪ್ಪಾ ಎಂದುಕೊಂಡು ಮನೆಗೆ ಬಂದವನು, ಅವಸರದಲ್ಲಿ ಊಟ ಮುಗಿಸಿ, ಮೊದಲೇ ಮಾತು ಕೊಟ್ಟಿದ್ದಂತೆ ಅಮ್ಮನ ಮಗ್ಗುಲಲ್ಲಿ ಮಲಗಿಕೊಂಡ. ಕೆಲವೇ ನಿಮಿಷದಲ್ಲಿ ಅವನಿಗೆ ನಿದ್ರೆ ಹತ್ತಿತು.
ಮಗ ಮಲಗಿದ್ದಾನೆ ಎಂಬುದನ್ನು ಗ್ಯಾರಂಟಿ ಮಾಡಿಕೊಂಡ ಅಮ್ಮ, ಸದ್ದು ಮಾಡದಂತೆ ಎದ್ದು ಕೂತಳು. ಸದ್ದಾಗದಂತೆ ಕೋಣೆಗೆ ಹೋಗಿ ಒಂದು ಜಗ್‌ನಲ್ಲಿ ನೀರು ತುಂಬಿಕೊಂಡು ಅಷ್ಟನ್ನೂ ಮಗ ಮಲಗಿದ್ದ ಹಾಸಿಗೆಯ ಬಲಬದಿಯಲ್ಲಿ ಸುರಿದು, ಒಂದು ಮೂಲೆಯಲ್ಲಿ ಸುಮ್ಮನೆ ಕೂತಳು. ಹೀಗೆ ಹತ್ತಿಪ್ಪತ್ತು ನಿಮಿಷ ಕಳೆಯಿತು. ಈ ಮಗರಾಯ ನಿದ್ರೆಯ ಮಂಪರಿನಲ್ಲೇ ಬಲಕ್ಕೆ ಹೊರಳಿಕೊಂಡ. ತಣ್ಣಗಿನ ವಸ್ತು ಮೈ ತಾಕಿದ ಅನುಭವವಾಯ್ತಲ್ಲ; ತಕ್ಷಣವೇ ಮುಖ ಕಿವಿಚಿಕೊಂಡ ಎಡಭಾಗಕ್ಕೆ ಹೊರಳಿಕೊಂಡ. ಈ ಅಮ್ಮ ಮತ್ತೆ ಮೆಲ್ಲಗೆ ಎದ್ದು ಮತ್ತೊಂದು ಜಗ್‌ನಲ್ಲಿ ನೀರು ತಂದು ಮಗನ ಹಾಸಿಗೆಯ ಎಡಭಾಗಕ್ಕೆ ಸುರಿದಳು. ಹತ್ತು ನಿಮಿಷದ ನಂತರ ಈತ ಮಂಪರಿನಲ್ಲಿ ಕೈ ಚಾಚಿದ. ತಣ್ಣನೆಯ ವಸ್ತು ಮುಟ್ಟಿದಂತಾದಾಗ ಮತ್ತೆ ಗೊಣಗುತ್ತಾ ಮುದುರಿಕೊಂಡು ಮಲಗಿದ. ಹತ್ತು ನಿಮಿಷದ ನಂತರ ಅಮ್ಮ ಮತ್ತೊಂದು ಜಗ್ ನೀರು ತಂದು ಹಾಸಿಗೆಯ ಉಳಿದ ಭಾಗಕ್ಕೂ ಹಾಕಿಬಿಟ್ಟಳು. ನಂತರದ ಹತ್ತು ನಿಮಿಷಯದಲ್ಲಿ ಯಾವ ಕಡೆಗೆ ಹೊರಳಿದರೂ ತಣ್ಣಿಗಿನ ಅನುಭವವಾದಾಗ, ಈ ಮಗರಾಯ, ರೇಗುತ್ತಾ ಎದ್ದು ಕೂತ. ಎದುರಿಗೆ ಜಗ್ ಹಿಡಿದು ಕೂತಿದ್ದ ಅಮ್ಮನನ್ನು ಕಂಡ ಸಿಟ್ಟಿನಿಂದ ಕೇಳಿದ: 'ನನ್ನ ಜೊತೆ ಮಗುವಿನ ಥರಾ ಮಲಗಿಕೋ ಅಂತ ಹೇಳಿದವಳು, ನಾನೇ ನಿದ್ರೆ ಹೋಗಿರುವಾಗ ಹಾಸಿಗೆಯ ಸುತ್ತಾ ನೀರು ಹಾಕಿ ಯಾಕೆ ಕಾಟ ಕೊಡ್ತಾ ಇದೀಯ?'
ಈ ಅಮ್ಮ, ತಕ್ಷಣ ಹೇಳಿದಳು: 'ಕಂದಾ, ನೀನು ಚಿಕ್ಕವನಿದ್ದಾಗ ಜೊತೇಲಿ ಮಲಗ್ತಾ ಇದ್ದೆಯಲ್ಲ: ಆಗ ಪ್ರತಿ ಎರಡು ಗಂಟೆಗೊಮ್ಮೆ ಹಾಸಿಗೇಲಿ ಸೂಸು ಮಾಡ್ತಿದ್ದೆ. ಆ ಅಪರಾತ್ರಿಗಳಲ್ಲಿ ತಕ್ಷಣವೇ ನಿನ್ನ ಬಟ್ಟೆ ಬದಲಿಸಿ, ತೇವವಿಲ್ಲದ ಕಡೆಯಲ್ಲಿ ಮಲಗಿಸಿದರೆ, ನಂತರದ ಎರಡು ಗಂಟೆಯಲ್ಲಿ ಆ ಭಾಗವೂ ತೇವವಾಗಿರುತ್ತಿತ್ತು. ಬೆಳಗಾಗುವುದರೊಳಗೆ ಹಾಸಿಗೆ ಆರು ಕಡೆಯಾದರೂ ಒದ್ದೆಯಾಗಿರುತ್ತಿತ್ತು. ತುಸು ಬೆಚ್ಚಗಿರುತ್ತಿದ್ದ ಆ ಹಾಸಿಗೆಯ ಮೇಲೇ ಅದೆಷ್ಟೋ ಸಾವಿರ ರಾತ್ರಿಗಳನ್ನು ಕಳೆದಾಕೆ ನಾನು. ಅಂಥದೇ ಹಸಿಹಸೀ ಅನ್ನಿಸುವಂಥ ಹಾಸಿಗೆಯಲ್ಲಿ ನೀನು ಒಂದಿಡೀ ರಾತ್ರಿ ಕಳೆದಿದ್ದರೆ, ತಾಯಿಯ ಋಣ ತೀರಿಸಿದೆ ಅನ್ನಬಹುದಿತ್ತೇನೋ. ಆದರೆ...'
ಅಮ್ಮನ ಮಾತಿಗೆ ಹೇಗೆ ಪ್ರತಿಕ್ರಿಯಿಸುವುದೋ ತಿಳಿಯದೆ ಆತ ಪೆಚ್ಚಾಗಿ ನಿಂತ.
ನೆನಪಿರಲಿ: ಅಮ್ಮನ ಪ್ರೀತಿ, ತ್ಯಾಗಕ್ಕೆ ಬೆಲೆಕಟ್ಟಲು ಸಾಧ್ಯವೇ ಇಲ್ಲ...
-ನಾನು ಪ್ರಣತಿ
Advertisement