ಮುನ್ನುಡಿ ಬರೆಯಿಸಿಕೊಂಡ ಗೆಳೆಯ ಕೊನೆ ಅಡಿ ಇಟ್ಟದ್ದು ಗೊತ್ತೇ ಆಗಲಿಲ್ಲ!

ಫೇಸ್‌ಬುಕ್ ಪ್ರಿಯರಿಗೆ ಗೆಳೆಯ ನಟರಾಜ ಕಾನಗೋಡು ಚಿರಪರಿಚಿತ. ಅಫಘನ್...
ಮುನ್ನುಡಿ ಬರೆಯಿಸಿಕೊಂಡ ಗೆಳೆಯ ಕೊನೆ ಅಡಿ ಇಟ್ಟದ್ದು ಗೊತ್ತೇ ಆಗಲಿಲ್ಲ!

ಫೇಸ್‌ಬುಕ್ ಪ್ರಿಯರಿಗೆ ಗೆಳೆಯ ನಟರಾಜ ಕಾನಗೋಡು ಚಿರಪರಿಚಿತ. ಅಫಘನ್ ಟಿವಿಯ ಚೀಫ್ ಆಪರೇಟಿಂಗ್ ಆಫೀಸರ್ ಆಗಿ ಕೆಲಕಾಲ ಕಾಬೂಲ್‌ನಲ್ಲಿ ಕೆಲಸ ಮಾಡಿದ್ದ ನಟರಾಜ್, ಕಳೆದ ಎರಡು-ಮೂರು ವರ್ಷಗಳಿಂದ ಫೇಸ್‌ಬುಕ್‌ನಲ್ಲಿ ಬಹಳ ಕ್ರಿಯಾಶೀಲರಾಗಿದ್ದರು. ನನಗೆ ಅನೇಕ ಸಲ ಅನಿಸಿದ್ದೂ ಉಂಟು, ಫೇಸ್‌ಬುಕ್ ಮುಂದೆ ಕುಳಿತುಕೊಳ್ಳುವುದೇ ಇವರ ಉದ್ಯೋಗವಾದರೆ, ಹೊಟ್ಟೆಪಾಡಿಗೆ ಏನು ಮಾಡುತ್ತಾರೆ? ಹೆಂಡತಿ, ಮಕ್ಕಳು, ಬಂಧುಗಳು, ಸ್ನೇಹಿತರು ಮುಂತಾದವರ ಜತೆ ಮಾತಾಡಲು, ಸಮಯ ಕೊಡಲು ಇವರಿಗೆ ಪುರುಸೊತ್ತು ಇದೆಯಾ?
ಯಾರಿಗಾದರೂ ಇಂಥದ್ದೊಂದು ಅನುಮಾನ ಗಾಢವಾಗುವಷ್ಟು ವಿಪರೀತವಾಗಿ ಅವರು ಫೇಸ್‌ಬುಕ್‌ನ್ನು ಹಚ್ಚಿಕೊಂಡಿದ್ದರೆಂಬುದು ಅವರ ಪೋಸ್ಟಿಂಗ್ಸ್‌ನಿಂದ ಗೊತ್ತಾಗುತ್ತಿತ್ತು. ಅಲ್ಲದೇ, ಅವರು ಫೇಸ್‌ಬುಕ್‌ನಲ್ಲಿ ನಡೆಯುತ್ತಿದ್ದ ಚರ್ಚೆ, 'ಲೈಕ್ಸ್‌'ನಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಕಾಮೆಂಟ್ ಬರೆಯುತ್ತಿದ್ದರು.
ನಟರಾಜ್ ಫೇಸ್‌ಬುಕ್‌ನ್ನು ಗಂಭೀರ ವೇದಿಕೆಯಾಗಿ, ಮಾಧ್ಯಮವಾಗಿ ಪರಿಗಣಿಸಿದ್ದರು. ವೈಯಕ್ತಿಕ ಫೋಟೋಗಳು, ಖಾಸಗಿ ಪರಾಕ್ರಮಗಳನ್ನು ಹೇಳಿಕೊಳ್ಳಲು, ಡೌಲು ಬಜಾಯಿಸಲು ಫೇಸ್‌ಬುಕ್‌ನ್ನು ಅವರು ಬಳಸಿಕೊಂಡಿರಲಿಲ್ಲ. ಸ್ಫೂರ್ತಿದಾಯಕ, ಸಕಾರಾತ್ಮಕ, ಪ್ರೇರಣಾದಾಯಕ ವಿಚಾರಗಳನ್ನು ನಾಲ್ಕೈದು ಸಾಲುಗಳಲ್ಲಿ ನಿರಂತರವಾಗಿ ಬರೆಯುತ್ತಿದ್ದರು. ಅವರ ಸಾಲುಗಳು ಎಷ್ಟೊಂದು ಚೆಂದವಾಗಿರುತ್ತಿದ್ದವೆಂದರೆ, ಒಮ್ಮೆ ನಾನು ಅವರಲ್ಲಿ 'ನಿಮ್ಮ ಫೇಸ್‌ಬುಕ್ ಪೋಸ್ಟಿಂಗ್ಸ್ ಸೇರಿಸಿ ಪುಸ್ತಕ ಮಾಡಿ' ಎಂದು ಹೇಳಿದಾಗ, 'ನೀವು ಮುನ್ನುಡಿ ಬರೆದುಕೊಡುವುದಾದರೆ ಮಾತ್ರ' ಎಂದಾಗ ನಾನು ಒಪ್ಪಿಕೊಂಡಿದ್ದೆ. ಕಳೆದ ನಾಲ್ಕು ತಿಂಗಳಿನಿಂದ ಮುನ್ನುಡಿಗಾಗಿ ಒತ್ತಾಯಿಸುತ್ತಾ, ಆಗಾಗ ನೆನಪಿಸುತ್ತಿದ್ದರು. ಕೆಲಸದ ಒತ್ತಡಗಳ ಮಧ್ಯೆ ಅವರ ಕೋರಿಕೆಯನ್ನು ಈಡೇರಿಸಲು ಆಗಲಿಲ್ಲ. ಮೊನ್ನೆ ಶುಕ್ರವಾರ ರಾತ್ರಿ ಅವರ ಪುಸ್ತಕವನ್ನು ಪೂರ್ತಿ ಓದಿ, ಮುನ್ನುಡಿ ಬರೆದು ಇಟ್ಟಿದ್ದೆ. ಆ ಪುಸ್ತಕಕ್ಕೆ 'ಆಂತರ್ಯದ ಆಲೋಚನೆಗಳು' ಎಂದು ಹೆಸರಿಟ್ಟಿದ್ದರು.
ನಿನ್ನೆ ಶನಿವಾರ ಮಧ್ಯಾಹ್ನ ನಟರಾಜ ಅವರ ಪುಸ್ತಕ ಪ್ರಕಟಿಸಬೇಕಿದ್ದ ಮಣಿ ಪ್ರಕಾಶನದ ಎಚ್.ಆರ್. ಮಂಜೇಗೌಡ ಫೋನ್ ಮಾಡಿದಾಗ, 'ಗೌಡ್ರೇ, ನಟರಾಜ ಕಾನಗೋಡು ಅವರ ಪುಸ್ತಕದ ಮುನ್ನುಡಿ ಸಿದ್ಧವಾಗಿದೆ. ತೆಗೆದುಕೊಂಡು ಹೋಗಬಹುದು' ಎಂದೆ. 'ಹೌದಾ ಸಾರ್!?' ಆದರೆ ನಟರಾಜ್ ಅವರೇ ಇಲ್ವವಲ್ಲ ಸಾರ್. ಶನಿವಾರ ಬೆಳಗ್ಗೆ ಹೃದಯಾಘಾತದಿಂದ ತೀರಿಕೊಂಡರಂತೆ. ಫೇಸ್‌ಬುಕ್ ನೋಡಿದಾಗ ಗೊತ್ತಾಯ್ತು' ಅಂದರು.
ಮಾತೇ ಹೊರಡಲಿಲ್ಲ. ನಿಮ್ಮಿಂದ ಮುನ್ನುಡಿ ಬರೆಯಿಸದೇ ಪುಸ್ತಕ ಪ್ರಕಟಿಸೋಲ್ಲ ' ಎಂದಿದ್ದರು ನಟರಾಜ' ಎಂದು ವಿಷಾದದಿಂದ ಹೇಳಿದರು ಮಂಜೇಗೌಡರು. ವಿಪರೀತ ಸಂಕಟವಾಯಿತು.
ಐಪ್ಯಾಡ್‌ನಲ್ಲಿ ನಟರಾಜ್ ಕಾನಗೋಡು ಫೇಸ್‌ಬುಕ್ ಪೇಜ್ ತೆರೆದೆ. ಶುಕ್ರವಾರ ಸಾಯಂಕಾಲ 5.28ಕ್ಕೆ ಕೊನೆಯ ಮೂರು ಸಾಲು ಬರೆದು ಪೋಸ್ಟ್ ಮಾಡಿದ್ದರು.
ಹಾವು ಕಂಡ ಮೂಗನಂತೆ ಕೂಗಲಾರದೇ...
ಕಾಡಿನೊಳು ಓಡುತಿಹೆ ದಾರಿ ಕಾಣದೆ...
ಜೊತೆ ಯಾರಿಲ್ಲ ನಾ ಒಂಟಿಯಾದೆ...
ನಟರಾಜ್ ತಮ್ಮ ಸಾವನ್ನು ಊಹಿಸಿದ್ದರಾ?

ನಾಲಗೆ ಹೊರಳದ ಸ್ಥಿತಿ
Eyjafjallajokull!
ಇದನ್ನು ಹೇಗೆ ಉಚ್ಚರಿಸುವುದು ಎಂಬ ಸಂದಿಗ್ಧ್ದದಲ್ಲಿ ನೀವಿರಬಹುದು. ಇದು ನಿಮ್ಮದೊಂದು ಸಮಸ್ಯೆ ಅಲ್ಲ. ಅಷ್ಟಕ್ಕೂ Eyjafjallajokull ಅಂದ್ರೆ ಏನು? ಹಾಗಂದ್ರೆ ಹಲ್ಲುಪುಡಿಯಾ, ತಲೆಹೊಟ್ಟು ನಿವಾರಕ ಔಷಧವಾ, ಫ್ರೆಂಚ್ ಅಥವಾ ಸ್ಪಾನಿಷ್ ಭಾಷೆಯಲ್ಲಿ ಊದಿನಕಡ್ಡಿಗೆ ಹಾಗಂತಾರಾ? ಹಾಗಾದ್ರೆ ಏನು? ನಾವು ಚಿಕ್ಕವರಿದ್ದಾಗ ನೋಡಿದ್ದ 'ಜಾಲಿಮಲೋಶನ, ಗಜಕರ್ಣ ಔಷಧ' ಎಂಬ ಮಾದರಿಯ ಔಷಧವಾ?
ಇದನ್ನು ಬರೆದಂತೆ ಓದಿದರೆ ಇದರ ಉಚ್ಚಾರ 'ಇಜಾಫ್‌ಜಲ್ಲಾಜೋಕುಲ್‌' ಎಂದಾಗುತ್ತದೆ. (ಆದರೂ ಒಂದೆರಡು ಅಕ್ಷರಗಳನ್ನು ನುಂಗಬೇಕಾಗುತ್ತದೆ) ಇದರ ಸರಿಯಾದ ಉಚ್ಚಾರ ಆ ಬ್ರಹ್ಮನಿಗೂ ಗೊತ್ತಿಲ್ಲ. ಹೀಗಾಗಿ ಇದನ್ನು ಒಬ್ಬೊಬ್ಬರು ಒಂದೊಂದು ರೀತಿ ಉಚ್ಚರಿಸುತ್ತಾರೆ. ಅಲ್ಲದೇ ಎಲ್ಲರೂ ತಾವು ಉಚ್ಚರಿಸಿದ್ದೇ ಸರಿ ಎಂದು ಭಾವಿಸುತ್ತಾರೆ.
ಅಂದ ಹಾಗೆ ಇದರ ಹತ್ತಿರದ ಸರಿಯಾದ ಉಚ್ಚಾರ- ಜಾಫ್‌ಜಜೋ! ಉಳಿದ ಅಕ್ಷರಗಳನ್ನು ಮೂಗಿನ ಸ್ವರದಿಂದ ತೆಗೆದು ಉಚ್ಚರಿಸಬೇಕು. ಹೀಗಾಗಿ ಒಬ್ಬೊಬ್ಬರು ಒಂದೊಂದು ಸ್ವರ ತೆಗೆಯುತ್ತಾರೆ. ಹೀಗಾಗಿ ಅಥವಾ ವಿಭಿನ್ನ ಸ್ವರಗಳಿಂದ ಈ ಪದ ವಿಭಿನ್ನವಾಗಿ ಕೇಳಿಸುತ್ತದೆ.
ಇಷ್ಟಕ್ಕೂ 'ಜಾಫ್‌ಜಜೋ' ಉತ್ತರಧ್ರುವಕ್ಕೆ ಹತ್ತಿರದಲ್ಲಿರುವ ಐಸ್‌ಲ್ಯಾಂಡಿನಲ್ಲಿರುವ ಒಂದು ಸುಂದರ ಹಿಮಾಚ್ಛಾದಿತ ಪರ್ವತ ಪ್ರದೇಶ. ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರ ಜತೆಗೆ ಐಸ್‌ಲ್ಯಾಂಡ್‌ಗೆ ನಾವು ಹೋಗಿದ್ದಾಗ ಜಾಫ್‌ಜಜೋಗೆ ಹೋಗಬೇಕಿತ್ತು. ಆದರೆ ಪ್ರತಿಕೂಲ ಹವಾಮಾನದಿಂದ ಅವರ ಭೇಟಿ ರದ್ದಾಯಿತು.
2010ರ ಏಪ್ರಿಲ್‌ನಲ್ಲಿ ಈ ಪುಟ್ಟ ಹಿಮಪರ್ವತ ಜಗತ್ತಿನ ಗಮನ ಸೆಳೆಯಿತು. 'ಜಾಫ್‌ಜಜೋ' ಹಿಮಪರ್ವತಗಳು ಒಂದೇ ಸಮನೆ ಬೆಂಕಿಯನ್ನು (ಜ್ವಾಲಾಮುಖಿ) ಉಗುಳಲಾರಂಭಿಸಿದವು. ಇದರ ಪರಿಣಾಮ ಯುರೋಪಿನ ಮೇಲೆ ದಟ್ಟವಾದ ಧೂಳಿನ ಮೋಡವೇ ಕಟ್ಟಿಕೊಂಡಿತು. ಏಕಾಏಕಿ ಈ ಮೋಡಗಳನ್ನು ಕಂಡ ವಿಮಾನಗಳ ಪೈಲಟ್‌ಗಳು ಕಂಗಾಲಾದರು. ವಾರಗಟ್ಟಲೆ ವಿಮಾನ ಹಾರಾಟ ಸ್ಥಗಿತಗೊಂಡವು, ಇಲ್ಲವೇ ವಿಳಂಬವಾದವು.
ಈ ಸುದ್ದಿಯನ್ನು ಬಿತ್ತರಿಸಿದ ಟಿ.ವಿ. ಚಾನೆಲ್‌ಗಳ ನ್ಯೂಸ್ ರೀಡರ್‌ಗಳು, ಭಾಷಾ ಪತ್ರಕರ್ತರು ಈ ಊರಿನ ಹೆಸರನ್ನು ಹೇಗೆ ಉಚ್ಚರಿಸುವುದೆಂದು ಗೊತ್ತಾಗದೇ ತೊದಲಲಾರಂಭಿಸಿದರು. 'ಈ ಪ್ರದೇಶದ ಹೆಸರನ್ನು ತಪ್ಪಾಗಿ ಹೇಳಿದ್ದರೆ ಕ್ಷಮೆಯಿರಲಿ ಎಂಬ ಅಡಿ ಬರಹ ಕೆಲವು ಟಿವಿಗಳ ಪರದೆ ಮೇಲೆ ಕಾಣಿಸಿಕೊಂಡಿತು. ಜ್ವಾಲಾಮುಖಿಯಿಂದ ಎದ್ದ ಧೂಳು ಹದಿನೈದು ದಿನಗಳ ನಂತರ ವಾಪಸ್ ಭೂಮಿಗೆ ಬಂದು settle ಆದರೂ, ಈ ಊರಿನ ಹೆಸರು ಹೇಳುವಾಗ ಎಲ್ಲರ ನಾಲಗೆಗಳೂ ಹಲ್ಲುಗಳ ಮಧ್ಯೆ ಸಿಕ್ಕಿ ಒದ್ದಾಡುತ್ತಿದ್ದವು. ಈ ನೈಸರ್ಗಿಕ ಅವಘಡದ ತೀವ್ರತೆ ಒಂದೆಡೆಯಾದರೆ, ನ್ಯೂಸ್‌ರೀಡರ್‌ಗಳು ಅನುಭವಿಸುತ್ತಿದ್ದ ಬವಣೆ ಮತ್ತೊಂದೆಡೆ. ಈ ಹಿಮಪರ್ವತದ ಪಕ್ಕದಲ್ಲಿರುವ ಮತ್ತೊಂದು ಊರಿನ ಮೂಲಕವಾದರೂ ಅದರ ಭೌಗೋಳಿಕ ಪ್ರದೇಶವನ್ನು ವಿವರಿಸೋಣ ಅಂದ್ರೆ ಅದರ ಹೆಸರೂ Myrdalgjokull- ನಾಲಗೆಯಲ್ಲಿ ಹೊರಳುತ್ತಿರಲಿಲ್ಲ. ಕ್ರಮೇಣ ಎಲ್ಲ ಟಿವಿ ಚಾನೆಲ್‌ಗಳು ಈ ಊರಿನ ಉಚ್ಚಾರದ ಸಹವಾಸವೇ ಸಾಕು ಎಂದು 'ಐಸ್‌ಲ್ಯಾಂಡಿನ ಹಿಮಪರ್ವತವೊಂದರಲ್ಲಿ ಹುಟ್ಟಿದ ಜ್ವಾಲಾಮುಖಿ...' ಎಂದಷ್ಟೇ ಹೇಳಲಾರಂಭಿಸಿದ್ದು ತಮಾಷೆಯಾದರೂ ಸತ್ಯ.
ಕೆಲವೊಮ್ಮೆ ಆಹಾರಗಳೊಂದೇ ಅಲ್ಲ, ಕೆಲವು ಪದಗಳು ಗಂಟಲಲ್ಲಿ ಸಿಕ್ಕಿ ಹಾಕಿಕೊಳ್ಳುವುದುಂಟು!
ಪತ್ರ ಆಪ್ತತೆ
ನನ್ನ ಮಗನ ಉಪನಯನಕ್ಕೆ ಬರಲಾಗದಿದ್ದುದ್ದಕೆ ಖ್ಯಾತ ರಂಗಕರ್ಮಿ ಡಾ. ಮಾಸ್ಟರ್ ಹಿರಣ್ಣಯ್ಯ ಬರೆದ ಪತ್ರ ಹಲವಾರು ಕಾರಣಗಳಿಂದ ಅಪರೂಪವಾಗಿ ಕಂಡಿತು. ಅವರು ಅತ್ಯಂತ ಚುಟುಕಾಗಿ, ಆದರೆ ಅಷ್ಟೇ ಪರಿಣಾಮಕಾರಿಯಾಗಿ, ಉಪನಯನದ ಮಹತ್ವ, ಆಚರಣೆ ಕ್ರಮ, ಗಾಯತ್ರಿ ಮಂತ್ರದ ಸಾರವನ್ನು ಬರೆದಿದ್ದರು. ಹಿರಣ್ಣಯ್ಯನವರು ತಮ್ಮ ಆ ಪತ್ರದ ಕೊನೆಯಲ್ಲಿ ಒಂದೇ ಡೈಲಾಗ್ ಇರುವ ಸಾವು-ಬದುಕುಗಳ ಸಂವಾದದ ಮೂಲಕ ಒಟ್ಟಾರೆ ಜೀವನವನ್ನು ಕಟ್ಟಿಕೊಟ್ಟಿದ್ದರು. ಆ ಡೈಲಾಗ್ ಹೀಗಿದೆ.
ಸಾವು: ಲೇ ಬದುಕೇ... ಜನರಿಗೆ ನನ್ನ ಕಂಡರೆ ಏಕೆ ಅಷ್ಟೊಂದು ಭಯ? ನಿನ್ನ ಕಂಡರೆ ಏಕೆ ಅಷ್ಟು ಪ್ರೀತಿ?
ಬದುಕು: ಕಾರಣವಿಷ್ಟೇ. ನೀನೊಂದು ಭಯಂಕರ ಸತ್ಯ. ನಾನೊಂದು ಸುಂದರವಾದ ಸುಳ್ಳು, ಅದಕ್ಕೆ.
 ಈ ಪತ್ರದ ಲಕೋಟೆಯ ಮೇಲೆ ಅವರೇ ರಚಿಸಿರುವ ಎರಡು ಸಾಲಿನ ಕವನ-
"ಮುಗುಳ್ನಗುವು ಮುಖದಲ್ಲಿ ಮೂಡಿರಲು
ಹಗೆ ಕೂಡ ನಗೆ ಬೀರಿ ಓಡುವುದು
ಲಂಚಾವತಾರಿ."
ಈ ಪತ್ರವನ್ನು ಜೋಪಾನವಾಗಿ ಎತ್ತಿಟ್ಟುಕೊಂಡೆ.

ಲಿವಿಂಗ್-ಇನ್ ರಿಲೇಶನ್ ಅಂದ್ರೆ
ಮೊನ್ನೆಯ ಗುರುವಾರದ 'ನೂರೆಂಟು ನೋಟ' ಅಂಕಣದಲ್ಲಿ ಪದಗಳ ಕುರಿತು ಬರೆದಿದ್ದನ್ನು ಗಮನಿಸಿರಬಹುದು. ಪ್ರಾಸಂಗಿಕವಾಗಿ ಒಂದು ಪದದ ಬಗ್ಗೆ ಪ್ರಸ್ತಾಪಿಸುತ್ತಾ ಕನ್ನಡದಲ್ಲಿ Living -in relationshipಗೆ ಸೂಕ್ತ ಪದಗಳಿಲ್ಲ ಎಂದು ಬರೆದಿದ್ದಕ್ಕೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ಮದುವೆಯಾಗದೇ ಒಂದೇ ಸೂರಿನಡಿ ಹುಡುಗ-ಹುಡುಗಿ ಸತಿ-ಪತಿಗಳಂತೆ ಒಟ್ಟಾಗಿ ಬಾಳುವ ಸಂಪ್ರದಾಯಕ್ಕೆ ಕನ್ನಡದಲ್ಲಿ 'ಸಮ್ಮತಿಯ ಸಹಜೀವನ' ಎಂದು ಹೇಳಬಹುದಲ್ಲ ಎಂದು ವೀಣಾ ಅನಂತ್ ಸೂಚಿಸಿದ್ದಾರೆ. ನೀಲಕಂಠಪ್ಪ ಎಂಬುವವರು ಇದು 'ಬೀಡಾಡಿಗಳ ಸಂಸಾರ' ಎಂದಿದ್ದಾರೆ. ಉಡುಪಿಯ ಪಿ. ರಾಮಕೃಷ್ಣ ಚಡಗ ಎಂಬುವವರು 'ಕೂಡಾಟ ವಾಸ' ಎಂದು ಹೇಳಬಹುದಲ್ಲ ಎಂಬ ಸಲಹೆಯನ್ನಿತ್ತಿದ್ದಾರೆ.
ದಯಾನಂದ ಲಿಂಗೇಗೌಡ ಅವರ ಪ್ರಕಾರ 'ಸಂಬಂಧರಹಿತ ದಾಂಪತ್ಯ' ಅನ್ನೋದೆ ಸರಿ. ಶಿವಮೊಗ್ಗದ ಸುಬ್ಬರಾಯ ಭಟ್‌ರು ಸೂಚಿಸುವ ಪದ 'ಕೂಡಿಕೆ ಸಂಸಾರ'. ಇದು 'ಇರುವಷ್ಟು ದಿನದ ಸಂಸಾರ' ಅಲ್ಲವೇ ಅಂತ ಕೇಳಿದವರು ತಟ್ಟಗುಣಿ ನಾರಾಯಣ ಸುಬ್ರಾಯ ಹೆಗಡೆ. ಇದನ್ನು 'ಅನುಕೂಲಸಿಂಧು ದಾಂಪತ್ಯ' ಅಂತ ಯಾಕೆ ಕರೀಬಾರ್ದು ಎಂದವರು ಗೋಟನ ಮನೆ ಸತೀಶ. 'ಕಟ್ಟುಪಾಡಿಲ್ಲದ ಕುಟುಂಬ' ಅನ್ನಿ ಅಂತಾರೆ ಚದರಂಗಿ ಹೊನ್ನವೆಂಕಟಯ್ಯ. ಕಳ್ಳ -ಪೊಲೀಸ್ ಆಟದಂತೆ ಇದು 'ಗಂಡ-ಹೆಂಡತಿ ಎಂಬ ಆಟದ ಸಂಸಾರ' ಎಂದು ವ್ಯಾಖ್ಯಾನಿಸಿದವರು ಮೈಸೂರಿನ ಚೆನ್ನಕೇಶವ.
ಇನ್ನು ಆಯ್ಕೆ, ಬಳಕೆ ನಿಮಗೆ ಬಿಟ್ಟಿದ್ದು.

ಪದ ಪ್ರೀತಿ
Astronauts, Cosmonauts ಹಾಗೂ Taikonauts ಅಂದ್ರೆ ಏನು ಅಂತ ಕೇಳಿದರೆ ಬಹುತೇಕ ಎಲ್ಲರೂ "Taikonauts ಅಂದ್ರೆ ಗೊತ್ತಿಲ್ಲ. ಆದರೆ ಮೊದಲೆರಡು ಪದಗಳ ಅರ್ಥ ಗಗನಯಾತ್ರಿಗಳು' ಎಂದು ಹೇಳಬಹುದು. ಈ ಮೂರೂ ಪದಗಳ ಅರ್ಥ ಒಂದೇ-ಗಗನಯಾತ್ರಿ ಎಂದೇ.
ಅಮೆರಿಕದವರು ಯಾವತ್ತೂ astronauts ಅಂತಾರೆ. ಜಪ್ಪಯ್ಯ ಅಂದ್ರೂ ಈ್ಟಡಟ್ಟಟಿಛ್ಡಡಿಡ ಎಂದು ಹೇಳುವುದಿಲ್ಲ. ರಷ್ಯನ್ನರು ಎಂದೆಂದೂ Cosmonauts ಅನ್ನೊಲ್ಲ. ಅವರು ಹೇಳೋದು astronauts  ಎಂದೇ.
ಚೀನಾದವರು ಮೊದಲಿನ -ಎರಡು ಪದಗಳನ್ನು ಬಳಸುವುದಿಲ್ಲ. ಎಲ್ಲರೂ ತಮ್ಮ ತಮ್ಮ ಪದಗಳನ್ನೇ ಬಳಸುತ್ತಾರೆ. ಪದ ಪ್ರೀತಿ ಅಂದ್ರೆ ಇದು.

ವಾಕ್ಯ-ಘೋಷವಾಕ್ಯ
ನಿಮಗೆ ಗೊತ್ತಿರಲಿ ಎಂದು ಹೇಳುತ್ತಿದ್ದೇನೆ. ಇತ್ತೀಚೆಗೆ ಬೆಂಗಳೂರಿನ ತರಗುಪೇಟೆಯ ಐತಾಳರ ರದ್ದಿ ಅಂಗಡಿಯಲ್ಲಿ 1922ರ 'ದಿ ನ್ಯೂಯಾರ್ಕ್ ಡೇಲಿ ನ್ಯೂಸ್‌' ಎಂಬ ಪತ್ರಿಕೆಯ ಕೆಲವು ಪ್ರತಿಗಳು ಸಿಕ್ಕವು. ಯಾವ ಪುಣ್ಯಾತ್ಮ ಇಷ್ಟು ವರ್ಷಗಳ ಕಾಲ ಜೋಪಾನವಾಗಿ ಎತ್ತಿಟ್ಟುಕೊಂಡು, ಬೇಡವೆಂದು ಈಗ ತೂಕಕ್ಕೆ ಹಾಕಿದನೋ ಏನೋ? ನಾನು ಅವನ್ನೆಲ್ಲ ಎತ್ತಿಟ್ಟುಕೊಂಡೆ. 'ಪ್ರತಿ ಪತ್ರಿಕೆಗೂ ಒಬ್ಬ ಓದುಗ ಇದ್ದೇ ಇರುತ್ತಾನೆ' ಎಂಬುದು ಸುಳ್ಳಲ್ಲ ಅನಿಸಿತು.
ಆ ಪತ್ರಿಕೆಯ ಜಾಹೀರಾತು ವಿಭಾಗ 1922ರಲ್ಲಿ ಒಂದು ಘೋಷವಾಕ್ಯವನ್ನು ಪ್ರಕಟಿಸಿತು. ಅದೇನೆಂದರೆ- 'Tell it to Sweeney! The Stuyvesants will understand.' ಇದು ಬಹಳ ಸರಳ ಸಂದೇಶವಿರುವ ಸ್ಲೋಗನ್. Sweeney ಅಂದ್ರೆ ನ್ಯೂಯಾರ್ಕಿನ ಕೂಲಿ, ಶ್ರಮಿಕ ವರ್ಗದವರು, ಬೇರೆ ದೇಶಗಳಿಂದ ಕೆಲಸ ಹುಡುಕಿಕೊಂಡು ಬಂದವರು. Stuyvesants ಅಂದ್ರೆ ಶ್ರೀಮಂತರು, ಬೃಹತ್ ಆಸ್ತಿ ಹೊಂದಿದವರು. ತಮ್ಮ ಪತ್ರಿಕೆಯನ್ನು ಬರೀ ಬಡವರೊಂದೇ ಅಲ್ಲ, ಶ್ರೀಮಂತರೂ ಓದಬೇಕು ಅಥವಾ ಎಲ್ಲ ವರ್ಗದ ಜನರೂ ಓದಬೇಕು ಎಂಬುದು ತಾತ್ಪರ್ಯ. ಕೊನೆಗೆ ಈ ವಾಕ್ಯ ಪತ್ರಿಕೆಯ ಘೋಷ ವಾಕ್ಯವಾಯಿತು.
ಆ ವಾಕ್ಯ ಬರೀ ಜಾಹೀರಾತು ವಿಭಾಗಕ್ಕೆ ಮಾತ್ರ ಅಲ್ಲ, ಸಂಪಾದಕೀಯ ವಿಭಾಗದವರಿಗೂ ಅಷ್ಟೇ ಅನ್ವಯವಾಗುತ್ತದೆ. ಹೊಲದಲ್ಲಿರುವ ರೈತ, ಚಹದಂಗಡಿಯಲ್ಲಿ ಕುಳಿತ ಬಡವ, ಹರಟೆ ಕಟ್ಟೆ ಮೇಲೆ ಕುಳಿತ ಹಳ್ಳಿಗರನ್ನು ಗಮನದಲ್ಲಿಟ್ಟುಕೊಂಡು ಬರೆದರೆ, ಎಂಥವರಿಗಾದರೂ ಅರ್ಥವಾಗುತ್ತದೆ. ಪತ್ರಿಕಾ ಭಾಷೆಯ ಆಶಯವೂ ಅದೇ.

ಬೆಳೆಸುವುದು
ಖ್ಯಾತ ಬೇಸ್‌ಬಾಲ್ ಆಟಗಾರ ಹರ್ಮನ್ ಕಿಲ್ಲೆಬ್ರ್ಯೂ ಜೀವನದ ಒಂದು ಪ್ರಸಂಗ.
ನನ್ನ ತಂದೆ ಹಾಗೂ ನನ್ನ ಅಣ್ಣ ನನ್ನೊಂದಿಗೆ ಮನೆಯ ಹಿತ್ತಲಿನಲ್ಲಿ ಆಡುತ್ತಿದ್ದರು. ನಾವು ಆಡಲಾರಂಭಿಸಿದಂತೆ ನನ್ನ ತಾಯಿ ಓಡೋಡಿ ಬಂದು, 'ನೀವು ಹುಲ್ಲನ್ನು ತುಳಿದು ಹಾಳು ಮಾಡುತ್ತೀರಿ' ಎಂದು ಗದರಿದಳು.
ಅದಕ್ಕೆ ನಮ್ಮ ತಂದೆಯವರು ಹೇಳಿದರು-'ನಿನಗೆ ಒಂದು ಸಂಗತಿ ಗೊತ್ತಿರಲಿ, ನಾವು ಹುಲ್ಲನ್ನು ಬೆಳೆಸುತ್ತಿಲ್ಲ. ನಮ್ಮ ಮಕ್ಕಳನ್ನು ಬೆಳೆಸುತ್ತಿದ್ದೇವೆ.' ಅಂದಿನಿಂದ ಅಮ್ಮ ಎಂದೆಂದೂ ಗದರಲಿಲ್ಲ.



-ವಿಶ್ವೇಶ್ವರ ಭಟ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com