ಮೋದಿ ಮಾಸ್ತರು-ಅವರ ಪಾಠ

ಮೋದಿ ಮಾಸ್ತರು-ಅವರ ಪಾಠ

ಇಂಥದ್ದೊಂದು ಪಾಠ ಬೇಕಿತ್ತು.ಪ್ರಧಾನಿ ನರೇಂದ್ರಮೋದಿಯವರು ತಮ್ಮ ಪಕ್ಷದ...

ಇಂಥದ್ದೊಂದು ಪಾಠ ಬೇಕಿತ್ತು.
ಪ್ರಧಾನಿ ನರೇಂದ್ರಮೋದಿಯವರು ತಮ್ಮ ಪಕ್ಷದ ಲೋಕಸಭಾ ಸದಸ್ಯರನ್ನೆಲ್ಲ ಕುಳ್ಳಿರಿಸಿಕೊಂಡು ಹೈಸ್ಕೂಲು ಹೆಡ್‌ಮಾಸ್ತರ ರೀತಿಯಲ್ಲಿ ಪಾಠ ಮಾಡಿದ್ದಾರೆ. ನಮ್ಮ ಜನಪ್ರತಿನಿಧಿಗಳಿಗೆ ಯಾರೂ ಹೀಗೆ ಹೇಳಿರಲಿಲ್ಲ. ಅದರಲ್ಲೂ ಪ್ರಧಾನಿಯಾದವರು ಇಂಥ ಒಂದು ಉಪದೇಶ ಕೊಟ್ಟಿರಲಿಲ್ಲ. ಬೇರೆ ಯಾರಾದರೂ ಈ ಉಪದೇಶ ಕೊಟ್ಟಿದ್ದರೆ ಅದಕ್ಕೆ ಅಷ್ಟು ಮಹತ್ವವಿರುತ್ತಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ, ಬಿಜೆಪಿ ಸಂಸದರು ಕೇಳುತ್ತಲೂ ಇರಲಿಲ್ಲ. ಆದರೆ ಈಗ ಕೇಳಿದ್ದಷ್ಟೇ ಅಲ್ಲ, ಪಾಲಿಸಲೂ ಬೇಕಿದೆ. ಇಲ್ಲದಿದ್ದರೆ ಮೋದಿ ಅಷ್ಟಕ್ಕೇ ಬಿಡುವುದಿಲ್ಲ ಎಂಬುದು ಅವರಿಗೆ ಗೊತ್ತಿದೆ. ನಮ್ಮ ಸಂಸದರಿಗೆ ಹೇಳುವವರಾಗಲಿ, ಕೇಳುವವರಾಗಲಿ ಯಾರೂ ಇರಲಿಲ್ಲ. ಎಷ್ಟೆಂದರೂ ಬೃಹಸ್ಪತಿಗಳು ತಾನೆ ಎಂದು ಎಲ್ಲರೂ ಭಾವಿಸಿದ್ದರು.
ಅಂಥ ಸಂಸದರಿಗೆ ಮೋದಿಯವರು, ಚಿಕ್ಕ ಮಕ್ಕಳಿಗೆ ತಂದೆ-ತಾಯಿಗಳೋ, ಮೇಷ್ಟ್ರುಗಳೋ ಹೇಳುವಂತೆ ಕಿವಿ ಮಾತು ಹೇಳಿದ್ದಾರೆ. 'ನನಗಾಗಲಿ ಅಥವಾ ಇನ್ಯಾರಿಗೇ ಆಗಲಿ ಪಾದ ಮುಟ್ಟಿ ನಮಸ್ಕಾರ ಮಾಡಬೇಡಿ, ಮುಖಸ್ತುತಿ ಮಾಡಬೇಡಿ, ಟಿವಿ ಮಂದಿ ಮೈಕ್ ಹಿಡಿದ ಕೂಡಲೇ ವಟವಟ ಅಂತ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಬೇಡಿ. ಗೆದ್ದ ಮಾತ್ರಕ್ಕೆ ನಿಮ್ಮ ಹೊಣೆ ಮುಗಿದಿಲ್ಲ, ಸರ್ಕಾರದ ವಕ್ತಾರರಾಗಬೇಕಿಲ್ಲ ಅದಕ್ಕೆ ಬೇರೆ ಜನರಿದ್ದಾರೆ, ನಿಮ್ಮ ಕ್ಷೇತ್ರದ ಬಗ್ಗೆಯಷ್ಟೇ ಮಾತಾಡಿ ಸಾಕು, ಸರಿಯಾಗಿ ಹೋಮ್‌ವರ್ಕ್ ಮಾಡಿಕೊಂಡು ಬಂದು ಸಂಸತ್ತಿನಲ್ಲಿ ಮಾತಾಡಿ, ಯಾರೂ ಸಂಸತ್ ಕಲಾಪಕ್ಕೆ ಚಕ್ಕರ್ ಹೊಡೆಯಬೇಡಿ, ನಿಮ್ಮ ಘನತೆಯನ್ನು ನೀವಾಗಿಯೇ ಕೆಳಗಿಳಿಸಿಕೊಳ್ಳಬೇಡಿ' ಎಂದು ತಮ್ಮ ಮನದ ಮಾತುಗಳನ್ನು ಸಂಸದರಿಗೆ ವರ್ಗಾಯಿಸಿದ್ದಾರೆ.
ಮೋದಿಯವರ ಮಾತುಗಳನ್ನು ಕೇಳಿದರೆ, ಅವರು ಅಷ್ಟಕ್ಕೆ ಸುಮ್ಮನಾಗುವವರಲ್ಲ ಎಂಬುದು ಸ್ಪಷ್ಟ. ಇವುಗಳನ್ನು ಉಲ್ಲಂಘಿಸಿದರೆ ತಾನು ಕ್ರಮಕೈಗೊಳ್ಳುತ್ತೇನೆ ಎಂಬ ಎಚ್ಚರಿಕೆಯೂ ಇದರಲ್ಲಿ ಅಡಗಿದೆ. ಬಿಜೆಪಿಯ ವರಿಷ್ಠ ನಾಯಕರ ಸಮ್ಮುಖದಲ್ಲಿಯೇ ಮೋದಿ ಈ ಮಾತುಗಳನ್ನು ಹೇಳಿದ್ದಾರೆ. ಯಾರಿಗೂ ಪಾದ ಮುಟ್ಟಿ ನಮಸ್ಕರಿಸಬೇಡಿ ಅಂತ ಸಂಸದರಿಗೆ ಹೇಳಿದಂತೆ, ನಮಸ್ಕರಿಸಿಕೊಳ್ಳಬೇಡಿ ಎಂದು ನಾಯಕರಿಗೂ ಹೇಳಿದ್ದಾರೆ. ಸರಿಯಾಗಿ ಹೋಮ್‌ವರ್ಕ್ ಮಾಡಿ ಬನ್ನಿ ಎಂಬ ಕಿವಿಮಾತು ಕಿರಿಯ ಸಂಸದರಿಗಷ್ಟೇ ಅಲ್ಲ, ಹಿರಿಯರಿಗೂ ಇದು ಅನ್ವಯಿಸಲಿದೆ.
ಕೆಲವರು ಇದನ್ನು ಉಡಾಫೆ ಮಾಡಬಹುದು. ಸಂಸದರಿಗೆ ಈ ಸಂಗತಿಗಳು ಗೊತ್ತಿರಲಿಲ್ಲವಾ, ಮೋದಿ ಹೆಡ್‌ಮಾಸ್ತರರಂತೆ ವರ್ತಿಸುತ್ತಿದ್ದಾರೆಂದು ಟೀಕಿಸಲೂಬಹುದು. ಟೀಕಿಸಲಿ. ನಮ್ಮ ದೇಶದಲ್ಲಿ ಪುಕ್ಕಟ್ಟೆಯಾಗಿ ಧಾರಾಳವಾಗಿ ಸಿಗುವುದು ಅದೊಂದೇ. ಎಲ್ಲರಿಗೂ ಗೊತ್ತಿದೆಯೆಂದೇ ಯಾರಿಗೂ ಹೇಳುತ್ತಿರಲಿಲ್ಲ. ಆದರೆ ಮಾಡುವುದನ್ನು ಬಿಡುತ್ತಿರಲಿಲ್ಲ. ಈ ಕಾರಣಕ್ಕಾಗಿಯೇ ಮೋದಿ ಹೇಳಬೇಕಾಗಿ ಬಂತು.
ಸರಿಯಾಗಿಯೇ ಇದೆ.
ಉಪದೇಶ ಮಾಡುವ ಮಾಸ್ತರರು ಅಷ್ಟಕ್ಕೇ ಸುಮ್ಮನಾಗದೇ ಛಡಿಯನ್ನೂ ಬೀಸಲಿ. ಆಗಲೇ ಅವರು ನಿಜವಾದ ಹೆಡ್‌ಮಾಸ್ತರ ಅಂತ ಕರೆಯಿಸಿಕೊಳ್ಳುವುದು.

ಕಾಂಗ್ರೆಸ್-ಉಷ್ಣಾಂಶ
ದಿಲ್ಲಿ ಸೇರಿದಂತೆ ಉತ್ತರ ಭಾರತದ ಕೆಲವು ನಗರಗಳಲ್ಲಿ ದಿನದ ತಾಪಮಾನ 45-46 ಡಿಗ್ರಿಗಳಿಗೆ ಏರಿದೆ. ನರೇಂದ್ರ ಮೋದಿಯವರು ದಿಲ್ಲಿ ಗದ್ದುಗೆ ಏರಿದ್ದರ 'ಕಾವು' ಇದು ಎಂದು ವಿಶ್ಲೇಷಿಸಬಹುದಾದರೂ ಈ ತಾಪಮಾನದಲ್ಲಿ ಬೇಯುತ್ತಿರುವವರ ಗೋಳನ್ನು ಊಹಿಸಬಹುದು. ದಿಲ್ಲಿ ತಾಪಮಾನಕ್ಕೂ, ರಾಜಕಾರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದರೂ, ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆಗಿಂತ ದಿಲ್ಲಿ ಉಷ್ಣಾಂಶ ಹೆಚ್ಚಿರುವುದು ವಿಚಿತ್ರವಾದರೂ ಸತ್ಯ. ಒಂದು ವೇಳೆ ದಿಲ್ಲಿ ತಾಪಮಾನಕ್ಕೂ, ಕಾಂಗ್ರೆಸ್ ಲೋಕಸಭಾ ಸದಸ್ಯರ ಸಂಖ್ಯೆಗೂ ಸಂಬಂಧ ಇದ್ದಿದ್ದರೆ, ತಾಪಮಾನ ಕಡಿಮೆ ಮಾಡಲು ಚುನಾಯಿತ ಸದಸ್ಯರ ಸಂಖ್ಯೆ ಇನ್ನಷ್ಟು ಕಡಿಮೆಯಾಗುತ್ತಿತ್ತೋ ಏನೋ?

ಗಂಡ-ಫುಟ್‌ಬಾಲ್
ಜಗತ್ತಿನೆಲ್ಲೆಡೆ ಫಿಫಾ ವರ್ಲ್ಡ್ ಕಪ್ ಫುಟ್‌ಬಾಲ್ ಜ್ವರ. ಅದಕ್ಕೆ ಸಂಬಂಧಿಸಿದಂತೆ ಒಂದು ತಮಾಷೆ ಪ್ರಸಂಗ.
ಯುವಕನೊಬ್ಬ ಫುಟ್‌ಬಾಲ್ ಮ್ಯಾಚ್ ನೋಡಲು ಬ್ರೆಜಿಲ್‌ನ ಸ್ಟೇಡಿಯಮ್‌ಗೆ ಹೋದ. ಅವನ ಪಕ್ಕದಲ್ಲಿ ಮಧ್ಯವಯಸ್ಕನೊಬ್ಬ ಕುಳಿತಿದ್ದ ಹಾಗೂ ಅವನ ಪಕ್ಕದ ಸೀಟು ಖಾಲಿಯಿತ್ತು. ಫುಟ್‌ಬಾಲ್ ಮ್ಯಾಚ್ ಆರಂಭವಾಗಿ ಹತ್ತು ನಿಮಿಷವಾದರೂ ಆ ಸೀಟಿಗೆ ಯಾರೂ ಬರದಿದ್ದನ್ನು ಗಮನಿಸಿ ಯುವಕ ಕೇಳಿದ-'ಇಂಥ ಮ್ಯಾಚನ್ನು ಸಹ ತಪ್ಪಿಸಿಕೊಳ್ಳುವವರಿದ್ದಾರಾ?'
ಅದಕ್ಕೆ ಮಧ್ಯವಯಸ್ಕ 'ಇದು ನನ್ನ ಹೆಂಡತಿಯ ಸೀಟು. ನಾವಿಬ್ಬರೂ ಕಳೆದ ಐದು ವರ್ಲ್ಡ್‌ಕಪ್ ಫೈನಲ್ ಮ್ಯಾಚನ್ನು ಒಟ್ಟಿಗೇ ನೋಡಿದ್ದೇವೆ. ಆದರೆ ಅವಳು ತೀರಿ ಹೋದಳು' ಎಂದ.
ಯುವಕನಿಗೆ ಮಧ್ಯವಯಸ್ಸಿನವನ ಬಗ್ಗೆ ಅಭಿಮಾನ ಮೂಡಿತು. 'ಹೌದಾ? ಆ್ಯಮ್ ಸಾರಿ. ಹೆಂಡತಿ ತೀರಿ ಹೋದರೂ ಅವಳ ನೆನಪಿಗೆ ಮತ್ತೊಂದು ಟಿಕೆಟ್ ಖರೀದಿಸಿ, ಅದನ್ನು ಖಾಲಿ ಬಿಟ್ಟು ಅವಳ ಬಗ್ಗೆ ನಿಮ್ಮ ಪ್ರೀತಿ ಮೆರೆದಿದ್ದೀರಲ್ಲ. ನೀವು ಗ್ರೇಟ್ ಸರ್. ಆದರೂ ಇಷ್ಟೊಂದು ದುಬಾರಿ ಟಿಕೆಟ್ ಖರೀದಿಸಿ, ಸೀಟನ್ನು ಖಾಲಿ ಬಿಡುವ ಬದಲು ನಿಮ್ಮ ಸ್ನೇಹಿತರನ್ನೋ, ಬಂಧುವನ್ನೋ ಜತೆಯಲ್ಲಿ ಕರೆದುಕೊಂಡು ಬರಬಹುದಿತ್ತಲ್ಲ?' ಎಂದು ಹೇಳಿದ.
ಅದಕ್ಕೆ ಮಧ್ಯವಯಸ್ಕ ಹೇಳಿದ-'ನೀವು ಹೇಳೋದು ನಿಜ. ಆದರೆ ನನ್ನ ಸ್ನೇಹಿತರು, ಮಕ್ಕಳು, ಬಂಧುಗಳೆಲ್ಲ ನನ್ನ ಹೆಂಡತಿಯ ಅಂತ್ಯಸಂಸ್ಕಾರಕ್ಕೆ ಹೋಗಿದ್ದಾರೆ.
ಇದನ್ನು 'ಗಂಡಸರ ಬುದ್ಧಿಯೇ ಇಷ್ಟು ಅಂತೀರಾ ಅಥವಾ ಫುಟ್‌ಬಾಲ್ ಕ್ರೇಜು ಅಂತೀರಾ?' ಗೊತ್ತಿಲ್ಲ.

ಮದುವೆ-ವಕ್ರತುಂಡೋಕ್ತಿ
ಕಳೆದ ಹದಿನೈದು ವರ್ಷಗಳಿಂದ, ಹೆಚ್ಚು ಕಮ್ಮಿ ವಾರದಲ್ಲಿ ಎರಡು ವಕ್ರತುಂಡೋಕ್ತಿಗಳನ್ನಾದರೂ ಮದುವೆಯ ಬಗ್ಗೆ ಬರೆಯುತ್ತಿದ್ದೇನೆ. ಆದರೂ ಖಾಲಿಯಾಗುತ್ತಿಲ್ಲ. ಹೊಸ ಹೊಸ ವಕ್ರತುಂಡೋಕ್ತಿಗಳೂ ಇರುತ್ತವೆ ಎನ್ನುವುದು ವಕ್ರತುಂಡೋಕ್ತಿ ಅಲ್ಲ, ಅದು ಸತ್ಯ. ಈ ವಾಕ್ಯವನ್ನು ವಕ್ರತುಂಡೋಕ್ತಿಯಾಗಿ ಮಾರ್ಪಡಿಸಬೇಕೆನಿಸಿದರೆ 'ಮದುವೆ ಸತ್ಯ ಅಥವಾ ವಾಸ್ತವ. ಆದರೆ ಹೆಂಡತಿ ವಕ್ರತುಂಡೋಕ್ತಿ' ಎನ್ನಬಹುದು.
ವಕ್ರತುಂಡೋಕ್ತಿಯ ದೊಡ್ಡ ಪಾತ್ರಧಾರಿ (ಣಿ), ಶಕ್ತಿ, ಕೇಂದ್ರಬಿಂದು ಅಂದ್ರೆ ಹೆಂಡತಿ. ಹೆಂಡತಿ ಇಲ್ಲದಿದ್ದರೆ ವಕ್ರತುಂಡೋಕ್ತಿಯೂ ಇಲ್ಲ. 'ರಜನೀಕಾಂತ್ ಸಹ ಹೆಂಡತಿ ಹೇಳಿದಂತೆ ಕೇಳುತ್ತಾನೆ' ಎಂಬುದನ್ನು ಮದುವೆ  ್ಝಟಿಡಡ್ಝಿಡ್ಡಿಡ್ಝ್ಟಿಟಿನ ಘೋಷವಾಕ್ಯವಾಗಿ ಇಟ್ಟುಕೊಳ್ಳಬಹುದು. ನರೇಂದ್ರ ಮೋದಿಯಂಥ 'ಅವಿವಾಹಿತ'ರು ಸಹ ಹೆಂಡತಿ ವಿಷಯಕ್ಕೆ ಬಂದಾಗ ಸೋತು ಹೋಗಿಬಿಟ್ಟರು. ತಾವು ಮದುವೆಯಾಗಿದ್ದಾಗಿಯೂ, ತಮಗೆ ಹೆಂಡತಿ ಇರುವುದಾಗಿಯೂ ಇಡೀ ಜಗತ್ತಿನ ಎದುರು ಒಪ್ಪಿಕೊಳ್ಳಬೇಕಾಯಿತು!
ಮದುವೆ ಹಾಗೂ ಹೆಂಡತಿಯ ಕುರಿತು ಹತ್ತು ವಕ್ರತುಂಡೋಕ್ತಿಗಳು:
    ನಾನು ಹಾಗೂ ನನ್ನ ಹೆಂಡತಿ ಇಪ್ಪತ್ತು ವರ್ಷ ಬಹಳ ಸುಖವಾಗಿದ್ದೆವು. ನಂತರ ಮದುವೆಯಾದೆವು.
    ನಾನು ಕೊಲೆ, ಸುಲಿಗೆ, ಭಯೋತ್ಪಾದನೆಗೆ ಹೆದರುವುದಿಲ್ಲ. ಕಾರಣ ನಾನು ಮದುವೆಯಾಗಿದ್ದೇನೆ.
    ಎಲೆಕ್ಟ್ರಾನಿಕ್ ಬ್ಯಾಂಕಿಂಗ್‌ಗಿಂತ ವೇಗವಾಗಿ ಹಣವನ್ನು ವರ್ಗಾಯಿಸುವ ವಿಧಾನವಿದೆ. ಅದಕ್ಕೆ ಮದುವೆ ಅಂತಾರೆ.
    ನಿಮ್ಮ ಮದುವೆಯನ್ನು ಕಾಪಾಡಲು ಎರಡು ಮಾರ್ಗಗಳಿವೆ. ಮೊದಲನೆಯದು, ನೀವು ತಪ್ಪು ಮಾಡಿದಾಗ ಅದನ್ನು ಒಪ್ಪಿಕೊಳ್ಳುವುದು ಹಾಗೂ ಎರಡನೆಯದು, ನೀವು ಸರಿ ಇದ್ದಾಗ, ಬಾಯಿ ಮುಚ್ಚಿಕೊಂಡು ತೆಪ್ಪಗಿರುವುದು.
    ನೀವು ಎರಡು ನಿಮಿಷ ಮಾತಾಡಿದರೆ, ನಿಮ್ಮ ಮುಂದಿರುವವರು ಒಂದು ಗಂಟೆ ಮಾತಾಡುತ್ತಾರೆ. ಅವರಿಗೆ ಹೆಂಡತಿ ಎಂದು ಕರೆಯುತ್ತಾರೆ.
    ಸುಖ, ಸಂತೋಷ ಸಿಗಲಿ ಎಂದು ಎಲ್ಲರೂ ಮದುವೆಯಾಗುತ್ತಾರೆ. ಆದರೆ ಎಲ್ಲರಿಗೂ ಹೆಂಡತಿ ಸಿಗುತ್ತಾಳೆ.
    ಹೆಂಡತಿಯನ್ನು ಸಂತಸದಿಂದ ಇಡಬೇಕೆಂದು ನಿರ್ಧರಿಸಿದರೆ, ವಾರಕ್ಕೆ ಎರಡು ಸಲ ಹೊಟೇಲ್‌ಗೆ ಕರೆದುಕೊಂಡು ಹೋಗಬೇಕು. ಅವಳು ಶುಕ್ರವಾರ ಹೋಗಲಿ, ನೀವು ಶನಿವಾರ ಹೋಗಿ.
    ಮನೆಯಲ್ಲಿ ಗಂಡಂದಿರು ಹೆಲ್ಮೆಟ್ ಧರಿಸಬೇಕೆಂಬ ಕಾನೂನು ಇಲ್ಲ. ಕಾರಣ ತಲೆಯಿದ್ದವರಷ್ಟೇ ಹೆಲ್ಮೆಟ್ ಧರಿಸೋದು.
    ಸರ್ಕಾರಿ ನೌಕರರೇ ವಾಸಿ. ಅವರು ಅರವತ್ತು ವರ್ಷಕ್ಕೆ ರಿಟೈರ್ ಆಗುತ್ತಾರೆ. ಆದರೆ ಗಂಡಂದಿರು ಮದುವೆಯಾದ ಕೂಡಲೇ.
    ಮನೆಗೆ ನೆಂಟರು, ಅತಿಥಿಗಳು ಬರಲಿ ಎಂದು ಗಂಡಸರು ಆಗಾಗ ಅಪೇಕ್ಷಿಸುತ್ತಾರೆ. ಕಾರಣ ಅವರ ಮುಂದಾದರೂ ಗಂಡಸಿನಂತೆ ವರ್ತಿಸಬಹುದೆಂದು.


- ವಿಶ್ವೇಶ್ವರ ಭಟ್

Related Stories

No stories found.

Advertisement

X
Kannada Prabha
www.kannadaprabha.com