
ಕನ್ನಡದಲ್ಲಿ ವಾರಕ್ಕೆ ಎರಡು-ಮೂರರಂತೆ ವರ್ಷಕ್ಕೆ ನೂರೈವತ್ತು -ನೂರರವತ್ತು ಸಿನಿಮಾಗಳು ಬಿಡುಗಡೆಯಾದರೂ, ನಾವು ಯಾವುದೇ ಸಿನಿಮಾಗಳ ಬಗ್ಗೆಯಾಗಲಿ, ಸಿನಿಮಾ ನಟ-ನಟಿಯರ ಬಗ್ಗೆಯಾಗಲಿ ಬರೆದಿದ್ದು ತೀರಾ ಕಡಿಮೆ. ಹಾಗಂತ ನಾನು ಕನ್ನಡ ಸಿನಿಮಾಗಳನ್ನು ನೋಡೋಲ್ಲ ಅಂತಲ್ಲ. ಏನಿಲ್ಲವೆಂದರೂ ಆ ವರ್ಷ ಬಿಡುಗಡೆಯಾದ ಕನಿಷ್ಠ ಐವತ್ತು ಸಿನಿಮಾಗಳನ್ನಾದರೂ ನೋಡಿರುತ್ತೇನೆ. ಕೆಲವೊಮ್ಮೆ ಹಗಲು ಹೊತ್ತಿನಲ್ಲಿ ಮೂರು ತಾಸು ನಿರಾತಂಕವಾಗಿ ವಿಶ್ರಾಂತಿ ತೆಗೆದುಕೊಳ್ಳುವ ಅದ್ಭುತ ಅವಕಾಶವನ್ನು ಈ ಸಿನಿಮಾಗಳು ಒದಗಿಸಿಕೊಡುತ್ತವೆ. ಕೆಲವು ಸಿನಿಮಾಗಳು ಈ ರೀತಿ ನೋಡಲು ಲಾಯಕ್ಕಾಗಿರುತ್ತವೆ. ಇನ್ನು ಕನ್ನಡದ ಕೆಲವು ಸಿನಿಮಾ ನಟ-ನಟಿಯರ ಜತೆ ಗಂಭೀರವಾಗಿ ಮಾತುಕತೆ, ಹರಟೆಗೆ ಕುಳಿತುಕೊಳ್ಳೋಣ ಅಂದರೂ ಇದೇ ಅನುಭವವಾಗುತ್ತದೆ. ಸುತ್ತಿದ ಖಾಲಿ ರೀಲನ್ನು ಬಿಚ್ಚಿಟ್ಟ ಅನುಭವ!
ನಮ್ಮ ಸಿನಿಮಾ ಪತ್ರಕರ್ತರನ್ನು ನೋಡಿದಾಗ 'ಅಯ್ಯೋ ಪಾಪ' ಎಂದು ಅನಿಸುವುದುಂಟು. ಸಿನಿಮಾ ನೋಡಿದ ಕರ್ಮವಷ್ಟೇ ಅಲ್ಲ, ಕಚೇರಿಗೆ ಬಂದು ಅವುಗಳ ಬಗ್ಗೆ ಬರೆಯುವ ಶಾಸ್ತಿ ಬೇರೆ. ಒಂದು ತಪ್ಪಿಗೆ ಎರಡೆರಡು ಶಿಕ್ಷೆ! ಇವರು ಇನ್ನೂ ಏಕೆ ಪ್ರಾಣಿದಯಾ ಸಂಘದ ಮೊರೆ ಹೋಗಿಲ್ಲ ಎಂದು ಅನಿಸಿದ್ದುಂಟು. ನಮ್ಮ ಬಹುತೇಕ ನಟರೂ ದೇಹ ಬೆಳೆಸುವುದಕ್ಕೆ ಕೊಡುವ ಪ್ರಾಮುಖ್ಯತೆಯಲ್ಲಿ ಗುಲಗುಂಜಿಯಷ್ಟನ್ನಾದರೂ ಬುದ್ಧಿ ಬೆಳೆಸುವುದಕ್ಕೆ ಕೊಟ್ಟಿದ್ದಿದ್ದರೆ ಅದು ಅವರ ನಟನೆಯ ಮೇಲೆ, ಸಿನಿಮಾದ ಮೇಲೆ ಪ್ರಭಾವ ಬೀರಿ, ಸಿನಿಮಾಗಳು ಇನ್ನಷ್ಟು ಸಹ್ಯವಾಗುತ್ತಿತ್ತೋ ಏನೋ? ಸಿನಿಮಾಗಳ ಬಗ್ಗೆ ರವಿಚಂದ್ರನ್ ಅವರನ್ನು ಮಾತಿಗೆ ಹಚ್ಚಿ ಸುಮ್ಮನೆ ಕುಳಿತುಕೊಂಡರೆ, ಸಿನಿಮಾ ಹಾಗೂ ಮೇಕಿಂಗ್ ಆಫ್ ಸಿನಿಮಾ ಎರಡೂ ಅನುಭವವಾಗುತ್ತದೆ. ಹೊಸಗಾಳಿ ಸೋಕಿದ ಅನುಭವ ಕೊಡುತ್ತಾರೆ. ಇತ್ತೀಚೆಗೆ ಕನ್ನಡದ ನಟರೊಬ್ಬರು ನಮ್ಮ ಆಫೀಸಿಗೆ ಬಂದಿದ್ದರು. ಹತ್ತು ನಿಮಿಷಗಳ ನಂತರ ನಮ್ಮಿಬ್ಬರ ನಡುವೆ ಮಾತುಕತೆಗೆ ವಿಷಯಗಳಿಲ್ಲದೇ ಅಸಹನೀಯ ಮೌನ ಕವಿದಿತ್ತು. ಇನ್ನೊಂದು ಪ್ರಶ್ನೆ ಹೆಚ್ಚು ಕೇಳಿದರೆ, ಅವರನ್ನು ನಾನು 'ಅತ್ಯಾಚಾರ' ಮಾಡುತ್ತಿದ್ದೇನೆಂಬ ಭಯಂಕರ ಆಲೋಚನೆ ಹಾದು ಹೋಗಿ, ಅವರನ್ನು ಅತ್ಯಂತ ಉತ್ಸಾಹದಿಂದ ಬೀಳ್ಕೊಟ್ಟೆ. 'ಉಸ್ಸಪ್ಪಾ' ಎಂದು ನಿಟ್ಟುಸಿರುಬಿಟ್ಟೆ. ಅವರಿಗೂ ಇದೇ ಅನುಭವವಾಗಿದ್ದಿರಬಹುದು.
ನಾಲ್ಕು ವರ್ಷಗಳ ಹಿಂದೆ ಲಂಡನ್‌ನಿಂದ ಮುಂಬೈಗೆ ಬರುವಾಗ ಹಿಂದಿ ನಟ ಅನುಪಮ್ ಖೇರ್ ಅವರನ್ನು ಭೇಟಿ ಮಾಡಿದ್ದನ್ನು ಮರೆಯುವಂತಿಲ್ಲ. ನಾನು ಅವರಿಗೆ ಪರಿಚಿತನೇನೂ ಅಲ್ಲ. ಆದರೂ ಅವರು ಸಿನಿಮಾ, ನಟನೆ, ರಾಜಕೀಯ, ಪುಸ್ತಕ, ಓದು...ಹೀಗೆ ಹಲವು ವಿಷಯಗಳ ಬಗ್ಗೆ ಸುಮಾರು ನಲವತ್ತು- ಐವತ್ತು ನಿಮಿಷಗಳ ಕಾಲ ಮಾತಾಡಿದ್ದರು. ತಾವು ಬರೆಯುತ್ತಿದ್ದ The Best Thing About You is Y ಎಂಬ ಪುಸ್ತಕದ ಬಗ್ಗೆ ಸುದೀರ್ಘವಾಗಿ ಮಾತಾಡಿದ್ದರು. ಕನ್ನಡ ಸಿನಿಮಾರಂಗದಲ್ಲಿ ಇಂಥ ಮನಸ್ಸುಗಳು ಇದ್ದಿರಬಹುದೇ ಏನೋ ಗೊತ್ತಿಲ್ಲ. ನನ್ನ ದುರ್ದೈವವೇ ಇರಬೇಕು, ಅಂಥವರನ್ನು ನಾನು ಭೇಟಿ ಮಾಡಿಲ್ಲ. ಇರಲಿ.
ನಾನು ಈ ರೀತಿ ಯೋಚಿಸಿದಾಗಲೆಲ್ಲ ತಕ್ಷಣ ಕಣ್ಮುಂದೆ ಬರುವ, ಆಪ್ತವಾಗುವ, ಮೆಚ್ಚುಗೆಯಾಗುವ ಹೆಸರೆಂದರೆ ಪ್ರಕಾಶ ರೈ! ನಾನು ಇವರನ್ನು ಒಬ್ಬ ಸಿನಿಮಾ ನಟ ಎಂಬುದಕ್ಕಿಂತ ಹೆಚ್ಚಾಗಿ ಜೀವನಪ್ರೀತಿ ಇರುವ ಮನುಷ್ಯ ಅಂತಾನೇ ಇಷ್ಟಪಡೋದು. ಸಿನಿಮಾನಟ ಎಂಬ ಗ್ಲಾಮರ್ ಅವರಲ್ಲಿರುವ ನಿಜವಾದ ವ್ಯಕ್ತಿ ಹಾಗೂ ವ್ಯಕ್ತಿತ್ವವನ್ನು ಮರೆಸುತ್ತದೆ ಅಥವಾ ಮಬ್ಬಾಗಿ ಮಾಡಿಬಿಡುತ್ತದೆ. ಆದರೆ ಪ್ರಕಾಶ ರೈ ತಮಗೆ ಸಿಕ್ಕಿರುವ 'ಸ್ಟಾರ್‌ಡಮ್'ನಲ್ಲೂ ತಮ್ಮಲ್ಲಿರುವ ಆಸಕ್ತಿ, ಗೀಳು, ಕುತೂಹಲ, ಜೀವನಸೂಕ್ಷ್ಮ, ಹವ್ಯಾಸ, ಸಾಹಿತ್ಯ, ಬದುಕು, ಭಾವನೆ, ತನ್ಮಯತೆ, ಕಕ್ಕುಲತೆಯನ್ನು ಜೀವಂತವಾಗಿಟ್ಟುಕೊಂಡಿದ್ದಾರೆ. ಪ್ರಕಾಶ ರೈ ಜತೆಗೆ ಸಿನಿಮಾ ಒಂದೇ ಅಲ್ಲ. ಸಾಹಿತ್ಯ, ಸಂಸ್ಕೃತಿ, ಸಂಪ್ರದಾಯಗಳ ಬಗೆಗೆ ತಾಸುಗಟ್ಟಲೆ ಮಾತಾಡಬಹುದು. ಮೂಲತಃ ಕನ್ನಡದವರೇ ಆದರೂ ತೆಲುಗು ಹಾಗೂ ಈಗ ತಮಿಳು ಚಿತ್ರರಂಗದಲ್ಲಿ ಕ್ರಿಯಾಶೀಲರಾಗಿರುವ ಅವರು, ನಮ್ಮ ಕನ್ನಡದ ಸ್ಟಾರ್‌ಗಳು, ಪ್ರಮುಖ ನಟರಿಗಿಂತ ಚೆನ್ನಾಗಿ ಕನ್ನಡ, ಕನ್ನಡ ಸಾಹಿತ್ಯದ ಬಗ್ಗೆ ಆಳವಾಗಿ ಮಾತಾಡಬಲ್ಲವರು. ಚೆನ್ನೈಯಲ್ಲಿದ್ದರೂ ಅವರ ಸೆಳೆತವಿರುವುದು ಕರ್ನಾಟಕದಲ್ಲೇ. ಸಣ್ಣ ವರಾತ, ನೆಪ ಸಿಕ್ಕರೂ ಬೆಂಗಳೂರಿಗೆ ಬರುತ್ತಾರೆ. ನನಗೆ ಇಂದಿಗೂ ಅರ್ಥವಾಗದ ಸಂಗತಿಯೆಂದರೆ, ಇಂಥ ಪ್ರತಿಭಾವಂತ ನಟನನ್ನು ನಮ್ಮ ಗಾಂಧಿನಗರದ ಮಂದಿ ಪರಭಾಷೆ ಸಿನಿಮಾಕ್ಕೆ, ಪರ ಊರಿಗೆ ಬಿಟ್ಟುಕೊಟ್ಟಿದ್ದಾದರೂ ಏಕೆ? ಇಂದು ರೈ ತಮಿಳು ಚಿತ್ರರಂಗದಲ್ಲಿ ಬಿಡುವಿಲ್ಲದ ನಟ. ಮಲಯಾಳಂ ಹಾಗೂ ತೆಲುಗು ಚಿತ್ರರಂಗಕ್ಕೂ ಅವರು ಬೇಕು. ಹಿಂದಿ ಚಿತ್ರರಂಗದಲ್ಲಿ ರೈ ಅತೀವ ಬೇಡಿಕೆಯಲ್ಲಿರುವ ಖಳನಾಯಕ. ಹಾಲಿವುಡ್‌ಗೂ ಒಂದು ಕಾಲನ್ನು ಇಟ್ಟಿದ್ದಾರೆ. ಇಂಥದೇ ಪಾತ್ರ ಎಂಬುದಿಲ್ಲ. ಯಾವುದಾದರೂ ಆಗಬಹುದು. ಎಂಥಾ ರೋಲಿಗಾದರೂ ಸೈ, ಅವರೇ ಪ್ರಕಾಶ ರೈ!
ನನಗೆ ಪ್ರಕಾಶ ಬಗ್ಗೆ ಅಭಿಮಾನ ಮೂಡುವುದಕ್ಕೆ ಕಾರಣ ಅವರು ಚಿತ್ರರಂಗದಲ್ಲಿ ಏರಿದ ಒಂದೊಂದು ಎತ್ತರ ಹಾಗೂ ತಮ್ಮನ್ನು ಹಲವು ಸಾಧ್ಯತೆಗಳಿಗೆ ವಿಸ್ತರಿಸಿಕೊಂಡ ರೀತಿಯ ಬಗ್ಗೆ. ನಟಿಸಿದ ಯಾವುದೇ ಪಾತ್ರವಾದರೂ ಆದೀತು, ಅದು ನಾಯಕ, ಖಳನಾಯಕ, ಪ್ರತಿನಾಯಕ (anti hero) ಅತಿಥಿ ನಟ... ಹೀಗೆ ಯಾವುದೇ ಇರಬಹುದು. ಅವರದ್ದೊಂದು ಛಾಪನ್ನು ಕಾಣಬಹುದು. ಪಾತ್ರದ ಆಚೆಗೆ ಹರಿಯುವ ತುಡುಗುತನ ಅವರ ವಿಶೇಷ. ಅವರು ನಟಿಸಿದ ಚಿತ್ರಗಳನ್ನು ನೋಡಿ ಬಂದಾಗಲೆಲ್ಲ ನನಗೆ ಹೀಗೆ ಅನಿಸಿದೆ. ಅವರ ನಟನೆಯನ್ನು ಹೀಗೆ ಅಂತ ಮನಸ್ಸಿನ ಚೌಕಟ್ಟಿನೊಳಗೆ ಹುದುಗಿಸಿಕೊಳ್ಳಲು ಸಾಧ್ಯವಿಲ್ಲ. ಪ್ರತಿ ಪಾತ್ರಕ್ಕೂ ಹೊಸ ಪುಟಿಕೆ ಕೊಡುವ ತಾಜಾತನ, ಹುಮ್ಮಸ್ಸು, ಸೃಜನಶೀಲ ಅಧಿಕಪ್ರಸಂಗಿತನ, ಲವಲವಿಕೆ, ತುಡಿತ, ರಿಫ್ಲೆಕ್ಷನ್ ಅವರಲ್ಲಿದೆ. ನಾನು ಇತ್ತೀಚೆಗೆ ಅವರು ನಟಿಸಿದ 'ಇರುವರ್' ಹಾಗೂ 'ಡ್ಯುಯೆಟ್' ಸಿನಿಮಾಗಳನ್ನು ನೋಡಿದೆ.
ಪ್ರಕಾಶ ಬಗ್ಗೆ ನನಗೆ ಅತೀವ ಅಭಿಮಾನ, ಹೆಮ್ಮೆಯಾಯಿತು. ಮಣಿರತ್ನಂ ನಿರ್ದೇಶನದ 'ಇರುವರ್' ಸುಮಾರು ಹದಿನೇಳು ವರ್ಷಗಳ ಹಿಂದೆ ತೆರೆಕಂಡ ಚಿತ್ರ. ಪ್ರಕಾಶ ಆಗಲೇ ಅಷ್ಟು ಸೊಗಸಾಗಿ ಅಭಿನಯಿಸಿದ್ದರು. 'ಇರುವರ್' ಚಿತ್ರದ ಅವರ ಅಭಿನಯದ ಬಗ್ಗೆ ನಾನು ಕೊಂಡಾಡುತ್ತಿದ್ದರೆ, ಸ್ನೇಹಿತರಾದ ಅನಂತನಾರಾಯಣ ಅವರು, 'ಪ್ರಕಾಶ ರೈ ಅಭಿನಯ ನೋಡಬೇಕು ಅಂದ್ರೆ ತೆಲುಗಿನ 'ಅಂತಃಪುರ' ಚಿತ್ರ ನೋಡಬೇಕು' ಎಂದರು. ಪುರುಸೊತ್ತು ಮಾಡಿಕೊಂಡು ಆ ಚಿತ್ರವನ್ನು ನೋಡಿದೆ. ಪ್ರಕಾಶ ಎಂಥಾ ಕಿಲಾಡಿ, ಪ್ರಬುದ್ಧ, ಗಟ್ಟಿ ನಟ ಅಂತೆನಿಸಿತು. ಸುಮಾರು ಐದು ವರ್ಷಗಳ ಹಿಂದೆ, 'ಅಭಿಯುಂ ನಾನುಮ್' ಚಿತ್ರದಲ್ಲಿ ಪ್ರಕಾಶ ನಟನೆಯನ್ನು ಕಂಡು ಚಿತ್ರಮಂದಿರದಲ್ಲಿ ಚಿಕ್ಕಮಗುವಿನಂತೆ ಕಣ್ಣೀರುಗರೆದಿದ್ದೆ. ನಂತರ ಇದನ್ನೇ ಅವರು ಕನ್ನಡದಲ್ಲಿ 'ನಾನು ನನ್ನ ಕನಸು' ಎಂಬ ಹೆಸರಿನಲ್ಲಿ ಮಾಡಿದರು. ನನ್ನದು ಪುನಃ ಅದೇ ಅಳುವ ರೋಲು!
ಪ್ರಕಾಶ ರೈ ಆಗುವುದು ಬಹಳ ಕಷ್ಟ. ಬಹಳ ಚಾಣ ತಿಂದು ರೂಪು ತಳೆದ ವ್ಯಕ್ತಿತ್ವ ಅದು. ಹಠಾತ್ ಆಗಿ ಹೀರೋ ಆಗಿ ಅವತರಿಸಿದವರಲ್ಲ. ಜೀವನದಲ್ಲಿ ಸಾಕಷ್ಟು ಪೆಡಲ್ ತುಳಿದಿದ್ದಾರೆ. ಸುಮಾರು ಇಪ್ಪತ್ತೈದು ವರ್ಷಗಳ ಹಿಂದಿನ ಮಾತು. ಪ್ರಕಾಶ ರೈ ಪ್ರತಿದಿನ ಸಾಯಂಕಾಲವಾಗುತ್ತಿದ್ದಂತೆ ರವೀಂದ್ರ ಕಲಾಕ್ಷೇತ್ರದ ಮೆಟ್ಟಿಲ ಮೇಲೆ ಸುಮ್ಮನೆ ಕುಳಿತುಕೊಂಡು ಇರುತ್ತಿದ್ದರಂತೆ. ಯಾವುದೇ ನಾಟಕವಿದ್ದರೂ ಸಂಘಟಕರು ಅಥವಾ ನಿರ್ದೇಶಕರ ಬಳಿ ಹೋಗಿ, 'ಇಂದು ನಿಮ್ಮ ತಂಡದಲ್ಲಿ ಯಾರಾದರೂ ಚಕ್ಕರ್ ಹೊಡೆದರೆ ಹೇಳಿ. ಆ ಪಾತ್ರವನ್ನು ನನಗೆ ಕೊಡಿ. ಅವನಿಗಿಂತ ಚೆನ್ನಾಗಿ ನಿಭಾಯಿಸುತ್ತೇನೆ. ನನಗೆ ನಿಮ್ಮ ನಾಟಕದ ಎಲ್ಲ ಪಾತ್ರಗಳ ಸಂಭಾಷಣೆ ಬಾಯಿಪಾಠವಾಗಿದೆ. ಯಾವ ಪಾತ್ರವಾದರೂ ಆದೀತು. ಇಲ್ಲ ಎನ್ನಬೇಡಿ. ಒಂದು ಅವಕಾಶ ಕೊಟ್ಟು ನೋಡಿ' ಎಂದು ಗೋಗರೆಯುತ್ತಿದ್ದರಂತೆ. ಒಂದೆಡೆ ನಟಿಸಬೇಕೆಂಬ ತುಡಿತ, ಇನ್ನೊಂದೆಡೆ ನಟಿಸಿದ್ದಕ್ಕೆ ಚಿಕ್ಕಾಸು ಕೊಡಬಹುದೆಂಬ ಆಸೆ. ಇಡೀ ನಾಟಕದ ಎಲ್ಲಾ ಪಾತ್ರಗಳ ಸಂಭಾಷಣೆಗಳನ್ನು ಉರು ಹೊಡೆಯಬೇಕೆಂದರೆ ಅವರಿಗೆ ಪಾತ್ರ, ನಾಟಕಗಳಲ್ಲಿ ಇದ್ದ ಆಸಕ್ತಿಯ ಉತ್ಕಟತೆಯಾದರೂ ಎಂಥದ್ದು!?
ರೈ ಹುಟ್ಟಿದ್ದು ಬೆಂಗಳೂರಿನಲ್ಲಿ. ಓದಿದ್ದು ಸೇಂಟ್ ಜೋಸೆಫ್ಸ್ ಬಾಯ್ಸ್ ಹೈಸ್ಕೂಲ್ ಹಾಗೂ ಸೇಂಟ್ ಜೋಸೆಫ್ಸ್ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ. ತಾಯಿ ನರ್ಸ್. ತಂದೆ ಒಂದು ರೀತಿಯಲ್ಲಿ ಅಡ್ನಾಡಿ. ಮನೆಯ ಭಾರವೆಲ್ಲ ತಾಯಿಯ ಮೇಲೆಯೇ. ಅವರ ತಾಯಿ ಬಹಳ ಕಷ್ಟದಲ್ಲಿ ಬೆಳೆದವರು. ರೋಗಿಯಾಗಿ ಆಸ್ಪತ್ರೆ ಸೇರಿದ ಅವರ ತಂದೆ, ಅಲ್ಲಿ ನರ್ಸ್‌ಳನ್ನು ಪ್ರೀತಿಸಿ ಮದುವೆಯಾದರು. ತಂದೆಯನ್ನು ತಾಯಿಯೇ ಸಾಕಬೇಕಾಗಿತ್ತು. ತಾಯಿ ಕೂಡಿಡುತ್ತಿದ್ದ ಕಾಸನ್ನು ಕಿತ್ತುಕೊಂಡು ಹೋಗಿ ಕುಡಿದು ಬಿಡುತ್ತಿದ್ದರು. ದೊಡ್ಡ ಮೊತ್ತ ಸಿಕ್ಕರೆ ಅದನ್ನು ಎಗರಿಸಿಕೊಂಡು ಹೋದರೆ ಆಸಾಮಿ ಮೂರ್ನಾಲ್ಕು ತಿಂಗಳಾದರೂ ಪತ್ತೆಯೇ ಇರುತ್ತಿರಲಿಲ್ಲ. ಆದರೂ ತಾಯಿ ಬೇಸರಿಸಿಕೊಳ್ಳುತ್ತಿರಲಿಲ್ಲ. ಮೂವರು ಮಕ್ಕಳು ಹಾಗೂ ಗಂಡನನ್ನು ಸಂತಸದಿಂದಲೇ ನೋಡಿಕೊಳ್ಳುತ್ತಿದ್ದರು. ಒಮ್ಮೆ ರೈ ಅವರು ತಮ್ಮ ತಾಯಿಯ ಬಗ್ಗೆ ಹೇಳಿ ಆರ್ದ್ರವಾಗಿದ್ದನ್ನು ಮರುಕ್ಷಣದಲ್ಲಿಯೇ ಅದನ್ನು ತಮ್ಮ ಅಂತರಂಗದಲ್ಲಿ ಒಂದು ಶಕ್ತಿಯಾಗಿ ಅಂತರ್ಗತಗೊಳಿಸಿಕೊಂಡು ಗಟ್ಟಿಯಾದ ಭಾವದಲ್ಲಿ ಬಿಟ್ಟ ನಿಟ್ಟುಸಿರಲ್ಲಿ ಕಂಡಿದ್ದೇನೆ.
ಎರಡು ವರ್ಷಗಳ ಹಿಂದೆ ಪತ್ರಿಕಾ ಸಂದರ್ಶನದಲ್ಲೂ ರೈ ತಮ್ಮ ತಾಯಿ ಬಗ್ಗೆ ಹೇಳಿದ ಅಂತಃಕರಣದ ಮಾತುಗಳು ನನಗೆ ಅವರ ಬಗ್ಗೆ ಮತ್ತಷ್ಟು ಹೆಮ್ಮೆ ತರುವಂತೆ ಮಾಡಿದೆ. 'ನನ್ನ ತಾಯಿ ಆಟೋ ಏರಿ ನನ್ನ ತಂದೆಯನ್ನು ಹುಡುಕುತ್ತಿದ್ದಳು. ನಾನೂ ಅವಳ ಜತೆ ಹೋಗುತ್ತಿದ್ದೆ. ನಾವಿಬ್ಬರೂ ಅಪ್ಪನನ್ನು ಆಟೋದಲ್ಲಿ ಹೇರಿಕೊಂಡು ಮನೆಗೆ ಕರೆದುಕೊಂಡು ಬರುತ್ತಿದ್ದೆವು. ಅಪ್ಪನನ್ನು ಬಿಟ್ಟು ಬಿಡು. ಅಂಥ ಮನುಷ್ಯನನ್ನು ಹೇಗೆ ಸಹಿಸಿಕೊಳ್ತೀಯಾ ಅಂತ ಕೇಳಿದರೆ ತಂದೆಯಿಲ್ಲದ ಮಕ್ಕಳು ಅಂತಾಗಬಾರದು ಎಂದು ನನಗೇ ಬುದ್ಧಿ ಹೇಳಿ ತಂದೆಯ ಈ ದುಂಡಾವರ್ತನೆಗಳನ್ನೆಲ್ಲ ಮರೆತು ಬಿಡುತ್ತಿದ್ದಳು.' ಪ್ರಕಾಶ ರೈ ಈ ಕಣ್ಣೀರು, ಅನಿವಾರ್ಯತೆ, ಬದುಕಿನ ಕಠೋರತೆ, ಮುಂದಿನ ಮುರಕಿಯಲ್ಲಿ ಸಿಗುವ ಸಾಧ್ಯತೆ, ವಿಷಾದ, ಅಸಹಾಯಕತೆ, ದ್ವಂದ್ವ, ಅಟ್ರಾಕಣಿಯನ್ನೆಲ್ಲ ಹೀರಿಕೊಂಡು ಬೆಳೆದವರು. ಅವರ ವೈಯಕ್ತಿಕ ಬದುಕಿನಲ್ಲಿ, ಬಿರುಗಾಳಿ ಎದ್ದಾಗಲೂ ಅವರು ಎಲ್ಲವನ್ನೂ ಬಂದ ಹಾಗೆ ಸ್ವೀಕರಿಸಿದವರು.
ನನಗೆ ಅನೇಕ ಸಲ ಅನಿಸಿದೆ, ಪ್ರಕಾಶ ರೈ ಸಿನಿಮಾದಲ್ಲಿ ನಾಯಕನಾಗುವ ಮೊದಲೇ ನಿಜ ಜೀವನದಲ್ಲಿ ನಾಯಕರಾಗಿದ್ದಾರೆಂದು. ಇಲ್ಲದಿದ್ದರೆ ಅವರು ಸಿನಿಮಾದಲ್ಲಿ ಪ್ರಕಾಶ ರಾಜ್ ಆಗುತ್ತಿರಲಿಲ್ಲ, ಸಿನಿಮಾದಲ್ಲಿ ಹೀರೋ ಕೂಡ ಆಗುತ್ತಿರಲಿಲ್ಲ. ಬದುಕು ಕಲಿಸಿದ ಕಲೆಯಲ್ಲಿ ಅವರು ಕಲಾವಿದರಾದವರು. ಹೀಗಾಗಿ ಅವರ ನಟನೆ ಬದುಕಿಗೆ, ನೈಜತೆಗೆ, ಹತ್ತಿರ. ಈ ಕಾರಣದಿಂದಲೇ ಅವರು ದೊಡ್ಡ ಸ್ಟಾರ್ ನಟರಾದರೂ ಅವರ ಕಾಲು ಭೂಮಿಯ ಮೇಲೆಯೇ ಇದೆ. ಕುತ್ತಿಗೆ ಭುಜದ ಮೇಲೆಯೇ ಇದೆ. ಕಲಾ ಕ್ಷೇತ್ರದಲ್ಲಿರುವ ಒಂದು ಕಾಲದ ಸಹಪಾಠಿಗಳು ಈಗ ಎದುರಾದರೆ ಇಪ್ಪತ್ತೈದು ವರ್ಷದ ಹಿಂದಿನ ರೈಯೇ!
ಮೊನ್ನೆ ನಮ್ಮ ಎ.ಆರ್. ಮಣಿಕಾಂತ್‌ನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪ್ರಕಾಶ ರೈ, ಕವಿ ಎಚ್‌ಎಸ್ ವೆಂಕಟೇಶಮೂರ್ತಿಯವರನ್ನು ಕಂಡ ಕೂಡಲೇ 'ನನಗೆ ಕನ್ನಡ ಕಲಿಸಿದ ಮೇಷ್ಟ್ರು' ಎಂದು ಅವರ ಕಾಲಿಗೆರಗಿದರು. ನಾನೇನಾದರೂ ಸ್ಟಾರ್ ಆಗಿದ್ದರೆ ಅದು ಬೆಳ್ಳಿಪರದೆಗೆ ಮಾತ್ರ ಸೀಮಿತ ಎಂಬಂತಿತ್ತು ಅವರ ಧೋರಣೆ.
ಇಂಥ ರೈ ಬಗ್ಗೆ ಕೆಲ ವರ್ಷಗಳ ಹಿಂದೆ ಯಾವುದೋ ಪತ್ರಿಕೆಯಲ್ಲಿ 'ಪ್ರಕಾಶ ಪ್ರತಿಭಾವಂತ ಆದರೆ ದುರಹಂಕಾರಿ' ಎಂಬ ಸಾಲುಗಳು ಪ್ರಕಟವಾಗಿದ್ದವು. ಸಾಮಾನ್ಯವಾಗಿ ಇಂಥ ಟೀಕೆಗಳನ್ನು ಸ್ಟಾರ್‌ಗಳು ಸ್ಪೋರ್ಟಿವ್ ಆಗಿ ಸ್ವೀಕರಿಸುವುದಿಲ್ಲ. ತಾವು ಪರಿಪೂರ್ಣರಾಗಿದ್ದರಿಂದಲೇ ಜನ ತಮ್ಮನ್ನು ಒಪ್ಪಿಕೊಂಡಿದ್ದಾರೆಂಬುದು ಅವರ ತರ್ಕವಾಗಿರುತ್ತದೆ. ಆದರೆ ಪ್ರಕಾಶ ಸಿಟ್ಟು ಮಾಡಿಕೊಳ್ಳಲಿಲ್ಲ. ಬದಲು ಜೋರಾಗಿ ನಕ್ಕು 'ಕರೆಕ್ಟಾಗಿ ಬರೆದಿದ್ದಾರೆ, ಜಗತ್ತಿನಲ್ಲಿ ಪ್ರತಿಭಾವಂತರಿಗಷ್ಟೇ ದುರಹಂಕಾರಿಗಳಾಗುವ ಹಕ್ಕು ಇರೋದು. ಪ್ರಕಾಶ ರೈ ಕೆಟ್ಟ ನಟ ಆದರೆ ಒಳ್ಳೆಯವನು ಅಂತ ಅವರೇನಾದರೂ ಬರೆದಿದ್ದರೆ ಬೇಜಾರಾಗಿರೋದು' ಅಂದು ಬಿಟ್ಟರು. (ಈ ಪ್ರಸಂಗವನ್ನು ಮಿತ್ರರಾದ ಉದಯ ಮರಕಿಣಿ ಇತ್ತೀಚೆಗೆ ನೆನಪು ಮಾಡಿಕೊಟ್ಟಿದ್ದಾರೆ.)
ನಮಗೆ ರೈ ಇಷ್ಟವಾಗುವುದೇ ಇದಕ್ಕೆ. ಸಿನಿಮಾ ಮಂದಿಗೆ ಇರುವ ಗಾಂಚಾಲಿ ಅವರಲ್ಲಿ ಇಲ್ಲ. ಹಾಗೆಂದು ಅದನ್ನು ತೋರಿಸಬೇಕಾದ ಕಡೆ ತೋರಿಸದೇ ಬಿಡುವುದಿಲ್ಲ. ಒಂದು ವೇಳೆ ಅವರು ಸ್ಟಾರ್ ಆಗದಿದ್ದರೂ, ಸಿನಿಮಾ ನಟನಾಗಿರದಿದ್ದರೂ ಖಂಡಿತವಾಗಿಯೂ ಇಷ್ಟವಾಗುತ್ತಿದ್ದರು. ಕಾರಣ ಸಿನಿಮಾ ಹೊರತಾಗಿಯೂ ಅವರಲ್ಲಿ ಇಷ್ಟಪಡುವ ಸರಕುಗಳಿವೆ, ಭಾವಕೋಶಗಳಿವೆ, ಡಡ್ಡಿಜಿಜಿ ಇದೆ. ಹೀಗಾಗಿ ಪ್ರಕಾಶ ರಾಜ್, ಪ್ರಕಾಶ ರೈ ಆಗಿಯೂ ಆಪ್ತರಾಗುತ್ತಾರೆ.
ಇಂಥ ರೈ ಪುನಃ ಕನ್ನಡಿಗರ ಕದ ತಟ್ಟುತ್ತಿದ್ದಾರೆ. ಹೃದಯದಲ್ಲಿ ಜಾಗ ಕೇಳುತ್ತಿದ್ದಾರೆ. 'ನಾನು ನನ್ನ ಕನಸು' ನಂತರ ಬಹಳ ಪ್ರೀತಿಯಿಂದ, ಶ್ರದ್ಧೆಯಿಂದ, ಒಳ್ಳೆಯ ಮಾತಿನಿಂದ 'ಒಗ್ಗರಣೆ' ಎಂಬ ಸಿನಿಮಾ ಮಾಡಿದ್ದಾರೆ. ಇದೊಂಥರಾ ತವರಿನ ಪ್ರೀತಿ. ಕನ್ನಡಿಗರು ಅವರ ಕೈ ಹಿಡಿಯಬೇಕು. ಇಲ್ಲಿಯೂ ಉಳಿಸಿಕೊಳ್ಳಬೇಕು.
ನಾನಂತೂ 'ಮೊದಲ ದಿನ ಮೊದಲ ಷೋ'ದಂದು ಒಗ್ಗರಣೆ ಘಮದಲ್ಲಿರುತ್ತೇನೆ.
-ವಿಶ್ವೇಶ್ವರ ಭಟ್
vbhat@me.com
Advertisement