

ಅಂಗವೈಕಲ್ಯಕ್ಕೆ ಸವಾಲು ಹಾಕಿ ಗೆದ್ದಿರುವ, ಅಮೆರಿಕದ ಜನರಿಂದ ರೋಲ್ ಮಾಡೆಲ್, ಸ್ಫೂರ್ತಿ ದೇವತೆ, ಮಿರಾಕಲ್ ಮ್ಯಾನ್ ಎಂದೆಲ್ಲಾ ಕರೆಸಿಕೊಂಡಿರುವ ಯುವಕನೊಬ್ಬನ ಗೆಲುವಿನ ಕಥೆಯನ್ನು ನಿಮಗೆ ಹೇಳಬೇಕು. ಈತನ ಹೆಸರು ನಿಕ್ ಸ್ಯಾಂಟೋನಟಾ. ಮಿನಿ ಇಂಡಿಯಾ ಎಂದೇ ಹೆಸರಾಗಿರುವ ಅಮೆರಿಕದ ನ್ಯೂಜೆರ್ಸಿಯಲ್ಲಿ ಇವನ ವಾಸ. ವಿಶೇಷವೇನು ಗೊತ್ತೆ? ಈ ಹುಡುಗನಿಗೆ ಎರಡೂ ಕಾಲುಗಳಿಲ್ಲ. ಒಂದು ಕೈ ಇಲ್ಲ. ಇರುವ ಒಂದೇ ಒಂದು ಕೈಯಲ್ಲಿ ಇರುವುದು ಎರಡೇ ಬೆರಳು! ಹಾಗಿದ್ದರೂ ಈತ ಬೇಸ್‌ಬಾಲ್ ಆಡುತ್ತಾನೆ. ಗಿಟಾರ್ ನುಡಿಸುತ್ತಾನೆ. ಡ್ರಮ್ಸ್ ಬಾರಿಸುತ್ತಾನೆ. ಈಜು ಹೊಡೆಯುತ್ತಾನೆ. ಸ್ಕೇಟಿಂಗ್‌ಗೆ ಹೋಗುತ್ತಾನೆ. ಕವಿತೆ ಬರೆಯುತ್ತಾನೆ. ಪೇಟಿಂಗ್ ಮಾಡುತ್ತಾನೆ. ಕಾರು ಓಡಿಸುತ್ತಾನೆ. ಅಷ್ಟೇ ಅಲ್ಲ; ಸಹಾಯಕನೊಬ್ಬ ಜೊತೆಗೆ ಸಿಕ್ಕರೆ, ಬಂದೂಕು ಹೆಗಲಿಗೇರಿಸಿಕೊಂಡು ಕಾಡಿನಲ್ಲಿ ಶಿಕಾರಿಗೂ ಹೋಗಿ ಬಿಡುತ್ತಾನೆ!
ಅರೆ, ಇದೆಲ್ಲಾ ನಿಜವಾ? ಇದೆಲ್ಲಾ ಸತ್ಯವಾ? ಕಾಲುಗಳೇ ಇಲ್ಲ ಅಂದ ಮೇಲೆ ಆ ಹುಡುಗ ಈಜು ಹೊಡೆಯುವುದು ಹೇಗೆ? ಸ್ಕೇಟಿಂಗ್‌ಗೆ ಹೋಗುವುದು ಹೇಗೆ? ಒಂದು ಕೈ ಇಲ್ಲ. ಇರುವ ಇನ್ನೊಂದು ಕೈ ಕೂಡ ಪರಿಪೂರ್ಣವಾಗಿಲ್ಲ ಅಂದ ಮೇಲೆ, ಆ ಮೋಟು ಕೈಗಳಿಂದಲೇ ಈ ಹುಡುಗ ಹೇಗೆ ಚಿತ್ರ ಬರೆದ? ಹೇಗೆ ಡ್ರಮ್ ಬಾರಿಸಿದ? ಇರುವ ಎರಡೇ ಬೆರಳುಗಳಿಂದ ಕೀಬೋರ್ಡ್‌ನಲ್ಲಿ ಅಷ್ಟೂ ರಾಗಗಳನ್ನು ಹೇಗೆ ನುಡಿಸಿದ? ದೇಹದ ಅರ್ಧ ಭಾಗವೇ ಇಲ್ಲದಿದ್ದರೂ ಇಂಥದೊಂದು ಸಾಧನೆ ಮಾಡಲು ಹೇಗೆ ಸಾಧ್ಯವಾಯಿತು? ವಿಚಿತ್ರ ಎಂಬಂಥ ದೇಹ ಸ್ವರೂಪವಿದ್ದುದು ಈ ಹುಡುಗನಿಗೆ ಒಂದು ತೊಂದರೆಯಂತೆ, ಕೊರತೆಯಂತೆ ಕಾಣಲಿಲ್ಲವಾ? ಈ ಹುಡುಗನ ಬೆನ್ನ ಹಿಂದೆ ನಿಂತು, ನಾವು ಜೊತೆಗಿದ್ದೇವೆ. ಹೆದರಬೇಡ, ಮುನ್ನುಗ್ಗು ಎಂದು ಹೆಜ್ಜೆ ಹೆಜ್ಜೆಗೂ ಪ್ರೋತ್ಸಾಹ ನೀಡಿದ ಮಹನೀಯರಾದರೂ ಯಾರು ಎಂಬಂಥ ಪ್ರಶ್ನೆಗಳು ಕಾಡಬಹುದು. ಅವುಗಳಿಗೆಲ್ಲಾ ಇಲ್ಲಿ ಉತ್ತರವಿದೆ.
ಅಮೆರಿಕದ ನ್ಯೂಜೆರ್ಸಿಯಲ್ಲಿ ವಾಸವಿರುವ ಮೈಕೆಲ್-ಸ್ಟೇಸಿ ದಂಪತಿಗೆ ಮೂರು ಮಕ್ಕಳು. ಮೂರನೆಯವನೇ ನಮ್ಮ ಕಥಾನಾಯಕ ನಿಕ್ ಸ್ಯಾಂಟೋನಟಾ. ಮೂರನೇ ಬಾರಿ ರೂಟೀನ್ ಚೆಕಪ್‌ಗೆ ಹೋದಾಗಲೇ ಸ್ಟೇಸಿಯನ್ನು ಕೂಲಂಕಷವಾಗಿ ಪರೀಕ್ಷಿಸಿದ ವೈದ್ಯರು-'ನಿಮಗೆ ಅಂಗವಿಕಲ ಮಗು ಹುಟ್ಟಲಿದೆ. ಅದನ್ನು ಸ್ವೀಕರಿಸಲು ಈಗಿಂದಲೇ ಮಾನಸಿಕವಾಗಿ ಸಿದ್ಧರಾಗಿ ಎಂದರಂತೆ. ಅಂಗವಿಕಲ ಮಗು ಎಂದ ಮೇಲೆ, ಅದಕ್ಕೆ ಒಂದು ಕೈ ಇರುವುದಿಲ್ಲ, ಅಥವಾ ಕಾಲಿರುವುದಿಲ್ಲ ಅಥವಾ ಅದಕ್ಕೆ ಕಣ್ಣು ಕಾಣಿಸುವುದಿಲ್ಲ...' ಎಂದೆಲ್ಲಾ ಅಂದಾಜು ಮಾಡಿಕೊಂಡು, ಅಂಥದೇ ಮಗುವಿನ ನಿರೀಕ್ಷೆಯಲ್ಲಿದ್ದರು ಮೈಕೇಲ್-ಸ್ಟೇಸಿ ದಂಪತಿ. ಆದರೆ, ಹುಟ್ಟಿದ್ದು-ದೇಹದ ಅರ್ಧ ಭಾಗವೇ ಇಲ್ಲದಂಥ ಮಗು! ಮಗುವಿನ ಅಸಹಜ ಬೆಳವಣಿಗೆಗೆ ವಂಶವಾಹಿ ಜೀನ್ಸ್, ಅತಿಯಾದ ಮಾತ್ರೆ ಸೇವನೆ, ಅಪೌಷ್ಠಿಕ ಆಹಾರ ಸೇವನೆಯೇ ಕಾರಣ ಎಂದೆಲ್ಲಾ ವೈದ್ಯ ವಿಜ್ಞಾನ ಹೇಳುತ್ತದೆ. ಮಗುವಿನ ಅಸಹಜ ಬೆಳವಣಿಗೆಗೆ ಇರುವ ಕಾರಣವಾದರೂ ಏನು ಎಂದು ತಿಳಿಯಬೇಕೆಂಬ ಕುತೂಹಲ ಮೈಕೇಲ್-ಸ್ಟೇಸಿ ದಂಪತಿಯದ್ದು. ಅವರ ಕುತೂಹಲದ ಪ್ರಶ್ನೆಗೆ ವೈದ್ಯರು ಹೇಳಿದರಂತೆ: 'ಕೆಲವು ಪ್ರಶ್ನೆಗಳಿಗೆ ಉತ್ತರ ಹೇಳಲು ಸಾಧ್ಯವೇ ಇಲ್ಲ. ಅಂಥ ಪ್ರಶ್ನೆಗಳಲ್ಲಿ ನಿಮ್ಮದೂ ಒಂದು...'
ಮುಂದೆ ಒಂದೊಂದೇ ದಿನ ಕಳೆದಂತೆಲ್ಲ, ಈ ಅಂಗವಿಕಲ ಮಗುವನ್ನು ಸ್ವಾವಲಂಬಿಯನ್ನಾಗಿ ರೂಪಿಸಲೇಬೇಕು. ಹಾಗೇ ಮಾಡದೇ ಅನುಕಂಪದಿಂದ ನೋಡಲು ಹೋದರೆ, ಮಗು ಹಾಳಾಗುತ್ತದೆ. ಅದರ ಭವಿಷ್ಯ ಮಸುಕಾಗುತ್ತದೆ ಅನ್ನಿಸಿತಂತೆ. ಅವತ್ತೇ, ಹೆಂಡತಿಯನ್ನು ಎದುರು ಕೂರಿಸಿಕೊಂಡು ಮೈಕೇಲ್ ಹೇಳಿದನಂತೆ: ನೋಡೂ, ಈ ಮಗುವಿಗೆ ಯಾವುದೇ ವಿಶೇಷ ಸವಲತ್ತು ಒದಗಿಸಬೇಡ. ಅನುಕಂಪ ತೋರಿಸಬೇಡ. ಅತಿಯಾಗಿ ಮುದ್ದು ಮಾಡಬೇಡ. ಮಗುವಿನ ಮುಂದೆ ಕೂತು ಅಯ್ಯೋ ಪಾಪ ಎಂಬಂಥ ಮಾತುಗಳನ್ನು ಆಡಬೇಡ. ಅದರ ಬದಲಿಗೆ, ನಿನ್ನ ಕೆಲಸಗಳನ್ನೆಲ್ಲ ನೀನೇ ಮಾಡಿಕೊಳ್ಳಬೇಕು ಅಂತ ಹೇಳು. ಅವನ ಚಿಕ್ಕ ಚಿಕ್ಕ ಗೆಲುವಿಗೂ ನಾಲ್ಕು ಮಾತು ಹೆಚ್ಚಾಗಿ ಹೊಗಳು. ಇಷ್ಟಾಗಿಬಿಟ್ರೆ, ಅವನು ಉಳಿದೆಲ್ಲರಂತೆಯೇ ಬದುಕಲು ಕಲಿಯುತ್ತಾನೆ...'
ಮುಂದೆ ಏನೇನಾಯಿತು ಎಂಬುದನ್ನು ಸ್ಟೇಸಿ ವಿವರಿಸುವುದು ಹೀಗೆ:'ಮಗುವಿನ ಅಂಗಾಲುಗಳಿಗೆ ಬೆರಳುಗಳಿಂದ ಕಚಗುಳಿ ಕೊಡಬೇಕು. ಆಗ, ಮಗು ಕಿಲಕಿಲ ನಗುವುದನ್ನು ಕಂಡು ಖುಷಿ ಪಡಬೇಕು. ಮಗುವಿನ ಪುಟ್ಟ ಕೈಗಳಿಂದ ಕೆನ್ನೆಗೆ ಹೊಡೆಸಿಕೊಂಡು ಖುಷಿ ಪಡಬೇಕು ಅನ್ನಿಸುತ್ತಿತ್ತು. ಆದರೆ ನನ್ನ ಮಗುವಿಗೆ ಕಾಲುಗಳೇ ಇರಲಿಲ್ಲ. ಒಂದು ಕೈ ಕೂಡ ಇರಲಿಲ್ಲ. ಇದು ನೆನಪಾದಾಗ ದುಃಖ ಉಮ್ಮಳಿಸಿ ಬರುತ್ತಿತ್ತು. ಶೌಚಾಲಯ ಹಾಗೂ ಸ್ನಾನದ ಮನೆಯಲ್ಲಿ ಅವನಿಗೆ ತುಂಬಾ ಹಿಂಸೆಯಾಗುತ್ತಿತ್ತು. ನಾವು ಹೋಟೆಲಿಗೆ, ಪಾರ್ಟಿ-ಸಿನಿಮಾಕ್ಕೆ ಹೋದಾಗ, ಹತ್ತಾರು ಮಂದಿಯ ಕಾಕದೃಷ್ಟಿಗೆ ಬಲಿಯಾಗಬೇಕಿತ್ತು. ಹಲವರ ಕುತೂಹಲದ ಪ್ರಶ್ನೆಗಳಿಗೆ ಉತ್ತರಿಸಬೇಕಿತ್ತು.
ಇಂಥ ಸಂದರ್ಭಗಳಲ್ಲೆಲ್ಲ ಸಂಕಟವಾಗುತ್ತಿತ್ತು ನಿಜ. ಆದರೆ, ಸಂಕಟದ ಮಧ್ಯೆಯೇ ಬದುಕಲು ಮನಸ್ಸಾಗಲಿಲ್ಲ. ಆಗಿದ್ದು ಆಗಿಹೋಗಲಿ. ಈ ಮಗುವನ್ನು ಸ್ವಾವಲಂಬಿಯನ್ನಾಗಿ ಮಾಡಲೇಬೇಕು ಎಂದು ಅವತ್ತೇ ನಿರ್ಧರಿಸಿದೆವು. ಮುಂದೆ ನಡೆದಿದ್ದೆಲ್ಲ ಪವಾಡ ಎಂದೇ ಹೇಳಬೇಕು. ಮೊದಲಿಗೆ, ನಿಕ್‌ಗೆ ಓಡಾಡಲು ಅನುಕೂಲವಾಗುವಂತೆ, ಸ್ಕೇಟಿಂಗ್ ಥರದ ಒಂದು ಯಂತ್ರ ಖರೀದಿಸಿದೆವು. ಇದ್ದ ಒಂದೇ ಕೈಯನ್ನು ನೆಲಕ್ಕೆ ಊರಿ, ಇಡೀ ದೇಹದ ಶಕ್ತಿಯನ್ನು ಅದರ ಮೇಲಿರಿಸಿ, ನೆಲದಿಂದ ಎರಡಿಂಚು ಮೇಲಕ್ಕೆ ಕುಪ್ಪಳಿಸಿ ಸ್ಕೇಟಿಂಗ್ ಯಂತ್ರದ ಮೇಲೆ ನಿಕ್ ಕೂರಬೇಕಿತ್ತು. ಇಲ್ಲವಾದರೆ, ಸ್ವಲ್ಪ ಇಳಿಜಾರಿನಂತಿದ್ದ ಸ್ಥಳದಲ್ಲಿ ಆ ಯಂತ್ರವನ್ನಿಟ್ಟು, ನಿಕ್‌ನನ್ನು ಅದರ ಮೇಲೆ ಕೂರಿಸಬೇಕಿತ್ತು. ಇಂಥದೊಂದು ಬದಲಾವಣೆಗೆ ನಿಕ್‌ನನ್ನು ಒಗ್ಗಿಸಿದೆವು. ಕೆಲವೇ ದಿನಗಳಲ್ಲಿ ಆ ಪುಟಾಣಿ ಯಂತ್ರದ ಮೇಲೆ ಕೂತು ಮನೆಯ ತುಂಬಾ ಓಡಾಡ ತೊಡಗಿದ ನಿಕ್. ಈ ಹುಡುಗ ಬದುಕಲ್ಲಿ ಗೆಲ್ಲುತ್ತಾನೆ ಎಂದು ನಮಗೆ ಅನಿಸಿದ್ದೆ ಆಗ.
ಕೆಲವು ತಿಂಗಳುಗಳ ನಂತರ, ನಿಕ್ ನಮಗೆ ಇನ್ನೊಂದು ಅಚ್ಚರಿ ನೀಡಿದ. ತನ್ನ ಅಣ್ಣಂದಿರು ಬರೆಯುವುದನ್ನು ಕಂಡು, ಎಡಗೈನಲ್ಲಿದ್ದ ಎರಡೇ ಬೆರಳುಗಳ ಮಧ್ಯೆ ಪೆನ್ ಸಿಕ್ಕಿಸಿಕೊಂಡು ಏನೇನೋ ಗೀಚಲಾರಂಭಿಸಿದ. ಗೀಚಲು ಬಂದರೆ, ಅಕ್ಷರ ಬರೆಯಲು ಬಂದಂತೆಯೇ ಅನ್ನಿಸಿತು. ಒಂದೊಂದೇ ಅಕ್ಷರ ತೋರಿಸಿಕೊಟ್ಟೆ. ಅದನ್ನು ಬರೆಯುವಂತೆ ಒತ್ತಾಯಿಸಿದೆ. ಪೂಸಿ ಹೊಡೆದೆ. ಏನೇನೋ ಆಸೆ ತೋರಿಸಿದೆ, ಪರಿಣಾಮ ಏನಾಯಿತೆಂದರೆ, ನಿಕ್ ನನ್ನ ನಿರೀಕ್ಷೆ ಮೀರಿ ಪ್ರಗತಿ ಸಾಧಿಸಿದ. ನೋಡನೋಡುತ್ತಲೇ, ಅಕ್ಷರ ಬರೆಯಲು ಕಲಿತೇ ಬಿಟ್ಟ.
ಸ್ಕೂಲಿಗೆ ಸೇರಿಸುವ ಸಂದರ್ಭದಲ್ಲಿ, ನನ್ನ ಮಗನ ದೇಹದ ಪರಿಸ್ಥಿತಿ ಹಾಗೂ ಶಾಲೆಯ ಜನರಿಂದ ಆಗಬೇಕಿರುವ ಸಹಾಯದ ಬಗ್ಗೆ ಆಡಳಿತ ಮಂಡಳಿಗೆ ವಿವರಿಸಿದೆವು. ನಿಕ್‌ನನ್ನು ವಿಶೇಷ ವಿದ್ಯಾರ್ಥಿ ಎಂದು ಪರಿಗಣಿಸಲು ಅವರು ಖುಷಿಯಿಂದ ಒಪ್ಪಿಕೊಂಡರು. ನಿಕ್‌ನನ್ನು ತರಗತಿಗೆ ಕರೆದೊಯ್ಯಲು ಸಹಪಾಠಿಗಳು ಕ್ಯೂ ನಿಂತರು. ಶಿಕ್ಷಕ ವರ್ಗದವರು ನಿಕ್‌ನ ಬಗ್ಗೆ ವಿಶೇಷ ಕಾಳಜಿ ವಹಿಸಿದರು. ಅವನಿಗೆಂದೇ ವಿಶೇಷ ಆಸನವನ್ನೂ ಸಿದ್ಧಪಡಿಸಿದ್ದಾಯ್ತು. ಈ ಎಲ್ಲ ಹೊಸ ಬದಲಾವಣೆಗಳು ಹಾಗೂ ಅದರ ಹಿಂದಿರುವ ಸದಾಶಯವನ್ನು ನಿಕ್ ತಕ್ಷಣವೇ ಅರ್ಥ ಮಾಡಿಕೊಂಡ. ತುಂಬ ಶ್ರದ್ಧೆಯಿಂದ ಓದಿದ. ತರಗತಿಗೇ ಮೊದಲಿಗನಾದ. ಅಷ್ಟೇ ಕವಿತೆ ಬರೆಯಲು, ಚಿತ್ರ ಬರೆಯಲು ಆರಂಭಿಸಿದ!
ಈ ಬೆರಗಿನ ಹಬ್ಬ ಇಷ್ಟಕ್ಕೇ ನಿಲ್ಲಲಿಲ್ಲ. ತನ್ನ ಅಣ್ಣಂದಿರಿಬ್ಬರೂ ಈಜು ಹೊಡೆಯುವುದನ್ನು ಕಂಡಾಗ, ತಾನೂ ನೀರಿಗೆ ಇಳಿಯುವುದಾಗಿ ನಿಕ್ ಹಠ ಹಿಡಿದ. ನಿನಗೆ ಕಾಲೇ ಇಲ್ಲವಲ್ಲ ಹೇಗೆ ಈಜು ಹೊಡೀತೀಯ ಎಂದು ಕೇಳಿದರೆ ಅವನ ಮನಸಿಗೆ ಘಾಸಿಯಾಗಬಹುದು ಅನ್ನಿಸಿತು. ಹಾಗಾಗಿ ನಾವು ಏನೂ ಹೇಳಲಿಲ್ಲ. ಬದಲಿಗೆ, ಒಂದೇ ಕೈನಿಂದ ನೀರನ್ನು ಹಿಂದೆ ನೂಕಿ ಈಜುವ ವಿಧಾನ ಹೇಳಿ ಕೊಟ್ಟೆವು. ಕಾಲಿಲ್ಲದಿದ್ರೂ ಮೀನು ಈಜುತ್ತದೆ. ನೀನೂ ಅದೇ ಥರಾ ಎಂದು ತಮಾಷೆ ಮಾಡಿದೆವು. ಬಹುಶಃ ನಮ್ಮ ಮಾತಿನ ಹಿಂದಿದ್ದ ನೋವು ಹಾಗೂ ತನ್ನ ಇತಿಮಿತಿಯ ಬಗ್ಗೆ ಚೆನ್ನಾಗಿ ಗೊತ್ತಿದ್ದುದರಿಂದ, ಪ್ರತಿ ಕ್ಷಣವನ್ನೂ ನಿಕ್ ಗೆಲ್ಲುತ್ತಲೇ ಹೋದ. ತುಂಬ ಶ್ರದ್ಧೆಯಿಂದ ಈಜು ಕಲಿತ. ಎಲಾ ಇವ್ನ ಎಂದು ನಾವೆಲ್ಲ ಉದ್ಗರಿಸುವ ಮೊದಲೇ, ಪಿಯಾನೋ ನುಡಿಸ್ತೀನಿ ಅಂದ. ಕೀ ಬೋರ್ಡ್ ನುಡಿಸಲು ಕಲೀತೀನಿ ಎಂದ. ಅದಾಗಿ ಸ್ವಲ್ಪ ದಿನಕ್ಕೆ -ಮಮ್ಮೀ, ಡ್ರಮ್ಸ್ ಬಾರಿಸಬೇಕಲ್ಲ ಎಂದು ಪಿಸುಗುಟ್ಟಿದ. ಅವನ ಯಾವುದೇ ಆಸೆಗೂ ತಣ್ಣೀರು ಎರಚುವುದು ಬೇಡ ಅನಿಸಿದ್ದರಿಂದ, ಎಲ್ಲದಕ್ಕೂ ವ್ಯವಸ್ಥೆ ಮಾಡಿಕೊಟ್ವಿ. ದೇಹದ ಅರ್ಧ ಭಾಗವೇ ಇಲ್ಲ ಎಂಬುದನ್ನು ಮರೆತು ಎಲ್ಲ ವಿದ್ಯೆಯನ್ನೂ ಕಲಿತ ನಿಕ್ ಕಡೆಗೊಂದು ದಿನ-ಮಮ್ಮೀ, ದಿನಾಲೂ ನಾನು ಈ ಸ್ಕೇಟಿಂಗ್ ಆಡ್ತಾ ಇರ್ತೀನಿ ಅಲ್ವ? ಹಾಗಾಗಿ, ಸ್ಕೇಟಿಂಗ್ ಕಾಂಪಿಟೇಷನ್‌ಗೆ ಹೋಗಿ ಬರ್ಲಾ? ಅಂದ. ಬೇಡ ಕಣೋ ಅಂದುಬಿಟ್ಟರೆ, ಅವನ ಮನಸ್ಸಿಗೆ ನೋವಾಗಬಹುದು ಅನ್ನಿಸಿತು. ಹಾಗಾಗಿ 'ಹೋಗಿ ಬಾ. ಗೆಲುವಾಗಲಿ' ಅಂದೆ. ನನ್ನ ಮಗ ಗೆದ್ದೇ ಬಂದ!
ಮಗನ ಜೈತ್ರ ಯಾತ್ರೆಯನ್ನು ಹೀಗೆ ವಿವರಿಸುತ್ತಾ ಹೋಗುತ್ತಾಳೆ ಸ್ಟೇನ್. ಮುಂದೆ ನಡೆದಿರುವುದೆಲ್ಲಾ ಗೆಲುವಿನ ಕಥೆಯೇ. ಇತ್ತೀಚೆಗಷ್ಟೇ 18ನೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ನಿಕ್, ಈಗ ಕಾರು ಓಡಿಸುವುದರಲ್ಲೂ ಪಳಗಿದ್ದಾನೆ. ಓದಿನಲ್ಲಿ ಮುಂದಿದ್ದಾನೆ. ಮೋಟಿವೇಷನಲ್ ಸ್ಪೀಕರ್ ಅನ್ನಿಸಿಕೊಂಡಿದ್ದಾನೆ. ಪೇಂಟಿಂಗ್‌ನಲ್ಲಿ ದೊಡ್ಡ ಹೆಸರು ಮಾಡಿದ್ದಾನೆ. ಸ್ಕೇಟಿಂಗ್ ಯಂತ್ರದ ಮೇಲೆ ಕೂತು ಸರಬರ ಓಡಾಡುತ್ತಾ ಬೇಸ್‌ಬಾಲ್ ಆಡುತ್ತಾನೆ. ತಂದೆಯೊಂದಿಗೆ, ಬೇಟೆಯ ನೆಪದಲ್ಲಿ ಕಾಡಿಗೂ ನುಗ್ಗುತ್ತಾನೆ. ತನ್ನ ಹತ್ತಾರು ಸಾಧನೆಗಳಿಂದ ಸುತ್ತಮುತ್ತಲಿನ ಜನರನ್ನು ಬೆರಗಾಗಿಸಿದ್ದಾನೆ. 'ಇದೆಲ್ಲಾ ಹೇಗಯ್ಯಾ ಸಾಧ್ಯವಾಯ್ತು? ನಿನ್ನ ದೇಹ ಪ್ರಕೃತಿ ನಿನ್ನ ಕನಸುಗಳ ಹಾದಿಯಲ್ಲಿ ತೊಡಕಾಗಿ ಕಾಡಲಿಲ್ವಾ? ಕಾಲುಗಳೇ ಇಲ್ಲ, ಕೈಯಿಲ್ಲ, ಇರುವ ಕೈಗೆ ಬೆರಳುಗಳೂ ಇಲ್ಲ ಅನ್ನಿಸಿದಾಗ ಹಿಂಸೆಯಾಗಲಿಲ್ವಾ?' ಅಂದರೆ- ಸಾಧನೆಗೆ ಅಂಗವೈಕಲ್ಯ ಎಂಬುದು ಬಹುದೊಡ್ಡ ಕೊರತೆ ಎಂಬ ಭಾವನೆ ನನಗೆ ಬರಲೇ ಇಲ್ಲ ಎಂದು ನಗುತ್ತಾನೆ ನಿಕ್.
ಮಗನ ಈ ಸಾಧನೆಯ ಬಗ್ಗೆ ಮೈಕೇಲ್-ಸ್ಟೇಸಿ ದಂಪತಿಗೆ ಹಿಗ್ಗೋ ಹಿಗ್ಗು. 'ನಿಕ್‌ನ ಅಪ್ಪ-ಅಮ್ಮ ಎಂದು ಹೇಳಿಕೊಳ್ಳಲು ನಮಗಂತೂ ಹೆಮ್ಮೆ. ನೂರು ಮಂದಿಗೆ ರೋಲ್ ಮಾಡೆಲ್ ಆಗುವಂಥ ಹೀರೋ ನಮ್ಮ ಮನೇಲಿ ಇದ್ದಾನೆ. ಅವನನ್ನು ನೋಡಿಯೇ ಬದುಕಲು ಕಲಿಯಿರಿ ಎಂದು ಉಳಿದಿಬ್ಬರೂ ಮಕ್ಕಳಿಗೂ ಕಿವಿಮಾತು ಹೇಳಿದ್ದೇವೆ' ಅನ್ನುತ್ತಾರೆ ಮೈಕೇಲ್ -ಸ್ಟೇಸಿ. ಅಮೆರಿಕದ ಪತ್ರಿಕೆಗಳು ಈ ಹುಡುಗನ ಬಗ್ಗೆ ಪ್ರೀತಿಯಿಂದ ಬರೆದಿವೆ. ನಿಕ್‌ನ ಚಾಲೆಂಜಿಂಗ್ ಬದುಕಿನ ಕಥೆಯನ್ನು ವಿಸ್ತೃತವಾಗಿ ಪ್ರಕಟಿಸಿವೆ. ಹೀರೋ ಆಫ್ ಹೀರೋಸ್ ಎಂದು ಹೊಗಳಿವೆ. ಚಾನೆಲ್‌ಗಳು, ಪೈಪೋಟಿಗೆ ಬಿದ್ದು ಇವನ ಸಾಹಸದ ಬದುಕನ್ನು ಮೇಲಿಂದ ಮೇಲೆ ಪ್ರಸಾರ ಮಾಡಿವೆ.
ಹೋರಾಟದ ಬದುಕಿನಲ್ಲಿ ಗೆಲ್ಲಬೇಕು, ಮಹತ್ಸಾಧನೆ ಮಾಡಬೇಕು ಎಂದು ಆಸೆಪಡುವ ಎಲ್ಲರಿಗೂ ರೋಲ್ ಮಾಡೆಲ್ ಆಗುವಂಥ ಈ ಹುಡುಗನ ಸಾಹಸದ ಬಗ್ಗೆ ಮತ್ತಷ್ಟು ತಿಳಿಯಬೇಕೆಂದರೆ, ಇಂಟರ್‌ನೆಟ್‌ನಲ್ಲಿ Google Væ Nick Santonastasso ಎಂದು ಸರ್ಚ್ ಮಾಡಿ. ಯು-ಟ್ಯೂಬ್‌ನಲ್ಲಿ ಈ ಹುಡುಗ ಕಾರ್ ಓಡಿಸುವ, ಭಾರ ಎತ್ತುತ್ತಾ ಕಸರತ್ತು ಮಾಡುವ, ಬಾಕ್ಸಿಂಗ್ ಅಂಗಳದಲ್ಲಿ ಕುಸ್ತಿ ಮಾಡುವ, ಮನೆಯ ತುಂಬಾ ಗಿರಗಿರನೆ ತಿರುಗುವ, ಈಜು ಹೊಡೆಯುವ, ನೊಂದವರಿಗೆ ಸಮಾಧಾನ ಹೇಳುತ್ತಾ ಭಾಷಣ ಮಾಡುವ ಅಪರೂಪದ ವಿಡಿಯೋ ತುಣುಕುಗಳಿವೆ. ನೋಡಿ ಕಣ್ತುಂಬಿಸಿಕೊಳ್ಳಿ...
- ಎ.ಆರ್. ಮಣಿಕಾಂತ್
armanikanth@gmail.com
Advertisement