ಪ್ರತಿ ಬದಲಾವಣೆಯನ್ನೂ ಭಯವೇ ಸ್ವಾಗತಿಸುತ್ತದೆ

ಲಂಡನ್‌ನಲ್ಲಿ ಮೊದಲು ರೈಲು ಸಂಚಾರ ಆರಂಭವಾದಾಗ ಇಂಗ್ಲೆಂಡ್‌ನ ಆರ್ಚ್ ಬಿಷಪ್..
ಪ್ರತಿ ಬದಲಾವಣೆಯನ್ನೂ ಭಯವೇ ಸ್ವಾಗತಿಸುತ್ತದೆ

ಲಂಡನ್‌ನಲ್ಲಿ ಮೊದಲು ರೈಲು ಸಂಚಾರ ಆರಂಭವಾದಾಗ ಇಂಗ್ಲೆಂಡ್‌ನ ಆರ್ಚ್ ಬಿಷಪ್, ಕಾರ್ಡಿನಲ್‌ಗಳು, ಬಿಷಪ್‌ಗಳು, ಪಾದ್ರಿಗಳೆಲ್ಲಾ ಸೇರಿ ಬೃಹತ್ ಸಭೆ ನಡೆಸಿದರು. ರೈಲು ಸಂಚಾರ ಆರಂಭದ ಬಗ್ಗೆ ಚರ್ಚಿಸಿದರು. "ಈ ರೈಲು ದೇವರು ಸೃಷ್ಟಿಸಿದ್ದಲ್ಲ. ಹಾಗಾದರೆ ಇದನ್ನು ಯಾರು ಸೃಷ್ಟಿಸುತ್ತಿದ್ದಾರೆ? ಈ ರೈಲು ಎಂಬುದು ಮಹಾ ಪಾಪವೇ ಇರಬೇಕು."
ಮೊದಲ ಬಾರಿಗೆ ನೀವು ಹೊಸ ವಿಚಾರವನ್ನು ಹೇಳಿದಾಗ ಯಾರೂ ನಂಬುವುದಿಲ್ಲ. ಕೆಲವು ಸಲ ನಿಮ್ಮನ್ನೇ ಸಂದೇಹದಿಂದ ನೋಡುತ್ತಾರೆ. ಅದರಲ್ಲೂ ಹೊಸ ಉಪಕರಣವನ್ನು ಕಂಡು ಹಿಡಿದಾಗ ಜನ ಅದನ್ನು ಮುಕ್ತವಾಗಿ ಸ್ವೀಕರಿಸುವುದಿಲ್ಲ.
ಫೋನ್‌ನ್ನು ಕಂಡು ಹಿಡಿದಾಗ, ಅದನ್ನು ನಿಜ ಎಂದು ನಂಬಲಿಲ್ಲ. ಅತ್ತ ಕಡೆಯಿಂದ ಮಾತಾಡುವ ವ್ಯಕ್ತಿ ಭೂತವಿರಬೇಕೆಂದು ಅನೇಕರು ಗುಮಾನಿ ವ್ಯಕ್ತಪಡಿಸಿದ್ದರು. ಕೆಲ ವರ್ಷಗಳ ಹಿಂದೆ ನಾನು ಅನುವಾದಿಸಿದ ಪತ್ರಿಕೋದ್ಯಮ ಕುರಿತು ಓಶೋ ಕೃತಿಯಲ್ಲಿನ ಒಂದು ಪ್ರಸಂಗವನ್ನು ಇಲ್ಲಿ ಪ್ರಸ್ತಾಪಿಸಬಹುದು.
ಲಂಡನ್‌ನಲ್ಲಿ ಮೊದಲು ರೈಲು ಸಂಚಾರ ಆರಂಭವಾದಾಗ ಇಂಗ್ಲೆಂಡ್‌ನ ಆರ್ಚ್ ಬಿಷಪ್, ಕಾರ್ಡಿನಲ್‌ಗಳು, ಬಿಷಪ್‌ಗಳು, ಪಾದ್ರಿಗಳೆಲ್ಲಾ ಸೇರಿ ಬೃಹತ್ ಸಭೆ ನಡೆಸಿದರು. ರೈಲು ಸಂಚಾರ ಆರಂಭದ ಬಗ್ಗೆ ಚರ್ಚಿಸಿದರು. "ಈ ರೈಲು ದೇವರು ಸೃಷ್ಟಿಸಿದ್ದಲ್ಲ. ದೇವರು ಈ ಪ್ರಪಂಚವನ್ನು ಸೃಷ್ಟಿ ಮಾಡಿದಾಗ ಈ ರೈಲನ್ನು ನಿರ್ಮಿಸಿರಲಿಲ್ಲ. ಹಾಗಾದರೆ ಇದನ್ನು ಯಾರು ಸೃಷ್ಟಿಸುತ್ತಿದ್ದಾರೆ? ಈ ರೈಲು ಎಂಬುದು ಮಹಾ ಪಾಪವೇ ಇರಬೇಕು. ಅದೊಂದು ಸೈತಾನನೇ ಸರಿ' ಎಂದು ಅವರು ನಿರ್ಧರಿಸಿದರು.
ಹೀಗೆ ಆ ಹಳೆಯ ರೈಲ್ವೆ ಬಂಡಿ ಅವರ ಕಣ್ಣಿಗೆ ಭೂತದಂತೆ ಕಂಡಿತು! ಅದೊಂದು ಕೇವಲ ಪ್ರಾಯೋಗಿಕ ರೈಲಾಗಿತ್ತು. ಅದು ಕೇವಲ ಹತ್ತು ಮೈಲು ಮಾತ್ರ ಸಂಚರಿಸುತ್ತಿತ್ತು. ರೈಲು ಪ್ರಯಾಣಿಕರಿಗೆ ಉಚಿತ ಪ್ರಯಾಣದ ಜತೆಗೆ ಊಟ, ಉಪಾಹಾರ, ಸೇರಿದಂತೆ ಎಲ್ಲ ಸೌಕರ್ಯಗಳನ್ನೂ ಒದಗಿಸಲಾಗಿತ್ತು. ಆದರೆ ಪ್ರತಿಯೊಂದು ಚರ್ಚ್‌ನಲ್ಲೂ ಪಾದ್ರಿಗಳು ರೈಲು ಹತ್ತದಂತೆ ಜನರಿಗೆ ಉಪದೇಶ ನೀಡುತ್ತಿದ್ದರು.
ಅವರು ಹೇಳುತ್ತಿದ್ದುದಾದರೂ ಏನು? "ಮೊದಲನೆಯದಾಗಿ ಈ ರೈಲು ದೇವರ ಸೃಷ್ಟಿಯಲ್ಲ. ಎರಡನೆಯದಾಗಿ, ಅವರು ಉಚಿತ ಟಿಕೆಟ್, ಊಟ, ಉಪಚಾರ ಮತ್ತಿತರ ಸವಲತ್ತುಗಳನ್ನೆಲ್ಲ ನೀಡಿ ನಿಮ್ಮನ್ನೆಲ್ಲ ಒತ್ತಾಯಪೂರ್ವಕವಾಗಿ ರೈಲು ಹತ್ತಿಸುತ್ತಿರುವುದೇಕೆ?" ಎಂದು ಅವರು ಜನರನ್ನು ಪ್ರಶ್ನಿಸುತ್ತಿದ್ದರು.
ಆರ್ಚ್ ಬಿಷಪ್ ಅವರಂತೂ ಖಡಾಖಂಡಿತವಾಗಿ ಹೇಳಿಬಿಟ್ಟಿದ್ದರು. "ನಾವು ನಿಮಗೆ ಹೇಳುತ್ತೇವೆ, ಕೇಳಿ. ಈ ರೈಲು ಹೊರಡುತ್ತದೆ. ಆದರೆ ಎಂದಿಗೂ ನಿಲ್ಲುವುದಿಲ್ಲ. ಇಷ್ಟರಮೇಲೂ ನಿಮಗೆ ರೈಲಿನಲ್ಲಿ ಹೋಗಬೇಕೆನಿಸಿದರೆ ಹೋಗಿ. ಆಮೇಲೆ ನೀವು ಪಶ್ಚಾತ್ತಾಪ ಪಡುತ್ತೀರಿ."
ಕೊನೆಗೆ ಯಾರೊಬ್ಬರೂ ರೈಲು ಹತ್ತಲಿಲ್ಲ. ರೈಲು ನಿಲ್ದಾಣದ ಸುತ್ತ, ಹತ್ತು ಮೈಲು ದೂರದ ಮಾರ್ಗದ ಆಸುಪಾಸಿನಲ್ಲಿ ಸಾಕಷ್ಟು ಜನ ಸೇರಿದ್ದರು. ಆದರೆ ಯಾರೊಬ್ಬರೂ ಅದನ್ನು ಹತ್ತುವ ಸಾಹಸ ಮಾಡಲಿಲ್ಲ.
"ಏನು ಬೇಕಾದರೂ ಆಗಲಿ ಒಂದು ಕೈ ನೋಡಿ ಬಿಡೋಣ. ಒಂದು ವೇಳೆ ಈ ರೈಲು ನಿಲ್ಲದೇ ಹೋದರೆ ಹೋಗಲಿ. ಏನಾಯಿತು? ಈ ರೈಲು ಎಲ್ಲಿಯೂ ನಿಲ್ಲದೆ ಮುಂದುವರಿಯುತ್ತಿದ್ದು, ಅವರು ನಮಗೆ ನಿತ್ಯವೂ ಊಟ-ಉಪಚಾರ ನೀಡುವುದಾದರೆ, ಅದರಿಂದ ತೊಂದರೆ ಏನೂ ಇಲ್ಲವಲ್ಲ!" ಹಾಗೆಂದು ನಿರ್ಧರಿಸಿ ಕೆಲವರು ರೈಲು ಹತ್ತಲು ಮುಂದಾದರು. ಆ ರೈಲು 120 ಜನರನ್ನು ಕರೆದೊಯ್ಯುವ ಸಾಮರ್ಥ್ಯ ಹೊಂದಿದ್ದರೂ, ಅಂದು ಅದನ್ನು ಹತ್ತಲು ಮುಂದೆ ಬಂದ ಧೈರ್ಯವಂತರು ಕೇವಲ ಎಂಟು ಮಂದಿ ಮಾತ್ರ.
ಹೀಗೆ ಆರಂಭವಾದ ರೈಲು ಇಂದು ನಮ್ಮ ಪ್ರಮುಖ ಅವಶ್ಯಕತೆಗಳಲ್ಲಿ ಒಂದಾಗಿದೆ. ಇಂದು ರೈಲುಗಳಿಲ್ಲದ ಜೀವನವನ್ನು ಕಲ್ಪನೆ ಮಾಡಿಕೊಳ್ಳುವುದೂ ಸಾಧ್ಯವಿಲ್ಲ. ಕಾರು, ವಿಮಾನಗಳಿಗೂ ಇದೇ ಮಾತು ಅನ್ವಯ.
ಗಂಡಸರ ಆದ್ಯತೆ
ಪ್ರಥಮ ಬಾರಿಗೆ 1894ರಲ್ಲಿ ಕ್ರಿಕೆಟ್‌ನಲ್ಲಿ ಅಬ್ಡೋಮನ್ ಗಾರ್ಡ್‌ನ್ನು ಬ್ಯಾಟ್ಸ್‌ಮನ್‌ಗಳು ಬಳಸಿದರು. 1934ರಲ್ಲಿ ಬ್ಯಾಟ್ಸ್‌ಮನ್‌ಗಳು ಮೊದಲ ಬಾರಿಗೆ ಹೆಲ್ಮೆಟ್‌ಗಳನ್ನು ಬಳಸಿದರು.
ಈ ಮಾಹಿತಿಯ ನೀತಿಯೇನು ಗೊತ್ತಾ?
ತಲೆ ಸಹ ಮುಖ್ಯ ಎಂದು ತಿಳಿಯಲು ನಲವತ್ತು ವರ್ಷಗಳು ಬೇಕಾದವು. ಗಂಡಸರ ಆದ್ಯತೆಯೇನು ಎಂಬುದು ತಿಳಿಯಿತಲ್ಲ.

ಸೀರೆ ಅಂಗಡಿಯಲ್ಲಿ ಕಾಣಿಸಿದ್ದು
ಆ ಸೀರೆ ಅಂಗಡಿಯ ಮಾಲೀಕ 'ವಕ್ರತುಂಡೋಕ್ತಿ'ಯ ಅಭಿಮಾನಿಯೋ ಗೊತ್ತಿಲ್ಲ. ತನ್ನ ಅಂಗಡಿಯಲ್ಲಿ ಹೀಗೆ ಬರೆಯಿಸಿದ್ದಾನೆ- 'ಗಂಡಂದಿರೇ ಸ್ವತಃ ಬಂದು ಸೀರೆಯನ್ನು ಖರೀದಿಸಬಯಸಿದರೆ, ತಮ್ಮ ಹೆಂಡತಿಯ ಇಷ್ಟವಾದ ಬಣ್ಣದ ಬಗ್ಗೆ ಆಕೆಯ ಪತ್ರವನ್ನು ಕಡ್ಡಾಯವಾಗಿ ತರುವುದು. ಆಕೆಯ ಪತ್ರವಿಲ್ಲದೇ ಬಂದು, ಸೀರೆಯನ್ನು ಖರೀದಿಸಿದರೆ, ಮುಂದಾಗುವ ಅವಘಡಗಳಿಗೆ ನಾವು ಜವಾಬ್ದಾರರಲ್ಲ.'

ಯಾಕೆ ಡ್ರಾಪ್ ಮಾಡಲಿಲ್ಲ?
ಇದು ನಿಜ ಘಟನೆ. ಪಾತ್ರಧಾರಿಗಳು ಮಾತ್ರ ಪತ್ರಕರ್ತರು. ಆದರೆ ಅವರ ಹೆಸರು ಬೇಡ ಬಿಡಿ.
ಒಬ್ಬ ಪತ್ರಕರ್ತ - ನಿನ್ನೆ ರಾತ್ರಿ ನೀನು ವಿಪರೀತ ಕುಡಿದು ಬಿಟ್ಟಿದ್ದೆ. ಮನೆಗೆ ಡ್ರಾಪ್ ಮಾಡು ಅಂತ ಪದೇ ಪದೆ ಒತ್ತಾಯಿಸಿದೆ. ಆದರೆ ನಾನು ಡ್ರಾಪ್ ಮಾಡಲಿಲ್ಲ, ಸಾರಿ.
ಮತ್ತೊಬ್ಬ ಪತ್ರಕರ್ತ- ನೀನು ಯಾಕೆ ನನ್ನನ್ನು ಮನೆಗೆ ಡ್ರಾಪ್ ಮಾಡಲಿಲ್ಲ.
ಒಬ್ಬ ಪತ್ರಕರ್ತ- ಪಾರ್ಟಿ ನಿನ್ನ ಮನೆಯಲ್ಲೇ ನಡೆದಿತ್ತು ತಾನೆ?!
ದಿಲ್ಬರ್ಟ್‌ನ ವಕ್ರತುಂಡೋಕ್ತಿ
ಖ್ಯಾತ ಅಮೆರಿಕನ್ ಕಾರ್ಟೂನಿಸ್ಟ್ ಸ್ಕಾಟ್ ಅಡಾಮ್ಸ್‌ನ ದಿಲ್ಬರ್ಟ್ ಕಾಮಿಕ್ ಸ್ಟ್ರಿಪ್‌ಗಳನ್ನು ನಾನು ತಪ್ಪಿಸಿಕೊಳ್ಳುವುದಿಲ್ಲ. ಸುಮಾರು 70 ದೇಶಗಳ, 30 ಭಾಷೆಗಳ ಪತ್ರಿಕೆಗಳಲ್ಲಿ ಈ ಕಾಮಿಕ್‌ಸ್ಟ್ರಿಪ್ಸ್ ಪ್ರಕಟವಾಗುತ್ತವೆ. ದಿಲ್ಬರ್ಟ್ ಹಾಗೂ ಆತನ ನಾಯಿ ಡಾಗ್‌ಬರ್ಟ್ ಈ ವ್ಯಂಗ್ಯಚಿತ್ರದ ಪ್ರಮುಖ ಪಾತ್ರಧಾರಿಗಳು. ಆಫೀಸು ಹಾಗೂ ಅಲ್ಲಿನ ಪರಿಸರದಲ್ಲಿಯೇ ಬಹುತೇಕ ಸನ್ನಿವೇಶಗಳು ಜರುಗುತ್ತವೆ.
      ದಿಲ್ಬರ್ಟ್ ಸರ್ವಾಂತರ್ಯಾಮಿ. ಆತನ ಮಾತುಗಳು ವಕ್ರತುಂಡೋಕ್ತಿಯಂತೆ ಸರಳ, ಖಡಕ್ಕು, ಹಾಸ್ಯಭರಿತ, ಚೋದ್ಯ. ಯಾವುದಾದರೂ ಪತ್ರಿಕೆಗೆ ದಿಲ್ಬರ್ಟ್ ವ್ಯಂಗ್ಯಚಿತ್ರಗಳು ಭೂಷಣವೇ. ಅಸಂಖ್ಯ ಓದುಗರಿಗೆ ದಿಲ್ಬರ್ಟ್ ಸ್ಫೂರ್ತಿಯ ಚಿಲುಮೆ. ಕಾರ್ಪೋರೇಟ್ ಸಂಸ್ಥೆಗಳ ಬೋರ್ಡ್ ರೂಮುಗಳಲ್ಲಿ, ರಾತ್ರಿ ಪಾರ್ಟಿಗಳಲ್ಲೂ ಈ ವ್ಯಂಗ್ಯಚಿತ್ರ ಪಾತ್ರಧಾರಿ ಇಣುಕುವುದುಂಟು. ಯಾರಾದರೂ ದಿಲ್ಬರ್ಟ್ ಕಾರ್ಟೂನ್ ಸ್ಟ್ರಿಪ್ಸ್‌ನ್ನು ಪ್ರಸ್ತಾಪಿಸುತ್ತಾರೆ
ಅಂದ್ರೆ ಅವರ ಅಭಿರುಚಿ ಚೆನ್ನಾಗಿದೆಯೆಂದು ಅರ್ಥ, ನನ್ನದನ್ನೂ ಸೇರಿಸಿ. ಅಂಥ ಒಂದು ಅಭಿಪ್ರಾಯ, ಭಾವನೆ ಬಹುತೇಕ ಓದುಗರಲ್ಲಿದೆ.
ಇತ್ತೀಚೆಗೆ ನಾನು ಓದಿದ, ವಕ್ರತುಂಡೋಕ್ತಿ ಮಾದರಿಯ ದಿಲ್ಬರ್ಟ್ ಅಣಿಮುತ್ತುಗಳು ಇಲ್ಲಿವೆ:
    ಕೆಲಸ ಮಾಡುವುದರಲ್ಲಿ ತಪ್ಪೇನಿಲ್ಲ. ಆದರೆ ಅದು ನಿಮ್ಮ ವಿಪರೀತ ಸಮಯವನ್ನು ತಿಂದು ಹಾಕಬಾರದು.
    ಜೀವನ ತೀರಾ ಅನಿಶ್ಚಿತತೆಯಿಂದ ಕೂಡಿದೆ. ಆದ್ದರಿಂದ ಮೊದಲು ಊಟ ಮಾಡಿ.
    ಸದಾ ನಗುತ್ತಿರಿ, ಯಾಕೆಂದರೆ ನೀವು ಎಷ್ಟೇ ದಡ್ಡರಾಗಿದ್ದರೂ, ನೀವು ಯಾವುದರ ಕುರಿತು ಯೋಚಿಸುತ್ತಿದ್ದೀರಿ ಎಂಬುದು ಗೊತ್ತಾಗುವುದಿಲ್ಲ.
    ನಾನು ಬರಹಗಾರನಾಗುವುದನ್ನು ಇಷ್ಟಪಡುತ್ತೇನೆ. ಆದರೆ ನನಗೆ ಕುಳಿತುಕೊಳ್ಳುವುದೆಂದರೆ ಆಗದು.
    ನಿಮ್ಮ ಮಾತಿಗೆ ಕಿಮ್ಮತ್ತು ಬರಬೇಕೆಂದು ಅಪೇಕ್ಷಿಸಿದರೆ, ಇಂಟರ್‌ನ್ಯಾಷನಲ್ ಕಾಲ್ ಮಾಡಬಹುದು.
    ಸಾಯಂಕಾಲದ ಟ್ರಾಫಿಕ್ ಜಾಮ್‌ನಿಂದ ತಪ್ಪಿಸಿಕೊಳ್ಳಬೇಕೆಂದರೆ, ಆಫೀಸ್‌ನ್ನು ಮಧ್ಯಾಹ್ನವೇ ಬಿಡಬೇಕು.
    ಗಂಡ-ಹೆಂಡತಿ ಒಂದೇ ಕಚೇರಿಯಲ್ಲಿ ಕೆಲಸ ಮಾಡಿದರೆ ತಪ್ಪೇನಿಲ್ಲ. ಅವರು ಮನೆಯಲ್ಲೂ ಆಫೀಸಿನ ಬಗ್ಗೆಯೇ ಯೋಚಿಸುತ್ತಿರುತ್ತಾರೆ.
    ಟಿವಿ ಆ್ಯಂಕರ್‌ಗಳು ಹೇಳುವುದೆಲ್ಲ ಕೆಮರಾಕ್ಕೆ ಅರ್ಥವಾಗುತ್ತಿದ್ದರೆ, ಅವು ಎಂದೋ ಸ್ಟುಡಿಯೋದಿಂದ ಓಡಿ ಹೋಗುತ್ತಿದ್ದವು.
    ನಿತ್ಯವೂ ನೀವು ಹೊಸ ಹೊಸ ಬಟ್ಟೆಗಳನ್ನು ಹಾಕಿಕೊಳ್ಳಬೇಕು, ನೀವು ಟೇಲರ್ ಅಥವಾ ದೋಬಿ ಅಂಗಡಿ ಇಟ್ಟುಕೊಂಡಿದ್ದರೆ.
ಐನ್‌ಸ್ಟಿನ್ ಸೋತ, ಇಂಡಿಯನ್ ಗೆದ್ದ!
ಪ್ರಚಂಡ ಮೇಧಾವಿ ಅನ್ನಿಸಿಕೊಂಡಿದ್ದ ಐನ್‌ಸ್ಟಿನ್ ಅದೊಮ್ಮೆ ಪ್ರವಾಸ ಹೊರಟಿದ್ದ. ವಿಮಾನದಲ್ಲಿ, ಅವನ ಪಕ್ಕದ ಸೀಟ್‌ನಲ್ಲಿ ಒಬ್ಬ ಭಾರತೀಯ ಕುಳಿತಿದ್ದ. ಕೆಲವು ವಿಷಯದಲ್ಲಿ, ಇಂಡಿಯನ್ಸ್ ಬಹಳ ಪೆದ್ದರು ಎಂಬ ನಂಬಿಕೆ ಐನ್‌ಸ್ಟಿನ್‌ಗೂ ಇತ್ತು. ಪಕ್ಕದಲ್ಲೇ ಇದ್ದ ಪ್ರಯಾಣಿಕನನ್ನು ಕೆಣಕಿ, ಅವನನ್ನು ಪೆದ್ದನನ್ನಾಗಿ ಮಾಡಿ ಮಜಾ ತೆಗೆದುಕೊಳ್ಳಬೇಕು ಅನ್ನಿಸಿತು. ತಾನೇ ಮುಂದಾಗಿ ಮಾತಿಗೆ ಆರಂಭಿಸಿದ ಐನ್‌ಸ್ಟಿನ್ ಹೀಗೆಂದ: 'ಫ್ರೆಂಡ್, ಪ್ರಯಾಣದ ಸಂದರ್ಭದಲ್ಲಿ ಬೋರ್ ಆಗುವುದನ್ನು ತಪ್ಪಿಸಲು ನಾವಿಬ್ಬರೂ ಒಂದು ಆಟ ಆಡೋಣ. ಮೊದಲು ನಾನು ಪ್ರಶ್ನೆ ಕೇಳುತ್ತೇವೆ. ಅದಕ್ಕೆ ಉತ್ತರ ಹೇಳದೇ ಹೋದರೆ ನೀನು ಐದು ಡಾಲರ್ ಕೊಡಬೇಕು. ನೀನು ಸೋತಾಗ, ನಾನು ಸರಿಯುತ್ತರ ಹೇಳುತ್ತೇನೆ. ಆನಂತರದಲ್ಲಿ ನಿನ್ನ ಸರದಿ. ನೀನು ಕೇಳುವ ಪ್ರಶ್ನೆಗೆ ನಾನೇನಾದರೂ ಉತ್ತರ ಹೇಳಲು ಆಗದಿದ್ದರೆ 500 ಡಾಲರ್ ಕೊಡ್ತೇನೆ...'
ಈ ಷರತ್ತಿಗೆ ಭಾರತೀಯ ಒಪ್ಪಿಕೊಂಡ. ಮರುನಿಮಿಷಕ್ಕೇ ಐನ್‌ಸ್ಟಿನ್‌ನ ಕಡೆಯಿಂದ ಪ್ರಶ್ನೆ ಬಂತು: 'ಭೂಮಿಯಿಂದ ಚಂದ್ರಲೋಕಕ್ಕೆ ಇರುವ ಅಂತರ ಎಷ್ಟು?'
ಭಾರತೀಯ, ಒಮ್ಮೆ ತಲೆ ಕೆರೆದುಕೊಂಡು, ಗೊತ್ತಿಲ್ಲ ಎಂಬಂತೆ ಕತ್ತು ಅಲ್ಲಾಡಿಸಿದ. ನಂತರ ಪರ್ಸ್‌ನಿಂದ ಐದು ಡಾಲರ್ ತೆಗೆದು ಐನ್‌ಸ್ಟೀನ್‌ಗೆ ಕೊಟ್ಟ.
ಬೆಟ್ ಗೆದ್ದ ಖುಷಿಯಲ್ಲಿದ್ದ ಐನ್‌ಸ್ಟಿನ್, ಈಗ ನಿನ್ನ ಸರದಿ ಫ್ರೆಂಡ್. ಪ್ರಶ್ನೆ ಕೇಳು ಎನ್ನುತ್ತಾ ಕುಹಕ ನಗೆ ಬೀರಿದ.
ಎರಡು ನಿಮಿಷ ಮೌನವಾಗಿದ್ದ ಭಾರತೀಯ, ನಂತರ ಗಂಭೀರವಾಗಿ ಕೇಳಿದ: ಸರ್, ಬೆಟ್ಟ ಹತ್ತುವಾಗ ಮೂರು ಕಾಲುಗಳನ್ನೂ, ಇಳಿಯುವಾಗ ನಾಲ್ಕು ಕಾಲುಗಳನ್ನೂ ಬಳಸುವ ಜೀವಿ ಯಾವುದು?
ಇಂಥದೊಂದು ಪ್ರಶ್ನೆಯನ್ನು ಐನ್‌ಸ್ಟಿನ್ ಖಂಡಿತ ನಿರೀಕ್ಷಿಸಿರಲಿಲ್ಲ. ನಿಜ ಹೇಳಬೇಕೆಂದರೆ, ಬೆಟ್ಟ ಹತ್ತುವಾಗ ಮೂರು ಕಾಲನ್ನೂ, ಇಳಿಯುವಾಗ ನಾಲ್ಕು ಕಾಲುಗಳನ್ನು ಬಳಸುವ ಜೀವಿಯ ಬಗ್ಗೆ ಅವನಿಗೇನೂ ಗೊತ್ತಿರಲಿಲ್ಲ. ಆದರೆ, ಹಾಗಂತ ಒಪ್ಪಿಕೊಳ್ಳಲು 'ಈಗೋ' ಅಡ್ಡ ಬಂತು. ತಕ್ಷಣವೇ ಆತ ಇಂಟರ್‌ನೆಟ್‌ನಲ್ಲಿ ಹುಡುಕಿದ. ಪರಿಚಯದ ಗೆಳಯರಿಗೂ ಫೋನ್ ಮಾಡಿ ವಿಚಾರಿಸಿದ. ಈ 'ವಿಚಾರಣೆ' ಅರ್ಧ ಗಂಟೆಯ ಕಾಲ ನಡೆದರೂ ಅವನಿಗೆ ಸರಿಯಾದ ಉತ್ತರ ಗೊತ್ತಾಗಲಿಲ್ಲ. ಮೂರು ಕಾಲುಗಳಿಂದ ಬೆಟ್ಟ ಹತ್ತಿ, ನಾಲ್ಕು ಕಾಲುಗಳಿಂದ ಇಳಿಯುವ ಜೀವಿಯ ಹೆಸರು ಯಾರೆಂದರೆ ಯಾರಿಗೂ ಗೊತ್ತಿರಲಿಲ್ಲ. ಕಡೆಗೂ ಸೋಲು ಒಪ್ಪಿಕೊಂಡ ಐನ್‌ಸ್ಟಿನ್, 500 ಡಾಲರ್‌ಗಳನ್ನು ಭಾರತೀಯನಿಗೆ ಕೊಟ್ಟು-'ಫ್ರೆಂಡ್, ನಾನು ಸೋತು ಹೋದೆ. ಇರಲಿ. ಈಗ ನೀನೇ ಉತ್ತರ ಹೇಳು. ಮೂರು ಕಾಲುಗಳಿಂದ ಬೆಟ್ಟ ಹತ್ತುವ, ನಾಲ್ಕು ಕಾಲುಗಳಿಂದ ಬೆಟ್ಟ ಇಳಿಯುವ ಅಪರೂಪದ ಜೀವಿ ಯಾವುದು? ಅದರ ಹೆಸರು ಏನೆಂದು ತಿಳಿಸು ಪ್ಲೀಸ್...' ಎಂದು ಕೇಳಿಕೊಂಡ.
ಉತ್ತರ ಹೇಳುವ ಬದಲು, ತನ್ನ ಪರ್ಸ್‌ನಿಂದ 5 ಡಾಲರ್ ತೆಗೆದು ಐನ್‌ಸ್ಟಿನ್‌ನ ಕೈಲಿಟ್ಟ ಭಾರತೀಯ, ಆ ನಿಮ್ಮ ಪ್ರಶ್ನೆಗೆ ನನಗೂ ಉತ್ತರ ಗೊತ್ತಿಲ್ಲ ಸ್ವಾಮೀ ಅಂದ!
ಈ ಮಾತು ಕೇಳಿದ್ದೇ, ಐನ್‌ಸ್ಟಿನ್ ಮೂರ್ಛೆ ಹೋದ!
ನೀತಿ: ನೀವು ಮಹಾ ಮೇಧಾವಿಯೇ ಇರಬಹುದು. ಜನರಲ್ ನಾಲೆಡ್ಜು, ಇಂಗ್ಲೀಷು, ಗಣಿತ, ವಿಜ್ಞಾನ, ಅಕೌಂಟೆನ್ಸಿ, ಸೈಕಾಲಜಿಯನ್ನೆಲ್ಲಾ ಅರೆದು ಕುಡಿದವರೇ ಆಗಿರಬಹುದು. ಆದರೆ, ಸುಲಭವಾಗಿ ಹಣ ಸಂಪಾದಿಸಬಹುದು ಎಂಬಂಥ ಸಂದರ್ಭಗಳಲ್ಲಿ ಭಾರತೀಯರನ್ನು 'ಅಯ್ಯೋ ಪಾಪ' ಎಂಬಂತೆ ನೋಡಲು, ಅವರನ್ನು ಆಂಡರ್‌ಎಸ್ಟಿಮೇಟ್ ಮಾಡಲು ಯಾವತ್ತೂ ಪ್ರಯತ್ನಿಸಬಾರದು!
ಹೀಗೊಂದು ಸಂಭಾಷಣೆ
ಹುಡುಗಿ- ನೀನು ಸಿಗರೇಟ್ ಸೇದುತ್ತೀಯಾ?
ಹುಡುಗ-ಹೌದು.
ಹುಡುಗಿ-ಎಷ್ಟು ಸೇದುತ್ತೀಯಾ?
ಹುಡುಗ- ಮೂರು ಪ್ಯಾಕ್!
ಹುಡುಗಿ- ಒಂದು ಪ್ಯಾಕ್‌ಗೆ ಎಷ್ಟು?
ಹುಡುಗ- ಐನೂರು ರುಪಾಯಿ
ಹುಡುಗಿ- ತಿಂಗಳಿಗೆ 45 ಸಾವಿರ ರೂ. ವರ್ಷಕ್ಕೆ 5.40 ಲಕ್ಷ ರೂ.
ಹುಡುಗ- ಹೌದು.
ಹುಡುಗ- ಎಷ್ಟು ವರ್ಷದಿಂದ ಸೇದುತ್ತಿದ್ದೀಯಾ?
ಹುಡುಗ- ಹದಿನೈದು ವರ್ಷಗಳಿಂದ.
ಹುಡುಗಿ-ಹೌದಾ!? ಹಣದಲ್ಲಿ ಒಂದು ಫೆರಾರಿ ಕಾರು ಖರೀದಿಸಬಹುದಿತ್ತಲ್ಲ?
ಹುಡುಗ- ನಾನೊಂದು ಪ್ರಶ್ನೆ ಕೇಳ್ತೀನಿ. ನೀನು ಸೇದುತ್ತೀಯಾ?
ಹುಡುಗಿ-ಇಲ್ಲ.
ಹುಡುಗ- ಹಾಗಾದರೆ ನೀನೇಕೆ ಫೆರಾರಿ ಕಾರು ಖರೀದಿಸಿಲ್ಲ?

-ವಿಶ್ವೇಶ್ವರ ಭಟ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com