

ಸುಮಾರು ಮೂರು- ನಾಲ್ಕು ತಿಂಗಳಿಂದ ಸತತವಾಗಿ ಭಾರತದ ಮತ್ತು ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಒಂದು ಸಂಗತಿಯೆಂದರೆ, ಭಾರತದ ಕೆಲ ಸರ್ಕಾರೇತರ ಸಂಸ್ಥೆಗಳು ಮತ್ತು ಪರಿಸರವಾದಿಗಳು ವಿನಾಕಾರಣ ದೇಶದ ಪ್ರಗತಿ ಕಾರ್ಯಗಳಿಗೆ ಪರಿಸರ ರಕ್ಷಣೆ ನೆಪದಲ್ಲಿ ಅಡ್ಡ ಬರುತ್ತಿದ್ದಾರೆ ಎಂಬುದು. ಈ ಅಡ್ಡಗಾಲಿನ ಪ್ರವೃತ್ತಿ ಎಷ್ಟರಮಟ್ಟಿಗೆ ಬೆಳೆದಿದೆ ಎಂದರೆ ಜೈರಾಮ್ ರಮೇಶ್ ಮಂತ್ರಿಯಾದಾಗಿನಿಂದಲೂ ಕೇಂದ್ರ ಪರಿಸರ ಮಂತ್ರಾಲಯ ಯಾವುದೇ ಪ್ರಗತಿಪರ ಯೋಜನೆಗಳಿಗೆ ಅನುಮತಿಸದೇ ಕೊಳೆಸುತ್ತಿದೆ. ದೇಶದ ಪ್ರಗತಿಗೆ ಸ್ವಯಂಸೇವಾ ಸಂಸ್ಥೆಗಳೇ ಅಡ್ಡಗಾಲು ಹಾಕುತ್ತಿವೆ ಎಂದು ಅಂದಿನ ಪ್ರಧಾನಿ ಡಾ. ಮನಮೋಹನಸಿಂಗ್‌ರು ಕೂಡಾ ಅಮೆರಿಕದ ಪ್ರತಿಷ್ಠಿತ ವಿಜ್ಞಾನ ಮ್ಯಾಗಜಿನ್ Scienceಗೆ ಕೊಟ್ಟ ಒಂದು ಸಂದರ್ಶನದಲ್ಲಿ ಹೇಳಿದ್ದರು. ಆವಾಗ ಕೂಡಂಕುಲಂ ಅಣುಶಕ್ತಿ ಸ್ಥಾವರದ ಚಾಲನೆಗೆ ಅಡ್ಡ ಬರುತ್ತಿದ್ದ ಪರಿಸರವಾದಿಗಳಿಗೆ ಮತ್ತು ಕೆಲ ರಾಜಕೀಯ ಶಕ್ತಿಗಳಿಂದ ಪ್ರೇರೇಪಿತ ಆಂದೋಲನಗಳು. ಅದೇ ಸಂದರ್ಶನದಲ್ಲಿ ಡಾ. ಸಿಂಗ್‌ರವರು ಕುಲಾಂತರಿ ತಳಿಗಳು ಮತ್ತು ಆಹಾರಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಕೆಲ ಸರ್ಕಾರೇತರ ಸಂಸ್ಥೆಗಳನ್ನೂ ಉದಾಹರಿಸಿದ್ದರು. ಆಗ ಈ ವಿರೋಧಿ ಸಂಸ್ಥೆಗಳು ನಾವು ಪ್ರಗತಿಗೆ ಅಡ್ಡಿ ಬರುತ್ತಿಲ್ಲ ಎಂದು ಗದ್ದಲವೆಬ್ಬಿಸಿದವು. ಓರ್ವ ಅಣುಶಕ್ತಿ ವಿರೋಧಿ ನಾಯಕ ಡಾ. ಸಿಂಗ್‌ರವರ ಮೇಲೆ ಕೋರ್ಟಿನಲ್ಲಿ ಕೇಸು ಹಾಕುತ್ತೇನೆಂದು ಗರ್ಜಿಸಿದ್ದ. ಈಗಲೂ ಸಹ, ಅದೇ ಮಹಾಶಯ ಸರ್ಕಾರದ ಮೇಲೆ ಮಾನನಷ್ಟ ಮೊಕದ್ದಮೆ ಹಾಕುತ್ತೇನೆಂದು ಹೇಳಿಕೆ ಕೊಟ್ಟಿದ್ದಾರೆ ಮತ್ತು ಅದರ ಸಲುವಾಗಿ ಒಬ್ಬ ವಕೀಲರನ್ನು ನೇಮಿಸಿಕೊಂಡಿದ್ದಾರೆ.
ಒಂದು ಅಂತಾರಾಷ್ಟ್ರೀಯ NGO(INGO) ಗ್ರೀನ್‌ಪೀಸ್‌ನ ಹೆಸರು ಕುಲಾಂತರಿ ವಿರೋಧಿ ಆಂದೋಲನದ ಮುಂಚೂಣಿಯಲ್ಲಿದೆ. ಇದಲ್ಲದೆ, ಡಾ. ವಂದನ ಶಿವ ಅವರ ನವಧಾನ್ಯ, ಡಾ. ಸುಮನ್ ಸಹಾಯ್ ಅವರ ಬೇನ್ ಕ್ಯಾಂಪೇನ್, ಕವಿತ ಕುರುಗಂಟಿಯವರ 'ASHA' ಎಂಬ ದೇಶೀಯ ಸ್ವಯಂಸೇವಾ ಸಂಸ್ಥೆಗಳು ಸರ್ಕಾರದ Information Bureau (IB) ತಯಾರಿಸಿರುವ ದೇಶದ ಪ್ರಗತಿಗೆ ಅಡ್ಡ ಬರುತ್ತಿರುವ ಸಂಸ್ಥೆಗಳು ಪಟ್ಟಿಯಲ್ಲಿವೆ. ಇವಲ್ಲದೇ ಇನ್ನೂ ಹತ್ತಾರು ಮರಿ-ಪುಡಿ ಸ್ವಯಂಸೇವಾ ಸಂಸ್ಥೆಗಳೂ ಸಹ ಇವರೆಲ್ಲರ ಜೊತೆಗೂಡಿ ಕುಲಾಂತರಿ ವಿರೋಧಿ ಆಂದೋಲನ ನಡೆಸುತ್ತಿದೆ.
ಈ ವಿರೋಧಿ ಸಂಸ್ಥೆಗಳನ್ನು ಪ್ರೋತ್ಸಾಹಿಸುವ ಕೆಲವು ಪತ್ರಕರ್ತರು ಮತ್ತು ಪತ್ರಿಕೆಗಳ ವಾದ ಹೀಗಿದೆ. ಸರ್ಕಾರ ತನ್ನ ನೀತಿ ನಿರೂಪಣೆಯ ಹೊಣೆಯಲ್ಲಿ ಸೋತಿರುವುದನ್ನು ಮುಚ್ಚಿಟ್ಟುಕೊಳ್ಳಲು ಈ ರೀತಿ ಏನೂ ಅರಿಯದ ಮತ್ತು ಪ್ರಾಮಾಣಿಕವಾಗಿ ದೇಶದ ಪರಿಸರ ಕಾಳಜಿ ಹೊಂದಿರುವ 'ಎಂಗೋ'(NGO) ಮತ್ತು (INGO)ಗಳ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಬೊಬ್ಬಿಡುತ್ತಿವೆ. ಇಲ್ಲಿ ಮುಖ್ಯವಾಗಿ ಕಾಣಬೇಕಾದ ಅಂಶವೆಂದರೆ, ಗುಪ್ತಚರ ವರದಿ ರೂಪಿಸುವಂತೆ ಯುಪಿಎ-2 ಸರ್ಕಾರವೇ ಆದೇಶ ನೀಡಿತ್ತು. ಆದರೆ ಇಂಚೆಲಿಜೆನ್ಸ್ ಬ್ಯೂರೋ (IB)ವರದಿ ಸರ್ಕಾರಕ್ಕೆ ಸಲ್ಲಿಸಿದ್ದು ಇನ್ನೂ ಒಂದು ವಾರವೂ ಆಗಿರದ ನರೇಂದ್ರ ಮೋದಿ ಸರ್ಕಾರಕ್ಕೆ. ಈ ವಿರೋಧಿ ಸಂಘ -ಸಂಸ್ಥೆಗಳು ವಿನಾಕಾರಣ ಮೋದಿ ಸರ್ಕಾರದ ಮೇಲೆ ಮುಗಿಬಿದ್ದಿದೆ. ಸದ್ಯಕ್ಕಂತೂ ಮೋದಿ ಸರ್ಕಾರ ಈ ವರದಿಯ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳುತ್ತದೆಂದು ಕಾದು ನೋಡಬೇಕಿದೆ. ಸದ್ಯಕ್ಕೆ ಕೇಂದ್ರ ಸರ್ಕಾರ ಗ್ರೀನ್‌ಪೀಸ್‌ಗೆ ಹೊರ ದೇಶದಿಂದ ಹಣ ತರಿಸಿಕೊಳ್ಳುವ ಅನುಮತಿಯನ್ನು ತಡೆ ಹಿಡಿದಿದೆ.
ಇನ್ನೊಂದು ನಕಾರಾತ್ಮಕ ಪ್ರಚಾರದ ಗುಂಪು ಹೀಗೆ ಹೇಳುತ್ತದೆ- 'ಬಂಡವಾಳಶಾಹಿ ವ್ಯಾಪಾರಸ್ಥರಿಂದ ಮತ್ತು ಕೈಗಾರಿಕೋದ್ಯಮಿಗಳ ನೆರವಿನಿಂದ ಗೆದ್ದು ಬಂದ ಎನ್‌ಡಿಎ ಸರ್ಕಾರ ಕಣ್ಣು ಮುಚ್ಚಿಕೊಂಡು ಕೇಂದ್ರ ಪರಿಸರ ಮಂತ್ರಾಲಯದಿಂದ ಖುಲ್ಲಾಖುಲ್ಲಂ ಅನುಮತಿ ಕೊಟ್ಟು ಪರಿಸರಕ್ಕೆ ಹಾನಿಕರವಾಗುವಂತಹ ಯೋಜನೆಗಳಿಗೆ ಅನುಮತಿ ನೀಡುತ್ತದೆಂದು ಬೊಬ್ಬೆ ಹೊಡೆಯುತ್ತಿದೆ. ಯುಪಿಎ ಸರ್ಕಾರ ಇನ್ನೇನು ಕುಲಾಂತರಿ ತಳಿಗಳ ಮೇಲೆ ಹೇರಿರುವ ನಿರ್ಬಂಧವನ್ನು ತೆರವುಗೊಳಿಸಬೇಕೆಂದಿದ್ದಾಗಲೇ, ಸರ್ಕಾರದ ಅವಧಿ ಮುಗಿಯಿತು. ಆದರೂ ಪರಿಸರ ಖಾತೆಯ ಮಾಜಿ ಮಂತ್ರಿ ವೀರಪ್ಪ ಮೊಯ್ಲಿ ಕುಲಾಂತರಿ 'ಕ್ಷೇತ್ರ ಪರೀಕ್ಷೆ' ಮಾಡುವುದಕ್ಕೆ ಹಸಿರು ನಿಶಾನೆ ತೋರಿಸಿದ್ದರು. ಆದರೂ ಸಹ ಪರಿಸರ ಮಂತ್ರಾಲಯದ ಅಧಿಕಾರಿಗಳು ಅನುಮತಿ ಪತ್ರಗಳನ್ನು ಇದುವರೆಗೂ ನೀಡಿಲ್ಲ. ಯಾಕೆಂದರೆ ಸುಮಾರು ನಾಲ್ಕೈದು ವರ್ಷಗಳಿಂದ ಸುಪ್ರಿಂಕೋರ್ಟಿನಲ್ಲಿ ನಡೆದುಕೊಂಡು ಬಂದಿರುವ ಒಂದು ಕುಲಾಂತರಿ ಖಟ್ಲೆ ಇದುವರೆವಿಗೂ ಇತ್ಯರ್ಥವಾಗದೇ ಈ ತಿಂಗಳಿನಲ್ಲಿ ಅಂತ್ಯಗೊಳ್ಳುವ ಸಂಭವವಿರುವುದರಿಂದ ಅನುಮತಿ ಪತ್ರಗಳನ್ನು ತಡೆಹಿಡಿಯಲಾಗಿದೆ. ಪ್ರಸ್ತುತ ಪರಿಸರ ಮಂತ್ರಿ ಪ್ರಕಾಶ್ ಜಾವಡೇಕರ್‌ರವರು ಕುಲಾಂತರಿ ವಿಷಯದ ಬಗ್ಗೆ ಯಾವ ಹೇಳಿಕೆಯನ್ನೂ ಕೊಟ್ಟಿಲ್ಲ. ಆದರೆ ಕೇಂದ್ರ ಕೃಷಿ ಮಂತ್ರಿ ಮಾತ್ರ ನಾವು ಬೇರೆ ಗತಿ ಕಾಣದಲ್ಲಿ, ಕುಲಾಂತರಿ ತಳಿಗಳನ್ನು ಅತ್ಯಂತ ಜಾಗರೂಕರಾಗಿ ರೈತರಿಗೆ ಬಿಟ್ಟು ಕೊಡುವುದಾಗಿ ಹೇಳಿದ್ದಾರೆ. ಆದರೆ ಬೇರೆ ಗತಿಯಿಲ್ಲದ ಕಾರಣವನ್ನು ಇತ್ಯರ್ಥ ಮಾಡುವವರು ಯಾರು ಮತ್ತು ಅದಕ್ಕೆ ಸಲ್ಲುವ ಮಾನದಂಡಗಳನ್ನು ಗುರುತುಪಡಿಸುವವರು ಯಾರು ಎಂಬುದೇ ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಹಿಂದಿನ ಪರಿಸರ ಮಂತ್ರಿಗಳಾದ ಜೈರಾಮ್ ರಮೇಶ್ ಮತ್ತು ಜಯಂತಿ ನಟರಾಜನ್ ಅವರುಗಳು ಸೋನಿಯ ಗಾಂಧಿ ಕುಟುಂಬಕ್ಕೆ ನಿಕಟವರ್ತಿಗಳು. ಸ್ವಯಂಯೇವಾ ಸಂಸ್ಥೆಯ ಮತ್ತು ಪರಿಸರವಾದಿಗಳಿಂದ ಕೂಡಿದ ಸೋನಿಯಾರವರ ರಾಷ್ಟ್ರೀಯ ಸಲಹಾ ಮಂಡಳಿ (NAC) ಎಂಬ ಸಂವಿಧಾನೇತರ ಗುಂಪು ನೀತಿ ನಿರೂಪಣೆಗಳಲ್ಲಿ ಪಾತ್ರ ವಹಿಸಿತ್ತು. NAC ಯಿಂದ ರೂಪುಗೊಂಡ ಸಚಿವರೇ ಜೈರಾಮ್ ರಮೇಶ್. ರಾಜ್ಯಸಭೆಯ ಸದಸ್ಯ ಕೂಡ. ಯಾವಾಗ ಬಿಟಿ ಬದನೆಯ ವಿರೋಧಿ ಆಂದೋಲನ ಶುರುವಾಗಿತ್ತೋ ಅಂದಿನಿಂದಲೇ ಪರಿಸರವಾದಿಗಳ ಮನಸ್ಸು ಓಲೈಸುತ್ತಾ ಅವೈಜ್ಞಾನಿಕವಾಗಿ ಹಾಗೂ ಅನಧಿಕೃತವಾಗಿ ಕುಲಾಂತರಿ ತಳಿ ಮೇಲೆ ನಿಷೇಧ ಹೇರಿಯೇ ಬಿಟ್ಟರು. ಇದರಿಂದಾಗಿ ಪರಿಸರವಾದಿಗಳಿಗೆ ಜೈರಾಮ್ ರಮೇಶ್ ಒಬ್ಬ ನ್ಯಾಷನಲ್ ಹೀರೋನಂತೆ ಕಂಡು ಬಂದರು. ಈ ಕಾರಣಕ್ಕಾಗಿಯೇ ಜೈರಾಮ್ ರಮೇಶ್‌ರನ್ನು ಡಾ. ಸಿಂಗ್ ಪರಿಸರ ಮಂತ್ರಾಲಯದಿಂದ ತೆಗೆದು ಜಯಂತಿ ನಟರಾಜನ್ ಅವರನ್ನು ತಂದು ಕೂಡಿಸಿದರು. ಆದರೆ ಜಯಂತಿ ನಟರಾಜನ್ ಅವರು ತಾನೇನು ಕಡಿಮೆ ಎಂದು ಕುಲಾಂತರಿ ತಂತ್ರಜ್ಞಾನದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸುಮ್ಮನಾಗಿ ಕುಳಿತುಬಿಟ್ಟರು. ಅಷ್ಟರಲ್ಲಿ ಚುನಾವಣೆ ಬಂತು. ಮುಂದಿನ ವಿಷಯ ಎಲ್ಲರಿಗೂ ತಿಳಿದೇ ಇದೆ.
ಏತನ್ಮಧ್ಯೆ, ಬಾಸುದೇಬ ಆಚಾರ್ಯ ಎಂಬ ಕಮ್ಯುನಿಸ್ಟ್ ಸಂಸದರನ್ನು ಗ್ರೀನ್‌ಪೀಸ್ ತನ್ನ ಬುಟ್ಟಿಗೆ ಹಾಕಿಕೊಂಡಿತ್ತು. ಮೊದಲೇ ಕಮ್ಯುನಿಷ್ಟರಿಗೆ ಅಮೆರಿಕ ಅಂದರೆ ಅಥವಾ ಅಮೆರಿಕದಿಂದ ಬಂದ ಯಾವುದೇ ವಿಷಯದ ಒಂದು ತರಹದ ಅಲರ್ಜಿ. ಗ್ರೀನ್ ಪೀಸ್ ಮತ್ತು ಮೇಲೆ ಹೇಳಿರುವ ಕೆಲ ಎಂಗೋಗಳು ಬಾಸುದೇಬ ಆಚಾರ್ಯರ ತಲೆ ತಿರುಗಿಸಿ ಇದು ಅಮೆರಿಕದ ಮೊನ್ಸಾಂಟೋ ಕಂಪನಿಯ ತಂತ್ರಜ್ಞಾನವಾದ್ದರಿಂದ ಇದನ್ನು ದೇಶಕ್ಕೆ ಬಿಡಕೂಡದೆಂದು ಲೋಕಸಭೆಯಲ್ಲಿ ಹೊಡೆದಾಡಲು ಕುಮ್ಮಕ್ಕು ಕೊಟ್ಟಿದ್ದರು. ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ ಅನ್ನುವ ಹಾಗೆ ಬಾಸುದೇಬ ಆಚಾರ್ಯ ಸಂಪೂರ್ಣವಾಗಿ ಎಂಗೋ ಮತ್ತು ಇಂಗೋಗಳ ಕೈಗೊಂಬೆಯಾದರು. ಗ್ರೀನ್‌ಪೀಸ್ ಬರೆದುಕೊಟ್ಟ 400 ಪುಟಗಳ ಕುಲಾಂತರಿ ವಿರೋಧಿ ವರದಿಯನ್ನು ಮತ್ತಿನ್ನು 30 ಸದಸ್ಯರಿಂದ ಸಹಿ ತೆಗೆದುಕೊಂಡು ತನ್ನ ಲೋಕಸಭೆಯ ಕೃಷಿ ಕಮಿಟಿಯ ವತಿಯಿಂದ ಲೋಕಸಭೆಗೆ ಸಲ್ಲಿಸಿಯೇ ಬಿಟ್ಟರು. ಇದೇ ಲೋಕಸಭೆ ವರದಿಯನ್ನು ಹಿಡಿದುಕೊಂಡು ಈ ಇಂಗೋ ಮತ್ತು ಎಂಗೋಗಳು ದೇಶದಲ್ಲೆಲ್ಲಾ ಹಾರಾಡ ಹತ್ತಿದ್ದಾರೆ.
ತದನಂತರ, ಸುಪ್ರಿಂಕೋರ್ಟ್ ಒಂದು ವಿಜ್ಞಾನಿಗಳ ಸಮಿತಿಯನ್ನು ನೇಮಿಸಿ, ಕುಲಾಂತರಿ ತಂತ್ರಜ್ಞಾನದ ಸಾಧಕ-ಬಾಧಕಗಳ ಬಗ್ಗೆ ವರದಿ ತಯಾರಿಸಿ ಕೊಡಬೇಕೆಂದು ಆದೇಶಿಸಿತು. ಈ ಕಮಿಟಿಯ ಸದಸ್ಯರುಗಳನ್ನು ಚುನಾಯಿಸಿದ್ದು ಬೇರ್ಯಾರೂ ಅಲ್ಲ. ಜೈರಾಮ್ ರಮೇಶ್ ಮತ್ತು ಅರುಣ ರಾಡ್ರಿಗಸ್ ಎಂಬ ಎಂಗೋ ಮಹಿಳೆ. ಇನ್ನು ಮತ್ತೇನು ಹೇಳಲೇಬೇಕಿಲ್ಲ. ಐದಾರು ವಿಜ್ಞಾನಿ ಸದಸ್ಯರುಗಳು ತಮ್ಮದೇ ಆದ ವಕ್ರದೃಷ್ಟಿಯಿಂದ ವರದಿ ತಯಾರಿಸಿ ಸುಪ್ರಿಂಕೋರ್ಟ್‌ಗೆ ಸಲ್ಲಿಸಿದರು. ಈ ಸಮಿತಿಯಲ್ಲಿದ್ದ ವಿಜ್ಞಾನಿಗಳಿಗೆ ಆಧುನಿಕ ಜೈವಿಕ ತಂತ್ರಜ್ಞಾನದ ಬಗ್ಗೆಯಾಗಲೀ ಅಥವಾ ಆಧುನಿಕ ಕೃಷಿ ಬಗ್ಗೆಯಾಗಲೀ ಕನಿಷ್ಠ ಮಟ್ಟದ ಜ್ಞಾನವಿರಲಿಲ್ಲ.
ನಾನು ಅಮೆರಿಕ ಸರ್ಕಾರದ ಕೃಷಿ ಇಲಾಖೆಯ ತಂತ್ರಜ್ಞಾನ ನಿಯಂತ್ರಣಾಧಿಕಾರದ ನಿರ್ದೇಶಕನಾಗಿ ಸುಮಾರು 1985ರಿಂದ ಈ ಇಂಗೋ ಮತ್ತು ಎಂಗೋಗಳನ್ನು ಅಧ್ಯಯನ ಮಾಡುತ್ತಾ ಬಂದಿದ್ದೇನೆ. ಈ ಇಂಗೋ ಮತ್ತು ಎಂಗೋಗಳಿಗೆ ತಮ್ಮದೇ ಆದ ಪ್ರಪಂಚ, ದೃಷ್ಟಿಕೋನ ಮತ್ತು ತಮ್ಮದೇ ಆದ ಆದರ್ಶವಿರುತ್ತದೆ. ಅದನ್ನು ಪ್ರತಿಪಾದಿಸುವುದಕ್ಕಾಗಿ, ಎಲ್ಲ ತರಹದ ವಿಧಾನಗಳನ್ನು ಪ್ರಯೋಗಿಸುವುದಕ್ಕೆ ಸೈ. ಅಪಪ್ರಚಾರದ ವಿಧಾನ ಒಂದು ಬಲವಾದ ಅಸ್ತ್ರ. ಇದನ್ನು ಉಪಯೋಗಿಸುವುದರಲ್ಲಿ ಇಂಗೋ ಮತ್ತು ಎಂಗೋಗಳು ಎತ್ತಿದ ಕೈ. ಸದ್ಯಕ್ಕಂತೂ ಇಷ್ಟು ವರ್ಷಗಳ ಕಾಲ ಕುಲಾಂತರಿ ತಂತ್ರಜ್ಞಾನವನ್ನು ಹಿಮ್ಮೆಟ್ಟಿಸುವುದರಲ್ಲಿ ಸೈ ಎನಿಸಿಕೊಂಡಿದ್ದಾರೆ. ನರೇಂದ್ರ ಮೋದಿ ಕಾಲದಲ್ಲಿ ಮತ್ತೇನಾಗುತ್ತದೋ ಎಂದು ಕಾದು ನೋಡಬೇಕಾಗಿದೆ. ಒಂದು ಮಾತು ನಿಜ, ಹೊರದೇಶಗಳಿಂದ ಹಣ ದೊರೆಯದೇ ಈ ಯಾವ ಎಂಗೋಗಳು ಕಾರ್ಯ ಸಾಧಿಸಲು ಸಾಧ್ಯವೇ ಇಲ್ಲ. ಹೀಗಾಗಿ ಈ ಎಂಗೋ ಮತ್ತು ಇಂಗೋಗಳು ತಾವು ಮಾತ್ರ ಆಧುನಿಕ ತಂತ್ರಜ್ಞಾನ, ಕಂಪ್ಯೂಟರ್, ಇಮೇಲ್, ಮೊಬೈಲ್‌ಫೋನ್‌ಗಳು ಮತ್ತು ವಿಮಾನಯಾನ ಮಾಡುತ್ತಾ, ಒಬ್ಬ ಬಡಪಾಯಿ ರೈತ ಆಧುನಿಕ ತಂತ್ರಜ್ಞಾನದಿಂದ ಆವಿಷ್ಕರಿಸಿದ ಬೀಜವನ್ನು ಕೊಡಬೇಕೆಂದರೆ ಎಲ್ಲಿಲ್ಲದ ಅಡ್ಡಿ ಮಾಡುತ್ತಾರೆ. ಆದ್ದರಿಂದ ಈ ತರಹದ ಎಂಗೋ ಮತ್ತು ಇಂಗೋಗಳು ದೇಶದ ಪ್ರಗತಿಗೆ ಮಾರಕವೇ ಅಥವಾ ಇಲ್ಲವೇ ಎಂಬುದನ್ನು ಓದುಗರೇ ನಿರ್ಧರಿಸಬೇಕು.
- ಡಾ. ಶಾಂತು ಶಾಂತಾರಾಮ್
shanthus@iastate.edu
Advertisement