ಬ್ರೆಜಿಲ್‌ನಲ್ಲಿ ಹೊಸ ಚೀನಾವನ್ನು ಭೇಟಿಯಾದ ನವ ಭಾರತ

ಬ್ರೆಜಿಲ್‌ನಲ್ಲಿ ಹೊಸ ಚೀನಾವನ್ನು ಭೇಟಿಯಾದ ನವ ಭಾರತದ ಪ್ರಧಾನಿ
ಬ್ರೆಜಿಲ್‌ನಲ್ಲಿ ಹೊಸ ಚೀನಾವನ್ನು ಭೇಟಿಯಾದ ನವ ಭಾರತ

ಬ್ರೆಜಿಲ್‌ನಲ್ಲಿ ಭಾರತದ ಪ್ರಧಾನಿಗಳು ಮತ್ತು ಚೀನಾ ಅಧ್ಯಕ್ಷರ ನಡುವೆ ಆದ ಮಾತುಕತೆಯ ಮೇಲೆ ಸ್ವತಂತ್ರ ವರದಿಗಳು ಹೊರಬರದಿರುವುದು ನಿಜಕ್ಕೂ ಬೇಸರ ತರಿಸುತ್ತದೆ. ಚೀನಾವನ್ನು ಖುಷಿಪಡಿಸಲು ಇದೊಂದು ಸೂಕ್ಷ್ಮ ರಾಜತಾಂತ್ರಿಕ ಕೆಲಸವಾಗಿದ್ದಿರಬಹುದು ಎಂದು ಹೇಳಿಕೊಂಡು ನಮಗೆ ನಾವೇ ಸಮಾಧಾನ ಮಾಡಿಕೊಳ್ಳಬಹುದು. ಅದಾಗ್ಯೂ ಚೀನಾದ ನಾಯಕರು ಇದುವರೆಗೂ ತಮ್ಮ ಜನರೊಂದಿಗೆ ಮಾತನಾಡುತ್ತಾ ಬಂದಿರುವುದು ತಮ್ಮ ದೇಶದ ಅಧಿಕೃತ ಸುದ್ದಿ ಸಂಸೆಯಾದ 'ಕ್ಸಿನ್‌ಹುವಾ'ದ ಮೂಲಕವೇ. ಈಗ ನರೇಂದ್ರ ಮೋದಿಯವರು ಪಿಟಿಯ ಮೂಲಕ ನಮ್ಮನ್ನು ತಲುಪಿದ್ದಾರೆ. ಒಟ್ಟಿನಲ್ಲಿ ಯಾವುದೋ ರೀತಿಯಲ್ಲಿ ನಾವು ಚೀನಾಕ್ಕೆ ಸಮಾನರಾದೆವು!
ಆದರೆ ಸದ್ಯಕ್ಕೆ ಇದನ್ನು ಪಕ್ಕಕ್ಕಿಡೋಣ. ಅಲ್ಲದೆ, ಭಾರತಕ್ಕೆ ಬ್ರಿಕ್ಸ್ ಬ್ಯಾಂಕ್‌ನ ಅಧ್ಯಕ್ಷ ಸ್ಥಾನ ಸಿಕ್ಕಿದೆ ಎನ್ನುವ ವಿಷಯವೂ ಒತ್ತಟ್ಟಿಗಿರಲಿ. ಏಕೆಂದರೆ ಚೀನಾದೊಂದಿಗಿನ ದಶಕಗಳ ಗಡಿ ತಿಕ್ಕಾಟವನ್ನು ಕೊನೆಗೊಳಿಸುವ ಅದ್ಭುತ ಅವಕಾಶ ಪ್ರಧಾನಿ ಮೋದಿಯವರಿಗೆ ಬ್ರೆಜಿಲ್‌ನಲ್ಲಿ ಎದುರಾದದ್ದು ಈಗ ಚರ್ಚೆಯಾಗಬೇಕಿರುವ ವಿಷಯ. ಇದಕ್ಕೆ ಪೂರಕವಾದ ಎರಡು ಅಂಶಗಳಿಲ್ಲಿವೆ: ಮೊದಲನೆಯದಾಗಿ, ಚೀನಾ ಬಲಿಷ್ಠ ನಾಯಕರನ್ನು ಗೌರವಿಸುತ್ತದೆ ಮತ್ತು ಮೋದಿ ಎಷ್ಟು ಬಲಿಷ್ಠರೆಂದರೆ, ಅವರ ಅನುಮತಿಯಿಲ್ಲದೆ ದೆಹಲಿಯಲ್ಲಿ ಒಂದು ಇಲಿ ಕೂಡ ಮಿಸುಕಾಡುವುದಿಲ್ಲ ಎನ್ನುವುದು ಆ ದೇಶಕ್ಕೆ ಅರಿವಾಗಿದೆ. ಎರಡನೆಯದಾಗಿ, ಜವಾಹರ್‌ಲಾಲ್ ನೆಹರು ಮಾಡಿದ ಕೆಲವು ತಪ್ಪುಗಳನ್ನು ಸರಿಪಡಿಸದೇ(ಈ ಕೆಲಸವನ್ನು ಕಾಂಗ್ರೆಸ್ ಮಾಡಲಿಲ್ಲ, ಅದಕ್ಕೆ ಮಾಡುವುದಕ್ಕೂ ಸಾಧ್ಯವಿಲ್ಲ) ಗಡಿ ಸಮಸ್ಯೆಯನ್ನು ನಿವಾರಿಸುವುದು ಸಾಧ್ಯವಿಲ್ಲ.  
ಹಿಂದೆ ನಮ್ಮ ಸಂಸತ್ತು, ಮಾಧ್ಯಮಗಳು ಮತ್ತು ಜನಾಭಿಪ್ರಾಯದ ಮೇಲೆ 'ಭಾವಾತಿರೇಕ' ಎಷ್ಟು ಹಿಡಿತ ಸಾಧಿಸಿತ್ತೆಂದರೆ, ದೇಶ ತನ್ನ ದೃಷ್ಟಿಯನ್ನೇ ಕಳೆದುಕೊಂಡುಬಿಟ್ಟಿತ್ತು. ಈ ಕಾರಣಕ್ಕಾಗಿಯೇ ಭಾರತ ಮತ್ತು ಚೀನಾದ ನಡುವೆ ಐತಿಹಾಸಿಕವಾಗಿ ಎಂದಿಗೂ ಗಡಿ ಒಪ್ಪಂದವೆಂಬುದು ಇರಲೇ ಇಲ್ಲ ಎನ್ನುವುದನ್ನು ಯಾರಿಗೂ ಅರಿವಾಗಲೇ ಇಲ್ಲ. ಪಶ್ಚಿಮದ ಅಕ್ಸಾಯ್‌ಚಿನ್-ಲದಾಖ್ ಪ್ರದೇಶ ಎಷ್ಟು ಬಂಜರಾಗಿತ್ತೆಂದರೆ(ಅಲ್ಲಿ ಒಂದು ಹುಲ್ಲುಕಡ್ಡಿಯೂ ಬೆಳೆಯದು ಎಂದಿದ್ದರು ನೆಹರು) ಅದಕ್ಕೆ ಅಡ್ಡಲಾಗಿ ಚೀನಾ ಬೃಹತ್ ರಸ್ತೆ ನಿರ್ಮಾಣ ಮಾಡಿದೆ ಎನ್ನುವುದು ಭಾರತಕ್ಕೆ ತಿಳಿಯಲಿಲ್ಲ. ಇನ್ನು ಈಶಾನ್ಯ ಭಾಗದಲ್ಲಿ ಭಾರತ, ಮೆಕ್‌ಮೋಹನ್ ರೇಖೆಗೆ ಹೆಚ್ಚು ಅಂಟಿಕೊಂಡಿತು. ಈ ರೇಖೆಯನ್ನು ಬ್ರಿಟಿಷ್ ಅಧಿಕಾರಿಯೊಬ್ಬ ರಚಿಸಿದ್ದ ಮತ್ತು 1914ರಲ್ಲಿ ನಡೆದ ಸಭೆಯೊಂದರಲ್ಲಿ ಬಿಟ್ರಿಷ್-ಭಾರತ ಮತ್ತು ಟೆಬೆಟ್ ಸರ್ಕಾರಗಳು ಇದಕ್ಕೆ ಒಪ್ಪಿಗೆ ಸೂಚಿಸಿದ್ದವು. ಈ ಸಭೆಯಲ್ಲಿ ಚೀನಾ ಭಾಗವಹಿಸಿರಲಿಲ್ಲ.
ವರ್ಷಗಳ ನಂತರ ಚೀನಾದಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿ ಚೌ ಎನ್-ಲಾಯ್ ಗಡಿ ಸಮಸ್ಯೆಯ ಕುರಿತು ಇಟ್ಟ ಮೊದಲ ಹೆಜ್ಜೆ ಸಮಂಜಸವಾಗಿಯೇ ಇತ್ತು. ಈ ಗಡಿರೇಖೆಯನ್ನು ಪ್ರಮಾಣೀಕರಿಸಲು ಎರಡೂ ದೇಶಗಳ ನಡುವೆ ಮಾತುಕತೆಯ ಅಗತ್ಯವಿತ್ತು. ಇದನ್ನು ಅರಿತ ಚೌ ಎನ್-ಲಾಯ್, "ವಸಾಹತುಶಾಹಿಗಳು ಸ್ಥಾಪಿಸಿ ಹೋದ ನಿಯಮಗಳನ್ನು ಬದಿಸರಿಸಿ ಹೊಸ ಒಡಂಬಡಿಕೆಯನ್ನು ಮಾಡಿಕೊಳ್ಳಲು ಭಾರತ-ಚೀನಾ ಮಾತಕತೆಯಾಡಬೇಕು" ಎಂದಿದ್ದರವರು. ಇನ್ನು ಕೆಲವು ಪತ್ರಿಕಾ ವರದಿಗಳ ಪ್ರಕಾರ ಮೆಕ್‌ಮೋಹನ್ ರೇಖೆಯ ವಿಷವಾಗಿ ಚೌ ಅವರು ನೆಹರೂ ಜೊತೆಗೆ ಮಾತನಾಡುತ್ತಾ "ನಾವು(ಚೀನಾ) ಈ ಮಾತುಕತೆಯನ್ನು ಗಡಿರೇಖೆಯನ್ನು ಬದಲಿಸಲು ಬಳಸಿಕೊಳ್ಳುವುದಿಲ್ಲ" ಎಂಬ ಭರವಸೆಯನ್ನೂ ಕೊಟ್ಟಿದ್ದರಂತೆ. ಆದರೆ ಈ ಸುವರ್ಣಾವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲು ಭಾರತ ಸೋತಿತು. ಚೌ ಅವರು 1960ರಲ್ಲಿ ದೆಹಲಿಗೆ ಭೇಟಿಕೊಟ್ಟಾಗ, ಅಂದಿನ ಗೃಹ ಸಚಿವ ಗೋವಿಂದ್ ವಲ್ಲಭ್ ಪಂತ್ 'ಅನುಗ್ರಹ ತೋರಿಸುವಂತೆ' ಮಾತನಾಡಿದರೆ, ವಿತ್ತ ಸಚಿವ ಮೊರಾರ್ಜಿ ದೇಸಾಯಿ 'ಅವಮಾನವಾಗುವಂತೆ' ಮಾತನಾಡಿಸಿ ಕಳುಹಿಸಿದರು. ನೆಹರು ಅವರಿಗಂತೂ ಚೀನಾದೊಂದಿಗಿನ ಭಾರತದ ವ್ಯವಹಾರವನ್ನು ಗೌರವಯುತ ಮಟ್ಟದಲ್ಲಿ ನಿರ್ವಹಿಸಲೂ ಸಾಧ್ಯವಾಗಲಿಲ್ಲ. ಟಿಬೆಟ್ ಅನ್ನು ತನ್ನ ಪ್ರದೇಶವೆನ್ನುತ್ತಾ ಚೀನಾ ಅದನ್ನು ವಶಪಡಿಸಿಕೊಳ್ಳಲು ಮುಂದಾದಾಗ, ನಮ್ಮ ನೆಹರು ಒಟ್ಟಾರೆ ಗಡಿ ಒಪ್ಪಂದವನ್ನು ಮುಂದಿಟ್ಟುಕೊಂಡು ಚೌಕಾಶಿಗಿಳಿಯದೇ ಸುಮ್ಮನೇ ತಲೆಯಾಡಿಸಿ ಒಪ್ಪಿಗೆಕೊಟ್ಟುಬಿಟ್ಟರು.
ಚೌ ಆಡಳಿತ ಮುಕ್ತಾಯವಾದ ನಂತರ ಚೀನಾ ಆಕ್ರಾಮಕ ಸ್ವಭಾವವನ್ನು ರೂಢಿಸಿಕೊಂಡುಬಿಟ್ಟಿತು. ಕಳೆದ ಕೆಲವು ವರ್ಷಗಳಲ್ಲಿ ಅದು ಜಪಾನ್, ವಿಯೆಟ್ನಾಂ, ಫಿಲಿಪ್ಪೀನ್ಸ್ ಮತ್ತು ಇಂಡೋನೇಷ್ಯಾದೆಡೆಗೆ ಇಡುತ್ತಿರುವ ಹೆಜ್ಜೆಯಲ್ಲಿ, ಹಿಮಾಲಯದ ಸುತ್ತ ಮುತ್ತಣ ಗಡಿ ಚೌಕಿಗಳಲ್ಲಿ ನಿರಂತರವಾಗಿ ನಡೆಯುತ್ತಿರುವ 'ಘಟನೆಗಳಲ್ಲಿ'  ಇದೇ ಆಕ್ರಮಣಶೀಲತೆಯೇ ಗೋಚರಿಸುತ್ತದೆ.
ಏಶಿಯಾದ ನಿರ್ವಿವಾದ ನಾಯಕನಾಗಬೇಕು ಮತ್ತು ಪ್ರಪಂಚದ ಏಕಮಾತ್ರ ಸೂಪರ್‌ಪವರ್ ಆಗಬೇಕು ಅನ್ನುವ ಚೀನಾದ ಕನಸು ನನಸಾಗುವುದಂತೂ ಸಾಧ್ಯವಿಲ್ಲ. ಏಕೆಂದರೆ ಅಷ್ಟರಮಟ್ಟಿಗೆ ಅದು ಕಠಿಣ ಗಿರಾಕಿ! ಆದರೆ, ಇತಿಹಾಸವನ್ನು ನೋಡಿದಾಗ ಒಂದಂತೂ ಸ್ಪಷ್ಟವಾಗುತ್ತದೆ. ನಮ್ಮ ಗುಜರಾತಿಗಳಂತೆ ಚೀನಿಯರೂ ಹುಟ್ಟಾ ವ್ಯಾಪಾರಿಗಳು. ದೊಡ್ಡ ದೊಡ್ಡ ಕಂಪನಿಗಳ ಜೊತೆಗೆ ಚಿಕ್ಕ ಕಿರಾಣಿ ಅಂಗಡಿಗಳನ್ನೂ ಸುಗಮವಾಗಿ ನಡೆಸುವುದು ಅವರಿಗೆ ನೀರು ಕುಡಿದಷ್ಟೇ ಸುಲಭ.
ಇಲ್ಲೇ ಇದೆ ನೋಡಿ ಎರಡು ಸಮಾನ ಮನಸ್ಸುಗಳು ಸಂಧಿಯಾಗುವ ಸಂಗತಿ. ಇತ್ತ, ನರೇಂದ್ರ ಮೋದಿ ಭಾರತದ ಅತ್ಯಂತ ಬಲಿಷ್ಠ ನಾಯಕನಾದರೆ, ಅತ್ತ, ಡೆನ್ ಸಿಯೋ ಪಿಂಗ್ ನಂತರದ ಅತಿ ಶಕ್ತಿಯುತ ನಾಯಕನಾಗಿ ಅಧಿಕಾರ ನಡೆಸುತ್ತಿದ್ದಾರೆ ಕ್ಸಿ ಜಿನ್‌ಪಿಂಗ್(ಮಿಲಿಟರಿಯನ್ನೊಳಗೊಂಡಂತೆ ಸರ್ಕಾರದ ಅನೇಕ ಇಲಾಖೆಗಳ ಅಧಿಪತ್ಯ ಜಿನ್‌ಪಿಂಗ್ ಹಿಡಿತದಲ್ಲೇ ಇದೆ). ಇಬ್ಬರೂ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಜಾಗದಲ್ಲಿದ್ದಾರೆ. ಇಬ್ಬರೂ ರಾಜಕೀಯದಾಟದಲ್ಲಿ ಪ್ರಬಲ ಆಟಗಾರರು. ಹಾಗಾಗೇ ಏಕೆ ತಮ್ಮ ಮತ್ತು ಜಿನ್‌ಪಿಂಗ್ ಭೇಟಿಯನ್ನು ಚೀನಾದ ಸುದ್ದಿ ಸಂಸ್ಥೆ ಕ್ಸಿನ್‌ಹುವಾ ಅಷ್ಟೊಂದು ವಿಸ್ತೃತವಾಗಿ ಮತ್ತು ಅಕ್ಕರೆಯಿಂದ ತೋರಿಸಿತು ಎನ್ನುವುದು ಮೋದಿ ಅವರಿಗೆ ಬಲುಬೇಗನೇ ಅರ್ಥವಾಗಿರುತ್ತದೆ.
ಬ್ರೆಜಿಲ್‌ನಲ್ಲಿ ಜಿನ್‌ಪಿಂಗ್ ಆಡಿದ ಮಾತುಗಳನ್ನು ಕೇಳಿದರೆ ಅವರು ಸ್ನೇಹಪರ ಭಾರತದೊಂದಿಗೆ ಸಹಭಾಗಿತ್ವದಲ್ಲಿ ಮುನ್ನಡೆದರೆ ತಮ್ಮ ದೇಶಕ್ಕೆ ಆರ್ಥಿಕವಾಗಿ ಮತ್ತು ರಾಜತಾಂತ್ರಿಕವಾಗಿ ಲಾಭವಾಗಲಿದೆ ಎನ್ನುವ ದೂರದೃಷ್ಟಿ ಹೊಂದಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. "ಈ ಎರಡೂ ರಾಷ್ಟ್ರಗಳು ಒಂದಾಗಿ ಮಾತನಾಡಿದರೆ ಇಡೀ ಪ್ರಪಂಚವೇ ಗಮನವಿಟ್ಟು ಕೇಳುತ್ತದೆ" ಎಂದರು ಜಿನ್‌ಪಿಂಗ್. ಚೀನಾದೊಂದಿಗೆ ಒಟ್ಟಿಗೆ ಹೆಜ್ಜೆಯಿಟ್ಟರೆ ವ್ಯಾಪಾರ ವರ್ಧಿಸುತ್ತದೆ ಎನ್ನುವುದನ್ನು ಮನದಟ್ಟು ಮಾಡಿಸಲು ಮೋದಿ ಅವರಿಗೂ ಸಾಧ್ಯವಿದೆ. ಆದರೆ, ತಮ್ಮ ಜೊತೆಗೆ ಜನರನ್ನೂ ಜೊತೆಗೊಯ್ಯುವ ಜವಾಬ್ದಾರಿ ಮೋದಿಯವರ ಮೇಲಿದೆ(ಕ್ಸಿನ್‌ಪಿಂಗ್‌ಗಿಲ್ಲ). ಗಡಿ ಗೋಜಲಿನ ನಿಜವಾದ ಕಥೆಯನ್ನು ನಮ್ಮ ನಾಯಕರ್ಯಾರೂ ಜನರಿಗೆ ಇದುವರೆಗೂ ಹೇಳಿಲ್ಲ. ಒಂದು ವೇಳೆ ಮೋದಿ ಆ ಹಳೆಯ ಹಾದಿಯನ್ನು ಹಿಡಿದರೆ, ಕ್ಸಿ ಮೇಲುಗೈ ಸಾಧಿಸುತ್ತಾರಷ್ಟೆ.
ಬ್ರೆಜಿಲ್‌ನಿಂದ ಭಾರತಕ್ಕೆ ಬಂದ ವರದಿಗಳಲ್ಲಿ ತೂಕವೇ ಇಲ್ಲ. ಈ ವಿಷಯದಲ್ಲಿ ನಾವು ಚೀನಾಕ್ಕೆ ಸಮ ಎಂದು ಭಾವಿಸುವುದಕ್ಕೆ ಸಾಧ್ಯವಿಲ್ಲ.


-ಟಿ.ಜೆ.ಎಸ್. ಜಾರ್ಜ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com