'ಅದು, ನೂರಿನೂರು ಕುಟುಂಬಗಳಿದ್ದ ಒಂದು ಊರು. ಅಲ್ಲಿ ಒಬ್ಬ ಮುಖಂಡ. ಅವನ ಮಾತು, ನಡವಳಿಕೆ, ದರ್ಪವೆಲ್ಲಾ ಕನ್ನಡ ಸಿನಿಮಾದ ವಿಲನ್‌ಗಳ ಥರಾನೇ ಇತ್ತು. ಆ ಊರಿನ ಪಾಲಿಗೆ ಅವನ ಮಾತೇ ಫೈನಲ್. ಅವನು ಹೇಳಿದ್ದೇ ವೇದವಾಕ್ಯ. ಮುಖಂಡನ ಮಾತುಗಳನ್ನು ಯಾರಾದರೂ ಧಿಕ್ಕರಿಸಿದರೆ, ಎದುರು ನಿಂತು ಮಾತಾಡಿದರೆ, ಅಂಥವರಿಗೆ ಮುಖಂಡನ ಕಡೆಯವರಿಂದ ಭಾರಿ ಶಿಕ್ಷೆಯಾಗುತ್ತಿತ್ತು. ಮುಖಂಡನ ಸೋದರ ಸಂಬಂಧಿಗಳೇ ಆ ಊರಿನಲ್ಲಿ 40ಕ್ಕೂ ಹೆಚ್ಚು ಜನ ಇದ್ದರು. ಹಾಗಾಗಿ, ಅವರನ್ನು ಎದುರು ಹಾಕಿಕೊಂಡು ಬದುಕುವುದು ಬಹಳ ಕಷ್ಟವಿತ್ತು.
ಊರ ಮುಖಂಡನೇ ಯಜಮಾನನಂತೆಯೂ, ಉಳಿದ ಜನರೆಲ್ಲಾ ಅವನ ಆಜ್ಞಾಪಾಲಕರಂತೆಯೂ ಐದಾರು ವರ್ಷ ಬದುಕಿದರು. ಆದರೆ, ಕಾಲ ಎಂಬುದು ಯಾವಾಗಲೂ ಒಂದೇ ಥರಾ ಇರುವುದಿಲ್ಲವಲ್ಲ; ಅದೇ ಊರಿನ ಚಿಗುರು ಮೀಸೆಯ ತರುಣನೊಬ್ಬ ಅದೊಮ್ಮೆ ಈ ಮುಖಂಡನಿಗೆ ಎದುರು ನಿಂತು ಮಾತಾಡಿಬಿಟ್ಟ. ಅವನ ಮನೆಯೊಳಗೂ ಆವೇಶದಿಂದ ಮಾತಾಡಬಲ್ಲಂಥ ಮೂವರು ತಮ್ಮಂದಿರಿದ್ದರು. ಹಾಗಾಗಿ, ಅವರು ನಲವತ್ತು ಜನ ಇದ್ದರೆ, ನಾವು ನಾಲ್ಕು ಜನ ಇದ್ದೇವೆ ಎಂಬ ಉತ್ಸಾಹ, ಆ ಊರಿನ ಮುಖಂಡರಿಗೆ ತಿರುಗಿ ಬಿದ್ದ ಹುಡುಗನನದ್ದಾಗಿತ್ತು.
ಆನಂತರದಲ್ಲಿ ನಡೆದಿದೆಲ್ಲಾ ರಕ್ತಚರಿತ್ರೆಯೇ. ತಮಗೆ ಎದುರು ನಿಂತ ಹುಡುಗನನ್ನು ಕಂಡ ಮುಖಂಡರು ವ್ಯಗ್ರರಾದರು. ಹೇಗಾದರೂ ಸರಿ, ಆ ಕುಟುಂಬದವರನೆಲ್ಲ ಸದೆ ಬಡಿಯಬೇಕೆಂದು ನಿರ್ಧರಿಸಿದರು. ದೊಡ್ಡದೊಂದು ಗುಂಪು ಕಟ್ಟಿಕೊಂಡು ಫೈಟಿಂಗ್‌ಗೆ ಹೋದರೆ, ಸುತ್ತಮುತ್ತಲಿನ ಹಳ್ಳಿಗಳಲ್ಲಿ ತಮಗೆ ಕೆಟ್ಟ ಹೆಸರು ಬರಬಹುದು ಅನಿಸಿದಾಗ, ರಾತ್ರೋ ರಾತ್ರಿ ಕಾರ್ಯಾಚರಣೆ ಆರಂಭಿಸಿದರು. ಆಮೇಲೆ ಏನಾಯಿತೆಂದರೆ, ಊರ ಯಜಮಾನರೊಂದಿಗೆ ಜಗಳಕ್ಕೆ ಬಂದಿದ್ದನಲ್ಲ; ಆ ಹುಡುಗನ ಮನೆಗೆ ಅದೊಂದು ರಾತ್ರಿ ಬೆಂಕಿ ಬಿತ್ತು. ಪುಣ್ಯವಶಾತ್ ಪ್ರಾಣಹಾನಿಯಾಗಲಿಲ್ಲ. ಆದರೆ ಈ ಒಂಟಿ ಕುಟುಂಬದವರ ಮೇಲೆ ಪದೇಪರೆ ಹಲ್ಲೆಗಳಾದವು. ಮನೆಗೆ ಬೆಂಕಿ ಬಿದ್ದುದರಿಂದ ಉಳಿಯಲು ನೆಲೆಯಿಲ್ಲ ಎಂದು ಊರ ಹೊರಗಿನ ದೇವಾಲಯದಲ್ಲಿ ಆಶ್ರಯ ಪಡೆಯಲು ಬಂದರೆ, ಪಟೇಲರ ಕಡೆಯ ಜನ ಅಲ್ಲಿಗೇ ಬಂದು ದಬ್ಬಾಳಿಕೆ ನಡೆಸಿದರು. ಕಥೆ ಇಷ್ಟಕ್ಕೇ ಮುಗಿಯಲಿಲ್ಲ. ಈ ಒಂಟಿ ಕುಟುಂಬದವರ ಹೊಲ ಗದ್ದೆಯ ಫಸಲಿಗೆ ರಾತ್ರೋ ರಾತ್ರಿ ಬೆಂಕಿ ಹಚ್ಚಲಾಯಿತು. ಪೊಲೀಸರನ್ನು ಮುಂಚಿತವಾಗಿಯೇ 'ಬುಕ್' ಮಾಡಿಕೊಂಡು ಪಟೇಲರು ತೊಡೆ ತಟ್ಟಲು ಆರಂಭಿಸಿದುದ್ದರಿಂದ, ಪೊಲೀಸರ ಮೂಲಕ ನ್ಯಾಯ ಪಡೆಯಲು ಸಾಧ್ಯವೇ ಇರಲಿಲ್ಲ.
ಮುಂದೆ ಏನಾಯಿತೆಂದರೆ, ಆ ಒಂಟಿ ಕುಟುಂಬದವರು 'ಸೈಲೆಂಟ್' ಆದಷ್ಟೂ ಪಟೇಲರ ದರ್ಪ ಹೆಚ್ಚಾಗುತ್ತಿತ್ತು. ಅವರೆಲ್ಲಾ ಓಡಿ ಬಂದು ಕಾಲು ಹಿಡಿಯುವಂತೆ ಮಾಡಿಯೇ ಸಿದ್ಧ ಎಂದು ಪಟೇಲರು ಹೀಂಕರಿಸಿದರು. ಆದರೆ, ತಪ್ಪೇ ಮಾಡದಿರುವಾಗ, ಪಟೇಲರ ಕಾಲು ಹಿಡಿಯುವ ಅನಿವಾರ್ಯತೆಯಾದರೂ ಏನಿದೆ? ಮೇಲೆ, ದೇವರು ಎಂಬಾತ ಇದ್ದಾನೆ. ತಪ್ಪು ಮಾಡಿದವರಿಗೆ ಅವನೇ ಶಿಕ್ಷೆ ಕೊಡ್ತಾನೆ ಎಂದುಕೊಂಡು ಈ ತಿರುಗಿ ಬಿದ್ದ ಕುಟುಂಬದ ಜನ ಸುಮ್ಮನೆ ಉಳಿದು ಬಿಟ್ಟರು. ಅದೊಂದು ಸಂಜೆ, ನಿರೀಕ್ಷಿಸದಿದ್ದ ಅನಾಹುತ ನಡೆದು ಹೋಯಿತು. ಪಕ್ಕದ ಊರಿನಲ್ಲಿ ಮದುವೆಗೆ ಹೋಗಿದ್ದ ಪಟೇಲರ ಮಗ, ಅಲ್ಲಿ ವಿನಾಕಾರಣ ಜಗಳ ಆರಂಭಿಸಿದ್ದ. ಮದುವೆಗೆ ಬಂದಿದ್ದ ಜನ, ರೇಗಿ, ಅವನಿಗೆ ಮುಖಮೂತಿ ನೋಡದೆ ಬಾರಿಸಿದ್ದರು.ಇಂಥದೊಂದು ಅವಮಾನವನ್ನು ಪಟೇಲರು ಕನಸಿನಲ್ಲಿಯೂ ನಿರೀಕ್ಷಿಸಿರಲಿಲ್ಲ. ಈ ಶಾಕ್‌ನಿಂದ ಅವರು ಕಂಗೆಟ್ಟರು. ತಿಂಗಳು ಕಳೆಯುವುದರೊಳಗೆ ಮತ್ತೊಂದು ಅನಾಹುತವಾಯಿತು. ಈ ಬಾರಿ ಪಟೇಲರೇ ಬೈಕ್‌ನಿಂದ ಬಿದ್ದು ಕಾಲು ಮುರಿದುಕೊಂಡರು. ಅದುವರೆಗೂ ಪಟೇಲರ ಎದುರು ನಿಂತು ಮಾತಾಡಲು ಹೆದರುತ್ತಿದ್ದವರೆಲ್ಲ ಈಗ ನಿಧಾನಕ್ಕೆ ಜಾಗೃತರಾದರು. ದೇವರು ಅನ್ನುವವನು ಇದ್ದಾನೆ ಎಂಬುದಕ್ಕೆ ಇನ್ಯಾನ ಸಾಕ್ಷಿ ಬೇಕ್ರೀ ಎಂದು ಹತ್ತು ಮಂದಿಗೆ ಕೇಳಿಸುವಂತೆಯೇ ಮಾತಾಡಿಕೊಂಡರು. ಪಟೇಲರ ಕುಟುಂಬದಲ್ಲಿದ್ದ ಜನ ಶಿಕ್ಷಣ ಹಾಗೂ ನೌಕರಿಯ ನೆಪದಲ್ಲಿ ಹಲವು ಊರುಗಳಲ್ಲಿ ಹಂಚಿ ಹೋಗಿದ್ದುದರಿಂದ, ಊರಿನವರ ಮೇಲೆ ಮೊದಲಿನಂತೆ ದಾದಾಗಿರಿ ನಡೆಸಲು ಸಾಧ್ಯವಿರಲಿಲ್ಲ.
ಮುಂದೆ ನಡೆದದ್ದು ಇನೊಂದು ಬಗೆಯ ಟ್ರಾಜೆಡಿ. ಆಕ್ಸಿಡೆಂಟ್‌ನಿಂದ ಪಟೇಲರು ಚೇತರಿಸಿಕೊಳ್ಳುವ ಮೊದಲೇ ಅವರ ಸುಪುತ್ರ ಪುಂಡರ ಸಹವಾಸಕ್ಕೆ ಬಿದ್ದಿದ್ದ. ಮದುವೆ ಮಾಡಿದರೆ ಮಗ ಸರಿ ಹೋಗುತ್ತಾನೆ ಅನಿಸಿದಾಗ ಪಟೇಲರು ಹಾಗೆಯೇ ಮಾಡಿದರು. ಯಾಕಪ್ಪಾ ದೇವರೇ ಇಂಥ ಅನ್ಯಾಯ ಮಾಡಿದೆ ಎಂದು ಪಟೇಲರು ಗೋಳಾಡಲು ನಿಂತರು. ಅದಕ್ಕೆ ಯಾವ ದಿಕ್ಕಿನಿಂದಲೂ ಉತ್ತರ ಬರಲಿಲ್ಲ. ಬದಲಾಗಿ, ಮತ್ತೊಂದು ದಾರುಣ ಸುದ್ದಿ ಪಟೇಲರನ್ನು ತಲುಪಿತ್ತು. ಏನೆಂದರೆ, ವಿಹಾರಕ್ಕೆಂದು ಹೋಗಿದ್ದ ಅವರ ಅಳಿಯ, ಪ್ರವಾಹಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿದ್ದ.
ಪಟೇಲರಿಗೆ ಮತ್ತೂ ಇಬ್ಬರು ಮಕ್ಕಳಿದ್ದರು. ಆ ಪೈಕಿ ಒಬ್ಬನಿಗೆ ವಿದ್ಯೆ ಹತ್ತಲಿಲ್ಲ. ಮೈ ಬಗ್ಗಿಸಿ ದುಡಿಯಲು ತಯಾರಿಲ್ಲದ ಆತ, ಎಲ್ಲವನ್ನೂ ಮಾರಲು ನಿಂತ. ಕೊನೆಯವನು ಮನೆಯವರಿಗೆ ಒಂದು ಮಾತೂ ಹೇಳದೆ ಮುಂಬೈಗೆ ಓಡಿ ಹೋದ. ಆರೇಳು ತಿಂಗಳ ನಂತರ, ಅವನು ರೈಲಿನಿಂದ ಜಾರಿ ಬಿದ್ದು ಕಾಲು ಮುರಿದುಕೊಂಡ ಸುದ್ದಿ ಬಂತು. ಒಂದು ಕಾಲದಲ್ಲಿ ರಾವಣನಂತೆ ಮೆರೆದಿದ್ದ ಪಟೇಲರು, ಮಕ್ಕಳ ಬದುಕು ತಮ್ಮ ಕಣ್ಣೆದುರೇ ಬರ್ಬಾದ್ ಆದುದನ್ನು ಕಂಡು ಶಾಕ್‌ನಿಂದ ಹಾಸಿಗೆ ಹಿಡಿದರು!'
ಇದಿಷ್ಟೂ, ಕಳೆದ ವಾರ ಫೋನ್ ಮಾಡಿದಾಗ ಅಮ್ಮ ಹೇಳಿದ ವಿವರಣೆ. ಆಮೇಲೆ ಏನಾಯ್ತಮ್ಮಾ ಅಂದರೆ-'ಹೆತ್ತವರು ಮಾಡಿದ ಕರ್ಮ, ಮಕ್ಕಳನ್ನು ಕಾಡುತ್ತದಂತೆ ಕಣೇ' ಎಂದು ಸುಮ್ಮನಾದಳು!
ಬದುಕಲ್ಲಿ ಹೀಗೆಲ್ಲ ಆಗುತ್ತಾ? ತಿಳಿದವರು ಉತ್ತರಿಸಿ ಪ್ಲೀಸ್...
-ನಾನು ಪ್ರಣತಿ
Advertisement