ಆಲಿಸಿರಿ...ಕಣ್ಣಾಲಿ ತುಂಬಿಸುವ ಮಹಮದ್ ಆಲಿ ಕಥೆಯ...

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಂದರ್ಭದಲ್ಲಿಯೇ ಪಾಕಿಸ್ತಾನದ ಉಗಮ...
ಆಲಿಸಿರಿ...ಕಣ್ಣಾಲಿ ತುಂಬಿಸುವ ಮಹಮದ್ ಆಲಿ ಕಥೆಯ...
Updated on

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಂದರ್ಭದಲ್ಲಿಯೇ ಪಾಕಿಸ್ತಾನದ ಉಗಮವೂ ಆದದ್ದು ವಿಪರ್ಯಾಸ. ದೇಶ ವಿಭಜನೆಯಾದ ಆ ಸಂದರ್ಭದಲ್ಲಿ ಗಲಭೆ, ರಕ್ತಪಾತ, ಅತ್ಯಾಚಾರದಂಥ ಹೇಯ ಘಟನೆಗಳು ನಡೆದವು. ಅದೇ ಕಾಲಕ್ಕೆ, ಕರುಳು ತಾಕುವಂಥ ಪ್ರಸಂಗಗಳೂ ಜರುಗಿದವು. ಅಂಥದೊಂದು ಹೃದ್ಯ ಪ್ರಸಂಗದ ಭಾವಾನುವಾದ ಇಲ್ಲಿದೆ. ಸದ್ಯಕ್ಕೆ ಕೋಲ್ಕತಾ ನಿವಾಸಿಯಾಗಿರುವ ಪರ್ವೇಜ್ ಆಂಡ್ರೂಸ್ ಎಂಬಾತ ಬರೆದ ಈ ಲೇಖನ, ರೀಡರ್ಸ್  ಡೈಜೆಸ್ಟ್ನಿಂದ ಆಯ್ದುಕೊಂಡದ್ದು...
ಅದು 1947ರ ಜುಲೈ ತಿಂಗಳ ಒಂದು ದಿನ. ಸ್ವಾತಂತ್ರ್ಯ ಸಿಗುವ ಕ್ಷಣಗಳು ಹತ್ತಿರಾದವು  ಎಂಬುದು ನಿಚ್ಚಳವಾಗುತ್ತಿದ್ದ ಸಂದರ್ಭ ಅದು. ಈ ಸಂಭ್ರಮದ ಮಧ್ಯೆಯೇ ಯಾರೂ ನಿರೀಕ್ಷಿಸಿರದಂಥ ಬೆಳವಣಿಗೆಯೊಂದು ಆಗಿ ಹೋಗಿತ್ತು. ಅದುವರೆಗೂ ಗಾಂಧೀಜಿ ಮತ್ತು ಇತರೆ ನಾಯಕರೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಮಹಮದ್ ಅಲಿ ಜಿನ್ನಾ, ದಿಢೀರನೆ ವರಸೆ ಬದಲಿಸಿದ್ದರು. ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರ ಬೇಕೆಂಬ ಬೇಡಿಕೆ ಮುಂದಿಟ್ಟಿದ್ದರು. ಅಷ್ಟೇ ಅಲ್ಲ. ಕಾಶ್ಮೀರದಿಂದ ಆಚೆಗಿನ ಪ್ರದೇಶದಲ್ಲಿ ಮುಸ್ಲಿಮರು ಪ್ರತ್ಯೇಕವಾಗಿ ವಾಸಿಸುವರೆಂದೂ, ಹೀಗೆ ಹೊಸದಾಗಿ ಸೃಷ್ಟಿಯಾದ ಮುಸ್ಲಿಂ ರಾಷ್ಟ್ರದ ಹೆಸರು 'ಪಾಕಿಸ್ತಾನ'ವೆಂದೂ ಘೋಷಿಸಿಬಿಟ್ಟರು. ಪರಿಣಾಮವಾಗಿ, ಅದುವರೆಗೂ ಒಂದಾಗಿದ್ದ ಭರತ ಖಂಡ, ನೋಡ ನೋಡುತ್ತಲೇ ಇಬ್ಭಾಗವಾಯಿತು. ಅದೇ ವೇಳೆಗೆ, ಹಿಂದುಗಳೆಲ್ಲ ಇಲ್ಲಿರಬೇಕು, ಮುಸ್ಲಿಮರೆಲ್ಲ ಅಲ್ಲಿಗೆ ಹೋಗಬೇಕು ಎಂದು ವಾದಿಸುವವರ ಸಂಖ್ಯೆ ಹೆಚ್ಚಾಯಿತು.
ದೇಶಾದ್ಯಂತ ಕೋಮುಗಲಭೆ ಆರಂಭವಾಗಿ ಹೋಯಿತು. ಹಿಂದೂಗಳು ಪ್ರಬಲರಾಗಿದ್ದ ಕಡೆಗಳಲ್ಲಿ ಮುಸ್ಲಿಮರ ಮೇಲೂ, ಮುಸ್ಲಿಮರು ಜೋರಾಗಿದ್ದ ಏರಿಯಾಗಳಲ್ಲಿ ಹಿಂದೂಗಳ ಮೇಲೂ ಹಲ್ಲೆ, ಕೊಲೆ, ಅತ್ಯಾಚಾರ, ಲೂಟಿಗಳು ಎಗ್ಗಿಲ್ಲದೆ ನಡೆದವು. ವಾರಗಳ ನಂತರವೂ ಈ ಹಿಂಸಾಚಾರ ನಿಲ್ಲದೇ ಹೋದಾಗ, ಕುಟುಂಬದವರೆಲ್ಲ ಉಳಿಯಬೇಕಾದರೆ ನಮಗೆಂದೇ ಸೃಷ್ಟಿಯಾದ ದೇಶಕ್ಕೆ ಹೋಗುವುದೇ ಒಳ್ಳೆಯದೆಂದು ಹಿಂದೂ -ಮುಸ್ಲಿಮರು ನಿರ್ಧರಿಸಿದರು. ಎರಡೂ ರಾಷ್ಟ್ರಗಳ ಗಡಿ ಭಾಗವಾದ ಜಮ್ಮು-ಕಾಶ್ಮೀರದ ಉದ್ದಕ್ಕೂ ಜನ, ಸಾಮಾನು-ಸರಂಜಾಮುಗಳನ್ನು ಹೇರಿಕೊಂಡ ಎತ್ತಿನ ಗಾಡಿಗಳು ಯಾತ್ರೆ ಹೊರಟವು. ಹೀಗೆ ವಲಸೆ ಹೊರಟವರೆಲ್ಲ, ಗುರುತು ಪರಿಚಯವಿಲ್ಲದ ಜಾಗದಲ್ಲಿ ಕಷ್ಟ ಕಾಲಕ್ಕೆ ಆಗುತ್ತದೆಂದು ಅದುವರೆಗೂ ಕೂಡಿಟ್ಟಿದ್ದ ಹಣ ಹಾಗೂ ಆಭರಣಗಳನ್ನು ಕೊಂಡೊಯ್ಯುತ್ತಿದ್ದರು. ಆದರೆ, ಹೆಚ್ಚಿನ ವಲಸಿಗರು ಮಾರ್ಗಮಧ್ಯೆಯೇ ದರೋಡೆಗೆ ಒಳಗಾದರು. ಹಣ-ಆಭರಣವನ್ನು ಕೊಡಲಿಲ್ಲ ಎಂಬ ಕಾರಣಕ್ಕಾಗಿ ದರೋಡೆಕೋರರು ನೂರಾರು ಮಂದಿಯನ್ನು ಕೊಂದು ಹಾಕಿದರೆಂಬ ಸುದ್ದಿ ಗಡಿಭಾಗದಿಂದ ಕೇಳಿ ಬರುತ್ತಿತ್ತು.
ನಾವು ವಾಸವಿದ್ದುದು ಭಾರತ-ಪಾಕಿಸ್ತಾನದ ಗಡಿ ಭಾಗವಾಗಿದ್ದ ಜಲಂಧರ್ನ ಸರ್ಕಾರಿ ವಸತಿ ಗೃಹದಲ್ಲಿ. ಕ್ರಿಶ್ಚಿಯನ್ನರಾಗಿದ್ದ ನಮಗೆ ವಲಸೆ ಹೋಗಬೇಕೆಂಬ ಗಡಿಬಿಡಿಯಿರಲಿಲ್ಲ. ನಮ್ಮ ತಂದೆಗೆ ಸರ್ಕಾರಿ ನೌಕರಿಯಿತ್ತು. ಮೂರು ಹೆಣ್ಣು, ಎರಡು ಗಂಡು-ಹೀಗೆ ಐದು ಮಕ್ಕಳ ಜೊತೆಗೆ ಅಪ್ಪ-ಅಮ್ಮ... ಹೀಗೆ ಒಟ್ಟು ಏಳು ಜನರಿದ್ದ ಕುಟುಂಬ ನಮ್ಮದು. ತಂದೆಯವರಿಗೆ ಒಬ್ಬ ನಿಷ್ಠಾವಂತ ಅಟೆಂಡರ್ ಇದ್ದ. ಅವನ ಹೆಸರು ಮಹಮದ್ ಆಲಿ. ಅವನಿಗೆ ಮೂವರು ಹೆಣ್ಣು ಮಕ್ಕಳು. ಅವರೂ ಹೆಚ್ಚು ಕಡಿಮೆ ನಮ್ಮದೇ ವಯಸ್ಸಿನವರಾಗಿದ್ದರು.
ಸ್ವಾತಂತ್ರ್ಯ ಪೂರ್ವದ ದಿನಗಳ ಸಂದರ್ಭ ಅಂದಮೇಲೆ ವಿವರಿಸಬೇಕಿಲ್ಲ ತಾನೆ? ಆಗೆಲ್ಲ ಅಟೆಂಡರ್ಗಳು ಸಾಹೇಬರ ಮನೆಯಲ್ಲೇ ಹೆಚ್ಚಿನ ಕಾಲ ಇರುತ್ತಿದ್ದರು. ಸಾಹೇಬರ ಮಕ್ಕಳನ್ನು ಆಟಕ್ಕೆ, ಶಾಲೆಗೆ ಕರೆದೊಯ್ಯುವುದು, ಮನೆಗೆ ಅಗತ್ಯ ವಸ್ತುಗಳನ್ನು ತಂದು ಕೊಡುವುದು, ಅಗತ್ಯ ಬಿದ್ದರೆ ಸಾಹೇಬರ ಮನೆಯ ಚಾಕರಿ ಮಾಡುವುದು... ಇದೆಲ್ಲಾ ಅಟೆಂಡರ್ಗಳ ಕೆಲಸವಾಗಿತ್ತು. ಆದರೆ, ನಮ್ಮ ತಂದೆ, ಇಂಥ ಆಚರಣೆಗಳಿಂದ ದೂರ ಉಳಿದಿದ್ದರು. ಮಹಮದಾಲಿ ಕೂಡ ನಮ್ಮ ಮನೆಯ ಒಬ್ಬ ಸದಸ್ಯ. ಆತನಿಗೆ ಯಾರೂ ಆರ್ಡರ್ ಮಾಡುವಂತಿಲ್ಲ ಎಂದು ನಿಷ್ಠುರವಾಗಿ ಹೇಳಿದ್ದರು. ಆಲಿಯ ಮಕ್ಕಳು ಹೆಚ್ಚಿನ ವೇಳೆಯನ್ನು ನಮ್ಮೊಂದಿಗೆ ಕಳೆಯುತ್ತಿದ್ದರು. ಹಾಗಾಗಿ, ಅವರು ಬೇರೆಯವರೆಂಬ ಭಾವನೆ, ನಮ್ಮಲ್ಲಿ ಯಾರಿಗೂ ಬರಲಿಲ್ಲ.
ಸಂದರ್ಭ ಹೀಗಿದ್ದಾಗಲೇ, ಕೋಮು ಗಲಭೆಯ ತೀವ್ರತೆ ಮತ್ತಷ್ಟು ಹೆಚ್ಚಿತು. ಮಹಮದ್ ಆಲಿಯ ಕುಟುಂಬ ವಾಸವಿದ್ದ ಏರಿಯಾದಲ್ಲಿ ಬೆರಳೆಣಿಕೆಯಷ್ಟು ಮುಸ್ಲಿಮರು ಇದ್ದುದರಿಂದ ತಮ್ಮ 'ಸೇಫ್ಟಿ' ಕುರಿತಂತೆ ಎಲ್ಲರಿಗೂ ಅಭದ್ರತೆ ಕಾಡತೊಡಗಿತು. ಅವರೆಲ್ಲಾ ಪಾಕಿಸ್ತಾನಕ್ಕೆ ವಲಸೆ ಹೋಗಲು ನಿರ್ಧರಿಸಿದರು.
ಅದೊಂದು ಮಧ್ಯಾಹ್ನ ಮಹಮದ್ ಆಲಿ ನಮ್ಮ ಮನೆಗೆ ಧಾವಿಸಿ ಬಂದವನೇ, ನಮ್ಮನ್ನೆಲ್ಲಾ ಬಾಚಿ ತಬ್ಬಿಕೊಂಡು ಬಿಕ್ಕಳಿಸತೊಡಗಿದ. ಅವನ ವರ್ತನೆಯಿಂದ ಕಂಗಾಲಾದ ಅಮ್ಮ- ಆಲೀ, ಏನಾಯ್ತಪ್ಪಾ, ಯಾಕೆ ಅಳ್ತಾ ಇದೀಯ? ಅಂದರು. 'ಅಮ್ಮಾ, ನಮ್ಮ ಏರಿಯಾದಲ್ಲಿದ್ದ ಮುಸ್ಲಿಮರೆಲ್ಲಾ ಪಾಕಿಸ್ತಾನಕ್ಕೆ ಹೊರಟಿದ್ದಾರೆ. ನಾನು ಒಬ್ಬನೇ ಇಲ್ಲಿ ಉಳಿಯಬಲ್ಲೆ. ಆದರೆ ಕುಟುಂಬದವರಿಗೆ ರಕ್ಷಣೆ ಸಿಗುತ್ತೆ ಎಂಬ ಭರವಸೆಯಿಲ್ಲ. ಹಾಗಾಗಿ ನಾವೂ ಹೊರಟಿದ್ದೇವೆ. ಹತ್ತು ವರ್ಷಕ್ಕೂ ಹೆಚ್ಚು ಕಾಲ ನಿಮ್ಮ ಮನೆಯ ಅನ್ನ ತಿಂದೆ. ಈ ಮುದ್ದು ಮಕ್ಕಳಿಗೆ ಕಾಕ, ಮಾಮ, ಅಂಕಲ್ ಎಲ್ಲವೂ ಆಗಿದ್ದೆ. ಈಗ ಎಲ್ಲರನ್ನೂ ಬಿಟ್ಟು ಹೋಗಬೇಕಲ್ಲ; ಅದು ನೆನಪಾಗಿ ಅಳು ಬಂತು' ಎಂದ. ನಂತರ ಹಾರ್ಲಿಕ್ಸ್ ಡಬ್ಬಿಯಂಥ ಡಬ್ಬಿಯೊಂದನ್ನು ಅಮ್ಮನ ಕೈಲಿಟ್ಟು, ನಮ್ಮ ಕುಟುಂಬದ ಎಲ್ಲರ ನೆನಪಿಗಾಗಿ, ಇದು ನಿಮಗೆ, ಈ ಮುದ್ದು ಮಕ್ಕಳಿಗೆ. ಕುಟುಂಬದವರೆಲ್ಲಾ ಹೊರಗೆ ಗಾಡಿಯಲ್ಲಿ ಕೂತಿದ್ದಾರಮ್ಮಾ. ಹೋಗಿ ಬರ್ತೀನಿ. ಆಶೀರ್ವಾದ ಮಾಡಿ ಎಂದು ಕೈ ಮುಗಿದವನು, ನಂತರ ಸರಸರನೆ ಹೋಗಿ ಗಾಡಿ ಏರಿದ.
ನಾವು ಐದು ಮಂದಿ ಮಕ್ಕಳಲ್ಲೂ ಮಹಮದ್ ಆಲಿಗೆ ವಿಶೇಷ ಪ್ರೀತಿಯಿತ್ತು. ಅವರ ಮನೆಯಲ್ಲಿ ತಯಾರಿಸಿದ ವಿಶೇಷ ತಿಂಡಿಗಳನ್ನು ಡಬ್ಬಿಯಲ್ಲಿ ತುಂಬಿಸಬಹುದೆಂದು ನಾವೆಲ್ಲಾ ಊಹಿಸಿದ್ದೆವು. ಆಲಿ ಮತ್ತು ಕುಟುಂಬದವರಿದ್ದ ಎತ್ತಿನ ಗಾಡಿ ಕಣ್ಮರೆಯಾದ ಎಷ್ಟೋ ಹೊತ್ತಿನ ಬಳಿಕವೂ ಆಲಿಯ ಒಳ್ಳೆಯ ಗುಣವನ್ನು ನೆನಪಿಸಿಕೊಳ್ಳುತ್ತಾ ಆತ ಕೊಟ್ಟು ಹೋಗಿದ್ದ ತಿಂಡಿ ತಿನ್ನಲೆಂದು ಅಮ್ಮ ಎಲ್ಲರನ್ನೂ ಕರೆದಳು. ಡಬ್ಬಿಯೊಳಗೆ ಯಾವ್ಯಾವ ಸಿಹಿ ತಿಂಡಿ ಇರಬಹುದೆಂದು ನಾವು ಚರ್ಚೆಯಲ್ಲಿ ತೊಡಗಿದ್ದಾಗಲೇ, ಮುಚ್ಚಳ ತೆರೆದ ಅಮ್ಮ-ಓಹ್, ಎಂದು ಉದ್ಗರಿಸಿ ತಟಸ್ಥಳಾಗಿ ನಿಂತುಬಿಟ್ಟಳು. ಇಂಥದೊಂದು ನಡೆಯನ್ನು ನಿರೀಕ್ಷಿಸಿರದಿದ್ದ ನಾವು, ಅಚ್ಚರಿಯಿಂದ ಡಬ್ಬಿಯೊಳಗೆ ಇಣುಕಿದರೆ-ಅದರ ತುಂಬಾ ಬಂಗಾರದ ಆಭರಣಗಳಿದ್ದವು! ಉಂಗುರ, ಸರ, ಓಲೆ, ಜಮುಕಿ... ಇನ್ನೂ ಏನೇನೋ.
ಆ ಆಭರಣಗಳು ಆಲಿಯ ಜೀವಮಾನದ ದುಡಿಮೆಯಿಂದ ಖರೀದಿಸಿದಂಥವು. ಮಕ್ಕಳ ಮದುವೆಯಲ್ಲಿ ಅಥವಾ ಆಕಸ್ಮಿಕವಾಗಿ ಕಷ್ಟ- ಎದುರಾದ ಸಂದರ್ಭದಲ್ಲಿ ಅವುಗಳನ್ನು ಬಳಸುವುದಾಗಿ ಆಲಿಯ ಕುಟುಂಬದ ಹೆಂಗಸರು ಆಗಾಗ್ಗೆ ಮಾತಾಡುತ್ತಿದ್ದುದು ಅಮ್ಮನಿಗೆ ಗೊತ್ತಿತ್ತು. ಅದನ್ನೆಲ್ಲಾ ತಂದೆಯವರಿಗೂ, ನಮಗೂ ತಿಳಿಸಿದ ಆಕೆ, ಗಡಿಬಿಡಿಯಿಲ್ಲದ ಆ ಡಬ್ಬಿಯ ಮುಚ್ಚಳ ಹಾಕಿ ಸೀಲ್ ಮಾಡಿಬಿಟ್ಟಳು. ಅದನ್ನೊಯ್ದು ಅಲ್ಮೇರಾದಲ್ಲಿಟ್ಟು, ಬೀಗ ಹಾಕಿದಳು. ನಂತರ ನಮ್ಮೆದುರು ನಿಂತು -ಆಲಿ ನಮಗೆ ಆಭರಣಗಳಿಂದ ತುಂಬಿದ ಡಬ್ಬಿ ಕೊಟ್ಟು ಹೋದರೆಂದು ಯಾರಿಗೂ ಹೇಳಬೇಡಿ ಎಂದು ತಾಕೀತು ಮಾಡಿದಳು. ಪ್ರಾಮಿಸ್ ಮಾಡಿಸಿಕೊಂಡಳು. ಮುಂದೆ, ಬಾಲ್ಯದ ಒಂದೊಂದೇ ವರ್ಷ ಕಳೆಯುತ್ತಿದ್ದಂತೆ, ಆಲಿ ಬಾಕ್ಸ್ ಕೊಟ್ಟು ಹೋದ ವಿಷಯವನ್ನು ನಾವೆಲ್ಲಾ ಮರೆತೇ ಬಿಟ್ಟೆವು.
ಹೀಗೇ 6 ವರ್ಷಗಳು ಕಳೆದವು. ತಂದೆಯವರಿಗೆ ಪಂಜಾಬ್ನ ಇನ್ನೊಂದು ತುದಿಯಲ್ಲಿರುವ ಅಂಬಾಲಕ್ಕೆ ವರ್ಗವಾಗಿತ್ತು. ಅಲ್ಲಿನ ಸರ್ಕಾರಿ ವಸತಿ ಗೃಹದಲ್ಲಿ ನಾವೆಲ್ಲಾ ಹರಟೆಯಲ್ಲಿ ತಲ್ಲೀನರಾಗಿದ್ದಾಗಲೇ, ಮನೆಯ ಮುಂದೆ ಟಾಂಗಾ ಬಂದು ನಿಂತಿತು. ಅದರಿಂದ, ಟ್ರಿಮ್ ಆಗಿದ್ದ ವ್ಯಕ್ತಿಯೊಬ್ಬ ಕೆಳಗಿಳಿದ. ನಾವು, ಐವರಿಗೂ ಎರಡೇ ನಿಮಿಷದಲ್ಲಿ ಅವನ ಗುರುತು ಸಿಕ್ಕಿಬಿಟ್ಟಿತು. ಏಕಕಂಠದಲ್ಲಿ ಮಹಮದಾಲಿ ಮಾಮಾ, ಮಹಮದಾಲಿ ಅಂಕಲ್ ಎಂದು ಚೀರಿದೆವು. ನಮ್ಮ ಚೀರಾಟ ಕೇಳಿ ಗಡಿಬಿಡಿಯಿಂದ ಬಂದ ಅಮ್ಮ- ಅರೇ, ಹೌದಲ್ವಾ? ಮಹಮದ್ ಆಲಿ! ಎಂದು ಉದ್ಗರಿಸಿದರು. ನಮ್ಮೆಲ್ಲರ ಉತ್ಸಾಹ ಕಂಡು ಆಲಿಗೂ ಖುಷಿಯಾಗಿತ್ತು. ಆತ ಅಪ್ಪ-ಅಮ್ಮನಿಗೆ ಭಯ-ಭಕ್ತಿಯಿಂದ ನಮಸ್ಕರಿಸಿದ. ನಂತರ ನಮ್ಮೆಲ್ಲರ ಬೆಳವಣಿಗೆಯ ಬಗ್ಗೆ ತಿಳಿದು ಸಂಭ್ರಮಿಸಿದ. ಪಾಕಿಸ್ತಾನದ ಸರ್ಕಾರದಲ್ಲಿ ತಾನು ಮೊದಲ ದರ್ಜೆಯ ಕ್ಲರ್ಕ್ ಆಗಿರುವುದಾಗಿಯೂ ತಿಳಿಸಿದ. ತನ್ನ ಮೂವರೂ ಮಕ್ಕಳು ಚೆನ್ನಾಗಿ ಓದುತ್ತಿದ್ದಾರೆಂದು ಹೇಳಿ ಖುಷಿಪಟ್ಟ. ಆಲಿಯ ಅನಿರೀಕ್ಷಿತ ಆಗಮನದಿಂದ ಖುಷಿಯಾಗಿದ್ದ ಅಮ್ಮ, ಅವಸರದಿಂದಲೇ ಸಿಹಿ ತಯಾರಿಸಿದಳು.
ನೋಡನನೋಡುತ್ತಲೇ ಸಂಜೆಯಾಯಿತು. ಟೈಂ ಆಯ್ತು ಸಾಹೇಬರೇ ಹೋಗಿ ಬರ್ತೇನೆ ಎನ್ನುತ್ತಾ ಆಲಿ ಎದ್ದು ನಿಂತ. ಹೊರಡುವ ಮುನ್ನ ನಮ್ಮೆಲ್ಲರ ಕೈ ಹಿಡಿದು ಹಣೆಗೆ ಒತ್ತಿಕೊಂಡ. ಅಮ್ಮನಿಗೆ ನಮಸ್ಕರಿಸಿ-ಹೋಗಿ ಬರ್ತೇನೆ ಮೇಮ್ಸಾಬ್ ಎಂದವನೇ, ಸರಸರನೇ ಹೋಗಿ ಟಾಂಗಾದಲ್ಲಿ ಕೂತೇ ಬಿಟ್ಟ. ಆರು ವರ್ಷದ ಹಿಂದೆ ಕೊಟ್ಟು ಹೋಗಿದ್ದ ಆಭರಣಗಳನ್ನು ಆತ ಕೇಳಬಹುದೇನೋ ಎಂದು ನಾವೆಲ್ಲ ಕುತೂಹಲಗೊಂಡಿದ್ದೆವು. ಉಹುಂ, ಅಪ್ಪಿ ತಪ್ಪಿ ಕೂಡ ಅವನು ಆಭರಣದ ವಿಷಯ ಪ್ರಸ್ತಾಪಿಸಲೇ ಇಲ್ಲ. ಆತನ ಟಾಂಗಾ ಇನ್ನೇನು ಹೊರಡಬೇಕು; ಅಷ್ಟರಲ್ಲಿಯೇ ಅಮ್ಮ ಕೇಳಿಬಿಟ್ಟಳು: 'ಮಹಮದ್ ಆಲಿ, ನೀನು ಏನನ್ನಾದ್ರೂ ಮರೆತು ಬಿಟ್ಟಿದ್ದೀಯಾ, ಚೆಕ್ ಮಾಡಿಕೋ...' ಆಲಿ, ಒಮ್ಮೆ ತನ್ನ ಬ್ಯಾಗ್ ಚೆಕ್ ಮಾಡಿ-ಇಲ್ಲ ಮೇಮ್ಸಾಬ್, ಏನನ್ನೂ ಮರೆತಿಲ್ಲ ಅಂದ. ತಕ್ಷಣವೇ ಅಮ್ಮ- 'ಒಂದು ನಿಮಿಷ ನಿಂತ್ಕೋ' ಅಂದವಳೇ ಒಳಮನೆಗೆ ಓಡಿ ಹೋದಳು. ಅಲ್ಮೇರಾದಲ್ಲಿ ಜೋಪಾನವಾಗಿ ಇಟ್ಟಿದ್ದ ಆಭರಣಗಳ ಡಬ್ಬವನ್ನು ತಂದು ಆಲಿಯ ಕೈಗಿಟ್ಟು, 'ಆರು ವರ್ಷದ ಹಿಂದೆ ಪಾಕಿಸ್ತಾನಕ್ಕೆ ವಲಸೆ ಹೊರಟಾಗ ನೀನು ಕೊಟ್ಟು ಹೋಗಿದ್ದ ಬಾಕ್ಸ್ ಇದು. ಇದು ನಿನ್ನ ಶ್ರಮದಿಂದ ಸಂಪಾದಿಸಿದ್ದು. ಇದೆಲ್ಲಾ ನಿನ್ನ ಮಕ್ಕಳಿಗೆ ಸೇರಬೇಕು. ಅವತ್ತಿನಿಂದ ಜೋಪಾನವಾಗಿ ಕಾಪಾಡಿದ್ದೇನೆ. ಹುಷಾರಾಗಿ ತಗೊಂಡು ಹೋಗು. ಮನೆಯಲ್ಲಿ ಎಲ್ಲರಿಗೂ ನೆನಪು ತಿಳಿಸು' ಅಂದಳು.
ಬಹುಷಃ ಇಂಥ ಉಡುಗೊರೆಯನ್ನು ಆಲಿ ಕನಸಿನಲ್ಲೂ ನಿರೀಕ್ಷಿಸಿರಲಿಲ್ಲ. ಆತ ಟಾಂಗಾದಿಂದ ಇಳಿದವನೇ ಭಾವುಕನಾಗಿ ಅಳತೊಡಗಿದ. 'ಖಂಡಿತ ನಾನು ಈ ಆಭರಣಗಳಿಗಾಗಿ ಬರಲಿಲ್ಲ ಮೇಮ್ಸಾಬ್. ಆಫೀಸ್ ಕೆಲಸದ ಮೇಲೆ ಜಲಂಧರ್ಗೆ ಬಂದಿದ್ದೆ. ಅಲ್ಲಿ ವಿಚಾರಿಸಿದಾಗ ನೀವು ಇಲ್ಲಿರುವುದು ಗೊತ್ತಾಯಿತು. ಮಕ್ಕಳನ್ನೆಲ್ಲ ನೋಡಬೇಕು ಅನಿಸಿದ್ದರಿಂದ ಬಂದು ಬಿಟ್ಟೆ' ಎಂದ. ಮುಂದುವರಿದು -ಆರು ವರ್ಷದ ಹಿಂದೆ, ಈ ಆಭರಣಗಳೊಂದಿಗೆ ಪಾಕಿಸ್ತಾನದ ಕಡೆಗೆ ಹೊರಟಿದ್ದರೆ, ದರೋಡೆಕೋರರ ದಾಳಿಗೆ ಸಿಕ್ಕಿ ನಾವು ಕುಟುಂಬದವರೆಲ್ಲ ಕೊಲೆಯಾಗಿ ಹೋಗುತ್ತಿದ್ದೆವು. ಆ ಅನಾಹುತವನ್ನು ಮೊದಲೇ ನಿರೀಕ್ಷಿಸಿ, ಆಭರಣದ ಬಾಕ್ಸ್ ಕೊಟ್ಟಿದ್ದೆ. ಸಾಹೇಬರು ನನಗೆ ಹಿರಿಯಣ್ಣನ ಸಮಾನ. ಮಕ್ಕಳ ಮದುವೆಗೆ ಚಿಕ್ಕಪ್ಪ ಕೊಟ್ಟ ಉಡುಗೊರೆ ಎಂದು ಇವನ್ನೂ ನಿಮ್ಮಲ್ಲಿಯೇ ಇಟ್ಟುಕೊಳ್ಳಿ ಎಂದು ಪ್ರಾರ್ಥಿಸಿದ.
ಅವನ ಮಾತನ್ನು ಅಪ್ಪ-ಅಮ್ಮ ಒಪ್ಪಲಿಲ್ಲ. ನನಗಿದು ಬೇಡ ಅಂತ ಅವನೂ, ಉಹುಂ, ನೀನು ತಗೊಂಡು ಹೋಗಲೇಬೇಕು ಎಂದು ಅಮ್ಮನೂ ವಾದಕ್ಕಿಳಿದರು. ಆಗ ಮಧ್ಯೆ ಪ್ರವೇಶಿಸಿದ ತಂದೆಯವರು -ಇದು ಆಭರಣದ ಬಾಕ್ಸ್ ಅಲ್ಲ. ಸಾಹೇಬರ ಮನೆಯಿಂದ ಕೊಡಲಾದ ತಿಂಡಿಯ ಬಾಕ್ಸ್ ಎಂದರು. ನಂತರ, ಬಾರ್ಡರ್ನಲ್ಲಿ ತೆರಿಗೆ ಅಧಿಕಾರಿಗಳಿಂದ ಆಲಿಗೆ ತೊಂದರೆಯಾಗದಿರಲಿ ಎಂಬ ಉದ್ದೇಶದಿಂದ ಒಂದು ಪತ್ರ ಬರೆದು ಕೊಟ್ಟರು. ಆಲಿ, ಎಲ್ಲರಿಗೂ ಮತ್ತೊಮ್ಮೆ ನಮಸ್ಕರಿಸಿ, ಕಣ್ತುಂಬಿಕೊಂಡು ಎದ್ದು ಹೋದ. ಎರಡು ವಾರಗಳ ನಂತರ -ಪಾಕಿಸ್ತಾನ ದೇಶದ ಅಂಚೆ ಚೀಟಿ ಹೊತ್ತ ಪತ್ರವೊಂದು ಬಂತು. ಅದರಲ್ಲಿ ಹೀಗೆ ಬರೆಯಲಾಗಿತ್ತು: 'ಸಾಹೇಬರ ಮನೆಯಿಂದ ಬಂದ ಸಿಹಿ ತಿಂಡಿ, ನಮ್ಮ ಸಂಭ್ರಮವನ್ನು ಸಾವಿರ ಪಟ್ಟು ಹೆಚ್ಚಿಸಿದೆ. ಈ ಖುಷಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ...'


- ಎ.ಆರ್. ಮಣಿಕಾಂತ್
armanikanth@gmail.com


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com