ಅದೇ ಪಿ.ಜಿ.ಯ ಲೈಫು, ಅಮ್ಮನ ಫೋನು, ವೀಕೆಂಡ್ ರೌಂಡ್ಸ್, ಗೆಳತಿಯರ ಜತೆಗಿನ ಕಾಡುಹರಟೆ, ಹುಸಿಮುನಿಸು, ಜಗಳ, ರಾಜಿಯಂಥ ವಿಷಯಗಳನ್ನು ಬದಿಗಿಟ್ಟು ಪುಟ್ಟ ಕಥೆಗಳೊಂದಿಗೆ ಎಲ್ಲರನ್ನೂ ಭೇಟಿಯಾಗಬೇಕು ಎಂಬ ಮಹದಾಸೆಯೊಂದು ಹಲವು ದಿನಗಳಿಂದಲೂ ಮನದಲ್ಲಿತ್ತು. ಹಾಗೆಂದೇ ಈ ಬಾರಿ ಕಥೆಗಳೊಂದಿಗೆ ಎದುರು ನಿಂತಿದ್ದೇನೆ. ಒಪ್ಪಿಸಿಕೊಳ್ಳಿ...
= ಅವನೊಬ್ಬ ತರುಣ ಮೀನುಗಾರ. ನಿಜ ಹೇಳಬೇಕೆಂದರೆ, ಅವನಿಗೆ ಹೆಚ್ಚಿನ ಸಮಸ್ಯೆಗಳೇ ಇರಲಿಲ್ಲ. ಒಮ್ಮೆ ಬಲೆ ಹರಡಿದರೆ ಸಾಕು, ಮೀನುಗಳು ಬೀಳುತ್ತಿದ್ದವು. ನೆಮ್ಮದಿಯ ಬದುಕಿಗೆ ಸಾಕು ಅನ್ನುವಂಥ ಆದಾಯವೂ ಅವನಿಗಿತ್ತು. ಆದರೆ ಅವನಿಗೆ ಸಂತೃಪ್ತಿ ಎಂಬುದೇ ಇರಲಿಲ್ಲ. ಬದುಕಿನ ಬಗ್ಗೆ, ದೇವರ ಕರುಣೆಯ ಬಗ್ಗೆ ಅವನಿಗೆ ತಕರಾರುಗಳಿದ್ದವು. ಅದರ ಜೊತೆಗೇ ಅತೀ ಎಂಬಂಥ ಬೇಜವಾಬ್ದಾರಿ ಮತ್ತು ದುಡುಕು ಬುದ್ಧಿ ಅವನ ವ್ಯಕ್ತಿತ್ವದ ಭಾಗವಾಗಿದ್ದವು.
ಈ ಮಹರಾಯನಿಗೆ ಅದೊಮ್ಮೆ, ಬೆಳಗಿನ ಜಾವ ಐದು ಗಂಟೆಗೇ ಎಚ್ಚರವಾಯಿತು. ಹಿಂದಿನ ದಿನವಷ್ಟೇ ವಿದೇಶದಿಂದ ಬಂದ ಗೆಳೆಯರೊಬ್ಬರು ವಿಶೇಷ ಉಡುಗೊರೆಯ ಬ್ಯಾಗೊಂದನ್ನು ಇವನಿಗೆ ಕೊಟ್ಟು ಹೋಗಿದ್ದರು. ಅದರಲ್ಲೇನಿರುತ್ತೆ ಮಹಾ? ಒಂದೆರಡು ಸಾವಿರ ರೂ. ಬೆಲೆಯ ಯಾವುದೋ ವಸ್ತು ಇರಬಹುದು ಎಂದು ಯೋಚಿಸಿದ ಈತ ಅದನ್ನು ಬಿಚ್ಚಿ ಕೂಡ ನೋಡಿರಲಿಲ್ಲ. ಮತ್ತೆ ನಿದ್ರೆ ಬರುವುದಿಲ್ಲ ಅನ್ನಿಸಿದಾಗ ಆ ಉಡುಗೊರೆಯ ಚೀಲದೊಂದಿಗೆ ಸಮುದ್ರ ತೀರಕ್ಕೆ ಹೋಗಿ ಕುಳಿತ. ಆಗಲೇ ಆ ಚೀಲದೊಳಗೆ ಗೋಲಿಯಂಥ ವಸ್ತುಗಳಿವೆ ಎಂಬುದು ಅವನಿಗೆ ಗೊತ್ತಾಯಿತು. ಸಮುದ್ರ ತೀರದಲ್ಲಿ ಯಾವುದೋ ಹಾಡು ಗುನುಗುತ್ತ ಕುಳಿತ ಆತ, ಕತ್ತಲಿನ ಆ ಪರಿಸರದಲ್ಲಿ ಸಮಯ ಕಳೆಯಲೆಂದೇ ತಮಾಷೆಯ ಆಟಕ್ಕೆ ಕುಳಿತ. ಆ ಪ್ರಕಾರವೇ ಗೋಲಿಯಂಥ ವಸ್ತುಗಳನ್ನು ಒಂದರ ನಂತರ ಒಂದನ್ನು ಸಮುದ್ರಕ್ಕೆ ಎಸೆಯುತ್ತಾ ಬಂದ. ಕಡೆಯ ಗೋಲಿಯನ್ನು ಎಸೆಯುವ ವೇಳೆಗೆ ಸೂರ್ಯೋದಯದ ಹೊತ್ತಾಯಿತು. ಆ ಪ್ರಶಾಂತ ಬೆಳಕಲ್ಲಿ ಗೋಲಿಯಂಥ ವಸ್ತು ಏನಿರಬಹುದು ಎಂದು ಕುತೂಹಲದಿಂದ ನೋಡಿದವನೇ- ಅಯ್ಯೋ ದೇವರೇ, ಇದೇನಾಗಿ ಹೋಯ್ತು ಎಂದು ಚೀರುತ್ತಾ ಹತಾಶನಾಗಿ ಕುಸಿದು ಕುಳಿತ. ಏಕೆಂದರೆ, ಆತ ಗೋಲಿ ಎಂದುಕೊಂಡು ಎಸೆದದ್ದೆಲ್ಲ ಅಪರೂಪದ ಮುತ್ತುಗಳಾಗಿದ್ದವು!
ಯೋಚಿಸಿ ನೋಡಿ: ಬದುಕಲ್ಲಿ ನಮ್ಮ ಪಾಲಿಗೂ ಮುತ್ತಿನಂಥ ಅವಕಾಶಗಳು ಆಗಿಂದ್ದಾಗ್ಗೆ ಬರುತ್ತಲೇ ಇರುತ್ತವೆ. ಆದರೆ ನಾವು ಬೇಜವಾಬ್ದಾರಿಯಿಂದ, ಉಡಾಫೆಯಿಂದ ವರ್ತಿಸಿ ಅದೃಷ್ಟ ದೇವತೆಯನ್ನು ಆಚೆ ತಳ್ಳುತ್ತೇವೆ. ಆನಂತರದಲ್ಲಿ ಸತ್ಯಾಂಶ ತಿಳಿದು- ಅಯ್ಯೋ, ಎಡವಟ್ಟಾಗಿ ಹೋಯ್ತು ಎಂದು ಪರಿತಪಿಸುತ್ತೇವೆ.
ಇಂಥ ಸಂಕಟಗಳಿಗೆ ಸಿಲುಕದಂಥ ಬುದ್ಧಿವಂತಿಕೆ ನಮ್ಮದಾಗಬಾರದೆ?
ನ
= ಒಂದು ಊರು. ಅಲ್ಲಿ ಒಂದೇ ವಯೋವಾನದ ಇಬ್ಬರು ವ್ಯಕ್ತಿಗಳಿದ್ದರು. ಒಬ್ಬ, ವೃತ್ತಿಯಿಂದ ಚಮ್ಮಾರ. ಮತ್ತೊಬ್ಬ, ಸದಾ ದೇವರ ಧ್ಯಾನದಲ್ಲೇ ಮುಳುಗಿರುತ್ತಿದ್ದ ಸತ್ಪುರುಷ. ಚಮ್ಮಾರನ ಉತ್ಪನ್ನಗಳಿಗೆ ಊರಿನ ತುಂಬಾ ಹೆಚ್ಚಿನ ಬೇಡಿಕೆಯಿತ್ತು. ಬೆಳಗ್ಗೆ, ಅಂಗಡಿ ಹೊಕ್ಕರೆ ಆತ ಮೇಲೆ ಏಳುತ್ತಿದ್ದುದು ರಾತ್ರಿಯ ವೇಳೆಗೇ. ಮತ್ತೊಂದು ಕಡೆಯಲ್ಲಿ ದೈವಭಕ್ತ ಇದ್ದನಲ್ಲ; ಆತ ಪ್ರತಿ ಮೂರು ದಿನಕ್ಕೊಮ್ಮೆ ಪ್ರವಚನ ನೀಡುತ್ತಿದ್ದ. ಅವನ ಉಪದೇಶ ಕೇಳಲು ಜನ ಕಿಕ್ಕಿರಿದು ಸೇರುತ್ತಿದ್ದರು.
ಹೀಗೇ ವರ್ಷಗಳು ಉರುಳಿದವು. ವಯಸ್ಸಾಯಿತಲ್ಲ; ಅದೇ ಕಾರಣದಿಂದ ಇಬ್ಬರೂ ಕಾಯಿಲೆ ಬಿದ್ದರು. ಕಾಕತಾಳೀಯವೆಂಬಂತೆ ಒಂದೇ ವಯೋವಾನದ ಆ ಇಬ್ಬರೂ, ಒಂದೇ ದಿನ ನಿಧನ ಹೊಂದಿದರು. ಮುಂದೆ ಅವರ ಆತ್ಮಗಳು ನೇರವಾಗಿ ಸ್ವರ್ಗದೆಡೆಗೆ ಪ್ರಯಾಣ ಬೆಳೆಸಿದವು. ಚಮ್ಮಾರನನ್ನು ಕಂಡಾಕ್ಷಣ, ಶಿರಬಾಗಿ ನಮಿಸಿದ ದೇವದೂತ 'ಪ್ರಭೂ, ದಯ ಮಾಡಿಸಬೇಕು' ಎಂದು ಹೇಳುತ್ತಾ, ಅವನನ್ನು ದೇವಲೋಕದ ಸಭಾಂಗಣದೊಳಗೆ ಕರೆದುಕೊಂಡು ಹೋದ. ಆದರೆ, ದೈವಭಕ್ತನ ಆತ್ಮಕ್ಕೆ ಅಂತಹುದೇ ಭವ್ಯ ಸ್ವಾಗತ ದೊರೆಯಲಿಲ್ಲ. ಅವನನ್ನು ಬಾಗಿಲಿನಲ್ಲಿಯೇ ತಡೆದು ನಿಲ್ಲಿಸಿದ ದೇವದೂತರು- 'ಸ್ವಲ್ಪ ಹೊತ್ತು ಇಲ್ಲಿಯೇ ನಿಂತಿರಿ. ನಮ್ಮ ಒಡೆಯರಿಂದ ಆಹ್ವಾನ ಬಂದ ನಂತರ ನಿಮ್ಮನ್ನು ಸಭಾಂಗಣಕ್ಕೆ ಕರೆದೊಯುತ್ತೇವೆ' ಅಂದರು.
ಈ ಉತ್ತರ ಕೇಳಿ ದೈವಭಕ್ತ ಕಿಡಿಕಿಡಿಯಾದ. 'ಅಲ್ಲಯ್ಯಾ, ಅವನು ಚಮ್ಮಾರ. ಇಡೀ ದಿನ ಚಪ್ಪಲಿಗಳ ಮಧ್ಯೆಯೇ ಬದುಕು ಕಳೆಯುತ್ತಿದ್ದವ. ಅಂಥವನನ್ನು ಸ್ವರ್ಗದ ಅಂಗಳದಲ್ಲಿ ನಿಲ್ಲಿಸಿದ್ದೀರ. ನಾನು, ಭಗವಂತನ ಸ್ಮರಣೆಯಲ್ಲೇ ಬದುಕು ಕಳೆದವನು. ಅಂಥ ನನ್ನನ್ನು ಬಾಗಿಲಿನಲ್ಲೇ ನಿಲ್ಲಿಸಿ ಅವಮಾನ ಮಾಡ್ತಾ ಇದೀರ. ಇದು ನ್ಯಾಯವಾ?' ಎಂದು ಪ್ರಶ್ನಿಸಿದ.
ಆಗ, ಕರ್ಮಫಲಗಳ ಪುಸ್ತಕ ಪರಿಶೀಲಿಸಿದ ದೇವದೂತರು ಹೇಳಿದರಂತೆ: 'ಸ್ವಾಮೀ, ಆತ ವೃತ್ತಿಯಿಂದ ಚಮ್ಮಾರನಿರಬಹುದು. ಆದರೆ ಪ್ರತಿದಿನವೂ ರಾತ್ರಿ ಮಲಗುವ ಮುನ್ನ ದೇವರ ಮುಂದೆ ನಿಂತು- ಭಗವಂತಾ, ನಿನ್ನನ್ನು ಪ್ರಾರ್ಥಿಸಲು ನನಗೆ ಸಮಯವೇ ಸಿಗಲಿಲ್ಲ. ದಯವಿಟ್ಟು ಕ್ಷಮಿಸು ತಂದೆ ಎಂದು ಪ್ರಾರ್ಥಿಸುತ್ತಿದ್ದ. ಅವನ ಮಾತುಗಳಲ್ಲಿ ಭಕ್ತಿ ಮತ್ತು ಪ್ರೀತಿ ತುಂಬಿರುತ್ತಿತ್ತು. ನಿಮ್ಮ ವಿಷಯ ಹಾಗಲ್ಲ. ನೀವು ಇಡೀ ದಿನ ದೇವರ ಸ್ಮರಣೆ ಮಾಡುತ್ತಿದ್ದುದು ನಿಜ. ಆದರೆ ನಿಮ್ಮ ಪ್ರಾರ್ಥನೆಯಲ್ಲಿ ಭಕ್ತಿಯ ಕುರುಹೇ ಇರಲಿಲ್ಲ. ಈ ಕಾರಣದಿಂದಲೇ ನಿಮಗೆ ಸ್ವರ್ಗದ ಸಭಾಂಗಣಕ್ಕೆ ತುಂಬಾ ತಡವಾಗಿ ಪ್ರವೇಶ ದೊರಕುತ್ತದೆ...'
ಈಗ ಸುಮ್ಮನೇ ಒಮ್ಮೆ ಯೋಚಿಸೋಣ. ನಾವೆಲ್ಲಾ ಒಂದು ರೀತಿಯಲ್ಲಿ ಈ ಕತೆಯಲ್ಲಿ ಬರುವ ದೈವಭಕ್ತನ ಗುಣ ಸ್ವಭಾವವನ್ನೇ ಹೊಂದಿರುವರು. ಪ್ರತಿ ಹೆಜ್ಜೆಯಲ್ಲೂ ನಮಗೆ ತುಂಬ ಒಳ್ಳೆಯದೇ ಆಗಲಿ ಎಂದು ಎಲ್ಲರೂ ಆಸೆಪಡುತ್ತೇವೆ. ಆದರೆ ಸ್ವಾರ್ಥವನ್ನು ಮರೆತು ಪ್ರಾರ್ಥಿಸುವುದನ್ನು ಮರೆತಿರುತ್ತೇವೆ! ಈ ಕತೆ ಓದಿದ ಕಾರಣಕ್ಕಾದರೂ, ಶ್ರದ್ಧಾಭಕ್ತಿಯಿಂದ ಕೂಡಿದ ಪ್ರಾರ್ಥನೆ, ನಮ್ಮ ದಿನಚರಿಯ ಒಂದು ಭಾಗವಾಗಲಿ. ಅಲ್ಲವೇ?
-ನಾನು ಪ್ರಣತಿ
Advertisement